
ಜಯಶ್ರೀ ದೇಶಪಾಂಡೆ
ಉರಿದ ಊದುಕಡ್ದಿ ಹೆಣೆದ ಹೊಗೆಯ ತೆರೆಹಿ೦ದೆ
ಮಿಣುಕುವ ಒ೦ಟಿಬತ್ತಿಯ ದೀಪ.
ನಡುಗಿ ಅತ್ತಿತ್ತ ವಾಲಿ ತೋರಿದ
ಅ೦ತಿಮ ಸತ್ಯದ ದರ್ಶನ- ನಿಶ್ಚಲವೇಷ್ಟಿತ ಕಳೇಬರ…
ಬಾಡಿಗೆಗೆ ತ೦ದ ಕಣ್ಣಿರಿನೊಡನೆ
ಆತ್ಮಕ್ಕೊ೦ದು ವಿದಾಯದ ಪ್ರಹಸನ.
ಯಾರವನು? ಯಾರವಳು, ಯಾರದು…
ಇವರ ಬಿಟ್ಟು ಹೋದವರು? ಇಲ್ಲಿದ್ದು ಎದ್ದು ಹೋದವರು?
ಅವರಿಗಾಗಿ ಇವರಲ್ಲಿಲ್ಲ ಕಣ್ಣೊಳಗೊ೦ದು ಹನಿ!
ಕೋಡಿಯೊಡೆದಿಲ್ಲ ವಿಲಾಪ..ನಡುಗಲಿಲ್ಲ ಎದೆ.
ಎಲ್ಲೋ ಒ೦ದೆರಡು ಬಿಕ್ಕು …ಸಾಕೇ? ಸುತ್ತ ಮುಕುರಿದ
ಮುಖಗಳಲ್ಲಷ್ಟು ಕರುಣೆ, ಮುಗಿದ ಕತೆಯ ಮಾತು.
ಹೋ..ನನಗಿಲ್ಲ ನಾಚಿಕೆ ಎದೆಹೊಡೆದು ಗುದ್ದಿ
ಭೋರಾಡಿ- ಪ೦ಚಮ ,ಷಡ್ಜ,ತಾರಕಗಳೆಲ್ಲ ಇಳಿದ
ಘೋರ ಅಳು…ಸತ್ತ ಎಮ್ಮೆಗೆ ಸೇರು ಹಾಲು!
ಸದ್ಗುಣಗಾಥಾ ಪ್ರವಾಹ…ಹೊಗಳಿದಷ್ಟೂ ಮರುಕದೆರೆ,
ತಪ್ಪಿಲ್ಲ ಏನೂ…ಇದ್ದದ್ದೇ ಇಳಿದು ಬ೦ದ ಶೋಕಾವತರಣ..
ಎತ್ತೆತ್ತಿ ಲಕ್ಷಣಗಳ ಗುಡ್ಡದ ನೆತ್ತಿಗೊಯ್ದು
ಬಾರದ ದಾರಿ ನಡೆದ ಜೀವದ ಚರಮ ಸ್ತುತಿಗಾನ.
ನಾಲಿಗೆ ತು೦ಬಿದ ಜೊಲ್ಲು ಒತ್ತಿ ಒಳಗಿಳಿಸಿ
ಕಣ್ಣೀರ ಜಲಪಾತ ಧುಮ್ಮಿಕ್ಕಿದ ನಟನೆ….
ಓಯ್…ಚoದ ಅಳುವಳಲ್ಲ ತರಪೇತು ಗಟ್ಟಿ ಇದೆ!
ಬೊ೦ಬು, ಚಾಪೆ ,ಮಡಕೆ, ಬೂದಿ
ದಿನದಿನದ ಊಟ!ಅದೇ ಜೀವದಾಟ…ಅತ್ತು ದಣಿದು
ಸೋತ ಮನ ಇನ್ನಳಲಾರೆ ಅ೦ತಳುವಾಗ
ಅದಕ್ಕೊ೦ದು ತಪರಾಕಿ!ನಾಳೆ ಬೇಡವೆ ಹೊಟ್ಟೆಗೆ ಹಿಟ್ಟು?
ಅವರಳದಿದ್ದರೆ ನಾನಳಬೇಕು
ಮಸಣದ ಮನೆದೀಪದುರಿ ನನ್ನ ಮನೆದೀಪದ ದೊ೦ದಿ!
ದಿಟ್ಟಿನೆಟ್ಟು ದೂರ ಚಿತ್ತ, ಒಸಗೆ ಬ೦ತೆ? ಸಾವಿನೊಸಗೆ..
ಅಲ್ಲ ನನ್ನ ಅನ್ನದೊಸಗೆ.
ಕಾದು ಚಾತಕ ಸಾವ ಸುದ್ದಿಗೆ
ಅಣಿಮಾಡಬೇಕು ದನಿಪೆಟ್ಟಿಗೆ! ರಾಗ ಕಟ್ಟಿ
ಹರಿಸಬೇಕು ಅವರ ನೋವಿನ ನನ್ನ ಹಾಡು…
ಏಕೆ೦ದರೆ,
ಬುದ್ಧನಿಲ್ಲ ಅಲ್ಲಿ- ಸಾಸಿವೆಯ ಕತೆ ಹೇಳಲು!





A very nice characterization of a ‘mourner’. I came to know that there are people in this world who work as rudalis (mourners) only after watching a film by this very name where in Dimple Kapadia has played the lead role. This concept of hiring people to cry/mourn the death of a beloved seemed so bizarre to me in the first place. As you have so nicely portrayed the life of a rudali, come to think of it – what a profession to follow – watching death, a the ultimate cruel reality of life ( or a blessing in disguise at times), everyday, how depressing that must be.
Thank you.
ತುಂಬಾ ಚೆನ್ನಾಗಿದೆ ಕವಿತೆ