ರಾಜಸ್ಥಾನವೆಂಬ ಸ್ವರ್ಗದ ತುಣುಕು


“ನನಗೆ ಸಿಂಗಪುರ್ ಹೋಗಬೇಕು” ಎಂದು ಘೋಷಿಸಿ  ವಾರವೂ ಆಗಿರಲಿಲ್ಲ. ಸರಿಯಾಗಿ ಮೂರನೆಯ ದಿನ ಬೆಳ್ಳಂಬೆಳಿಗ್ಗೆ ಎದ್ದು “ನನಗೆ ಕಾಡಿಗೆ ಹೋಗಬೇಕು ಅನ್ನಿಸ್ತಿದೆ. ಈ ಪೇಟೆ, ಜನಜಂಗುಳಿ, ಗಲಾಟೆ ಸಾಕಾಗಿದೆ. ಒಂದಿಷ್ಟು ಹಸಿರು ನೋಡಿಕೊಂಡು ಕಣ್ಣು ತುಂಬಿಸಿಕೊಳ್ಳಬೇಕು ಅನ್ನಿಸ್ತಿದೆ. ನಾಳೆನೇ ನಾನು ಅಣಶಿ ಕಾಡಿಗೆ ಹೊರಟೆ.” ಮತ್ತೊಂದು ಘೋಷಣೆ ಮಾಡಿ ಆ ದಿನದ ಕೆಲಸವೆಲ್ಲ ಮುಗಿದು  ಮುಸ್ಸಂಜೆಯ ಹೊತ್ತಿಗೆ “ನನಗೆ ರಾಜಸ್ಥಾನಕ್ಕೆ ಕರ್ಕೊಂಡು ಹೋಗಿ’ ಎಂದು ವರಾತೆ ಹಚ್ಚಿದ್ದೆ. ಮಾಮೂಲಿಯಂತೆ  ಟಿ ವಿಗೆ ಹಚ್ಚಿದ್ದ ಕಣ್ಣು ಕದಲಿಸದಂತೆ “ಹ್ಞೂಂ…” ಎನ್ನುವ ಉತ್ತರ ಬಂತು. ನಾನು ಮತ್ತೆ ನನ್ನ ಓದಿನಲ್ಲಿ ತೊಡಗಿಕೊಂಡೆ.
ಬಹುಶಃ ಮಾರನೆ ದಿನ ಬೆಳಗೆದ್ದು ನಾನು ಪ್ಯಾರಿಸ್ ಅಂತಾನೋ ಅಥವಾ ಇಲ್ಲೆ ಎಲ್ಲೋ ಇರುವ ಮೋತಿಗುಡ್ಡದ ತುತ್ತ ತುದಿಗೋ ಅಥವಾ ವಿಭೂತಿ ಫಾಲ್ಸ್ ನ ಕೆಳಗಿನ ಕಂದಕಕ್ಕೋ ಹೋಗೋಣ ಎಂದು ಕಾಡುತ್ತೇನೆ ಎಂಬುದು ಅನುಭವದಿಂದ ಗೊತ್ತು ಮಾಡಿಕೊಂಡಿರುವಾಗ ಅದಕ್ಕೆ ಹೂಂ ಎಂಬ ಉತ್ತರಕ್ಕಿಂತ ಸರಿಯಾದ ಉತ್ತರ ಬೇರೊಂದಿಲ್ಲ ಎಂಬುದೂ ಅವರಿಗೆ ಅದೇ ಅನುಭವದಿಂದಲೇ ಗೊತ್ತಾಗಿದೆ.
ಆದರೂ ವಿಚಿತ್ರ ಕುತೂಹಲದಿಂದ ಒಮ್ಮೆ ನನ್ನ ಕಡೆ ನೋಡಿ, “ಬೆಳಿಗ್ಗೆಯಷ್ಟೇ ಕಾಡಿಗೆ ಹೋಗೋಣ  ಅಂದಿದ್ದೆಯಲ್ಲ? ಈಗೇನು ಆ ಬೆಂಗಾಡಿಗೆ ಹೋಗೋ ಮನಸ್ಸು…..?”  ಇವಳನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ ಎನ್ನುವ ರೀತಿಯಲ್ಲಿ ಪ್ರಶ್ನಿಸಿದರು. ನಾನು ಏನೂ ಮಾತನಾಡದೇ ಸುಮ್ಮನಾದೆ.
ಯಾಕೆಂದರೆ ಬೆಳಿಗ್ಗೆ “ ನನಗೂ ಯಾರಾದರೂ ವನವಾಸಕ್ಕೆ ಕಳುಹಿಸಿದ್ದರೆ ಒಳ್ಳೆಯದಿತ್ತು. ರಾಮ ಸೀತೆಯನ್ನು ಕಾಡಿಗೆ ಕರ್ಕೊಂಡು ಹೋಗಿದ್ದು ಒಳ್ಳೆಯದೇ ಆಯ್ತು. ನೋಡು. ಈ ಊರು ಅಂದರೆ ನನಗೂ ಬೇಜಾರು ಆಗಿಬಿಟ್ಟಿದೆ. ಬೆಳಗ್ಗೆದ್ದು ತಿಂಡಿ ಮಾಡು, ಅಡುಗೆ ಮಾಡು, ನಾಲ್ಕು ನಾಲ್ಕು ಡಬ್ಬ ತುಂಬು, ಪಾತ್ರೆ ತೊಳಿ, ಗಡಿಬಿಡಿಯಿಂದ ಶಾಲೆಗೆ ಓಡು, ನಾನು ಗಾಡಿ ಹೊಡೆಯೋ ಸ್ಪೀಡ್ ಗೆ ಟ್ರಕ್ ನವನೂ ಅವನ ಗಾಡಿ ಸೈಡ್ ಗೆ ಹಾಕ್ತಾನೆ, ಇಂಗ್ಲೀಷ್ ಅಂದರೆ ಕಷ್ಟದ ವಿಷಯ, ಸ್ಕೋರ್ ಆಗೋದಿಲ್ಲ ಅಂತಾ ಇಡೀ ದಿನ ಕ್ಲಾಸ್ ತಗೋ, ಸಂಜೆ ಬಂದರೆ ಮತ್ತದೆ ಕೆಲಸ ಅಡುಗೆ ಮಾಡು,  ಹೋಂ ವರ್ಕ್ ಮಾಡಿಸು, ಬಡಿಸು, ಬಳಿ, ತೊಳಿ…. ಕಾಡಲ್ಲಾದ್ರೆ ಅಡುಗೆ ಮಾಡೋ ಕಷ್ಟ ಇಲ್ಲ, ಪಾತ್ರೆ ತೊಳೆಯುವ ಸಂಕಟ ಇಲ್ಲ, ನಾಳೆ ಏನು ತಿಂಡಿ ಮಾಡಲಿ ಅಂತಾ ಚಿಂತೆ ಇಲ್ಲ. ಗೆಡ್ಡೆ ಗೆಣಸು ತಿಂದ್ಕೊಂಡು  ಹಾಯಾಗಿರಬಹುದು. ನೀವು ಬಂದರೆ ಬನ್ನಿ, ಇಲ್ಲಾ ಅಂದ್ರೆ ಇಲ್ಲ. ನಾನಂತೂ ಕಾಡಿಗೆ ಹೋಗೋದು ಗ್ಯಾರಂಟಿ” ಅಂತಾ ನನ್ನಷ್ಟಕ್ಕೇ ಗೊಣಗುಟ್ಟುತ್ತ ಘೋಷಣೆ ಮಾಡಿದ್ದು ಅವರ ಕಿವಿಗೆ ಬೀಳಲಿ ಎಂದೇ ಹೇಳಿದ್ದು ಮತ್ತೆ ನನ್ನ ಕಡೆಗೇ ತಿರುಗುವ ಸಾಧ್ಯತೆ ಇದ್ದುದರಿಂದ ಸುಮ್ಮನಾದೆ.
ಆದರೆ ಮಾರನೆಯ ದಿನವೂ ಬೆಳಗೆದ್ದು ರಾಜಸ್ಥಾನಕ್ಕೆ “ಯಾವಾಗ ಹೋಗೋದು…” ಎಂದಾಗ ಮಾತ್ರ ಕಂಗಾಲಾಗಿ “ಯಾವ ಪುಸ್ತಕ ಓದ್ತಿದ್ದೀಯಾ?” ಎಂದು ಕೇಳಿದ್ದರು. ನಾನು ಲಕ್ಷ್ಮಿಕಾಂತ ಇಟ್ನಾಳರ ‘ರಾಜಸ್ಥಾನವೆಂಬ ಸ್ವರ್ಗದ ತುಣುಕು’ ಪುಸ್ತಕವನ್ನು ಇವರ ಕೈಗಿಟ್ಟೆ.  ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿ ನೋಡಿ, “ರಾಜಸ್ಥಾನ ಸ್ವರ್ಗದ ತುಣುಕು ಆಗುತ್ತದೆಯಾ? ಆ ಮರುಭೂಮಿ? ಎನ್ನುತ್ತ ಹಿಂದಿರುಗಿಸಿ, “ಅದಕ್ಕೇ ರಾಜಸ್ಥಾನದ ಬೇಡಿಕೆ ಎರಡೆರಡು ಸಲ ಬಂತಾ?” ಎಂದು ಪ್ರಶ್ನಿಸಿದ್ದರು. ಬಹುಶಃ ಅವರಿಗೆ ಗೊತ್ತಿಲ್ಲ. ಅವರೇನಾದರೂ ಈ ಪುಸ್ತಕವನ್ನು ಓದಿದರೆ ನನಗಿಂತ ಮೊದಲೇ ರಾಜಸ್ಥಾನಕ್ಕೆ ಹೋಗೋದಕ್ಕೆ ತುದಿಗಾಲಲ್ಲಿ ನಿಲ್ಲುತ್ತಿದ್ದರು ಎಂಬುದು.
“ಇಲ್ಲಿ ಅಪ್ಪಾಜಿ  ರಾಜಸ್ಥಾನವನ್ನು ವರ್ಣಿಸಿದ ರೀತಿ ನೋಡಿದರೆ ರಾಜಸ್ಥಾನಕ್ಕೆ ಹೋಗಲೇ ಬೇಕು ಅನ್ನಿಸ್ತಿದೆ. ಒಮ್ಮೆ  ಹೋಗೋಣ ಎಂದು ಮುದ್ದು ಮಾಡಲಾರಂಭಿಸಿದೆ. “ನೀನು ಪುಸ್ತಕ ಪೂರ್ತಿಯಾಗಿ ಓದಿ ಮುಗಿಸು. ನಂತರ ನೋಡೋಣ” ಎಂದರು. ಇದು ಪ್ರವಾಸಿ ಕಥನಗಳನ್ನು ಓದುವಾಗ ಮಾಮೂಲಿ ಕಥೆ. ಆ ಪ್ರದೇಶಕ್ಕೆ ಹೋಗಲೇ ಬೇಕು ಅನ್ನಿಸಿ ವರಾತೆ ಹಾಕುವುದು ಮತ್ತು ಕೆಲವೇ ತಾಸುಗಳಲ್ಲಿ ಅದು ಮರೆತು ಬೇರೆ ಸ್ಥಳದ ಹೆಸರು ಹೇಳುವುದು ಒಂದು ರೀತಿಯ ರೂಢಿ ನನಗೆ. ಯಾಕೆಂದರೆ  ಒಂದು ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಮತ್ತೊಂದು ಪುಸ್ತಕ ಕೈಯ್ಯಲ್ಲಿ ಬಂದಿರುತ್ತದೆ. ಹೀಗಾಗಿ  ಹಿಂದಿನ ಪುಸ್ತಕದಲ್ಲಿ ಓದಿದ ಸ್ಥಳಗಳು ಮರೆತು ಹೊಸ ಸ್ಥಳಗಳ ಬಗ್ಗೆ ಮತ್ತದೆ ಕ್ಯೂರಿಯಸ್ ಹುಟ್ಟಿರುತ್ತದೆ. ಅಥವಾ ಹೊಸ ಪುಸ್ತಕದ ಯಾವುದೋ ಪಾತ್ರಗಳು ಮೈಯ್ಯಲ್ಲಿ ಸೇರಿಕೊಳ್ಳುತ್ತದೆ ಎಂಬುದು ಇವರಿಗೆ ಗೊತ್ತಿದೆ.
ಆದರೆ ರಾಜಸ್ಥಾನವೆಂಬ ಸ್ವರ್ಗದ ತುಣುಕಿನ ಕುರಿತು ಓದಿ ಹತ್ತಿರ ಹತ್ತಿರ ವರ್ಷವಾದರೂ ರಾಜಸ್ಥಾನ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಿಲ್ಲ ಎಂದರೆ ಅದಕ್ಕೆ ಕಾರಣ ಅಪ್ಪಾಜಿಯವರ ಚಂದದ ನಿರೂಪಣೆ. ಎಷ್ಟೋ ಪ್ರವಾಸಿ ಕಥನಗಳನ್ನು ಓದಿದ್ದೇನೆ. ಅದೆಷ್ಟನ್ನೋ ಎಷ್ಟು ಚೆನ್ನಾಗಿದೆ ಎಂದು ಮೆಚ್ಚಿಕೊಂಡಿದ್ದೇನೆ. ಕೆಲವನ್ನು ಪರವಾಗಿಲ್ಲ ಎಂಬಂತೆ ಓದಿದ್ದೇನೆ, ಇನ್ನೂ ಕೆಲವಷ್ಟು ಪುಸ್ತಕಗಳು ಬರವಣಿಗೆಯಲ್ಲಿ  ಒಂದಿಷ್ಟು ಸುಧಾರಿಸಬಹುದಿತ್ತು ಎಂಬ ಭಾವನೆಯಲ್ಲಿ ಓದುತ್ತ ತಳಮಳಿಸಿದ್ದೇನೆ. ಕೆಲವನ್ನಂತೂ ಪ್ರವಾಸಿ ಮಾರ್ಗದರ್ಶಿ ಎಂಬಂತೆ ಪುಟ ತಿರುವಿದ್ದೇನೆ. ಇನ್ನು ಮತ್ತೆ ಒಂದಿಷ್ಟು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ ಮೂರನೇ ಪುಟಕ್ಕೇ ಗಾಢ ನಿದ್ದೆಗೂ ಜಾರಿದ್ದೇನೆ, ಆದರೆ ರಾಜಸ್ಥಾನವೆಂಬ ಸ್ವರ್ಗದ ತುಣುಕು ನನ್ನನ್ನು ಸೆಳೆದುಕೊಂಡಷ್ಟು ಇನ್ನಾವ ಪ್ರವಾಸಿ ಕಥನಗಳೂ ಸೆಳೆದುಕೊಳ್ಳಲಿಲ್ಲ ಎಂಬುದಂತೂ ಸತ್ಯ.  ನಿರೂಪಣೆಗೆ, ಹೇಳುವಲ್ಲಿನ ಮಾರ್ದವತೆಗೆ ಫಿದಾ ಆಗಿದ್ದು ರಾಜಸ್ಥಾನವೆಂಬ ಸ್ವರ್ಗದ ತುಣುಕಿಗೆ ಮಾತ್ರ. ಹೀಗಾಗಿಯೇ ನನ್ನ ಈ ವಾರದ ರೆಕಮಂಡ್ ಲಕ್ಷ್ಮಿಕಾಂತ ಇಟ್ನಾಳರ ರಾಜಸ್ಥಾನವೆಂಬ ಸ್ವರ್ಗದ ತುಣುಕು ಎಂಬ ಪ್ರವಾಸ ಕಥನ. ಇದನ್ನು  ಪ್ರವಾಸಿ ಕಥನ ಎನ್ನಬಹುದೋ, ಗದ್ಯಕಾವ್ಯ ಎನ್ನಬಹುದೋ ಅಥವಾ ಗಜಲ್, ಶಾಯರಿ, ಹಳೆಯ ಸಿನೇಮಾಗಳ ಪ್ರೇಮಗೀತೆಗಳನ್ನು ಸಮ್ಮಿಶ್ರಗೊಳಿಸಿ ಬರೆದ ಭಾವಪರವಶತೆಯ ಸುಂದರ ನಿರೂಪಣೆ ಎನ್ನಬಹದೋ… ನನಗೆ ಗೊತ್ತಿಲ್ಲ. ನೀವೇ ಓದಿ ತೀರ್ಮಾನಿಸಿಕೊಳ್ಳಿ.
ಲಕ್ಷ್ಮಿಕಾಂತ ಇಟ್ನಾಳ್ ರದ್ದು ಕವಿ ಹೃದಯ ಎಂದು ನಾನು ಹೇಳಿ ಮುಗಿಸಿ ಬಿಟ್ಟರೆ ಅದೊಂದು ಅಪೂರ್ಣ ಮಾಹಿತಿ. ಅದರೊಟ್ಟಿಗೆ ಅವರದ್ದು ಮಗು ಮನಸ್ಸು ಎಂಬ  ಮತ್ತೊಂದು ಮಾತನ್ನು ಹೇಳದೆ ಹೋದರೆ ನಾನು ತಪ್ಪಿತಸ್ಥೆಯಾದೇನು. ನನ್ನಂತಹ ಕಿರಿಯಳನ್ನೂ ತೀರಾ ಸೌಜನ್ಯಯುತವಾಗಿ, ಅಪಾರ ಗೌರವದಿಂದ  ನಡೆಸಿಕೊಳ್ಳುವ ಲಕ್ಷ್ಮಿಕಾಂತ ಇಟ್ನಾಳ ನಮ್ಮ ನಡುವಣ ಸಂವೇದನೆಗೊಂದು ಹೆಸರು. ಅಂತೆಯೇ ಈ ಪ್ರವಾಸ ಕಥನ ಕೂಡ ಅಷ್ಟೇ ಸಂವೇದನಾಶೀಲವಾಗಿ ಬಂದಿದೆ. ಹೀಗಾಗಿಯೇ ಅವರು ತಾನೇಕೆ ರಾಜಸ್ಥಾನಕ್ಕೆ ಹೋಗುವ ನಿರ್ಧಾರ ಮಾಡಿದೆ ಎಂಬುದನ್ನು ವಿವರಿಸುವಾಗ ಓದುಗರಿಗೆ ರಾಜಸ್ಥಾನಕ್ಕೆ ಹೋಗಬಾರದು ಎಂದೆನಿಸಲು ಕಾರಣಗಳೇ ಸಿಗದು.
ರಾಜಸ್ಥಾನಕ್ಕೆ ಹೋಗಿ ಅಲ್ಲಿನ ಆ ಮರುಭೂಮಿಗೊಂದು ಚಂದದ ಅಂಗಿ ತೊಡಿಸುವ ಇಲ್ಲಾ ಕೊರೆವ ರಾತ್ರಿಯ ಚಳಿಯಲ್ಲಿ ಅದಕ್ಕೊಂದು ಬೆಚ್ಚನೆಯ ರಜಾಯಿ ಹೊಚ್ಚಿ ನನ್ನ ಪ್ರೀತಿ ತುಂಬಿದ ಬಾಹುಗಳಲ್ಲಿಬಾಚಿ ತಬ್ಬಿಕೊಳ್ಳುವ ಕುಚುಕುಚುವಿನ ಹಂಬಲ ಒಳಗೊಳಗೆ ಶುರು ಹಿಡಿದುಬಿಟ್ಟಿತ್ತು. ಈ ಪ್ರಕೃತಿಯು ಎಲ್ಲಿಯೂ ತಾರತಮ್ಯ ಮಾಡದೇ  ಈ ಮನುಷ್ಯನ ತೆಕ್ಕೆಗೆ ಸಿಗದೇ ಇನ್ನೂ  ಭ್ರಷ್ಟವಾಗದೇ ಎಲ್ಲೆಡೆಯೂ ಒಂದೇ ಸಮಾನತೆಯನ್ನು ಕಾಯ್ದುಕೊಂಡಿರುವ ಬಲು ಸುಂದರಾತಿ ಸುಂದರ ಭೂದಾಯಿಯ ಮಧುರ ಮಡಿಲು ಅದು ಮರುಭೂಮಿ ಎನ್ನುತ್ತಾರೆ. ಬಹುಶಃ ಮರುಭೂಮಿಯ ಬಗೆಗೂ ಪ್ರೇಮ ಕಾವ್ಯವೊಂದನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೇ.ಹೀಗಾಗಿಯೇ “ದಡಗಳೇ ಇಲ್ಲದ ಮರಳಸಾಗರವೋ, ಮರುಳಸಾಗರವೋ, ಸ್ವತಃ ದೇವನೇ ಬಿಡಿಸಿದ ಓರಂದವೋ.. ಹೀಗೆ ಸಾಗುವ ಈ ಕಲಾತ್ಮಕ ಸಾಲುಗಳು ನಿಮ್ಮನ್ನು ಕಾವ್ಯಲೋಕದ ಕಡೆಗೆ ಕರೆದೊಯ್ಯಲಿಲ್ಲವೆಂದರೆ ಹೇಳಿ, ಶಿವನಾಣೆ, ನಾನು  ಮತ್ತೆಂದೂ ಈ ಪುಸ್ತಕವನ್ನು ಕೈಗೆತ್ತಿಕೊಳ್ಳಲಾರೆ.
ಕಾಲ್ ಬೇಲಿಯನ್ ಎಂಬ ಸುಂದರಿಯರ ನೃತ್ಯ , ಕರತಾಲ್ ನೊಂದಿಗೆ ಸೂಫಿಯಾನಾ ಸಂಗೀತ, ಕೆಲವೇ ಕೆಲವು ಹಿರಿಯರು ಮಾತ್ರ ನುಡಿಸಲು ತಿಳಿದಿರುವ ಆಡಿನ ಕರುಳಿನಿಂದ ಮಾಡಿದ ತಂತಿಯನ್ನು ಜೋಡಿಸಿದ ಕಮಾಯ್ ಚಾ ಎಂಬ ಅಳಿವಿನಂಚಿನಲ್ಲಿರುವ  ತಂತಿವಾದ್ಯ, ರಾವಣ ಹಾಥ, ಜಂತರ್, ಏಕತಾಲ್ ನಾದಗಳು, ಘೂಮರ್ ನೃತ್ಯ ಎಂಬ ಎಲ್ಲ ಶಬ್ಧಗಳು ಯಾಕೋ ನನ್ನ ತಲೆಯಲ್ಲೂ ತನ್ನ ತನನಂ ಹೊರಡಿಸಿದಂತಾಗಿ ಈ ರಾಜಸ್ಥಾನಿ ಸಂಗೀತವನ್ನು ಜೀವನದಲ್ಲಿ ಒಮ್ಮೆಯಾದರೂ ರಾಜಸ್ಥಾನದಲ್ಲೇ ಅದನ್ನು ಸವಿಯಬೇಕು ಎಂಬ ಹಠವನ್ನು ಹೆಚ್ಚಿಸುವಲ್ಲಿ ಖಂಡಿತವಾಗಿಯೂ ಸಫಲವಾಗಿವೆ. ರಾಜಸ್ಥಾನ ಸ್ವರ್ಗದ ತುಣುಕು ಹೌದೇ ಹೌದು ಎಂದು ನಿರೂಪಿಸುವಲ್ಲಿ ಲಕ್ಷ್ಮಿಕಾಂತ ಇಟ್ನಾಳರು ಎಲ್ಲಿಯೂ ಸೋತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಅವರದೇ ಈ ಕೆಳಗಿನ ಸಾಲುಗಳನ್ನು ಓದಿ ನೋಡಿ.
“ಕನಸಿನ ಲೋಕದ ಸಂಜೆಯಲ್ಲಿ ಕೇವಲ ನಾನು, ಗೆಳತಿಯಂತಹ ಮರಳು ಮತ್ತು ಸಂಗೀತದ ಆಲಾಪಗಳ ಲಹರಿಗಳು ಮಾತ್ರ ನನ್ನೊಂದಿಗೆ. ಅತ್ತ ಮುಳುಗುತ್ತಿರುವ ಸೂರ್ಯ,  ಇತ್ತುದಯಿಸುವ ಚಂದ್ರರ ಮಧ್ಯದ ಈ ಮರಳುಗಾಡಲ್ಲಿ ನಾವಷ್ಟೇ… ಅದೊಂದು ರೀತಿಯ ಭುವಿಯ ಬಾನ ಸಂಚಾರವೇ, ಇಲ್ಲಾ ಭಾವ ಸಂಚಾರವೋ! ಇಂತಹ ಈ ಮಹೋಲೊಂದನ್ನು ಬದುಕಿನಲ್ಲಿ ಒಮ್ಮೆಯಾದರೂ ಸವಿಯಲು ಹೃದಯ ಬಾಯಿ ಬಾಯಿ ಬಿಡುತ್ತಿತ್ತು.” ಎನ್ನುತ್ತ ನಮಗೂ ಆ ಮರಳುಗಾಡಿನ ಹುಚ್ಚು ಹಚ್ಚುತ್ತಾರೆ. ನಿಜ ಹೇಳಬೇಕೆಂದರೆ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡು ನಾನೂ ಹೀಗೊಮ್ಮೆ  ಹೋಗಿದ್ದರೆ ಎಂದು ಕನವರಿಸಿಕೊಂಡೆ. “ನನ್ನ ಗೆಳತಿ, ಥಾರ್ ಎಂಬ ಮರಳರಾಣಿ, ರಾತ್ರಿಯಲ್ಲಿ ತನ್ನ ತಣ್ಣನೆಯ ಕೈ ಬೆರಳುಗಳನ್ನೆತ್ತಿ ನನ್ನತ್ತ ಬಾ ಎಂದು ಕದ್ದು ಕರೆಯುವ ಗೆಳತಿಯ ‘ಇಶಾರೆಯಲ್ಲಿ ಕಣ್ಣು ಮಿಟುಕಿಸಿ ತವಕಿಸುತ್ತ ಕರೆಯುತ್ತಿತ್ತು. ನನಗೆ ನನ್ನ ಮರಳರಾಣಿಯೆಡೆಗೊಮ್ಮೆ ಅನೇಕ ಅನೇಕ ಬಯಕೆಗಳ ‘ಅನ್ ಗಿಣತ್’ ತೆರೆಗಳೇ ಎದೆಯಾಳದಿಮದ ಉಕ್ಕಿ ಉಕ್ಕಿ  ಬರುತ್ತಿದ್ದವು” ಎನ್ನುವ ವಾಕ್ಯವನ್ನೋದಿಯೂ ರಾಜಸ್ಥಾನದಲ್ಲಿ ಮರುಭೂಮಿ ಬಿಟ್ಟು ನೋಡಲು ಬೇರೆ ಏನಿದೆ ಎಂದು ಗೊಣಗುವವರು ಇರಲು ಸಾಧ್ಯವೇ?
ಒಂದು ಮಾತು ಮಾತ್ರ  ನನ್ನ ಮನಸ್ಸಿನಾಳದಲ್ಲಿ ಕುಳಿತು ಬಿಟ್ಟಿದೆ. ಪ್ರವಾಸ ಹೋಗುವವರು ಒಮ್ಮೆ ಪ್ಯಾಕೇಜ್ ಫಿಕ್ಸ ಆದ ಮೇಲೆ ಅದರಂತೆ ನಡೆದುಕೊಳ್ಳಬೇಕು. ಆದಾಗ್ಯೂ ಒಂದು ಹತ್ತು ಪರ್ಸೆಂಟ್ ಅತ್ತ ಇತ್ತ ಆಗಬಹುದು ಎಂದು ಒಳ ಮನಸ್ಸಿಗೊಂದಿಷ್ಟು ಮೊದಲೇ ಹೇಳಿಕೊಂಡಿರಬೇಕು ಎನ್ನುತ್ತಾರೆ. ಇದು ಎಷ್ಟು ನಿಜವಾದ ಮಾತು. ಹಿಂದಿನ ವರ್ಷ ನಾವು ಜೊಯ್ಡಾದ ಕಾಡುಗಳಲ್ಲಿ ಕಳೆದು ಹೋಗಬೇಕೆಂದು ನಿರ್ಧರಿ ಹೊರಟಿದ್ದೆವು. ಆದರೆ ಎರಡನೇ ದಿನಕ್ಕೇ ನನಗೆ ವಾಂತಿ, ಪುಡ್ ಪಾಯಿಸನ್ ಎಂಬ ಹೆಸರಿನ ಆಹಾರದ ಅಲರ್ಜಿ. ಅಂತೂ ಕಾಡು ಸುತ್ತಿ ಬರುವಷ್ಟರಲ್ಲಿ ನಾನು ಹೈರಾಣಾಗಿದ್ದೆ. ಆದರೂ ಪೂರ್ತಿ ನೋಡಲಾಗದ ಬೇಸರ. ಇಂತಹ ಕೆಲವೊಂದು ಆಕಸ್ಮಿಕಗಳು ನಮ್ಮ ಪ್ರಯಾಣವನ್ನು ವ್ಯತ್ಯಯ ಮಾಡಬಹುದು.
ಆದರೆ ನಾವು ಈ ಮಾತನ್ನು ಜೀವನದ ಪ್ರವಾಸಕ್ಕೂ ಅನ್ವಯಿಸಿಕೊಂಡರೆ ಅದೆಷ್ಟು ಚೆನ್ನ… ಹೀಗೇ ಇರಬೇಕು ಎಂದುಕೊಂಡ ಜೀವನದಲ್ಲಿ ಅಕಸ್ಮಾತಾಗಿ ಏರುಪೇರಾಗಬಹುದು. ಒಂದಿಷ್ಟು ವ್ಯತ್ಯಯ ಸಹಜ ಎಂದುಕೊಂಡರೆ ಬದುಕು ಅದೆಷ್ಟು ಸಲೀಸು. ದಿನಾ ಬೆಳಗೆದ್ದು ಇಂದಿನ ದಿನ ಹೀಗೇ ಇರಬೇಕು ಎಂದು ಗೆರೆಕೊರೆದಂತೆ ಪ್ಲಾನ್ ಮಾಡಿದಾಗ್ಯೂ ಆಗುವ ವ್ಯತ್ಯಾಸವನ್ನು ಸಹಜ ಎಂದುಕೊಂಡರೆ ಸಂಬಂಧಗಳು ಹದಗೆಡದೆ ಸುರಳೀತವಾಗಿ ಸಾಗಬಹುದು. ಸಂಬಂಧಗಳ ವಿಷಯದಲ್ಲೂ ಹೀಗೇ. ಒಮ್ಮೆ ಫಿಕ್ಸ ಆದ ಮೇಲೆ ಅದರಂತೆ ನಡೆಯಬೇಕು. ಆದಾಗ್ಯೂ ಹತ್ತು ಪರ್ಸೆಂಟ್ ಅತ್ತ ಇತ್ತ ಎಂದುಕೊಂಡರೆ ಅದೆಷ್ಟು ಚೆನ್ನ. ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರ ಬಳಿ ಒಂದು ಸಂಬಂಧ ಗಟ್ಟಿಯಾಗಿ ಇರಬೇಕೆಂದರೆ ಏನು ಮಾಡಬೇಕು ಎಂದು ಕೇಳಿದ್ದ. ಅವರು ಒಂದೇ ಶಬ್ಧದ ಉತ್ತರ ಕಳುಹಿಸಿದ್ದರು. ಅದು ಹೊಂದಾಣಿಕೆ. ಬದುಕು ಎಂಬುದರ ನಿಜವಾದ ಅರ್ಥವೇ ಹೊಂದಾಣಿಕೆ ಎಂಬುದು ಮನಸಿಗೆ ನಾಟಿದಂತೆ ಅರ್ಥವಾದರೆ ಅದೆಷ್ಟು ಸೊಗಸು.
‘ಇಂದು ನಾನು ನಗುಮೊಗದಿಂದ ಇರುತ್ತೇನೆ. ನನ್ನ ಸಿಟ್ಟನ್ನು, ಇರುಸು ಮುರುಸನ್ನು ಬದಿಗೆ ಸರಿಸುತ್ತೇನೆ’ ಎಂದೆಲ್ಲ ಎದ್ದ ಕೂಡಲೇ  ಪ್ರತಿನಿತ್ಯ ಹೇಳಿಕೊಂಡು ಬಿಟ್ಟರೆ ಆ ದಿನ ನಾವು ಗೆದ್ದಂತೆಯೇ. ಎನ್ನುತ್ತಾರೆ ಲಕ್ಷ್ಮಿಕಾಂತ ಇಟ್ನಾಳ.  ಇದು ಪ್ರವಾಸಕ್ಕಷ್ಟೇ ಸಿಮಿತವಾಗದೇ ನಿಜ ಜೀವನಕ್ಕೂ ಅನ್ವಯಿಸಿದರೆ ಬದುಕು ನಂದನವನ.ರಾಜಸ್ಥಾನ ಎಂಬುದು ಒಂದು ಅದ್ಭುತ ಪ್ರಪಂಚ. ಹನಿ ನೀರಿಲ್ಲದಿದ್ದರೂ ಕಣ್ಮನ ತಣಿಸುವ ಸ್ಥಳಗಳಿಗೆ ಎಂದೂ ಕೊರತೆಯಿಲ್ಲ. ಅಂತೆಯೇ  ಸಂಗೀತದ ರಸದೌತಣಗಳಿಗೂ ಎಂದಿಗೂ ಬಡತನವಿಲ್ಲ.ಬಿರ್ಲಾ ಮಂದಿರ, ಪಿಂಕ್ ಸಿಟಿ ಜೈಪುರ, ಬಿಕಾನೇರ್, ಪ್ರೊಕ್ರಾನ್ ಹೀಗೆ ಸಾಲು ಸಾಲು ಪ್ರದೇಶಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಹವಾಮಹಲ್ ನ ಮೂಲೆ ಮೂಲೆಯಲ್ಲೂ ಗಾಳಿಯಾಡುವ ಜಾಲಂದರಗಳು, ಇಡೀ ಕಟ್ಟಡದ ವಿನ್ಯಾಸ ಸೂಕ್ಷ್ಮವಾಗಿದೆ.  ರಾಜ ರಾಣಿಯರ ಕೊಠಡಿ, ಪ್ರತಿ ರಾಣಿಯ ಕಕ್ಷೆಗೆ ತೆರಳಲು ಸರಿಯಾದ ವ್ಯವಸ್ಥೆ. ಸಂಜೆ ಆಯಿತೆಂದರೆ ಸಾಕು. ರಾಜ ಯಾವ ರಾಣಿಯ ಅಂತಃಪುರದಲ್ಲಿದ್ದಾನೆ ಎಂದು ಅರಿವಾಗದಂತೆ ರಚಿತವಾಗಿದೆ. ಬಹುಪತ್ನಿತ್ವದ ಈ ಸಮಯದಲ್ಲಿ ಇಂತಹ ಮಹಲುಗಳು ನಿಜಕ್ಕೂ ಕುತೂಹಲಕಾರಿ. ಇವೆಲ್ಲದರ ಜೊತೆ ಹೋಗಿರುವ ಸ್ಥಳಗಳಲ್ಲಿ ಹೊಟೇಲ್ ನವರ ಊಟ, ತಿಂಡಿಯ ವಿಷಯದಲ್ಲಿ ಮೋಸ ಹೋಗದಂತೆ ಜಾಗ್ರತೆವಹಿಸಲು ತಿಳಿಸುತ್ತಾರೆ.
ಇತಿಹಾಸ ಎಷ್ಟು ಮೋಸ ವಂಚನೆಯಿಂದ ಕೂಡಿದೆ ಎಂದರೆ ಅಧಿಕಾರಕ್ಕಾಗಿ ತನ್ನ ಸಹೋದರರನ್ನೇ ಕೊಲ್ಲಿಸಿದ  ಅನೇಕರು ಸಾಲು ಸಾಲಾಗಿ ಕಣ್ಣೆದುರಿಗೆ  ಢಾಳಾಗಿ ಕಾಣುತ್ತಿದೆ. ಅಮೇರ್ ಪಟ್ಟಣದ ಕಥೆಯೂ ಇಂತಹುದ್ದೇ ಮೋಸ, ವಂಚನೆ, ರಕ್ತಸಿಕ್ತ. ರಾಜಾ ಅಲನ್ ಸಿಂಗ್ ಚಂದಾ ಧೋಲಾ ರೇ ಎಂಬ ಹೆಸರಿನ ಮಗುವೊಂದನ್ನು   ಅಕ್ಕರೆಯಿಂದ ಸಾಕಿದ್ದ. ಆ ಹುಡುಗನನ್ನು ಅತೀ ಪ್ರಿತಿಯಿಂದ ಸಾಕಿ ದೊಡ್ಡವನಾದ ಮೇಲೆ ತನ್ನ ಪ್ರತಿನಿಧಿಯಾಗಿ ದೆಹಲಿಗೆ ಕಳುಹಿಸಿದ್ದ. ಆದರೆ ಅಲ್ಲಿ ಧೋಲಾ ರೇ ಅಲ್ಲಿನ ಗೂಢಾಚಾರರೊಂದಿಗೆ ಕೈ ಜೋಡಿಸಿ ಸಂಪ್ರದಾಯದಂತೆ ದೀಪಾವಳಿ ಹಬ್ಬದಲ್ಲಿ  ಮಿಶಸ್ತ್ರರಾಗಿ  ಪಿತೃ ತರ್ಪಣ ಬಿಡುತ್ತಿರುವ ಸಮಯದಲ್ಲಿ ಹೊಂಚು ಹಾಕಿ ಎಲ್ಲರ ಸಮೇತವಾಗಿ ಎಲ್ಲರನ್ನೂ ಕೊಂದು ಸರೋವರದ ನೀರನ್ನೆಲ್ಲ ಕೆಂಬಣ್ಣವಾಗಿಸಿ ಇತಿಹಾಸದ ಕಪ್ಪುಚುಕ್ಕಿಯ ಕಥೆ ಹೇಳಿದರೆ ಸಾಕಾಗದು. ಎಂದಿಗೂ ಹೊರಜಗತ್ತಿಗೆ ಗೊತ್ತಾಗದ  ಇಂತಹ ಹತ್ತಾರು  ಕಥೆಗಳನ್ನು ತೆರೆದಿಡುವ ಕೀರ್ತಿಗೆ  ಲಕ್ಷ್ಮಿಕಾಂತ ಇಟ್ನಾಳ ಭಾಜನರಾಗುತ್ತಾರೆ.
ಶಿಲ್ಪಗ್ರಾಮ, ಬಿಕಾನೇರ್, ಪ್ರೋಕ್ರಾನ್ ಗಳ ಬಗ್ಗೆ ಓದುವಾಗಲಂತೂ ನನಗೆ ನಾನೇ ಸ್ವತಃ ಅಲ್ಲೆಲ್ಲ ಓಡಾಡಿ ಬಂದ ಆಪ್ತ ಅನುಭವ.  ಅಡ್ಡಂ ತಡ್ಡಂ ಅರ್ರಂ ಕರ್ರಂ ಪಾನ್ ಪುಲ್ಲಿ ಎನ್ನುತ್ತ ಕೆಲವು ದಿಗಳ ಹಿಂದೆ ನನ್ನ ಮಕ್ಕಳು ಆಟ ಆಡುತ್ತಿದ್ದರು. ಇದೆಲ್ಲ ನಮ್ಮ ಕಾಲಕ್ಕೇ ಮುಗಿದು ಹೋಯಿತು, ಈಗಿನ ಮಕ್ಕಳು ಕೇವಲ, ಸಬ್ ವೇ ಸಪ್ಪರ್ಸ, ಶಾಡೋ ಫೈಟ್, ಇವುಗಳಲ್ಲೇ ಮುಳುಗಿರುತ್ತಾರೆ ಎಂದು ಕೊಂಡ ನನಗೆ ಅಚ್ಚರಿ. ಲಕ್ಷ್ಮಿಕಾಂತ ಇಟ್ನಾಳರೂ ಇಂತಹುದ್ದೊಂದು ಆಟದ ಬಗ್ಗೆ ಪ್ರಸ್ತಾಪಿಸುತ್ತ ಶಿಲ್ಪಗ್ರಾಮವು ಇಂತಹ ಹತ್ತಾರು ಗ್ರಾಮ ಭಾರತದ ನೆನಪನ್ನು ಬಚ್ಚಿಟ್ಟುಕೊಂಡ ಪರಿಯನ್ನು ವಿವರಿಸುತ್ತಾರೆ. ಪ್ರೋಕ್ರಾನ್ ಬಗ್ಗೆ ಇರುವ ಭಾವನಾತ್ಮಕ ಸಂಬಂಧ ಕೂಡ ಇಲ್ಲಿ ಮುಖ್ಯವಾಗುತ್ತದೆ.
ನಾನು ಮದುವೆ ಆಗಿ ಬಂದ ಹೊಸತು. ಮನೆಯೆದುರಿಗೆ ಮಡಿಕೆ ಮಾಡುವ ಕುಂಬಾರರ ಒಂದಿಷ್ಟು ಮನೆಗಳಿವೆ.  ಆ ಮನೆಯ ಹಿರಿಯ ವಾಸುದೇವಣ್ಣ ತಿಗರೆ ತಿರುಗಿಸುತ್ತ, ಮಣ್ಣಿಗೆ  ಆಕಾರ ಕೊಡುತ್ತ ಮಡಿಕೆ ಮಾಡುತ್ತ ಇರುತ್ತಿದ್ದರು. ನನಗೋ ಅದು ಹೊಸ ವಿಷಯ. ತಿಗರೆಯಲ್ಲಿ ಮಣ್ಣು ಮಡಿಕೆ ಆಗುವುದನ್ನು ನೋಡುವುದೇ ಒಂದು ಚಂದ. ಅದರ ಸೆಳೆತಕ್ಕೆ ಒಳಗಾಗಿ, ಯಾವತ್ತೂ ದೂರದಿಂದಲೇ ನೋಡುತ್ತಿದ್ದವಳು, ಆ ದಿನ ಸೀದಾ ಅವರ ಅಂಗಳಕ್ಕೆ ಹೋಗಿ ನಿಂತಿದ್ದೆ. ಊರಿಗೆ ಹೊಸದಾಗಿ ಮದುವೆ ಆಗಿ ಬಂದ ಸೊಸೆ, ಹೀಗೆ ಧಿಡಿರ್ ಆಗಿ ಮಡಿಕೆ ಮಾಡುವಲ್ಲಿ ಬಂದು ನಿಂತರೆ.. ಸಹಜವಾಗಿಯೇ ವಾಸುದೇವಣ್ಣ ಅಚ್ಚರಿಗೊಂಡಿದ್ದರು. ಈಗೇನಾದರೂ ಹಾಗೆ ಹೋಗಿ ನಿಂತಿದ್ದರೆ “ಬಾ ಮಗಳೆ, ಮಡಿಕೆ ಮಾಡು” ಎಂದು ಸಲಿಸಾಗಿ ಕರೆದು ಮಣ್ಣನ್ನು ಕೈಗಿಡುತ್ತಿದ್ದರೇನೋ. ಆದರೆ ಅದು ಮದುವೆಯಾಗಿ ಇನ್ನೂ ಹದಿನೈದು ದಿನವೂ ಆಗಿರದ ಸಂದರ್ಭ. ಅವರೇ ಹೇಳುವಂತೆ ಇನ್ನೂ ಅರಶಿಣ ಒಣಗದ ಹಸಿ ಮೈ.ಹೀಗಾಗಿ ಅಚ್ಚರಿಯಿಂದ  ನೋಡುತ್ತ “ಏನು” ಎಂದಿದ್ದರು. “ನನಗೂ ಮಡಿಕೆ ಮಾಡುವುದು ಕಲಿಸು” ಎನ್ನುತ್ತ ಮಣ್ಣಿಗೆ ಕೈ ಹಾಕಿದ್ದೆ.
ಇತ್ತ ಮನೆಯಲ್ಲಿರದ ಸೊಸೆಯ ಹುಡುಕಾಟ ಪ್ರಾರಂಭವಾಗಿತ್ತು. ಯಾರದ್ದಾದರೂ ಮನೆಗೆ ಹೋಗಿರಬೇಕು ಎನ್ನಲು, ಊರು ಹೊಸತು. ದಾರಿಯೂ ಗೊತ್ತಿಲ್ಲ. ಮನೆ ಮಂದಿಯೆಲ್ಲ ಕಂಗಾಲಾಗಿದ್ದರು. ಆದರೂ ಎದುರಿನ ಕುಂಬಾರರ ಮನೆಗೆ ಹೊಗಬಹುದೆಂಬ ಕಲ್ಪನೆ ಅವರಿಗೆ ಬಂದಿರಲೇ ಇಲ್ಲ.ಎಲ್ಲಿಗೆ ಹೋದಳು ಎಂದು ಹುಡುಕಿ ಹುಡುಕಿ ಹೈರಾಣಾಗಿ ಮುಂದೇನು ಮಾಡುವುದು ಎಂದು ಯೋಚಿಸುವ ಹೊತ್ತಿನಲ್ಲಿ   ಕೆಸರು ಕೈಯ್ಯನ್ನು ಹಿಡಿದುಕೊಂಡು ಬಂದ ನನ್ನನ್ನು ಯಾವುದೋ ಲೋಕದ ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೊಡಿದ್ದು ನನಗೀಗಲೂ ನಗೆ ತರುತ್ತದೆ. ಆದರೆ ನಾನೋ ಒಂದು ಕರಕುಶಲ ಕಲೆಯನ್ನು ಕಲಿತ ಉಮ್ಮೇದಿಯಲ್ಲಿದ್ದೆ. ಆದರೆ ಈಗ ಊರಿಗೆ ಹೋದರೆ ವಾಸುದೇವಣ್ಣ ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದಾರೆ. ಮಡಿಕೆ ಮಾಡುವ ಕಾಯಕ ಸಂಪೂರ್ಣ ನಿಂತು ಹೋಗಿದೆ. ದೂರದಲ್ಲಿ ಚಾಚಿ ನಿಂತ ತಿಗರೆ ಅಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ರಾಜಸ್ಥಾನದ ಶಿಲ್ಪಗ್ರಾಮದ ಬಗ್ಗೆ ಓದುವಾಗ ನನಗೆ ಇದೆಲ್ಲ ನೆನಪಾಗಿ ಮನಸ್ಸು ಹದಿನಯದು ವರ್ಷಗಳ ಹಿಂದಕ್ಕೋಡಿ ಮುದಗೊಂಡಿತು.
ಬಿಕಾನೇರ್ ನನಗೆ ಗಮನ ಸೆಳೆದದ್ದು ಅಲ್ಲಿ ಒಬ್ಬ ಹೆಣ್ಣಿನ ಬಗ್ಗೆ ಇರುವ ಕಳಕಳಿಯಿಂದಾಗಿ. ಹೆಣ್ಣೊಬ್ಬಳು ಮದುವೆಯಾಗಿ ಬಂದ ನಂತರ ಯಾವುದೇ ಕಾರಣಕ್ಕೆ ಗಂಡನ ಮನೆಯಲ್ಲಿ ಬಾಳಲಾಗದ ಸ್ಥಿತಿ ನಿರ್ಮಾಣವಾದರೆ  ಅವಳ ತವರ ಮನೆಯಿಂದ ತಂದೆಯೋ ಅಣ್ಣನೋ ಕರೆದೊಯ್ಯಲು ಬರುವವರೆಗೆ ಆ ಊರಿನ ಹಿರಿಯರೊಬ್ಬರು ಆಕೆಗೆ ತಂದೆಯ ಸ್ಥಾನದಲ್ಲಿ ನಿಂತು ತನ್ನ ಮನೆಗೆ ಕರೆದೊಯ್ದು ಆಶ್ರಯ ನೀಡುತ್ತಾರೆ. ಯಾಕೆಂದರೆ ಗಂಡ ಬೇಡವೆಂದಾದ ಮೇಲೆ ಆ ಮನೆಯಲ್ಲಿ ಇರುವಂತಿಲ್ಲ, ಗಂಡನ ಸಂಬಂಧಿಗಳ ಮನೆಯಲ್ಲಿ ಇರಲೂ ಮನಸ್ಸು ಒಪ್ಪುವುದಿಲ್ಲ. ಆದರೆ ಅವಳನ್ನು ನಡು ಬೀದಿಯಲ್ಲಿ ನಿಲ್ಲಿಸಿದರೆ ಆ ಹಳ್ಳಿಯ ಮರ್ಯಾದೆ ಪ್ರಶ್ನೆ. ಹೀಗಾಗಿ ಈ ವ್ಯವಸ್ಥೆ ಒಂದು ವೇಳೆ ಹಾಗೆ ಉಳಿಸಿಕೊಳ್ಳದೇ ಹೋದರೆ ಹಳ್ಳಿಯ ಇಜ್ಜತ್ ಏನಾಗಬೇಕು? ಒಟ್ಟಿನಲ್ಲಿ ಹೆಣ್ಣಿಗೆ ಬದುಕುವುದೇ ದುಸ್ತರವಾಗಿರುವ ಇಂದಿನ ದಿನಮಾನಗಳಲ್ಲಿ   ಈ ಮಹಿಳಾ ಪರವಾದ ನಿಲುವು ಒಂದಿಷ್ಟು ಸಮಾಧಾನ ತಂದಿತು.
ಕಾರವಾರದ ಕಾಳಿ ಸೇತುವೆಯ ಸಮೀಪ ಒಂದು ದೇವಸ್ಥಾನವಿದೆ, ಖಾಫ್ರಿ ದೇವರು ಎಂದು ಕರೆಯಿಸಿಕೊಳ್ಳುವ ಈ ದೇವರು ಮೂಲತಃ ಆಫ್ರಿಕಾದಿಂದ ಸಮುದ್ರ ಮಾರ್ಗದಿಂದ ಬಂದಿದ್ದು ಎಂಬ ನಂಬಿಕೆ ಇಲ್ಲಿನ ಭಕ್ತರಿಗೆ ಇದೆ. ಖಾಫ್ರಿ ಹಾಗೂ ಆಫ್ರಿಕಾ ಎಂಬ ಹೆಸರುಗಳಿಗಿರುವ ಸಾಮ್ಯತೆ ಕೂಡ ಇದಕ್ಕೆ ಕಾರಣವಾಗಿರಬಹುದು. ಡಿಸೆಂಬರ್- ಜನವರಿ ಸುಮಾರಿಗೆ ನಡೆಯುವ ಈ ದೇವರ ಜಾತ್ರೆ ತೀರಾ ವಿಶಿಷ್ಟವಾದದ್ದು. ಇಲ್ಲಿ ದೇವರ ನೈವೇದ್ಯಕ್ಕೆ ಅರ್ಪಿಸುವುದು ಸರಾಯಿ, ಬಿಡಿ, ಸಿಗರೇಟು. ಮೊದಮೊದಲು ತೀರಾ ವಿಚಿತ್ರ ಎನ್ನಿಸುತ್ತಿದ್ದ ಈ ಜಾತ್ರೆಯ ವಿಷಯಗಳು ಈಗ ಮಾಮೂಲಾಗಿ ಬಿಟ್ಟಿದೆ. ಬಿಕಾನೇರ್ ನಿಂದ ಮುವತ್ತು ಕಿ.ಮಿ ದೂರದ ದೇಶ್ನೋಯಿ ಎಂಬ ಪುಟ್ಟ ಗ್ರಾಮದಲ್ಲಿ ಮಾತಾಕರ್ಣಿ ಮಂದಿರವಿದೆಯಂತೆ. ಈ ಕರ್ಣಿಮಾತಾಗೆ ನೈವೇದ್ಯ ಎಂದು ಕೊಡುವುದು ಮದ್ಯವಂತೆ. ಇಡೀ ದೇಗುಲದ ತುಂಬಾ ಸಹಸ್ರಾರು ಇಲಿಗಳಿದ್ದು ಅವುಗಳನ್ನು ಮಾತಾಕರ್ಣಿಯ ಮಕ್ಕಳು ಹಾಗು ಭಕ್ತರು ಎಂದು ಪರಿಗಣಿಸಲಾಗುತ್ತದೆಯಂತೆ. ಇಲಿ ಕಂಡರೆ ಎಲ್ಲಿಲ್ಲದ ದ್ವೇಶದಿಂದ ಹೊಡೆದು ಸಾಯಿಸುವ ನನಗೆ ಈ ವಿಷಯ ನಿಜಕ್ಕೂ ಕುತೂಹಲ ಮೂಡಿಸಿತು.
ಇಡೀ ಪುಸ್ತಕ ಇಂತಹ ಹಲವಾರು ವಿಶೇಷತೆಗಳನ್ನು ಹೇಳುತ್ತ ಹೋಗುತ್ತದೆ. ರಾಜಸ್ಥಾನದ ಕುರಿತು ಅಪಾರವಾದ ಮಾಹಿತಿ ಬೇಕೆಂದರೆ ನೀವು ಈ ಪುಸ್ತಕವನ್ನು ಓದಲೇ ಬೇಕು.
ಲಕ್ಷ್ಮಿಕಾಂತ ಇಟ್ನಾಳರು ಜೈಸಲ್ಮೇರ್ ನಿಂದ ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗುವುದು ತೀರಾ ಮನಕಲಕುವಂತಿದೆ. “ಜೈಸಲ್ಮೇರ್ ಎಂಬ ಮರಳರಾಣಿಯ ಕೈ ಹಿಡಿದು ಚುಂಬಿಸಿ, ತಲೆಬಾಗಿ ವಂದಿಸಿ ವಿದಾಯ ಹೇಳಿದೆ. ನನಗೆ ಗೊತ್ತು. ಅದಕ್ಕೆ ಹೃದಯ ತುಂಬಿ ಬಂದಿರಬೇಕು. ನಾವು ಪರಸ್ಪರ ಬಿಟ್ಟಿರದೇ ಬಹಳ ಹಚ್ಚಿಕೊಂಡಿದ್ದೆವು” ಎನ್ನುವಾಗ ಎದೆಯೊಳಗೊಂದು ವಿರಹದ ಕಿಡಿ ಝಗ್ಗನೆ ಹೊತ್ತಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
ವೋ ಅಫಸಾನಾ ಜಿಸೆ ಅಂಜಾಮ್ ತಕ್ ಲಾನಾ ನ ಹೋ ಮುಮಕಿನ್, ಉಸೆ ಇಕ್ ಖೂಬ್ ಸೂರತ್ ಮೋಡ್ ದೇಕರ್ ಛೋಡನಾ ಅಚ್ಚಾ, ಚಲೋ ಎಕ್ ಬಾರ್ ಫಿರ್ ಸೆ ಅಜನಬಿ ಬನ್ ಜಾಯೆ ಹಮ್ ದೋನೋ… (ಕಥೆಯೊಂದಕ್ಕೆ ಸರಿಯಾದ ಮುಕ್ತಾಯ ಹಾಡಲು ಸಾಧ್ಯವಾಗದಿದ್ದರೆ, ಸುಂದರವಾದ ತಿರುವೊಂದರಲ್ಲಿ ವಿದಾಯ ಹೇಳುವುದೇ ಒಳ್ಳೆಯದು. ನಡೆ, ನಾವಿಬ್ಬರೂ  ಮತ್ತೊಮ್ಮೆ ಅಪರಿಚಿತರಾಗಿ ಬಿಡೋಣ)
ಆಹಾ ಇದೆಂತಹ ಸಾಲುಗಳನ್ನು ಅವರು ತಮ್ಮ ಮನದನ್ನೆ ಮರಳರಾಣಿಗಾಗಿ ಆಯ್ದುಕೊಂಡಿದ್ದಾರೆ. ಜಗಳವಾಗಿ, ಕಿತ್ತಾಡಿ ಬೇರೆಯಾಗುವ ಇಂದಿನ ಪ್ರೇಮ ಪ್ರಕರಣಗಳನ್ನು ಕಂಡಾಗಲೆಲ್ಲ ನನಗೆ ಪದೇ ಪದೇ ನೆನಪಾಗುವ ಸಾಲುಗಳು ಇವು. ನಡೆ ಮತ್ತೊಮ್ಮೆ ಅಪರಿಚಿತರಾಗೋಣ. ಎದೆಯೊಳಗಿನ ಪ್ರೀತಿಯ ಹಣತೆಗೆ ಎಣ್ಣೆ ಸುರಿಯದೇ ಮಂಕಾದಾಗಲೂ ಹೇಳಿಕೊಳ್ಳಬೇಕಾದ ಮಾತಿದು, ನಡೆ ಮತ್ತೊಮ್ಮೆ ಅಪರಿಚಿತರಾಗಿ ಬಿಡೋಣ. ಅದರ ಮುಂದೆ “ನಡೆ ಮತ್ತೊಮ್ಮೆ ಹೊಸದಾಗಿ ಪರಿಚಯ ಮಾಡಿಕೊಳ್ಳೋಣ, ಸ್ನೇಹಿತರಾಗೋಣ, ಕದ್ದು ಮುಚ್ಚಿ, ಕಣ್ಣ ಕೊನೆಯಿಂದ ನೋಡುತ್ತ ಮತ್ತೊಮ್ಮೆ ಪ್ರೀತಿಯೊಳಗೆ ಬೀಳೋಣ, ಇನ್ನಿಲ್ಲದಂತೆ ಪುನಃ  ಪ್ರೀತಿಸೋಣ “ ಎಂದುಕೊಂಡು ಹೊರಟರೆ ಬದುಕು ಅದೆಷ್ಟು ಸುಂದರ.
ಅಂದಹಾಗೆ ಈ ಲೇಖನ ಬರೆಯಲು ಪುಸ್ತಕವನ್ನು ಮತ್ತೊಮ್ಮೆ ಕೈಗೆತ್ತಿಕೊಂಡಾಗ ಇವರು ಮತ್ತೆ ರಾಜಸ್ಥಾನದ ಪ್ರವಾಸದ ಬೇಡಿಕೆ ಬರಬಹುದು ಎಂದುಕೊಂಡರೇನೋ. ಆದರೆ ನಾನು ಚಕಾರ ಎತ್ತದೇ ಪುಸ್ತಕ ಓದುವಾಗ ಇವರಿಗೆ ಅಚ್ಚರಿ. ಮೋಡಿ ನೋಡಿ ಸಾಕಾಗಿ “ರಾಜಸ್ಥಾನ ಪ್ರವಾಸ ಇದೆಯಾ ಈಗ…?” ತಾವಾಗಿಯೇ ಕೇಳಿದರು. “ಇಲ್ಲ ನಾನು ರಾಜಸ್ಥಾನ ನೋಡಾಯ್ತು.” ತಣ್ಣಗೆ ಉತ್ತರಿಸಿದೆ. ಇವರಿಗೆ ಅರ್ಥವಾಗಲಿಲ್ಲ. ತನ್ನ ಬಿಟ್ಟು ಎಲ್ಲಿಯೂ ಹೋಗದವಳು ರಾಜಸ್ಥಾನ ನೋಡಿದ್ದಾದರೂ ಹೇಗೆ ಎಂದುಕೊಂಡರೇನೋ. “ಕನಸಿನಲ್ಲಾ….?” ನಗುತ್ತ ಕೇಳಿದರು. “ಇಲ್ಲಪ್ಪ, ಅಪ್ಪಾಜಿ ಬರೆದಿರುವ ಈ ಪುಸ್ತಕ ಓದುತ್ತಿದ್ದರೆ ನಾವೇ ಸ್ವತಃ ರಾಜಸ್ಥಾನಕ್ಕೆ ಹೋದಷ್ಟು ಆತ್ಮೀಯ ವಿವರಣೆಗಳಿವೆ” ನಾನು ಪುನಃ ಪುಸ್ತಕದೊಳಗೆ ಹುದುಗಿ ಹೋದೆ.
ಈಗ ನನಗಂತೂ ಇಡೀ ರಾಜಸ್ಥಾನವನ್ನು ಎರಡು ಮೂರು ಸಲ ಸುತ್ತಿ ಬಂದ ಅನುಭವವಾಗಿದೆ. ನಿಮಗೂ ಈ ಅನುಭವ ಬೇಕೆಂದರೆ ರಾಜಸ್ಥಾನವೆಂಬ ಸ್ವರ್ಗದ ತುಣುಕು ಪುಸ್ತಕ ಓದಿ. ಸ್ವತಃ ನೀವೆ ರಾಜಸ್ಥಾನದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬನ್ನಿ.

‍ಲೇಖಕರು avadhi

September 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: