ರಾಜೇಶ್ ಶೆಟ್ಟಿಯವರ ‘ಡ್ರಾಮಾ ಕಂಪನಿ’

ಪತ್ರಕರ್ತ ರಾಜೇಶ್ ಶೆಟ್ಟಿಯವರು ಬರೆದ ಕಥಾ ಸಂಕಲನ ಡ್ರಾಮಾ ಕಂಪನಿ ಲೋಕಾರ್ಪಣೆಯಾಗಿದೆ. ಸಪ್ನ ಬುಕ್ ಹೌಸ್ ನ ಪ್ರಕಟಣೆ ಇದು. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಧಾನ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಶೆಟ್ಟಿ ಕತೆಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಪ್ರಮುಖವಾಗಿ ಕಾಣಿಸಿಕೊಳ್ಳುವುದು ವಿಶೇಷ.

ಈ ಪುಸ್ತಕದಲ್ಲಿ ಲೇಖಕರು ಬರೆದ ಮಾತುಗಳು ಈ ಕೆಳಗಿನಂತೆ ಇದೆ-

ರೀಲ್ಸ್, ಸ್ಟೇಟಸ್, ಸ್ಟೋರೀಸ್ ಹೀಗೆ ಒಂದೊಂದು ಹೆಸರಲ್ಲಿ ನಾನಾ ರೀತಿಯಲ್ಲಿ ನಮ್ಮ ನಮ್ಮ ಜೀವನದ ಮ್ಯಾಜಿಕ್ ಮೊಮೆಂಟ್‌ಗಳನ್ನು ಕ್ಷಣಕ್ಷಣವೂ ಇನ್ನೊಬ್ಬರಿಗೆ ಹೇಳುತ್ತಲೇ ಇರುತ್ತೇವೆ. ಇನ್ನೊಬ್ಬರ ಕತೆಗಳನ್ನು ಬೇರೊಬ್ಬರ ಅಕೌಂಟಿಗೆ ಹೋಗಿ ಅವರ ನೋವನ್ನು, ಸಂತೋಷವನ್ನು, ಸಂಕಟವನ್ನು ನಮ್ಮದಾಗಿಸಿಕೊಳ್ಳುತ್ತಿರುತ್ತೇವೆ. ಇನ್ನೊಬ್ಬರ ಬ್ರೇಕಪ್ಪು ನಮ್ಮನ್ನು ಸಂತೈಸುತ್ತದೆ. ಮತ್ತೊಬ್ಬರ ಗೆಲುವು ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ಕನಿಷ್ಠ ಪಕ್ಷ ಹಾಗಂತ ನಂಬಿಕೊಂಡಿದ್ದೇವೆ. ಹಾಗಾಗಿ ನಾವು ಸಂತೋಷವಾಗಿದ್ದೇವೆ.

ಅಕ್ಷರಗಳಿಗಿಂತಲೂ ಸಣ್ಣ ಸಣ್ಣ ವಿಡಿಯೋಗಳಿಗೆ ಜಗತ್ತು ಮಾರು ಹೋಗಿರುವ ಕಾಲವಿದು. ಒಂದು ದಿನ ರೀಲ್ಸನ್ನೋ ಸ್ಟೋರಿಯನ್ನೋ ನೋಡದೇ ಇರುವಷ್ಟು ಸಂಯಮ ಇಲ್ಲ. ಕತೆಗಳನ್ನು ಹೇಳುವ ಶೈಲಿ ಬದಲಾಗಿದೆ. ಕತೆಗಳನ್ನು ಓದುವ ಕ್ರಮದಲ್ಲೂ ಬದಲಾವಣೆಯಾಗಿದೆ. ಇಂಥಾ ಹೊತ್ತಲ್ಲಿ ಈ ಕಥಾ ಸಂಕಲನ ನಿಮ್ಮ ಕೈಯಲ್ಲಿದೆ.

ನಮ್ಮೂರಲ್ಲಿ ಯಾವುದೋ ಒಂದು ರಾತ್ರಿಯಲ್ಲಿ ಯಾವುದೋ ಒಂದು ಹೊತ್ತಲ್ಲಿ ಎಚ್ಚರವಾದರೆ ಎಲ್ಲೋ ಒಂದು ಕಡೆ ಚೆಂಡೆಯ ಸದ್ದೋ, ನಾಗಸ್ವರದ ನಾದವೋ ಕೇಳುತ್ತಿರುತ್ತದೆ. ಇಲ್ಲದೇ ಹೋದರೆ ಜೀರುಂಡೆಯ ದನಿಯಾದರೂ ಕಿವಿಗೆ ಬೀಳುತ್ತಿರುತ್ತದೆ. ಆ ಒಂದೊಂದು ಸದ್ದಲ್ಲೂ ಒಂದೊಂದು ಕತೆ ಅಡಗಿರುವ ಊರನ್ನು ಬಿಟ್ಟು ಬೆಂಗಳೂರು ಸೇರಿದ ಮೇಲೆ ಇಳಿ ಸಂಜೆಯ ಏಕಾಂತ, ಖಾಲಿ ರಸ್ತೆಯ ವಿಷಾದ ಬೇಡವೆಂದರೂ ತಬ್ಬಿಕೊಳ್ಳುತ್ತದೆ.

ಈ ಕತೆಗಳಲ್ಲಿ ನನ್ನ ಮಂಗಳೂರು ಮತ್ತು ಬೆಂಗಳೂರು ಎರಡೂ ಅಡಗಿಕೊಂಡಿದೆ. ಕತೆಗಳನ್ನು ಓದುತ್ತಾ ಓದುತ್ತಾ ಬಿಯರ್ ಕ್ಲಬ್ಬಿನ ಇಂಗ್ಲಿಷ್ ಮ್ಯೂಸಿಕ್ಕು, ಕಡಲ ದಡಕ್ಕೆ ಬಡಿದು ವಾಪಸ್ಸು ಹಿಂತಿರುಗುವ ಅಲೆಯ ನೀರನ್ನು ಇಂಗಿಸಿಕೊಳ್ಳುವ ಮರಳಿನ ಸದ್ದು, ಪ್ರೀತಿ ಗೆದ್ದಾಗ ತುಟಿಯಲ್ಲಿ ಅರಳಿ ನಿಂತ ನಗು, ಚೌಕಿಮನೆಯ ಕೆಂಪು ಕಪ್ಪು ಬಿಳಿ ಬಣ್ಣಗಳ ವಿಶಿಷ್ಟ ಘಮ, ಕೋಳಿ ಅಂಕದ ಕೋಳಿಯ ಕೊನೆ ಹಂತದ ಕಾದಾಟದ ಕೂಗು, ಇಷ್ಟದ ಹುಡುಗಿ ಧರಿಸಿದ ಸೇವಂತಿಗೆ ಹೂವಿನ ಘಮ ಎಲ್ಲವೂ ನಿಮ್ಮನ್ನು ಇಷ್ಟೇ ಇಷ್ಟು ತಾಕಿಹೋದರೆ ಅಷ್ಟರ ಮಟ್ಟಿಗೆ ಸಾರ್ಥಕ.

ಅರ್ಧದಾರಿಯಲ್ಲಿ ತೊರೆದು ಹೋದ ಅಪ್ಪ ಮತ್ತು ಅಜ್ಜನ ಹೆಗಲಲ್ಲಿ ಕುಳಿತು ನೋಡಿದ ಕತೆಗಳು ನನ್ನ ಬಾಲ್ಯವನ್ನು ಚೆನ್ನಾಗಿರಿಸಿದ್ದವು. ಆ ನೆನಪು ಈಗಲೂ ಖುಷಿ ಕೊಡುತ್ತದೆ. ಇನ್ನು ನನ್ನಲ್ಲಿ ಕಥೆಯನ್ನು ತುಂಬಿದ್ದು ನನ್ನ ಅಮ್ಮ. ಅವರಿಂದ ಪಾಡ್ದನದ ಮೂಲಕ ಕಥೆಗಳ ಮೂಲಕ ನನ್ನೊಳಗೆ ಸೇರಿದ ಕಥೆಗಳ ಜಗತ್ತು ತಣ್ಣಗೆ ಮಲಗಿತ್ತು. ಸೋಮಾರಿಯಾಗಿ ಕಾಲ ಕಳೆಯುತ್ತಿದ್ದ ನನಗೆ ಜಾಡಿಸಿ ಒದ್ದು ನನ್ನಿಂದ ಈ ಕಥೆಗಳನ್ನು ಬರೆಸಿದ್ದು ಕಥೆಕೂಟ. ಕಥೆಕೂಟಕ್ಕೆ ಅಂತಲೇ ಬರೆದ ಕಥೆಗಳ ಗುಚ್ಛ ಇದು.

ಈ ಕಥಾ ಸಂಕಲನ ಬರಲು ಪ್ರಮುಖ ಕಾರಣ ನನ್ನ ಗುರು, ಗೈಡು, ಫಿಲಾಸರು, ಫ್ರೆಂಡು, ಬಾಸ್ ಎಲ್ಲವೂ ಆಗಿರುವ ಜೋಗಿ ಸರ್ ಮತ್ತು ಸಪ್ನ ಪ್ರಕಾಶನದ ಕನ್ನಡ ವಿಭಾಗದ ಮುಖ್ಯಸ್ಥ ದೊಡ್ಡೇಗೌಡರು. ಇವರಿಬ್ಬರ ಒತ್ತಾಯವಿಲ್ಲದಿದ್ದರೆ ಈ ಪುಸ್ತಕ ಆಗುತ್ತಿರಲಿಲ್ಲ. ಅವರಿಬ್ಬರಿಗೂ ನಾನು ಕೃತಜ್ಞ.

ನನ್ನ ಕಥೆಗಳ ಪುಸ್ತಕ ನಿಮ್ಮ ಕೈಯಲ್ಲಿದೆ. ಇನ್‌ಸ್ಟಾದಲ್ಲೋ, ವಾಟ್ಸಪ್ಪಲ್ಲೋ ನಿಮ್ಮ ಸ್ಟೋರಿ, ಸ್ಟೇಟಸ್ಸನ್ನು ನಾನು ಗಮನಿಸುತ್ತಿರುತ್ತೇನೆ.

‍ಲೇಖಕರು Admin

November 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: