ನನ್ನ ಕಾವ್ಯಕ್ಕೆ ಬೆಳ್ಳಕ್ಕಿಗಳ ರೆಕ್ಕೆಗಳಿವೆ

ekkundi1.jpg

ಸು ರಂ ಎಕ್ಕುಂಡಿ

“ನಮ್ಮ ಕನಸುಗಳಂತೆಯೇ ನಾವು ಒಂಟಿಯಾಗಿ ಬಾಳುತ್ತೇವೆ” ಎಂದು ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಬರೆದಿದ್ದಾನೆ. ಇಂಥ ಕನಸನ್ನು ಕಾಣುತ್ತ ನಾನು ಕರ್ನಾಟಕದ ಕರಾವಳಿಯ ಹಳ್ಳಿ ಬಂಕಿಕೊಡ್ಲದಲ್ಲಿ ನನ್ನ ಜೀವನದ ಅತ್ಯುತ್ತಮ ಭಾಗವನ್ನು ಕಳೆದೆನು. ಅಲ್ಲಿರುವ ಜನರೆಲ್ಲ ತೀರ ಬಡವರಾಗಿದ್ದಾರೆ. ರೈತರು, ಬೆಸ್ತರು, ಉಪ್ಪಿನಾಗರಗಳಲ್ಲಿ ದುಡಿಯುವ ಪರಿಶಿಷ್ಟರು ಮತ್ತು ಹಿಂದುಳಿದವರು. ಆ ಹಳ್ಳಿಯ ಪ್ರಕೃತಿ ಸೌಂದರ್ಯವು ಶ್ರೀಮಂತವಾಗಿದೆ. ಆ ಚೆಲುವಿನ ಶ್ರೀಮಂತಿಕೆ ಅವರ ಬಡತನದ ಗಾಯಗಳನ್ನು ಮಾಯಿಸಲು ನೆರವಾಗಿದೆ. ಅಲ್ಲಿ ನಾನು ಶಿಕ್ಷಕನಾಗಿ ೩೫ ವರ್ಷ ದುಡಿದೆನು. ಬಂಕಿಕೊಡ್ಲದ ಜನರಿಗೆ ಎರಡು ಹಸಿವುಗಳಿದ್ದವು. ಅನ್ನಕ್ಕಾಗಿ ಹಸಿವು ಮತ್ತು ವಿದ್ಯೆಗಾಗಿ ಹಸಿವು. ಅವರಿಗೆ ಅನ್ನ ಕೊಡುವುದು ನನ್ನಿಂದ ಸಾಧ್ಯವಿದ್ದಿಲ್ಲ. ಏಕೆಂದರೆ ಅದನ್ನು ಹುಡುಕಿಕೊಂಡು ನಾನೇ ಅಲ್ಲಿಗೆ ಹೋಗಿದ್ದೆನು. ಆದರೆ ೩೫ ವರ್ಷಗಳವರೆಗಿನ ಅವಧಿಗೆ ವಿದ್ಯೆಯನ್ನು ನೀಡಿದೆನು. ಇದರಿಂದ ನನಗೆ ತುಂಬಾ ತೃಪ್ತಿಯುಂಟಾಗಿದೆ. ನನ್ನ ತೃಪ್ತಿಗೆ ಇನ್ನೂ ಒಂದು ಕಾರಣವಿದೆ. ಕಡಲು ಮತ್ತು ಬೆಳ್ಳಕ್ಕಿಗಳೂ ನನ್ನ ನೆರೆಹೊರೆಯಾಗಿದ್ದವು. ಸದಾ ಮೊರೆಯುತ್ತಿರುವ ಕಡಲನ್ನು ಪಕ್ಕದಲ್ಲಿಟ್ಟುಕೊಂಡು ನಾವು ಮೌನವಾಗಿರಲು ಸಾಧ್ಯವಿಲ್ಲ. ಕಡಲಿನೊಳಗಿನಂತೆಯೇ ನಮ್ಮೊಳಗೂ ತೆರೆಗಳು ಏಳುತ್ತವೆ, ಬೀಳುತ್ತವೆ. ಅವು ವಿಸ್ತಾರವಾಗಿ ಹರಡಿದ ತೀರವನ್ನು ತಲುಪಲು ಧಾವಿಸುತ್ತವೆ. ಮರಳಿನ ಕಣಗಳಲ್ಲಿ ತಮ್ಮ ನೊರೆಯ ಕೆನೆಯನ್ನು ಉಣಿಸುತ್ತವೆ. ನನ್ನ ಕಾವ್ಯವು ನನ್ನ ಹೃದಯದ ಕಡಲಿನಿಂದಲೂ, ಅದರ ಅಲೆಗಳ ಕೆನೆಯಿಂದಲೂ ಹುಟ್ಟಿಬಂದಿದೆ. ಪ್ರತಿಯೊಬ್ಬನ ಹೃದಯದಲ್ಲಿಯೂ ಒಂದು ಅಪಾರ ಕಡಲಿರುತ್ತದೆ. ಚಿಂತನೆ, ಭಾವನೆಗಳಿಂದ ಅದು ಒಮ್ಮೊಮ್ಮೆ ಪ್ರಕ್ಷುಬ್ಧವಾಗಿರುತ್ತದೆ. “ನಿಮ್ಮ ಹೃದಯದಲ್ಲಿ ಒಂದು ಕಡಲು ಇರುವಾಗ ಒಂದೇ ಒಂದು ಶಬ್ದವೂ ಪ್ರಲಯದ ಮಹಾಪೂರವಾಗಬಲ್ಲುದು” ಎಂದು ಖ್ಯಾತ ಕವಯಿತ್ರಿ ಎಮಿಲೆ ಡಿಕಿನ್ಸನ್ ಬರೆಯುತ್ತಾಳೆ. ಹೀಗೆ ನನ್ನ ಕಾವ್ಯ ಹುಟ್ಟಿದ್ದು ನನ್ನೊಳಗಿನ ಕಡಲಿನಿಂದ. ಅಂಬಿಕಾತನಯದತ್ತ-ಶ್ರೀ ಬೇಂದ್ರೆ ಒಂದು ಪದ್ಯ ಬರೆಯುತ್ತಾರೆ-

ಬಂಗಾರ ನೀರ ಕಡಲಾಚೆಗೀಚೆಗಿದೆ, ನೀಲ ನೀಲ ತೀರ
ಮಿಂಚು ಬಳಗ ತೆರೆ ತೆರೆಗಳಾಗಿ ಅಲೆದಾವ ಪುಟ್ಟ ಪೂರ

ಈ ಬಂಗಾರ ಕಡಲಿನಿಂದ ಎದ್ದ ತೆರೆಗಳು ಕನ್ನಡ ತಾಯಿಯ ಪಾದ ತೊಳೆದಿವೆ. ಕನ್ನಡ ಕಾವ್ಯ ಪ್ರಿಯರ ಹೃದಯಗಳನ್ನು ಗೆದ್ದುಕೊಂಡಿವೆ. ಅವರ ಮೆಚ್ಚುಗೆಯ ತೀರಗಳನ್ನು ತಲುಪಲು ಅವು ಧಾವಿಸಿವೆ.

ಕಡಲಿನ ಹಾಗೆಯೇ ನಾನು ಬೆಳ್ಳಕ್ಕಿಗಳನ್ನು ಪ್ರೀತಿಸುತ್ತೇನೆ. ಅವು ಕಣ್ಣಿಗೆ ಕಂಡಾಗಲೊಮ್ಮೆ ನಾನು ರೋಮಾಂಚಿತನಾಗಿದ್ದೇನೆ. ಅವು ಸದಾ ಅಪಾರದಲ್ಲಿಯೇ ಇರುತ್ತವೆ. ಅವಕ್ಕೆ ಅಪಾರವೆಂದರೆ ತುಂಬಾ ಪ್ರೀತಿ. ಅವು ರೆಕ್ಕೆ ಬಿಚ್ಚಿದರೆ ಸಾಕು, ಅಪಾರದಲ್ಲಿ ಹಾರುತ್ತವೆ. ಒಮ್ಮೆ ಮಲ್ಲಿಗೆಯ ಸರದಂತೆ, ಒಮ್ಮೆ ಸುಂದರ ರತ್ನಹಾರದಂತೆ ಮತ್ತು ಇನ್ನೊಮ್ಮೆ ಬೆಳಕಿನ ಸರಪಳಿಯಂತೆ ಅವು ಹಲವು ವಿನ್ಯಾಸಗಳನ್ನು ಹೆಣೆಯುತ್ತ ಹಾರುತ್ತವೆ. ಅವು ದೇವತೆಗಳ ಲೋಕದಿಂದ ಬಂದಂತೆ ತೋರುತ್ತವೆ. ಇಳಿದರೂ ಅವು ಲಾವಣ್ಯದ ಹೂಮಾಲೆಯಂತೆ ಕಡಲಿನ ಅಪಾರದಲ್ಲಿಯೇ ಇಳಿಯುತ್ತವೆ. ಕಡಲಿನ ಅಲೆಗಳಲ್ಲಿ ಅವು ಎಷ್ಟೊಂದು ಮೋಹಕವಾಗಿ ಅಡಗಿಕೊಳ್ಳುತ್ತವೆ. ಅವುಗಳ ಲಾವಣ್ಯಕ್ಕೆ ಮನಸೋತ ಮೀನುಗಳು ತಮ್ಮನ್ನೆ ಆಹಾರವಾಗಿ ಅರ್ಪಿಸಿಕೊಳ್ಳುತ್ತವೆ. ನನ್ನ ಕಾವ್ಯಕ್ಕೆ ಬೆಳ್ಳಕ್ಕಿಗಳ ರೆಕ್ಕೆಗಳಿವೆ. ಎಂದೇ ನನ್ನ ಪಾಲಿನ ಅಪಾರವನ್ನು ನಾನು ಹಾಡಿಕೊಳ್ಳುತ್ತೇನೆ. ಅಪಾರದ ಸೌಂದರ್ಯ, ಪ್ರೀತಿ ಮತ್ತು ದಾಹಗಳು ಇವೆಲ್ಲವೂ ನನ್ನ ಕಾವ್ಯದ ತೋಳುಗಳಲ್ಲಿ ಆಡಿಕೊಂಡಿವೆ. ಪ್ರತಿಯೊಬ್ಬನ ಹೃದಯದಲ್ಲಿಯೂ ಒಂದು ಬೆಳ್ಳಕ್ಕಿ ಇದೆ. ಶುಭ್ರ, ಸುಂದರ, ಬೆಳ್ಳಗೆ ಮತ್ತು ಲಾವಣ್ಯಪೂರ್ಣ. ಹೀಗಾಗಿ ಅಪಾರದ ದಾಹ ಎಲ್ಲರಲ್ಲೂ ಸ್ವಾಭಾವಿಕ. ಕೊನೆಯಿಲ್ಲದ ಅಪಾರದ ಈ ದಾಹವೇ ಮನುಷ್ಯನನ್ನು ಕಾವ್ಯದ ಮಾಯಾ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದೇ ಅವನನ್ನು ಸಂಗೀತ, ವರ್ಣಗಳು ಹಾಗೂ ಲಲಿತ ಕಲೆಗಳ ಪ್ರಪಂಚಕ್ಕೆ ಒಯ್ಯುತ್ತದೆ.

ನನ್ನ ಕಾವ್ಯವು ದಕ್ಷಿಣದ ಮಹಾನ್ ವೈಷ್ಣವ ದಾರ್ಶನಿಕರಾದ ಆಚಾರ್ಯ ಶ್ರೀ ಮಧ್ವರಿಗಂತೂ ತುಂಬಾ ಋಣಿಯಾಗಿದೆ. ನನ್ನಲ್ಲಿ ಅಪಾರದ ದಾಹವನ್ನು ಹುಟ್ಟಿಸಿದವರೇ ಅವರು. ನಾವು ಬಾಳಿ ಬದುಕುವ ಈ ಜಗತ್ತು ಸತ್ಯ ಹಾಗೂ ಸೌಂದರ್ಯಗಳ ಅಮೂಲ್ಯ ಕೊಡುಗೆಯಾಗಿದೆಯೆಂದು ಅವರು ತಿಳಿಸಿದ್ದಾರೆ. “ನಮ್ಮ ಜೀವನವೂ ಕೂಡಾ ಪರಮ ಕೃಪಾಳುವಿನ ಕರುಣೆ ಮತ್ತು ಪ್ರೀತಿಗಳ ಅಮೂಲ್ಯ ಕೊಡುಗೆಯಾಗಿದೆ. ಪಾರಿಜಾತದಂತೆ ಶುಭ್ರ, ಬಕುಲದಂತೆ ಮಧುರ, ಸತ್ಯ ಮತ್ತು ಪ್ರೇಮಗಳಿಂದ ಬಾಳುವುದೇ ಭಗವಂತನ ಉಪಕಾರ ಸ್ಮರಿಸುವ ಅತ್ಯುತ್ತಮ ವಿಧಾನವಾಗಿದೆ. ಅವನು ಮಿಂಚು ಮತ್ತು ಸಿಡಿಲುಗಳ ಶಬ್ದಗಳಲ್ಲೂ ನುಡಿಯುತ್ತಾನೆ. ಆದ್ದರಿಂದ ಅವನ ಅಪಾರ ವೈಭವವನ್ನೂ ಮಹಿಮೆಯನ್ನೂ ಸ್ತುತಿಸಿರಿ.” ನನ್ನ ಕಾವ್ಯವು ಶಬರಿ, ಸುದಾಮ, ಗಜೇಂದ್ರ, ಕುಬ್ಜೆ ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರ್‍ಏಮಗಳನ್ನು ಕುರಿತು ಬಣ್ಣಿಸುತ್ತದೆ. ಮನುಷ್ಯನ ಜೀವನದಲ್ಲಿ ದಿವ್ಯದ ಪಯಿರನ್ನು ಬಿತ್ತಿ ಬೆಳೆದ ಸಾಕ್ರೆಟೀಸ್, ಏಸು, ಪ್ರವಾದಿ ಹಾಗೂ ದೇವರ ದಾಸಿಮಯ್ಯರಂಥ ಆತ್ಮದ ಒಕ್ಕಲಿಗರನ್ನೂ ಬಣ್ಣಿಸುತ್ತದೆ.

ಇಷ್ಟಕ್ಕೆ ನಿಲ್ಲದೆ ಹಸಿದವರನ್ನೂ, ಬಡವರನ್ನೂ ಕುರಿತು ಹೇಳಿದ ಕಾರ್ಲ್ ಮಾರ್ಕ್ಸ್ ಮತ್ತು ಶ್ರಮಜೀವಿಗಳ ಮನ ಕರಗಿಸುವ ಕಥೆಗಳಲ್ಲಿ ಶೋಷಿತರ ಹಾಗೂ ನಿರಾಕೃತರ ಪರವಾಗಿ ಅದು ಕ್ಷೋಭೆಗೊಂಡು ಧ್ವನಿಯೆತ್ತಿದೆ. ನನ್ನ ಕಾವ್ಯವು ಉಳುವ ಕೈಗಳನ್ನೂ, ಪ್ರಾರ್ಥಿಸುವ ಕೈಗಳನ್ನೂ ಕುರಿತು ಹಾಡುತ್ತದೆ. ಅದು ಕೊರಗುವ ಹೃದಯಗಳನ್ನೂ, ಕಂಬನಿ ತುಂಬಿದ ಕಣ್ಣುಗಳನ್ನೂ ಕುರಿತು ಹೇಳುತ್ತದೆ. ಅದು ನಿರಾಶ್ರಿತರಿಗೂ, ಮುದುಕರಿಗೂ ನಾಲಿಗೆ ನೀಡಿದೆ. ಮತ್ತು ಧೀರ ಚೇತನಗಳಿಗೆ ಸ್ಮಾರಕಗಳನ್ನು ನಿಲ್ಲಿಸಿದೆ. ಅದು ಚರಿತ್ರೆಯ ಗಾಲಿಗಳನ್ನು ತಿರುಗಿಸಿದವರ ಧೈರ್ಯ ಮತ್ತು ಕರುಣೆಗಳ ಕಥೆಗಳನ್ನು ಹೇಳುತ್ತದೆ. ನನ್ನ ದೃಷ್ಟಿಯಲ್ಲಿ ಕಾವ್ಯವು ಸೌಂದರ್ಯದ ಸೃಷ್ಟಿಯಾಗಿದೆ. ಉದಾತ್ತದ ಸ್ಮೃತಿಯಾಗಿದೆ. ಮತ್ತು ಅಪಾರದ ಅನ್ವೇಷಣೆಯಾಗಿದೆ. ಅದು ಕಡಲಿನ ಧ್ವನಿಯ ಹಾಗೂ ಬೆಳ್ಳಕ್ಕಿಗಳ ಕರೆಯ ಪ್ರತಿಧ್ವನಿಯಾಗಿದೆ.   

‍ಲೇಖಕರು avadhi

October 11, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: