ಅಹಲ್ಯೆ ಕಲ್ಲಾದಳೆ?

ಅಹಲ್ಯೆ ಆ ಹೂವನ್ನು ಕೊಯ್ಯಲೆಂದು ಕೈ ಹಾಕಿದ್ದಳಷ್ಟೆ. ರೊಂಯ್… ಎಂದು ಝೇಂಕರಿಸುತ್ತಾ ದುಂಬಿಯೊಂದು ಹಾರಿಹೋಗಿತ್ತು. ಅದರ ಆ ಝೇಂಕಾರದ ಶಬ್ದಕ್ಕೋ ಅಥವಾ ಮಧುವ ಹೀರಿ ಮತ್ತೇರಿದ ಅದರ ಹಾರಾಟದ ವೇಗಕ್ಕೋ ಅವಳೆದೆಯು ಸಣ್ಣಗೆ ತನನನನ…. ವೆಂದು ಮಿಡಿದಿತ್ತು.

ಮೊದಲೆಲ್ಲ ಎಷ್ಟು ಚೆನ್ನಾಗಿತ್ತು? ಯಾವ ಕ್ರಿಯೆಗೂ ಮನಸ್ಸು ಹೀಗೆಲ್ಲ ಬಂಧಿಯಾಗಿ ಭಾವಗಳನ್ನು ಮಿಡಿಯುತ್ತಿರಲಿಲ್ಲ. ಅಷ್ಟಕ್ಕೂ ದಿನವಿಡೀ ದುಡಿದರೂ ಮುಗಿಯದಷ್ಟು ಕೆಲಸವಿರುವ ಈ ಆಶ್ರಮದಲ್ಲಿ ಭಾವಗಳೆಲ್ಲ ಪುಟಿದೇಳಲು ಸಮಯವಾದರೂ ಎಲ್ಲಿರುತ್ತಿತ್ತು?

ಸೂರ್ಯೋದಯಕ್ಕೆ ಮುನ್ನವೇ ಎದ್ದು ಇಡಿಯ ಆಶ್ರಮದ ವಠಾರವನ್ನೆಲ್ಲ ಶುಚಿಗೊಳಿಸಬೇಕು. ಪ್ರಾತಃಕಾಲ ಸನ್ನಿಹಿತವಾಗುವ ಮುನ್ನವೇ ಬಾವಿಯಿಂದ ನೀರು ಸೇದಿ ಸ್ನಾನಾದಿ ಕರ್ಮಗಳನ್ನೆಲ್ಲ ಮುಗಿಸಬೇಕು. ಸೂರ್ಯಕಿರಣಗಳು ನೆಲವ ಸೋಕುವ ಮುನ್ನವೇ ಮನೆಯಂಗಳದಲ್ಲಿ ರಂಗೋಲಿಯ ಗೆರೆಗಳನ್ನು ಎಳೆಯಬೇಕು. ಇನ್ನೇನು ಬೆಳಕು ಹರಿಯಿತೆನ್ನುವಾಗಲೇ ಗೌತಮರ ಪೂಜೆಗೆ ಹೂವು, ಗರಿಕೆ, ತುಳಸಿ ಇತ್ಯಾದಿಗಳನ್ನು ಕೊಯ್ದು ಅಣಿಗೊಳಿಸಬೇಕು. ಯಾವುದೊಂದರಲ್ಲೂ ಏನೊಂದು ಕೊರತೆಯನ್ನೂ ಅವರು ಸಹಿಸಲಾರರು.

ಪೂಜೆ, ಹೋಮಗಳೆಲ್ಲ ಸಾಂಗವಾಗಿ ಮುಗಿಯಿತೆಂದರೆ ಅಹಲ್ಯೆಗೆ ಒಂದು ದಿನವನ್ನು ಕಳೆದ ನಿರಾಳತೆ. ತಾಳ ಹಾಕುತ್ತಿರುವ ಹೊಟ್ಟೆಗೆ ಮೊದಲ ದಿನವೇ ಸಂಗ್ರಹಿಸಿಟ್ಟ ಗೆಡ್ಡೆ ಗೆಣಸುಗಳ ತಿನಿಸು. ಮೇಲೊಂದಿಷ್ಟು ನೀರನ್ನು ಗಟಗಟನೆ ಕುಡಿದುಬಿಟ್ಟರೆ ಅಂದಿನ ಊಟವಾಯಿತೆಂದು ಲೆಕ್ಕ. ಮುಂದೆ ಗೌತಮರು ಅವಳನ್ನು ಕೂರಿಸಿಕೊಂಡು ಆಧ್ಯಾತ್ಮದ ಪಾಠ ಮಾಡುತ್ತಿದ್ದರು. ಅವರು ಹೇಳುವುದರಲ್ಲಿ ನೂರೊಂದು ಭಾಗ ಕೂಡ ಅವಳಿಗೆ ಅರ್ಥವಾಗುತ್ತಿರಲಿಲ್ಲ. ಜೀವನದ ಸಾರ್ಥಕತೆಗೆ ಅವುಗಳೆಲ್ಲ ಹೇಗೆ ಪೂರಕ? ಎಂದೂ ಅವಳಿಗೆ ಅರ್ಥವಾಗದು. ಆದರೆ ಅವರು ಹೇಳಿದ್ದನ್ನು ಕೇಳಬೇಕಲ್ಲದೇ ಎದುರು ಮಾತನಾಡುವುದನ್ನು ಗೌತಮರು ಸಹಿಸಲಾರರು ಎಂಬ ಸತ್ಯ ಅವಳಿಗೆ ಅನುಭವದತ್ತವಾಗಿ ಬಂದಿತ್ತು.

ಹಾಗಾಗಿ ಒತ್ತೊತ್ತಿ ಬರುವ ಆಕಳಿಕೆಗಳನ್ನೆಲ್ಲ ಗಂಟಲಲ್ಲೇ ಅಡಗಿಸಿಕೊಂಡು ಅವಳು ಅವರ ಉಪದೇಶವನ್ನು ಗಂಟೆಗಟ್ಟಲೆ ಕೇಳುತ್ತಿದ್ದಳು. ಈ ನಡುವೆ ಯಾರಾದರೂ ಅತಿಥಿಗಳು ವೇದ ವೇದಾಂತಗಳ ಚರ್ಚೆಗೆಂದು ಆಶ್ರಮಕ್ಕೆ ಬಂದರೆ ಅಹಲ್ಯೆಗೆ ಈ ಸಂಕಷ್ಟಗಳಿಂದ ವಿರಾಮವಿರುತ್ತಿತ್ತು. ಅತಿಥಿಗಳ ಅರೋಗಣೆಗಾಗಿ ಸ್ವಲ್ಪ ವಿಶೇಷವೆ ಎನಿಸುವ ಭೋಜನದ ತಯಾರಿ ನಡೆಸುವುದು ಅವಳ ಸಂಭ್ರಮದ ಕ್ಷಣಗಳಲ್ಲಿ ಒಂದಾಗಿತ್ತು.

ಅವಳು ಕೆಲವೊಮ್ಮೆ ನೆನಪಿಸಿಕೊಳ್ಳುತ್ತಾಳೆ, ತನ್ನಮ್ಮನೂ ಹೀಗೆ ತನ್ನ ತಂದೆಯ ಕೈಹಿಡಿದು ನರಳಿರಬಹುದೆ? ಎಷ್ಟು ನೆನಪಿಸಿಕೊಂಡರೂ ಅವಳಿಗೆ ಅಮ್ಮನ ನಿಟ್ಟುಸಿರಿನ ಗಳಿಗೆಗಳು ಕಣ್ಮುಂದೆ ಬರುತ್ತಿರಲಿಲ್ಲ ಅಥವಾ ನಿಟ್ಟುಸಿರುಗಳನ್ನು ಅಡಗಿಸಿಡುವ ಮಾಯಕದ ದಂಡವೊಂದು ಹೆಂಗಸರ ಕೈಯಲ್ಲಿ ಸದಾ ಇರುತ್ತದೆಯೆ? ತಂದೆ ಮುದ್ಗಲ ಮಹರ್ಷಿ ಮತ್ತು ಅಮ್ಮನ ದಾಂಪತ್ಯ ಸೊಗಸಾಗಿಯೇ ಕಂಡಿತ್ತು ಅವಳಿಗೆ. ಎಂದಿಗೂ ಧುಮ್ಮಿಕ್ಕಿ ಹರಿಯದ ಶಾಂತ ಸಾಗರದಂತಹ ಸಾಂಗತ್ಯ ಅವರದು ಅನಿಸಿತ್ತು. ಇವೆಲ್ಲವೂ ಜಗದ ಆಳಗಲಗಳ ಅರಿಯದ ತನ್ನ ಮಗುತನದ ಭ್ರಮೆಗಳಿರಬಹುದೆಂದು ಅವಳಿಗೆ ಇತ್ತೀಚೆಗೆ ಅನಿಸತೊಡಗಿದೆ.

ಹೌದು, ಅಂದು ತನ್ನ ಮದುವೆಯನ್ನು ನಿಗದಿಗೊಳಿಸುವ ದಿನ ಅಪ್ಪ ಅಮ್ಮನ ನಡುವೆ ಒಂದು ತಣ್ಣಗಿನ ಮಹಾಯುದ್ಧವೇ ನಡೆದಿತ್ತು. ಅಪ್ಪನ ಆಶ್ರಮಕ್ಕೆ ಆಗಾಗ ಬರುವವರು ಗೌತಮ ಮುನಿ. ಅವರಿಗೆ ತನ್ನ ಮಗಳನ್ನು ಕೊಡಬೇಕೆಂದು ಅಪ್ಪ ಅದಾಗಲೇ ನಿರ್ಧರಿಸಿಯಾಗಿತ್ತು. ಅಮ್ಮನಿಗೂ ಇದರ ಬಗ್ಗೆ ವಿರೋಧವೇನೂ ಇರಲಿಲ್ಲ. ಆದರೆ ಅಮ್ಮನ ಆಸೆಯನ್ನು ಬದಲಾಯಿಸಿದ್ದು ಅಂದು ನಡೆದ ಸಣ್ಣ ಘಟನೆ. ಅಂದು ದೇವಲೋಕದಿಂದ ಬಂದ ದೂತನೊಬ್ಬ ಒಂದು ನಿರೂಪವನ್ನು ತಂದಿದ್ದ. ಸುಂದರಿ ಅಹಲ್ಯೆಯನ್ನು ದೇವಲೋಕದ ರಾಜ ಇಂದ್ರ ತನ್ನವಳನ್ನಾಗಿ ಮಾಡಿಕೊಳ್ಳಲು ಬಯಸಿದ್ದಾನೆ ಎಂಬುದದರ ತಾತ್ಪರ್ಯ. ಅವನ ನಿರೂಪದಿಂದ ವಿಚಲಿತಗೊಂಡಿದ್ದಳು ಅಮ್ಮ. ಆದರೆ ಅಪ್ಪನ ನಿಲುವು ಖಚಿತವಾಗಿತ್ತು.

ಋಷಿಕುವರಿಯೊಬ್ಬಳು ಭೋಗಲಾಲಸೆಗಳು ಮೇಳೈಸಿರುವ ವ್ಯಕ್ತಿಯೊಬ್ಬನ ಸ್ವತ್ತಾಗುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಅವನು ಇಂದ್ರನೇ ಆಗಿರಲಿ, ಭೋಗವೆಂಬುದು ಆಶ್ರಮವಾಸಿಗಳ ಬಯಕೆಯಾಗಬಾರದೆಂಬುದು ಅವನ ನಿಲುವಾಗಿತ್ತು. ಆದರೆ ಅಮ್ಮ ಸಿಡಿದೆದ್ದಿದ್ದಳು. ನಿಮ್ಮ ಸಕಲ ಸಾಧನೆಗಳ ಸಿದ್ಧಿಯೂ ಮುಕ್ತಿಯ ಬಯಕೆಗಾಗಿ ತಾನೆ? ಅಂತಿರುವಾಗ ನಮ್ಮ ಮಗಳನ್ನು ಸ್ವರ್ಗಾಧಿಪನೇ ಬಯಸಿದ್ದಾನೆಂದಾದರೆ ಅದನ್ನೂ ಮುಕ್ತಿಪದವೆಂದು ನೀವ್ಯಾಕೆ ಭಾವಿಸಬಾರದು? ನಿಮ್ಮೆಲ್ಲ ಸಾಧನೆಗಳ ಫಲವೇ ಇದಾದರೂ ಆಗಿರಬಹುದು ಎಂದವಳು ಪ್ರಬಲವಾಗಿ ವಾದಿಸಿದ್ದಳು.

ಆದರೆ ಅಪ್ಪ ಅವಳ ಮಾತಿಗೆ ಎದುರಾಡಲಾರದೇ ರೇಗಿದ್ದ. “ನಿನಗೆ ನಿನ್ನ ಮಗಳನ್ನು ದೇವಲೋಕದ ಸೂಳೆಯಾಗಿಸುವ ಬಯಕೆಯಿರಬಹುದು. ಆದರೆ ಒಬ್ಬ ಶ್ರದ್ಧಾವಂತ ಮುನಿಯಾಗಿ ನನಗದು ಅಪಥ್ಯ. ನನ್ನ ಮಗಳು ಗೌತಮನ ಕೈಹಿಡಿದು ಗರತಿಯಾಗಿ ಬಾಳುತ್ತಾಳೆಯೇ ಹೊರತು ರಂಭೆ, ಊರ್ವಶಿಯರಂತೆ ದೇವಲೋಕದ ದೇವಾಂಗನೆಯಾಗಿಯಲ್ಲ.”

ಅಲ್ಲಿಗೆ ಎಲ್ಲ ವಾದವಿವಾದಗಳು ಕೊನೆಗೊಂಡು ಅಹಲ್ಯೆ ಗೌತಮರ ಕೈ ಹಿಡಿದು ಈ ಆಶ್ರಮದ ನಿವಾಸಿಯಾಗಿದ್ದಳು. ಈಗ ಅಹಲ್ಯೆಗೆ ನಿಚ್ಚಳವಾಗುತ್ತಿದೆ ಅಮ್ಮನ ಎದೆಯಾಳದ ಬಯಕೆ. ಅಮ್ಮ ಅಪ್ಪನೊಂದಿಗೆ ಸಂತೃಪ್ತಳಾಗಿದ್ದರೆ ಬಹುಶಃ ನನ್ನನ್ನು ಇಂದ್ರನಿಗೆ ಕೊಡಬೇಕೆಂದು ಹಠಹಿಡಿಯುತ್ತಿರಲಿಲ್ಲವೇನೊ? ಅಮ್ಮನಿಗೂ ಆಶ್ರಮದ ಕಟ್ಟುಪಾಡುಗಳು, ನೀತಿನಿಯಮಗಳು ಉಸಿರುಗಟ್ಟಿಸಿರಬೇಕು. ಹಾಗಾಗಿಯೇ ತನ್ನನ್ನು ಇಂದ್ರನಿಗೆ ಒಪ್ಪಿಸುವ ವಿಚಾರ ಅವಳಿಗೆ ಚೇತೋಹಾರಿಯಾಗಿ ಕಂಡಿರಬೇಕು. ಅಹಲ್ಯೆಗೆ ಇಂದ್ರನ ಅರಮನೆ, ಒಡ್ಡೋಲಗದ ಬಗೆಗೆ ಏನೊಂದೂ ತಿಳಿಯದು. ಅಲ್ಲಿ ಕುಣಿಯುವ ನರ್ತಕಿಯರೆಲ್ಲ ಸೂಳೆಯಾಗಿರಲಾರರು ಎಂದು ಇತ್ತೀಚೆಗೆ ಅವಳಿಗೆ ಅನಿಸತೊಡಗಿದೆ.

ಅದೊಂದು ದಿನ ಕಾರ್ಯನಿಮಿತ್ತ ಸ್ವರ್ಗಲೋಕಕ್ಕೆ ಹೊರಟಿದ್ದ ಗೌತಮ. “ತಾನೂ ಬರಲೇ?” ಎಂದು ಕೇಳಿದ್ದಳು ಅಹಲ್ಯೆ. ಅಷ್ಟಕ್ಕೇ ಗೌತಮನ ಸಿಟ್ಟು ನೆತ್ತಿಗೇರಿತ್ತು. “ಯಾಕೆ? ಆಶ್ರಮದ ಬದುಕು ಬೇಸರವಾಯಿತೇನು? ಋಷಿಪತ್ನಿಯೊಬ್ಬಳಿಗೆ ಪ್ರವಾಸವೆಂದರೆ ಅದು ತೀರ್ಥಕ್ಷೇತ್ರ ಮಾತ್ರವಾಗಿರಬೇಕೆಂಬ ಸರಳನಿಯಮವೂ ತಿಳಿದಿಲ್ಲವೆ?” ಎಂದು ಅಬ್ಬರಿಸಿದ್ದ. ಅವನು ಮರಳಿ ಬಂದಮೇಲೆ ಸ್ವರ್ಗದ ವಿಷಯಗಳನ್ನೆಲ್ಲ ಕೇಳಿ ತಿಳಿಯಬೇಕೆಂಬ ಸಣ್ಣ ಆಸೆಯನ್ನೂ ಅವನ ಸಿಟ್ಟು ನುಂಗಿಹಾಕಿತ್ತು. ಆದರೂ ಆಗಾಗ ಮನದೊಳಗೆ ಇಂದ್ರನೋಲಗದ ನರ್ತಕಿಯರು ನರ್ತಿಸುತ್ತಲೇ ಇದ್ದರು.

ಅಹಲ್ಯೆಗೆ ಇದೊಂದು ಅರ್ಥವಾಗದ ಒಗಟಾಗಿತ್ತು. ಹಗಲೆಲ್ಲ ಗೌತಮನ ಅಗತ್ಯತೆಗಳನ್ನು ಪೂರೈಸುವುದರಲ್ಲಿ, ಅವನ ಒಣವೇದಾಂತಗಳನ್ನು ಕೇಳಿಸಿಕೊಳ್ಳುವುದರಲ್ಲಿ ಕಳೆದುಹೋಗುತ್ತಿತ್ತು. ಸದಾ ರಾಗ, ದ್ವೇಷಗಳನ್ನು ಗೆಲ್ಲುವ ಬಗೆಗೆ ಉಪದೇಶ ನೀಡುವ ಗೌತಮ ಕಾರಣವಿಲ್ಲದೆಯೂ ಸಿಟಾರನೆ ಸಿಡಯುವ ಬಗೆ ಅವಳಿಗೆ ಒಗಟಾಗಿತ್ತು. ಯೌವ್ವನ ಆಗ ತಾನೆ ಅಹಲ್ಯೆಯ ಮೈಯ್ಯೊಳಗೆ ಹರಿದು ಕಚಗುಳಿಯಿಡುವ ಮೊದಲ ಗಳಿಗೆಗಳಲ್ಲಿ ಅವಳು ಅಪರೂಪಕ್ಕೊಮ್ಮೆ ಅವನನ್ನು ಆಸೆಯಿಂದ ದಿಟ್ಟಿಸಿದ ಕ್ಷಣಗಳಿದ್ದವು.

ಆಗೆಲ್ಲ ಅವನು ಅವಳನ್ನು ಸುಟ್ಟುಬಿಡುವಂತೆ ನೋಡುತ್ತಿದ್ದ. ಮತ್ತೆ ತನ್ನೆದುರು ಕುಳ್ಳಿರಿಸಿ ತಾಸುಗಟ್ಟಲೆ ದೇಹದ ಬಯಕೆಗಳನ್ನು ನಿಗ್ರಹಿಸುವುದು ಹೇಗೆ? ಎಂಬುದರ ಬಗ್ಗೆ ಉಪಮೆಗಳೊಂದಿಗೆ ವಿವರಿಸಿದ್ದ. ಅದೇ ಸತ್ಯವೆಂಬಂತೆ ಒಪ್ಪಿಕೊಂಡು ರಾತ್ರಿ ಬರಿಯ ನೆಲದಲ್ಲಿ ಕೊರಡಿನಂತೆ ಮಲಗಿರುವ ಅಹಲ್ಯೆಯೆಡೆಗೆ ಅವನ ತೋಳುಗಳು ಚಾಚುತ್ತಿದ್ದವು. ಇನ್ನೇನು ಅವನೆದೆಯೊಳಗೆ ಹುದುಗಿ ತಾನು ಇಲ್ಲವಾಗಬೇಕೆಂಬ ಬಯಕೆ ಅಹಲ್ಯೆಯೊಳಗೆ ಮೊಳಕೆಯೊಡೆಯುವ ಮೊದಲೇ ಯಾಂತ್ರಿಕವಾಗಿ ತನ್ನನ್ನು ಖಾಲಿಯಾಗಿಸಿಕೊಳ್ಳುವ ಗೌತಮ ದೂರಸರಿದು ಹೋಗುತ್ತಿದ್ದ. ಮರುಕ್ಷಣದಲ್ಲಿ ದಿವ್ಯಶಾಂತಿಯಿಂದ ಅವನು ನಿದ್ರಿಸಿದರೆ ಅಹಲ್ಯೆಯ ಮೈಯ್ಯೊಳಗೆ ಸುಡುವ ಬೆಂಕಿ ಬೆಳಗಿನವರೆಗೂ ಆರದೇ ಉರಿಯುತ್ತಿತ್ತು. ಏನೋ ಬೇಕೆಂಬ ಭಾವ, ಯಾವುದೋ ಸರಿಯಿಲ್ಲವೆಂಬ ತಳಮಳ, ಎಂಥದೋ ಅಪೂರ್ಣವಾಗಿದೆಯೆಂಬ ತಹತಹಿಕೆ ರಾತ್ರಿಯ ನಂತರವೂ ಕಾಡುತ್ತಿತ್ತು. ಪರಿಹಾರ ಮಾತ್ರ ಶೂನ್ಯವಾಗಿಯೇ ಉಳಿದಿತ್ತು.

ಇಂಥದ್ದೇ ಒಂದು ದಿನ ಅವಳು ತನ್ನನ್ನು ಆವರಿಸಬಂದ ಗೌತಮನನ್ನು ತಡೆದು ಕೇಳಿದ್ದಳು, “ಕಾಮವನ್ನು ಗೆಲ್ಲಬಯಸಿದ ನಿಮಗೆ ಇಂಥದೊಂದು ಕ್ರಿಯೆಯ ಅವಶ್ಯಕತೆಯಾದರೂ ಏನು? ಸುಮ್ಮನೆ ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಬಾರದೆ?” ಆ ದಿನ ಅದೇಕೋ ಪ್ರಸನ್ನನಾಗಿದ್ದ ಗೌತಮ ನತುತ್ತಲೇ ಉತ್ತರಿಸಿದ್ದ. “ನಾನು ಸಂನ್ಯಾಸಿಯಾಗಿದ್ರೆ ನೀನು ಹೇಳುವುದು ಸತ್ಯವಾಗಿರುತ್ತಿತ್ತು. ನಿನ್ನ ಕೈಹಿಡಿದ ಮೇಲೆ ನಾನು ಗ್ರಹಸ್ಥ. ನನಗೆ ಇಷ್ಟವಿರಲಿ, ಬಿಡಲಿ. ಗ್ರಹಸ್ಥ ಧರ್ಮವನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ಮುಕ್ತಿ ದುರ್ಲಭ. ಹಾಗಾಗಿಯೇ ನಿನಗೆ ದಾಂಪತ್ಯ ಸುಖನೀಡಿ ನನ್ನ ಧರ್ಮವನ್ನು ಪಾಲಿಸುತ್ತಿದ್ದೇನೆ”

ಅಹಲ್ಯೆ ಲಜ್ಜೆಯನ್ನು ಬದಿಗಿಟ್ಟು ಕೇಳಿದ್ದಳು, “ದಾಂಪತ್ಯದ ಸುಖಕ್ಕೆ ಕಡಿವಾಣದ ಪಹರೆಯೇಕೆ? ತೆರೆಸರಿಸಿ ನಿರಾಳವಾಗಬಾರದೇಕೆ?” ಗೌತಮನ ದನಿಯೀಗ ಕಠಿಣವಾಗಿತ್ತು. “ಅತಿಯಾದ ಬಯಕೆ ಸಂಸಾರಿಗಳ ಸ್ವೇಚ್ಛೆ. ಋಷಿಧರ್ಮದ ಪಾಲನೆಗೆ ಬಯಕೆಯ ಕಡಿವಾಣ ಅನಿವಾರ್ಯ. ನನ್ನನ್ನು ಮೋಹಿಯಾಗಿಸುವ ಕಡುಪಾಪದ ಕೆಲಸಕ್ಕೆ ಕೈಹಾಕಬೇಡ. ಧರ್ಮಪಾಲನೆಗೆ ಅನುವಾಗುವ ಅನುಚರಿಯಾಗಿರು ಸಾಕು.” ಅಲ್ಲಿಗೆ ಅವನ ಸಹಚಾರಿಯಾಗಬೇಕೆಂಬ ಅವಳ ಬಯಕೆ ಕಮರಿಹೋಗಿತ್ತು.

ಆದರೆ ಅವಸರದ ಧರ್ಮಪಾಲನೆಯ ನಂತರವೂ ನಿರಾಳವಾಗಿ ನಿದ್ರಿಸುವ ಅವನ ಪ್ರಶಾಂತತೆ ಅವನ ಸಾಧನೆಯಿಂದ ಬಂದುದೆಂದು ಅವಳಿಗನಿಸುತ್ತಿರಲಿಲ್ಲ. ಸುಡುವ ಬಯಕೆಗಳನ್ನು ನನ್ನಲ್ಲಿ ಉದ್ದೀಪಿಸಿ, ದೂರಸರಿದುಬಿಡುವ ಅವನ ಕಾಯಕ ಧರ್ಮಪಾಲನೆಯಂತೆ ಅವಳಿಗೆ ಕಾಣಿಸುತ್ತಿಲ್ಲ. ನಿದ್ದೆಯಿಲ್ಲದ ರಾತ್ರಿಗಳು ಅವಳನ್ನು ಇನ್ನಿಲ್ಲದಂತೆ ಕಾಡುತ್ತವೆ. ಕೆಲವೊಮ್ಮೆ ಅವಳು ಅಂದುಕೊಳ್ಳುತ್ತಾಳೆ, ಸಹಜ ಪ್ರಕೃತಿಯನ್ನು ಆಶ್ರಮದೊಳಗೆ ಬಿಟ್ಟುಕೊಳ್ಳಬಾರದು. ಇಲ್ಲಿ ಎಲ್ಲವೂ ಕೃತಕವಾಗಿದೆಯೆಂದು. ಆದರೆ ಪ್ರಕೃತಿಯನ್ನು ಪ್ರತಿಬಂಧಿಸುವ ಮಂತ್ರಸಿದ್ಧಿ ಅವಳಿಗಂತಿರಲಿ, ಗೌತಮನಿಗೂ ಸಿದ್ಧಿಸಿರಲಿಲ್ಲ.

ಅದೊಂದು ಸುಂದರ ಇರುಳು! ಅಹಲ್ಯೆಯ ಕನಸಿನಲೋಕ ವಿಧವಿಧವಾದ ಹೂವುಗಳಿಂದ ಕಳೆಗಟ್ಟಿತ್ತು. ಸುತ್ತಮುತ್ತ ಎತ್ತ ನೋಡಿದರತ್ತ ಅರಳಿ ನಗುವ ಹೂರಾಶಿಗಳ ನಡುವೆ, ಮೆತ್ತನೆಯ ಮೊಗ್ಗಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಅಹಲ್ಯೆ ಸಾಗುತ್ತಿದ್ದಳು. ದೂರದಲ್ಲಿ ನಿಂತು ಕೈಚಾಚಿ ಕರೆಯುತ್ತಿರುವ ಅವನ ಗುರುತು ಹತ್ತುವ ಮೊದಲೇ ಅವಳು ಎಚ್ಚರಗೊಂಡಿದ್ದಳು. ಹೀಗೆ ಅಪರೂಪಕ್ಕೆ ಬಂದ ಕನಸಿನ ಲೋಕದಿಂದ ಈಚೆಗೆ ಬರಲು ಮನಸ್ಸಿಲ್ಲವಾದರೂ ಕರ್ತವ್ಯದ ಕರೆಗೆ ಓಗೊಟ್ಟು ನಿದ್ದೆ ತಿಳಿದೆದ್ದ ಅಹಲ್ಯೆ ಮತ್ತೆ ದಿನಚರಿಗೆ ತನ್ನನ್ನು ಒಡ್ಡಿಕೊಂಡಿದ್ದಳು. ಅವಳ ಅಂದಿನ ನಡಿಗೆಯಲ್ಲಿ ಅವಳಿಗರಿವಿಲ್ಲದೇ ಸೇರಿಕೊಂಡಿದ್ದ ಸಣ್ಣ ಲಾಸ್ಯವನ್ನು ಗೌತಮ ಅದಾಗಲೇ ಗುರುತಿಸಿದ್ದ. ಎಷ್ಟೆಂದರೂ ಯೌವ್ವನವ ಕಾಪಿಟ್ಟುಕೊಳ್ಳಲಾರದ ಮುಗ್ಧೆ ಅಂದುಕೊಳ್ಳುತ್ತಲೇ ನಿತ್ಯವಿಧಿಗಾಗಿ ನದಿಯೆಡೆಗೆ ಸಡೆದಿದ್ದ.

ಅಂದು ಅವಳು ಬಿಡಿಸಿದ ರಂಗೋಲಿಯಲ್ಲಿ ನವಿಲೊಂದು ಅವಳಿಗರಿವಿಲ್ಲದೇ ಗರಿಬಿಚ್ಚಿಕೊಳ್ಳುತ್ತ ಸಾಗಿತ್ತು. ಅಯಾಚಿತವಾದ ಈ ಬಗೆಯ ಬೆರಗಿಗೆ ತನ್ನನ್ನು ತಾನೇಒಡ್ಡಿಕೊಳ್ಳುತ್ತ ಅವಳು ರಂಗೋಲಿಯ ಎಳೆಗಳನ್ನು ದಿನಕ್ಕಿಂತಲೂ ನಾಜೂಕಾಗಿ ಎಳೆಯುತ್ತಿದ್ದಳು. ಮೆಲ್ಲನೆ ಅವಳ ಹೆಗಲ ಮೇಲೆ ಗಡುಸಾದ ಕೈಗಳು ಮುದ್ರೆಯೊತ್ತಿದಾಗ ಬೆಚ್ಚಿ ಭ್ರಮೆಯ ಲೋಕದಿಂದ ಎಚ್ಚೆತ್ತಳು. ತಿರುಗಿ ನೋಡಿದರೆ ಅವನು ನಗುತ್ತ ನಿಂತಿದ್ದ. ನಗೆಯನ್ನು ಭೋಗದ ಇನ್ನೊಂದು ಬಗೆಯೆಂಬಂತೆ ದೂರವಿಟ್ಟಿದ್ದ ಅವನ ಮುಖದಲ್ಲಿನ ಮಂದಹಾಸ ಅವಳನ್ನು ಕ್ಷಣಕಾಲ ವಿಸ್ಮಯಗೊಳಿಸಿತ್ತು. ಅವನು ಮಾತನಾಡದೇ ಅವಳನ್ನು ತನ್ನ ತೋಳಿನಲ್ಲಿ ಹೂಮಾಲೆಯಂತೆ ಎತ್ತಿ ಸಜ್ಜೆಯ ಮನೆಯತ್ತ ನಡೆದಿದ್ದ. ಅಹಲ್ಯೆ ಈಗ ತಾನೇ ಶುಚೀರ್ಭೂತನಾಗಿ ಬಂದ ಅವನ ದೇಹಗಂಧದ ಘಮಕ್ಕೆ ಮನಸೋತು ನಿಮೀಲಿತನಯನಳಾದಳು. ಅವನ ತೋಳಿನೊಳಗೆ ತನ್ನ ಕೋಮಲಕಾಯವನ್ನು ಹಗುರಾಗಿ ತೇಲಿಬಿಟ್ಟು ಸುಖದ ಅಮಲಿನಲ್ಲಿ ಕಳೆದುಹೋದಳು.

ಅಂದಿನ ಮಿಲನ ಎಂದಿನಂತಿರಲಿಲ್ಲ. ಭೋಗವನ್ನು ವರ್ಜಿಸುವ ಯಾವ ತಡೆಯೂ ಅವನ ನಡೆಗಿರಲಿಲ್ಲ. ಅವಳ ದೇಹದ ಇಂಚಿಚು ಕೂಡಾ ಅವನ ಸ್ಪರ್ಶದ ಪುಳಕವನ್ನು ಪಡೆದಿತ್ತು. ಇಡಿಯ ದೇಹವೇ ಹೂವಾಗಿ ಅರಳಿದಂತೆ ಪುಳಕಗೊಂಡಳು ಅಹಲ್ಯೆ. ಮಿಲನವೊಂದು ಹೀಗೂ ಮೈಮನಗಳನ್ನು ಅರಳಿಸಬಲ್ಲುದೆಂಬ ಅರಿವು ಅವಳಿಗಾದ ಅಮೃತ ಕ್ಷಣವದು. ಅವಸರ, ಒತ್ತಾಯಗಳಿಲ್ಲದ ನವಿರು ಪ್ರೇಮದ ಅಮಲು ಅವಳ ಮೈಮನವನ್ನೆಲ್ಲ ಆವರಿಸಿದ ಗಳಿಗೆ ತನ್ನ ತೋಳತಲೆದಿಂಬಿನಲ್ಲಿ ಮಲಗಿದವನ ಮುಖವನ್ನು ನಿಚ್ಚಳವಾದ ಬೆಳಕಿನಲ್ಲಿ ಕಂಡಳು. ಅರೆ! ಅವನು ಗೌತಮನಾಗಿರಲಿಲ್ಲ. ಅಂದರೆ ಇನ್ಯಾರೋ? ಅವಳು ಬೆಚ್ಚಿ ಎದ್ದು ಓಡಲಿಲ್ಲ. ಅವಳು ಅವನಿಂದ ಪಡೆದ ಸುಖದ ಸೌಗಂಧ ಇಡಿಯ ದೇಹವನ್ನು ವ್ಯಾಪಿಸಿರುವಾಗ ಅವನನ್ನು ನಿರಾಕರಿಸಿಯಾಳು ಹೇಗೆ? ಅವಳಿಗೆ ಆ ಕ್ಷಣ ಸುಂದರ ಸತ್ಯವೆನಿಸಿತ್ತು. ಅಂಥದೊಂದು ಸಾರ್ಥಕತೆಗೆ ಅವಳು ಏನನ್ನು ಬೇಕಾದರೂ ಬದಲಿಯಾಗಿಸಲು ಸಿದ್ಧಳಾಗಿದ್ದಳು. ಇದೀಗ ಅವಳು ಹೆಣ್ಣಾಗಿದ್ದಳು. ಪ್ರಕೃತಿಯಂತೆ ಎಲ್ಲವನ್ನು ಶಾಂತವಾಗಿ ಸ್ವೀಕರಿಸುವ ಗುಣ ಅವಳಿಗೆ ಸಿದ್ಧಿಸಿತ್ತು.

ಎದ್ದು ತನ್ನ ವಸನಗಳನ್ನೆಲ್ಲ ಓರಣವಾಗಿಸುತ್ತಿರುವಾಗಲೇ ಬಾಗಿಲಲ್ಲಿ ಪ್ರತ್ಯಕ್ಷನಾಗಿದ್ದ ಗೌತಮ! “ಜಾರಿಣಿ!” ಜ್ವಾಲಾಮುಖಿಯ ಸಿಡಿಲಿನಂತೆ ಅವನ ಧ್ವನಿ ಇಡಿಯ ವಾತಾವರಣವನ್ನು ವ್ಯಾಪಿಸಿತ್ತು. ಇಂದ್ರನ ಸುಖದ ಅಮಲು ಸರಕ್ಕನೆ ಇಳಿದು, ಅವನೆದುರು ತಲೆತಗ್ಗಿಸಿ ನಿಂತಿದ್ದ. “ಎಷ್ಟು ಧೈರ್ಯ ನಿನಗೆ ನನ್ನ ಮಡದಿಯೊಂದಿಗೆ ಸೇರಲು?” ಅಬ್ಬರಿಸಿದ ಗೌತಮ. “ತಿಳಿಯಲಿಲ್ಲ ಮುನಿಯೆ. ಮಬ್ಬುಬೆಳಕಿನಲ್ಲಿ ನಿಮ್ಮ ಪತ್ನಿಯೆಂದು ಅರಿಯದಾದೆ. ಭೋಗ ನಮಗೆ ನಿಷಿದ್ಧವಲ್ಲ. ಆದರೆ ನಿಮ್ಮ ಮಡದಿಯೆಂದು ತಿಳಿದಿದ್ದರೆ….” ಗೌತಮ ಅವನ ಮಾತುಗಳನ್ನು ನಡುವಲ್ಲೇ ತುಂಡರಿಸಿ ನುಡಿದ, “ಓಹೋ! ಎರಡು ಕಣ್ಣುಗಳು ಸಾಲದೇನೋ ಎದುರಿಗಿರುವವಳನ್ನು ಋಷಿಪತ್ನಿಯೆಂದು ಗುರುತಿಸಲು? ಇಕೋ, ನಿನಗೆ ಶಾಪವಿಡುತ್ತೇನೆ, ನಿನ್ನ ಮೈಯೆಲ್ಲ ಕಣ್ಣಾಗಲಿ” ಇಂದ್ರ ಇವೆಲ್ಲವೂ ಮಾಮೂಲಿಯೆಂಬಂತೆ ಅಲ್ಲಿಂದ ಕಣ್ಮರೆಯಾದ. ನಿಜವಾಗಿ ಕಾಣಬೇಕೆನ್ನುವವನಿಗೆ ಎದುರಿಗಿರುವವರ ಗರುತನ್ನರಿಯಲು ಕಣ್ಣೇ ಬೇಕಿಲ್ಲ. ಕೇವಲ ಮನಸ್ಸು ಸಾಕು. ಆದರೆ ಇಂದ್ರನಿಗೆ ಮೈಯೆಲ್ಲ ಕಣ್ಣಾದರೂ ಅವನು ತನ್ನ ಸುಖಕ್ಕೆ ಅರಿವಿನ ಪರದೆಯನ್ನು ಸರಿಸದೇ ಇರಲಾರ ಎಂಬ ಸತ್ಯ ಗೌತಮನಿಗೆ ಗೊತ್ತಿರಲಿಲ್ಲ ಎಂದಲ್ಲ. ಇವನಿಗೋ ಜಗದ ಮುಖಕ್ಕೆ ತನ್ನ ಪೌರುಷವನ್ನು ತೋರಿಸಲು ಒಂದು ನೆವ ಬೇಕಿತ್ತಷ್ಟೆ!

ಇಂದ್ರ ಸರಿದುಹೋದ ಮೇಲೆ ಋಷಿಯ ಉಗ್ರ ದೃಷ್ಟಿ ಅವಳೆಡೆಗೆ ತಿರುಗಿತು. ಅವಳು ಭಯದಿಂದ ನಡುಗಿ ತಲೆತಗ್ಗಿಸಲಿಲ್ಲ. ಅವನು ಏನೋ ಹೇಳಲು ಬಾಯಿ ತೆಗೆಯುವ ಮೊದಲೇ ಹೇಳಿದಳು, “ಇಂದ್ರ ನಿಜವಾಗಿಯೂ ನಿನಗಿಂತಲೂ ಕರುಣಾಳು” ಗೌತಮ ಕೋಪದಲ್ಲಿ ಕುದಿದು ಹೋದ. “ಎಷ್ಟು ವಿಕೃತಿಯಿದ್ದರೆ ನೀನು ಅವನು ಪರಪುರುಷ ಎಂಬುದನ್ನು ಅರಿತೂ ಕೂಡ ಅವನನ್ನು ಸೇರಿದೆ?” ಅಹಲ್ಯೆ ನೇರವಾಗಿ ಅವನ್ನು ದಿಟ್ಟಿಸುತ್ತ ನುಡಿದಳು, “ಮೊದಲು ಗೊತ್ತಿರಲಿಲ್ಲ. ಎಲ್ಲ ಮುಗಿದ ಮೇಲೆ ಗೊತ್ತಾದರೂ ಏನೂ ಮಾಡುವಂತಿರಲಿಲ್ಲ. ಆದರೆ ಅವನ ನಡೆಯಲ್ಲಿ ಎಳ್ಳಿನಿತೂ ವಿಕೃತಿಯಿರಲಿಲ್ಲ. ಪ್ರಕೃತಿಯ ಸುಂದರ ಅನುಭವವೊಂದನ್ನು ಇಂದು ನನ್ನದಾಗಿಸಿದ. ಸಂತೃಪ್ತಳು ನಾನು. ಮತ್ತೆಂದೂ ಬಯಸಲಾರೆ.”

“ನಿನ್ನ ಮನಸ್ಸು ಕಲ್ಲಾಗಿ ಹೋಗಲಿ. ಪ್ರಕೃತಿಯ ಕರೆಗೆ ಕರಗದಿರಲಿ” ಶಾಪವಿತ್ತು ಅವಳ ನೋಟವನ್ನೆದುರಿಸಲಾರನೆ ಸರಸರನೆ ಅಲ್ಲಿಂದ ನಡೆದ. ಪಕಪಕನೆ ನಕ್ಕುಬಿಟ್ಟಳು ಅಹಲ್ಯೆ. ಇವನೊಂದಿಗೆ ಇಷ್ಟು ವರ್ಷ ಬಾಳಿದನಂತರವೂ ನಾನು ಕಲ್ಲಾಗದೇ ಉಳಿದೇನೆಯೇ? ಸುಮ್ಮನೆ ತನ್ನ ಮಾತನ್ನು ವ್ಯರ್ಥಗೊಳಿಸಿಕೊಂಡ ಗೌತಮ.

ಹಾಗೆ ಹೋದವನು ಅದೆಷ್ಟೋ ವರ್ಷಗಳ ಕಾಲ ಬಾರಲೇ ಇಲ್ಲ. ಅವನಿಲ್ಲದ ಆಶ್ರಮ ಅವಳಿಗೇನೂ ಬೇರೆಯದೆಂಬಂತೆ ಅನಿಸಲೂ ಇಲ್ಲ. ತಾನು ಹೋದ ಊರಿನಲ್ಲೆಲ್ಲ ತನ್ನ ಹೆಂಡತಿ ತನ್ನ ಶಾಪದಿಂದ ಕಲ್ಲಾದ ಕಥೆಯನ್ನು ಹೇಳುತ್ತಲೇ ಸಾಗಿದ. ಕಲ್ಲನ್ನು ಮಾತನಾಡಿಲು ಯಾರಾದರೂ ಬರುವರೇನು? ಆಶ್ರಮದ ಹತ್ತಿರವೂ ಯಾರೂ ಸುಳಿಯುತ್ತಿರಲಿಲ್ಲ. ಅಹಲ್ಯೆಗೆ ಜನರ ಗೊಡವೆಯೂ ಬೇಕಾಗಿರಲಿಲ್ಲ. ಅವಳು ಪ್ರಕೃತಿಯ ಭಾಗವೇ ಆಗಿ, ಅದ ಲಯದೊಂದಿಗೆ ಒಂದಾಗಿಹೋಗಿದ್ದಳು. ಕಾಲದೊಂದಿಗೆ ಸರಿಯುವ ಋತುಮಾನಗಳು ಅವಳ ಬದುಕನ್ನು ಚಲನಶೀಲವಾಗಿಸಿ ಸಹ್ಯವಾಗಿಸಿದವು.

ಅಂದಿನ ರಾತ್ರಿ ಮತ್ತೆ ಅವಳಿಗೆ ಕನಸು. ಇಂದೂ ಕೂಡ ಹೂವಿನ ಲೋಕದಲ್ಲಿ ಸಾಗಿಹೋಗುತ್ತಿದ್ದಾಳೆ ಆಕೆ. ಆದರೆ ದೂರದಲ್ಲಿ ಚೆಂದದ ಹಸುಳೆಯೊಬ್ಬ ಕೈನೀಡಿ ಅವಳೆಡೆಗೆ ತೋಳು ಚಾಚಿದ್ದಾನೆ. ಅಹಲ್ಯೆಯೊಳಗಿನ ತಾಯಿ ಮೈಮುರಿದೆದ್ದಳು. ಕೈಚಾಚಿ ನಿಂತ ಮಗುವನ್ನು ತನ್ನ ಮಡಿಲಿನಲ್ಲಿ ಹುದುಗಿಸಿಕೊಳ್ಳುವ ಹಂಬಲದಿಂದ ಓಡತೊಡಗಿದಳು. ಇನ್ನೇನು ಮಗುವನ್ನು ತೆಕ್ಕೆಯಲ್ಲಿ ಅಪ್ಪಬೇಕೆನ್ನುವಾಗ ನಿದ್ದೆಯಿಂದ ಎಚ್ಚೆತ್ತಳು. ಇಂದೇನೋ ಶುಭವು ಕಾದಿದೆ ನನಗೆ ಎಂದುಕೊಳ್ಳುತ್ತಲೇ ಬೆಳಗಿನ ಕೆಲಸಗಳನ್ನು ಮುಗಿಸಿ, ಆಶ್ರಮದೆದುರಿನ ಬಂಡೆಯ ಮೇಲೆ ಬಂಡೆಯಂತೆ ಕುಳಿತವಳ ಬೆನ್ನಿಗೆ ಜೋತುಬಿದ್ದ ಯುವಕನೊಬ್ಬ, “ಅಮ್ಮಾ, ಕ್ಷೇಮವಾಗಿರುವಿಯೇನು?” ಎಂದಿದ್ದ.

ತಿರುಗಿ ನೋಡಿದರೆ ರಾಮ! ಅಯೋಧ್ಯೆ ರಾಜಕುಮಾರನಂತೆ. ಜೊತೆಯಲ್ಲಿ ಅವನ ತಮ್ಮ ಲಕ್ಷ್ಮಣ, ಋಷಿ ವಿಶ್ವಾಮಿತ್ರರೂ ಇದ್ದರು. ಅಹಲ್ಯೆ ಅವರನ್ನು ಸತ್ಕರಿಸಿದಳು. ವಿಶ್ವಾಮಿತ್ರರು ಮೆಲ್ಲನೆ ಅವಳನ್ನು ಬದಿಗೆ ಕರೆದು ಹೇಳಿದರು, “ಸೋತು ಹೋಗಿದ್ದಾನೆ ಗೌತಮ. ಕಾಲ ಅವನನ್ನು ಬಹಳ ಮಾಗಿಸಿದೆ. ಯೌವ್ವನದ ಉನ್ಮಾದ ಇದೀಗ ಇಳಿದಿದೆ. ಹೆಣ್ಣೊಬ್ಬಳು ಬೇಕು ಅವನ ಆರೈಕೆಗೆ. ಮನ್ನಿಸಿಬಿಡು ಅವನ ದುಡುಕುತನವನ್ನು. ಬಂಡೆಯಂತೆ ಕಲ್ಲಾಗಬೇಡ. ಪ್ರಕೃತಿಯಂತೆ ಚಿಗುರಿ ಅವನನ್ನು ಲಾಲಿಸು.” ನಕ್ಕಳು ಅಹಲ್ಯೆ. “ನಾನೆಲ್ಲಿ ಕಲ್ಲಾದೆ? ಅವನು ಜ್ವಾಲಾಮುಖಿಯಾಗಿ ಸಿಡಿದ. ಭೂಕಂಪನವಾಗಿ ಕಂಪಿಸಿದ. ಭೂಮಿ ನಾನು. ಪ್ರತಿ ಭೂಕಂಪನದ ನಂತರವೂ ಇನ್ನಷ್ಟು ಗಟ್ಟಿಯಾಗುತ್ತೇನೆ.” ವಿಶ್ವಾಮಿತ್ರರು ತಮ್ಮೊಂದಿಗೆ ಬಂದಿದ್ದ ಗೌತಮನನ್ನು ಮುನ್ನೆಲೆಗೆ ಕರೆದರು. ಗೌತಮ ತಲೆತಗ್ಗಿಸಿ ನಿಂತಿದ್ದ. ಅಹಲ್ಯೆ ಅವನನ್ನು ರಾಮನನ್ನು ತಬ್ಬಿದಂತೆ ತಬ್ಬಿ ಸಂತೈಸಿದಳು. ಅಮ್ಮಾ…… ಎಂಬ ರಾಮನ ಕರೆ ಅವಳನ್ನು ತಾಯಾಗಿಸಿಬಿಟ್ಟಿತ್ತು.

ಅಹಲ್ಯೆ ಎಷ್ಟೆಲ್ಲ ಹೆಣ್ಣುಗಳ ತಳಮಳದ ಹೊಳಹಾಗುತ್ತಾಳೆ. ಕಾಮವೆಂಬುದು ಗಂಡಿಗೆ ಒಂದು ಕ್ರಿಯೆಯಾದರೆ ಹೆಣ್ಣಿಗೆ ಅದೊಂದು ಸಿದ್ಧಿ. ಗಂಡಿಗೆ ಅದೊಂದು ದೈಹಿಕ ಸುಖದ ಕ್ಷಣವಾದರೆ ಹೆಣ್ಣಿಗೆ ಭಾವದೊಂದಿಗೆ ಎರಕಹೊಯ್ದ ಅನುಭವ. ಅವನದನ್ನು ದೇಹದ ನೆಲೆಯಲ್ಲಿ, ಅಸ್ತಿತ್ವದ ನೆಲೆಯಲ್ಲಿ ಪ್ರದರ್ಶಿಸುತ್ತಾ ಹೋದಾಗಲೆಲ್ಲ ಅವಳದನ್ನು ಭಾವದ ನೆಲೆಯಲ್ಲಿ, ಮನಸ್ಸಿನ ಎಳೆಯಲ್ಲಿ ಚಿತ್ರಿಸುತ್ತಾ ಹೋಗುತ್ತಾಳೆ. ಆದರೆ ಗಂಡುಲೋಕ ತನಗೆ ಸಿಗುವ ಸುಖದ ಗಳಿಗೆಗಳನ್ನು ಮಾತ್ರ ಕಸಿದುಕೊಂಡು, ಅವಳ ನೆಲೆಯನ್ನು ನಿರಾಕರಿಸುತ್ತ ಸಾಗಿರುವುದು ಹೊಸದೇನೂ ಅಲ್ಲ.

ಅವಳು ಅದನ್ನು ಹೇಳಲಾರಳು, ಎಲ್ಲಿಯಾದರೂ ತಪ್ಪಿ ಹೇಳಿದರೂ ಅವಳಿಗೆ ಕಾಮುಕಿಯೆಂಬ ಬಿರುದು ಸಿಗದಿರದು. ಲೈಂಗಿಕ ನೆಲೆಯನ್ನು ಹೆಣ್ಣುಗಳಿಗೆ ನಿರಾಕರಿಸಿ, ಅವಳು ಕೇವಲ ಗಂಡಿನ ಲೈಂಗಿಕ ಸರಕೆಂಬಂತೆ ನೋಡುವ ದೃಷ್ಟಿಗೆ ಅಹಲ್ಯೆ ಅರಿವಿನ ಕನ್ನಡಕವನ್ನು ತೊಡಿಸುತ್ತಾಳೆ. ಯಾವುದನ್ನೂ ನಿರಾಕರಿಸದೇ ಬದುಕಿನ ನಿಷ್ಠೆಯ ಪಾಠವನ್ನು ಹೇಳುತ್ತಾಳೆ. ಸಹಜ ಬಯಕೆ ಮತ್ತು ವಾಂಛೆಯ ತೆಳುಗೆರೆಯನ್ನು ಪೊರೆಯುತ್ತಲೇ ಹೆಣ್ಣಿನ ಲೈಂಗಿಕ ಅಸ್ತಿತ್ವದ ಛಾಪನ್ನು ಪುರಾಣದಲ್ಲಿ ಮೂಡಿಸುತ್ತಾಳೆ.

ಕೇವಲ ಹೆಣ್ಣು ಹೆತ್ತಳೆಂದೋ, ಅನಾರೋಗ್ಯ ಪೀಡಿತಳೆಂದೋ, ಗಂಡನಿಗೆ ತಕ್ಕವಳಲ್ಲವೆಂದೋ ಅಥವಾ ಏನೊಂದೂ ಕಾರಣವಿಲ್ಲದೆಯೂ ಗಂಡಿಗೆ ಅವಳ ಸಂಗ ಬೇಸರವಾಯಿತೆಂದೋ ಇನ್ನೊಬ್ಬಳನ್ನು ಸಲೀಸಾಗಿ ವರಿಸುವ ಗಂಡುಗಳ ಲೋಕ ತಾನು ಮದುವೆಯಾದ ಗಂಡು ನಪುಂಸಕನಾಗಿದ್ದರೂ ಅದನ್ನು ಸಮಾಜದೆದುರು ತೆರೆದಿಡಲಾಗದಂತೆ ಹೆಣ್ಣಿನ ತುಟಿಗಳನ್ನು ಹೊಲಿದಿರುವ ಸತ್ಯ ಹೊಸದೇನೂ ಅಲ್ಲ. ಗಂಡಿಗೆ ಹೆಣ್ಣಿನ ಒಡನಾಟದಲ್ಲಿ ಲೈಂಗಿಕತೆಯೇ ಪರಮಸಿದ್ಧಿಯೆಂಬಂತೆ ನೋಡುವ ಸಮಾಜ ಹೆಣ್ಣಿಗೆ ಅದರ ಹಕ್ಕೇ ಇಲ್ಲವೆಂಬತೆ ವರ್ತಿಸುವುದು ಕ್ರೂರತನವಲ್ಲದೇ ಇನ್ನೇನು? ಅದೆಷ್ಟು ಅಹಲ್ಯೆಯರು ಕಲ್ಲಾಗಿ ತಮ್ಮ ಇಡಿಯ ಜೀವನವನ್ನೇ ಸವೆಸಿರುವರೋ ಲೆಕ್ಕವಿಟ್ಟವರಾರು? ಅವರನ್ನೆಲ್ಲ ಮತ್ತೆ ಹೆಣ್ಣಾಗಿಸಲು ರಾಮ ಬರಲೇ ಇಲ್ಲ. ಏಕೆಂದರೆ ಅವನು ಏಕಪತ್ನಿ ನಿಷ್ಠ. ಇನ್ನೊಂದು ಹೆಣ್ಣಿನ ಸ್ಪರ್ಶ ಅವನಿಗೆ ಒಗ್ಗದು. ಕಣ್ತೆರೆದು ನೋಡಿದರೆ ಎಲ್ಲೆಲ್ಲೂ ಅಹಲ್ಯೆಯರ ಸಾಲು, ಸಾಲು.

“ಕಲ್ಲಾಗಿ ಕಾದಳು ಅಹಲ್ಯೆ ಅದೆಷ್ಟೋ ಕಾಲ
ವರವಾಗಿ ಬಂದ ರಾಮನ ಪಾದಚರಣ
ಸೋಂಕಿದೊಡನೆ ಹೆಣ್ಣಾದಳು, ಹಾಡಾದಳು
ಗೌತಮನ ಚೆಲುವಿನ ಸತಿಯಾದಳು
ನೋಡು ಪಾತಿವೃತ್ಯದ ಮಹಿಮೆ ಎಂದೆಲ್ಲ
ಅಮ್ಮ ಕಥೆಯ ಹೇಳಿದ್ದಳು ಎಂದೋ
ಕಳೆದು ಹೋಗಿದೆ ಕಾಲ
ಅರೆ! ನಿಂತು ನೋಡುತ್ತೇನೆ
ಸುತ್ತ ಅಹಲ್ಯೆಯರ ಸಾಲು, ಸಾಲು!
ಕಪ್ಪು, ಕೆಂಪು, ಅಚ್ಚಬಿಳಿ, ನಸುಬಿಳಿ
ಅರೆರೆ! ಬಣ್ಣ ಬಣ್ಣಗಳಲ್ಲಿ ಮಲಗಿದ್ದಾರೆ
ಹೇಗೆ ಕಲ್ಲಾದರೋ ಯಾರು ಬಲ್ಲರು?
ಹೇ ರಾಮ! ದಯಾಮಯ ಬಂದುಬಿಡು ಬೇಗ
ಒಂದೊಂದೇ ಹೆಜ್ಜೆಯಿಡು, ಇವರ ಮೇಲೆ
ಎಚ್ಚರವಾದಾರು ನೂರಾರು ಅಹಲ್ಯೆಯರು
ಗೌತಮರ ಸೇರಿ ಸೇವಿಸಲಿಕ್ಕಲ್ಲ
ನಿನ್ನ ಮಧುರ ಸ್ಪರ್ಶದ ನೆನಪಲ್ಲಿ ಮತ್ತೆ
ಶತಮಾನಗಳ ಸವೆಸಿಯಾರು ಅವರು”

ಅಂಥದೊಂದು ಸ್ಪರ್ಶಕ್ಕೆ ಕಾದಿರುವ ಎಲ್ಲ ಅಹಲ್ಯೆಯರನು ಪ್ರೀತಿಯ ಸೆಲೆ ಮತ್ತೆ ಎಚ್ಚರಗೊಳಿಸಲಿ.

‍ಲೇಖಕರು avadhi

September 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. Ahalya Ballal

    Lovely write up, Sudha.

    ಸುಮ್ಮನೆ ಇನ್ನೊಂದು ದೃಷ್ಟಿಕೋನಕ್ಕಾಗಿ ನೀವು ಮಣಿಮಾಲಿನಿ ವಿ.ಕೆ. ಯವರ ಬಿಸಿಲು ಕುದುರೆ ಕತೆಯನ್ನು ಓದಲೇಬೇಕು. ಇಡೀಯ ಸಂಕಲನವನ್ನೇ ಓದಬೇಕು: ಬಾಜಿರಕಂಬದ ಒಳಸುತ್ತು

    ಪ್ರತಿಕ್ರಿಯೆ
  2. ಮುರಲೀಧರ್ ಎನ್ ಪ್ರಭು

    ತುಂಬಾ ಚೆನ್ನಾಗಿದೆ .ಬೇರೆ ಬೇರೆ ಆಯಾಮಗಳಿಂದ ಅಹಲ್ಯೆ ಯ ಕತೆ ಸುಮಾರು ಬಂದಿದ್ದರೂ ನಿಮ್ಮ ಬರವಣಿಗೆಯ ಶೈಲಿ ಬೇರೇ ತೆರನಾಗಿದೆ. ಉತ್ತಮ ಬರಹ ಎಂದು ಮಾತ್ರ ಹೆಳಿದರೆ ಅಪೂರ್ಣ ವಾಗುತ್ತದೆ. ಅಷ್ಟನ್ನೂ ಮೀರಿದ ಅವ್ಯಕ್ತ ಭಾವ…

    ಪ್ರತಿಕ್ರಿಯೆ
  3. Laveena

    Bahutheka ellla hennugala olagoo obba Ahalye iddale…thumba chennagide nimma baraha

    ಪ್ರತಿಕ್ರಿಯೆ
  4. Bagepally Krishnamurthy

    ಗಂಡು ಜನ್ಮಕ್ಕೆ ಇನ್ನೂ ತಿಳಿಯದ ಹೆಣ್ ಮನದ ಆಳ ವನ್ನು ತೊರ ಪ್ರಯತ್ನಿಸಿ ಸಫಲರಾಗಿದ್ದಾರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: