ಸಂದೀಪ್ ಈಶಾನ್ಯ
ಹಳೆಯ ರೇಡಿಯೋಗಳಲ್ಲಿ ಬರುವ ದುಃಖದ
ಹಾಡುಗಳನ್ನು ಅನುಗಾಲವೂ ಕೇಳಬಾರದು
ಜೋರು ಮಳೆ ಬಂದಾಗ
ಥರಥರ ನಡುಗುವ ಹಳೆಯ ಮುದುಕಿ ಕಂಡಾಗ
ಚಿತ್ರವೊಂದನ್ನ ಬಿಡಿಸಲು ಕೂತಾಗಲೇ ಪೆನ್ಸಿಲ್ಲಿನ ಕಪ್ಪು ಮೂತಿಯ ಲೆಡ್ಡು ಮುರಿದು ಬಿದ್ದಾಗ
ಮೈ ಕೊರೆಯುವ ಚಳಿಯಲ್ಲಿ ಮತ್ತಷ್ಟು ಮೈ ನಡುಗಿಸುವ ಕೋಲ್ಡ್ ಕಾಫಿ ಎದುರಿದ್ದಾಗ
ಕಳೆದು ಹೋಗುವುದರಿಂದಲೇ ಕವಿತೆ ಬರೆಯುವ ಪಾಪದಿಂದ ವಿಮೋಚನೆ ಅನುಗ್ರಹಿಸುವ
ಪೆನ್ನು
ಖಾಲಿ ಹಾಳೆಗಳು ವಿಪರೀತ ನೆನಪಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು

ರೇಡಿಯೋನ ಯಾವುದೋ ಅಜ್ಞಾತ ಮೂಲೆಯಲ್ಲಿ ಕೂತು ಟ್ರಾನ್ಸಿಸ್ಟರು ಸ್ಪೀಕರು ಅದಕ್ಕಂಟಿದ ಮ್ಯಾಗ್ನೆಟಿಗೂ ನೋವಾಗುವಂತೆ ಹಾಡುವ ಹಾಡುಗಾರನ
ಮನೆಯ ಬಾಡಿಗೆ ಎಷ್ಟು ತಿಂಗಳು ಬಾಕಿ ಇರಬಹುದು
ಎಲ್ಲರ ನೋವು ನೆನಪಾಗುವಂತೆ ಹಾಡು ಬರೆದವನು ನಿಜದಲ್ಲೂ ಅದೆಷ್ಟು ನೊಂದಿರಬಹುದು
ಅವರಿಬ್ಬರ ಸಂಕಟದ ಅಂದಾಜು ಸಿಕ್ಕಾಗ ಮಾತ್ರ ಕೇಳಬೇಕು ಹಳೆಯ ಹಾಡುಗಳನು
ಬೆರಳ ಸಂದಿಯ ಒಂದೇ ಅಗುಳನ್ನು ಬಟ್ಟಲಿಗಿಟ್ಟು
ಅಕ್ಷಯ ಮಾಡಿ ಪರೀಕ್ಷಿಸುವವರಿಗೂ ಹಸಿವು ನೀಗಿಸಿದನಲ್ಲ ಯಾದವಸುತ
ಅವನ ಪವಾಡ ಆ ಕ್ಷಣಕ್ಕೆ ಮಾತ್ರ
ತಿಂದವರಿಗೆ ಮತ್ತೆ ಹಸಿವಾಗುತ್ತದೆ
ಉಂಡವರ ಹಸಿವೂ ಅರಿವಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು
ರೇಡಿಯೋ ನೊಂದುಕೊಳ್ಳುವುದಿಲ್ಲ..
ನಿಮಗೆ ಇವೂ ಇಷ್ಟವಾಗಬಹುದು…





0 Comments