ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾತ್ರಿಯಿಡೀ ಸುಟ್ಟ ಕವಿತೆ..

ಅಭಿಷೇಕ್ ವೈ.ಎಸ್.

ಖಾಲೀ
ಕೋಣೆಯ ತುಂಬಾ
ವೈನ್ ಘಮ;
ಬಿಡಲೇಬಾರದು
ದಫನವಾಗದೇ
ಅಳಿದುಳಿದ ನೆನಪುಗಳೊಂದಿಗೆ
ಕುಡಿದು ಮತ್ತೇರಿಸಿಕೊಂಡು
ರಾತ್ರಿಯಿಡೀ
ಕವಿತೆಯನ್ನೇ
ಸುಟ್ಟು ಬೆಚ್ಚಾಗಾಗಬೇಕು..

ಮಿತಿಯಿಲ್ಲದ ಆಸೆಗಳಿಗೀಗ
ರೆಕ್ಕೆಪುಕ್ಕಗಳು ಮೂಡಿ
ಯಾವುದೋ ಊರ
ಗುಬ್ಬಿಗಳಾಗಿ
ಯಾರದೋ ಮನೆಯ ಹಜಾರದಲ್ಲಿ
ನೆನಪಿನ ಕಾಳುಗಳನ್ನು ಮೇಯುತ್ತಿವೆ..

ಇಲ್ಲಿ:
ಯಾವುದರ ಪರಿವಿಲ್ಲದೆ
ತಣ್ಣಗೆ ಅಕ್ವೇರಿಯಮ್ಮಿನ ಗಾಜಿನೊಳಗೆ
ಈಜುವ ಮೀನುಗಳು ನಿರ್ಭಿಡೆಯಿಂದ
ಈಗೀಗ
ನನ್ನನ್ನು ಪ್ರಶ್ನಿಸುತ್ತವೆ..
ರೋಗಹಿಡಿದ ಮುದುಕನಂತಾದ
ಜೀ಼ರೋ ಕ್ಯಾಂಡಲು ಬಲ್ಬೂ
ಕಣ್ಣು ಬಿಡಲು ನರಳುತ್ತದೆ..
ಈ ಕತ್ತಲ ವಾರಸುದಾರನಾರು?

ನಕ್ಷತ್ರಗಳನ್ನೇ ಕ್ಯಾನ್ವಾಸಿಗೆ
ಇಳಿಸಿದ ಚಿತ್ರಕಾರನ
ಚಿತ್ರಗಳು ಆಗಾಗ್ಗೆ ಜೀವ ತುಂಬುತ್ತವೆ.
ಹಳೆವರ್ಷದ ರಾತ್ರಿಗಳನ್ನು
ಹೇಗೋ ನೀಗಿಕೊಂಡು
ಯೋನಿಯಂಥಾ ನಿನ್ನ
ಕರುಣೆಯ ಸೆಲೆಯೊಳಗೆ
ಬಂಧಿಯಾದ ನಾನು
ಬಿಡುಗಡೆಗೊಳ್ಳುವುದು
ತೀರಾ ಅನುಮಾನ…!!

‍ಲೇಖಕರು avadhi

5 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading