
ರೇಣುಕಾ ಮಂಜುನಾಥ್
“ನಿನಗೆ ಗೊತ್ತಾ ಕಂದಾ , ರಾಮಾಯಣವನ್ನು ಒಂದು ವರ್ಷವೆಲ್ಲಾ ಹೇಳಬಹುದು, ಒಂದು ನಿಮಿಷದಲ್ಲೇ ಹೇಳಬಹುದು…..”
“ಅದು ಹೇಗಪ್ಪಾಜಿ, ಒಂದು ನಿಮಿಷದಲ್ಲಿ ಹೇಳೋದು…?’
“ನೋಡು ಕಂದಾ,
ರಾಮ ನಮ್ಮ ಮನಸ್ಸು, ರಾವಣ ನಮ್ಮ ಬುದ್ದಿ. ನಾವಾಡುವ ಉಸಿರು ಹನುಮಂತ.
ಉಧಾಹರಣೆಗೆ ನಮ್ಮ ಮನಸ್ಸು ಹೇಳುತ್ತೆ ‘ಸಾಕು ನಿದ್ದೆ, ಬೇಗ ಎದ್ದುಬಿಡಬೇಕು ಅಂತ’, ಬುದ್ದಿ ಹೇಳುತ್ತೆ ‘ಮತ್ತಷ್ಟು ಹೊತ್ತು ಮಲಗಬೇಕು’ ಅಂತ. ನಾವು ನಮ್ಮ ಮನಸ್ಸಿನ ಮಾತು ಕೇಳಬೇಕು. ಪ್ರಾಣಾಯಾಮ ಮಾಡುವಾಗ ಮೊದಲು ಉಸಿರನ್ನು ಹೃದಯಕ್ಕೆ ತಲುಪಿಸುತ್ತೇವೆ. ಮನಸ್ಸಿರೋದು ಅಲ್ಲೇ. ಅಲ್ಲಿಂದ ಉಸಿರು ಬಿಡುವಾಗ ಮಿದುಳು ಮೊದಲ್ಗೊಂಡು ದೇಹದ ಎಲ್ಲ ಭಾಗಕ್ಕೂ ತಲುಪಿಸುತ್ತೇವೆ. ಹಾಗಾಗಿ ಮನಸ್ಸು ಹೇಳುವುದನ್ನು ಎಲ್ಲಾ ಕಡೆಗೂ ತಲುಪಿಸಿ ಅದನ್ನು ಕಾರ್ಯಗತಗೊಳಿಸಬೇಕು. ಬುದ್ದಿಯನ್ನು ಮನಸ್ಸಿನಿಂದ ಮಣಿಸಬೇಕು. ಇದೆಲ್ಲವನ್ನೂ ಹನುಮಂತನೆಂಬ ಉಸಿರು ಮಾಡುತ್ತದೆ. ಮಿದುಳಿನಲ್ಲಿರುವ ರಾವಣನೆಂಬ ಬುದ್ದಿಯನ್ನು ನಿಯಂತ್ರಿಸುವ ಬಗೆ ಹೀಗೆ. ಇಷ್ಟೇ ರಾಮಾಯಣ…”
ಅಣ್ಣಾವ್ರು ಮಗ ರಾಘವೇಂದ್ರನಿಗೆ ಹೇಳಿದ್ದನ್ನು ಮೊನ್ನೆ 24ರಂದು ಅವರು ಹಂಚಿಕೊಂಡದ್ದು ಹೀಗೆ.
ಇನ್ನು ಮಕ್ಕಳ ಹ್ಯಾಂಡ್ ರೈಟಿಂಗ್ ಮುಂಚಿನವರಷ್ಟು ಅಂದವಾಗಿ ಏಕಿರುವುದಿಲ್ಲ ಎಂಬುದಕ್ಕೆ ಅಣ್ಣಾವ್ರು ಹೇಳ್ತಿದ್ರಂತೆ,
“ಮಕ್ಕಳನ್ನು ಅಷ್ಟು ಬೇಗ ಶಾಲೆಗೆ ಕಳಿಸಬೇಡಿ, ಆಟ ಆಡಿಕೊಂಡು ಇರೋ ವಯಸ್ಸಲ್ಲಿ ಪೆನ್ ಕೊಟ್ಟು ಅಭ್ಯಾಸ ಮಾಡಿಸಿದರೆ ಮಕ್ಕಳ ಕೈ ಇನ್ನೂ ಬರೆಯುವುದಕ್ಕೆ ಅಣಿಯಾಗಿರೋಲ್ಲ. ಆಡುವ ವಯಸ್ನಲ್ಲಿ ಆಡಿಕೊಂಡಿರಬೇಕು . ಬೇಸಿಗೆಯಲ್ಲಿ ಯಾವ ಕ್ಯಾಂಪ್ ಗಳಿಗೂ ಕಳಿಸಬೇಡಿ. ಬೇಸಿಗೆ ಬಿಸಿಲಿನಲ್ಲಿ ಮಕ್ಕಳು ತಣ್ಣಗೆ ಮನೇಲಿರ್ಲಿ ಅಂತನೇ ರಜೆ ಕೊಡೋದು. ನೀವ್ಯಾಕೆ ಮತ್ತೆ ಅವರಿಗೆ ತಯಾರು ಮಾಡಿ ಹೊರಗೆ ಕಳಿಸ್ತೀರಿ?” ಎಂದೆಲ್ಲಾ ಗದರುತ್ತಿದ್ರಂತೆ!
ಅವರು ವೀರಪ್ಪನ್ ಬಂಧನದಿಂದ ಹೊರಬಂದ ಮೇಲೆ ಅವರಿಗಾದ ನೋವಿನ ಬಗ್ಗೆ ಹೇಳಿದ್ದು…
“ನನಗೆ ನಟಸಾರ್ವಭೌಮ, ಡಾಕ್ಟೊರೇಟ್ ಎಂಬೆಲ್ಲಾ ಬಿರುದುಬಾವಲಿಗಳು ಬಂದಾಗ ‘ನನಗ್ಯಾಕೆ ಬಂತು ‘ ಎಂದು ಕೇಳಿಕೊಂಡಿಲ್ಲ. ಹಾಗೇ ಇದೂ ಸಹ ‘ನನಗ್ಯಾಕೆ ಹೀಗಾಗಬೇಕು’ ಎಂದು ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅವನೆಷ್ಟೇ ಕೆಟ್ಟವನಿದ್ದರೂ ನನಗೆ ಇಷ್ಟು ದಿನ ಊಟ ಹಾಕಿದ್ದಕ್ಕೇ ನಾನು ಜೀವ ಸಹಿತವಾಗಿ ಇಂದು ಮರಳಿ ಬರಲು ಸಾಧ್ಯವಾಯಿತು. ಸಂತೋಷ ಹೇಗೋ ನೋವೂ ಹಾಗೇ….”
ಹೀಗೆ, ಅಂದು ರಾಘವೇಂದ್ರ ರಾಜ್ ಕುಮಾರ್ ಹೇಳುತ್ತಾ ಇದ್ದರೆ ರಾಜ್ ಕುಮಾರ್ ಅವರು ಹೇಳುತ್ತಿದ್ದ ಇಂತಹಾ ವಿಷಯಗಳು ಹೆಚ್ಚು ಪ್ರಚಾರಕ್ಕೆ ಬರಬೇಕು…. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನೇ ಮತ್ತೆ ಮತ್ತೆ ಹಾಕುವುದನ್ನು ಬಿಟ್ಟು ಈ ವಿಷಯಗಳನ್ನೂ ಪದೇಪದೇ ಹಾಕಬೇಕು ಅನಿಸಿತ್ತು.
ನಾನು ಒಮ್ಮೆಯಷ್ಟೇ ಕೇಳಿಸಿಕೊಂಡು, ಈಗ ನೆನಪಿಸಿಕೊಂಡು ಸಾರಾಂಶ ಬರೆದದ್ದು. ಅಸಲಿಗೆ, ರಾಘವೇಂದ್ರ ರಾಜ್ ಕುಮಾರ್ ಇನ್ನೂ ಹೆಚ್ಚು ಸತ್ವಯುತವಾಗಿ, ರಸವತ್ತಾಗಿ, ಅರ್ಥಪೂರ್ಣವಾಗಿ ಎಲ್ಲರೂ ಮನದಟ್ಟು ಮಾಡಿಕೊಳ್ಳಿ ಎಂದು ಹೇಳುತ್ತಲೇ ಜನರೊಡನೆ ಇದನ್ನೆಲ್ಲಾ ಹಂಚಿಕೊಳ್ಳುತ್ತಿದ್ದರು.
ನಂತರ ಮತ್ತೊಮ್ಮೆ ಕೇಳಿ ಬರೆಯೋಣ ಎಂದು ಹುಡುಕಿದರೆ ಯಾವ ಚಾನಲ್ ಸಹಾ ಇದನ್ನು ಮರುಪ್ರಸಾರ ಮಾಡಲಿಲ್ಲ. ಮತ್ತೆ ಪ್ರಸಾರ ಮಾಡಿದರೆ ನನ್ನ ಈ ಪೋಸ್ಟ್ ಎಡಿಟ್ ಆಗಬಹುದು.





0 Comments