ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಿದ್ರೂ ಪಾಪವಲ್ಲ' – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್

ಕಳೆದ ಐದಾರು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಳಿ ಕಣ್ಣುಗಳಿಗೆ ನಿದ್ದೆ ಹತ್ತುತ್ತಿಲ್ಲ. ಎರಡೂವರೆ ವರ್ಷದ ತನ್ನ ಮಗುವಿನ ಅತ್ಯಾಚಾರ ನಡೆದ ಘಟನೆಯನ್ನು ಎಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ತಾಯಿಯೊಬ್ಬಳು ಮುಖತುಂಬಾ ಬಟ್ಟೆ ಮುಚ್ಚಿಕೊಂಡು ಟೀವಿಯಲ್ಲಿ ಬಂದು ಕುಳಿತು ಅಳುತ್ತಿದ್ದಳು. ಆ ತಾಯಿ ಎರಡನೇ ಮಗುವನ್ನು ಹೆತ್ತು ಬಾಣಂತಿ. ಎರಡನೇ ಮಗುವಿಗೆ ಹಾಲೂಣಿಸುತ್ತಿರುವ ಆ ಅಮ್ಮನ ಬಳಿ ಮಗು ಬಂದು’, “ಅಮ್ಮಾ, ಅಣ್ಣ ಅಬ್ಬು ಮಾಡಿದ” ಎಂದು ಗುಪ್ತಾಂಗವನ್ನು ತೋರಿಸಿದರೆ, ಗಾಯದ ಗುರುತುಗಳು. ಈ ತಾಯಿ ಹೇಗೆ ಸಹಿಸಬೇಕು ಇದನ್ನು? ಅಥವಾ ನಮಗಾದರೂ ಸಹಿಸಕ್ಕಾಗುತ್ತೇ? ಸಂಕಟವಾಗುತ್ತಿದೆ….. ಇನ್ನೊಂದು ಕಡೆ ಶಾಲೆಯಲ್ಲೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗುತ್ತೆ. ಶಿಕ್ಷಕಿಯೇ ಆ ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿಗೆ ಬ್ಲಿಡಿಂಗ್ ಆಗುತ್ತಿರೋದನ್ನು ನೋಡಿ, ಟ್ರೀಟ್ ಮೆಂಟ್ ಕೊಡಿಸಿ ಮನೆಗೆ ಕಳುಹಿಸಿಬಿಟ್ಟಳಂತೆ. ಈ ಶಿಕ್ಷಕಿ ಒಬ್ಬಳು ಹೆಣ್ಣೇ? ಇಂಥ ಪಾಪಿಗಳಿಗೂ ಶಿಕ್ಷೆಯಾಗಲೇಬೇಕು. ಅತ್ಯಾಚಾರ ಮಾಡಿದವರಿಗೆ “ತನಿಖೆ, ದಂಡ, ಕನಿಷ್ಠ ಶಿಕ್ಷೆ(ಕಾನೂನು ಆಯಾಮ ನನಗಷ್ಟು ತಿಳಿದಿಲ್ಲ) ನೀಡಿದ ಮಾತ್ರಕ್ಕೆ ಅವರು ಬದಲಾಗಬಹುದು, ವ್ಯವಸ್ಥೆ ಬದಲಾಗಬಹುದು ಎಂದು ನಿರೀಕ್ಷಿಸುವುದು ಮೂರ್ಖತನವಾದೀತು. ಅದರ ಬದಲು ಅಂಥ ಪಾಪಿಗಳನ್ನು ಎನ್ ಕೌಂಟರ್ ಮಾಡಿಬಿಡಬೇಕು. ನಿನ್ನೆ ನಿವೃತ್ತ ಎಸಿಪಿ ಟೈಗರ್ ಅಶೋಕ್ ಕೂಡ ಅದನ್ನೇ ಹೇಳುತ್ತಿದ್ದರು. ಅವರ ಅವಧಿಯಲ್ಲಿ ರೇಪಿಸ್ಟ್ ಗಳ ಎನೌಕೌಂಟರ್ ಆಗಿದ್ದನ್ನು ನೆನಪಿಸಿದ್ದರು. ಈ ರೀತಿಯಾಗಿ ಎನ್ ಕೌಂಟರ್ ನಡೆದರೆ ಸ್ವಲ್ಪಮಟ್ಟಿಗೆ ಕಾಮುಕರು ಭಯಬಿದ್ದು ಸುಮ್ಮನಾಗಬಹುದು ಅನಿಸುತ್ತೆ. ನಮ್ಮ ಸರ್ಕಾರಗಳು, ಮಹಿಳೆಯರ ರಕ್ಷಣೆಗೆ ಇರುವ ಹಲವಾರು ಇಲಾಖೆಗಳು ಅತ್ಯಾಚಾರದಂಥ ಕ್ರೂರ ಕೃತ್ಯಗಳ ಬಗ್ಗೆ ಮೌನವಾಗಿರುತ್ತವೆ ಎನ್ನೋದಾದ್ರೆ ಜನಸಾಮಾನ್ಯರಾದ ನಾವು ಈ ರೀತಿ ಮಾತಾಡಲೇಬೇಕು.

ಇನ್ನು ಕೆಲ ದೇಶಗಳಲ್ಲಿ ಯಾರಾದ್ರೂ ಕೈ, ಕಣ್ಣು, ಕಾಲು ತೆಗೆದ್ರೆ, ಅದಕ್ಕೆ ಶಿಕ್ಷೆಯೆಂಬಂತೆ ಅಪರಾಧಿಗಳಿಗೆ “ಕೈ, ಕಣ್ಣು, ಕಾಲು” ತೆಗೆಯೋ ಶಿಕ್ಷೆ ಕೊಡ್ತಾರಂತೆ. ಹಾಗೆಯೇ ಅತ್ಯಾಚಾರ ಮಾಡಿದ್ರೆ ಅತ್ಯಾಚಾರಿಗಳ “ಮರ್ಮಾಂಗ ಕತ್ತರಿಸಿಬಿಡಲಿ”. ಮತ್ತೆಂದೂ ಆತ ಇಂಥ ನೀಚ ಕೆಲಸಕ್ಕೆ ಇಳಿಯಬಾರದು. ಜೊತೆಗೆ, ಅವನನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸಿ, ಮತ್ತೆಂದೂ ಆತ ಸಮಾಜದಲ್ಲಿ ಮುಖ ಎತ್ತಿ ಓಡಾಡದಂತೆ ಮಾಡಬೇಕು.   ಮಹಿಳಾ ಹೋರಾಟಗಾರ್ತಿಯೊಬ್ಬರು ಕೋಲಾರ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದರು”ಕೋಲಾರದಲ್ಲೊಬ್ಬ ರೇಪಿಸ್ಟ್, ಕೊಲೆಗಾರ ಇದ್ದಾನೆ. ಮದುವೆಯಾಗುವುದು, ಸುಲಿಗೆ ಮಾಡುವುದು ಹೆಂಡತಿಯನ್ನು ಕೊಲ್ಲೋದು ಅಂತೆ ಅವನ ಕೆಲಸ. ನಾಲ್ಕು ಜನರನ್ನು ಹೀಗೆ ಮಾಡಿ ಕೊನೆಯವಳನ್ನು ಕೊಂದು ಪೀಸ್ ಪೀಸ್ ಮಾಡಿ ಬೋರ್ ವೆಲ್ ಗೆ ಹಾಕಿಬಿಟ್ಟನಂತೆ. ಕೊನೆಗೆ ಅವನ ವಿರುದ್ಧ ಪ್ರಕರಣ ದಾಖಲಾದಾಗ ಅವನೇ ಪೊಲೀಸರಿಗೆ ಶರಣಾಗಿ, ಬೋರ್ ವೆಲ್ ನಲ್ಲಿ ಶವ ಹೂತಿಟ್ಟಿರೋದನ್ನು ಒಪ್ಪಿಕೊಂಡನಂತೆ, ಆದರೆ, ಆ ಮನುಷ್ಯ 40 ದಿನಗಳೊಳಗೆ ಜಾಮೀನು ಪಡೆದು ಈಗ ಕೋಲಾರದ ತುಂಬಾ ಓಡಾಡಿಕೊಂಡು ಆರಾಮ ಇದ್ದಾನಂತೆ”. ಇಂಥ ಸಾವಿರಾರು ಪಾಪಿಗಳು ನಮ್ಮ ಮುಂದೆನೇ ಇದ್ದಾರೆ.
ವಕಾಲತ್ತು ಮಾಡಬಾರದು…
ಬಹುಶಃ ನನಗನಿಸಿದ ಪ್ರಕಾರ, ಅತ್ಯಾಚಾರ ಪ್ರಕರಣದಲ್ಲಿ ಮಾತ್ರ ವಿಕ್ಟಿಮ್ ಗಳು ಸಮಾಜದ ಎದುರು ಮುಖಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇರುವುದು. ಇಲ್ಲಿ ಅನ್ಯಾಯ ಮಾಡಿದವನು ಆರಾಮವಾಗಿರುತ್ತಾನೆ, ಅನ್ಯಾಯಕ್ಕೊಳಗಾದವರು ಸಮಾಜದ ಮುಂದೆ ತಲೆ ಎತ್ತುವಂತಿಲ್ಲ. ಅದಕ್ಕಾಗಿ ಇಂಥ ಅತ್ಯಾಚಾರ ಆರೋಪಿಗಳ ಪರ ವಕೀಲರು ವಕಾಲತ್ತೇ ಮಾಡದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ವಕಾಲತ್ತು ವಕೀಲರ ವೃತ್ತಿಧರ್ಮ ಆಗಿರಬಹುದು, ಒಪ್ಪಿಕೊಳ್ಳುತ್ತೇನೆ ನಾನು. ಆದರೆ, ಇಂಥ ನೀಚ ಕೃತ್ಯಗಳು ನಡೆದಾಗ ಮಾನವೀಯತೆ, ಸ್ವಸ್ಥ ಸಮಾಜದ ದೃಷ್ಟಿಯಿಂದ “ನಾವು ವಕಾಲತ್ತು ಮಾಡುವುದಿಲ್ಲ” ಎಂದು ನಮ್ಮಲ್ಲಿರುವ ಈ ಬಾರ್ ಕೌನ್ಸಿಲ್ ಗಳು ಒಂದು ರೆಸೋಲ್ಯುಷನ್ ಪಾಸ್ ಮಾಡಿದರೆ? ಆವಾಗಾದ್ರೆ ಅತ್ಯಾಚಾರಿಗಳು ಜೀವನಪರ್ಯಂತ ಜೈಲಿನಲ್ಲೇ ಕೊಳೆಯುವ ಸ್ಥಿತಿ ಬರಬಹುದಲ್ವೇ?
ಮಹಿಳೆಯರಿಗಾಗಿ ಇರುವ ಆಯೋಗ, ಮಹಿಳಾ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ?
-ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ಮೊನ್ನೆಯಿಂದ ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ಘಟನೆಗಳಿಗೆ ಅವರೂ ಪ್ಯಾನೆಲ್ ಡಿಸ್ ಕಷನ್ ನಲ್ಲಿ ಕುಳಿತುಕೊಂಡು ಅಳುತ್ತಿದ್ದರು. ಹೌದು, ಮಾನವೀಯತೆ ಇದ್ದವರಿಗೆ ಅಳು ಬರದೆ ಇರದು. ಆದ್ರೆ, ಟೀವಿ ಮುಂದೆ ಕುಳಿತುಕೊಂಡು ನೀವೂ ಅಳುತ್ತಾ ಕೂರಬೇಡಿ, ಆಯೋಗದಿಂದ ಏನು ಮಾಡಕ್ಕೆ ಸಾಧ್ಯ? ಅದನ್ನು ತಕ್ಷಣ ಜಾರಿಗೆ ಬನ್ನಿ. ಕನಿಷ್ಠ ಪಕ್ಷ ಹೆಣ್ನೂಮಕ್ಕಳ ವಿಷ್ಯದಲ್ಲಿ ನೀವಾದ್ರೂ ಕರುಣೆ ತೋರಿಸಿ. -ಇನ್ನು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀಯವರು ಮಾಧ್ಯಮಗಳು ಫೋನ್ ಮಾಡಿ, ಅಭಿಪ್ರಾಯ ಕೇಳಿದರೆ “ಅದು&ಇದು” ಅಂಥ ಹೇಳಿಕೆ ಕೊಡೋದು ಬಿಟ್ಟರೆ, ಸ್ವತಃ ತಾವು ಕ್ರಮಕ್ಕೂ ಮುಂದಾಂತಿಲ್ಲ. ಏನು ಮಹಿಳೆಯರ ಕಲ್ಯಾಣಕ್ಕಾಗಿ ಇರುವ ಈ ಇಲಾಖೆ ಸತ್ತು ಹೋಗಿದೆಯೇ? -ಇನ್ನು ಈ ರಾಜ್ಯದ ಮನೆಯಜಮಾನ ಗೃಹಸಚಿವರ ಬಗ್ಗೆ ಏನೂ ಹೇಳಿ ಪ್ರಯೋಜನವಿಲ್ಲ. ಅವರಿಗೆ ಯಾವುದೂ ತಮಗೆ ಸಂಬಂಧಿಸಿಲ್ಲ ಅನ್ನೋ ತರ ಇದ್ದಾರೆ. ದಯವಿಟ್ಟು ಅವರು ಮನೆಗೆ ಹೋಗೋದು ಒಳ್ಳೆಯದು. -ನಿರ್ಭಯ ಪ್ರಕರಣವಾದಾಗ ಮಾಧ್ಯಮಗಳಿಂದ ಹಿಡಿದು ಎಲ್ಲರೂ ಅದರ ವಿರುದ್ಧ ದನಿ ಎತ್ತಿದರು. ದೆಹಲಿಯಲ್ಲಿ ಹೇಗೆ ಚಳವಳಿಗಳು ನಡೆದವು ಎನ್ನೋದು ಎಲ್ಲರಿಗೆ ಗೊತ್ತು. ನಿರ್ಭಯನೇ ಆಗಲೀ, ಯಾರೇ ಆಗಿರಲಿ ಇಂಥ ಘಟನೆಗಳಾದಾಗ ಗಂಭೀರವಾಗಿ ಖಂಡಿಸಬಾರದೇಕೆ? ಕನ್ನಡ ಪರ ಸಂಘಟನೆಗಳು, ಸಿನಿಮಾ ರಂಗ, ಸಾಹಿತಿಗಳು, ಮಹಿಳಾಪರ ಸಂಘಟನೆಗಳು ಎಲ್ಲಿಗೆ ಹೋಗಿವೆ? ಟೀವಿಗಳಲ್ಲಿ ಕೂತು ಮಾತನಾಡಿದರೆ ನೋ ಯೂಸ್. ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಏನಾದರೂ ಫಲಿತಾಂಶ ಬರಬಹುದು.
ಪೊಲೀಸರು ನಡೆಸಿಕೊಳ್ಳುವ ರೀತಿ ಸರಿಯಿಲ್ಲ.
ಪೊಲೀಸ್ ಠಾಣೆಗಳಿಗೆ ಹೋದರೆ (ಹೆಚ್ಚಿನ ಠಾಣೆಗಳಲ್ಲಿ) ಮಹಿಳೆಯರನ್ನು ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಆರು ವರ್ಷದ ಹಿಂದಿನ ಘಟನೆಯೊಂದನ್ನು ಹೇಳಬೇಕಾದರೆ, ಕೋರಮಂಗಲದಲ್ಲಿ ನನ್ನ ಗೆಳತಿಯೊಬ್ಬರು ಪರ್ಸ್ ಕಳೆದುಕೊಂಡಾಗ ಕೇಸ್ ದಾಖಲಿಸಲು ಠಾಣೆಗೆ ಹೋಗಿದ್ದೇವು. ಪೊಲೀಸರು ಮೊದಲು ಏನು ಅಂತಾನೇ ಕೇಳಿಲ್ಲ. ನಾವೇ ಮುಂದೆ ಹೋಗಿ ವಿಚಾರಿಸಿದಾಗ ಒಂದು ಖಾಲಿ ಕಾಗದದ ಮೇಲೆ ದೂರು ಬರೆದುಕೊಡಲು ಹೇಳಿದರು. ಹೇಗೆ ಬರೆಯಬೇಕು ಎನ್ನೋದು ಗೊತ್ತಾಗದೆ ಮತ್ತೊಮ್ಮೆ ಕೇಳಿದಾಗ ಪೇದೆಯೊಬ್ಬ ರೇಗಿ “ಬರ್ಕೊಡಮ್ಮ ಸುಮ್ಮನೆ. ಮತ್ತೆ ಮತ್ತೆ ಕೇಳಬೇಡ” ಎಂದುಬಿಟ್ಟ. ನಮಗೆ ಹೇಗೆ ಬಂತೋ ಹಾಗೇ ಬರೆದುಕೊಟ್ಟೆವು. ಅದರ ಬಗ್ಗೆ ಯಾವುದೇ ಅಪ್ ಡೇಟ್ ಬರಲೇ ಇಲ್ಲ. ಇಂಥ ಬೇಜಾವಾಬ್ದಾರಿ ಮಹಿಳೆಯರು ಸಂಘಟಿತರಾಗಬೇಕು: ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆದಾಗ ನನಗನಿಸಿದ್ದು ಹೆಣ್ಣುಮಕ್ಕಳು ವಿರೋಧಿಸುತ್ತಾರೆ, ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ, ಬಹಿರಂಗವಾಗಿ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗುತ್ತಿಲ್ಲ ಎನ್ನುವುದು. ಸಂಘಟಕಿ, ಹೋರಾಟಗಾರ್ತಿ ಎಂದು ಗುರುತಿಸಿಕೊಂಡಿರುವ ಬಿ.ಟಿ. ಲಲಿತಾನಾಯಕ್ ಅವರು ಕೊಟ್ಟ ಹೇಳಿಕೆ ಕೇಳಿ ” ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತೆ ಎನ್ನೋದಾದ್ರೆ ಯಾಕೆ ಮಧ್ಯರಾತ್ರಿಲಿ ಹೊರಗಡೆ ಹೋಗಬೇಕು? ಇದನ್ನು ತಡೀಬೇಕು. ಪೋಷಕರೂ ತಮ್ಮ ಮಕ್ಕಳಿಗೆ ತಿಳಿಹೇಳಬೇಕು”. ಭರವಸೆ ಕಳೆದುಕೊಳ್ಳಬಾರದು: ಬಹುಶಃ ಭರವಸೆ ಒಂದೇ ಬದುಕನ್ನು ಇನ್ನಷ್ಟು ಚೇತೋಹಾರಿಯಾಗಿ ಇಡಬಲ್ಲದು ಎಂಬುದು ನನ್ನ ಅನಿಸಿಕೆ. ಜೀವನ ಪ್ರೀತಿ. ಭರವಸೆಗಳು, ಧೈರ್ಯ ನಮ್ಮೊಳಗೆ ಬೇಕೇ ಬೇಕು. ನಮ್ಮ ರಾಜ್ಯ, ದೇಶ ಅಥವಾ ಜಗತ್ತು ಯಾವುದೂ ಪೂರ್ತಿ ಕೆಟ್ಟುಹೋಗಿಲ್ಲ. ಒಳ್ಳೆಯ ಜನರೂ ನಮ್ಮ ನಡುವಿದ್ದಾರೆ. ಹಾಗಾಗಿ, ಬದುಕನ್ನು ಭರವಸೆಯಿಂದ ಕಾಣಬೇಕು.

‍ಲೇಖಕರು G

19 July, 2014

6 Comments

  1. shobhavenkatesh

    nammella anisikeyannu barididdiri chitra.bere deshgala shikshe illu kanditavagiyu agallee beku. ade sariyada lesson.

  2. ಪ್ರಭು ಐನಂಡ

    ನನ್ನಂಥ ಬಹು ಜನರ ಅನ್ನಿಸಿಕೆ ಆಕ್ರೋಶಗಳನ್ನು ವಿವರಿಸಿದ್ದೀರಿ. ಧನ್ಯವಾದಗಳು.
    ನನಗನ್ನಿಸುತ್ತದೆ, ನಾವು ಭಾರತೀಯರ ಬಾಳಿನಲ್ಲಿ ಮೌಲ್ಯಗಳೇ ಕೆಳಮಟ್ಟಕ್ಕಿಳಿದು ಹೋಗಿದೆ. ದೃಶ್ಯ ಮಾಧ್ಯಮಗಳಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ಹೆಚ್ಚು ಹೆಚ್ಚಾಗಿ ವೈಭವೀಕರಿಸಿ ತೋರಿಸಲಾಗುತ್ತಿದೆ. ಇದು ನೋಡುಗರಲ್ಲಿ ಕೆಟ್ಟಭಾವನೆಗಳನ್ನು ಹೆಚ್ಚು ಮಾಡುತ್ತದೆ.
    ಹೆಂಗಸರು ರಾತ್ರಿ ಏತಕ್ಕೆ ಹೊರಗೆ ಓಡಾಡಬೇಕು ಎಂದು ಕೇಳುವವರು ಶಾಲೆಯ ಕಂದಮ್ಮಗಳ ಬಗ್ಗೆ ಏನು ಹೇಳುತ್ತಾರೆ? ಶಾಲೆಗೇ ಹೋಗಬಾರದೆನ್ನುವರೇನು? ಹಾಗೆಯೇ ತಮ್ಮದೇ ಮಗಳಂದಿಯರ ಮೇಲೆ ತಂದೆಯರು ಅತ್ಯಾಚಾರ ಮಾಡುವದಕ್ಕೆ ಏನು ಸಲಹೆ ನೀಡುತ್ತಾರೆ?
    ಸರ್ಕಾರ ಏನು ಮಾಡಬಲ್ಲುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅದು ಮಾಡಬಹುದಾದ್ದನ್ನು ಮಾಡಿದರೇ ಸಾಕು; ಅಪರಾಧೀ ಮನೋಭಾವವಿರುವವರಲ್ಲಿ ಭಯ ಹುಟ್ಟುತ್ತದೆ. ಒಂದು ಉದಾಹರಣೆಯೆಂದರೆ ದೆಹಲಿ ರೇಪ್ ಅಪರಾಧಿಗಳ ಶಿಕ್ಷೆಗಳು ಇನ್ನೂ ಡೋಲಾಯಾಮಾನ ಸ್ಥಿತಿಯಲ್ಲಿರುವದು. ‘ಹುಡುಗರು ಇಂಥ ಸಣ್ಣ ತಪ್ಪುಗಳನ್ನು ಮಾಡಿಬಿಡುತ್ತಾರೆ; ಅಷ್ಟಕ್ಕೇ ಅವರನ್ನು ಗಲ್ಲಿಗೇರಿಸಿಬಿಡುವದೇ?’ ಎಂದು ಪ್ರಶ್ನಿಸುವ ಜನನಾಯಕರು(?) ಈ ಅಪರಾಧಿಗಳನ್ನು ಖುಲಾಸೆ ಮಾಡಿಸಿಬಿಡುವದನ್ನೂ ನಾವು ಶೀಘ್ರದಲ್ಲೇ ನೋಡಿಯೇವು!
    ಇವನ್ನೆಲ್ಲಾ ನೋಡುತ್ತಿರುವಾಗ ಭೂಮಿಯ ಮೇಲಿನ ಮನುಷ್ಯರೆಲ್ಲಾ ನಶಿಸಿ ಉಳಿದ ಜೀವರಾಶಿಗಳು ಮಾತ್ರವೇ ಉಳಿದಿರುವ ಕಾಲ ಬರಬೇಕೆನ್ನಿಸುತ್ತದೆ.

  3. ಕಿರಣ್

    ಏನೂ ಆಗೋದಿಲ್ಲಮ್ಮಾ!
    ಈ ದೇಶದ ಕಾನೂನು, ವ್ಯವಸ್ಥೆ ಏನನ್ನೂ ಆಗಲು ಬಿಡುವುದಿಲ್ಲ.
    ಸಿನಿಕನಾಗಿ ಈ ಮಾತು ಹೇಳುತ್ತಿಲ್ಲ; ಅನುಭವದಿಂದ ನೊಂದು ಹೇಳುತ್ತಿದ್ದೇನೆ.
    ಎರವಲು ತಂಡ ಕಾನೂನಮ್ಮ ಇದು; ನಮ್ಮ ದೇಶಕ್ಕೆ ಬೇಕಾದುದಲ್ಲ. ಬಿಳಿಯರು ತಮಗೆ ಬೇಕಾದಂತಹ ಕಾನೂನು ಬರೆದುಕೊಂಡು ದೇಶೀಯರನ್ನು ಬಗ್ಗು ಬಡೆದರು. ಅದನ್ನೇ ನಾವೂ ಮುಂದುವರೆಸಿದೆವು.
    ಎಲ್ಲವೂ ಈ ಕಾನೂನಿನ ಚೌಕಟ್ಟಿನಲ್ಲೇ ಆಗಬೇಕು. ಶೀಘ್ರ ವಿಲೇವಾರಿ ನ್ಯಾಯಾಲಯವೂ ತೀರ್ಪು ನೀಡಲು ಎರಡು ವರ್ಷ ಬೇಕು.
    ಬಿಸಿಯಲ್ಲಿ ನಾವೆಲ್ಲಾ ನೋಯುತ್ತೇವೆ; ನೊಂದು “ಹಾಗಾಗಬೇಕು, ಹೀಗಾಗಬೇಕು” ಎಂದು ಘರ್ಜಿಸುತ್ತೇವೆ.
    ಏನೂ ಆಗುವುದಿಲ್ಲ.
    ಮಾರನೆ ದಿನ ನೀರು ಬರದಿದ್ದರೆ, ಕರೆಂಟು ಹೋದರೆ ನಮ್ಮಂತಹ ಸಾಮಾನ್ಯ ಪ್ರಾಣಿಗಳ ಗಮನೆವೆಲ್ಲಾ ಅಲ್ಲೇ ಹೋಗುತ್ತದೆ.
    ಹಿಂದಿನ ದಿನದ ಆಕ್ರೋಶ ಮರೆತು ಹೋಗುತ್ತದೆ.
    ಅತ್ಯಾಚಾರದಿಂದ ಹಿಡಿದು ಲಂಚಕೊರತನದವರೆಗೆ ನಮ್ಮ ಸಮಸ್ಯೆಗಳು “ಅ ಇಂದ ಲ ವರೆಗೆ” ನಮ್ಮನ್ನು ಕಿತ್ತು ತಿನ್ನುತ್ತವೆ.
    ಒಂದು ನೋವಿನ ಧಾಳಿ ಹಸಿಯಾಗಿರುವಾಗಲೇ ಇನ್ನೊಂದು ಏಟು.
    ಯಾವುದು ನೆನಪಿಡಬೇಕು, ಯಾವುದಕ್ಕೆ ಆಕ್ರೋಶ ಸೂಚಿಸಬೇಕು, ಯಾವುದು ಮೊದಲು, ಯಾವುದು ಕೊನೆ?
    ನಿದ್ರೆ ಮಾಡುವ, ನೀಲಿ ಚಿತ್ರ ನೋಡುವ, ವಿದೇಶಕ್ಕೆ ಹಾರುವ, ಕುಡಿದು ಪೊಲೀಸರನ್ನೇ ಹೊಡೆಯುವ, ಕಳ್ಳ ಆಸ್ತಿ ಮಾಡುವ, ತಮ್ಮ ವೋಟನ್ನೇ ಮಾರಿಕೊಳ್ಳುವ ನಾಯಕರು.
    ತೆರಿಗೆ ಕಟ್ಟುವ, ಬಸ್ಸಿಗೆ ಕಾಯುವ, ದಂಡ ಪಾವತಿಸುವ, ಹೆಚ್ಚೆಂದರೆ ಕೆಟ್ಟ ಮಾತಿನಲ್ಲಿ ಬೈಯುವ ನರಸತ್ತ ನಾವುಗಳು.
    ವ್ಯವಸ್ಥೆ ಎಚ್ಚೆತ್ತುಕೊಳ್ಳುವುದಿಲ್ಲ; ಕ್ಷಣಕಾಲ ಎದ್ದರೂ ವ್ಯತ್ಯಾಸವೇನಿಲ್ಲ.
    ಅಷ್ಟು ಸುಲಭವಾಗಿ “ಅಚ್ಚೆ ದಿನ್”ಗಳು ಬರುವುದಿಲ್ಲ.
    ಏನೂ ಬದಲಾಗುವುದಿಲ್ಲಮ್ಮ.

    • ಪ್ರಭು ಐನಂಡ

      ನೀವು ಬರೆದಿರುವದರಲ್ಲಿ ಹೆಚ್ಚಿನ ಅಂಶ ಸತ್ಯವಾದರೂ ಅಷ್ಟೊಂದು ನಿರಾಶಾವಾದಿಗಳಾಗುವದು ಬೇಡ.
      ಬದಲಾವಣೆಗಳಾಗಿವೆ. ಒಳ್ಳೆಯ ದಿನಗಳೂ ಬಂದಿವೆ; ಬರುತ್ತಲೂ ಇವೆ. ನಮ್ಮಂಥ ಬಹು ಹಳೆಯ ನಾಗರಿಕತೆಯ ದೇಶದಲ್ಲಿ ಬಹು ಮಟ್ಟಿಗೆ ಎಲ್ಲವೂ ನಿಧಾನವಾಗೇ ಆಗುತ್ತವೆ. ಬೇಗನೇ ಆದ ಬದಲಾವಣೆಗಳೂ ಇವೆ. ಇದಕ್ಕೆ ಮುಖ್ಯ ಉದಾಹರಣೆ ಸಂಪರ್ಕ ವ್ಯವಸ್ಥೆ.
      ಹಿಂದಿನ ಸಂಸ್ಕೃತಿಯಲ್ಲೂ ಹೆಣ್ಣು ಬಳಕೆಯ ವಸ್ತು(commodity)ವಿನಂತೆ ಪರಿಗಣಿಸಲ್ಪಡುತ್ತಿದ್ದಳು. ತಾನು ಬಯಸಿದವಳನ್ನು ಬಲಾತ್ಕಾರವಾಗಿ ಪಡೆಯುವದಿತ್ತು (ಮಹಾಬ್ರಾಹ್ಮಣ ರಾವಣ ಸೀತೆಯನ್ನು ಅಪಹರಿಸಿದಂತೆ); ಪಣಕ್ಕಿಟ್ಟು ಜೂಜಿನಲ್ಲಿ ಸೋತವಳನ್ನು ಗುರು-ಹಿರಿಯರೆದುರೇ ಮಾನಭಂಗ ಮಾಡುವದಿತ್ತು; ಕೃಷ್ಣಾರ್ಜುನ ಪೃಥ್ವೀರಾಜರಂತೆ ಕದ್ದೊಯ್ದು ವಿವಾಹವಾಗುವ ಧರ್ಮವೂ ಇತ್ತು. ಅದೇ ಕಾಲಘಟ್ಟಗಳಲ್ಲೇ ಸ್ವಯಂವರದ ಸ್ವಾತಂತ್ರ್ಯ, ಸೌಲಭ್ಯವೂ ಹೆಣ್ಣಿಗಿತ್ತು!
      ಜಗತ್ತಿನಲ್ಲಿ ಇಂದೂ ಹೆಣ್ಣನ್ನು ಬಳಕೆಯವಸ್ತುವಿನಂತೆ ಲೆಕ್ಕಿಸುತ್ತಿರುವದು ಸತ್ಯವಾದರೂ, ಅವಳ ಸ್ವಾತಂತ್ರ್ಯ ಹೆಚ್ಚಿದೆ. ಕಾನೂನಿನಲ್ಲಿ ಅವಳ ರಕ್ಷಣೆಗೆ ಬದಲಾವಣೆಗಳಾಗಿವೆ. ಇತ್ತೀಚಿನಿಂದ ಹೆಣ್ಣಿನ ಮೇಲಿನ ದೌರ್ಜನ್ಯಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವದಕ್ಕೆ ಹೆಚ್ಚಿನ ಆಸ್ಪದಗಳಿವೆ. ಅವಳ ವೈಯಕ್ತಿಕ ಗೋಪ್ಯಕ್ಕೆ (personal privacy) ರಕ್ಷಣೆಯಿದೆ. ಈ ವಿಷಯದಲ್ಲಿ ಬಹಳಷ್ಟು ಸುಧಾರಣೆಗಳಾಗಬೇಕೆನ್ನುವದೂ ನಿಜ.
      ಹಿಂದೆಲ್ಲಾ ಸರ್ಕಾರಕ್ಕೆ ತೆರಿಗೆ, ಬಿಲ್ ಇತ್ಯಾದಿಗಳನ್ನು ಪಾವತಿಸುವದರಲ್ಲೂ ಲಂಚಕೋರತನವಿತ್ತು. Onlineನಲ್ಲಿ ಪಾವತಿಸುವ ಸೌಕರ್ಯ ಎಷ್ಟೊಂದು ಸುಲಭೀಕರಣವಾಗಿದೆಯಲ್ಲವೇ! ಕೆಲವೇ ವರ್ಷಗಳ ಹಿಂದೆ ಅಡುಗೆಯನಿಲದ ಬುಕಿಂಗ್ ಹೇಗಿತ್ತು; ಈಗ ನಂಬಲಿಕ್ಕಾಗದಷ್ಟು ಸುಲಭವಾಗಿದೆಯಲ್ಲವೇ?
      ಆಂಗ್ಲರ ನಮ್ಮನ್ನಾಳಲು ವಿಧಿಸಿದ ಕಾನೂನುಗಳನ್ನು ನಾವು ಬದಲಾಯಿಸಲು ತಕ್ಕ ಜನನಾಯಕರನ್ನು ನಾವು ಆರಿಸಿ ಕಳುಹಿಸಬೇಕು. ನಮ್ಮ ಕೆಲವು ಜನನಾಯಕರು ಮುಂಚಿಗಿಂತ ಕುಸಂಸ್ಕೃತರೂ, ಬೇಜವಾಬ್ದಾರಿಗಳೂ ಆಗಿದ್ದಾರೆ; ನಿಜ. ಜನಸಂಖ್ಯೆ ಹೆಚ್ಚಿದಂತೆ ಮತ್ತು ಜನರ ಸಂಚಾರ ಸೌಲಭ್ಯ ಸರಳವಾದಂತೆ ದುಷ್ಟ ಜನರ ಸಂಖ್ಯೆ ಹೆಚ್ಚಿದೆ. ದುರಾಚಾರಗಳೂ ಹೆಚ್ಚಿವೆ ಜತೆಯಲ್ಲೇ ಅವುಗಳು ಬೆಳಕಿಗೆ ಬರುವದೂ ಹೆಚ್ಚಾಗಿವೆ.
      ವ್ಯವಸ್ಥೆ ಎಚ್ಚೆತ್ತುಕೊಳ್ಳುವದಿಲ್ಲ; ವ್ಯವಸ್ಥೆಯ ಒಂದು ಅಂಗವಾಗಿರುವ ನಾವು ಎಚ್ಚರದಿಂದಿರಬೇಕು; ಎಚ್ಚರಿಸುತ್ತಿರಬೇಕು. ನಾವು ನಿಧಾನಿಗಳು; ನರಸತ್ತವರೇನಲ್ಲ.
      ಕಾನೂನು ಕತ್ತೆಯಂತೆ; ಜಡತೆ ಅದರ ಲಕ್ಷಣ. ಆದರೆ ನಮ್ಮಲ್ಲಿ ಅದನ್ನು ನಡೆಸುವವರೂ ಅದಕ್ಕಿಂತ ಆಲಸಿಗಳಾಗಿದ್ದಾರೆ. ಅಪರಾಧಿಗಳು ಯಾರೆಂದು ಸಿದ್ಧಪಡಿಸಿದ ನಂತರವೂ ಅವರನ್ನು ಶಿಕ್ಷಿಸಲು ಮೀನ-ಮೇಷ ಎಣಿಸುತ್ತಿದ್ದಾರೆ. ಅಮೆರಿಕದಂಥ ದೇಶಗಳಲ್ಲಿ ರೇಪಿಸ್ಟ್‌ ಎಂದು ರುಜುವಾತಾದ ಮೇಲೆ ಶೀಘ್ರದಲ್ಲೇ ಮರಣದಂಡನೆಯನ್ನೀಯುತ್ತಾರೆ. ನಮ್ಮಲ್ಲಿ ಮರಣದಂಡನೆ ವಿಧಿಸಿದರೆ ಅವರಿವರೇನೆಂದಾರೆಂದು ಪೇಚಾಡುತ್ತಿರುತ್ತಾರೆ.
      ನೀವು ಬರೆದಂತೆ ಅಷ್ಟುಸುಲಭವಾಗಿ ಒಳ್ಳೆಯ ದಿನಗಳು ಬರುವದಿಲ್ಲ. ಹಾಗೆ ನೋಡಿದರೆ ಒಳೆಯವ್ಯಾವವೂ ಸುಲಭವಾಗಿ ಬರುವದಿಲ್ಲ!

  4. NA DIVAKAR

    ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿರುವಂತೆಲ್ಲಾ ಪುರುಷ ಸಮಾಜದ ವಿಕೃತ ಮನಸುಗಳು ಚುರುಕಾಗುತ್ತಿವೆ. ಕಠಿಣ ಕಾನೂನು, ಜಾಮೀನು ರಹಿತ ಬಂಧನ, ಗಲ್ಲು ಶಿಕ್ಷೆ, ಎನ್ ಕೌಂಟರ್ ಹತ್ಯೆ, ಹೀಗೆ ಹಲವು ಶಿಕ್ಷೆಗಳನ್ನು ಪುರುಷ ಸಮಾಜವೇ ಪ್ರತಿಪಾದಿಸುತ್ತಿದೆ. ಇದು ಸ್ವಾಗತಾರ್ಹವೇ. ಮತ್ತೊಂದೆಡೆ ಮಹಿಳೆಯರಿಗೆ ರಕ್ಷಣೆ ಕೊಡಿ ಎಂಬ ಕೂಗು ತೀವ್ರವಾಗುತ್ತಿದೆ. ರಕ್ಷಣೆ ಕೋರುವುದು ಸಮಾಜದ ದೌರ್ಬಲ್ಯದ ಸಂಕೇತ. ಮಹಿಳೆಯರಿಗೆ ಬೇಕಿರುವುದು ಘನತೆ, ಗೌರವ, ಸಮ್ಮಾನ ಮತ್ತು ಸಮಾನ ಸ್ಥಾನಮಾನ. ಇದು ಸಾಧ್ಯವಾಗಬೇಕಾದರೆ ಪ್ರಬುದ್ಧ ನಾಗರಿಕ ಸಮಾಜ ತನ್ನ ಪಾರಂಪರಿಕ ದೃಷ್ಟಿಕೋನವನ್ನು ಬದಲಿಸಿ ಲಿಂಗಭೇಧವನ್ನು ಮರೆತು ಮನುಕುಲದತ್ತ ಗಮನ ಹರಿಸುವುದು ಅಗತ್ಯ. ಮಹಿಳೆಯರಿಗೆ ರಕ್ಷಣೆ ನೀಡು್ತ್ತೇವೆ ಎಂಬ ಆಳ್ವಿಕರ ಭರವಸೆ, ರಕ್ಷಣೆ ನೀಡಿ ಎಂಬ ನಾಗರಿಕರ ಕೂಗು ಎರಡೂ ಒಂದು ಅಸ್ವಸ್ಥ ಸಮಾಜದ ದೌರ್ಬಲ್ಯವಾಗಿ ತೋರುತ್ತದೆ ಮಹಿಳೆಯನ್ನು ಇತರ ಚೀವಚರಗಳಂತೆಯೇ ನಿಸರ್ಗ ಸೃಷ್ಟಿ ಎಂದು ಪರಿಭಾವಿಸುವ ಚಿಂತನೆ ಇಂದಿನ ತುರ್ತು ಅಗತ್ಯತೆ.ಅತ್ಯಾಚಾರ ದೈಹಿಕವಾಗಿ ಸಂಭವಿಸಿದಾಗ ಪ್ರತಿರೋಧದ ದನಿಗಳು ಮುಗಿಲು ಮುಟ್ಟುತ್ತವೆ. ಆದರೆ ಅತ್ಯಾಚಾರ ಎಸಗುವ ವಿಕೃತ ಮನೋಭಾವವನ್ನು ಸೃಷ್ಟಿಸುವ ಪುರುಷಪ್ರಧಾನ ಮನಸುಗಳಲ್ಲಿರುವ ಆಂತರಿಕ ಭಾವನೆಗಳು ಸುದ್ದಿಯಾಗುವುದು ದುಸ್ಸಾಧ್ಯ. ನೋಟ ಬದಲಾದರೆ ಆಟವೂ ಬದಲಾಗುತ್ತದೆ. ದೃಷ್ಟಿ ಬದಲಾದರೆ ಸೃಷ್ಟಿಯೂ ಬದಲಾಗುತ್ತದೆ. ರಕ್ಷಣೆ, ಶಿಕ್ಷೆ ಅವಶ್ಯಕತೆ ಇಲ್ಲ ಮಾನವೀಯತೆ ಅಗತ್ಯ. ಎಲ್ಲಿದೆ ?????????????

  5. ಕಿರಣ್

    ಚಿತ್ರಾ, ಇಂದಿನ “ವಿಜಯವಾಣಿ”ಯಲ್ಲಿ ಪ್ರೊ.ಕೃಷ್ಣೆಗೌಡರ “ಜಲದ ಕಣ್ಣು” ಮತ್ತು “ಪ್ರಜಾವಾಣಿ”ಯಲ್ಲಿ ಪದ್ಮರಾಜ ದಂಡಾವತಿಯವರ “ನಾಲ್ಕನೆಯ ಆಯಾಮ” ನೋಡಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading