ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ರೀಮಿಕ್ಸ್ ರಾಣಿ’ಯ ಆತ್ಮಕಥನ

ಪಾಕದ  ರೀಮಿಕ್ಸ್

         ದುಬೈನಿಂದ ಆರತಿ  ಘಟಿಕಾರ್ 

 

ಈಗ ಎಲ್ಲ್ಲೆಲ್ಲೂ  ರೀಮಿಕ್ಸ್,  ರೀ -ಮೇಕ್ ಗಳದೆ  ಯುಗ! ನಮ್ಮ ಹಳೆಯ ಜನಪ್ರಿಯ ಚಿತ್ರಗೀತೆಗಳನ್ನು ರೀಮಿಕ್ಸ್ ಎನ್ನುವ ಹೆಸರಿನಲ್ಲಿ ಯಾವದೋ ಮಸಾಲ ಬೆರೆಸಿ ಒಂದಿಷ್ಟು ರಾಕ್ ಹಿಮ್ಮೇಳದ  ಗದ್ದಲವೆಬ್ಬಿಸಿ  ನಮ್ಮ ಕಿವಿಗಳಿಗೆ ಅಬ್ಬರಿಸಿದರೊ ನಾವು ಬೊಬ್ಬಿರಿಯದೆ ಬೆರಗಿನಿಂದ ಕಣ್ಣರಳಿಸಿ ಬಾಚಿಕೊಂಡು ಬಿಡುತ್ತೇವೆ .

ಒಟ್ಟಿನಲ್ಲಿ ಹಳೆಯದನ್ನೇ ಹೊಸ ರೀತಿಯಲ್ಲಿ ಆಕರ್ಷಕವಾಗಿ ತೋರುವಂತೆ ಮಾಡುವ ಕಲೆ ಸಿನಿಮಾ ರಂಗದಿಂದ ನನ್ನ ಪಾಕ ರಂಗಕ್ಕೂ ಪ್ರವೇಶ ಮಾಡಿತ್ತು ~!

kitchenಆದರೆ ಈ ರೀಮಿಕ್ಸ್ ಗಿಮ್ಮಿಕ್ಕನ್ನು ನನ್ನ ಅಡುಗೆಯಲ್ಲಿ ಬಳಸಿಕೊಳ್ಳಲು ನಾನೂ ಕೂಡ  ಶುರುವಿಟ್ಟುಕೊಂಡಿದ್ದು, (ಅಳತೆ ಗೊತ್ತಗದೆ) ಹೆಚ್ಚಾಗಿ ಮಾಡಿದ ಅಡುಗೆ ಪೋಲಾಗಿ ಹೋಗಬಾರದೆಂಬುವ ಉದ್ದೇಶದಿಂ ! ಮಾಡಿದ್ದು (ನೀನೆ )ಉಣ್ಣೆ  ಮಾರಾಯ್ತಿ ಎಂದು ಹೆಚ್ಚಿಗೆ ಉಳಿದದ್ದನ್ನೆಲ್ಲಾ ನಾನೇ ಉಂಡು ಗುಂಡಾಗಿ ಹೋದ ಮೇಲೆ ಈ ಬುದ್ದಿ ಕಲಿತದ್ದು ಎಂದರೂ ತಪ್ಪಾಗಲಾರದು ! ಇನ್ನು ಈ ಊರಿನಲ್ಲಿ ಉಳಿದಡುಗೆಯನ್ನು(ಅವರ ಪುಣ್ಯಕ್ಕೆ)  ಕೊಂಡೊಯ್ಯಲು  ಕೆಲಸದವರ ಕೊರತೆಯೂ ಒಂದು  ಕಾರಣವಾಗಿ ನನ್ನ ಪಾಕ ಶಾಲೆಯಲ್ಲಿ ಈ ರೀಮಿಕ್ಸ್ ಕಲೆಯನ್ನು ಪೋಷಿಸಿಕೊಂಡು ಬಂದಿದ್ದೆ.

ಒಮ್ಮೊಮ್ಮೆ ಅಡುಗೆ ಹೆಚ್ಚಿಗೆ ಉಳಿದಲ್ಲಿ, ಮಾರನೆಯ ದಿನವೂ ಅದನು ನಾವೇ ಖಾಲಿಮಾಡುವ ಪಾಕದ ರೀಮಿಕ್ಸ್ ಐಡಿಯಾಗಳು ನನ್ನ ಖಾಲಿ ತಲೆಗೆ ಹಟಾತ್ತಾಗಿ   ಸಾಲು ದೀಪದಂತೆ ಹೊಳೆದು ನನ್ನ ಹಳೆ ಪಾಕಕ್ಕೆ ಹೊಸ ಮಸಾಲಾಗಳಿಂದ ಚೆಂದದಿ ಮೇಕಪ್ (ಚಿಂದಿಯಾಗದಂತೆ) ಮಾಡಿ ಹೊಸ ರೂಪ ಕೊಡುವುದರಲ್ಲಿ  ಯಶಸ್ವಿ ಆಗುತ್ತಿದ್ದೆ !

ಉದಾ.. ಒಮ್ಮೆ ರಾಮನವಮಿ ಹಬ್ಬದಲ್ಲಿ ನಾ ಮಾಡಿದ ಹೆಸರು ಬೇಳೆ ಕೋಸಂಬರಿ ಜೊತೆಗೆ ಅವರಿವರು ಕೊಟ್ಟಿದ್ದೂ ಡಬರಿಯ ತುಂಬಾ ಕುಳಿತು  ನನ್ನನ್ನು ಕೆಣಕಿದಾಗ ಒಂದಿಷ್ಟೂ ತಲೆ ಕೆರೆದುಕೊಳ್ಳದೆ ಅದನ್ನು ಪಲ್ಯದೊಳಗೆ ಹದವಾಗಿ ಬೆರೆಸಿ ಮನೆಯವರ ಮೂಗಿಗೆ ಕಿಂಚಿತ್ತು ಸಂಶಯ ಬಾರದಂತೆ ಬಡಸಿ ಮೆಚ್ಚುಗೆಗೆಗೂ ಪಾತ್ರಳಾಗಿದ್ದೆ .!

ಇನ್ನು ಕೆಲವೊಮ್ಮೆ ಇಂಥಾ ಒಣ ಪಲ್ಯಗಳೆ ಹೆಚ್ಚಾಗಿ ಉಳಿದುಕೊಂಡಾಗ, ಮತ್ತದನ್ನೇ  ಬಿಸಿ ಮಾಡಿ ತಿನ್ನಲು ಬೇಸರವೆನಿಸಿ ಅವುಗಳನ್ನು ಪರೋಟದ ಹಿಟ್ಟಿನಲ್ಲಿ ಸೇರಿಸಿ ಲಟ್ಟಣಿಗೆಯಿಂದ ಹಿತವಾಗಿ  ಮಸ್ಸಾಜ್ ಮಾಡಿ ಹೆಂಚಿನ ಮೇಲೆ ಕೆಂಪಾಗಿಸಿ ಹೊಸ ರುಚಿಯೆಂಬ ಹೆಸರಿನಲ್ಲಿ ಮನೆಯವರ ಹೊಟ್ಟೆ ತಂಪಾಗಿಸುತ್ತಿದ್ದದ್ದುಂಟು  !

ಇನ್ನು ಉಳಿದ ಸಾಲಡ್ ಗಳು ಅಕ್ಕಿ ರೊಟ್ಟಿ ಹಿಟ್ಟಿನೊಂದಿಗೆ ಸೇರಿ ಮರುಜನ್ಮ ಪಡೆದರೆ ಕೊನೆಯಲ್ಲಿ ಉಳಿದ ಬ್ರೆಡ್ ಪೀಸ್ ಗಳೂ ಕೂಡ ಸರಾಗವಾಗಿ ಚಪಾತಿ  ಹಿಟ್ಟಿನ ಹೊಟ್ಟೆ ಸೇರುತ್ತಿದ್ದವು .

ಹೇಳಬೇಕೆಂದರೆ ಕೆಲವು ಗೃಹಿಣಿಯರಿಗೆ ಈ ರೀಮಿಕ್ಸ್ ಕಲೆ ಸುಲಭವಾಗಿ ಒಲಿದಿರುತ್ತದೆ, ಕೆಲವರು ಸಂದರ್ಭಕ್ಕನುಸಾರವಾಗಿ ಈ ಕಲೆಯನ್ನು ಅಡುಗೆಯನ್ನು ಕುಲಗೆಡಿಸದೆ ಕರಗತ  ಮಾಡಿಕೊಳ್ಳಬಹುದು.

food_recyclingಇನ್ನು ನಮ್ಮ ಮನೆಯಲ್ಲಿ ಹೆಚ್ಚಿಗೆ ಉಳಿದ ಚಪಾತಿಗಳು ಮಾಲೆದುಂಡಿ ಅಥವಾ ಮಾಲದಿಯಾಗಿ (ಸಿಹಿ ತಿನಸು),  ಇಡ್ಲಿಗಳು ಇಡ್ಲಿ  ಫ್ರೈ ಗಳಾಗಿ ರೂಪಾಂತರಗೊಳ್ಳುತ್ತಿದ್ದವು. ಹೀಗೆ ಹೆಚ್ಚಿನಡುಗೆಯನು ಬಿಸಾಡದೆ ಮನೆಯವರ ಹೊಟ್ಟೆಗೂ (ಹೆಚ್ಚಿನ ) ಅಪಾಯವಾಗದಂತ ನನ್ನ ವಿವಿಧೋಪಾಯಗಳ ದಂಡು ಇದ್ದಂತೆ, ಅಡುಗೆ ಕಡಿಮೆಯಾದದ್ದನ್ನು ಹೆಚ್ಚಾಗಿಸುವ ತಂತ್ರವನ್ನು ಅತ್ತೆಯವರು ನಮ್ಮ ಮದುವೆಯಾದ ಹೊಸತರಲ್ಲಿ ತಿಳಿಸಿಕೊಟ್ಟಿದ್ದರು.

ಕೆಲವೊಮ್ಮೆ ಸಂಜೆಗೆ ಸಾರು, ಹುಳಿ, ಮನೆ ಮಂದಿಗೆ ಸಾಲದೆನೆಸಿದಾಗ ಅದಕ್ಕೊಂದಿಷ್ಟು ಗಂಗಾ ಜಮುನಾ ಸೇರ್ಸವ್ವ ಎನ್ನುವ ಅತ್ತೆಯವರ ಕೋಡ್ವರ್ಡ್ ಅನ್ನು   ಡೀ ಕೋಡ್ ಮಾಡಿದಾಗ ತಿಳಿದದ್ದು ಗಂಗಾ ಜಮುನಾ ಅರ್ಥಾತ್ ನೀರು ಸೇರಿಸಿ ಜೊತೆಗೊಂದಿಷ್ಟು ಮಸಾಲೆ ಹಾಕಿ ಬೆಳೆಸಿ ಬಡಿಸು ಎಂಬುದಾಗಿತ್ತು.

ಆದರೆ ನನ್ನಡುಗೆಯನ್ನು ಸವಿದು  ಮೆಚ್ಚಿಕೊಳ್ಳುವ  ನನ್ನ ಮಗರಾಯನ ಮೂಗು ಮಾತ್ರ ನಾಯಿ ಮೂಗಿಗಿಂತಲೂ  ತೀಕ್ಷ್ಣವಾಗಿದ್ದು ನನ್ನ ಈ ಎಲ್ಲ ರೀಮಿಕ್ಸ್  ರಹಸ್ಯವನ್ನು ಭೇದಿಸಲು ಸದಾ ಮುಂದಿರುತ್ತಿದ್ದ, ಅವನು ಚಾಪೆಯ ಕೆಳಗೆ ತೂರಿದರೆ ನಾ ರಂಗೋಲಿ ಕೆಳಗೆ ತೂರಿ ಒಟ್ಟಿನಲ್ಲಿ ಏನೇ ಪ್ರಯೋಗ ಮಾಡಿದರೂ   ರುಚಿಯಾಗಿ ಮಾಡಿ ಬಡಸಿ ಅವ ತಕರಾರಿಲ್ಲದ  ಹಾಗೆ ತಿನ್ನುವಂತೆ ಮಾಡುವ ನನ್ನ ಸಾಹಸಕ್ಕೆ ನನ್ನ ಬೆನ್ನನ್ನು (ಬೆನ್ನು ನೋವಿದ್ದರೂ) ನಾನೇ ತಟ್ಟಿಕೊಂಡಿದ್ದುಂಟು.!

ಇನ್ನು ಮೊದಲಿನಿಂದಲೂ ಕಸದಿಂದ ರಸ ತಯಾರಿಸುವುದು ನನ್ನ ಇಷ್ಟದ ಹವ್ಯಾಸ ಹಾಗೂ ಅಚ್ಚುಮೆಚ್ಚಿನ ಆಸಕ್ತಿಗಳಲ್ಲೊಂದು. ಹಾಗಾಗಿ ಹಳೆ ಕುಕ್ಕರ್ ಗಾಸ್ಕೆಟ್, ಐಸ್ಕ್ರೀಮ್ ಕಡ್ಡಿಗಳು, ಮುರಿದ ಬಳೆಗಳು, ಫ್ಯೂಸ್ ಹೋದ ಬಲ್ಬ್ ಗಳು, ಹಳೆ ಬಾಟಲಿಗಳು ಇತ್ಯಾದಿ ನನ್ನ ಮಿನಿ ಗೋಡೌನಿಗೆ ಸೇರಿ ನನ್ನ ಬಿಡುವಿನ ವೇಳೆ ಹಾಗು ಮೂಡಿಗನುಸಾರವಾಗಿ ಅಲಂಕಾರಿಕ ವಸ್ತುಗಳಾಗಿ ಹೊಸ ರೂಪ ಪಡೆದುಕೊಳ್ಳುತ್ತಿದ್ದವು.

Minion-Happy-Birthday-Cakeಈಗಲೂ ಅದೇ ಕಸ, ಐ ಮೀನ್ ಇಂತಹ ಹಳೆ ವಸ್ತುಗಳನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ!, ಆದರೀಗ ಅವುಗಳನ್ನು ಕಲಾತ್ಮಕವಾಗಿ ಮಾರ್ಪಾಡು ಮಾಡಲು ಮೊದಲಿದ್ದ ಆಸಕ್ತಿ ಹಾಗೂ ತಾಳ್ಮೆ ಆಗಾಗ ಕೈ ಕೊಡುತ್ತಿದ್ದವು. ಹಾಗಾಗಿ ಕಸದಿಂದ ರಸ ಮಾಡುವ ಬದಲು ಕಸವೇ ಹೆಚ್ಚಾದಾಗ ನಮ್ಮನೆಯವರ ತಾಳ್ಮೆಯೂ ಕೈ ಕೊಟ್ಟು ನನಗೆ ಗೊತ್ತಾಗದಂತೆ ಸಾಮೂಹಿಕವಾಗಿ ಅವಕ್ಕೆಲ್ಲ ಕಸದ ತೊಟ್ಟಿಯ ದರ್ಶನ ಮಾಡಿಸಿಬಿಡುತ್ತಿದ್ದರು!

ನಂತರದ ದಿನಗಳಲ್ಲಿ ಅವರ ಈ ಘೋರ ಅಪರಾಧದ ಅರಿವಾದಾಗ ಈ ನಾರಿ ಕೊಂಚ ಹೊತ್ತು ಮುನಿದರೂ ಮಾರಿಯಾಗದೆ ಮತ್ತೆ ಯಥಾಪ್ರಕಾರ ನಾರು/ಕಸ ಸಂಗ್ರಹಣೆ ಶುರುವಿಟ್ಟುಕೊಳ್ಳುತ್ತಿದೆ!

ನನ್ನ ಇದೆ ಬುದ್ಧಿ ನನ್ನ ಅಡುಗೆ  ರೀಮಿಕ್ಸ್ ಗೂ ತಳಕು ಹಾಕಿಕೊಂಡಿದ್ದು ಎಂದರೆ ತಪ್ಪಾಗಲಾರದು. ಹಾಗಾಗಿ ನಿಮ್ಮನ್ನು ನನ್ನ ಇನ್ನೊಂದಿಷ್ಟು ಫ್ಲಾಶ್ ಬ್ಯಾಕಿಗೆ ಕರೆದೊಯ್ಯಲೇಬೇಕು !

ಕೇಕ್ ತಯಾರಿಸುವುದನ್ನು ನಾನು ಆ ದಿನಗಳಲ್ಲಿ ಆಗಷ್ಟೇ ಹುರುಪಿನಿಂದ ಕಲಿಯುತ್ತಿದ್ದೆ! ಒಂದೆರಡು ಸರಿ ಬಂದು, ಇನ್ನು ಕೆಲವು ಬಾರಿ ಏನೋ ವ್ಯತ್ಯಾಸವಾಗಿ ಕೇಕ್ ಆಗುವ ಬದಲು ಹಲ್ವಾ ಆಗಿದ್ದೂ ಇತ್ತು. ಅದರೂ ನನ್ನ ಕೇಕ್ ಕಂಡು ಯಾರೇ ಕೇಕೆ ಹಾಕಿ ನಕ್ಕರೂ ನನ್ನ ಕೇಕ್ ಪ್ರಯೋಗಗಳಿಗೆ ಯಾವ ಬರವೂ  ಬಂದಿರಲ್ಲಿಲ್ಲ!.

ಅಂತೆಯೇ  ಒಮ್ಮೆ ಖರ್ಜೂರದ ಕೇಕ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದೆ, ಮಾಡುವ ವಿಧಾನವನ್ನು ಸರಿಯಾಗಿ ಅನುಸರಿಸಿದರೂ ನನ್ನ ದುರಾದೃಷ್ಟಕ್ಕೆ ಏನೋ  ಏರುಪೇರಾಗಿ, ಕೇಕ್ ತಯಾರಾದ ಬಳಿಕ, ಮೇಲ್ನೋಟಕೆ ಸುಂದರವಾಗಿ ಕಂಡರೂ ನನ್ನ ಫೀಮೇಲ್ ನೋಟಕೆ ಎಲ್ಲವೂ ಒಂದೇ ಏಟಿಗೆ ಅರಿವಾಗಿತ್ತು!. ಅರ್ಥಾತ್ ನನ್ನ ಕೇಕ್ ತೋಪಾಗಿ, ಮಧ್ಯ ಭಾಗ ಕಿಂಚಿತ್ತೂ  ಬೇಯದೆ ಹಸಿ  ಮುದ್ದೆಯಾಗಿ ಮೌನದಿ  ಕುಳಿತು ಬಿಟ್ಟಿತ್ತು. ಆಗ ತಕ್ಷಣ ಜಾಗೃತವಾಗಿದ್ದೇ ನನ್ನ ರೀಮಿಕ್ಸ್ ಬುದ್ಧಿ ! ಆ ಮುದ್ದೆಗೆ ಒಂದಿಷ್ಟು ಹೊಸ ಸಾಮಗ್ರಿಗಳನ್ನು ಸೇರಿಸಿ ಸಿಹಿ ಹೂರಣವಾಗಿಸಿ, ಮಗ ಸ್ಕೂಲಿನಿಂದ ಬರುವಷ್ಟರಲ್ಲಿ ರುಚಿಯಾದ ಖರ್ಜೂರದ ಹೋಳಿಗೆ ತಯಾರಿಸಿದ್ದೆ!

“ಅಮ್ಮ ನೀನು ಮುಂಜಾನೆ ಖರ್ಜೂರ ಕೇಕ್ ಎಂದಿದ್ದ್ಯಲ್ಲ, ಹೋಳಿಗೆ ಮಾಡಿದ್ದೇಕೆ” ಎಂದು ಮಗರಾಯ ತನ್ನ ನೆನಪಿನ ಶಕ್ತಿಯನ್ನು ಪ್ರದರ್ಶಿಸಿ ನನ್ನನ್ನು ಕೆಣಕಿ  ತಕರಾರು ತೆಗೆದಾಗ “ಇಗೋ ಈ ಹೋಳಿಗೆ ಅದಕಿಂತಲೂ ರುಚಿ ಇದೆ.. ತಿನ್ನು ಮರಿ! ಮುಂದಿನ ಬಾರಿ ಖಂಡಿತ ಕೇಕ್ ಮಾಡಿಕೊಡುವೆ” ಎಂದು ಹೋಳಿಗೆ ರುಚಿ ತೋರಿಸಿದಾಗ “ಸೂಪರ್ ಅಮ್ಮ“ ಎಂದವನ ಉದ್ಘಾರಕ್ಕೆ ನನ್ನ ತಲೆ ಸಂತಸದಿಂದ ಗಿರ್ರ್ ಎಂದಿದ್ದು  ಹೇಗೆ ತಾನೇ ಮರೆಯಲಿ?!!

sheನನ್ನ ಈ ರೀಮಿಕ್ಸ್ ಕಲೆಯ ಫಲಾನುಭಾವಿಗಳಾದ ನಮ್ಮ ಮನೆಯವರೂ (ನನ್ನ ) ಸಹವಾಸ ದೋಷದಿಂದ ಒಮ್ಮೊಮ್ಮೆ ಈ ವಿಷಯದಲ್ಲಿ ಸೂಪರ್ ಸುಪ್ರೀಂ ಐಡಿಯಗಳೊಂದಿಗೆ ನನಗೆ ಸಾಥ್ ಕೊಟ್ಟಿದ್ದುಂಟು ಎಂದರೆ ನೀವು ಖಂಡಿತಾ ನಂಬಲಿಕ್ಕಿಲ್ಲ!

ಒಮ್ಮೆ ನನ್ನ ಪಾಕ ಪ್ರಯೋಗಾಲಯದಲ್ಲಿ ನನ್ನ ಅಚ್ಚುಮೆಚ್ಚಿನ ಮೈಸೂರ್ ಪಾಕ್ ಮಾಡುವಾಗ ಅದು ಕೈಕೊಟ್ಟು ಕೊನೆಗೆ ಮೈಸೂರ್ ಪಾಕ್  ಬರ್ಫಿ ಆಗುವ  ಬದಲು ಪುಡಿಪುಡಿಯಾಗಲು, ನನ್ನ ಪೆಚ್ಚು ಮುಖವನ್ನು ಕಂಡ ಇವರು “ವಾಣಿ! ಯಾಕೆ ಬೇಜಾರ್ ಮಾಡ್ಕೊತೀಯಾ? ಮತ್ತೆ ಇದನ್ನೇ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಬೇಸನ್ ಲಾಡು ಮಾಡಿಬಿಡು ” ಎಂದು  ರೀಮಿಕ್ಸ್ ಕಂ ರೀ ಸೈಕಲ್ ಉಪಾಯವನ್ನೂ ಕೊಟ್ಟು ಧನ್ಯರಾಗಿದ್ದರು!

ಒಟ್ಟಿನಲ್ಲಿ ನೀವೇನೇ ಅನ್ನಿ ನನ್ನ ಈ ಪಾಕ ಪ್ರಯೋಗಗಳು ತಿನ್ನಲು ರುಚಿಯೆನಿಸಿದಾಗ ನಮ್ಮವರು ಮೆಚ್ಚಿ ನನಗೆ ‘ರೀಮಿಕ್ಸ್  ರಾಣಿ’ ಎಂಬ ಬಿರುದು ಕೊಟ್ಟಾಗಲಿಂದಾ ನನ್ನ ಈ ಕಲೆಗೆ ಉತ್ಸಾಹದ ಗರಿ ಮೂಡಿ ಒಂದು ಬುಕ್ಕಾದರೂ ಬರೆದುಬಿಡುವ ಜೋಶ್ ಬಂದಿದೆ. ಇದಕ್ಕೆ ನಿಮ್ಮ ಪ್ರೋತ್ಸಾಹವೂ ಇದೆ  ತಾನೇ ?

 

‍ಲೇಖಕರು Admin

14 May, 2016

9 Comments

  1. Sangeeta Kalmane

    ಖಂಡಿತಾ ಇದೆ ಮೆಡಂ!☺

  2. gundurao desai

    ಚೆನ್ನಾಗಿದೆ ನಿಮ್ಮ ರೀಮಿಕ್ಸ ಪುರಾಣ ಮೇಡಂ

  3. Vasumathi

    ಚೆನ್ನಾಗಿದೆ ..ನಿಮ್ಮ ಹಾಸ್ಯ ಲೇಖನಗಳು ಚನ್ನಾಗಿರುತ್ತವೆ.

  4. ಮೃತ್ಯುಂಜಯ ಎಸ್ ಇ

    ಗೃಹಿಣಿಯರಿಗೆ ಅತಿ ಹೆಚ್ಚು ಆಪ್ತವಾಗುವ ಲೇಖನ 🙂
    ಒಂದು ತರಹ ಟಿಪ್ಸ್ ಕೂಡ ಹೌದು.ನಮಗಂತೂ ಬೋರ್ ಎನಿಸದೆ ಸಂತಸದಿಂದ ಓದಿಸಿಕೊಂಡು ಹೋಗುತ್ತದೆ.
    ಧನ್ಯವಾದಗಳು ಮ್ಯಾಮ್

  5. Anonymous

    ನ೦ದೇ ಅನುಭವಗಳು ನೀವು ಹೇಗೆ ಬರೆದಿರಿ

  6. ಅಮರದೀಪ್.ಪಿ.ಎಸ್.

    ರೀಮಿಕ್ಸ್ ಪಾಕ ಕಲೆ ಚೆನ್ನಾಗಿದೆ ಮೇಡಂ.

  7. Anonymous

    ನಕ್ಕು ನಕ್ಕು ಹೊಟ್ಟೆನೋವು ಬಂತು ಕಣ್ರೀ,,,ಆದ್ರೂ ಇನ್ನೊಂದ್ಸಲ ಆಜಾದ್ ಭಾಯಿನ ಕರ್ಕೊಂಡು ನಿಮ್ಮನೆಗೆ ಬರುವಾಗ ನನ್ನ ಮೂಗನ್ನು “ಫುಲ್ ಸರ್ವಿಸ್” ಮಾಡುಸ್ಕೊಂಡೇ ಬರ್ತೀನಿ,,,ವಾಸನೆ ಹಿಡಿಯೋದಿಕ್ಕೆ! 🙂

  8. Anonymous

    ಕಸದಿಂದ ರಸ ಮಾಡುವ ಕಲೆಯನ್ನೂ ರಸವತ್ತಾಗಿ ಹೇಳಿದಿರಿ ಆರತಿ ಚೆನ್ನಾಗಿದೆ

  9. Anonymous

    Awesome !! Naanu saha remix raani 🙂 Thumbsaaa chennagide 🙂 Enjoyed a lot….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading