ರಾಹುಲ್ ದ್ರಾವಿಡ್, ಕುಮಾರಸ್ವಾಮಿ, ಯಡಿಯೂರಪ್ಪ

gali.gif

“ಗಾಳಿ ಬೆಳಕು”

 

 

ನಟರಾಜ್ ಹುಳಿಯಾರ್

ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಮೊನ್ನೆ ನಾಯಕ ಪಟ್ಟ ಬಿಟ್ಟಾಗ ಗಾಸಿಪ್ ಯಂತ್ರಗಳಾದ ಮಾಧ್ಯಮಗಳು ತಮಗೆ ಅನ್ನಿಸಿದ್ದನ್ನು ಬರೆಯತೊಡಗಿದವು. ಯಾರಿಗೂ ರಾಹುಲ್ ದ್ರಾವಿಡ ಯಾಕೆ ನಾಯಕತ್ವ ಬಿಟ್ಟರು ಎಂಬುದು ಗೊತ್ತಿರಲಿಲ್ಲ. ಎಲ್ಲರೂ ಆ ಕ್ಷಣದಲ್ಲಿ ತಾವು ಊಹಿಸಿದ್ದನ್ನು ತೇಲಿಬಿಡುತ್ತಿದ್ದರು: ರಾಹುಲ್ ಗೆ ಸೀನಿಯರ್ ಗಳನ್ನು ನಿಭಾಯಿಸುವುದು ಕಷ್ಟವಾಗಿತ್ತು; ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಭಾರತದ ಪ್ರೇಕ್ಷಕರು ತರಲೆ ತೆಗೆಯುತ್ತಾರೆ; ಟೀಮಿನ ಆಯ್ಕೆಯಲ್ಲಿ ವೆಸ್ಟ್ ಝೋನಿನ ಒತ್ತಡ ಅತಿಯಾಗಿದೆ…

-ಹೀಗೆ ಎಲ್ಲ ವಿವರಣಕಾರರೂ ತಮಗೆ ತೋಚಿದ್ದನ್ನು ಹೇಳತೊಡಗಿದರು. ರಾಹುಲ್ ದ್ರಾವಿಡ್ ಹೇಳಿದ್ದು ಇಷ್ಟೆ: “ನಾನು ನನ್ನ ಆಟದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದ್ದರಿಂದ ನಾಯಕತ್ವ ಬಿಡುತ್ತಿದ್ದೇನೆ.” ಕೆಲವು ವರ್ಷಗಳ ಹಿಂದೆ ಸಚಿನ್ ಕೂಡ ತನ್ನ ಆಟ ನಾಯಕತ್ವದ ಒತ್ತಡದಲ್ಲಿ ಸೊರಗುತ್ತಿದೆಯೆನ್ನಿಸಿ ನಾಯಕತ್ವ ಬಿಟ್ಟಿದ್ದು ನಿಮಗೆ ನೆನಪಿರಬಹುದು. ಅದಿರಲಿ.

ರಾಹುಲ್ ದ್ರಾವಿಡ್ ಒಂದು ರೀತಿಯಲ್ಲಿ ಒಳಗೇ ಹುದುಗುವ, ಅಂದರೆ ಇಂಟ್ರೋವರ್ಟ್ ಎನ್ನಬಹುದಾದ ಆಟಗಾರ. ಮೇಲ್ವರ್ಗದ ಈತನಿಗೆ ಎಲ್ಲರೊಡನೆ ಬೆರೆಯುವುದು ಕೂಡ ಕಷ್ಟ. ಎಲ್ಲ ಸೂಕ್ಷ್ಮ ವ್ಯಕ್ತಿಗಳ ಹಾಗೆ ರಾಹುಲ್ ಕೂಡ. ಅಂದರೆ ಅವರು ತಮಗೆ ಅನ್ನಿಸದಿರುವ ಭಾವನೆಗಳನ್ನು ಸುಮ್ಮಸುಮ್ಮನೆ ವ್ಯಕ್ತಪಡಿಸಲಾರರು. “ಕಮಾನ್ ಬಾಯ್ಸ್” ಎಂದು ಕ್ರೀಡಾಂಗಣದಲ್ಲಿ ಜೊತೆಯ ಆಟಗಾರರನ್ನು ಹುರಿದುಂಬಿಸುವುದು ಕೂಡ ರಾಹುಲ್ ಗೆ ಸಹಜವಾಗಿ ಒಗ್ಗುತ್ತಿದ್ದಂತಿರಲಿಲ್ಲ. ನಾಯಕನಾದವನು ಸದಾ ಹುಸಿ ಆತ್ಮವಿಶ್ವಾಸ ವ್ಯಕ್ತಪಡಿಸಬೇಕು. ನಗೆಮುಖ ಹೊತ್ತು ನಿಜ ಲೇಪಿಸಿದ ಸುಳ್ಳನ್ನು ಹೇಳಬೇಕು. ಮಾಧ್ಯಮಗಳೆದುರು ತನ್ನದಲ್ಲದ ಮುಖವನ್ನು ಬಿಂಬಿಸಬೇಕು; ತನಗೆ ಅನ್ನಿಸದೇ ಇರುವುದನ್ನೂ ಹೇಳಬೇಕು… ಯಾವುದೇ ಪ್ರಬುದ್ಧ ವ್ಯಕ್ತಿಗೆ ಇವೆಲ್ಲ ತೀರಾ ಕಷ್ಟ.

ಈ ಬಗೆಯ ಹುಸಿ ಪೋಸುಗಳು ಹಾಗೂ ಹೊರೆಗಳ ಮಧ್ಯೆ ತನ್ನ ನಿಜವಾದ ಸತ್ವ, ತನ್ನ ನಿಜವಾದ ಒಳಗು ನವೆಯುತ್ತಾ, ನಾಶದ ಹಾದಿ ಹಿಡಿದಿರುತ್ತದೆ ಎಂಬುದು ನಾಯಕತ್ವ ವಹಿಸಿದ ಯಾವುದೇ ಸೂಕ್ಷ್ಮ ವ್ಯಕ್ತಿಗೆ ಹೊಳೆಯತೊಡಗುತ್ತದೆ. ಅದರಲ್ಲೂ ಗೆಲುವು ಎಂಬ ಅಂತಿಮ ಗುರಿ ಸಾಧನೆಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ಧನಾಗಿರಬೇಕು ಎನ್ನುವ ಒತ್ತಡವಂತೂ ಮನುಷ್ಯಮಾತ್ರನಾದ ನಾಯಕನ ಒಳಗನ್ನು ಛಿದ್ರಗೊಳಿಸುತ್ತಿರುತ್ತದೆ. ನಾಯಕತ್ವ ಎನ್ನುವುದು ಮಾನವನ ಅಹಂಕಾರದ ಅಂತಿಮ ಹಂತಗಳಲ್ಲೊಂದು ತಾನೆ? ಆ ಅಹಂಕಾರ ಮತ್ತು ಅದರ ಭಾರ ಈ ಎರಡನ್ನೂ ರಾಹುಲ್ ದ್ರಾವಿಡ್ ಒಂದು ದಿನ ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ಕೊಡದೆ ತಣ್ಣಗೆ ಬಿಟ್ಟುಕೊಟ್ಟರು. ಹಾಗೆ ಬಿಟ್ಟ ತಕ್ಷಣ ರಾಹುಲ್ ದ್ರಾವಿಡ್ ಗೆ ಶೂನ್ಯ ಆವರಿಸಿರಲೂಬಹುದು. ಆದರೆ ಅವರ ವ್ಯಕ್ತಿತ್ವ ತನಗೆ ದಕ್ಕಿದ ಹೊಸ ನಿರಾಳತೆಯಲ್ಲಿ ಗರಿಗೆದರಿರುವ ಸಾಧ್ಯತೆಯೇ ಹೆಚ್ಚು ಎಂದು ನನ್ನ ಊಹೆ. ಯಾಕೆಂದರೆ, ರಾಹುಲ್ ಗೆ ಆಗ ತನ್ನ ಆತ್ಮಕ್ಕೆ ಪ್ರಿಯವಾದ ಕ್ರಿಕೆಟ್ ಎಂಬ ಕಲೆಗೆ ನಿರಾಳವಾಗಿ ಮರಳುವ ಗಳಿಗೆಗಳ ಚಿತ್ರ ಮೂಡಿರಬಹುದು. ನಾಯಕತ್ವದ ಅನಗತ್ಯ ಹೊರೆಯ ಪೊರೆ ಕಳಚಿ ತಾನು ತಾನಾಗುವ ಗಳಿಗೆ ಮರಳಿ ಬಂದ ನೆಮ್ಮದಿ ಮೂಡಿರಬಹುದು. ಈ ಗಳಿಗೆಗಾಗಿ ರಾಹುಲ್ ಭಾರತದ ಅನೇಕ ಆಟಗಾರರು ಹಪಗುಡುವ ಸ್ಥಾನವನ್ನು ಏಕಾಏಕಿ ಬಿಟ್ಟುಕೊಟ್ಟು ಯಾರಿಗೂ ಏನೂ ಹೇಳದೆ ಹೊರಟುಬಿಟ್ಟರು.

ಹೀಗೆ ನಾಯಕತ್ವದ ಹೊರೆ ಕಳಚಿಕೊಂಡು ತಂತಮ್ಮ ಕಲೆಗೆ, ಕಸುಬಿಗೆ ಮರಳಲು ಕುಮಾರಸ್ವಾಮಿ ಅಂಥವರಿಗೆ ಸಾಧ್ಯವಿಲ್ಲವಲ್ಲ ಎಂಬುದು ಅತ್ಯಂತ ವ್ಯಥೆಯ ಸಂಗತಿ. ನಾಯಕತ್ವ ಸಿಗದಿದ್ದರಿಂದ ತಾನು ಅನಾಥನಾದೆ ಎಂದು ಹಲಬುತ್ತಾ ಕರ್ನಾಟಕದ ಮನೆಮನೆಗಳ ಬಾಗಿಲು ತಟ್ಟುವೆ ಎಂದು ಗೋಳಿಡುವ ಯಡಿಯೂರಪ್ಪನವರಿಗೆ ಕೂಡ ಇನ್ನಾವ ಕಲೆಯೂ, ಕಸುಬಿನ ಬಲವೂ ಇರುವಂತಿಲ್ಲ. ಲೆಕ್ಕವಿಡಲಾಗದಷ್ಟು ಸಂಪತ್ತು ಗಳಿಸಿರುವ ಈ ಇಬ್ಬರು “ಮಣ್ಣಿನ ಮಕ್ಕಳು” ತಂತಮ್ಮ ಭೂಮಿಗೆ ಮರಳಿ ಕೊನೇ ಪಕ್ಷ ಒಂದು ವರ್ಷ ಮಣ್ಣಿನ ಸಂಪರ್ಕದಿಂದ ಹುಟ್ಟುವ ನೆಮ್ಮದಿಯಲ್ಲಿ ಬದುಕುತ್ತೇವೆ ಎಂಬ ಆತ್ಮವಿಶ್ವಾಸ ಕೂಡ ಉಳ್ಳವರಲ್ಲ. ರಾಹುಲ್ ದ್ರಾವಿಡ್ ಅಂಥವರಲ್ಲಿ ಕಾಣಬರುವ ಆತ್ಮವಿಶ್ವಾಸವಿರಲಿ, ಇವತ್ತಿನ ಭಾರತದ ಹೊಸ ತಲೆಮಾರಿನ ಆತ್ಮವಿಶ್ವಾಸದ ಸಣ್ಣ ಎಳೆ ಕೂಡ ಇವರಲ್ಲಿದ್ದಂತಿಲ್ಲ. ಈಗಿನ ಭಾರತದ ನಗರಗಳಲ್ಲಿ  ೨೨ನೇ ವಯಸ್ಸಿಗೇ ಅತ್ಯುನ್ನತ ಹುದ್ದೆ ಹಿಡಿದು, ಮುಂದಿನ ಎರಡೇ ವರ್ಷಕ್ಕೆ ಅದನ್ನು ಬಿಟ್ಟು ಇನ್ನೊಂದಕ್ಕೆ ಏರುವ ಹೊಸ ಹುಡುಗ, ಹುಡುಗಿಯರ ಛಾತಿಯಲ್ಲಿ ಒಂದು ಭಾಗ ಕೂಡ ಈ ರಾಜಕೀಯ ನಾಯಕರಲ್ಲಿದ್ದಂತಿಲ್ಲ.

ಏನು ಬೇಕಾದರೂ ಮಾಡಬಲ್ಲೆವೆಂಬ ಉತ್ಸಾಹ ತುಳುಕುವ ಈ ಹೊಸ ತಲೆಮಾರಿನ ತರುಣ, ತರುಣಿಯರ ಎದುರು, ಯಾವ ಪ್ರತಿಭೆಯೂ ಇಲ್ಲದಂತೆ ಕಾಣುವ ನಮ್ಮ ನಾಯಕರು ತಮಗೆ ಕುರ್ಚಿ ಸಿಕ್ಕದಿದ್ದರೆ ಆಕಾಶ ಕಳಚಿಬಿದ್ದಂತೆ ಆಡುತ್ತಾ ಕನ್ನಡ ನಾಡಿನ ಜನರ ಟೈಂ ವೇಸ್ಟ್ ಮಾಡುತ್ತಿರುವುದು ಅತ್ಯಂತ ಅಸಹ್ಯಕರವಾಗಿದೆ.

‍ಲೇಖಕರು avadhi

October 10, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: