ಬರಲಿರುವ ದುರಂತದ ಮುನ್ಸೂಚನೆ..

‘ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ’

ಗಾಳಿಬೆಳಕು

mmmm-ನಟರಾಜ್ ಹುಳಿಯಾರ್

ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್ ರೂಮ್ ಪುಸ್ತಕಗಳನ್ನು ಬಿಟ್ಟು ಇತರ ಪುಸ್ತಕಗಳನ್ನು ಓದಲು ಶುರು ಮಾಡಿದಾಗ ಬಹುತೇಕ ಲೇಖಕರು ಜಾತ್ಯತೀತ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತಿದ್ದರೆಂದು ಕಾಣುತ್ತದೆ. ನಮ್ಮಂಥವರಲ್ಲಿ ಅನೇಕ ಬಗೆಯ ಅಸಮಾನತೆಗಳ ವಿರುದ್ಧ ಅಸಮಾಧಾನ, ಸಿಟ್ಟು ಬೆಳೆಯತೊಡಗಿದ್ದು ಈ ಕಾರಣದಿಂದಲೇ. ಹಾಗೆ ನಮಗೆಲ್ಲ ಪ್ರೇರಣೆಯಾದ ಲೇಖಕರಲ್ಲಿ ಬ್ರಾಹ್ಮಣರೂ ಇದ್ದರು, ದಲಿತರೂ, ಶೂದ್ರರೂ ಇದ್ದರು. ಆದರೆ ಈಚಿನ ವರ್ಷಗಳ ಒಂದು ವಿದ್ಯಮಾನ ನನಗೆ ತೀರಾ ಆತಂಕಕಾರಿಯಾಗಿ ಕಾಣತೊಡಗಿದೆ. ನಮ್ಮ ಕತೆ, ಕಾದಂಬರಿ, ವಿಮರ್ಶೆಗಳ ವಲಯದಲ್ಲಿರುವ ಬಹುತೇಕ ಬ್ರಾಹ್ಮಣ ಬರಹಗಾರರು ಹಾಗೆಯೇ ಸೆಕ್ಯುಲರ್ ಆಗಿ ಉಳಿದಿದ್ದಾರೆ. ಆದರೆ ಅಕ್ಷರ ಬಳಸುವ ದೊಡ್ಡ ಸಂಖ್ಯೆಯ ಬ್ರಾಹ್ಮಣರು ಪತ್ರಿಕೆ, ಟೆಲಿವಿಷನ್, ಇಂಟರ್ನೆಟ್, ಮುಂತಾದ ಕಡೆ ಮತೀಯವಾದವನ್ನು ಬಿತ್ತುವ, ಬೆಳೆಸುವ, ಪೋಷಿಸುವ ವಿಕೃತ ಕೆಲಸದಲ್ಲಿ ತೊಡಗಿದ್ದಾರೆ. ಉಳಿದ ಅನೇಕ ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೂಡ ಇದೇ ಕೆಲಸವನ್ನು ಮುಂದುವರಿಸುವವರು ಹೆಚ್ಚು ಕಾಣತೊಡಗಿದ್ದಾರೆ. ಈ ವರ್ಗದ ಜೊತೆಗೆ ಇನ್ನುಳಿದ ಜಾತಿಗಳಲ್ಲಿ ಭಾಷಣ, ಬರಹಗಳನ್ನು ಬಳಸಬಲ್ಲ ವಿದ್ಯಾವಂತರು ಕೂಡ ಸೇರಿಕೊಳ್ಳತೊಡಗಿದ್ದಾರೆ.

 

ನಮ್ಮ ಅಕ್ಷರಲೋಕದ ಈ ಬೇಜವಾಬ್ದಾರಿತನ, ವಿಶ್ವಾಸಘಾತುಕತನ ಹಾಗೂ ಭಂಡ ಸ್ಟ್ರ್ಯಾಟಿಜಿ ನಿಜಕ್ಕೂ ಭಯಾನಕವಾಗಿದೆ. ಸತ್ಯವನ್ನು ತಿರುಚುವವರು, ಭೈರಪ್ಪ-ಚಿದಾನಂದ ಮೂರ್ತಿಗಳನ್ನು, ಸಂಘಪರಿವಾರದ ಕುಟಿಲ ಕಾರ್ಯನೀತಿಯನ್ನು ಮೆಚ್ಚುವವರು ಕೂಡ ಇವರೇ ಆಗಿದ್ದಾರೆ ಎಂಬುದು ಇನ್ನಷ್ಟು ಆತಂಕ ಹುಟ್ಟಿಸುತ್ತದೆ. ಆದರೂ ಕನ್ನಡದ ಉತ್ತಮ ಬರಹಗಾರರಲ್ಲಿ ಶೇಕಡಾ ತೊಂಬತ್ತು ಮಂದಿ ಇನ್ನೂ ಜಾತ್ಯತೀತ ಮೌಲ್ಯಗಳ ಪರವಾಗಿದ್ದಾರೆ ಎಂಬ ಸತ್ಯ ಈ ಆತಂಕವನ್ನು ಕೊಂಚ ಹಿನ್ನೆಲೆಗೆ ದೂಡುತ್ತದೆಂಬುದು ನಿಜ. ಆದರೆ ಆರೋಗ್ಯಕರ ಮೌಲ್ಯಗಳನ್ನು ಬಿಂಬಿಸಬೇಕಾದ ನಮ್ಮ ಮಾಧ್ಯಮಗಳಲ್ಲಿ ಇಂಥ ಪ್ರಜ್ಞಾವಂತ ಬರಹಗಾರರ ದನಿ ಕ್ಷೀಣವಾಗತೊಡಗಿದೆ. ಬಾಯಿಗೆ ಬಂದದ್ದನ್ನು ಒದರುವ, ಕಂದಾಚಾರವನ್ನು ಬಿತ್ತುವ, ಅಲ್ಪಸಂಖ್ಯಾತರ ವಿರುದ್ಧ ವಿಷ ಕಾರುವ ಪುಢಾರಿಗಳ, ಸಾಂಸ್ಕೃತಿಕ ಗೂಂಡಾಗಳ ದುಷ್ಟ ದನಿಗಳು ಅಲ್ಲಿ ಹೆಚ್ಚು ಕೇಳತೊಡಗಿವೆ. ಬಲಪಂಥೀಯ ವಲಯಗಳ ಸೈತಾನರ ಕಾರ್ಖಾನೆಯಲ್ಲಿ ತಯಾರಾಗುವ ವಿತಂಡವಾದಗಳನ್ನು ಸತ್ಯವೆಂದು ಬಿಂಬಿಸಲು ನಮ್ಮ ಮಾಧ್ಯಮಗಳಲ್ಲಿನ ಅರ್ಧಭಾಗದಷ್ಟು ಮಂದಿ ಮಾಡುತ್ತಿರುವ ಸಂಚು ಅತ್ಯಂತ ಅಪಾಯಕಾರಿಯಾಗಿದೆ. ಈ ನೀಚತನದಲ್ಲಿ ಕನ್ನಡನಾಡಿನ ಮೇಲುಜಾತಿಗಳ ಹಾಗೂ ಎಲ್ಲ ಜಾತಿಗಳ ವಿಕೃತ ಅಕ್ಷರಸ್ಥ ಲೋಕ ಭಾಗಿಯಾಗುತ್ತಿರುವುದು ಕನ್ನಡ ಸಂಸ್ಕೃತಿ ಈಚೆಗೆ ತಲುಪುತ್ತಿರುವ ಭಯಾನಕ ಘಟ್ಟಕ್ಕೆ ಸಾಕ್ಷಿಯಂತಿದೆ.

protest2ನಾನು ಬಲ್ಲಂತೆ ಪೂರ್ವಗ್ರಹಗಳನ್ನು ಬಿತ್ತುವವರು ಹಾಗೂ ಪೂರ್ವಗ್ರಹಗಳನ್ನು ಸಮರ್ಥನೆ ಮಾಡುವವರು ಎಂದೂ ಅರ್ಥಪೂರ್ಣ ರೈಟರ್ ಆಗಲಾರರು. ಪೂರ್ವಗ್ರಹಗಳ ವಿರುದ್ಧ ಬರೆಯುವ, ಅವುಗಳನ್ನು ಕದಲಿಸುವ ಛಾತಿಯುಳ್ಳವರು ಮಾತ್ರ ಲೇಖಕನೋ, ಲೇಖಕಿಯೋ ಆಗಬಲ್ಲರು. ಆದರೆ ಈ ಪೂರ್ವಗ್ರಹಗಳನ್ನು ಜಾಣ ವಾದದಲ್ಲಿ ಜೋಡಿಸಿ ಅವಕ್ಕೆ ದಿನನಿತ್ಯ ಪ್ರಚಾರ ಕೊಡುವುದು; ಅದನ್ನೆಲ್ಲ ಪ್ರಜ್ಞಾವಂತ ಚಿಂತಕರು, ಹೋರಾಟಗಾರರು ದಿನನಿತ್ಯ ಪ್ರತಿಭಟಿಸುತ್ತಾ, ಅವಕ್ಕೆ ಪ್ರತಿಕ್ರಿಯೆ ಬರೆದು ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳಲಿ ಎಂಬುದು ಬಲಪಂಥೀಯ ಗುಂಪುಗಳ ವ್ಯವಸ್ಥಿತ ಹುನ್ನಾರವಾಗಿದೆ. ಅಂದರೆ ಸದ್ಯದ ಕರ್ನಾಟಕದಲ್ಲಿ ದೊಡ್ಡ ರಾಜಕೀಯ ಬದಲಾವಣೆಗಳನ್ನು ತರುವ ಬಗ್ಗೆ ಪ್ರಜ್ಞಾವಂತರು ತಲೆಕೆಡಿಸಿಕೊಳ್ಳದೆ ಮತಾಂತರದ ಹುಸಿ ಸಮಸ್ಯೆಗಳು, ಭೈರಪ್ಪನವರ ಕಾದಂಬರಿ – ಈ ಥರದ ಸಿಲ್ಲಿ ಸಮಸ್ಯೆಗಳ ಬಗೆಗಷ್ಟೇ ತಲೆ ಕೆಡಿಸಿಕೊಳ್ಳಲಿ ಎಂಬುದು ಈ ಆಸಕ್ತ ಹಿತಗಳ ವಲಯದ ಆಶಯ.

protest4ಆದರೆ ಈ ವಲಯಗಳು ಎಷ್ಟು ಪುಕ್ಕಲು ವಲಯಗಳೆಂದರೆ, ಅನಂತಮೂರ್ತಿಯವರು, ‘ಭೈರಪ್ಪ ಒಬ್ಬ ಕಾದಂಬರಿಕಾರನೇ ಅಲ್ಲ’ ಎಂದರೆ ಅದನ್ನು ವಿಮರ್ಶೆಯ ಉಪಕರಣಗಳಿಂದ ಎದುರಿಸಲಾರದೆ ಎಸ್.ಎಂ.ಎಸ್. ಚೀರಾಟ ನಡೆಸಿ ಒಂದು ದಿನದ ‘ವಿಮರ್ಶಾ’ ಗೆಲುವನ್ನು ಸಾಧಿಸಲೆತ್ನಿಸುತ್ತವೆ. ಸಾಹಿತ್ಯವನ್ನು ಕುರಿತು ವ್ಯವಧಾನವಾಗಿ ಚಿಂತಿಸಿ, ಗ್ರಹಿಸಿ, ಪ್ರತಿಕಿಯ್ರಿಸಬೇಕಾದ ಕಡೆ, ಪುಸ್ತಕವನ್ನೇ ಓದದ ಎಸ್.ಎಂ.ಎಸ್. ವಿಮರ್ಶಕರನ್ನು ಸೃಷ್ಟಿಸುವ ನವ ಮ್ಯಾನೇಜ್ಮೆಂಟ್ ಶೈಲಿಯ ಚಿಲ್ಲರೆ ಕೆಲಸಗಳು ಶುರುವಾಗಿವೆ. ಆದರೆ ಈ ವಲಯಗಳು ಎಷ್ಟೇ ತಿಪ್ಪರಲಾಗ ಹೊಡೆದರೂ ಭೈರಪ್ಪನವರಂಥ ಮತೀಯವಾದಿಯನ್ನು ಒಬ್ಬ ದೊಡ್ಡ ಲೇಖಕ ಎಂದು ಕನ್ನಡದ ಪ್ರಜ್ಞಾವಂತ ಜಗತ್ತು ಒಪ್ಪಿಕೊಂಡಿಲ್ಲ ಎನ್ನುವುದು ಇಲ್ಲಿನ ಹೆಗ್ಗಳಿಕೆ. ಬಂಜಗೆರೆ ಜಯಪ್ರಕಾಶರ ‘ಆನುದೇವಾ ಹೊರಗಣವನು’ ಪುಸ್ತಕದ ಬಗ್ಗೆ ಎಷ್ಟೇ ಚೀರಾಟ ನಡೆದರೂ ಅದನ್ನು ಬೆಂಬಲಿಸುವವರ ಸಂಖ್ಯೆಯೂ ಬೆಳೆಯುತ್ತಲೇ ಹೋಯಿತು ಎಂಬುದನ್ನು ಮರೆಯದಿರೋಣ. ‘ಆನುದೇವಾ…’ ಪುಸ್ತಕದ ಸಂದರ್ಭದಲ್ಲಿ ಹಲವು ವೀರಶೈವರು ನಡೆದುಕೊಂಡ ರೀತಿ ಇನ್ನೂ ನಮ್ಮ ಕಣ್ಣ ಮುಂದೆಯೇ ಇದೆ. ಸ್ವತಃ ಜಾತಿ ಬಿಡಬೇಕೆಂದು ಹೊರಟ ಬಸವಣ್ಣ ದಲಿತ ಕುಲದಲ್ಲಿ ಹುಟ್ಟಿರಬಹುದು ಎಂದು ಊಹೆ ಮಾಡಿದ್ದಕ್ಕೇ ವೀರಶೈವರು ಇಷ್ಟೊಂದು ಬೆಚ್ಚುತ್ತಾರೆಂದರೆ, ಅವರ ತಲೆಯೊಳಗಣ ಮೇಲುಜಾತಿಯ ಪ್ರಜ್ಞೆ ಎಷ್ಟು ಭೀಕರವಾಗಿದೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಈ ಸಂಶೋಧನೆಗೆ ಆಧಾರವಿಲ್ಲದಿದ್ದರೆ ಅದನ್ನೇ ಪಾಂಡಿತ್ಯಪೂರ್ಣವಾಗಿ ಮಂಡಿಸಿ ಆ ಪುಸ್ತಕದ ವಾದವನ್ನು ಎದುರಿಸಲಾರದ ವೀರಶೈವ ಸನಾತನಿಗಳು ಪುಸ್ತಕದ ಮುಟ್ಟುಗೋಲಿನವರೆಗೂ ಹೋದರು. ಜಾತಿ ಸಂಘಟನೆಗಳ ನಾಯಕರು ಹಾಗೂ ಮೀಡಿಯಾ ಮ್ಯಾನೇಜರ್ ಗಳು ಸಾಹಿತ್ಯ ಕೃತಿಯ ಅರ್ಹತೆಯನ್ನು, ಶ್ರೇಷ್ಠತೆಯನ್ನು ತೀರ್ಮಾನಿಸುವ ಈ ಠೇಂಕಾರ ಅಪಾಯಕಾರಿಯಾದುದು. ವಿಜ್ಞಾನ, ವೈದ್ಯಕೀಯ, ನ್ಯಾಯಪದ್ಧತಿ, ಇಂಜಿನಿಯರಿಂಗ್, ಕಂಪ್ಯೂಟರ್ ಮುಂತಾದ ಕ್ಷೇತ್ರಗಳಲ್ಲಿ ಹೊಸ ಪುಸ್ತಕ, ಹೊಸ ಆಲೋಚನೆಗಳು ಬಂದಾಗ ಆಯಾ ಕ್ಷೇತ್ರಗಳ ತಜ್ಞರು ಈ ಬಗ್ಗೆ ಅಧಿಕೃತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಒಂದು ಸಾಹಿತ್ಯಕೃತಿ ಅಥವಾ ಸಂಶೋಧನಾ ಕೃತಿ ಬಂದರೆ, ಅದನ್ನು ಓದದೆಯೇ ಯಾರು ಬೇಕಾದರೂ ಅದರ ಬಗ್ಗೆ ನಿರ್ಣಯಾತ್ಮಕವಾಗಿ ಮಾತಾಡಬಹುದು; ಅದರ ವಿರುದ್ಧ ಫರ್ಮಾನು ಹೊರಡಿಸಬಹುದು ಎಂಬುದು ಕಳವಳಕಾರಿ ಬೆಳವಣಿಗೆ.

ಕಲಾಕೃತಿಗಳನ್ನು ಕುರಿತಂತೆ ಪರ, ವಿರೋಧ ಮುಂತಾಗಿ ವ್ಯಕ್ತಿಗತ ಪ್ರತಿಕ್ರಿಯೆಗಳು ಏನೇ ಇರಬಹುದು. ಆದರೆ ವಿಮರ್ಶೆಯ ದನಿಗಳನ್ನು ಹತ್ತಿಕ್ಕಲು ವ್ಯವಸ್ಥಿತವಾದ ಸಂಚುಗಳನ್ನು ರೂಪಿಸುವ ಆಸಕ್ತ ವಲಯಗಳು ಈಗ ಎಲ್ಲೆಡೆ ರಂಗಪ್ರವೇಶ ಮಾಡಿರುವುದು ಗಂಡಾಂತರಕಾರಿಯಾಗಿದೆ. ದೀಪಾ ಮೆಹತಾ ಅವರು ಕಾಶಿಯ ವಿಧವೆಯರ ಬಗ್ಗೆ ಸಿನಿಮಾ ತೆಗೆಯ ಹೊರಟರೆ, ಅವರ ವಿರುದ್ಧ ಸಂಘಟಿತ ಚೀರಾಟ ಮಾಡಿಸುವವರೆಲ್ಲ ಅಕ್ಷರಸ್ಥರು ಹಾಗೂ ಅಷ್ಟಿಷ್ಟು ಮಾತು, ಬರವಣಿಗೆ ಮಾಡುವ ವರ್ಗದವರೇ ಆಗಿರುತ್ತಾರೆ. ಇವರು ಮಾನಸಿಕವಾಗಿ ವೈಧವ್ಯದ ಪರ ಇರುವವರು ಹಾಗೂ ವೈಧವ್ಯ ಕಡ್ಡಾಯವಾಗಿ ಇರಲಿ ಎಂದು ಒಳಗೊಳಗೇ ವಾದಿಸುವವರು. 110 ವರ್ಷಗಳ ಕೆಳಗೆ ಪ್ರಕಟವಾದ ಮೊಟ್ಟ ಮೊದಲ ಕನ್ನಡ ಕಾದಂಬರಿ ‘ಇಂದಿರಾಬಾಯಿ’ಯಲ್ಲಿ ಇಂದಿರಾ ಎಂಬ ಬಾಲವಿಧವೆ ‘ಮ್ಲೇಚ್ಛ ಪಾದ್ರಿಗಳು ಛಾಪಿಸಿದ’ ಪುಸ್ತಕಗಳನ್ನು ಓದಿ ಕೆಟ್ಟುಹೋಗುತ್ತಿದ್ದಾಳೆ ಎಂದು ಚೀರುತ್ತಿದ್ದ ಸನಾತನಿಗಳ ಶನಿಸಂತಾನ ಇವತ್ತು ಆಧುನಿಕ ರೂಪ ಪಡೆದಿದೆ. ವೈಧವ್ಯ ಎನ್ನುವುದು ಹಳೆಯ ಸಮಸ್ಯೆಯಲ್ಲ; ಇವತ್ತಿಗೂ ಭಾರತದ ಮಹಿಳೆಯರ ನಿರಂತರ ಆತಂಕ ವೈಧವ್ಯವನ್ನು ಕುರಿತಾದದ್ದು ಹಾಗೂ ಇಲ್ಲಿನ ಲಕ್ಷಾಂತರ ಮಹಿಳೆಯರ ಕರುಣಾಜನಕ ಸ್ಥಿತಿ ವೈಧವ್ಯದಿಂದಲೇ ಉಂಟಾಗಿರುವುದು ಎಂಬ ಕಠೋರ ಸತ್ಯವನ್ನೇ ಈ ಸನಾತನಿಗಳು ನಿರಾಕರಿಸಿ ತಿಪ್ಪೆ ಸಾರಿಸಲೆತ್ನಿಸುತ್ತಿದ್ದಾರೆ. ಅಂದರೆ ಇಡೀ ಇಂಡಿಯಾದಲ್ಲಿ ನಿಜವಾದ ಸಮಸ್ಯೆಗಳ ಬಗ್ಗೆ ಪ್ರಜ್ಞಾವಂತ ಪುರುಷರಾಗಲೀ ಮಹಿಳೆಯರಾಗಲೀ ಮಾತಾಡದಂತೆ ಮಾಡುವುದೇ ಇವರ ಹುನ್ನಾರವಾಗಿದೆ. ಈಚೆಗೆ ಪಬ್ ದುರಾಕ್ರಮಣದ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮಗಳು ಈ ಕ್ರೌರ್ಯವನ್ನು ಗಂಭೀರವಾಗಿ ಚರ್ಚಿಸಿದ ಮೇಲಷ್ಟೇ ಕರ್ನಾಟಕದ ಮಾಧ್ಯಮಗಳು ಅಷ್ಟಿಷ್ಟು ದನಿ ಎಬ್ಬಿಸಲೆತ್ನಿಸಿದ್ದನ್ನು ನೋಡಿದರೆ ನಮ್ಮ ಮಾಧ್ಯಮ ಜಗತ್ತು ಸನಾತನಿಗಳೊಂದಿಗೆ, ಆಳುವ ಸರ್ಕಾರದೊಂದಿಗೆ ಕೈಜೋಡಿಸಿರುವುದು ಅತ್ಯಂತ ಸ್ಪಷ್ಟವಾಗಿದೆ. ಈ ನಡುವೆ ಈ ಮಾಧ್ಯಮಗಳಲ್ಲಿ ಇನ್ನೂ ಉಳಿದಿರುವ ಆರೋಗ್ಯಕರ ವ್ಯಕ್ತಿಗಳ ದನಿ ಕುಸಿಯುವಂತೆ ಮಾಡಲು ಮೆಣಸಿನ ಹೊಗೆ ಹಾಕುವ, ಅಲ್ಲಿಂದ ಅವರು ಹೊರಡುವಂತೆ ಮಾಡುವ ನೀಚ ಕೆಲಸಗಳೂ ನಡೆಯುತ್ತಿವೆ.

ಈ ಬರಹದಲ್ಲಿ ಈತನಕ ಒಬ್ಬ ಲೇಖಕನಾಗಿ ಲೇಖಕವರ್ಗದ ಸಮಸ್ಯೆಯನ್ನು ಹೆಚ್ಚು ಮುಖ್ಯವಾಗಿ ಮಾತಾಡಿದ್ದಂತೆ ಕಂಡರೆ ಕ್ಷಮಿಸಿ. ಇದನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸುವೆ. ತಮ್ಮ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಯಾಯಿತೆಂದು ಲೇಖಕ, ಲೇಖಕಿಯರು ಆಗಾಗ್ಗೆ ಪ್ರತಿಭಟಿಸುವುದುಂಟು. ಆದರೆ ಈ ವಾಕ್ ಸ್ವಾತಂತ್ರ್ಯದ ಪ್ರಶ್ನೆಯನ್ನು ನಾವು ಇನ್ನಷ್ಟು ವಿಸ್ತಾರವಾಗಿ ನೋಡಬೇಕೆನ್ನಿಸುತ್ತದೆ. ಇಲ್ಲಿ ದಲಿತರು ತಮ್ಮ ಸಣ್ಣಪುಟ್ಟ ಹಕ್ಕುಗಳನ್ನು ಕೇಳುವ, ಬೇಕಾದ ಬಾವಿಯಿಂದ ನೀರು ಸೇದುವಂಥ ಕನಿಷ್ಠ ಸ್ವಾತಂತ್ರ್ಯ ಪಡೆಯುವ ಹೋರಾಟ ಕೂಡ ಅನೇಕ ಕಡೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಇನ್ನು ಮುಸ್ಲಿಮರು ಒಂದು ರೇಷನ್ ಕಾರ್ಡ್ ಗೋ ಅಥವಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದೋ ದನಿಯೆತ್ತಿದರೆ ಅಥವಾ ಬ್ಯಾಂಕಿನಲ್ಲೋ, ಬಸ್ಸಿನಲ್ಲೋ ಸಣ್ಣ ಹಕ್ಕಿಗಾಗಿ ಪ್ರಶ್ನಿಸಿದರೆ ಅವರ ಕೋಮು ಹಾಗೂ ಧರ್ಮವನ್ನು ಎತ್ತಿ ಆಡಿ, ಬಾಯಿ ಬಡಿಯುವ ಕ್ರೌರ್ಯವೂ ಹೆಚ್ಚತೊಡಗಿದೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಪ್ರಕಟಗೊಳ್ಳಲು ಎದುರಾಗುವ ಅಡ್ಡಿಗಳೆಲ್ಲ ಒಟ್ಟಾರೆಯಾಗಿ ಸೃಜನಶೀಲತೆಗೆ ಎದುರಾದ ಅಡ್ಡಿಗಳೇ ಆದ್ದರಿಂದ ಬರಹಗಾರರ ಸಮುದಾಯ ಇವನ್ನೆಲ್ಲಾ ವಾಕ್ ಸ್ವಾತಂತ್ರ್ಯದ, ಮೂಲಭೂತ ಹಕ್ಕುಗಳ ದಮನದ ಪ್ರಶ್ನೆಗಳಂತೆಯೇ ನೋಡಬೇಕಾಗಿದೆ.

ಇನ್ನು ನೊಂದ ಮಹಿಳೆಯರಲ್ಲಿ ಪ್ರಾಯಶಃ ಸಾವಿರಕ್ಕೆ ಒಬ್ಬಾಕೆ ಕೂಡ ಪೊಲೀಸ್ ಠಾಣೆಯನ್ನಾಗಲೀ, ನ್ಯಾಯವಾದಿಗಳನ್ನಾಗಲೀ ಅಥವಾ ನ್ಯಾಯಾಲಯಗಳನ್ನಾಗಲೀ, ನ್ಯಾಯ ಒದಗಿಸುವ ಪತ್ರಿಕೆ, ಟೆಲಿವಿಷನ್ ಹಾಗೂ ಇನ್ನಿತರ ಸಂಸ್ಥೆಗಳನ್ನಾಗಲೀ ಸಂಪರ್ಕಿಸುವ ಸ್ಥಿತಿಯಲ್ಲಿಲ್ಲ. ಮಹಿಳೆಯರು ಈ ಹಾದಿಯೆಡೆಗೇ ಬಾರದಂತೆ ಇಡೀ ವ್ಯವಸ್ಥೆಯೇ ದುಷ್ಟ ಕಾವಲುಗಾರನಾಗಿ ಕೆಲಸ ಮಾಡುತ್ತಿದೆ. ಆಕೆ ನ್ಯಾಯ ಪಡೆವ ದಿಕ್ಕಿನತ್ತ ಹೆಜ್ಜೆ ಕೂಡ ಇಡದಂತೆ ‘ಮೌಲ್ಯಗಳ’ ‘ಮರ್ಯಾದೆ’ಯ ‘ಸಂಸ್ಕೃತಿ’ಯ ಪರಿಭಾಷೆಗಳ ಅಸ್ತ್ರಗಳು ಎರಗುತ್ತಿವೆ. ಮೊನ್ನೆ ಮಂಗಳೂರಿನ ಪಬ್ ಆಕ್ರಮಣದ ಸಂದರ್ಭ ಕುರಿತು ನಮ್ಮ ಸ್ತ್ರೀವಾದಿಗಳು ಪತ್ರಿಕೆಗಳ ವಾಚಕರವಾಣಿಗಳಲ್ಲಿ ಕೂಡ ಪ್ರತಿಭಟಿಸಲಾರದ ಸ್ಥಿತಿ ಬೆಳೆಯುತ್ತಿದೆ ಎಂದರೆ ಸಾಮಾನ್ಯ ಮಹಿಳೆಯರು ತಮ್ಮ ಹಕ್ಕನ್ನು ಮಂಡಿಸುವ ವೇದಿಕೆಗಳಾದರೂ ಎಲ್ಲಿರುತ್ತವೆ ಎಂಬುದನ್ನು ಸುಲಭವಾಗಿ ಊಹಿಸಬಹುದು.

ಹಾಗೆಯೇ ಎಲ್ಲ ವಲಯಗಳಲ್ಲೂ ಮೆಜಾರಿಟಿಯು ಮೈನಾರಿಟಿಗೆ ಒಡ್ಡುತ್ತಿರುವ ಭಯ ಕೂಡ ಅಷ್ಟೇ ಗಂಭೀರವಾದುದು. ಒಬ್ಬ ತಸ್ಲೀಮಾ ನಸ್ರೀನ್ ಮಾತಾಡಲು, ಬರೆಯಲು ಸಾಧ್ಯವಾಗುತ್ತಿಲ್ಲ ಎಂದರೆ ಮುಸ್ಲಿಂ ಮಹಿಳೆಯರ ಕಷ್ಟವನ್ನು, ಅಸಹಾಯಕತೆಯನ್ನು ಬಹಿರಂಗಗೊಳಿಸಲು ಮುಸ್ಲಿಂ ಪುರುಷರು ಅಡ್ಡಿ ಮಾಡುತ್ತಿದ್ದಾರೆ ಎಂದೇ ಅರ್ಥ; ಅಂದರೆ ಎಲ್ಲ ಧರ್ಮಗಳ ಗುತ್ತಿಗೆದಾರರೂ ಒಂದೇ ರೀತಿಯ ನೀಚ ಕೆಲಸ ಮಾಡುತ್ತಿದ್ದಾರೆ ಎಂಬುದೇ ಇದರ ಅರ್ಥ. ನ್ಯಾಯದ ದನಿಗಳನ್ನು ಅಡಗಿಸುತ್ತಾ, ನಾನು ಹೇಳಿದಂತೆ ನೀವೂ ಈ ಸಮಾಜವನ್ನು ನೋಡಬೇಕು; ಒಂದು ಘಟನೆಯನ್ನೋ ಪುಸ್ತಕವನ್ನೋ ನಾನು ನೋಡುವ ಹಾಗೆ ನೀವೂ ನೋಡಬೇಕು ಎಂದು ಅವರು ಚೀರುತ್ತಿದ್ದಾರೆ. ಇಲ್ಲಿ ಮುಲ್ಲಾಗಳು, ಅವರ ಮರಿಗಳು, ಸ್ವಾಮಿಗಳು ಮತ್ತು ಅವರ ಭಕ್ತಾದಿ ವಟುಗಳು, ಅಧಿಕಾರಸ್ಥರು ಹಾಗೂ ವಾಚಾಳಿ ಮಾಧ್ಯಮಗಳು ಹೇಳಿದ್ದೇ ಅಂತಿಮ ಅರ್ಥ ಎಂಬಂಥ ಸರ್ವಾಧಿಕಾರಿ ವಾತಾವರಣ ಬೆಳೆಯುತ್ತಿದೆ. ಈ ನಡುವೆ ಸುಭಾಷ್ ಭರಣಿ ಥರದ ದಲಿತ ಬುದ್ಧಿಜೀವಿ ನಾಯಕರು ಬಿಜೆಪಿ ಸೇರಿ ತಮಗಿದ್ದ ಅಷ್ಟಿಷ್ಟಾದರೂ ಸಮಾಜ ವಿಮರ್ಶೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರಲ್ಲ ಎಂದು ವ್ಯಥೆಯಾಗುತ್ತದೆ; ಅದರಲ್ಲೂ ಅಂಬೇಡ್ಕರ್ ವಾದ ಹೇಳಿಕೊಟ್ಟಿರುವ ಭಾರತೀಯ ಸಮಾಜದ ವಿಮರ್ಶೆಯ ಹಕ್ಕನ್ನೇ ಇಂಥವರು ಕಳೆದುಕೊಂಡರಲ್ಲ ಎಂಬುದು ಈ ವ್ಯಥೆಯನ್ನು ಇನ್ನಷ್ಟು ಆಳವಾಗಿಸುತ್ತದೆ. ಜಾತಿಪದ್ಧತಿಯ ಎಲ್ಲ ಸವಲತ್ತುಗಳನ್ನೂ ಸಾವಿರಾರು ವರ್ಷಗಳಿಂದ ಪಡೆದವರು ತಾವು ಯಾವ ದೇಶದಲ್ಲಿ ನೆಲೆಸಲಿ ಎಂಬ ಆಯ್ಕೆಯ ಸುಖದಲ್ಲಿದ್ದಾರೆ; ಇತ್ತ ನಮ್ಮ ದಲಿತರು ಯಾವ ಪ್ರಗತಿಯ ಬಗೆಗೂ ಯೋಚಿಸದಂತೆ, ತಾವು ಯಾವ ಧರ್ಮದಲ್ಲಿರಲಿ, ಹೇಗೆ ದಿನನಿತ್ಯದ ಅಸ್ಪೃಶ್ಯತೆಯ ಹೊಡೆತದಿಂದ ಪಾರಾಗಲಿ ಎಂಬ ಚಿಂತೆಯಲ್ಲೇ ಇರುವಂತೆ ನೋಡಿಕೊಳ್ಳಲಾಗಿದೆ. ಇಂಥ ಬಿಕ್ಕಟ್ಟಿನ ಗಳಿಗೆಯಲ್ಲಿ ಅವರ ಹಿತ ಕಾಯಬಲ್ಲ ದಲಿತ ನಾಯಕರು ಕೂಡ ಬಲಪಂಥೀಯ ಸನಾತನಿಗಳ ವಲಯಕ್ಕೆ ಜಾರುವುದು ದಲಿತದ್ರೋಹವಾಗುತ್ತದೆ. ಅದರಲ್ಲೂ ದಲಿತರು ಮತಾಂತರವಾಗತೊಡಗಿದಂತೆ ಮತಾಂತರದ ವಿರುದ್ಧ ಅತಿಯಾಗಿ ಚೀರುವ ದನಿಗಳ ಎದುರು ದಲಿತ ಹಾಗೂ ಜಾತ್ಯತೀತ ದನಿಗಳು ಗಟ್ಟಿಯಾಗಬೇಕಾದ ಕಾಲ ಇದು. ಭಾರತದಲ್ಲಿ ಬುದ್ದಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿಗಳು ವಿಸ್ತರಿಸತೊಡಗಿದ ಮೇಲೆ ಜನಸಮುದಾಯದ ಮೇಲೆ, ಅದರಲ್ಲೂ ಕೆಳಜಾತಿಗಳ ಮೇಲೆ ಪುರೋಹಿತವರ್ಗದ ಹಿಡಿತ ಕಡಿಮೆಯಾಗುತ್ತಾ ಬಂದಿತು. ಈ ಕಾಲದಲ್ಲಿ ಆ ಹಿಡಿತವನ್ನು ಮತ್ತೆ ಗಳಿಸಿಕೊಳ್ಳಲು ಈ ಪುರೋಹಿತವರ್ಗ ಮತ್ತು ಅವರ ಹಿತ ಕಾಯುವ ವಾಚಾಳಿಗಳು ಹಾಗೂ ಅವರ ಶೂದ್ರ ಕೂಲಿ ಪಡೆಗಳು, ಚರ್ಚ್ ಗಳ ಮೇಲೆ ದಾಳಿ, ಮುಸ್ಲಿಂ ವಿರೋಧ ಹಾಗೂ ಮತಾಂತರದ ವಿರೋಧ ಮುಂತಾದ ಕ್ರಿಯೆಗಳ ಮೂಲಕ ಜನರನ್ನು ಅಡ್ಡಹಾದಿಗೆಳೆಯುತ್ತಿವೆ. ದಲಿತರು ಮತಾಂತರಗೊಂಡರೆ ಅವರು ಈ ಪುರೋಹಿತರ ನೆಟ್ವರ್ಕ್ ನಿಂದ ಆಚೆ ಹೋಗುತ್ತಾರೆ ಎಂಬುದೇ ಮತಾಂತರವಿರೋಧಿಗಳ ಮೂಲ ಆತಂಕ ; ಆ ಆತಂಕವನ್ನು ಒಳಗೊಳಗೇ ಇಟ್ಟುಕೊಂಡ ಈ ವರ್ಗ ಮೇಲೆ ಮಾತ್ರ ಭಂಡ ಸಾಂಸ್ಕೃತಿಕ ವಾದಗಳನ್ನು ಹಾಗೂ ಹುಸಿ ಆತಂಕಗಳನ್ನು ನೇಯತೊಡಗಿದೆ. ಆ ವಾದದ ಗಿಳಿಪಾಠವನ್ನು ಶೂದ್ರರೂ ಕೆಲವು ದಲಿತರೂ ಒಪ್ಪಿಸತೊಡಗಿದ್ದಾರೆ. ಇಂಥ ಸಂದರ್ಭದಲ್ಲಿ ಸಿದ್ಧರಾಮಯ್ಯನವರಂಥ ಹಿಂದುಳಿದ ವರ್ಗಗಳ ನಾಯಕರು ಕೂಡ ಸ್ವಂತದ ಲಾಭಕ್ಕಾಗಿ ಮತೀಯವಾದಿಗಳ ತೆಕ್ಕೆಗೆ ಬೀಳಹೊರಟಿದ್ದಾರೆ. ಹಿಂದುಳಿದ ಜಾತಿಗಳ ಜನರನ್ನು ಸಂಘಟಿಸುವ, ತಿದ್ದುವ, ಅವರು ಮತೀಯವಾಗದಂತೆ ತಡೆಯುವ ಕೆಲಸಕ್ಕಿಂತ ದೇವೇಗೌಡರ ಮೇಲಿನ ದ್ವೇಷವೇ ಸಿದ್ಧರಾಮಯ್ಯನವರ ಜೀವನದ ಪರಮ ಪ್ರಶ್ನೆಯಾಗಿದೆ. ಅದನ್ನು ಬೆಂಬಲಿಸುವ ಹಿಂದುಳಿದ ಜಾತಿಗಳ ಕೆಲವು ಬುದ್ಧಿಜೀವಿಗಳೂ ಅವರ ಜೊತೆಗಿದ್ದಾರೆ. ಕರ್ನಾಟಕದಲ್ಲಿ ಹಾವನೂರು, ಅರಸು ಮುಂತಾದವರ ಕಾಲದಿಂದ ಆರಂಭವಾದ ಹಿಂದುಳಿದ ವರ್ಗಗಳ ವೈಚಾರಿಕ ಜಾಗೃತಿಯನ್ನು ನಾಶ ಮಾಡಲು ಇವರೆಲ್ಲ ಪಣ ತೊಟ್ಟಂತಿರುವುದು ಬರಲಿರುವ ದುರಂತದ ಮುನ್ಸೂಚನೆಯಂತಿದೆ.

ಈ ಬರಹಕ್ಕೆ ಟಿಪ್ಪಣಿ ಮಾಡಿಕೊಳ್ಳುವ ಸರಿಸುಮಾರಿನಲ್ಲೇ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರನ್ನು ಕುರಿತ ಪುಸ್ತಕವೊಂದನ್ನು ಸಂಪಾದಿಸುವ ಕೆಲಸದ ಕೊನೆಯ ಹಂತದಲ್ಲಿದ್ದೆ. ನಾವೆಲ್ಲ ಬಲ್ಲಂತೆ ನಂಜುಂಡಸ್ವಾಮಿಯವರು ಹಲವು ದಶಕಗಳ ಕಾಲ ಕರ್ನಾಟಕದಲ್ಲಿ ವೈಚಾರಿಕ ಪ್ರಜ್ಞೆಯನ್ನು, ಹಲವು ಆಂದೋಲನಗಳನ್ನು ರೂಪಿಸಿದವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಜಾಗತೀಕರಣದ ಭೀಕರ ಅಪಾಯಗಳ ಬಗ್ಗೆ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ರೈತಸಮುದಾಯವನ್ನು ಎಚ್ಚರಿಸುತ್ತಲೇ ಇದ್ದರು; ಹಾಗೆಯೇ ಕನ್ನಡ ಚಿಂತಕಲೋಕವನ್ನು ಕೂಡ. ರೈತ ಸಮುದಾಯ ಅವರ ಮಾತನ್ನು ಸಾಕಷ್ಟು ಕೇಳಿಸಿಕೊಂಡಿತ್ತಾದರೂ ಜಾಗತೀಕರಣದ ಮಾರಣಾಂತಿಕ ಪರಿಣಾಮಗಳ ಫಲವಾಗಿ ಕರ್ನಾಟಕದಲ್ಲಿ ಕೂಡ ರೈತರ ಆತ್ಮಹತ್ಯೆಯ ಸರಣಿ ಆರಂಭವಾಗಿಯೇಬಿಟ್ಟಿತು. ಕರ್ನಾಟಕದಲ್ಲಿ ಈ ಹೊತ್ತಿಗೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2003 ರ ಕೊನೆಯಲ್ಲಿ ಪ್ರೊ.ಎಂ.ಡಿ.ಎನ್. ಅವರು ‘ಅಗ್ನಿ’ ವಾರಪತ್ರಿಕೆಯಲ್ಲಿ ‘ಸಾಹಿತಿಗಳಿಗೆ ಪತ್ರ’ ಎಂಬ ಮಾಲಿಕೆಯಲ್ಲಿ ನಾಡಿನ ಬುದ್ಧಿಜೀವಿಗಳನ್ನು ಉದ್ದೇಶಿಸಿ ಬರೆದ ಪತ್ರಗಳನ್ನು ಈಗ ಮತ್ತೆ ಓದುತ್ತಿರುವಾಗ ಎಂ.ಡಿ.ಎನ್. ರೀತಿಯ ಧೀಮಂತ ಚಿಂತಕ-ನಾಯಕ ತೋರಿಸಿದ ಮಾರ್ಗಗಳನ್ನು ಸಂಘಟನಾ ಶಕ್ತಿಯನ್ನು, ಸಾಧ್ಯತೆಗಳನ್ನು ಅವರ ಜ್ಞಾನವನ್ನು, ಒಳನೋಟಗಳನ್ನು ಕನ್ನಡನಾಡಿನ ಬುದ್ಧಿಜೀವಿ ವಲಯ ಯಾಕೆ ಬರುಬರುತ್ತಾ ಉಪೇಕ್ಷಿಸಿತು, ಹಾಗೂ ಆ ಉಪೇಕ್ಷೆ ಎಷ್ಟು ದುಬಾರಿಯಾಯಿತು ಎಂಬುದು ನನ್ನ ಅರಿವಿಗೆ ಬರತೊಡಗಿತು.

ಒಂದು ಭಾಷೆಯ ಚಿಂತನಾಲೋಕ ಸಾಹಿತಿಗಳ ವಲಯದ ಸುತ್ತಲೇ ಅತಿಯಾಗಿ ಕೇಂದ್ರೀಕರಣಗೊಂಡರೆ ಆಗುವ ಅಪಾಯವಿದು ಎಂಬುದು ಮತ್ತೊಮ್ಮೆ ಮನದಟ್ಟಾಗತೊಡಗಿತು. ನಂಜುಂಡಸ್ವಾಮಿಯವರು ರೂಪಿಸಿದ ರೈತಸಂಘಟನೆಯನ್ನೂ ದಲಿತ ಸಂಘಟನೆಯನ್ನೂ ಒಟ್ಟಿಗೆ ತರುವ ಪ್ರಯತ್ನಗಳು ಈಚಿನ ವರ್ಷಗಳಲ್ಲಿ ಆಗಾಗ್ಗೆ ನಡೆದು ಬಂದು ಒಂದು ಹಂತ ತಲುಪಿದ್ದರೂ ಆ ಬಗ್ಗೆ ಕರ್ನಾಟಕದ ಇತರ ಚಿಂತನಾವಲಯಗಳು ತಲೆಕೆಡಿಸಿಕೊಳ್ಳದೆ ಸುಮ್ಮನೆ ಇವೆ.

ಇದೆಲ್ಲದರ ನಡುವೆ ಕೂಡ ನಾನು ನಿರಾಶನಾಗಿಲ್ಲ. ಯಾಕೆಂದರೆ ಇಲ್ಲಿ ಎಲ್ಲೋ ರೈತ, ದಲಿತ ಹಾಗೂ ಇನ್ನಿತರ ಸಂಘಟನೆಗಳನ್ನು ಸರ್ವಸಾಮಾನ್ಯ ಉದ್ದೇಶಗಳಿಗಾಗಿ ಒಟ್ಟಿಗೆ ತರುವ ಸಾಧ್ಯತೆ ಇದ್ದೇ ಇದೆ. ಲೇಖಕನಾಗಿ ಇಂಥ ಸಂಘಟನೆಗಳ ನಾಯಕತ್ವವನ್ನು ಕಾರ್ಯಕರ್ತರನ್ನು ಅನುಸರಿಸಿ ನಡೆಯುವುದು ಮುಖ್ಯ ಎಂದು ನನಗನ್ನಿಸಿದೆ. ಲೇಖಕ, ಲೇಖಕಿಯರು ಚಳುವಳಿಗಾರರಿಗೆ ಅಗಾಧವಾದ ಬೆಳಕಿನಲ್ಲಿ ಸತ್ಯಗಳನ್ನು ಕಾಣುತ್ತಾ, ಈ ಸಂಘಟನೆಗಳಿಗೆ ನೆರವಾಗುವ ಕೆಲಸ ಇವತ್ತು ಅತ್ಯಂತ ಮುಖ್ಯವಾದುದು ಎನ್ನಿಸತೊಡಗಿದೆ. ಈ ತನಕ ಹೇಳಿಕೊಂಡ ತಲ್ಲಣಗಳಿಗಿಂತ ತೀರಾ ಭಿನ್ನವಾದ, ಖಾಸಗಿಯಾದ ಅಥವಾ ಇತರರಿಗೆ ತೀರಾ ಮುಖ್ಯವಲ್ಲದ ತಲ್ಲಣಗಳೂ ಇವತ್ತು ನನ್ನೊಳಗಿವೆ. ಆದರೆ, ಮೇಲೆ ಹೇಳಿದ ಸಂಗತಿಗಳು ಹೆಚ್ಚು ಸಾರ್ವಜನಿಕ ವ್ಯಾಪ್ತಿಯುಳ್ಳವಾದ್ದರಿಂದ ಅವನ್ನು ಓದುಗರೊಂದಿಗೆ ಹೇಳಿಕೊಳ್ಳುವುದು ಹೆಚ್ಚು ಉಪಯುಕ್ತ ಎನ್ನಿಸಿದ್ದರಿಂದ ಆ ಬಗೆಗೇ ಇಲ್ಲಿ ಹೆಚ್ಚು ಒತ್ತು ನೀಡಿರುವೆ.

‍ಲೇಖಕರು avadhi

February 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಎವಿಎಂ. ನಾಯರ್

    ಜಾತ್ಯಾತೀತ ದೃಷ್ಟಿ ಕೋನಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಹೇಳಿರುವಂತೆ
    “ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂಬ ಮಾತು ಬಹಳ
    ಪ್ರಸ್ತುತವೆನಿಸುತ್ತದೆ. ಈಗ ಆಗಿರುವುದೂ ಅದೇ ಪ್ರಾಚೀನ ಇತಿಹಾಸದ ಪ್ರಜ್ಞೆ ಇಲ್ಲದೇ
    ಇದ್ದರೂ ಪರವಾಗಿಲ್ಲ. ಕೇವಲ ಕೆಲವೇ ಕೆಲವು ದಶಕಗಳ ಇತಿಹಾಸವನ್ನು ಮರೆತಿರುವುದರಿಂದಲೇ
    ಗಣ್ಯರೆನಿಸಿಕೊಂಡ ಕೆಲವರು ದಾರಿ ತಪ್ಪಿದ್ದಾರೆ. ಮುಂದಿನ ಆರು ಹೋದಂಗೆ ಹಿಂದಿನವು
    ಎಂಬ ಮಾತಿನಂತೆ ಈ ಮರೆವು ಅಥವಾ ಜಾಣ ಮರೆವು ಮುಂದೆ ಇನ್ನು ಎಂಥೆಂತಹ
    ಪರಿಸ್ಥಿತಿಯನ್ನು ತಂದೊಡ್ಡುತ್ತದೆಯೋ ಅದನ್ನು ಕಾಲವೇ ನಿರ್ಣಯಿಸಬೇಕು. ಅದಕ್ಕಿಂತಲೂ
    ಮೊದಲು ಮುಂದಾಳುಗಳೆನಿಸಿಕೊಂಡ ಎಲ್ಲರೂ ಸಮಾಜದ ಜವಾಬ್ದಾರಿಗಳನ್ನು ಅರಿತು
    ನಡೆದರೆ ಒಳಿತಾದೀತು.
    ಇನ್ನು ರೈತ ಹಾಗೂ ದಲಿತ ಸಂಘಟನೆಗಳ ಒಗ್ಗೂಡಿಕೆಯ ಅನಿವಾರ್ಯವಾದರೂ ಏನು
    ಎಂಬ ಪ್ರಶ್ನೆ ಕಾಡುತ್ತಿದೆ. ಈ ಎರಡೂ ಸಂಘಟನೆಗಳು ಒಂದಾಗ ಬೇಕಾದ ತಾತ್ವಿಕಥೆಯಾದರೂ
    ಏನು? ತನ್ನೊಳಗೇ ಹರಿದು ಹಂಚಿ ಹೋಗಿರುವ ಸಂಘಟನೆಗಳು ಬೇರೆ ಬೇರೆ ನೆಲೆಗಟ್ಟಿನಲ್ಲಿ
    ಹೋರಾಟ ನಡೆಸುತ್ತಿರುವ ಸಂಘಟನೆಗಳು ತಮ್ಮ ತನ ಮರೆತು ಒಂದಾಗುವವೇ? ಈ
    ವ್ಯರ್ಥ ಹಾಗೂ ನಿರರ್ಥಕ ಪ್ರಯತ್ನಕ್ಕೆ ಕೈ ಹಾಕದೇ ಇರುವುದೇ ಒಳಿತು.

    ಪ್ರತಿಕ್ರಿಯೆ
  2. Dr. BR. Satyanarayana

    ಇಂದಿನ ಹಲವಾರು ಘಟನೆಗಳಿಗೆ ಅಕ್ಷರ ರೂಪ ಕೊಟ್ಟಂತಿದೆ ಲೇಖನ. ನೀ ವು ಎತ್ತಿರುವ ಪ್ರಶ್ನೆಗಳು ಎಲ್ಲಾ ಪ್ರಜ್ಞಾವಂತ ಲೇಖಕನಿಗಿರಲಿ ಜನಸಾಮಾನ್ಯನಿಗೂ ಕಾಡಿವೆ; ಕಾಡುತ್ತಿವೆ. ಇದಕ್ಕೆಲ್ಲ ಪರಹಾರವೇನು? ಇದು ಮಾತಿಗೆ ಸುಲಭವಾಗಿ ನಿಲಕದ್ದು. ನೀವು ಸೂಚಿಸಿರುವ ರೈತ ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ ಎಂಬುದು ಹಲವಾರು ಅನುಮಾನಗಳನ್ನು ಹುಟ್ಟಿಸುತ್ತವೆ. ಎಂ.ಡಿ.ಎನ. ನಂತರ ರೈತಸಂಘ ಏನಾಗಿದೆ. ಡಿ.ಎಸ್.ಎಸ್. ಅಥವಾ ದಲಿತ ಸಂಘಟನೆ ಎಂದರೆ ಯಾವುದು? ಅದರಲ್ಲಿಯೇ ಎಷ್ಟೊಂದು ಕವಲುಗಳಿವೆ. ಆ ಸಂಘಟನೆಗಳಲ್ಲಿಯೇ ಬಲಪಂಥೀಯ ಒಲವಿರುವವರು ಇಲ್ಲವೆ? ಸಚಿವ ಲಿಂಬಾವಳಿ ನಾನೂ ದಲಿತ ಎಂದುಕೊಂಡೇ ಈಗ ಏನು ಮಾಡುತ್ತಿದ್ದಾರೆ ನೋಡಿ. ಇದೆಲ್ಲಾ ಪವರ್ ಪಾಲಿಟಿಕ್ಸ್ ಪ್ರಭಾವ. ಅಧಿಕಾರ ಶಾಶ್ವತವಲ್ಲ; ಆದರೆ ಪರಿಹಾರ.

    ಪ್ರತಿಕ್ರಿಯೆ
  3. ಅಜಯ್

    ಹುಳಿಯಾರರಂತವರು ಒಂದು ಜಾತಿ ಜನರನ್ನು ಬೈದು ಸಮಾಜ ಒಡೆಯುವಂತಹ ಇಂತ ಲೇಖನಗಳ ಬದಲು ಸಮಾಜ ಒಂದುಗೂಡಿಸುವ ಲೇಖನಗಳನ್ನು ಬರೆಯುವಲ್ಲಿ ತಮ್ಮ ಬುದ್ದಿವಂತಿಕೆ ಉಪಯೋಗಿಸಿದ್ದರೆ ಈ ದೇಶಕ್ಕೆ ಎಷ್ಟೋ ಸಹಾಯವಾಗುತ್ತಿತ್ತು. ಆಗ ಯಾವ ಮತೀಯವಾದವೂ ಇರುತ್ತಿರಲಿಲ್ಲ, ಜಾತಿವಾದವೂ ಇರುತ್ತಿರಲಿಲ್ಲ. ಎಲ್ಲವನ್ನೂ ಜಾತಿ ಕಣ್ಣಿನಲ್ಲೇ ನೋಡುವುದನ್ನು ಬಿಡುವವರೆಗೂ ನಮ್ಮ ಸಮಾಜ ಹೀಗೇ ಇರುತ್ತದೆ.

    ಪ್ರತಿಕ್ರಿಯೆ
  4. ಎವಿಎಂ. ನಾಯರ್

    ಕುಂಬಳ ಕಾಯಿ ಕಳ್ಳ ಅಂದ್ರೆ ಅಜಯ್ ಯಾಕೆ ಬೆನ್ನು ಮುಟ್ಟಿಕೊಳ್ಳಬೇಕು?
    ನಟರಾಜ್ ಹುಳಿಯಾರ್ ಅಭಿಪ್ರಾಯ ಸರಿಯಾಗಿಯೇ ಇದೆ. ಹುಳಿಯಾರ್ ಬರಹವನ್ನ
    ಜಾತಿ ಕಣ್ಣಿನಿಂದ ನೋಡಿರುವುದುದರಿಂದಲೇ ಅಜಯ್ ಈ ರೀತಿಯ ಅಭಿಪ್ರಾಯ
    ವ್ಯಕ್ತ ಪಡಿಸಿದ್ದಾರೆ. ಇನ್ನು ಮುಂದಾದಾರೂ ಅಜಯ್ ಜಾತಿ,ಧರ್ಮದ ಕನ್ನಡಕ
    ತೆಗೆದು ಭಾರತದ ಪರಿಸ್ಥಿತಿಯನ್ನು ಅವಲೋಕಿಸಲಿ.

    ಪ್ರತಿಕ್ರಿಯೆ
  5. ಸುರಗಿ

    ಈ ಹಿಂದೆ ಹಲವು ಹೋಳುಗಳಾಗಿ ಒಡೆದು ಹೋಗಿದ್ದ ದಲಿತ ಸಂಘಟನೆಗಳು ಕೆಲದಿನಗಳ ಹಿಂದೆ ಮತ್ತೆ ಒಂದಾಗುವ ತೀರ್ಮಾನ ತೆಗೆದುಕೊಂಡವು.
    ಆ ಬಗ್ಗೆ ಪತ್ರಿಕಾ ಗೋಷ್ಟಿಯನ್ನೂ ನಡೆಸಿದವು. ಆದರೆ ಒಂದೂ ಪತ್ರಿಕೆಯಲ್ಲೂ ಪ್ರಕಟವಾಗಲಿಲ್ಲ. ಟೀವಿಯಲ್ಲೂ ಪ್ರಸಾರವಾಗಲಿಲ್ಲ.ಆವುಗಳಿಗೆ ಹೊಟ್ಟೆ ತುಂಬಿಸುವ ಪಬ್ ದಾಳಿ ಪ್ರಕರಣ ಇತ್ತಲ್ಲಾ.
    ಆದರೆ ಸುವರ್ಣ ಸುದ್ದಿವಾಹಿನಿಯಲ್ಲಿ ಶಶಿಧರ್ ಭಟ್ ರು ನಡೆಸಿಕೊಡುವ ’ನ್ಯೂಸ್ ಅಂಡ್ ವ್ಯೂಸ್’ ಕಾರ್ಯಕ್ರಮದಲ್ಲಿ ದಲಿತ ಮುಖಂಡರನ್ನು ಆಹ್ವಾನಿಸಿ ಚರ್ಚೆ ನಡೆಸಿಕೊಟ್ಟರು.
    ಎಂಬತ್ತ್ತರ ದಶಕದಲ್ಲಿ ಜನಪರ ಚಳುವಳಿಗಳಿಗೆ ಬೆಂಗಾವಲಾಗಿ ಪತ್ರಿಕೆಗಳಿದ್ದವು. ಮುಖ್ಯವಾಗಿ ಲಂಕೇಶ್ ಪತ್ರಿಕೆಯಿತ್ತು.
    ಈಗ ಯಾವ ಪತ್ರಿಕೆಯಲ್ಲಿ ವೃತ್ತಿಪರತೆ ಇದೆ ಹೇಳಿ? ನಟರಾಜರ’ ಕನ್ನಡ ಟೈಮ್ಸ್’ ಕೂಡ ಇದಕ್ಕೆ ಹೊರತಾಗಿರಲಿಲ್ಲ.
    ಅಂದು ಪತ್ರಿಕೆಗಳು ಮಾಡಿದ ಕೆಲಸವನ್ನು ಇಂದು ಟೀವಿ ಮಾಡಬಲ್ಲುದು. ಆದರೆ ಅದಾಗುವುದಿಲ್ಲವಲ್ಲಾ.
    ಬಳ್ಳಾರಿಯ ಸಿರಿವಾರ ವಿಮಾನ ನಿಲ್ದಾಣಕ್ಕೆ ಭೂಮಿ ಕೊಡುವುದಿಲ್ಲವೆಂದು ಚಾಗನೂರು ರೈತರು ಸತ್ಯಾಗ್ರಹ ಮಾಡುತ್ತಿದ್ದಾರೆ. ಸರಕಾರಕ್ಕೆ ಅವರೆಡೆಗೆ ತಿರುಗಿ ನೋಡಲೂ ಪುರುಸೊತ್ತಿಲ್ಲ. ಅವರ ಮೇಲೆ ಪೋಲಿಸರುಇಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ರೈತರಿಗೆ ಯಾವ ಸಂಘಟನೆ ಬೆಂಬಲ ಸೂಚಿಸಿದೆ ಹೇಳಿ? ಸಂಸ್ಕೃತಿ ರಕ್ಷಣೆಯಡಿ ರೈತರ ಬದುಕು ಬರುವುದಿಲ್ಲವಲ್ಲಾ!

    ಪ್ರತಿಕ್ರಿಯೆ
  6. vinod

    Dear Natraj
    First of all let me congratulate for the eye-opening article. your article voices out the unexpressed thoughts of mine. let this good work continue.
    vinod

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: