ರೂಪಾ ಚಿಂತಾಮಣಿ ಹೊಸ ಕಥೆ- ಕೊನೆಯ ಕತೆ

ರೂಪಾ ಚಿಂತಾಮಣಿ

‘…ಕರೆಗಂಟೆಯ ಶಬ್ದಕ್ಕೆ ಆಳೊಬ್ಬ ಗೇಟಿನ ಬಳಿ ಬಂದ. ಗೇಟ್ ಕರ‍್ರ್..  ಎಂದು.. ಕತೆಯನ್ನು ಓದುತ್ತಿದ್ದ ಕತೆಗಾರರು ಒಮ್ಮೆ ಕೆಮ್ಮಿದಂತೆ ಮಾಡಿ ಗಂಟಲು ಸರಿಪಡಿಸಿಕೊಂಡರು. ಬಹಳ ವರ್ಷಗಳ ಹಿಂದೆ ಬರೆದ ಕತೆ ಇದು..ಎಂದು ಪ್ರಾರಂಭದಲ್ಲಿ ಹೇಳಿದ್ದನ್ನು ಮತ್ತೊಮ್ಮೆ ಉಚ್ಚರಿಸಿ ಕತೆ ಓದುವುದನ್ನು ಮುಂದುವರೆಸಿದರು.

ಮುಂದೇನು ಎನ್ನುವಂತೆ ಕುತೂಹಲದಿಂದ.. ಕೇಳುಗರು ಕಿವಿ ನೇರ ಮಾಡಿ ಕೂತರು.

‘…ಅದೊಂದು ದೊಡ್ಡ ಗೇಟ್.. ಆಳು ತಳ್ಳುತ್ತಿದ್ದಂತೆ ಅದು ಕರ‍್ರ್.. ಎಂದು ದೊಡ್ಡ ಸದ್ದು ಮಾಡುತ್ತಾ ಹಿಂದಕ್ಕೆ ತೆರೆದುಕೊಂಡಿತು. ಗೇಟ್ ಒಳಗಣ ದೃಶ್ಯ ಅನಾವರಣಗೊಂಡಿತು. ಸುಬ್ರಮಣಿ ಒಳಗಡಿಯಿಟ್ಟ. ಅಲ್ಲಿ ಅಂಗಳದಲ್ಲಿ ಒಬ್ಬ ಮನುಷ್ಯನ ಎದೆಯೆತ್ತರಕ್ಕೆ ಬೆಳೆದಿದ್ದ ದೊಡ್ಡ ದೊಡ್ಡ ಗುಲಾಬಿ ಗಿಡಗಳಲ್ಲಿ ತಾವರೆಯಂತೆ ಅರಳಿದ್ದ ಗುಲಾಬಿ ಹೂಗಳು. ಆ ಗಿಡಗಳಿಗೆ ನೀರುಣಿಸುತ್ತಾ ನಿಂತಿದ್ದಾಳೆ ವರಲಕ್ಷ್ಮೀ… ಸುಬ್ರಮಣಿಯ ಹಣೆಯಲ್ಲಿ ಸಣ್ಣ ಸಣ್ಣ ಬೆವರ ನಿರಿಗೆಗಳು.. ಎದೆ ಬಡಿತ ಜೋರಾಯಿತು. ಗಂಟಲು ಬೇರೆ ಒಣಗಿದಂತಾಯ್ತು…’ ಕತೆಗಾರರು ಕತೆ ಓದುವುದನ್ನು ಒಮ್ಮೆ ನಿಲ್ಲಿಸಿ ಸಭಿಕರತ್ತ ನೋಡಿದರು. ಸೂಜಿ ಬಿದ್ದರೂ ಕೇಳುವ ಮೌನ. ಕೇಳುಗರೆಲ್ಲರೂ ಮುಂದೇನು ಎನ್ನುವಂತೆ ಕೂತಿದ್ದಾರೆ.. ಕತೆಗಾರರಿಗೆ ಓದುವ ಉತ್ಸುಕತೆ ಹೆಚ್ಚಾಯಿತು.

‘.. ಸುಬ್ರಮಣಿ ಹಾಗೇ ಒಂದೊಂದೇ ಹೆಜ್ಜೆ ಇಡುತ್ತಾ ಆಳಿನ ಹಿಂದೆ ನಡೆದ. ವರಲಕ್ಷ್ಮೀ ಈಗ ಗಿಡಗಳಿಗೆ ನೀರು ಹಾಕುವುದನ್ನು ನಿಲ್ಲಿಸಿ ಇವನತ್ತ ನಡೆದು ಬಂದಳು. ಒಬ್ಬರನ್ನೊಬ್ಬರು ನೋಡಿದರು. ಎಷ್ಟೋ ವರ್ಷಗಳ ನಂತರ’.

 ‘ .. ವರೂ ಎನ್ನುವಷ್ಟರಲ್ಲಿ ಸುಬ್ರಮಣಿಯ ಗಂಟಲೊಡೆದಿತ್ತು. ದುಃಖ ಉಮ್ಮಳಿಸಿತ್ತು. ಕಂಗಳಲ್ಲಿ ಧಾರಾಕಾರ ಕಣ್ಣೀರು.

ವರಲಕ್ಷ್ಮೀಯ ಕಣ್ಣಲ್ಲೂ ಧಾರಾಕಾರ ಕಂಬನಿ. ಅವಳ ಮೃದು ಕೆನ್ನೆಗಳ ಮೇಲೆ ಹರಿದುಹೋಗುತ್ತಿದ್ದ ಹನಿಗಳನ್ನು ಸುಬ್ರಮಣಿ ಮೆಲ್ಲನೆ ಒರೆಸಿದ.

ಇಬ್ಬರೂ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಇಷ್ಟು ವರ್ಷಗಳ ಅಗಲಿಕೆಯಲ್ಲೇ ನಡೆದು ಹೋಗಿದ್ದ ಮೌನ ಸಂಭಾಷಣೆಗೆ ಈಗ ಮಾತುಗಳು ಬೇಕಿರಲಿಲ್ಲವೆನಿಸುತ್ತದೆ. ವರಲಕ್ಷ್ಮೀ, ಸುಬ್ರಮಣಿ ಆಶ್ರಮದ ಬಾಗಿಲಿನತ್ತ ನಡೆದರು.

ಆಶ್ರಮದ ಮಕ್ಕಳು ತಮ್ಮನ್ನೆಲ್ಲ ಅಕ್ಕರೆಯಿಂದ ಸಲಹುತ್ತಿರುವ ಅಮ್ಮಮ್ಮನ ಹಿಂದೆ ಬರುತ್ತಿದ್ದ ವ್ಯಕ್ತಿಯನ್ನು ಅಚ್ಚರಿಯಿಂದ ನೋಡುತ್ತಿದ್ದರು.  ಕೆಲವು ಹಿರಿಯ ಮಕ್ಕಳಿಗೆ ಅಮ್ಮಮ್ಮನ ಮದುವೆಯ ಚಿತ್ರಗಳಲ್ಲಿ ಗಂಡಿನ ಪೋಷಾಕಿನಲ್ಲಿರುವ ವ್ಯಕ್ತಿಯೇ ಇವರೆಂದು ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ. ಮಕ್ಕಳು ಹೋ! ಎಂದು ಚಪ್ಪಾಳೆ ತಟ್ಟಿದರು. ವರಲಕ್ಷ್ಮೀಯ ಅಳು ನಿಂತು ಮುಖದ ಮೇಲೊಂದು ಮಂದಹಾಸ ತೇಲಿ ಹೋಯಿತು.

..ಇಬ್ಬರೂ ಒಬ್ಬರನ್ನೊಬ್ಬರು ಅನುಸರಿಸಿ ಹೆಜ್ಜೆ ಹಾಕುವಾಗ ತೋಟದಲ್ಲಿನ ಗುಲಾಬಿ ದಳವೊಂದರಿಂದ ನೀರ ಹನಿಯೊಂದು ಸಂತೃಪ್ತವಾಗಿ ಧರೆಗುರುಳಿತು’.

ಕತೆ ಸಮಾಪ್ತಿ.

ಕೇಳುಗರು ಒಂದೇ ಸಮನೆ ಕರತಾಡನ ಮಾಡಿದರು. ಒಂದೆರಡು ನಿಮಿಷಗಳ ಆ ದೀರ್ಘ ಕರತಾಡನ ಆ ಹಿರಿ ಕತೆಗಾರರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಧನ್ಯೋಸ್ಮಿಎನ್ನುವಂತೆ ಕತೆಗಾರರು ಸಭೆಗೆ ಕೈಮುಗಿದರು.

ನಿರೂಪಕರು ಈಗ ಮಧ್ಯ ಪ್ರವೇಶಿಸಿ ಈಗೊಂದು ಟೀ ಬ್ರೇಕ್ ನಂತರ ಕತೆಯ ಮೇಲಿನ ಚರ್ಚೆ ಆರಂಭವಾಗುತ್ತದೆ ಎಂದರು.

ಪ್ರೇಕ್ಷಕರು ಒಂದು ಅತ್ಯುತ್ತಮ ಕತೆಯನ್ನು ಕೇಳಿದ ಖುಷಿಯಲ್ಲಿ ಕಾಫಿ/ಟೀ ಸೇವನೆಗೆ ತೆರಳಿದರು. 

ಸುಲೇಖನಿಗೂ ಕತೆ ಕೇಳಿ ಖುಷಿಯಾಗಿತ್ತು. ಅವಳ ಮುಖದ ಮೇಲಿನ ಮಂದಹಾಸ ಅದನ್ನು ಹೇಳುತ್ತಿತ್ತು. ಹಾಗೇ ಮೆಲ್ಲನೆ ಹೆಜ್ಜೆ ಹಾಕುತ್ತಾ ಕಪ್ಪಿನ ತುಂಬ ಬಿಸಿ ಬಿಸಿ ಟೀ ಬಗ್ಗಿಸಿಕೊಂಡು ಕೈಗೆರಡು ಬಿಸ್ಕೆಟ್ ತೆಗೆದುಕೊಂಡು ಆಚೀಚೆ ಕಣ್ಣಾಡಿಸಿದಳು.

ಕತೆಗಾರರ ಸುತ್ತ ದಂಡೊಂದು ನೆರೆದಿತ್ತು. ಥೂ. ಪಾಪ.. ಅವರು ನೆಮ್ಮದಿಯಾಗಿ ಟೀ ಕುಡಿಯಲೂ ಬಿಡುವುದಿಲ್ಲ ಈ ಜನ. ಕತೆ ಓದಿ ಸುಸ್ತಾಗಿರುತ್ತಾರೆ. ಮೊದಲೇ ೭೦ ವರ್ಷ ದಾಟಿರುವ ಹಿರಿಯರು ಎಂದೆಲ್ಲ ಅಂದುಕೊಂಡಳು ಸುಲೇಖ.

ಕತೆಗಾರರನ್ನು ಕೇಳಲು ಅವಳಲ್ಲೂ ಪ್ರಶ್ನೆಗಳಿದ್ದವು.

ತಮ್ಮನ್ನು ಈವರೆಗೂ ಸುತ್ತುವರೆದಿದ್ದ ದಂಡನ್ನು ಎಕ್ಸ್ಕ್ಯೂಸ್ ಮಿ..ಎನ್ನುತ್ತಾ ಬಿಡಿಸಿಕೊಂಡು ಕತೆಗಾರರು ನಯವಾಗಿ ಗುಂಪಿನಿಂದ ಆಚೆ ಬಂದರು. ಗುಂಪಿಗೂ ಅದು ಅರ್ಥವಾಗಿ ಹೋಗಿರೆನ್ನುವಂತೆ ಜಾಗ ಮಾಡಿಕೊಟ್ಟಿತ್ತು.

ಎಲ್ಲಾದರೂ ಒಂದು ಸೂಕ್ತ ಜಾಗ ನೋಡಿ ಒಂದು ಧಮ್ಎಳೆಯುವ ಬಯಕೆ ಕತೆಗಾರರಿಗೆ. ಕಟ್ಟಡದ ಹಿಂದಿನ ಭಾಗದಲ್ಲಿದ್ದ ಕಲ್ಲುಬೆಂಚು ಅದಕ್ಕೆ ಸೂಕ್ತವೆನಿಸಿತ್ತು.

ಧಂ ಎಳೆಯಲು ಜಾಗ ಹುಡುಕಿಕೊಂಡು ಹೋಗುವಾಗ ನಡುವೆ ಅವರಿಗೆ ಸುಲೇಖ ಎದುರಾದಳು.

ತಾವು ಕತೆ ಓದುವಾಗ ಮೈಯೆಲ್ಲಾ ಕಣ್ಣಾಗಿ ಕೇಳುತ್ತಿದ್ದ ಈ ಹುಡುಗಿ ಕತೆಗಾರರನ್ನು ಬಹಳಷ್ಟು ಸೆಳೆದಿದ್ದಳು.   

ತನ್ನೆದುರಿಗೆ ಬರುತ್ತಿದ್ದ ಕತೆಗಾರರನ್ನು ಕಂಡು ಒಂದುಕ್ಷಣ ವಿಚಲಿತಳಾದಳು ಸುಲೇಖ. ಖುಷಿಯಿಂದ ಏನೋ ಕೇಳಬೇಕೆಂದೋಹೇಳಬೇಕೆಂದೋಹೊರಟವಳು ತಕ್ಷಣಕ್ಕೆ ಸುಮ್ಮನಾಗಿ ಮುಖದ ಮೇಲೆ ತುಂಬು ನಗೆಯನ್ನು ಚೆಲ್ಲಿದಳು.

ಕತೆಗಾರರೂ ಒಂದು ಆಕರ್ಷಕ ನಗೆ ಬೀರಿ ಮೆಟ್ಟಿಲಿಳಿದು ಹೋದರು. ಕತೆಯ ಮೇಲಿನ ಚರ್ಚೆ ಆರಂಭವಾಗಲು ಇನ್ನೂ ಸಮಯಾವಕಾಶವಿತ್ತು.

ಕತೆಗಾರರನ್ನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಗುರುತುಹಾಕಿಕೊಳ್ಳತೊಡಗಿದಳು ಸುಲೇಖ.   

ಧಂ ಎಳೆಯಲು ಆ ಕಲ್ಲುಬೆಂಚು ಕತೆಗಾರರಿಗೆ ಪ್ರಶಸ್ತವಾಗಿ ಕಂಡಿತು. ಅಲ್ಲಿ ಸಂಚಾರವೂ ಇರಲಿಲ್ಲ. ತಾನು ಅಲ್ಲಿಗೆ ಬಂದದ್ದನ್ನು ಯಾರೂ ಗಮನಿಸದೆ ಇದ್ದದ್ದೂ ಅವರಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.

ಸುರುಳಿ ಸುರುಳಿಯಾಕಾರದಲ್ಲಿ  ಹೊಗೆಯುಂಗುರ ಗಾಳಿಯಲ್ಲಿ ಲೀನವಾಗುತ್ತಿದ್ದಂತೆ ಕತೆಗಾರರಲ್ಲಿ ಅದೊಂದು ಬಗೆಯ ಚೈತನ್ಯ ಮೂಡಿತು.

ಆಗ ಟಿನ್.. ಟಿನ್.. ಎಂದು ಮೊಬೈಲಿಗೆ ಒಂದು ಮೆಸೇಜ್ ಬಂತು. ಕತೆಗಾರರು ಬಹಳಷ್ಟು ಕಾತುರದಿಂದ ನಿರೀಕ್ಷಿಸುತ್ತಿದ್ದ ಮೆಸೇಜ್ ಅದು.  ಮೆಲ್ಲನೆ ಮೆಸೇಜ್ ಬಾಕ್ಸ್ ತೆರೆದು ಓದಿಕೊಂಡರು. ಸಭೆ ಮುಗಿದ ಮೇಲೆ ಕರೆದೊಯ್ಯಲು ಕಾರ್ ಬರುತ್ತದೆಂದು, ಅವರು ತಲುಪಬೇಕೆಂದಿರುವ ಜಾಗದ ಲೊಕೇಶನ್ ಕಳಿಸಿರುವುದಾಗಿಯೂಅದರಲ್ಲಿತ್ತು. ಮೆಸೇಜ್  ಕಳಿಸಿದ್ದಿದ್ದು ವಾಸಂತಿಯ ತಂಗಿ. ಕತೆಗಾರರ ಮೈಯ್ಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಓಕೆಎಂದು ಮರು ಸಂದೇಶ ಕಳಿಸಿ ಹೊಸ ಹುಮ್ಮಸ್ಸಿನಿಂದ ಕತೆಗಾರರು ಸಂವಾದಕ್ಕೆ ಹೊರಟು ನಿಂತರು.

***

ಕಥಾ ಕಮ್ಮಟಕ್ಕೆ ಬಂದು ಕತೆ ಓದಬೇಕೆಂದು ಸಂಘಟಕರಿಂದ ಕರೆ ಬಂದಾಗ ಈ ಹೆಸರಾಂತ  ಕತೆಗಾರ ಒಂದೇ ಸಲಕ್ಕೆ ಓಕೆಎಂದಿದ್ದರು. ಸಂಘಟಕರಿಗೆ ಇದು ಪರಮಾಶ್ಚರ್ಯ ತಂದಿತ್ತು.

ಏಕೆಂದರೆ, ‘ಕತೆ ಓದಲು ಅವರನ್ನು ಒಪ್ಪಿಸುವುದು ಮಹಾ ಕಷ್ಟ ಸ್ವಾಮಿ. ನಮ್ಮ ಸಾಹಿತ್ಯ ಅಕಾಡೆಮಿ ಮಾತ್ರವಲ್ಲದೆ ಹೊರ ರಾಜ್ಯಗಳ ಅಕಾಡೆಮಿಗಳಿಂದಲೂ ಪುರಸ್ಕೃತಗೊಂಡವರು ಅವರು. ಹೆಸರಾಂತ ಲೇಖಕರು.. ಬಹುಬಾಷಾ ವೈವಿಧ್ಯತೆಯ ಸಾಮರ್ಥ್ಯ ಬೇರೆ. ದೈತ್ಯ ಕತೆಗಾರ..ಎಂದೆಲ್ಲ ಸಂಘಟಕರನ್ನು ಇತರರು ಹೆದರಿಸಿಬಿಟ್ಟಿದ್ದರು.

ಆದರೆ ಅದಕ್ಕೆ ತದ್ವಿರುದ್ಧವಾಗಿ ಕತೆಗಾರರು ನಿಮ್ಮೂರಿಗೆ ಖಂಡಿತ ಬರುತ್ತೇನೆ. ನಿಮ್ಮೂರ ಮೇಲೆ ನನಗೆ ವಿಶೇಷ ಪ್ರೇಮಎಂದಾಗ ಸಂಘಟಕರು ಮುಗುಳ್ನಕ್ಕು ಧನ್ಯವಾದಗಳನ್ನು ತಿಳಿಸಿದ್ದರು.

ವಾಸ್ತವವಾಗಿ ಅವರು ಈ ಊರಿಗೆ ಬರಲು ಒಪ್ಪಲು, ಮುಖ್ಯ ಕಾರಣ.. ವಾಸಂತಿ..!ಅವಳ ವಿಳಾಸ ಹುಡುಕಿಕೊಡುವಂತೆ ಕತೆಗಾರರು ಸಂಘಟಕರೊಬ್ಬರಿಗೆ ಚೀಟಿ ನೀಡಿ ಕಳಿಸಿದ್ದರು ಕೂಡಾ.

***

ಕತೆಯ ಮೇಲಿನ ಚರ್ಚೆ ಆರಂಭವಾಯಿತು.

ಮುವತ್ತು ವರ್ಷದ ಒಂದು ಹೆಣ್ಣು ವಿನಾ ಕಾರಣ ತನ್ನನ್ನು ತ್ಯಜಿಸಿ ಬೇರೊಬ್ಬಳ ಆಕರ್ಷಣೆಯಲ್ಲಿ ಬಿಟ್ಟು ಹೋದ ಗಂಡನನ್ನು ಮುವತ್ತು ವರ್ಷಗಳ ಆನಂತರ ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳುವ ಈ ಕತೆಯ ಅಂತ್ಯಹೆಣ್ಣು ಸದಾ ಕಾಲಕ್ಕೂ ಕ್ಷಮಯಾ ಧರಿತ್ರಿಯಂತೆ ಇರಬೇಕು ಎನ್ನುವುದನ್ನು ಸೂಚಿಸುತ್ತದಾ..?’ ಸಭಿಕರೊಬ್ಬರು ಕೇಳಿದರು.

ಕತೆಗಾರರು ಗಂಟಲೊಮ್ಮೆ ಸರಿಪಡಿಸಿಕೊಂಡಂತೆ ಮಾಡಿ ನೀವು ಇಲ್ಲಿ ಅಂಶವೊಂದನ್ನು ಗಮನಿಸಬೇಕು. ೩೦ ವರ್ಷಗಳ ಭೇಟಿಯ ನಂತರ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು ಎಂದಾದರೆ ಅವರು ಒಬ್ಬರನ್ನೊಬ್ಬರು ಕ್ಷಮಿಸಿಕೊಂಡಿದ್ದಾರೆ; ಯಾರು ಮೇಲೂ ಅಲ್ಲ, ಯಾರು ಕೀಳೂ ಅಲ್ಲ ಎಂದರ್ಥ ತಾನೆ?’ ಕತೆಗಾರರು ನಯವಾಗಿ ಉತ್ತರಿಸುತ್ತಾರೆ.

ಪತಿಯು ತನ್ನನ್ನು ತ್ಯಜಿಸಿ ಮತ್ತೊಬ್ಬಳ ಹಿಂದೆ ಹೋಗಿ ಅವಳಿಂದ ಎರಡು ಮಕ್ಕಳನ್ನು ಪಡೆದು ಅವಳೊಡನೆ ೩೦ ವರ್ಷ ಸಂಸಾರ ನಡೆಸಿ ಕಡೆಗೆ ಆ ಹೆಣ್ಣು ಕ್ಯಾನ್ಸರಿನಿಂದ ತೀರಿಕೊಂಡಾಗ ಅವನಿಗೆ ಮೊದಲ ಹೆಂಡತಿ ನೆನಪಾಗುತ್ತಾಳಾ?’ ಎರಡನೆಯ ಪ್ರಶ್ನೆ ಬಾಣದಂತೆ ಬಂತು ಸಭಿಕರಿಂದ.

ಕತೆಗಾರರು ಆ ಪ್ರಶ್ನೆಯನ್ನೂ ಸಮರ್ಥಿಸಿಕೊಂಡರು.

‘… ಪತಿಯು ತೊರೆದು ಹೋದ ಒಂದೆರಡು ವರ್ಷಗಳ ನಂತರ ನಿಮ್ಮ ಕಥಾನಾಯಕಿ ವರಲಕ್ಷ್ಮೀಯ ಬದುಕಲ್ಲಿ ಮತ್ತೊಂದು ಗಂಡಿನ ಪ್ರವೇಶವಾಗುತ್ತದೆ. ಆಕೆ ಆತನನ್ನು ಮದುವೆಯಾಗುವುದಿಲ್ಲ.. ಆದರೆ ಸಹಜೀವನ ನಡೆಸುತ್ತಾಳೆ ಎನ್ನುತ್ತೀರಿ.. ಸಮಾಜಕ್ಕೆ ಈ ಕತೆಯಿಂದ ನೀವು ಕೊಡುತ್ತಿರುವ ಸಂದೇಶ?’- ಸುಲೇಖಾಳ ಪ್ರಶ್ನೆ ಕತೆಗಾರರತ್ತ ಹರಿದು ಬಂತು.

ಕತೆಗಾರರು ನಕ್ಕರು.

-‘ನೋಡಮ್ಮ ತಾನು ಸಾಕಷ್ಟು ಇಷ್ಟಪಟ್ಟು ಮದುವೆಯಾದ, ಅವನಲ್ಲದೆ ತನಗೆ ಬೇರೆ ಪ್ರಪಂಚವೇ ಇಲ್ಲ ಎಂದು ಹಲುಬುತ್ತಿದ್ದ ಮನಸ್ಸೊಂದು ಏಕಾಏಕಿ ತಾನು ಆರಾಧಿಸುತ್ತಿದ್ದವನಿಂದ ತಿರಸ್ಕೃತವಾದೆ ಅಥವಾ ತಿರಸ್ಕೃತಗೊಂಡೆ ಎಂದು ಆದರೆ ಆ ಮನಸ್ಸು ಅನುಭವಿಸುವ ನರಕಯಾತನೆ ಸುಮ್ಮನೆಯೇ ತಾಯಿ?’ ಇಲ್ಲಿ ಕಥಾನಾಯಕ ಸುಬ್ರಮಣಿ ಒಂದು ಸಂದರ್ಭದಲ್ಲಿ ಹೇಳುತ್ತಾನೆ ನನಗೆ ನೀನೂ ಬೇಕು, ಅವಳೂ ಬೇಕುಎಂದು.. ಆದರೆ ವರೂ ಅದನ್ನು ಒಪ್ಪುವುದಿಲ್ಲ. ಸ್ವಾಭಿಮಾನದಿಂದ ಮನೆಯಾಚೆ ನಡೆದುಬಿಡುತ್ತಾಳೆ; ಎರಡು ವರ್ಷ ಪ್ರಾಯದ ಚಿಕ್ಕ ಮಗುವಿನೊಂದಿಗೆ. ಆಮೇಲೆ ಅವಳ ಜೀವನದಲ್ಲಿ ಮತ್ತೊಂದು ಪುರುಷನ ಪ್ರವೇಶವಾಗುತ್ತದೆ. ಅವನು ಆಗರ್ಭ ಶ್ರೀಮಂತನೂ, ಜತೆಗೆ ಅವಿವಾಹಿತನೂ ಆಗಿರುತ್ತಾನೆ. ಸೂಜಿಗಲ್ಲಿನಂತೆ ಸೆಳೆಯುವ ವರಲಕ್ಷ್ಮಿಯ ಅಂದ ಮತ್ತು ನಡತೆಗೆ ತಲೆದೂಗಿ ಮದುವೆಯ ಪ್ರಸ್ತಾಪ ಮಾಡಿದರೆವರೂ ತನಗೆ ವಿವಾಹ ವ್ಯವಸ್ಥೆಯಲ್ಲಿ ನಂಬಿಕೆ ಹೋಗಿದೆ ಎಂದು ತಿಳಿಸಿ ಸಹಜೀವನಕ್ಕೆ ಸಮ್ಮತಿಸುತ್ತಾಳೆ.

ಆಗರ್ಭ ಶ್ರೀಮಂತನೊಂದಿಗೆ ವರಲಕ್ಷ್ಮಿಯ ಸಹಜೀವನ ಕಥಾನಾಯಕ ಸುಬ್ರಮಣಿಯ ಕಿವಿಗೆ ಬಿದ್ದು ಅವನ ಪುರುಷಾಹಂಕಾರ ತಲೆ ಎತ್ತಿ ತನ್ನ ಮಗುವನ್ನು ಅವರಿಂದ ಕರೆದೊಯ್ಯಲು ಬಂದಾಗ.. ಸುಬ್ರಮಣಿ ದಂಗು ಬಡಿದು ಹೋಗುತ್ತಾನೆ.

ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಗ ಆ ಆಗರ್ಭ ಶ್ರೀಮಂತನ ತೊಡೆಯ ಮೇಲೆ ಕುಳಿತು ಕೈತುತ್ತು ಸವಿಯುತ್ತಿದ್ದಾನೆ! ಮತ್ತು ವರಲಕ್ಷ್ಮಿ ಅದನ್ನು ಹಸನ್ಮುಖದಿಂದ ನೋಡುತ್ತಾ ನಿಂತಿದ್ದಾಳೆ.

ಆ ಸುಂದರ ದೃಶ್ಯ ಸುಬ್ರಮಣಿಯನ್ನು ಮೂಕನನ್ನಾಗಿ ಮಾಡುತ್ತದೆ.

ಸುಬ್ರಮಣಿಯನ್ನು ಮನೆ ಬಾಗಿಲಲ್ಲಿ ದಿಢೀರನೆ ಕಂಡ ವರಲಕ್ಷ್ಮಿ ಅವಾಕ್ಕಾದರೂ ಅವಿನಾಶನಿಗೆ ಸುಬ್ರಮಣಿಯನ್ನು ಪರಿಚಯಿಸಿ ಒಳಕೋಣೆಗೆ ಹೋಗುತ್ತಾಳೆ.

ಆ ಇಬ್ಬರೂ ಪುರುಷರೂ ಅದೆಷ್ಟು ಹೊತ್ತು ಏನನ್ನು ಮಾತನಾಡಿದರೋ ಗೊತ್ತಿಲ್ಲ.. ಅವಿನಾಶ ಸುಬ್ರಮಣಿಯನ್ನು ಊಟ ಮಾಡಿಯೇ ಹೋಗಬೇಕೆಂದು ಪಟ್ಟು ಹಿಡಿಯುತ್ತಾನೆ. ವರಲಕ್ಷ್ಮಿ ಅಡುಗೆಯವರಿಗೆ ಹೇಳಿ ಸಿದ್ಧಪಡಿಸಿದ ಭಕ್ಷ್ಯಗಳು ಸುಬ್ರಮಣಿಯ ಮನದ ಕಹಿಯನ್ನೆಲ್ಲ ಹಿಂಗಿಸಿಬಿಡುತ್ತವೆ.

ಇಡೀ ಜೀವಮಾನ ದುಡಿದರೂ ಆ ಬಂಗಲೆಯ ಅರ್ಧದಂತದ್ದನ್ನೂ ತನ್ನಿಂದ ಕಟ್ಟಲಾಗುವುದಿಲ್ಲ. ವರಲಕ್ಷ್ಮಿಯಂಥ ಅಪ್ರತಿಮ ಸುಂದರಿಯನ್ನು ತ್ಯಜಿಸಿ ತಾನು ಆ ಹೆಣ್ಣಿನ ಹಿಂದೆ ಹೋದದ್ದೇಕೆ ಎಂದು ಮೊದಲ ಬಾರಿಗೆ ಸುಬ್ರಮಣಿ ಗೊಂದಲಕ್ಕೊಳಗಾಗುತ್ತಾನೆಯಾದರೂ ನಂತರದ ದಿನಗಳಲ್ಲಿ ಹಣೆಬರಹ ಎಂದು ಜೀವನದೊಡನೆ ಹೆಜ್ಜೆ ಹಾಕುತ್ತಾನೆ…

ಕಾಲಚಕ್ರದಲ್ಲಿ ಅವಿನಾಶ ಇನ್ನಿಲ್ಲವಾದಾಗ, ಇದ್ದೊಬ್ಬ ಮಗ ಅಮೆರಿಕೆಗೆ ಹೋಗಿ ನೆಲೆನಿಂತಾಗ ವರಲಕ್ಷ್ಮಿ ತಾನು ಅಲ್ಲಿಗೆ ಹೋಗಿ ಇರಲು ಒಪ್ಪದೆ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅನಾಥ ಮಕ್ಕಳಿಗೆ ಆಸರೆಯಾಗಿ ನಿಂತುಬಿಡುತ್ತಾಳೆ.

ಅವಳ ಇರುವಿಕೆಯ ಜಾಡು ಹಿಡಿದು ಬಂದ ಸುಬ್ರಮಣಿಯನ್ನು ಮತ್ತೆ ಸ್ವೀಕರಿಸುತ್ತಾಳೆ’.

ಕತೆಗಾರರು ಕತೆಯ ಸಾರಾಂಶವನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿ ಹೇಳಿ ಸುಲೇಖಳ ಪ್ರಶ್ನೆಗೆ ಉತ್ತರಿಸಿದರು.

   ಅವಳು ಅವನನ್ನು ಸ್ವೀಕರಿಸಿದ್ದು ತಪ್ಪೋ..? ಸರಿಯೋ..? ಚರ್ಚೆಗಳು ನಡೆದೇ ಇತ್ತು.

***

ಕತೆಗಾರರು ಸುಸ್ತಾದಂತಾಗಿ ಹಾಗೇ ಮೆಲ್ಲನೆ ಕಣ್ಣುಮುಚ್ಚಿದರು.

ಸುಲೇಖಾ ಮತ್ತೊಮ್ಮೆ ಎದ್ದು ನಿಂತಳು. ಒಂದು ಪ್ರಶ್ನೆ ಇದೆ ಸಾರ್?’ ಎಂದಳು.

ಬದುಕಲ್ಲಿ ಅಷ್ಟೆಲ್ಲಾ ಮೋಸ ಮಾಡಿ ಇನ್ನೊಬ್ಬಳ ಹಿಂದೆ ಹೋದ ಗಂಡ, ಅವನ ಎರಡನೆಯ ಹೆಂಡತಿ ಕ್ಯಾನ್ಸರಿನಿಂದ ತೀರಿಕೊಂಡ ಮೇಲೆ  ತನ್ನ ಬಳಿಗೆ ಮತ್ತೆ ವಾಪಾಸ್ ಬಂದಾಗ.. ಅಷ್ಟೂ ವರ್ಷಗಳ ಹಿಂದಿನ ನೋವನ್ನು ಕಣ್ಣೀರಲ್ಲಿ ಹೊರ ಹಾಕಿ ಅವನನ್ನು ಮತ್ತೆ ಸ್ವೀಕರಿಸಿದ ವರಲಕ್ಷ್ಮಿಯ ನಿರ್ಧಾರ ಒಳ್ಳೆಯದೇ.. ಆದರೆ, ಒಂದೊಮ್ಮೆ ಅದೇ ವರಲಕ್ಷ್ಮಿ ಕಠೋರವಾಗಿ ನಿಂತು, ಸುಬ್ರಮಣಿಯನ್ನು ಹೋಗಾಚೆ ನಾಯಿ.. ಎಂದು ಹೊರದೂಡಿದ್ದರೆ.. ಕತೆಯ ಅಂತ್ಯ ಹೇಗಿರುತ್ತಿತ್ತು..? – ತಮ್ಮ ಅಭಿಪ್ರಾಯವೇನು ಸರ್? ಎಂದಳು.

ಆ ಪ್ರಶ್ನೆಯನ್ನು ಸುಲೇಖ ಕೇಳಿದ್ದೇ ತಡ, ಅದುವರೆಗೂ ಕಳೆಕಳೆಯಾಗಿದ್ದ ಕತೆಗಾರರು ಒಮ್ಮೆಲೇ ಬಿಳಿಚಿಕೊಂಡುಬಿಟ್ಟರು. ಪ್ರಶಾಂತ ಸರೋವರದಂತಿದ್ದ ಅವರ ಮುಖ ಬಿರುಗಾಳಿಯೆದ್ದ ಕಡಲಿನಂತಾಗಿ ಹೋಯಿತು. ಏನೇನೋ ಬಡ ಬಡಿಸಿದರುಇಲ್ಲ.. ಇಲ್ಲ.. ಅಂತ್ಯ ಅದಲ್ಲ.. ಹಾಗಾಗುವುದಿಲ್ಲ ಎಂದರು ನಡುಗುವ ದನಿಯಲ್ಲಿ.

ಅವರ ಈ ವರ್ತನೆ ಸಭಿಕರಲ್ಲಿ ಗಲಿಬಿಲಿ ಮೂಡಿಸಿತು.

ಕತೆಗಾರರು ಎದ್ದವರೇ ತುಂಬಿದ ಸಭೆಯಲ್ಲಿ ಜೇಬಿಗೆ ಕೈ ಹಾಕಿ ಸಿಗರೇಟ್ ಪ್ಯಾಕ್ ತೆಗೆಯಲು ಹೋದರು. ಸಂಘಟಕರು ಗಾಬರಿಯಾಗಿ ಶ್ಶ್.. ಎಂದು ಶಾಂತಿ ಕಾಪಾಡುವಂತೆ ಸಭಿಕರಲ್ಲಿ ಮನವಿ ಮಾಡುತ್ತಿದ್ದಂತೆ..

ತೀವ್ರ ಬೆದರಿದ್ದ, ಬೆದರಿದಂತಾಗಿದ್ದ ಕತೆಗಾರರು ಚಡಪಡಿಸಿ ಹೋದರು.

ಇಲ್ಲ.., ಇಲ್ಲ.., ಆ ಅಂತ್ಯ ಸರಿಯಿಲ್ಲ.. ವಾಸಂತಿ ಹಾಗೆ ಮಾಡುವುದಿಲ್ಲ.. ಅವಳು ಒಳ್ಳೆಯ ಹೆಣ್ಣುಮಗಳು.. ನನ್ನನ್ನು ಮತ್ತೆ ಸ್ವೀಕರಿಸುತ್ತಾಳೆ.. ಎಂದೆಲ್ಲಾ ಬಡಬಡಿಸಿ ಅಲ್ಲಿಂದ ಹೊರಟೇಬಿಟ್ಟರು.

ಸಭಿಕರು ಅವಾಕ್ಕಾಗಿ ಇನ್ನೂ ನೋಡುತ್ತಲೇ ಇದ್ದರು. ಸುಲೇಖ ಎದ್ದವಳೇ ಕತೆಗಾರರು ಬಿಟ್ಟುಹೋಗಿದ್ದ ಹಸ್ತಪ್ರತಿಯತ್ತ ನಡೆದು ಅದನ್ನು ಕೈಗೆತ್ತಿಕೊಂಡಳು.

ಕತೆಯ ಶೀರ್ಷಿಕೆ ಕೊನೆಯ ಕತೆಎಂದಿತ್ತು.

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vasundhara k m

    ಹೊಸ ತರಹ ಇದೆ… ಕೊನೆಯವರೆಗೂ ಕುತೂಹಲ ಹಿಡಿದಿಟ್ಟಿತು… ಬಹಳ ಇಷ್ಚ ಆಯ್ತು ನನಗೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: