ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ಯೋಸ್ತವ ಜೋರೇನ್ಲಾ..

-ಅರಬಗಟ್ಟೆ ಅಣ್ಣಪ್ಪ

ಶುಭಾಶಯ!

ರಾಜ್ಯೋಸ್ತವ
ಜೋರೇನ್ಲಾ ಪೇಟೆನಾಗೆ

ತವ ಅಲ್ಲಲೇ ಸವವಂತೆ ಕಣ್ಲಾ

ಅಂತೆ ಕಂತೆ ಯಾವನ್ಗ್ಲಾ ಬೇಕು
ಸುಬಾಸಯ ಕಣಾ!

ಅಯ್ಯೋ ನಿನ್ ಮನೆ ಕಾಯೋಗ
ವಾಟ್ ಎ ಸ್ಟುಫಿಡಿಟಿ!
ಶುಭಾಶಯ ಕಣ್ಲಾ, ಅದು ಶುಭ+ಆಶಯ!

ಹಂಗಾರೆ ನಾವು ಕನ್ನಡಬ್ಬ
ಮಾಡಂಗಿಲ್ಲ ಅಂತಾತು!

ಲೇ ಅದು ಹಬ್ಬ ಕಣಾ
ಅಬ್ಬಬ್ಬ ಮಾಡಿಟ್ಟೆಲ್ಲೋ
ಯೂಸ್‌ಲೆಸ್ ಫೆಲೋ!

ಏನ್ಲಾ ನೀನು ಎಲ್ಲಾದ್ಕೂ ಕಲ್ಲಾಕ್ತೀ?
ನಾವೆಂಗ್ಲ ಉಸ್ತವ ಮಾಡೋದು!?

ಅಯ್ಯೋ ನಿಮ್ಮss, ನೀನೀಗೇ
ಮಣ್ಣಾಕೋ ಬದ್ಲು
ಸುಮ್ಕಿರೋದೇ ದೇಶಸೇವೆ ಕಣಾ!

ನಿಂಗಿವೆಲ್ಲಾ ಹೆಂಗ್ಲಾ ಗೊತ್ತು!?

ನಾನಿದರಾಗೆ ಎಕ್ಸ್‌ಫರ್ಟು ಕಣ್ಲಾ
ನಂದು ಟೋಟಲೀ ಕನ್ನಡ
ಎನಿ ವೇ ಹ್ಯಾಪಿ ರಾಜ್ಯೋತ್ಸವ ಮಂಕೆ!

ಎರೆಮಣ್ಣೆಂದಾರ
ಮುಟ್ಟಿಯೆನ್ಲಾ?

ಅದೆಂತದ್ಲಾ
ಕರಿಮಣ್ಕೆಸ್ರು!

ಕೋಲಾಟ ತಮಟೆ ಡೊಳ್ಳಿಗೆ
ಹೆಜ್ಜೆ ಹಾಕಿಯೇನಾ?

ಅದೇನ್ಲಾ
ಡೊಂಬರಾಟ!

ನೀನೆಂತಾ ಕನ್ನಡಿಗನಾ….!?

ಹೇ ಮ್ಯಾನ್ ಐ ಯಾಮ್
ಸೂಪರ್ ಕನ್ನಡಿಗಾ ಯೂ ನೌ!
ನೀ ಮೊದ್ಲು ಭಾಷೆ ಸರಿ ಮಾಡ್ಕೋ

ಏನ್ಲಾ ಹಿಂಗಂದು ಬಿಟ್ಟೆ
ನೀ ಕನ್ನಡದಾಗೆ ಉಸಿರಾಡಿದ್ರೆ
ನನ್ ರೈತದಾಗೇ ಕನ್ನಡವೈತ್ಲಾ!

ಲೇ ನಂಗೆ ತಲೆಕೆಡಿಸ್ಬೇಡ
ಮೊದ್ಲು ನಿನ್ ಭಾಷೆ ಶುದ್ಧ ಮಾಡ್ಕೋ
ಕಷ್ಟ ಪಡಬೇಕು ಶ್ರಮ ಹಾಕಬೇಕು

ಎಂತಾ ಬಾಸೆ!
ನಿನ್ ಮಂಡೆ ಬಾಸೆನಾ?
ನಂದು ಎದೆ ಬಾಸೆ ಕಣ್ಲಾ!
ಬ್ಯಾಸೆ ಮಾಡಿದ ಬಾಸೆ ಕಣಾ
ನಮ್ಮವ್ವನ ಬಾಸೆ!
‘ಮಾದೇಸ, ಉಣ್ಣಕೆ
ಇಟ್ ತಂದಿವ್ನಿ ಬಾ ಕೂಸೆ’ ಅಂದ್ರೆ
ಕುಣಿಕುಣಿದಾಡಿಸೊ ಬಾಸೆ ಕಣಾ
ಬ್ಯಾಸೆ ಒಡಿತಾ ಒಡಿತಾ
ತಿಂದನ್ನ ಅರಗಿಸಿದ ಬಾಸೆ
ನನ್ನವ್ವನ ಬಾಸೆ ಕಣ್ಲಾ
ಕಲಬೆರಕೆ ಕಲಗಚ್ಚಲ್ಲ ತಿಳ್ಕೊಳ್ಲಾ….

ಮಾದೇಸ… ಲೇ ಮಾದೇಸ…
ಏನ್ಲಾ ಅದು ಗೊಣಗೊಣ ಅಂತಿದಿ
ಎನಿ ವೇ ಹ್ಯಾಪಿ ರಾಜ್ಯೋತ್ಸವ
ಮೊದ್ಲು ನಿನ್ ನಾಲಗೆ ತಿಕ್ಕೊ…
ಟಾ ಟಾ ಬೈ ಬೈ

ಲೋ ಮಾದೇವ…
ಬರಿ ನಾಲ್ಗೆ ಮೇಲಿನ ಬಾಸೆ ಕಬರ‌್ಯಾಕೆ
ನಮೈ ಕೈ ಕಾಲೆಲ್ಲ ಕುಣಿಸೋ
ರುದಯದ ಬಾಸೆ ಕಣಾ ಇದು
ಮೈ ಬೆವರಿನ ಜೋಗದ್ ಸಿರಿ!

‍ಲೇಖಕರು Admin

1 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading