ಪ್ರಸಾದ್ ರಕ್ಷಿದಿ
ನನ್ನ ಒಂದಿಬ್ಬರು ಗೆಳೆಯರು ಫೋನ್ ಮಾಡಿ ನೀನು ಯಾವಾಗಲೂ ಯಾಕೆ ರೆಸಾರ್ಟು ಹೋಮ್ ಸ್ಟೇಗಳ ವಿರುದ್ಧ ಬರೆಯುತ್ತೀಯೆ, ನೀನು ಕಾಫಿ ನಾಡಿನವನಾಗಿ ನಮ್ಮ ಸಮಸ್ಯೆ ಗೊತ್ತಿಲ್ಲವೇ ಎಂದರು, ಅದಕ್ಕಾಗಿ ಈ ಬರಹ…
ಯಾವುದೇ ದೇಶವಿರಲಿ ರಾಜ್ಯವಿರಲಿ, ಪ್ರವಾಸೋದ್ಯಮ ಒಂದು ಸುಂದರವಾದ ಹಾಗೂ ಆದಾಯ ತರುವ ಮತ್ತು ಉದ್ಯೋಗ ಸೃಷ್ಟಿ ಮಾಡುವ ಕಾಯಕ. ಇದರಲ್ಲಿ ಬೇರೆ ಮಾತಿಲ್ಲ. ಪ್ರವಾಸೋದ್ಯಮ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಪರಿಕಲ್ಪನೆ ಮತ್ತು ವೈವಿಧ್ಯ ಮತ್ತು ಅಲ್ಲಿನ ಸಂಸ್ಕೃತಿ ಮತ್ತು ವ್ಯಾಪಾರಕ್ಕನುಗುಣವಾಗಿ ಇದೆ. ಅದು ಬೇರೆಯೇ ವಿಚಾರ.
ಕಾಫಿನಾಡಿನಲ್ಲಿ ಪ್ರಕೃತಿ ಕೈಕೊಟ್ಟು ಇಲ್ಲಿನ ಕಾಫಿ, ಏಲಕ್ಕಿ, ಮೆಣಸು ಮುಂತಾದ ಎಲ್ಲಾ ಬೆಳೆಗಳು ಜೀವನಾಧಾರವಾಗದಿದ್ದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕಾಫಿನಾಡಿನಲ್ಲಿ ಹೋಮ್ ಸ್ಟೇಗಳು ಹುಟ್ಟಿಕೊಂಡವು. ನಗರಗಳಲ್ಲಿನ ಜನ ನೆಮ್ಮದಿ ಬಯಸಿ ಮಲೆನಾಡಿಗೆ ಬಂದು ಅಲ್ಲಿನ ಮನೆಗಳಲ್ಲಿ ಅತಿಥಿಗಳಾಗಿ ಉಳಿದುಕೊಂಡು ಆ ಮನೆಯವರಿಗಷ್ಟು ಶುಲ್ಕ ನೀಡುವುದು ಕ್ರಮ. ಇದರಿಂದ ಆ ಕೃಷಿಕರಿಗೊಂದಷ್ಟು ಆದಾಯ ಬರತೊಡಗಿತು.
ಎಲ್ಲ ಕಡೆ ಆದಂತೆ ಇದೂ ಕೂಡ ನಿಧಾನವಾಗಿ ವಾಣಿಜ್ಯೀಕರಣ ಗೊಂಡಿತು. ಮಲೆನಾಡಿನ ಹೋಮ್ ಸ್ಟೇ ಗಳು ಐಷಾರಾಮೀ ತಾಣಗಳಾಗಿ ಪರಿವರ್ತನೆಯಾಗತೊಡಗಿದವು. ಹೆಸರಿಗೆ ಇಲ್ಲಿ ಮದ್ಯಕ್ಕೆ ಅವಕಾಶವಿಲ್ಲ. ಆದರೆ ಅದಿಲ್ಲದ ಹೋಮ್ ಸ್ಟೇಗಳೇ ಇಲ್ಲವೆಂಬಂತಾಯಿತು. ಬರುವವರು ಯಾರು ಎಲ್ಲಿಂದ ಬರುತ್ತಾರೆ ಎಂಬ ವಿಷಯ ಹಿಂದೆ ಸರಿಯಿತು. ಹಣವೊಂದೇ ಮುಖ್ಯವಾಯಿತು, ಇಲ್ಲೇ ಪಾರ್ಟಿಗಳು ವ್ಯವಸ್ಥೆಯಾಗತೊಡಗಿದವು. ಮೊದಲು ಹೊಸ ವರ್ಷದಲ್ಲಿ ಮಾತ್ರ ನಡೆಯುತ್ತಿದ್ದ ಇವು ಪದೇಪದೇ ನಡೆಯತೊಡಗಿದವು. ರಾತ್ರಿಯಿಡೀ ಐದು ಕಿ.ಮೀ ದೂರದವರೆಗೆ ಕೇಳುವಂತೆ ಸಂಗೀತದ ಅಟ್ಟಹಾಸ ಸುತ್ತಲಿನ ಪ್ರಾಣಿಗಳು ಓಡುವಂತೆ, ಜನರು ನಿದ್ದೆ ಮಾಡದಂತೆ ಮಾಡಿದವು. ಪೋಲಿಸರಿಗೆ ದೂರು ನೀಡಿದವರಿಗೆ ರಕ್ಷಣೆಯ ಬದಲಿಗೆ ರೆಸಾರ್ಟು ಮಾಲಿಕರಿಂದ ಬೆದರಿಕೆ ಬಂತು.
ಗುಡ್ಡಗಳ ಮೇಲೆಲ್ಲ ರಸ್ತೆಗಳನ್ನು ಕಡಿದರು. ಅರಣ್ಯದಂಚಿನಲ್ಲೇ ಸರ್ಕಾರಿ ಭೂಮಿ ಅತಿಕ್ರಮಿಸಿ ಕುಳಿತರು.
ಇನ್ನು ರಸ್ತೆಗಳು, ಹೊಳೆ ಹಳ್ಳಗಳು, ಗುಡ್ಡಗಳು, ಕಾಡಿನ ಮಧ್ಯೆಯಲ್ಲೂ ಖಾಲಿ ಮದ್ಯದ ಬಾಟಲಿಗಳಿಂದ . ಪ್ಲಾಸ್ಟಿಕ್ಕಿನಿಂದ ತುಂಬಿದವು.
ಹಣದ ಲೆಕ್ಕಾಚಾರವೇ ಇಲ್ಲದಂತೆ ಮೋಜು ಪ್ರಾರಂಭವಾಯಿತು. ಜೊತೆ ಜೊತೆಯಾಗಿ ಬರುವ ಯುವಕ ಯುವತಿಯರು ಯಾರು ಏನು ಎಂದು ಕೇಳದಿರುವುದೇ ಹೆಚ್ಚು ಇರಲಿ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ, ಆದರೆ ಅಪರಿಚಿತ ಶವವಾಗಿ ಬೀಳುತ್ತಿರುವ ಯುವತಿಯರ ಸಂಖ್ಯೆಯೂ ಏರತೊಡಗಿತು. ನಮ್ಮೂರಿನಲ್ಲೇ ಮೂರು ವರ್ಷದ ಹಿಂದೆ ಯವತಿಯ ಶವವೊಂದು ಸಿಕ್ಕಿ ಇನ್ನೂ ಯಾರೆಂದು ಪತ್ತೆಯಾಗಿಲ್ಲ.!
ನನ್ನ ಗೆಳೆಯರೊಬ್ಬರು ಐದು ವರ್ಷದ ಹಿಂದೆ ಹೋಮ್ ಸ್ಟೇಯೊಂದನ್ನು ಮಾಡಿದರು. ದಿನವೊಂದಕ್ಕೆ ವ್ಯಕ್ತಿಯೊಬ್ಬರಿಗೆ ಐದು ನೂರು ರೂ ಶುಲ್ಕ ನಿಗದಿ ಮಾಡಿ ಸರಳವಾದ ವ್ಯವಸ್ಥೆ ಮಾಡಿದ್ದರು. ಎರಡು ವರ್ಷವಾದರೂ ಅವರಿಗೆ ವ್ಯಾಪಾರ ಕುದುರಲಿಲ್ಲ. ಈಗ ಅವರು, “ಪುಲ್ ಬಿಜಿ” ಯಾಕೆಂದರೆ ಶುಲ್ಕ ತಲಾ ಎರಡೂವರೆ ಸಾವಿರ ಮಾಡಿದ್ದಾರೆ, ಅತಿಥಿಗಳಿಗೆ ಬೇಕಾದ್ದು ಸಿಗುವ ವ್ಯವಸ್ಥೆ ಮಾಡಿದ್ದಾರೆ.
ಇದರೊಂದಿಗೆ ಈ ಮೋಜಿನೊಂದಿಗೆ ಸ್ಥಳೀಯವಾಗಿಯೂ ಅನೇಕ ಬದಲಾವಣೆ ಆಗಿವೆ ಅನೇಕ ಸ್ಥಳೀಯ ಯುವಕರು ಈ ಅತಿಥಿಗಳನ್ನು ಅನುಕರಿಸತೊಡಗಿದ್ದಾರೆ. ಹೇಗಾದರೂ ಸಂಪಾದಿಸು- ಮಜಾ ಮಾಡು ಎಂಬ ಸೂತ್ರಕ್ಕೆ ವಾಲುತ್ತಿದ್ದಾರೆ ಸ್ಥಳೀಯ ಅಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಗಾಂಜಾ ಬೇಕಾದಂತೆ ಸಿಗುತ್ತಿದೆ. ಮನೆಮನೆಯಲ್ಲಿ ಯುವಕರು ದುಡ್ಡಿಗಾಗಿ ಮನೆಯವರೊಂದಿಗೆ ಜಗಳ ಮಾಡುವುದು ಹೊಡೆದಾಡುವುದು ನಿತ್ಯ ವಿಧಿಯಾಗಿದೆ.
ನೂರಕ್ಕೆ ನೂರು ಹೋಮ್ ಸ್ಟೇ ಗಳು ಹೀಗಿವೆ ಎಂದಲ್ಲ. ಕೆಲವರು ಪರಿಸರ ಕಾಳಜಿಯಿಂದ ಯಾವುದೇ ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ನಗಣ್ಯವೆಂಬಷ್ಟು ಸಣ್ಣದು.
ಈಗ ನಮ್ಮ ತಾಲ್ಲೂಕಿನಲ್ಲಿ ಸುಮಾರು ಒಂದು ಸಾವಿರ ರೆಸಾರ್ಟ್/ ಹೋಮ್ ಸ್ಟೇಗಳಿವೆ. ಇದರಿಂದಾಗಿ ನೇರವಾಗಿ ನಾಲ್ಕೈದು ಸಾವಿರ ಜನರಿಗೆ ಮತ್ತು ಪರೋಕ್ಷವಾಗಿ ಅಷ್ಟೇ ಜನರಿಗೆ ಉದ್ಯೋಗ ದೊರೆತಿದೆ. ಒಂದು ತಾಲ್ಲೂಕಿನಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ನಿರ್ಮಾಣ ಸಣ್ಣ ಸಂಗತಿಯಲ್ಲ ಇದು ಇನ್ನೂ ಹೆಚ್ಚಾಗಬಹುದು.
ರೆಸಾರ್ಟುಗಳವರಿಗೆ ತೊಂದರೆ ಕೊಡಬೇಡಿ ಪ್ರವಾಸೋದ್ಯಮ ಬೆಳೆಯಲಿ ಎಂದು ಜಿಲ್ಲಾಡಳಿತವೇ ತನ್ನ ಸಿಬ್ಬಂದಿಗೆ ಬಾಯಿ ಮಾತಿನ ನಿರ್ದೇಶನ ನೀಡುತ್ತದೆ. ಈಗಂತೂ ಹೆಚ್ಚಿನ ರೆಸಾರ್ಟುಗಳ ಮಾಲಿಕರು ಇಲ್ಲವೇ ಪಾಲುದಾರರು, ಬೆಂಗಳೂರಿನ ಭಾರಿ ಕುಳಗಳು, ರಾಜಕಾರಣಿಗಳು, ಇಲ್ಲವೇ ದೊಡ್ಡ ಅಧಿಕಾರಿಗಳು.
ರೆಸಾರ್ಟು ಹೋಮ್ ಸ್ಟೇ ಗಳಿರುವ ಪ್ರದೇಶದಲ್ಲಿ ಒಂದು ತಿಂಗಳು ವಾಸ ಮಾಡಿದರೆ ಇದರ ಸಂಪೂರ್ಣ ಚಿತ್ರಣ ದೊರೆಯುತ್ತದೆ.
ಹೌದು ನಮಗೆ ಪ್ರವಾಸೋದ್ಯಮ ಬೇಕು, ಆದರೆ ಸರಿಯಾದ ನಿಯಂತ್ರಣ ಬೇಕು.. ಮಾಡುವವರು ಯಾರು?






U r absolutely right sir