ಡಿ ಉಮಾಪತಿ ಕಂಡಂತೆ ‘ಗಾಂಧಿ ಕಣ್ಣಿನ ನೋಟ’

ಡಿ ಉಮಾಪತಿ

ಎಲ್ಲರಿಗೂ ನಮಸ್ಕಾರಗಳು. ಸಭೆಯ ಮುಂದೆ ಮಾತಾಡುವುದು ನನಗೆ ಬಾರದ ಮತ್ತು ಒಗ್ಗದ ಕೆಲಸ. ಆದರೂ ಇಲ್ಲಿ ನಿಮ್ಮೆದುರು ನಿಲ್ಲಲು ಎರಡು ಬಲವತ್ತರ ಕಾರಣಗಳಿವೆ. ನಾನು ಬಹುವಾಗಿ ಇಷ್ಟಪಟ್ಟಿದ್ದ ಬರೆಹಗಾರರೂ ಜನಪರ ಚಿಂತಕರೂ ಆಗಿದ್ದ ರಾಜೇಗೌಡ ಹೊಸಳ್ಳಿ ಅವರ ಪುಸ್ತಕ ಬಿಡುಗಡೆ ಮಾಡಬೇಕೆಂಬ ಗೆಳೆಯ ವಿಶುಕುಮಾರನಿಗೆ ಪ್ರೀತಿಯ ಮಾತಿಗೆ ಇಲ್ಲ ಎನ್ನಲು ಬಾಯಿ ಬರಲಿಲ್ಲ. ಅವನು ನನ್ನ ಗೆಳೆತನ ಮೂವತ್ತೈದು ವರ್ಷಗಳಷ್ಟು ಪುರಾತನ ಕಾಲದ್ದು. ಅವನ ಕಾರಣವಾಗಿಯೇ ಪರಿಚಯವಾದವರು ರಾಜೇಗೌಡರು. ಓದಿನ ನನ್ನ ಆಸಕ್ತಿ ಅವರೊಂದಿಗೆ ಬಂಧ ಬೆಸೆಯಿತು. 

ಈ ಮಾತಿಗೆ ಇಪ್ಪತ್ತು ವರ್ಷಗಳೇ ಆಗಿರಬಹುದು. ತಾವು ಬರೆದ ಜಾನಪದ ಸಂಕಥನ, ಕೋಳಿ ಮತ್ತು ತುಳಸಿಕಟ್ಟೆ, ಅಕ್ಕಯ್ಯಮ್ಮನ ಸಂಸಾರ, ಮಗನ ತಿಂದ ಮಾರಾಯನ ದುರ್ಗ ಪುಸ್ತಕಗಳನ್ನು ಬಹಳ ಪ್ರೀತಿಯಿಂದ ನನ್ನ ಕೈಗಿಟ್ಟರು ರಾಜೇಗೌಡರು. ಓದಿ ಬಹಳ ಖುಷಿಯೆನಿಸಿತು. ಬೆರಗೂ ಆಯಿತು. ಜಾನಪದದಲ್ಲೂ ಹೊಸತೇ ಆದ ನುಡಿಗಟ್ಟು, ಲವಲವಿಕೆಯ ಜೀವಪರ ಬರವಣಿಗೆಯದು. ಇಂತಹ ಗಟ್ಟಿ ಬರೆಹಗಾರರೊಬ್ಬರನ್ನು ಕನ್ನಡದ ವಿಮರ್ಶಾಲೋಕ ಅನಾದರದಿಂದ ನಡೆಸಿಕೊಂಡಿದೆಯಲ್ಲ ಎಂದು ಆಗಲೇ ಖೇದವೆನಿಸಿತ್ತು.

1996ರಲ್ಲಿ ದೆಹಲಿಗೆ ಹೊರಟು ಹೋದೆ. ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಬೆಂಗಳೂರಿಗೆ ಬಂದಾಗ ಯಾವಾಗಲಾದರೊಮ್ಮೆ ಅಪರೂಪಕ್ಕೆ ಅವರ ಭೇಟಿ. ರಾಜೇಗೌಡರು ನನ್ನ ಅಚ್ಚುಮೆಚ್ಚಿನ ಬರೆಹಗಾರರ ಪೈಕಿ ಒಬ್ಬರಾಗಿ ನೆಲೆಗೊಂಡಿದ್ದವರು. ಅವರು ಇಷ್ಟು ಬೇಗ ನಮ್ಮನ್ನು ಅಗಲುವ ಕಲ್ಪನೆ ಕೂಡ ನನಗೆ ಇರಲಿಲ್ಲ.  ರಾಜೇಗೌಡರ ವಿಶಿಷ್ಟ ಜಾನಪದ ಬರಹಗಳಿಗೆ ಈಗಲೂ ನ್ಯಾಯ ಸಿಕ್ಕಿಲ್ಲವೆಂಬುದೇ ನನ್ನ ಅನಿಸಿಕೆ.

ಇದ್ದೂ ಸತ್ತಂತಿರುವವರೇ ತುಂಬಿರುವ ಜಗತ್ತು ಇದು.  ರಾಜೇಗೌಡರು ಈ ಮಾತಿಗೆ ನಿಚ್ಚಳ ಅಪವಾದ. ಇದ್ದಷ್ಟು ಕಾಲ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದಿಸಿ ನಿಜಾರ್ಥದಲ್ಲಿ ಜೀವಂತವಿದ್ದರು. ಅವರ ಪುಸ್ತಕಗಳನ್ನು ದೆಹಲಿಯ ಕನ್ನಡದ ಗೆಳೆಯರಿಗೆ ಕೊಟ್ಟು ಓದಿಸಬೇಕೆನಿಸಿತ್ತು. ಪ್ರತಿಗಳನ್ನು ತಲುಪಿಸಿ ಸಹಕರಿಸಿದ್ದ ವಿಶು. ಪ್ರಜಾವಾಣಿಯಲ್ಲಿ ಅವರು ಬರೆಯುತ್ತಿದ್ದ ಅಂಕಣಗಳಲ್ಲಿ ಸಮಸಮಾಜದ ತುಡಿತವಿತ್ತು. ಭಾರತದ ಸಾಮಾಜಿಕ ಬದುಕಿಗೆ ಹಿಡಿದಿರುವ ಬಗೆಬಗೆಯ ಕುಷ್ಠರೋಗದ ಕುರಿತ ಅಸಹನೆಯಿತ್ತು. ಕೆಳಗೆ ಬಿದ್ದವರ ಕುರಿತು ಅನುಕಂಪವಿತ್ತು.

ಕಣ್ಣ ಮುಂದೇ ಕುಸಿದು ಧೂಳಾಗಿರುವ ಬಹುತ್ವದ ಕುರಿತು ನೋವಿತ್ತು. ಅನ್ಯಾಯ ಅಸಹಿಷ್ಣುತೆಗಳು, ಆಳುವವರ ಜನವಿರೋಧಿ ನೀತಿಗಳ ವಿರುದ್ಧ ಕೋಪವಿತ್ತು. ಇಂದು ಬಿಡುಗಡೆಯಾಗಿರುವ ಗಾಂಧೀ ಕಣ್ಣಿನ ನೋಟ ಕೂಡ ಇದೇ ಕಾಳಜಿಗಳ ಹೊತ್ತಿಗೆ. ಇಲ್ಲಿರುವ ಪುಟಗಳು ಮಾತಾಡುತ್ತವೆ. ನೀವೂ ಅವುಗಳ ಜೊತೆ ಮಾತಾಡಿ. ನಿಮ್ಮ ಗುರುತುಪರಿಚಯದವರಿಗೂ ಕೊಟ್ಟು ಅವರ ವಿಮೋಚನೆಗೆ ನೆರವಾಗಿರಿ. ಇಲ್ಲಿ ಅಚ್ಚಾಗಿರುವ ವಿಚಾರಗಳಿಗೆ ಮಲಿನ ಮನಸುಗಳನ್ನು ತೊಳೆಯುವ ಜೀವಜಲದ ಶಕ್ತಿಯಿದೆ. ದ್ವೇಷದ ನಂಜನ್ನೇ ತುಂಬಿಕೊಂಡಿರುವ ಮನಸುಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಾಬರಿಯಾಗುವಷ್ಟು ದೊಡ್ಡದಾಗಿದೆ. ಈ ನಂಜು ನಿವಾರಣೆಯಾಗಿ ಡಿ ಟಾಕ್ಸ್ ಆಗುವುದು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ದೈಹಿಕ ಆರೋಗ್ಯಕ್ಕೂ ಬಲು ಮುಖ್ಯ. ವಿಶೇಷವಾಗಿ ಯುವಜನರಿಗೆ ಈ ಮಾತು ಅನ್ವಯಿಸುತ್ತದೆ. 

ನಾವು ಭೂಮಿಗೆ ಭಾರವಾಗಿ ಬದುಕುತ್ತಿದ್ದೇವೆ. ಎಷ್ಟು ಆಧುನಿಕ ಆಗುತ್ತ ನಡೆದಿದ್ದೇವೆಯೋ ಅಷ್ಟು ಆದಿಮ ಆಗತೊಡಗಿದ್ದೇವೆ. ಯಥಾರ್ಥದಲ್ಲಿ ಆದಿಮ ಮಾನವ ಭೂಮಿಗೆ ಭಾರವಾಗಿ ಬದುಕಿರಲಿಲ್ಲ. ಮೇಲು ಕೀಳು, ಹಿಂಸೆ, ದ್ವೇಷ, ಅಸಹನೆ, ಕ್ಷುದ್ರತನದ ಭಾವಾರ್ಥದಲ್ಲಿ ಆದಿಮ ಯುಗಕ್ಕೆ ಜಾರಿದ್ದೇವೆ. ವಿಕಾಸ ಎಂಬ ಕ್ರಿಯೆ ಮನುಷ್ಯನ ಬುದ್ಧಿಯನ್ನು ಬದಲಿಸಿತೇ ವಿನಾ ಭಾವವನ್ನು ಅಂಧಯುಗದಲ್ಲೇ ಉಳಿಸಿಬಿಟ್ಟಿದೆ.
ನಾವು ಬದುಕಿರುವ ಭೂಮಿ ಬಹುದೊಡ್ಡ ಗಂಡಾಂತರ ಎದುರಿಸುತ್ತಿದೆ. ಅದು ಹವಾಮಾನ ಬದಲಾವಣೆ. ವಿಪರೀತ ಹವೆ, ನೈಸರ್ಗಿಕ ಅವಗಢಗಳು, ಮಾನವ ನಿರ್ಮಿತ ವಿಪತ್ತುಗಳು, ಜೀವವೈವಿಧ್ಯತೆಯ ನಷ್ಟ, ಹವಾಮಾನ ಬದಲಾವಣೆಯನ್ನು ಎದುರಿಸಲು ಅಗತ್ಯವಿರುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಲ್ಲಿ ಮಾನವ ವೈಫಲ್ಯಗಳು ಈ ಗೋಳವನ್ನು ಪ್ರಳಯದತ್ತ  ಎಳೆದೊಯ್ಯುತ್ತಿವೆ. ಈ ಪ್ರಳಯದೊಳಕ್ಕೆ ನಿದ್ದೆಯಲ್ಲಿ ನಡೆಯತೊಡಗಿದ್ದೇವೆ. ಇದು ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯ ನಿದ್ದೆ. ಸಾವಿನ ನಿದ್ದೆ.The World it seems is most clearly walking into catastrophe ಅಂತ The World Economic Forumನ ವರದಿ ಹೇಳಿದೆ.(ಈ ವರದಿ ಎರಡು 2019ರದು).

ಅಂಟಾರ್ಕ್ಟಿಕಾದ ಹಿಮಬಂಡೆಗಳು ಕರಗತೊಡಗಿವೆ. ಸಾಗರಗಳ ತಾಪಮಾನ ಹೆಚ್ಚತೊಡಗಿದೆ. ಈ ಎಚ್ಚರಿಕೆಯ ಗಂಟೆಗಳನ್ನು ನಾವು ಲೆಕ್ಕಿಸುತ್ತಿಲ್ಲ.

ಭೂಗೋಳದ ತಾಪಮಾನ ಮುಗಿಲು ಮುಟ್ಟಿದೆ. ಅದು ಇನ್ನು ಒಂದೂವರೆ ಡಿಗ್ರಿ ಸೆಲ್ಶಿಯಸ್ ಹೆಚ್ಚಿದರೆ ಅಳಿವು ಕಾದಿದೆ. ಹೆಚ್ಚದಂತೆ ಕಾಯಲು ಉಳಿದಿರುವ ಅವಧಿ ಹನ್ನೆರಡೇ ವರ್ಷಗಳು. ಈ ಅವಧಿಯಲ್ಲಿ ಮನುಕುಲ ಬದುಕುವ ದಿನನಿತ್ಯದ ರೀತಿನೀತಿಗಳು ಬಹಳ ದೊಡ್ಡ ರೀತಿಯಲ್ಲಿ ಬದಲಾಗಲೇಬೇಕು. ಅರ್ಥಾತ್ ಭೂಮಿಗೆ ಭಾರವಾಗಿ ಬದುಕುವುದನ್ನು ಮನುಕುಲ ಇನ್ನಾದರೂ ಬಿಡಲೇಬೇಕು. ಮುಂಜಾನೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಮನುಷ್ಯನ ಚಟುವಟಿಕೆ ಇಂಗಾಲಾಮ್ಲವನ್ನು ಹೆಚ್ಚು ಹೆಚ್ಚು ವಿಸರ್ಜಿಸತೊಡಗಿವೆ. 1970ರಿಂದ ಇಲ್ಲಿಯವರೆಗೆ ಶೇ.40ರಷ್ಟು ವಿಶ್ವದ ಜೀವವೈವಿಧ್ಯತೆ (ಬಯೋಡೈವರ್ಸಿಟಿ) ನಷ್ಟವಾಗಿ ಹೋಗಿದೆ. ಈ ವಿದ್ಯಮಾನ ನಿಸರ್ಗದ ಆಹಾರ ಸರಪಳಿಯನ್ನು ತುಂಡರಿಸಿದೆ. ಅಕಾಲದ ಮಳೆಗಳು, ಪ್ರವಾಹಗಳು, ಬರಗಾಲಗಳು ಕಾಗದದ ಮೇಲಿನ ಪ್ರಮೇಯಗಳಲ್ಲ. ನಿತ್ಯ ಬದುಕಿನ ವಾಸ್ತವಗಳು. ಇವು ಇನ್ನೂ ಘೋರ ಮತ್ತು ಕಠೋರ ರೂಪವನ್ನು ಧರಿಸಲಿವೆ. ಮನುಕುಲ ತತ್ತರಿಸಲಿದೆ. ಅನ್ನ ನೀರಿಗಾಗಿ ಹಾಹಾಕಾರ ವ್ಯಾಪಿಸಲಿದೆ.

ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಮೂರನೆಯ ಒಂದರಷ್ಟು ಹೊಲಗದ್ದೆಗಳು, ತೋಟತುಡಿಕೆಗಳು,  ಗೋಮಾಳಗಳು ಸಾರಾಸಗಟು ಬಂಜರು ಬೀಳಲಿವೆ. ಅರ್ಥಾತ್ ಅವುಗಳಲ್ಲಿ ಆಹಾರ ಉತ್ಪಾದನೆ ಅಸಾಧ್ಯವೆನಿಸಲಿದೆ. ಮುಂದಿನ ಇಪ್ಪತ್ತೆಂಟು ವರ್ಷಗಳಲ್ಲಿ ಜಗತ್ತಿನ ಅನ್ನದ ಕಣಜಗಳು ಬೆಳೆ ವೈಫಲ್ಯ ಎದುರಿಸಲಿದ್ದು, ತೀವ್ರ ತಾಪಮಾನದಿಂದಾಗಿ ಜಾನುವಾರುಗಳು ಸಾಯಲಿವೆ. ಆಹಾರದ ಬೆಲೆಗಳು ಆಗಸಕ್ಕೆ ಜಿಗಿದು ಈಗಾಗಲೇ ಹಸಿವನ್ನೇ ಹೊದ್ದು ಮಲಗುತ್ತಿರುವ ಜನಕೋಟಿಯೊಂದಿಗೆ ಮುಂದಿನ ಎಂಟು ವರ್ಷಗಳಲ್ಲಿ 12 ಕೋಟಿ ತುತ್ತಿನ ಚೀಲಗಳು ಹೊಸದಾಗಿ ಸೇರಿಕೊಳ್ಳಲಿವೆ.

ಜಾಗತಿಕ ತಾಪಮಾನ ಏರಿಕೆಯು ಜಗತ್ತನ್ನು ಹೆಚ್ಚು ಹೆಚ್ಚು ಬರಗಾಲ, ಜಲಕ್ಷಾಮ, ಕಾಳ್ಗಿಚ್ಚು, ಉಷ್ಣೋಗ್ರತೆಯ ಗಾಳಿ ಗುಮ್ಮಟಗಳು, ಬಿಸಿಮಾರುತಗಳು, ಯರ್ರಾಬಿರ್ರಿ ಮಳೆ-ಬೆಳೆಯ ಏರುಪೇರುಗಳು, ಹಸಿವೆ, ರೋಗರುಜಿನ, ದಾರಿದ್ರ್ಯ ಅಂಧಕಾರ ಅಪಾಯಗಳತ್ತ ಒಯ್ಯಲಿದೆ. ಸಾಮಾಜಿಕ-ಆರ್ಥಿಕ ಅಸಮಾನತೆಯ ಕಂದಕಗಳು ಇನ್ನಷ್ಟು ಹಿರಿದಾಗಲಿವೆ. ಸಾಗರ ಸಮುದ್ರಗಳು ಉಕ್ಕಿ ಹರಿದು ಹೆಚ್ಚು ಹೆಚ್ಚು ನೆಲವನ್ನು ನುಂಗಲಿವೆ. ಮೂರನೆಯ ಒಂದರಷ್ಟು ಮನುಕುಲ ಅಸಹನೀಯ ಉಷ್ಣೋಗ್ರತೆಯಲ್ಲಿ ಬದುಕಿ ಬಾಳುವ ಆಪತ್ತು ಎದುರಾಗಲಿದೆ. ಪ್ರತಿಕೂಲ ಪರಿಸರದ ಕಾರಣ ಮನುಕುಲವು ಮಹಾವಲಸೆಗಳಿಗೆ ಸಾಕ್ಷಿಯಾಗಲಿದೆ. ವಲಸೆಯ ಶಕ್ತಿ ಸಂಪನ್ಮೂಲಗಳಿಲ್ಲದ ಸಮುದಾಯಗಳು ಇದ್ದಲ್ಲಿಯೇ ನವೆದು ಸಾಯಲಿವೆ.

ಈ ಸಂಕಟವು ಈಗಾಗಲೆ ಜಗತ್ತಿನ 330 ಕೋಟಿ ಜನರ ಮೇಲೆ ಎರಗಿದೆ. ಅವರ ದೈನಂದಿನ ಬದುಕು ದುರ್ಭರವಾಗಿದೆ. ಉಷ್ಣಮಾರುತಗಳು, ಹವಾಮಾಲಿನ್ಯ, ಹವಾಮಾನ ಅತಿರೇಕಗಳು, ರೋಗರುಜಿನಗಳಿಂದ ಸಾಯುವ ಜನರ ಸಂಖ್ಯೆ ಗಣನೀಯವಾಗಿ ಏರಲಿದೆ.ಹಸಿವಿನೊಂದಿಗೆ ಉಷ್ಣೋಗ್ರತೆಯ ಒತ್ತಡ, ಶ್ವಾಸಕೋಶದ ಸಮಸ್ಯೆಗಳು, ಸಾಂಕ್ರಾಮಿಕ ಕಾಯಿಲೆಗಳು ಮನುಷ್ಯ ಕುಲವನ್ನು ಮುತ್ತಲಿವೆ.
ಕೈಗಾರಿಕೆಯಗ ಆರಂಭವಾಗುವ ಮುನ್ನ ನೆಲೆಸಿದ್ದ ತಾಪಮಾನ ಒಂದೂವರೆ ಡಿಗ್ರಿಯಷ್ಟು ಹೆಚ್ಚಿತೆಂದರೆ  ಬಿಸಿಪ್ರಳಯದ ಘನಘೋರ ದುಃಸ್ವಪ್ನ ನಿಜರೂಪ ತಳೆದು ಇಳೆಯನ್ನು ಆವರಿಸಲಿದೆ. ಒಂದೂವರೆ ಡಿಗ್ರಿಯ ಪೈಕಿ 1.1ರಷ್ಟು ಡಿಗ್ರಿ ಈಗಾಗಲೆ ಹೆಚ್ಚಿಬಿಟ್ಟಿದೆ. ಕೇವಲ ಇಪ್ಪತ್ತೇ ವರ್ಷಗಳಲ್ಲಿ 1.5 ಡಿಗ್ರಿಯನ್ನು ಮುಟ್ಟುವ ನಿರೀಕ್ಷೆ ಇದೆ. ತಾಪಮಾನ ಹೆಚ್ಚಳ ಎರಡು ಡಿಗ್ರಿ ಮುಟ್ಟಿದರೆ ಕಾಳ್ಗಿಚ್ಚಿಗೆ ಸಿಗುವ ಭೂಪ್ರದೇಶ ಮೂರನೆಯ ಒಂದರಷ್ಟು ಪ್ರಮಾಣವನ್ನು ಮುಟ್ಟಿ ಮುನ್ನಡೆಯಲಿದೆ.

ನಗರ-ಮಹಾನಗರಗಳ ಬದುಕು ಅಸಾಧ್ಯವೆನಿಸಲಿದೆ. ಆರ್ಥವ್ಯವಸ್ಥೆಗಳು ಮುಳುಗಿ ತಳ ಸೇರಲಿವೆ. ಆಹಾರ ಪೂರೈಕೆಯ ಸ್ಥಿತಿ ತೀರಾ ಗಂಭೀರವೆನಿಸಲಿದೆ.

ಭಾರೀ ಮಳೆ, ಉಗ್ರ ಉಷ್ಣ, ನಿಸ್ಸಾರ ಮಣ್ಣು, ಬೆಳೆಗಳ ಮೇಲೆ ಬಿರುಗಾಳಿಯಂತೆ ಎರಗಿ ನಿಮಿಷಗಳಲ್ಲಿ ಕಬಳಿಸುವ ಮಿಡತೆಗಳಂತಹ ಕೀಟಗಳ ಹೆಚ್ಚಳ, ಪರಾಗಸ್ಪರ್ಶದಂತಹ ಬಹುಮುಖ್ಯ ಕ್ರಿಯೆಯನ್ನು ಆಗು ಮಾಡುವ ಜೇನು ನೊಣಗಳ ಸಂಖ್ಯೆಯ ಕುಸಿತದಿಂದ ಆಹಾರ ಧಾನ್ಯಗಳ ಉತ್ಪಾದನೆ ಇಳಿಮುಖವಾಗಲಿದೆ. ಏರುತ್ತ ಹೋಗುವ ಪ್ರತಿ ಡಿಗ್ರಿ ತಾಪಮಾನ   ಭತ್ತ, ಗೋಧಿ, ಮುಸುಕಿನ ಜೋಳದ ಇಳುವರಿಯನ್ನು ಶೇ.10ರಿಂದ ಶೇ.25ರಷ್ಟು ಬಲಿ ತೆಗೆದುಕೊಳ್ಳಲಿದೆ. ವರ್ಷದ 250ಕ್ಕೂ ಹೆಚ್ಚು ದಿನಗಳಲ್ಲಿ ಹಗಲು ಹೊಲಗದ್ದೆಗಳಿಗೆ ಇಳಿದು ಕೆಲಸ ಮಾಡುವುದು ಅಸಹನೀಯವೆನಿಸಿ ಕೃಷಿಕೂಲಿಗೆ ಜನ ಮುಂದೆ ಬಾರದಿರುವ ದಿನಗಳು ಎದುರಾಗಲಿವೆ.

ಧರೆಯೆ ಹತ್ತಿ ಉರಿಯುವ ಈ ಹೊತ್ತಿನಲ್ಲಿ ಮನೆಯಲ್ಲಿ ಯಾರು ಇರಬೇಕು, ಯಾರನ್ನು ಹೊರ ದಬ್ಬಬೇಕು, ಎಂಬ ವಿಷಯವನ್ನು ದೇಶದ ಮೇಲೆ ಹೇರಿರುವುದು ಬಹು ದೊಡ್ಡ ವಿಪರ್ಯಾಸ. ಮುತ್ತಿ ಕಾಡುವ ಸಮಸ್ಯೆಗಳನ್ನು ಹೇಳದೆ ಕಲ್ಪಿತ ಸಮಸ್ಯೆಗಳನ್ನು ಕಾಲ್ಪನಿಕ ಶತ್ರುಗಳನ್ನು ಜನರ ಕಣ್ಣ ಮುಂದೆ ಹರವಿ ಮೋಸ ಮಾಡಲಾಗುತ್ತಿದೆ. ದೇಹಕ್ಕೆ ಬಿದ್ದ ಪೆಟ್ಟು ಮಿದುಳಿಗೆ ತಲುಪದಂತೆ ಮೋಟಾರ್ ನರ್ವ್ ನ್ನು ಕತ್ತರಿಸಿ ಎಸೆಯಲಾಗಿದೆ.

ಈ ಹೊತ್ತಿಗೆಯ ಮೊದಲ ಲೇಖನದ ಮೊದಲ ಸಾಲೇ ಅತ್ಯಂತ ನಮ್ಮ ಒಳಗನ್ನು ಅಲ್ಲಾಡಿಸಿಬಿಡುತ್ತದೆ. ಸ್ಟೀಫನ್ ಹಾಕಿಂಗ್ ಬಹುದೊಡ್ಡ ಭೌತವಿಜ್ಞಾನಿ….ಕ್ರಿಶ 2600ರ ಹೊತ್ತಿಗೆ ಭೂಗೋಳವೆಂಬುದು ಬೆಂಕಿ ಚಂಡಾಗಿ ಭಸ್ಮವಾಗುತ್ತದೆ ಎಂಬ ಲೆಕ್ಕಾಚಾರ ಆತನದು. ಅಷ್ಟರಲ್ಲಾದರೂ ಈ ದೇಶದಲ್ಲಿ ಜಾತೀಯತೆ ಇಲ್ಲವಾಗುತ್ತದೆಯೇ, ಅದಾಗದು ಎಂಬುದರ ಕಡೆಗೆ ವೇಗವಾಗಿ ಚಲಿಸುತ್ತಿದೆ ಭಾರತ ಎಂದು ರಾಜೇಗೌಡರು ಪರಿತಪಿಸಿದ್ದಾರೆ. ಪ್ರಕೃತಿಯ ಕೈ ಬಾಯಿ ಎಲ್ಲ ಕೆಂಪಾಗಿದೆ ಎಂಬ ಮತ್ತೊಂದು ಲೇಖನದ ಸಾಲುಗಳು- ಈಗ ಪರ್ವತಗಳು ಬಿಕ್ಕಳಿಸುತ್ತಿರುವ ಸಮಯ. ಆಕಾಶ ಜರಡಿಯಾಗುತ್ತಿರುವ ಸಮಯ. ಜೀವಜಾಲ ಇಲ್ಲವಾಗುತ್ತಿರುವ ಸಮಯ. ಈ ಅಂತ್ಯದ ಸಮಯಕ್ಕೆ ಗಾಂಧೀಜಿ ಅಸ್ತ್ರವೊಂದೇ ಆಸರೆ.

ರಾಜೇಗೌಡರ ಚಿಂತನೆಗಳಲ್ಲಿ ಗಾಂಧೀಜಿಯ ಒಳಗಣ್ಣನ್ನು ಗುರುತಿಸಲಾಗಿರುವುದು ಅತ್ಯಂತ ಸೂಕ್ತ. 
ನಮ್ಮ ಭೌತಿಕ ವಿಶ್ವ ಮನುಷ್ಯನ ಅತ್ಯಾಚಾರಕ್ಕೆ ಗುರಿಯಾಗಿ ಅಪಾಯದೆಡೆ ಉರುಳುತ್ತಿದೆ. ಜೊತೆಗೆ ನೈತಿಕ ವಿಶ್ವ ಇನ್ನಷ್ಟು ಮತ್ತಷ್ಟು ಸ್ವಾರ್ಥಿಯಾಗಿ, ಅಸಹಿಷ್ಣುವಾಗಿ ಸಂಕುಚಿತಗೊಳ್ಳುತ್ತಿದೆ. ಬಹುತ್ವ, ಸಂವಾದ ಭಿನ್ನಮತಗಳಂತಹ ಅಪ್ಪಟ ಜನತಾಂತ್ರಿಕ ಮೌಲ್ಯಗಳು ಸಂಕಟಕ್ಕೆ ಸಿಲುಕಿರುವ ಭಾರತ‌ದಲ್ಲಿ ಗಾಂಧೀ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ.  ಹಿಡಿ ಉಪ್ಪನ್ನು ಎತ್ತಿ ಹಿಡಿದು ಬ್ರಿಟಿಷ್ ಸಾಮ್ರಾಹ್ಯಶಾಹಿಯನ್ನು ನಡುಗಿಸುವ ಶಕ್ತಿ ಅವರಿಗಿತ್ತು.

ಅನ್ಯಾಯದ ವಿರುದ್ಧ ಅಸಹಕಾರ ಅಹಿಂಸೆ ಕೂಡ ಅಸ್ತ್ರ ಆಗಬಲ್ಲದು ಎಂದು ರುಜುವಾತು ಮಾಡಿದವರು ಗಾಂಧೀ. ಅಂತಹುದೊಂದು ಮಹತ್ವದ ಪಾಠವನ್ನು ನಮಗೆ ಬಿಟ್ಟು ಹೋದರು. ಸಾಮೂಹಿಕ ಕಾನೂನು ಭಂಗ ಚಳವಳಿ ಕಟ್ಟಿದರು.ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಲಕ್ಷಾಂತರ ಮಂದಿಯನ್ನು ಹುರಿದುಂಬಿಸಿದರು. ಅವರು ದೇಶಪ್ರೇಮಿಯಾಗಿದ್ದರು. ರಾಷ್ಟ್ರವಾದಿ ಆಗಿರಲಿಲ್ಲ.  ದೇಶಪ್ರೇಮಿ ಎಂಬಾತನು ಅಥವಾ ಎಂಬಾಕೆ ತನ್ನ ದೇಶವನ್ನು ಪ್ರೀತಿಸುತ್ತಾಳೆ ಅಥವಾ ಪ್ರೀತಿಸುತ್ತಾನೆ.  ಅದಕ್ಕಾಗಿ ಬೇರೆ ದೇಶವನ್ನು ದ್ವೇಷಿಸುವುದಿಲ್ಲ. ಆದರೆ ರಾಷ್ಟ್ರವಾದಿಯು ಬೇರೆ ದೇಶವನ್ನು ದ್ವೇಷಿಸುತ್ತಾನೆ. ಗಾಂಧಿ ತಮ್ಮ ಹಿಂದೂ ಸಂಸ್ಕ್ರತಿಯನ್ನು ಮಹಾನ್ ಎಂದು ವೈಭವೀಕರಿಸಲಿಲ್ಲ. ನನ್ನ ದೇಶವನ್ನು ನಾನು ಪ್ರೀತಿಸುತ್ತೇನೆ. ಆದರೆ ಇಲ್ಲಿ ಅಸ್ಪೃಶ್ಯತೆ ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆಯಂತಹ ಅನಿಷ್ಟಗಳು ಆಳಕ್ಕೆ ಬೇರೂರಿರುವುದು ವಾಸ್ತವ ಎಂದು ಒಪ್ಪಿಕೊಂಡಿದ್ದರು. ಹಿಂದೂ ದೇಶ ಎಂದು ಭಾರತವನ್ನು ಕರೆಯಲಿಲ್ಲ ಅವರು. ಯಾವುದೇ ಧರ್ಮಾವಲಂಬಿಗಳಿರಲಿ, ಅವರೆಲ್ಲ ಸಮಾನರು ಎಂದು ಸಾರಿದರು. ಧರ್ಮದ ಆಧಾರದ ಮೇಲೆ ಪೌರತ್ವವನ್ನು ಅವರು ವ್ಯಾಖ್ಯಾನಿಸಲಿಲ್ಲ. 

ಧಾರ್ಮಿಕ ಬಹುತ್ವ ಮತ್ತು ಭಾಷಿಕ ಬಹುತ್ವಗಳನ್ನು ಅವರು ಪೋಷಿಸಿ ಜತನ ಮಾಡಿದರು. ಹಿಂದೀ ಹಿಂದುತ್ವದ ಸಾರ್ವಭೌಮತ್ವವನ್ನು ಒಪ್ಪಲಿಲ್ಲ.
ಹಿಂದೂ ಧರ್ಮ ಮತ್ತು ಭಾರತ ದೇಶ ಸೇರಿದಂತೆ ಯಾವುದೇ ಧರ್ಮ-ದೇಶ ಪರಿಪೂರ್ಣ ಅಲ್ಲ ಎಂದು ನಂಬಿದ್ದರು. ಯಾವುದೇ ದೇಶ ತಾನೇ ಮಹಾಮಹಿಮ ಎಂದು ಭ್ರಮಿಸಿ ಬಾವಿಯೊಳಗಿನ ಕಪ್ಪೆಯಂತಿರಕೂಡದು. ಪ್ರತಿಯೊಂದು ದೇಶವೂ ಇತರ ದೇಶಗಳ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡು ಆ ದೇಶಗಳಿಂದ ಕಲಿಯಬೇಕು ಎಂಬ ಮಾತನ್ನು 1938ರಲ್ಲೇ ಆಡಿದ್ದುಂಟು. ಗಾಂಧೀ ಅಹಿಂಸೆಯನ್ನು ಪ್ರತಿಪಾದಿಸಿದ್ದಕ್ಕಾಗಿಯೇ ಈ ದೇಶ ಏಕಪಕ್ಷದ ಜಹಗೀರಾಗದೆ ಬಹುಪಕ್ಷಗಳ ರಾಜಕೀಯ ವ್ಯವಸ್ಥೆ ಎನಿಸಿಕೊಂಡಿತು. ವಿಯೆಟ್ನಾಂ, ಚೀನಾ ಆಗಲಿಲ್ಲ. ಇಲ್ಲಿ ಜನರಲ್ ಎಲೆಕ್ಷನ್ಸ್ ಆಗ್ತವೆಯೇ ವಿನಾ ಎಲೆಕ್ಷನ್ ಅಫ್ ಜನರಲ್ಸ್ ಆಗಲ್ಲ. ಆದರೆ ಅಂಧಭಕ್ತಿ ನಮ್ಮನ್ನು ಇದೀಗ ಇಂತಹ ಅಪಾಯದ ಅಂಚಿಗೆ ತಂದು ನಿಲ್ಲಿಸಿಬಿಟ್ಟಿದೆ ಎಂಬುದು ಬೇರೆಯದೇ ಮಾತು. ಅಂಬೇಡ್ಕರ್ ಮತ್ತು ಗಾಂಧೀ ಕಾರಣದಿಂದಾಗಿಯೇ ಸಮಾನತೆಯ ಸಾರುವ ಸಂವಿಧಾನ ನಮ್ಮದಾಯಿತು.

ಗಾಂಧೀ ವಯಸ್ಕರಾದ ನಂತರ ದೇವಸ್ಥಾನಗಳಿಗೆ ಹೋಗಲಿಲ್ಲ. ಅವರ ರಾಮ ಅವರ ಎದೆಯೊಳಗಿದ್ದ. ಒಂದೇ ಒಂದು ಸಲ ದೇವಸ್ಥಾನಕ್ಕೆ ಹೋದದ್ದು ಉಂಟು 1938ರಲ್ಲಿ. ಅದು ಮಧುರೈ ಮೀನಾಕ್ಷಿ ದೇವಾಲಯ. ದಲಿತರನ್ನು ಒಳಗೆ ಬಿಟ್ಟುಕೊಂಡ ಸಂದರ್ಭ. ಅವರು ಭಿನ್ನಮತವನ್ನು ಬೇಟೆಯಾಡಿ ಅದರ ಹತ್ಯೆಗಿಳಿವ ನೀಚತನಕ್ಕೆ ಕನಸಿನಲ್ಲೂ ಇಳಿದವರಲ್ಲ. ಭಿನ್ನಮತ ಅವರ ಪ್ರಕಾರ ದೇಶದ್ರೋಹ ಆಗಿರಲಿಲ್ಲ. ಸರ್ಕಾರವನ್ನು ವಿರೋಧಿಸುವುದರ ಅರ್ಥ ದೇಶವನ್ನು ವಿರೋಧಿಸುವುದು ಎಂದು ಖಂಡಿತ ಆಗಿರಲಿಲ್ಲ. 

ಗಾಂಧೀಯನ್ನು ಕೊಂದ ಆಲೋಚನೆಯ ಕಪಿ ಮುಷ್ಠಿಯಲ್ಲಿ ದೇಶ ಸಿಲುಕಿದೆ ಇಂದು. ಹೊರಬರುವ ದಾರಿಗಳು ಗಾಂಧೀ ಅಂಬೇಡ್ಕರ್ ಆಲೋಚನೆಗಳಲ್ಲಿ ಹುದುಗಿವೆ. ಅವುಗಳನ್ನು ದೇಶ ಇಂದು ಮರುಸಂಶೋಧಿಸಿಕೊಳ್ಳಬೇಕಿದೆ. ಈ ಕ್ರಿಯೆಯಲ್ಲಿಯೇ ಬಿಡುಗಡೆಯಿದೆ. ಗಾಂಧೀಯನ್ನು ಕೊಂದವರಿಗೆ ರಾಷ್ಟ್ರಪಿತನ ಪಟ್ಟ ಕಟ್ಟಲಾಗುತ್ತಿದೆ. 

ಚಂಪಾರಣ್ ವಾಸದಲ್ಲಿ ಗಾಂಧೀಜಿ ಉದ್ದೇಶಪೂರ್ವಕವಾಗಿ ಜಾತಿ ಭೇದವಿಲ್ಲದ ಸಾಮೂಹಿಕ ಭೋಜನಶಾಲೆಯಲ್ಲಿ ಊಟ ಮಾಡುತ್ತಾರೆ. ಜೊತೆಗೆ ಬಂದವರೂ ಹಾಗೆಯೇ ನಡೆದುಕೊಳ್ಳುವಂತೆ ವಿಧಿಸುತ್ತಾರೆ. ಆ ಭೋಜನಶಾಲೆಯ ಅಡುಗೆಯಾತ ಮುಸಲ್ಮಾನ. ಹೆಸರು ಬತ್ತಖ್ ಮಿಂಯಾ.

ರೈತರ ಕಷ್ಟ ಸುಖ ವಿಚಾರಿಸಲು ಗಾಂಧೀಜಿ ಗ್ರಾಮದಿಂದ ಗ್ರಾಮಕ್ಕೆ ಬಿಡುವಿಲ್ಲದೆ ಪ್ರವಾಸ ನಡೆಸುತ್ತಾರೆ. ನೀಲಿ ಬೆಳೆಸಿ ಇಂಗ್ಲೆಂಡಿಗೆ ಕಳಿಸುವ ವಹಿವಾಟು ನಡೆಸುವ ಬ್ರಿಟಿಷ್ ಪ್ಲ್ಯಾಂಟರ್ ಇರ್ವಿನ್ ಎಂಬಾತ ಗಾಂಧೀಜಿ ಕುರಿತು ಕೋಪದಿಂದ ಕುದಿಯುತ್ತಾನೆ. ಗಾಂಧೀಜಿ ಅವರ ಒಡನಾಡಿಗಳು ಸೇವಿಸುವ ಊಟದಲ್ಲಿ ವಿಷ ಬೆರೆಸುವಂತೆ ಬತ್ತಖ್ ಮಿಂಯಾಗೆ ಆಮಿಷ ಮತ್ತು ಬೆದರಿಕೆ ಎರಡನ್ನೂ ಒಡ್ಡುತ್ತಾನೆ. ಈ ಆಮಿಷ-ಬೆದರಿಕೆಗಳಿಗೆ ಬತ್ತಖ್ ಮಿಂಯಾ ಬಗ್ಗುವುದಿಲ್ಲ. ಈ ಒಳಸಂಚನ್ನು ಗಾಂಧೀಜಿ ಮತ್ತು ರಾಜೇಂದ್ರ ಪ್ರಸಾದ್ ಅವರ ಗಮನಕ್ಕೆ ತರುತ್ತಾನೆ. ಮತ್ತೊಂದು ಆವೃತ್ತಿಯ ಪ್ರಕಾರ ಬತ್ತಖ್ ಮಿಂಯಾ ಇರ್ವಿನ್ ನ ಅಡಿಗೆಯವನಾಗಿ ಕೆಲಸ ಮಾಡುತ್ತಿರುತ್ತಾನೆ. ಗಾಂಧೀಜಿಯನ್ನು ಊಟಕ್ಕೆ ಕರೆದ ಇರ್ವಿನ್ ಹಾಲಿನಲ್ಲಿ ವಿಷ ಬೆರೆಸಿ ನೀಡುವಂತೆ ಬತ್ತಖ್ ಮಿಂಯಾಗೆ ಸೂಚಿಸಿರುತ್ತಾನೆ.

1950ರಲ್ಲಿ ಅಂದಿನ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಅವರು ಅಸ್ವಸ್ಥರಾಗಿದ್ದ ತಮ್ಮ ಬಂಧುವೊಬ್ಬರನ್ನು ನೋಡಲು ದೆಹಲಿಯಿಂದ ಬಿಹಾರದ ನರ್ಕಟಿಯಾಗಂಜ್ ಗೆ ಪ್ರಯಾಣ ಮಾಡುತ್ತಾರೆ. ರೈಲು ಇಳಿದು ನಡೆಯುತ್ತಿದ್ದಾಗ ಚಿಂದಿ ಉಟ್ಟಿದ್ದ ವ್ಯಕ್ತಿಯೊಬ್ಬನನ್ನು ನೋಡುತ್ತಾರೆ. ಧಾವಿಸಿ ಆತನನ್ನು ಆಲಿಂಗಿಸಿಕೊಳ್ಳುತ್ತಾರೆ. ಆತನ ಹೆಸರು ಬತಖ್ ಮಿಂಯಾ.

ಇರ್ವಿನ್ ನ ಆಮಿಷ-ಬೆದರಿಕೆಗೆ ಸೊಪ್ಪು ಹಾಕದ ಬತ್ತಖ್ ಮಿಂಯಾ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಆತನ ಮನೆ ಮತ್ತು ಹೊಲವನ್ನು ಮುಟ್ಟುಗೋಲು ಹಾಕಿಕೊಂಡು ಹರಾಜಿಗೆ ಇಡಲಾಗುತ್ತದೆ. ಆತನನ್ನು ಥಳಿಸಿ ಜೈಲಿಗೆ ತಳ್ಳಲಾಗುತ್ತದೆ. 1950ರಲ್ಲಿ ಮಿಂಯಾನ ದುರ್ಗತಿಯನ್ನು ನೋಡಿ ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಮರುಗುತ್ತಾರೆ. ಗಾಂಧೀಜಿಯ ಜೀವ ಉಳಿಸಿದ್ದಕ್ಕಾಗಿ ಮಿಂಯಾ ಮತ್ತು ಆತನ ಮೂವರು ಮಕ್ಕಳಿಗೆ 50 ಎಕರೆ ಜಮೀನು ಹಂಚಿಕೆ ಮಾಡುವಂತೆ ತಿರ್ಹುತ್ ವಿಭಾಗದ ಕಲೆಕ್ಟರ್ ಗೆ ಸೂಚನೆ ನೀಡುತ್ತಾರೆ.

ಅರ್ಥಶಾಸ್ತ್ರೀಯ ಇತಿಹಾಸಕಾರ ಗಿರೀಶ್ ಮಿಶ್ರಾ ಈ ಸಂಬಂಧ ಇಂಗ್ಲಿಷ್ ನಿಯತಕಾಲಿಕ Main Stream ನಿಯತಕಾಲಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಘಟನೆಯನ್ನು ದಾಖಲಿಸಿ ಲೇಖನ ಬರೆದಿದ್ದಾರೆ. 1950ರಲ್ಲಿ ರೈಲಿನಿಂದಿಳಿದ ರಾಷ್ಟ್ರಪತಿಯವರನ್ನು ನೋಡಲು ಮಿಶ್ರಾ ಮತ್ತು ಅವರ ಸಹಪಾಠಿಗಳನ್ನು ಅವರ ಶಾಲೆಯ ಉಪಾಧ್ಯಾಯರೇ ಕರೆದೊಯ್ದಿರುತ್ತಾರೆ.

ಬತ್ತಖ್ ಮಿಂಯಾನನ್ನು ತಮ್ಮೊಂದಿಗೆ ಕುಳ್ಳಿರಿಸಿಕೊಂಡು ಸಂಭಾಷಣೆಯಲ್ಲಿ ತೊಡಗುವ ರಾಷ್ಟ್ರಪತಿಯವರು, ನೆರೆದವರಿಗೆಲ್ಲ ಗಾಂಧೀಜಿಯ ಪ್ರಾಣ ಕಾಪಾಡಿದ ವ್ಯಕ್ತಿ ಎಂದೇ ಮಿಂಯಾನನ್ನು ಪರಿಚಯಿಸುತ್ತಾರೆ. 1917ರಲ್ಲಿ ಒಂದು ವೇಳೆ ಗಾಂಧೀಜಿ ವಿಷಪ್ರಾಶನಕ್ಕೆ ಬಲಿಯಾಗಿಬಿಟ್ಟಿದ್ದರೆ ಭಾರತದ ಸ್ವಾತಂತ್ರ್ಯ ಹೋರಾಟ ಯಾವ ದಿಕ್ಕು ಹಿಡಿಯುತ್ತಿತ್ತೋ ಎಂಬ ಬೆರಗನ್ನೂ ರಾಜೇಂದ್ರ ಪ್ರಸಾದ್ ಪ್ರಕಟಿಸಿದ್ದಾಗಿ ಮಿಶ್ರಾ ತಮ್ಮ ಲೇಖನದಲ್ಲಿ ಬರೆಯುತ್ತಾರೆ.

ಗಾಂಧೀಜಿ ಮತ್ತು ರಾಜೇಂದ್ರ ಪ್ರಸಾದ್ ಅವರು ಈ ಪ್ರಕರಣ ಕುರಿತು ಎಲ್ಲಿಯೂ ಬರೆದಿಲ್ಲ. ಆದರೆ ಮಹಾತ್ಮಾ ಗಾಂಧೀಜಿಯವರ ಸಮಗ್ರ ಬರೆಹಗಳ ಹದಿನೈದು ಮತ್ತು ಹದಿನಾರನೆಯ ಸಂಪುಟದಲ್ಲಿ ಡಬ್ಲ್ಯೂ.ಎಸ್.ಇರ್ವಿನ್ ಎಂಬ ಕ್ರೂರ ಬ್ರಿಟಿಷ್ ಪ್ಲ್ಯಾಂಟರ್ ನ ಪ್ರಸ್ತಾಪ ಬರುತ್ತದೆ. ರೈತರ ಮೇಲೆ ದಬ್ಬಾಳಿಕೆ ನಡೆಸಿ ಅವರ ಹೊಲಗಳನ್ನು ಕಿತ್ತುಕೊಂಡು ಅಲ್ಲಿ ನೀಲಿ ಬೆಳೆಸುವ ಇವನು ಚಂಪಾರಣ್ ಗೆ ಬರುವ ಗಾಂಧೀಜಿಯ ಬದ್ಧ ವೈರಿಯಾಗಿರುತ್ತಾನೆ. ಗಾಂಧೀಜಿ ಕಣ್ಣ ಮುಂದೆಯೇ ಇಬ್ಬರು ರೈತರ ಬೆಳೆಗಳನ್ನು ಕಿತ್ತು ಹಾಕಿ ಅವರನ್ನು ಬಡಿದು ದೌರ್ಜನ್ಯ ನಡೆಸಿರುತ್ತಾನೆ. ಈ ಕುರಿತು 1917ರ ಮೇ 24ರಂದು ಗಾಂಧೀಜಿ ಇರ್ವಿನ್ ಗೆ ಕಾಗದ ಬರೆದು ಈ ಆಪಾದನೆ ಮಾಡಿರುತ್ತಾರೆ. ಬತ್ತಖ್ ಖಾನ್ ಮೂಲಕ ಗಾಂಧೀಜಿಯವರನ್ನು ಕೊಲ್ಲಲು ಯತ್ನಿಸಿದ ಬ್ರಿಟಿಷ್ ಪ್ಲ್ಯಾಂಟರ್ ಇರ್ವಿನ್ ಎಂಬುವನು ಮತ್ತು ಗಾಂಧೀಜಿ ಸಮಗ್ರ ಸಂಪುಟಗಳಲ್ಲಿ ಪ್ರಸ್ತಾಪವಿರುವ ಡಬ್ಲ್ಯೂ.ಎಸ್.ಇರ್ವಿನ್ ಎಂಬುವನು ಒಬ್ಬನೇ ವ್ಯಕ್ತಿ ಎಂಬ ನಿಷ್ಕರ್ಷಗೆ ಬರಲಾಗಿದೆ.

ಬತ್ತಖ್ ಮಿಂಯಾ ಗತಿಸಿದ ಒಂದು ವರ್ಷದ ನಂತರ 1958ರಲ್ಲಿ ಆತನ ಕುಟುಂಬಕ್ಕೆ ದೂರದ ಪಶ್ಚಿಮ ಚಂಪಾರಣ್ ನ ಗ್ರಾಮವೊಂದರಲ್ಲಿ ಅಡವಿಗೆ ಹತ್ತಿಕೊಂಡಂತಿದ್ದ ಆರು ಎಕರೆ ಜಮೀನು ನೀಡಲಾಗುತ್ತದೆ. 

ರಾಷ್ಟ್ರಪಿತನನ್ನು ಕೊಂದ ನಾಥೂರಾಮ ಗೋಡ್ಸೆ ಹಿಂದೂ ರಾಷ್ಟ್ರವಾದದ ಪ್ರತೀಕವಾಗಿ ರಾರಾಜಿಸಿದರೆ, ಗಾಂಧೀಜಿಯ ಪ್ರಾಣವನ್ನು ಕಾಪಾಡಿದ ವ್ಯಕ್ತಿ ಇತಿಹಾಸದ ಕತ್ತಲ ಸಂದಿಗೊಂದಿಗಳಲ್ಲಿ ಹೂತು ಹೋಗಿದ್ದಾನೆ. ಸ್ವತಂತ್ರ ಭಾರತದ ಬಹುದೊಡ್ಡ ವಿಡಂಬನೆಯಲ್ಲವೇ ಇದು..

‍ಲೇಖಕರು Admin

August 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: