ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಟ್ ನಂ 18

ಆಶೀಷ್ ಮಾರಾಳಿ

ಮೊದಲೆಲ್ಲ  ಬೆಳಗಿನ ವಾಕಿಂಗ್ ನ ವೇಳೆಯಲ್ಲಿ ಸ್ವಲ್ಪ ಹೊತ್ತು ಅವುಗಳಿಗಾಗಿಯೇ ಕಾಯುತ್ತಾ ಚನ್ನಮ್ಮ ಸರ್ಕಲಿನ ಕಟ್ಟೆಯ ಮೇಲೆ ಕುಳಿತು ಕಾಯುವ ಅಭ್ಯಾಸ ಇತ್ತು , “ಸುಗಮಾ v” ಗಣೇಶ್ ರೂಟ್ ನಂ 18″ ದುರ್ಗಾಂಬ 2 ಬಸ್ಸುಗಳು ಮುಂಜಾನೆಯ ಮಂಜು ತುಂಬಿದ ರಸ್ತೆ ಸೀಳಿಕೊಂಡು ಒಂದರ ಹಿಂದೆ ಒಂದು ಬಂದು ನಿಲ್ಲುತ್ತಿದ್ದ ಹಾಗೆ ಕೆಲವು ಹೊತ್ತು ಬೆಳಗಾವಿಯ ಚನ್ನಮ ಸರ್ಕಲ್ ನಲ್ಲಿ ಕೆಲವೇ ಕ್ಷಣ ಕರಾವಳಿಯ ಅಗೋಚರ ಪರಿಮಳ ಒಂದು ಸೃಷ್ಠಿಯಾಗಿ ಬಿಡುತಿತ್ತು .

ಮಂಗಳೂರಿನಿಂದಲೋ ಉಡುಪಿಯಿಂದಲೋ ರಾತ್ರಿ ಹೊರಟು ಮಂಜಾನೆಯ ಹೊತ್ತಿಗೆ ಬೆಳಗಾವಿಗೆ ಬಂದು ನಿಲ್ಲುವ ಬಸ್ಸುಗಳಿಂದ ಇಳಿಯುವ ಜನರ ಕೈ ಚೀಲಗಳಿಂದ ಇಣುಕುವ ಬಸಳೆ ಸೊಪ್ಪಿನ ಕುಡಿ, ಒಣ ಮೀನಿನ ಪರಿಮಳ, ಮತ್ಯಾವುದೋ ಹೆಂಗಸಿನ ಹೆರಳಿನಲ್ಲಿ  ಬಾಡಿದ ಮಲ್ಲಿಗೆಯ ಪರಿಮಳ ಕ್ಷಣ ಹೊತ್ತು ಬಸ್ಸು ಮರೆಯಾಗುವ ಒರೆಗೆ ಊರಿನ ಆಪ್ತ ಬಾವ ಹುಟ್ಟಿ ಮರೆಯಾಗುತಿತ್ತು

ಈಗ ಕಾಲ ಬದಲಾದ ಹಾಗೆ ಅದೇ ಬಸ್ಸುಗಳಿಂದ ಸಾಲು ಸರಕಾರಿ ರಜೆ ಬಂತೆಂದರೆ ಮಾಡಬೇಕಾದ ಹೋಂ ವರ್ಕ್ ಪುಸ್ತಕ ತುಂಬಿಕೊಂಡು ಬಂದ ಒಂದಷ್ಟು ಹುಡುಗಿಯರು ಹುಡುಗರು ಇಳಿಯುತ್ತಾರೆ , ಮನೆಗೆ ತಲುಪಿದ ಕನಿಷ್ಠ ಕುಷಿಯೂ ಅವರ ಮುಖದಲ್ಲಿ ಕಾಣದೇ ಬೇಸರಗೊಂಡ ಅವೇ ಬಸ್ಸುಗಳು ಮತ್ತೆ ರಾತ್ರಿ ಪ್ರಯಾಣಕ್ಕೆ ಅಣಿವಾಗುವುದಕ್ಕೆ ಹಗಲಿನ ವಿಶ್ರಾಂತಿಯ ತಂಗುದಾಣ ಸೇರಿಕೊಳ್ಳುತ್ತವೆ .

S S L C ಫಲಿತಾಂಶ ಪ್ರಕಟ, ಈ ಭಾರಿಯೂ ಉಡುಪಿ ಮಂಗಳೂರು ಪ್ರಥಮ ಎಂಬ ಪ್ರತೀ ವರ್ಷ ಹತ್ತನೇ ತರಗತಿಯ ರಿಸಲ್ಟ್ ನ ದಿನ ಬರುವ ದಿನ ಪತ್ರಿಕೆಗಳ ತಲೆಬರಹ ನಿಧಾನಕ್ಕೆ ಉತ್ತರ ಕರ್ನಾಟಕದ ಮದ್ಯಮ ವರ್ಗದ ಜನರ ತಲೆಯಲ್ಲಿ ಹೊಸ ಆಲೋಚನೆ ಹುಟ್ಟಿಸಿತು. ಕಾಡಿ ಬೇಡಿ ಉಜಿರೆಯಲ್ಲೋ ಮೂಡುಬಿದಿರೆಯಲ್ಲೋ ಮಂಗಳೂರಿನಲ್ಲೋ ಒಂದು ವಸತಿ ಶಾಲೆ ಹುಡುಕಿ ಮಕ್ಕಳನ್ನ ಸೇರಿಸಿ ಮತ್ತದೇ ಪ್ರತೀ ವರ್ಷದ ಹಾಗೆ s s l c ಫಲಿತಾಂಶ ಪ್ರಕಟ ಉಡುಪಿ ಮೇಲುಗೈ ಎಂಬ ಪೇಪರ್ ನ ತಲೆ ಬರಹಕ್ಕೆ ಕಾಯುತ್ತಾರೆ.

ಐದುನೂರು ಕಿಲೋಮೀಟರ್ ಅಂತರದ ಎರಡು ಊರುಗಳ ನಡುವೆ ಓಡುವ ಅದೇ ರೂಟ್ ನಂ 18 ಬಸ್ಸು ಭಾನುವಾರದ ರಾತ್ರಿ ಬಂತೆಂದರೆ ಸಪ್ಪೆ ಮುಖ ಮುಖ ಮಾಡಿಕೊಂಡು ಉಡುಪಿಯ ಕಡೆ ಮುಖ ಮಾಡಿ  ಬೆಳಗಾವಿಯ “ರಾಮ್ ದೇವ್” ಹೋಟೆಲ್ ನ ಮುಂದೆ ನಿಲ್ಲುತ್ತದೆ, ಪುಸ್ತಕದ ಚೀಲದ ಜೊತೆ ಉಂಡೆ, ಚಟ್ಣಿ ಪುಡಿಯ ಪ್ಲಾಸ್ಟಿಕ್ ಚೀಲ ಹಿಡಿದು ಬಸ್ಸು ಹತ್ತುವ ಮಕ್ಕಳಿಗೆ ಕೈ ಬೀಸಿ ನಿಧಾನಕ್ಕೆ ಬಸ್ಸಿನ ಬಾಗಿಲನ್ನು ಕೈಯಿಂದ ತಟ್ಟಿ, ಅಪ್ರಜ್ಞಾಪೂರ್ವಕವಾಗಿ ಬಸ್ಸಿಗೆ ಧನ್ಯವಾದ ಹೇಳುತ್ತಾರೆ .

ಬಸ್ಸು ಹೋದ ಮೇಲೂ ಒಂದಷ್ಟು ಹೊತ್ತು ಅದು ನಿಂತ ಜಾಗದಲ್ಲಿ ವಿಷಾದ ಆವರಿಸಿಕೊಂಡಿರುತ್ತದೆ.

‍ಲೇಖಕರು avadhi

31 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading