"ರಾತ್ರಿ ಹೊತ್ತು ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ"!!

ಬಣ್ಣದ ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ!!

– ಎಸ್ ಜಿ ಶಿವಶಂಕರ್

“ರಾತ್ರಿ ಹೊತ್ತು ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ”
ಅನಂತನ ಮಾತಿಗೆ ನಾನು, ವಿಶ್ವ ಕಕ್ಕಾಬಿಕ್ಕಿಯಾದೆವು! ನಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ!
ಅನಂತ ಹಿಂದೆ ನಮ್ಮ ಜೊತೆಯಲ್ಲಿಯೇ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಧೈರ್ಯ ಮಾಡಿ ಇದ್ದ ಕೆಲಸ ಬಿಟ್ಟು, ಬೆಂಗಳೂರಲ್ಲಿ ಖಾಸಗಿ ಕಾರ್ಖಾನೆಯಲ್ಲಿ ದೊಡ್ಡ ಹುದ್ದೆಗೆ ಸೇರಿದ್ದ. ಇದೀಗ ಮೂರು ತಿಂಗಳ ನಂತರ ಮೈಸೂರಿಗೆ ಬಂದಿದ್ದ. ಅವನನ್ನು ನೋಡಿ ಮಾತಾಡಿಸಿಕೊಂಡು ಹೋಗಲು ನಾವು ಬಂದಿದ್ದೆವು.
“ಏನು? ಇನ್ನೊಂದ್ಸಲ ಹೇಳು”
ಜೋಡಿ ವಾದ್ಯದಂತೆ ನಾನೂ, ವಿಶ್ವ ಒಟ್ಟಿಗೆ ಹೇಳಿದೆವು.
“ಯಾಕೆ ಕಿವಿ ಮುಚ್ಕೊಂಡೈತಾ..?”
“ಹಂಗೇ ಅಂದ್ಕೋ..”
‘ಸರಿಯಾಗಿ ಕೇಳಿಸ್ಕೊಳ್ಳಿ, ಬೆಂಗ್ಳೂರಲ್ಲಿ ರಾತ್ರಿ ಹೊತ್ತು ತಿನ್ನೋಕೆ ಅನ್ನ ಸಿಗೊಲ್ಲ’
ಅನಂತನ ಮಾತಿಗೆ ವಿಶ್ವ ಮೂಗಿನ ಮೇಲೆ ಬೆರಳಿಟ್ಟುಕೊಂಡ! ನಾನು ಹುಬ್ಬೇರಿಸಿದೆ!
‘ಏನೋ..ನಿನ್ನ ಮಾತು..? ನಮ್ಮ ರಾಜ್ಯದ ರಾಜಧಾನಿಗೆ ಅವಮಾನ ಮಾಡ್ತಿದ್ದೀಯ! ಬೆಂಗಳೂರಲ್ಲಿ ಅನ್ನ ಸಿಕ್ಕೊಲ್ಲವಾ..?’
ವಿಶ್ವ ಕೆರಳಿದ.
‘ಅಯ್ಯಾ ಅನಂತ ನಿನ್ನ ಅನಂತ ಅಜ್ಞಾನಕ್ಕೆ ಕನಿಕರವಾಗುತ್ತೆ. ನಮ್ಮ ರಾಜ್ಯಾನ ಬತ್ತದ ಕಣಜ ಅಂತಾರೆ! ನೀನಾಡೋ ಮಾತು ಕೇಳಿಸ್ಕೊಂಡ್ರೆ ಹುಚ್ಚಾ ಅಂತಾರೆ!’
‘ಬೆಂಗಳೂರು ಹೋಟೆಲುಗಳಲ್ಲಿ ರಾತ್ರಿ ಅನ್ನ ಹುಡುಕಿಕೊಂಡು ಹೋಗಲಿ ಅವರಿಗೆ ಹುಚ್ಚು ಹಿಡಿಯುತ್ತೆ’
ಅನಂತನ ಮಾತಿನಲ್ಲಿದ್ದ ಅಖಂಡ ವಿಶ್ವಾಸಕ್ಕೆ ನಾನು, ವಿಶ್ವ ಮುಖಮುಖ ನೋಡಿಕೊಂಡೆವು.
‘ಈ ಮಾತನ್ನ ನೀನು ವಿದೇಶದಿಂದ ಬಂದಾಗಲೋ ಇಲ್ಲಾ ಬಾಂಬೆ-ಡೆಲ್ಲಿಯಿಂದ ಬಂದಗಲೋ ಹೇಳಿದ್ದರೆ ಒಪ್ತಾ ಇದ್ದೋ. ಮೈಸೂರಿಂದ ಕೇವಲ ನೂರಾ ನಲವತ್ತು ಕಿಲೋಮೀಟರು ದೂರದ ಬೆಂಗಳೂರಿಂದ ಬಂದು ಈ ಮಾತು ಹೇಳ್ತಿದ್ದೀಯಲ್ಲ..? ನಿನ್ನ ಮಾತಿಗೆ ಅಳಬೇಕೋ..? ನಗಬೇಕೋ..? ಗೊತ್ತಾಗ್ತಿಲ್ಲ’
ವಿಶ್ವ ಅಣಕಿಸಿದ. ಮೊದಲಿಂದಲೂ ವಿಶ್ವ ಅನಂತನ್ನ ಕಂಡ್ರೆ ಉರಿದು ಬೀಳ್ತಿದ್ದ. ಅನಂತ ವಿಶ್ವನ್ನ ಕಂಡರೆ ಶತೃವನ್ನ ಕಂಡ ಹಾಗೆ ಆಡುತ್ತಿದ್ದ.
‘ಮೈಸೂರಿಂದ ಬೆಂಗಳೂರಿಗೆ ಹೋಗೋ ದಾರೀಲಿ, ಮದ್ದೂರು ತನಕವೂ ರಸ್ತೆ ಎರಡು ಪಕ್ಕದಲ್ಲೂ ಹಸಿರಾಗಿ ಕಳಕಳಿಸೋ ಬತ್ತದ ಬೆಳೆ ನೋಡಿಲ್ವಾ..?’
ನಾನು ವಗ್ಗರಣೆ ಹಾಕಿದೆ. ನಾನು ವಿಶ್ವ ಸರದಿಯ ಮೇಲೆ ರಾಜಕಾರಿಣಿಗಳು ಎದುರಾಳಿ ಪಕ್ಷದ ನಾಯಕನ ಮೇಲೆ ದಾಳಿ ಮಾಡುವಂತೆ ಮಾಡಿದೆವು.
‘ಅದು ಹತ್ತು ವರ್ಷದ ಹಿಂದೆ ಈಗ ಬರೀ, ಡಾಬಾಗಳು, ಹೋಟೆಲುಗಳು, ಬಿರಿಯಾನಿ ಪ್ಯಾರಡೈಸುಗಳು, ಕಾಫಿ ಡೇ, ಮ್ಯಾಕ್ಡೋನಾಲ್ಡ, ಕೆಎಫ್ಸಿ-ಬರೀ ಇಂತಾವೇ ಇರೋದು. ನನ್ನೇನು ಗುಗ್ಗೂ ಅಂದ್ಕೊಂಡಿದ್ದೀರಾ..? ಈಗೆಲ್ಲಿದೆ ಹಸಿರು..? ಇರೋದೆಲ್ಲಾ ಬರೀ ಜಂಕ್ ಫುಡ್ ಜಾಯಿಂಟುಗಳು. ಓಕೆ..ಬೆಟ್ಸ್ ತಗೋತೀರಾ..?’ ಅನಂತ ಚಾಲೆಂಜ್ ಮಾಡಿದ.
‘ಬೆಟ್ಸಾ..? ಯಾತಕ್ಕೋ..?’
ಅವನ ಮಾತು ಅರ್ಥವಾಗದೆ ನಾನೂ ವಿಶ್ವ ಒಟ್ಟಿಗೇ ಕೇಳಿದೆವು.
‘ಬೆಂಗಳೂರಲ್ಲಿ ನಾನು ಇರೋ ಏರಿಯಾದ ಯಾವ ಹೋಟೆಲಿನಲ್ಲೂ ರಾತ್ರಿ ಹೊತ್ತು ಅನ್ನ ಸಿಗೊಲ್ಲಾಂತ ನಾನು ಪ್ರೂವ್ ಮಾಡ್ತೀನಿ’
ಅನಂತ ಮಾತಿಗೆ ವಿಶ್ವ ಕೈಸನ್ನೆಯ ಭಾಷೆ ಪ್ರಯೋಗಿಸಿದ. ತನ್ನ ಬಲಗೈಯನ್ನು ತಲೆಯ ಪಾಶ್ರ್ವಕ್ಕೆ ಹಿಡಿದು ಬೆರಳು ತಿರುಗಿಸಿ ಇವನಿಗೆ ತಲೆಯ ಸ್ಕ್ರೂ ಲೂಸ್ ಆಗಿದೆ ಎಂಬ ಸಂದೇಶ ಮುಟ್ಟಿಸಿದ.
ವಿಶ್ವನ ಅಂಗಿಕ ಅಭಿನಯಕ್ಕೆ ಅನಂತ ಕೆಂಡಾಮಂಡಲನಾದ!
‘ನನಗೆ ಸ್ಕ್ರೂ ಲೂಸ್ ಆಗಿದೆ ಅಂತೀಯ..? ನಿನಗೆ, ನಿಮ್ಮಪ್ಪನಿಗೆ, ನಿಮ್ಮ ತಾತನಿಗೆ ಸ್ಕ್ರೂ ಲೂಸ್ ಆಗಿರೋದು..’
ಭಯಂಕರ ಕೋಪದೊಂದಿಗೆ ವಿಶ್ವನ ಮೇಲೆ ಎಗರಿದ ಅನಂತ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದಕ್ಕೆ ನಾನು ಹುಷಾರಾದೆ.
‘ಕೂಲ ಡೌನ್ ಅನಂತು…ನಾವು ಕುಚಕೂ ಫ್ರೆಂಡ್ಸ್ ಅಲ್ಲವೇನೋ.? ತಮಾಷೆಗೆ ಹೀಗೆಲ್ಲಾ ಕಾಲೆಳೆಯೋದು ಮಾಮೂಲಲ್ವೇ..? ತಮ್ಮನ ಮದುವೇಗೆ ಬಂದಿದೀಯ..ಈ ಸಮಯದಲ್ಲಿ ಯಾಕೆ ಜಗಳ..?’
ಅನಂತನನ್ನ ಸಮಾಧಾನಪಡಿಸಿದೆ. ಅವನ ಮುಖದ ಬಿಗಿ ಸಡಿಲವಾಯಿತು.
‘ವಿಶ್ವಾ..ಹಳೇದೆಲ್ಲಾ ಮರ್ತುಬಿಡು. ನಾನೀಗ ಮೊದಲಿನ ಅನಂತು ಅಲ್ಲ. ಎಸ್.ಕೆ.ಇಂಡಸ್ಟ್ರೀಸ್ ಜನರಲ್ ಮ್ಯಾನೇಜರ್ ಅನಂತರಾಮ್’
ಅನಂತ ಜಂಬದ ಕೋಳಿಯಾಗಿದ್ದ. ಅವನ ಮಾತಿಗೆ ವಿಶ್ವ ನನ್ನತ್ತ ಗುರಾಯಿಸಿದ.
‘ತೆಪ್ಪಗಿರು, ಮತ್ತೆ ರಾದ್ಧಾಂತ ಶುರು ಮಾಡಬೇಡ!’ ಕಣ್ಣಲ್ಲೇ ವಿಶ್ವನಿಗೆ ಹೇಳಿದೆ.
ಕೆಲ ಕ್ಷಣಗಳ ಹಿಂದೆ ಅನಂತನ ಧ್ವನಿ ತಾರಕ್ಕೇರಿದ್ದಕ್ಕೋ ಏನೋ ಶ್ರೀಮತಿ ಅನಂತು ಒಮ್ಮೆ ಡ್ರಾಯಿಂಗ್ ರೂಮಿನ ಬಾಗಿಲಲ್ಲಿ ಇಣುಕಿ ನೋಡಿ ಹೋದರು.
‘ಹೇಗಿದೆ ನಿನ್ನ ಹೊಸಾ ಫ್ಯಾಕ್ಟರಿ..?”
ಅನಂತನಿಗೆ ಚಾಲೆಂಜ್ ವಿಷಯ ಮರೆಸಿ, ಮಾಮೂಲಿನ ಹದಕ್ಕೆ ತರಲು ಪ್ರಯತ್ನಿಸಿದೆ.
‘ತುಂಬಾ ಚೆನ್ನಾಗಿದೆ. ಐ ರಿಯಲೀ ಎಂಜಾಯ್ ವರ್ಕಿಂಗ್ ದೇರ್. ಆ ಹಳೇ ಫ್ಯಾಕ್ಟ್ರೀಲಿ ನಿಮ್ಮ ಜೊತೆ ಇದ್ದಿದ್ದಕ್ಕೆ ಈಗ ರಿಪೆಂಟ್ ಮಾಡ್ಕೋತ್ತಿದ್ದೀನಿ’
ಅನಂತು ಶಾಲಿನಲ್ಲಿ ಸುತ್ತಿ ನಮ್ಮ ಭುಜ ತಟ್ಟಿದ!
ವಿಶ್ವ ಭುಸ್ಸೆಂದ!
‘ನಾವೂ ತುಂಬಾ ಚೆನ್ನಾಗಿದ್ದೀವಿ. ವಿ ರಿಯಲೀ ಎಂಜಾಯ್ ವರ್ಕಿಂಗ್ ವಿತೌಟ್ ಯೂ’
ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಟ್ಟ ವಿಶ್ವ!
ಅನಂತನಿಗೆ ಕೋಪ ನೆತ್ತಿಗೇರಿದಂತೆ ಕಂಡಿತು. ಅವನ ಕಣ್ಣುಗಳು ಕೆಂಪಾದುವು. ಮುಖದ ಸ್ನಾಯುಗಳು ತಕಪಕ ಕುಣಿದವು! ಹಳೆಯ ತಮಿಳು ಸಿನಿಮಾದ ನಟನೊಬ್ಬನನ್ನು ನೆನಪಿಗೆ ತಂದವು!
‘ಅಂದ್ರೆ ಅನಂತು ಈಗ ಮೊದಲಿನಷ್ಟು ವರ್ಕ್ ಲೋಡ್ ಇಲ್ಲ! ಆರ್ಡರ್ಸ್ ಕಮ್ಮಿಯಾಗಿದ್ದಾವೆ. ಅದಕ್ಕೇ ಎಲ್ಲಾ ರಿಲ್ಯಾಕ್ಸ್ ಆಗಿದ್ದೀವಿ’

ತೇಪೆ ಹಚ್ಚುವ ಪ್ರಯತ್ನ ಮಾಡಿದೆ.
ಪರಿಸ್ಥಿತಿ ಅಷ್ಟೋ ಇಷ್ಟೋ ಸುಧಾರಿಸಿದಂತೆ ಕಂಡಿತು.
‘ಸಾಕು ನಡಿಯೋ..ಇವನತ್ರ ಏನು ಮಾತು? ಮೊದಲೇ ಜಂಭದ ಕೋಳಿ’
ವಿಶ್ವ ನನ್ನ ಪಕ್ಕೆ ತಿವಿದು ಪಿಸುಗುಟ್ಟಿದ.
‘ಸರಿ ಅನಂತ, ನೀನು ನಿನ್ನ ಕೆಲ್ಸ ಚೆನ್ನಾಗಿರೋದು ಕೇಳಿ ಸಂತೋಷವಾಯ್ತು. ನಾವಿನ್ನು ಬರ್ತೀವಿ’
ನಾನು ವಿಶ್ವ ಸೋಫಾದಿಂದ ಎದ್ದೆವು.
‘ಅರೆ, ಕಾಫಿ ಕುಡೀದೆ ಹೋಗ್ತೀರಾ..? ಅಪರೂಪಕ್ಕೆ ಸ್ನೇಹಿತರು ಸೇರಿದ್ದೀರಾ..ಕೂತು ಆರಾಮವಾಗಿ ಮಾತಾಡಿ’
ಕಾಫಿ ಟ್ರೇ ಹಿಡಿದು ಬಂದ ಅನಂತನ ಶ್ರೀಮತಿ ಹೇಳಿದರು.
ಎದ್ದಿದ್ದವರು ಮತ್ತೆ ಕೂತೆವು! ಮುಂದೇನಾಗುವುದೋ ಎಂಬ ಆತಂಕ ನನ್ನನ್ನು ಕಾಡಿತು.
ಅನಂತನ ಮೂಡು ಸರಿ ಇರಲಿಲ್ಲ; ವಿಶ್ವನೂ ಅಷ್ಟೆ! ವಿಶ್ವನ ಮಾತಿಗೆ ಅನಂತನ ಮೂಡ್ ಕೆಟ್ಟಿತೋ ಇಲ್ಲಾ ಅನಂತನ ಮಾತಿಗೆ ವಿಶ್ವನ ಮೂಡ್ ಕೆಟ್ಟಿತೋ ಗೊತ್ತಾಗಲಿಲ್ಲ!
‘ತ್ಯಾಂಕ್ಸ್’ ಕಾಫಿ ಕಪ್ಪು ಕೈಗಿತ್ತ ಅನಂತನ ಮಡದಿಗೆ ಹೇಳಿದೆ.
‘ಅಯ್ಯೋ ಇಷ್ಟಕ್ಕೇ ತ್ಯಾಂಕ್ಸಾ..? ಊಟ ಮಾಡ್ಕೊಂಡು ಹೋಗೋವಾಗ ಈ ಮಾತು ಹೇಳಿ” ಎನ್ನಬೇಕೆ ಆಕೆ..?
ನನ್ನ ಹಣೆ ಬೆವರಿತು. ಊಟದವರೆಗೂ ಅಲ್ಲೇ ಉಳಿದರೆ ವಿಶ್ವ ಮತ್ತು ಅನಂತ ಕಠಾರಿ ವೀರರಂತೆ ಕತ್ತಿ ವರೆಸೆ ಆಡ್ತಾರೆ ಎನ್ನಿಸಿತು.
‘ಹೋಗ್ಲಿ ಬಿಡೆ ಅವರನ್ನ ಯಾಕೆ ಹಿಂಸೆ ಮಾಡ್ತೀಯಾ..?’ ಅನಂತ ಎಡಬಿಡಂಗಿಯ ಮಾತಾಡಿದ.
‘ಎನ್ನಾಂಗೋ..? ಗೆಸ್ಟಿಕಿ ಉಪಚಾರ ಪಂಡ್ರುದು ಹಿಂಸೆಯಾ..?’
ದುಸುಭುಸು ಮಾಡುತ್ತಾ ಆಕೆ ಒಳಗೆ ಹೋದರು.
ನಮ್ಮಿಬ್ಬರ ದೆಸೆಯಿಂದ ದಂಪತಿಗಳ ನಡುವೆಯೂ ಕಿಡಿ ಹತ್ತಿದಂತಿತ್ತು! ಆದಷ್ಟು ಬೇಗ ಜಾಗ ಖಾಲಿ ಮಾಡಿದರೆ ಒಳ್ಳೆಯದು ಎನ್ನಿಸಿ ವಿಶ್ವನಿಗೆ ಸನ್ನೆ ಮಾಡಿದೆ.
‘ತಥ್’ ಎಂದು ಯಾರನ್ನೋ ಶಪಿಸಿದ ವಿಶ್ವ.
‘ಯಾಕೋ.? ಏನಾಯ್ತೋ..?” ಇನ್ನೇನೋ ಹೊಸ ಗ್ರಹಚಾರ ಎಂದು ನಾನು ಹೌಹಾರಿದೆ.
‘ಬಿಸಿ ಕಾಫಿ’
ವಿಶ್ವ ಬೇಗನೆ ಕಾಫಿ ಕುಡಿಯಲು ಹೋಗಿ ತುಟಿ ಸುಟ್ಟುಕೊಂಡಿದ್ದ!
ಅನಂತ ಕೆಟ್ಟದಾಗಿ ನಕ್ಕ! ವಿಶ್ವ ಕೆಕ್ಕರಿಸಿ ನೋಡಿದ.
ಇಬ್ಬರೂ ದೃಷ್ಟಿ ಯುದ್ಧ ಮಾಡುತ್ತಲೇ ಕಾಫಿ ಮುಗಿಸಿದರು.
‘ತ್ಯಾಂಕ್ಸ್ ಫಾರ ದಿ ಕಾಫಿ, ನಿನ್ನ ಶ್ರೀಮತೀಗೂ ಹೇಳು, ನಾವು ಹೊರಡ್ತೀವಿ..ಇನ್ನೂ ಇರ್ತೀಯಲ್ಲ..?’ ಉಪಚಾರ ಮಾತಾಡಿದೆ.
‘ಇರ್ತೀನಿ ಆದ್ರೆ ಫ್ರೀಯಾಗಿರೊಲ್ಲ..’
ವಿಶ್ವನ ಕಡೆ ನೋಡುತ್ತಾ ಕೆಣಕುವಂತೆ ಹೇಳಿದ ಅನಂತ. ಪುಣ್ಯಕ್ಕೆ ವಿಶ್ವ ಪ್ರತಿಕ್ರಿಯೆ ತೋರಿಸಲಿಲ್ಲ!
‘ಒಟ್ಟಿನಲ್ಲಿ ಬೆಂಗ್ಳೂರಲ್ಲಿ ಚೆನ್ನಾಗಿದ್ದೀಯಲ್ಲ..ಅದೇ ನಮಗೆ ಸಂತೋಷ’
ಡ್ರಾಯಿಂಗ್ ರೂಮಿನ ಬಾಗಿಲ ಬಳಿ ಬಂದಾಗ ಕೊನೆಯ ಮಾತೆನ್ನುವಂತೆ ಹೇಳಿದೆ.
‘ಎಲ್ಲಾ ಚೆನ್ನಾಗಿದೆ, ಅದ್ರೆ ಬೆಂಗಳೂರಲ್ಲಿ ರಾತ್ರಿ ಊಟಕ್ಕೆ ಅನ್ನ ಸಿಕ್ಕೊಲ್ಲ’
ಅನಂತನ ಕೊನೆಯ ಮಾತಿಗೆ ವಿಶ್ವ ಬಾಂಬಿನಂತೆ ಸಿಡಿದ!
‘ಯಾವ ಮುಠ್ಠಾಳಾನೂ ಈ ಮಾತು ಹೇಳೊಲ್ಲ’
‘ಏನೋ ಕಮಂಗಿ, ನಾನು ಮುಠ್ಠಾಳಾನಾ..? ನೀನು ಮುಠ್ಠಾಳ. ತಗೋ ಬೆಟ್ಸ್, ನಾನು ಪ್ರೂವ್ ಮಾಡ್ತೀನಿ! ಎಷ್ಟು ಲಕ್ಷ ಬೆಟ್ ಮಾಡ್ತೀಯ..?’
ಅನಂತ ಚಾಲೆಂಜ್ ಮಾಡಿದ.
ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸಿದ್ದವು!
‘ವಿಶ್ವ ನಡಿ, ಈ ಬೆಟ್ಟಿಂಗ್ ರಂಪ ಎಲ್ಲಾ ಯಾಕೆ.?’
ಅವಸರಿಸಿದೆ.
‘ಇರೋ ಸ್ವಲ್ಪ! ಈ ಜಂಭದ ಕೋಳಿ ಪುಕ್ಕಾ ತರೀದಿದ್ರೆ ನಾನು ವಿಶ್ವನೇ ಅಲ್ಲ!’
‘ನೀನು ಮೀಸೆ ಬೋಳಿಸೋ ಹಾಗೆ ಮಾಡದಿದ್ದರೆ ನಾನು ಅನಂತನೇ ಅಲ್ಲ!’
ಅನಂತ ವೀರಾವೇಶದಿಂದ ಫೂತ್ಕರಿಸಿದ.
ನಾನು ತ್ರಿಶಂಕುವಿನ ಸ್ಥಿತಿ ತಲುಪಿದ್ದೆ! ಯಾರಿಗೆ ಸಮಾಧಾನ ಹೇಳಲಿ..? ನನ್ನ ಮಾತು ಕೇಳುವವರು ಯಾರು..? ಕೊನೆಗೆ ಆದದ್ದಾಗಲೀ ಎಂದು ತೀರ್ಮಾನಿಸಿ ತಟಸ್ಥನಾಗಿಬಿಟ್ಟೆ!
‘ನೀನು ಸೋತರೆ ತಲೆ ಬೋಳಿಸ್ಕೋಬೇಕು! ಯಾಕೇಂದ್ರೆ ನಿನಗೆ ಮೀಸೇನೇ ಇಲ್ಲವಲ್ಲ..?’ ವಿಶ್ವ ಗಹಗಹಿಸಿ ನಕ್ಕ!
‘ಆಯ್ತು, ನಾನು ಪ್ರೂವ್ ಮಾಡಿದರೆ ನಿನ್ನ ಹಲ್ಕಟ್ ಮೀಸೆ ದಾಡೀನ ಸಾರಿ ಫ್ರೆಂಚ್ ಕಟ್ ಮೀಸೆ ದಾಡೀನ ಬೋಳಿಸಬೇಕು’ ಅನಂತ ಕರಕರ ಹಲ್ಲು ಮಸೆದ.
‘ಓ.ಕೆ’
‘ಓ.ಕೆ’
ಅಖಾಡ ಸಿದ್ಧವಾಗಿಬಿಟ್ಟಿತು! ಜಟ್ಟಿಗಳೂ ಸಿದ್ಧವಾಗಿದ್ದರು!
‘ಯಾವತ್ತು ಬೆಂಗ್ಳೂರಿಗೆ ಹೋಗೋದು..?’ ವಿಶ್ವ ಕೇಳಿದ.
‘ಬೆಂಗ್ಳೂರಿಗೆ ಯಾಕೆ ? ನನ್ನ ಹೆಂಡತಿ ಕೇಳಿದರೆ ಸಾಕು ಸತ್ಯಾಂಶ ಈಚೆ ಬರುತ್ತೆ!’
‘ಓ.ಕೆ ಮಧ್ಯ ಯಾವ ಕಾರಣಕ್ಕೂ ನೀನು ಮೂಗು ತೂರಿಸಬಾರದು’
‘ಸರಿ, ಒಪ್ಪಿದ್ದೀನಿ’ ಅನಂತ ಒಪ್ಪಿಗೆ ಸೂಚಿಸಿದ.
‘ನೀನೇ ರೆಫರಿ’
ವಿಶ್ವ ಹೇಳಿದಾಗ ನಾನು ಮಟ್ಟಿಬಿದ್ದೆ! ತಲೆ ಗಿರ್ರೆಂದಿತು! ಯಾರ ಪರ ತೀರ್ಪು ಕೊಟ್ಟರೂ ತೊಂದರೆ ಕಟ್ಟಿಟ್ಟದ್ದು!
‘ನನಗೆ ಅರ್ಜಂಟು ಕೆಲಸ ಇದೆ’ ತಪ್ಪಿಸಿಕ್ಕೊಳ್ಳಲು ಪ್ರಯತ್ನಿಸಿದೆ!
‘ನಿನ್ನ ಅರ್ಜಂಟು ಕೆಲಸ ನನಗೆ ಗೊತ್ತಿಲ್ಲವಾ..? ಆಕಾಶ ಕಳಚಿ ಬೀಳೊಲ್ಲ! ತೆಪ್ಪಗೆ ಕೂತ್ಕೋ’ ವಿಶ್ವ ನನ್ನ ಭುಜ ಅದುಮಿದ.
ಇಬ್ಬರೂ ಜಟ್ಟಿಗಳು ದೃಷ್ಟಿ ಯುದ್ಧ ಮಾಡಿದರು. ಪರಸ್ಪರ ಗುರಾಯಿಸಿ, ಕಣ್ಣ್ಣು ಕೆಕ್ಕರಿಸಿದರು, ಹಲ್ಲು ಮಸೆದರು.
‘ಎನ್ನಡೀ..’ ಅನಂತ ಕೂಗು ಹಾಕಿದ.
‘ಎನ್ನಾಂಗೋ..?’ ಮಾತಿನ ಜೊತೆಗೇ ಬಂದರು ಅನಂತನ ಶ್ರೀಮತಿ!
‘ಅವರು ಕೇಳೋ ಪ್ರಶ್ನೆಗೆ ಉತ್ತರ ಕೊಡು’ ಪತ್ನಿಗೆ ಆಜ್ಞೆ ಮಾಡಿದ ಅನಂತ!
‘ಎನ್ನಾ ಪ್ರಚ್ಚಿನೆ..? ಎನ್ನಾ ನಡೆಂದಿರಿದಿ ಇಂಗೆ..? ಫ್ರೆಂಡ್ಸ್ ತುಂಬಾ ಟೈಮಾದ ಮೇಲೆ ಮೀಟ್ ಮಾಡ್ತಿದ್ದೀರಿ..ಪೇಸರಿಂಗೋ..ಇಲ್ಲಾ..ಸಂಡೇ ಪೋಡಿರಿಂಗೋ..’
ತಮಿಳ್ಗನ್ನಡದಲ್ಲಿ ಆಕೆ ಆಕ್ಷೇಪಿಸಿದರು.
‘ಅದೆಲ್ಲಾ ಆಮೇಲೆ..ನೀನು ಪ್ರಶ್ನೆ ಕೇಳು..’ ಅನಂತ ನನಗೆ ಆರ್ಡರ್ ಮಾಡಿದ.
‘ಬೆಂಗಳೂರಲ್ಲಿ ನೀವಿರೋ ಜಾಗ ಯಾವುದು..?’ ರೆಫರಿಯಾಗಿ ಕರ್ತವ್ಯ ನಿರ್ವಣೆಗೆ ಅಣಿಯಾದೆ.
‘ಐ.ಟಿ.ಪಿ.ಎಲ್ ಹತ್ತಿರ, ಕುಂದ್ಲಳ್ಳಿ ಗೇಟು’
‘ಅಲ್ಲಿ ರಾತ್ರಿ ಊಟ ಮಾಡ್ಬೇಕೂಂದ್ರೆ ಹೋಟೆಲುಗಳಲ್ಲಿ ಏನೇನು ಸಿಗುತ್ತೆ..?’
‘ಅಯ್ಯಯ್ಯಾ? ಅಲ್ಲಿರೋವೆಲ್ಲಾ ನಾನ್ ವೆಜ್ ಹೋಟೆಲ್ಸ್. ದೇಶದ ಎಲ್ಲಾ ಕಡೆಯಿಂದ ಐ.ಟಿ, ಬಿ.ಟಿ ಕಂಪೆನಿಗಳಿಗೆ ಬಂದು ಸೇರ್ಕೊಂಡಿದ್ದಾರೆ. ಬೆಂಗಾಲಿ, ಅಸ್ಸಾಮಿ, ಯು.ಪಿ, ಎಂ.ಪ, ಆಂಧ್ರ, ತಮಿಳ್ನಾಡು, ಕೇರಳ-ಎಲ್ಲಾ ಬಂದು ಬೆಂಗ್ಳೂರಲ್ಲಿ ಜಮಾಯ್ಸಿದ್ದಾರೆ! ಅವರಿಗೆ ಬೇಕಾದ್ದೆಲ್ಲಾ ಅಲ್ಲಿ ಸಿಗುತ್ತೆ! ಹೆಚ್ಗೆ ಎಲ್ಲಾ ನಾನ್ವೆಜ್ಜೇ! ಆದರೂ ವೆಜ್ ಬೇಕಂದ್ರೆ ಗೋಬಿ, ನೂಡಲ್ಸ್, ಪರಾಟ, ನಾರ್ತ್, ಬೆಂಗಾಲೀ, ಚೈನೀಸ್ ಎಲ್ಲಾ ಸಿಗುತ್ತೆ, ಆದ್ರೆ ಕುಕ್ಕೂ, ಸೌಟು, ಪಾತ್ರೆ ಎಲ್ಲಾ ಕಾಮನ್’
‘ಸರಿ, ಊಟಕ್ಕೆ ಅನ್ನ ಬೇಕೂಂದ್ರೆ..?’
‘ಅಯ್ಯೋ..ಅನ್ನ ಮಾತ್ರ ಸಿಗೊಲ್ಲ, ಮಿಕ್ಕದ್ದೆಲ್ಲಾ ಸಿಗುತ್ತೆ!’
‘ಅಲ್ಲಮ್ಮಾ, ನಮ್ಮ ಸಂಪ್ರದಾಯದ ಅನ್ನ, ಸಾಂಬಾರ್, ರಸಂ-ಇವೆಲ್ಲಾ..?’
‘ಅದೆಲ್ಲಾ ಇಲ್ಲ. ಅಲ್ಲ್ಲಿರೊ ಎಲ್ಲಾ ಹೊಟೆಲಲ್ಲೂ ಕೇಳಿದೀವಿ. ಎಲ್ಲೂ ಈವರೆಗೆ ಅನ್ನವೇ ಸಿಕ್ಕಿಲ್ಲ! ಪ್ರಪಂಚದ ಎಲ್ಲಾ ಅಡಿಗೇನೂ ಸಿಕ್ಕುತ್ತೆ! ಆದ್ರೆ ಅನ್ನ ಮಾತ್ರೆ ಸಿಕ್ಕೊಲ್ಲ’
ರೆಫರಿಯಾಗಿ ನನ್ನ ಕರ್ತವ್ಯ ಮುಗಿದಿತ್ತು!
‘ನನ್ನ ತಲೆ ಉಳೀತು’ ಅನಂತ ಹೆಮ್ಮೆಯಿಂದ ಬೀಗಿದ.
ವಿಶ್ವ ನಿಂತಲ್ಲೇ ಚಡಪಡಿಸಿದ.
‘ಜಡ್ಜ್ಮೆಂಟ್ ಪ್ಲೀಸ್..?”
ಅನಂತ ವಿಜಯದ ನಗೆ ಬೀರುತ್ತಾ ಕೇಳಿದ.
ವಿಶ್ವನ ವಿರುದ್ಧದ ಜಡ್ಜಮೆಂಟ್ ಕೊಡಬೇಕಾದದ್ದು ನೆನಸಿ ಬವಳಿ ಬಂದಂತಾಗಿ ಸೋಫಾದಲ್ಲಿ ಕುಸಿದೆ!
‘ಅಯ್ಯಯ್ಯೋ ಅವರಿಗೆನ್ನಾ ಆಚಿ..? ನೀವೇನು ಮಾತಾಡ್ತಿದ್ದೀರೋ ಇಲ್ಲಾ ಜಗಳ ಆಡ್ತಿದ್ದೀರೋ..?’
ಚಿಕ್ಕ ಮಕ್ಕಳಿಗೆ ಹೇಳುವಂತೆ ಆಕೆ ವ್ಯಂಗ್ಯವಾಗಿ ಹೇಳಿದ್ದು ನನ್ನ ಕಿವಿಗೆ ಬಿತ್ತು!
 

‍ಲೇಖಕರು G

May 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: