ರಾಷ್ಟ್ರೀಯತೆ, ದೇಶಪ್ರೇಮ ಮತ್ತು ಗೋ ಪುರಾಣ

ನಾ ದಿವಾಕರ

ಭಾರತ ಒಂದು ವಿಶಿಷ್ಟ ಸಂಸ್ಕತಿಗಳ ದೇಶ. ಇಲ್ಲಿ ಸಂಸ್ಕತಿ, ಧರ್ಮ ಮತ್ತು ಮಾನವ ಅಸ್ಮಿತೆ ಈ ಮೂರೂ ವಿದ್ಯಮಾನಗಳು ಏಕಕಾಲಕ್ಕೆ ಸಮ್ಮಿಳಿತವಾಗುವುದನ್ನು ಕಾಣಬಹುದು.

ಧರ್ಮ ಮತ್ತು ಸಂಸ್ಕತಿ ಎರಡೂ ಪರಸ್ಪರ ಪೂರಕವಲ್ಲದ ಸಾಮಾಜಿಕ ವಿದ್ಯಮಾನಗಳು. ಆದರೆ ಭಾರತದ ಸಂದರ್ಭದಲ್ಲಿ ಸಂಸ್ಕತಿಯನ್ನು ಧರ್ಮದ ಚೌಕಟ್ಟಿನಿಂದ ಹೊರಗೆ ವ್ಯಾಖ್ಯಾನಿಸುವುದೇ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಇತಿಹಾಸ ಕಾಲದಿಂದಲೂ ನಡೆದುಬಂದಿರುವ ಒಂದು ನಿರ್ದಿಷ್ಟ ಪರಂಪರೆಯ ಪ್ರತಿಫಲ ಎನ್ನಲೂಬಹುದು. ಹಾಗೆಯೇ ಧರ್ಮ ಮತ್ತು ದೈವತ್ವದ ಪರಿಕಲ್ಪನೆಯನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಪರಂಪರೆಯನ್ನೂ ಕಂಡಿದ್ದೇವೆ.

ದೇವಾಲಯಗಳಿಲ್ಲದ ಧರ್ಮವನ್ನು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಸಮಾಜ ತನ್ನ ಅಭ್ಯುದಯವನ್ನು ಕಂಡಿದೆ. ಹಾಗಾಗಿಯೇ ಸ್ಥಾವರದ ಪರಿಕಲ್ಪನೆಯನ್ನೇ ವಿರೋಧಿಸಿ ಜಂಗಮ ಸ್ವರೂಪಿ ಮಾನವತೆಯನ್ನು ಭೋಧಿಸಿದ ತತ್ವಜ್ಞಾನಿಗಳು, ಸುಧಾರಕರು ಇಂದು ನಾಲ್ಕು ಗೋಡೆಗಳ ಸ್ಥಾವರಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ. ಧರ್ಮದ ಪರಿಕಲ್ಪನೆಯನ್ನೇ ಧಿಕ್ಕರಿಸಿದ ತತ್ವಜ್ಞಾನಿಗಳೂ ಯಾವುದೋ ಒಂದು ಧರ್ಮದ ಆವರಣದಲ್ಲಿ ಸಿಲುಕಿದ್ದಾರೆ.

ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ತನ್ನದೇ ಆದ ಪ್ರಭಾವಳಿಯನ್ನು ಸೃಷ್ಟಿಸಿರುವ ಮತಧರ್ಮಗಳನ್ನು ದೈವತ್ವದ ಪರಿಕಲ್ಪನೆಯಿಂದಾಚೆಗೂ ನೋಡಬಹುದು ಎನ್ನುವ ಗ್ರಹಿಕೆ ಇಂದು ಬಹುಶಃ ಅಪಹಾಸ್ಯಕ್ಕೀಡಾಗಬಹುದು. ಅಥವಾ ದೇವರಿಲ್ಲದೆ ಧರ್ಮಕ್ಕೆ ಉಳಿವಿಲ್ಲ ಧರ್ಮ ಇಲ್ಲದೆ ದೈವತ್ವಕ್ಕೆ ಅಸ್ತಿತ್ವವಿಲ್ಲ ಎನ್ನುವ ವಿತಂಡವಾದವನ್ನೂ ಕೇಳಬೇಕಾಗಬಹುದು.

ಇದೇ ಧಾಟಿಯಲ್ಲಿ ಧರ್ಮ ಮತ್ತು ಸಂಸ್ಕøತಿಯನ್ನೂ ತಳುಕು ಹಾಕಿರುವುದು ಭಾರತದ ವೈದಿಕ ಸಂಪ್ರದಾಯದ ಬಳುವಳಿ ಎಂದು ಹೇಳಲು ಹಿಂಜರಿಯಬೇಕಿಲ್ಲ.

ಸಂಸ್ಕತಿ ಎನ್ನುವುದು ಒಂದು ವಿಶಾಲ ತಳಹದಿಯಲ್ಲಿ ಒಂದು ನಿರ್ದಿಷ್ಟ ಭೂ ಪ್ರದೇಶದ ಜನಜೀವನವನ್ನು ಬಿಂಬಿಸುವ ವಿದ್ಯಮಾನ. ಸಂಸ್ಕತಿಯನ್ನು ಒಂದು ದೇಶ, ಖಂಡ, ಜಿಲ್ಲೆ ಅಥವಾ ಪ್ರಾಂತ್ಯಗಳಿಗೆ ಸೀಮಿತಗೊಳಿಸುವುದು ದುಸ್ಸಾಧ್ಯ. ಆದರೂ ಭಾರತದ ಸಾಮಾಜಿಕ ಸಂಕಥನಗಳಲ್ಲಿ ಭಾರತೀಯ ಸಂಸ್ಕತಿ, ಕನ್ನಡ ಸಂಸ್ಕತಿ, ತಮಿಳು ಸಂಸ್ಕತಿ ಎಂಬ ವಿಭಿನ್ನ ಸ್ವರೂಪಗಳ ಬಗ್ಗೆ ವ್ಯಾಖ್ಯಾನಗಳು ಕಾಣಸಿಗುತ್ತವೆ. ವಿಶಾಲ ತಳಹದಿಯಲ್ಲಿ ಒಂದು ಭೌಗೋಳಿಕ ಪ್ರದೇಶದ ಸಮಾನ ಸಾಂಸ್ಕತಿಕ ನೆಲೆಗಳನ್ನು ಕಾಣಲು ಸಾಧ್ಯವೇ ಹೊರತು ಸಾಂಸ್ಕತಿಕ ಸ್ವರೂಪಗಳನ್ನು, ಧೋರಣೆಗಳನ್ನು ಕಾಣಲಾಗುವುದಿಲ್ಲ.

ಈ ದೃಷ್ಟಿಕೋನದಿಂದ ಒಂದು ಸಾಮಾಜಿಕ ಪರಿಸರವನ್ನು ನೋಡಿದಾಗ ಮಾನವೀಯ ಸಂಸ್ಕತಿ ಎನ್ನುವುದು ಸರ್ವವ್ಯಾಪಿಯಾಗಿರುವುದನ್ನು ಕಾಣಬಹುದು. ದುರಂತ ಎಂದರೆ ಭಾರತದ ಶ್ರೇಣೀಕೃತ ಸಮಾಜದಲ್ಲಿ ಈ ಮಾನವೀಯ ಸಂಸ್ಕತಿಯೇ ನಶಿಸಿಹೋಗುತ್ತಿದ್ದು ಮತೀಯ, ಪ್ರಾಂತೀಯ ಮತ್ತು ಭಾಷಿಕ ಸಂಸ್ಕತಿಗಳು ವಿಕೃತವಾಗಿ ಮೆರೆಯುತ್ತಿವೆ.

ಈ ವಿಕೃತಿಯ ಮೂಲವನ್ನು ಶತಮಾನಗಳ ಇತಿಹಾಸ ಇರುವ ವೈದಿಕ ಸಂಪ್ರದಾಯದ ಸಾಂಸ್ಕತಿಕ ಬೇರುಗಳಲ್ಲಿ ಕಾಣಬಹುದು. ಸಂಘಪರಿವಾರದ ಪರಿಭಾಷೆಯಲ್ಲಿ ಹಿಂದೂ ಅಥವಾ ಹಿಂದುತ್ವ ಎಂದು ಕರೆಯಲಾಗುವ ವೈದಿಕ ಪರಂಪರೆ ಧರ್ಮ, ಸಂಸ್ಕತಿ ಮತ್ತು ಮಾನವನ ಸಾಮಾಜಿಕ ಅಸ್ಮಿತೆಯನ್ನು ಒಂದಾಗಿ ಬೆಸೆಯುವ ಪ್ರಯತ್ನವನ್ನು ಇಂದಿಗೂ ಮುಂದುವರೆಸಿರುವುದನ್ನು ಕಾಣಬಹುದು. ಆದ್ದರಿಂದಲೇ ನಮ್ಮ ಶ್ರೇಷ್ಠ ನ್ಯಾಯಾಲಯಗಳೂ ಸಹ ಹಿಂದೂ ಧರ್ಮ ಎಂದರೆ ಜೀವನ ಶೈಲಿ ಎಂದು ಹೇಳುತ್ತಾರೆ.

ಜೀವನ ಶೈಲಿಯಲ್ಲಿ ಒಂದು ವಿಶಿಷ್ಟ ಸಂಸ್ಕತಿಯನ್ನು ಕಾಣುವುದಕ್ಕೂ, ನಿರ್ದಿಷ್ಟ ಧರ್ಮವನ್ನು ಕಾಣುವುದಕ್ಕೂ ಇರುವ ವ್ಯತ್ಯಾಸವೇ ನಮ್ಮ ಸಾಮಾಜಿಕ ಗ್ರಹೀತಗಳನ್ನೂ ನಿರ್ಧರಿಸುತ್ತದೆ. ಭಾರತದ ಸಂದರ್ಭದಲ್ಲಿ ಈ ಗ್ರಹೀತಗಳು ಹೆಚ್ಚಿನ ಮಟ್ಟಿಗೆ ಪೂರ್ವಗ್ರಹಪೀಡಿತವಾಗಿರುವುದರಿಂದಲೇ ಧರ್ಮ ಮತ್ತು ಸಂಸ್ಕತಿಯ ಸಮೀಕರಣವನ್ನು ಪ್ರತಿಯೊಂದು ಹಂತದಲ್ಲೂ ಕಾಣುತ್ತೇವೆ. ಹಾಗಾಗಿಯೇ ಈ ದೇಶದ ಕೃಷಿ ಸಂಸ್ಕತಿಯಲ್ಲಿ ಹಿಂದೂ ಧಾರ್ಮಿಕ ಕಟ್ಟುಪಾಡುಗಳನ್ನು ಹೇರುವುದನ್ನು ಕಾಣಬಹುದು.


ಕೃಷಿಯನ್ನೇ ನಂಬಿ ಬದುಕುವ ಮತ್ತು ಗ್ರಾಮೀಣ ಆರ್ಥಿಕತೆಯ ಅಭ್ಯುದಯಕ್ಕೆ ತನ್ನ ಪರಿಶ್ರಮದ ಮೂಲಕವೇ ಕಾಯಕಲ್ಪ ಒದಗಿಸುವ ಶ್ರಮಜೀವಿಗಳಿಗೆ ಗೋವು ಪವಿತ್ರ ಎನಿಸುವುದಕ್ಕಿಂತಲು ತಮ್ಮ ಜೀವನ ನಿರ್ವಹಣೆಗೆ ಮಾರ್ಗ ತೋರುವ ಕಾಮಧೇನು ಎನಿಸುತ್ತದೆ. ಕೃಷಿ ಕಾರ್ಮಿಕನಿಗೆ , ವ್ಯವಸಾಯಗಾರರಿಗೆ, ಹೈನುಗಾರಿಕೆಯನ್ನೇ ಅವಲಂಬಿಸುವ ಗ್ರಾಮೀಣ ಬಡಜನತೆಗೆ, ಉಳುವ ಯೋಗಿಗೆ ಗೋವು ಒಂದು ಜೀವನದ ಮಾರ್ಗ.

ತಮ್ಮ ಸಾಮಾಜಿಕ ಅಸ್ತಿತ್ವ ಮತ್ತು ಆರ್ಥಿಕ ನೆಲೆಯನ್ನು ರಕ್ಷಿಸುವ ಒಂದು ಅಸ್ತ್ರ. ಇದನ್ನು ಮೀರಿದ ಅರ್ಥವನ್ನು ನೀಡುವುದು ಶ್ರಮಜೀವಿಗಳಿಗೆ ಅಗತ್ಯವೂ ಅಲ್ಲ ಅನಿವಾರ್ಯವೂ ಅಲ್ಲ. ತನಗೆ ಅನ್ನ ನೀಡುವ ಗೋವು ಪೂಜನೀಯವಾದರೂ ಶ್ರಮಿಕನಿಗೆ, ಕೃಷಿಕನಿಗೆ ಅದು ಪಾವಿತ್ರ್ಯತೆಯ ವಸ್ತುವಾಗುವುದಿಲ್ಲ. ಬಿಕರಿ ಮಾಡುವ ಪದಾರ್ಥವೂ ಆಗುವುದಿಲ್ಲ. ಆದರೆ ತನ್ನ ಜೀವನ ನಿರ್ವಹಣೆಗೆ ಹೊರೆಯಾಗುವ ಆಕಳುಗಳನ್ನು ಸಲಹುವ ಸ್ಥೈರ್ಯ ಮತ್ತು ಅನಿವಾರ್ಯತೆ ಯಾವುದೇ ಕೃಷಿಕನಿಗೂ ಇರುವುದಿಲ್ಲ.

ಇಲ್ಲಿ ಗೋವು ಮತ್ತು ಧರ್ಮ ಬೆಸೆಯುವುದಿಲ್ಲ. ಗೋವು ಮತ್ತು ಧಾರ್ಮಿಕ ವಿಧಿವಿಧಾನಗಳು ಬೆಸೆಯುವುದಿಲ್ಲ. ಆದರೆ ಮಾನವ ಸಂಬಂಧಗಳನ್ನು ಬೆಸೆಯುವಂತೆಯೇ ಬಾಂಧವ್ಯ ಜಾನುವಾರು ಮತ್ತು ಕೃಷಿಕರನ್ನು ಬೆಸೆಯುತ್ತವೆ. ಅದು ಆಕಳೇ ಆಗಿರಬೇಕಿಲ್ಲ, ತನ್ನ ಜೀವನದ ಬುನಾದಿಯಂತೆ ಕಾಣುವ ಯಾವುದೇ ಪ್ರಾಣಿ ಕೃಷಿಕನಿಗೆ ಗ್ರಾಮೀಣ ಬಡವನಿಗೆ ಅಸ್ತಿತ್ವದ ಭೂಮಿಕೆಯಾಗಿ ಭಾವನಾತ್ಮಕ ಬೆಸುಗೆ ಹೊಂದಿರುತ್ತವೆ.

ಈ ಬೆಸುಗೆಯನ್ನು ಮತ್ತು ಭಾವನಾತ್ಮಕ ಸಂಬಂಧವನ್ನು ತನ್ನ ಧಾರ್ಮಿಕ ಚೌಕಟ್ಟಿನೊಳಗೆ ಬಂಧಿಸಲು ವೈದಿಕ ಧರ್ಮ ಇತಿಹಾಸ ಕಾಲದಿಂದಲೂ ಯತ್ನಿಸುತ್ತಿದೆ. ಹಾಗಾಗಿಯೇ ವೇದ ಕಾಲದಲ್ಲಿ ಆಹಾರವಾಗಿದ್ದ ಗೋವು ಬೌದ್ಧ ಧರ್ಮದ ಆಗಮನದ ನಂತರ ಪೂಜನೀಯ ದೈವೀಕ ಸ್ಥಾನ ಪಡೆದಿದೆ. ಗೋ ಪಾಲಕರನ್ನು, ಗೋವನ್ನು ಸಾಕಿ, ಸಲಹಿ, ಪೋಷಿಸುವ ಜನಸಮುದಾಯಗಳನ್ನು ನಿಕೃಷ್ಟವಾಗಿ ಕಾಣುವ ಒಂದು ಸಮಾಜಕ್ಕೆ ಸ್ವತಃ ಗೋವು ಪೂಜನೀಯವಾಗಿ, ದೈವೀಕ ಸ್ವರೂಪದಲ್ಲಿ ಕಾಣುವುದು ವಿಡಂಬನೆಯೂ ಹೌದು ವಿಪರ್ಯಾಸವೂ ಹೌದು.

ಸಗಣಿಯಿಂದ ಮಾಡಿದ ಪಿಳ್ಳಾರಿ ಗರ್ಭ ಗುಡಿಯಲ್ಲಿ ದೈವ ಸ್ವರೂಪ ಪಡೆಯುತ್ತದೆ ಆದರೆ ರಸ್ತೆಯ ಮೇಲಿನ ಸಗಣಿ ತ್ಯಾಜ್ಯದಂತೆ ಕಾಣುತ್ತದೆ. ಹಸುಗಳನ್ನು ಸಾಕುವವರಿಗೆ ನಿವೇಶನವನ್ನೇ ನೀಡದ ವಿಪ್ರ ಬಡಾವಣೆಗಳು ಹೇರಳವಾಗಿವೆ. ಗೃಹಪ್ರವೇಶದಲ್ಲಿ ಪಾವಿತ್ರ್ಯತೆಯನ್ನು ಪಡೆಯುವ ಆಕಳು ಕೊಟ್ಟಿಗೆಯಲ್ಲಿ ಅಸಹನೀಯವಾಗುತ್ತದೆ. ಗೋಶಾಲೆಯಲ್ಲಿ ಸಿಪಾಯಿಯಂತೆ ಕಾಣುವ ಗೋವು ತಿಪ್ಪೆಯಲ್ಲಿ ಆಯ್ದು ತಿನ್ನುವಾಗ ಅಸಹನೀಯವಾಗುತ್ತದೆ. ಈ ದ್ವಂದ್ವಗಳ ನಡುವೆಯೇ ವೈದಿಕ ಪರಂಪರೆಯನ್ನು ಸಾಕಾರಗೊಳಿಸಲು ಮುಂದಾಗಿರುವ ಸಂಘಪರಿವಾರ ಗೋವಿನ ಸುತ್ತ ತನ್ನ ರಾಜಕೀಯ ಪ್ರಭಾವಳಿಯನ್ನು ನಿರ್ಮಿಸಿದ್ದರೆ ಅದಕ್ಕೆ ಮೂಲ ಕಾರಣ ಗೋವು ಮತ್ತು ಹಿಂದೂ ಧರ್ಮದ ನಡುವೆ ಹೊಸೆಯಲಾಗಿರುವ ಕೃತಕ ಸೇತುವೆ.


ಈ ಸೇತುವೆಯನ್ನು ಬಳಸಿಯೇ ಸಂಘಪರಿವಾರ ತನ್ನ ಗೋ ಪುರಾಣವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದೆ. ಸಂಘಪರಿವಾರಕ್ಕೂ ಗೋವು ಕೃಷಿಕರಷ್ಟೇ ಅನಿವಾರ್ಯವಾಗಿದೆ. ಕೃಷಿಕ ತನ್ನ ಜೀವನ ನಿರ್ವಹಿಸಲು ಗೋವನ್ನು ಅವಲಂಬಿಸುತ್ತಾನೆ. ಸಂಘಪರಿವಾರ ಅಧಿಕಾರ ಗ್ರಹಣಕ್ಕಾಗಿ ಅವಲಂಬಿಸುತ್ತದೆ. ಆದರೆ ಗೋವಿನ ಅನಿವಾರ್ಯತೆ ಮತ್ತು ಪಾವಿತ್ರ್ಯತೆ ಕೇವಲ ಗೋಮಾಂಸ ಸೇವನೆಗೆ ಸೀಮಿತವಾಗುವುದೇ ಹೊರತು ಗೋವಿನ ಸಂತತಿಯ ಉಳಿವಿಗಾಗಲೀ, ಗೋವಿನ ಸಂತತಿಯ ಬೆಳವಣಿಗೆಗಾಗಲೀ ಅಲ್ಲ.

ಹಾಗಾಗಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಕೇವಲ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುತ್ತಾರೆ. ಸಕ್ರಮವಾಗಿ ಗೋಮಾಂಸ ರಫ್ತು ಮಾಡುವ ಮೂಲಕ ತಮ್ಮ ಬೃಹತ್ ಔದ್ಯಮಿಕ ಸಾಮ್ರಾಜ್ಯ ನಿರ್ಮಿಸಿರುವವರನ್ನು ಮುಟ್ಟುವುದೂ ಇಲ್ಲ. ಇಲ್ಲಿ ಗೋ ಹತ್ಯೆ ಅಪರಾಧವಾಗುವುದಿಲ್ಲ. ಗೋಮಾಂಸ ಸೇವನೆ ಮಾತ್ರ ಅಪರಾಧವಾಗುತ್ತದೆ. ರಫ್ತು ವ್ಯಾಪಾರಕ್ಕಾಗಿ ಗೋಮಾಂಸವನ್ನು ಬಂಡವಾಳ ಮಾಡಿಕೊಳ್ಳುವುದು ಅಪರಾಧವಾಗುವುದಿಲ್ಲ. ಹತ್ಯೆಗಾಗಿ ಗೋವು ಮಾರಾಟ ಮಾಡುವುದು ಅಪರಾಧವಾಗುತ್ತದೆ. ಈ ದ್ವಂದ್ವವನ್ನು ನಿವಾರಿಸಲು ಸಂಘಪರಿವಾರ ದೇಶಪ್ರೇಮ, ರಾಷ್ಟ್ರೀಯತೆ ಮತ್ತು ಗೋವನ್ನು ಸಮೀಕರಿಸಲು ಯತ್ನಿಸುತ್ತದೆ.

ಮನೆಯೊಳಗಿನ ಗೋಮಾಂಸದ ತುಂಡು ಒಂದು ಜೀವ ಹರಣಕ್ಕೆ ಮೂಲವಾಗುತ್ತದೆ ಟನ್‍ಗಟ್ಟಲೆ ಹೊರದೇಶಗಳಿಗೆ ಹೋಗುವ ಗೋಮಾಂಸ ಔದ್ಯಮಿಕ ಉನ್ನತಿಗೆ ಮೂಲವಾಗುತ್ತದೆ. ಅಕ್ಲಾಖ್ , ಪೆಹ್ಲುಖಾನ್ ಅಪರಾಧಿಗಳಾಗುತ್ತಾರೆ ಆದರೆ ಗೋಮಾಂಸ ಸರಬರಾಜು ಮಾರುಕಟ್ಟೆಯ ಅಗ್ರಗಣ್ಯರಾದ ಸುನಿಲ್ ಕಪೂರ್, ಮದನ್ ಅಬಾಟ್ ಮತ್ತು ಎ ಎಸ್ ಬಿಂದ್ರ ಗಣನೆಗೇ ಬರುವುದಿಲ್ಲ. ಏಕೆಂದರೆ ಈ ಉದ್ಯಮಿಗಳ ರಾಷ್ಟ್ರೀಯತೆಯ ಮನೋಭಾವ, ದೇಶಪ್ರೇಮ ಮತ್ತು ಧಾರ್ಮಿಕ ಅಸ್ಮಿತೆಗಳು ಮೇಲುಗೈ ಸಾಧಿಸಿರುತ್ತವೆ.

ದೇಶಪ್ರೇಮ ಮತ್ತು ರಾಷ್ಟ್ರೀಯವಾದ ಪರಸ್ಪರ ಪೂರಕವಾಗಿದ್ದರೂ ಒಂದು ನೆಲೆಯಲ್ಲಿ ವಿಭಿನ್ನ ಮಾನದಂಡಗಳನ್ನು ಹೊಂದಿರುವುದನ್ನು ಅರಿಯದ ಸಂಘಪರಿವಾರ ಈ ಎರಡೂ ವಿದ್ಯಮಾನಗಳನ್ನು ಹೊಸೆಯಲು ಗೋವಿನ ಬಾಲ ಹಿಡಿದಿರುವುದನ್ನು ಬಿಜೆಪಿ ಆಡಳಿತದಲ್ಲಿ ಕಾಣಬಹುದು.

ಹಾಗಾಗಿಯೇ ಗೋವು ಮತೀಯ ರಾಜಕಾರಣದ ರಾಮಬಾಣವಾಗಿ, ಕೋಮು ರಾಜಕಾರಣದ ವಜ್ರಾಯುಧವಾಗಿ, ಚುನಾವಣಾ ರಾಜಕಾರಣದ ಪಾಶುಪಶಾಸ್ತ್ರವಾಗಿ , ಜಾತಿ ರಾಜಕಾರಣದ ಸುದರ್ಶನ ಚಕ್ರವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಈ ಅಸ್ತ್ರಗಳಿಗೆ ಬಲಿಯಾಗುವುದು ಗೋವು ಮತ್ತು ಗೋವನ್ನು ಸಲಹುವ ಕೃಷಿಕರು ಎನ್ನುವ ಪ್ರಜ್ಞೆ ನಾಗರಿಕ ಸಮಾಜಕ್ಕೆ ಇರಬೇಕು.

‍ಲೇಖಕರು admin

June 20, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: