ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೀವ ನಾರಾಯಣ ನಾಯಕ ಹೊಸ ಕವಿತೆ – ಅರಳು ಮರುಳು…

ರಾಜೀವ ನಾರಾಯಣ ನಾಯಕ

ಹೊರಳಿದೆ ಇಂದು ಅರಳು ಮರುಳಿಗೆ
(ಅಥವಾ ಅದು ಅರಳು ಮರಳೋ, ಗೊಂದಲವಿದೆ!)
ಹಾರೈಕೆಗಳಿರಲಿ ಗೆಳೆಯ ಗೆಳತಿಯರೇ
ಅರವತ್ತಕ್ಕೆ ಒಂದು ಕಡಿಮೆ ಜನುಮದಿನಕೆ

ಈಗ ಹೊರಳಿ ನೋಡಬಹುದು
ಹೊರತು ಮರಳಿ ನಡೆಯಲಾಗದು
ಬಿಟ್ಟು ಹೋದವರ ಕರೆಯಲಾಗದು
ಸಂಧಿಸುವ ಅಗಲುವ ದಾರಿಯಲ್ಲಿ
ನಿಕ್ಕಿ ದಿಕ್ಕುಗಳ ನೆಡಲಾಗದು

ನಿಜ, ಬದುಕು ಬೆಳಕಿನ ಶಲಾಕೆ
ಕತ್ತಲಲ್ಲಿದೆ ಅದರ ಹಿಡಿಕೆ
ಅನಿವಾರ್ಯ ಅರಿವಿನ ದೀಪ
ಕನಸಿನ ದಾರಿಯ ಅನ್ವೇಷಣೆಗೆ

ಕಳೆದು ಉಳಿದ ಲೆಕ್ಕಗಳನ್ನು
ಸೂತ್ರದಲ್ಲಿ ಹಿಡಿಯುವುದು ಬೇಡಬಿಡಿ
ಅದೇ ಬೆಳಕು ಅದೇ ಕಿರಣ ಅದೇ ಗರಿಕೆ
ಕಾದಿವೆ ಹೊಸ ಹೊಸ ಅನುಭವಕೆ

ಹೆಜ್ಜೆ ಗುರುತುಗಳು ಅಳಿಯುತ್ತವೆ
ಊರು ಕೇರಿಗಳಲ್ಲಿ ಅಲೆದದ್ದು
ಗುಡ್ಡಬೆಟ್ಟಗಳ ಹತ್ತಿಳಿದದ್ದು
ನಗರದ ನಿಬಿಡತೆಯಲ್ಲಿ ಕಳೆದು ಹೋದದ್ದು
ಒಂದೇ ಕೊಡೆಯಲ್ಲಿ ಸಮನಾಗಿ ನೆಂದದ್ದು
ಅಥವಾ ಕಾಳಿ ಕಿನಾರೆಯಲ್ಲಿ ತುಟಿ ಕಚ್ಚಿದ್ದೂ!

ಮರೆತು ಹೋದೀತು
ಸಾತ್ ಬೀಸ್ ಲೋಕಲ್ ಹಿಡಿಯಲು
ನಿತ್ಯದ ಧಾವಂತದಲ್ಲಿ ಪಾದ ಸವೆದದ್ದು
ಎಂದೂ ಬಾರದ ಭಡ್ತಿಗಾಗಿ ಕಾದಿದ್ದು
ಅಥವಾ ರಾಶಿ ಕವನಗಳಲ್ಲೂ ನಿನ್ನ
ನಯನಗಳನ್ನು ವರ್ಣಿಸಲಾಗದ್ದು

ಆದರೆ ಕೆಲವು ಗಾಯಗಳು ಹಾಗೇ ಉಳಿಯುತ್ತವೆ!

ಕ್ರೂರ ಕ್ಷಣವೊಂದು ಕ್ಷಣ ನಿಧಾನಿಸಿದ್ದರೆ
ಪಟರಿಯಿಂದ ಪಾರಾಗುತ್ತಿದ್ದ ಆ
ಪೋರನ ಜಜ್ಜಿದ ಪಾದಗಳನ್ನು
ವಲಸೆಹೋದ ಕಾರ್ಮಿಕರ ಬೊಕ್ಕೆ ಪಾದಗಳನ್ನು
ಪಂಢರಪುರಕ್ಕೆ ಹರಕೆ ಹೋಗುವ
ವಾರಕಾರಿಗಳ ಆರ್ತ ಪಾದಗಳನ್ನು
ಅಥವಾ ವಿದಾಯ ಹೇಳದೇ ತಿರುಗಿದ
ನಿನ್ನ ಗೆಜ್ಜೆ ಪಾದಗಳನ್ನು
ಮರೆಯುವುದು ಕಷ್ಟ

ಗೋಳು ದೀರ್ಘವಾಯಿತೇ?
ಕ್ಷಮಿಸಿ ಕರುಣಾಳುಗಳೇ
ಅರಳು ಮರುಳು ಶುರುವಾಗಿದೆ
ಎಂದು ಮನ್ನಿಸಿ!

‍ಲೇಖಕರು Admin

26 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading