ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇವಣಸಿದ್ದಪ್ಪ ಜಿ ಹೊಸ ಕವಿತೆ- ಪರಿವಾರ…

ರೇವಣಸಿದ್ದಪ್ಪ ಜಿ ಆರ್


ಒಬ್ಬನೇ ಒಬ್ಬ ಸೂರ್ಯ!
ನಮ್ಮ ಅಳತೆಯ ಮೀರಿದ
ದೂರದಲ್ಲಿ
ನಮ್ಮ ಅರಿವಿಗೆ ನಿಲುಕದ
ಕಾಲದಿಂದ
ಸ್ಥಾವರ ಪ್ರತಿಮೆಯಾಗಿ
ಜಂಗಮವ ಸಾರುತ್ತಿದ್ದಾನೆ.
ಶಿವ,ರಾಮ,ಕೃಷ್ಣ,
ಏಸು,ಅಲ್ಲಾ
ದೇವರುಗಳ ಪಟ್ಟಿ
ಬೆಳೆಯುತ್ತಾ ಹೋಗುತ್ತದೆ
ಬೆಳೆಸುತ್ತಾ ಹೋದರೆ.
ತ್ರಿಕಾಲದಲ್ಲಿ
ಚರಾಚರಗಳಿಗೆ
ಶಕ್ತಿಯ ಕಾಮಧೇನುವಾಗಿರುವ
ಸೂರ್ಯನನ್ನು
ದೈವವೆಂದು ಬಗೆಯಲು
ಅಡ್ಡಿಯಿಲ್ಲ.

ಸೂರ್ಯನಷ್ಟೇ ಅಲ್ಲ,
ಅವನ ಆಶ್ರಿತರೆಲ್ಲ ಗೊತ್ತು.
ಮೋಡಿಗೆ ಒಳಗಾದವುಗಳಂತೆ
ಸೂರ್ಯನ ಸುತ್ತುವ ಗ್ರಹಗಳು,
ಗ್ರಹಗಳಿಗೆ ಬೆನ್ನು ಬಿದ್ದ
ಉಪಗ್ರಹಗಳು,
ಡೊಂಕುಬಾಲದ ಧೂಮಕೇತುಗಳು,
ಉರಿದು ಬೂದಿಯಾಗುವ ಉಲ್ಕೆಗಳು,
ಇರುಳಲ್ಲಿ ಕಣ್ಣಾಮುಚ್ಚಾಲೆಯಾಡುವ
ಚುಕ್ಕಿಗಳು,
ಎರವಲು ಬೆಳಕು ಪಡೆದು
ಮೆರೆಯುವ ನಮ್ಮವ
ಚಂಚಲ ಚಂದ್ರ-
ಜ್ಯೋತಿಷ್ಯದಲ್ಲಿ ಕೇಳಿದ್ದೇನೆ;
ಖಗೋಳಶಾಸ್ತ್ರದಲ್ಲ ಓದಿದ್ದೇನೆ.

ಸೂರ್ಯನ ಆವರಣದ ಆಚೆ
ಏನುಂಟು? ಏನಿಲ್ಲ?
ಯಾರಿಗೆ ಗೊತ್ತು?
ಗೊತ್ತಿಲ್ಲದಿರುವುದನ್ನೆಲ್ಲ
ಇಲ್ಲವೇ ಇಲ್ಲ ಎನ್ನಲಾದೀತೆ?
ಅಂತ್ಯ ಕಾಣಸಿಗುವುದಿಲ್ಲ;
ಆರಂಭದ ಆಳವ
ಮುಟ್ಟುವುದಾಗುವುದಿಲ್ಲ.
ನಾನು,ನನ್ನದೆನ್ನುವ
ಕ್ಷುಲ್ಲಕ ಜೀವಿಯೊಂದು
ತನ್ನನ್ನು ತಾನು ಸುತ್ತುವುದ
ನಿಲ್ಲಿಸುವುದಿಲ್ಲ.

ನಮ್ಮ ಭೂಮಿ
ಸೂರ್ಯನ ಕಿಡಿಯೊಂದು ಸಿಡಿದು
ಕೊತಕೊತನೆ ಕುದಿದು
ತಣ್ಣಗಾದೊಂದು ಉಂಡೆ.
ಹಳ್ಳ,ಕೊಳ್ಳ,ಕೆರೆ,ಬಾವಿ,ನದಿ,ಸಮುದ್ರ,ಸಾಗರ,ಕೊಲ್ಲಿ,ಖಾರಿ,ಮರುಭೂಮಿ,ಗಿರಿ, ಕಂದರ,
ಕೋಟೆ-ಕೊತ್ತಲು,ಹಸುರು,ಉಸಿರು,ಹಳ್ಳಿ,ಪಟ್ಟಣ, ಬಯಲು,ಆಲಯಗಳ ತಾಣ.
ತರಹೇವಾರಿ ಪ್ರಾಣಿ,ಪಕ್ಷಿ,ಕ್ರಿಮಿ,ಕೀಟ,ಜಂತುಗಳ
ಉದ್ಯಾನ.

ಮೂಲದಲ್ಲಿ
ಎಲ್ಲದೂ, ಎಲ್ಲರೂ ಒಂದೇ ಆದರೂ
ಮನುಷ್ಯನೆಂಬ ಮನುಷ್ಯ ಪ್ರಾಣಿ
ಒಂದಾಗಿ ಹೋಗುವುದಿಲ್ಲ;
ಜಾತಿ,ಧರ್ಮ, ಜನಾಂಗ,
ಬಣ್ಣ, ಲಿಂಗ,
ದೇಶ,ಭಾಷೆ,ಗಡಿಗಳ
ಗೋಡೆಗಳ ಕೆಡವಿ
ಸಾಗುವುದಿಲ್ಲ.

‍ಲೇಖಕರು Admin

10 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading