ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮನ ಸ್ವಗತಗಳು…

ಸಂತೋಷ ಅಂಗಡಿ

1.

ಬಿಸಿಲು ಉರಿದಂತೆ
ನೆಲವೂ ಉರಿಯುತಿದೆ
ಹೊತ್ತಿ
ಹೊಟ್ಟೆಯ ಮೇಲೆ ಹೊಡೆದವರ
ಹೊಟ್ಟೆ ತಣ್ಣಗಾಗಲಿ.

2.

ಈ ಸಲ
ಪಾನಕ ಕೋಸಂಬರಿಯ
ನೈವೇಧ್ಯವಿಲ್ಲ
ಕಾದ ಹಂಚಿನಂತಾದ
ನೆಲದ ಎದೆಯ
ಮೇಲೆ ಕಲ್ಲಂಗಡಿ ಹಣ್ಣುಗಳ ಎಡೆ

3.

ಯುದ್ಧವಿದು
ಜಗದುದ್ದ ಹಬ್ಬುತಿದೆ
ಕಣ್ಣಹನಿ
ಬೆವರ ಹನಿಯ ಎದುರು
ಯಾವ ಧರ್ಮವಿದೆಯೋ ಕಾಣೇ

4.

ಈಗೀಗ
ಬಿಲ್ಲು ಬಾಣಗಳ
ಹತಿಯಾರಗಳು
ಮಸೆದು ನುಣುಪುಗೊಂಡಿವೆ
ಬಹುಶಃ ರಕ್ತವೇ
ನೊಸಲಿಗೆ ಬೇಕಿರಬಹುದು.

5.

ಬಿಲ್ಲು ಬಾಣಗಳಿಂದ
ಬೇಟೆಯಾಡಿದಾಗಲೂ
ಪ್ರಾಣಿ ಅಸುನೀಗುತ್ತದೆ
ಕತ್ತಿಯಂಚಿಗೆ ಕೊರಳೊಡ್ಡಿದಾಗಲೂ ಕೂಡಾ
ಸಾವ ಪ್ರಾಣಿಗೆ ಮನುಷ್ಯನ
ಒಡಲು ಸೇರಿದ ಧನ್ಯತೆ.

6.

ಹನುಮನುದಿಸಿದ ನಾಡೋ
ರಾಮನುದಿಸಿದ ಬೀಡೋ
ಕೋಟ್ಯಾನು ಕೋಟಿ
ದೇವರು ಹುಟ್ಟಿದ ನಾಡಲ್ಲಿ
ಮನುಷ್ಯರೂ ಹುಟ್ಟಲಿ ಪ್ರಭುವೆ.

‍ಲೇಖಕರು Admin

10 April, 2022

1 Comment

  1. prathibha nandakumar

    ಸೂಪರ್ ಆಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading