ಅಣ್ಣನ ಬೈಕ್ ಸವಾರಿ..


ನೆನಪು 24
ಅಣ್ಣನ ಬೈಕ್ ಸವಾರಿ
ನನಗೆ ಗೊತ್ತಿದ್ದಂತೆ ನಾನು ಸಣ್ಣವನಿರುವಾಗ ನಮ್ಮನೇಲಿ ಸೈಕಲ್ಲಿರಲಿಲ್ಲ. ಆದರೆ ಅಣ್ಣನಿಗೆ ಸೈಕಲ್ ಹೊಡೆಯೋಕೆ ಬರ್ತಿತ್ತು. ಮೊದಮೊದಲು ಆತ ಎತ್ತಿನ ಗಾಡಿ ಹೊಡೀತಿದ್ದನಂತೆ. ಅಣ್ಣ ಸೈಕಲ್ ಹೊಡೆಯುತ್ತಿದ್ದುದು ಕೂಡ ಅಪರೂಪವೆ. ಅವನ ಬಾಲ್ಯದಲ್ಲಿ ಶಾಲೆ ಬಿಟ್ಟ ದಿನಗಳಲ್ಲಿ ಆತ ಸೈಕಲ್ ಕಲಿತಿದ್ದನಂತೆ. ಕನ್ನಡ ಶಾಲೆ ಮುಗಿದ ಮೇಲೆ ಓದಲು ಸಾಧ್ಯವಾಗದೇ ಆತ ಪೋಸ್ಟಿನ ಕೆಲಸ ಮಾಡುತ್ತಿದ್ದ. ಅರೇಅಂಗಡಿಯಲ್ಲಿರುವ ನಾರಾಯಣ ಶಾನಭಾಗರ ಅಂಗಡಿಯಿಂದ ಬಾಡಿಗೆ ಸೈಕಲ್ ಪಡೆದು ಹೊನ್ನಾವರದ ಮುಖ್ಯ ಅಂಚೆ ಕಛೇರಿಯಿಂದ ಸಾಲ್ಕೋಡು ಪೋಸ್ಟಿನ ಬ್ಯಾಗನ್ನು ತಂದು ಕೊಡುವುದು. ಬಹುಶಃ ತಿಂಗಳಿಗೆ ಈ ಕಾರಣಕ್ಕಾಗಿ 10-15 ರೂ. ಕೊಡುತ್ತಿದ್ದರೆಂದು ಕಾಣುತ್ತದೆ. ಇದನ್ನು ಒಂದೆರಡು ವರ್ಷ ಮಾಡ್ತಿರಬೇಕು. ಒಮ್ಮೊಮ್ಮೆ ಪೋಸ್ಟಮ್ಯಾನ್ ರಜಾ ಇದ್ದಾಗ ಮನೆ ಮನೆಗೆ ಪೋಸ್ಟ್ ಹಾಕಿದ್ದೂ ಇದೆಯಂತೆ. ಹಾಗಾಗಿ ಆಗ ಆತ ಸೈಕಲ್ ಹೊಡೆಯುವುದನ್ನು ಕಲಿತ.
ನಂತರ ಆತ ಮುಡಾರೆ ಶಾಲೆಯಲ್ಲಿ ಶಿಕ್ಷಕ ಆಗಿರುವಾಗ ಮಧ್ಯಾಹ್ನ ಊಟಕ್ಕೆ ಮನೆಗೆ ಬರ್ತಿದ್ದ. ಆತನ ಶಾಲೆ ಮನೆಯಿಂದ ಸುಮಾರು 2-3 ಕಿ.ಮೀ. ದೂರದಲ್ಲಿತ್ತು ಅಷ್ಟೆ. ಶಾಲೆಯಲ್ಲಿ ಅಣ್ಣನ ಅಸಿಸ್ಟಂಟ್ ಮಾಸ್ತರರಾಗಿದ್ದ ಅವಧಾನಿ ಮಾಸ್ತರರು ಕರ್ಕಿಯಿಂದ ದಿನವೂ ಸೈಕಲ್ ತರುತ್ತಿದ್ದರು. ಅವರ ಮನೆ ದೂರ ಇರುವುದರಿಂದ ಅವರು ಮಧ್ಯಾಹ್ನ ಮನೆಗೆ ಹೋಗದೆ ಬಾಕ್ಸ್ ನಲ್ಲಿ ತಂದ ತಿಂಡಿಯನ್ನು ತಿಂದು ಒಂದರ್ಧ ಗಂಟೆ ಅಲ್ಲೇ ಮಲಗುತ್ತಿದ್ದರು. ಹಾಗಾಗಿ ಅಣ್ಣ ಆ ಸೈಕಲ್ಲನ್ನು ಮನೆಗೆ ತರುತ್ತಿದ್ದ. ಮುಂದೆ ಹಾರೆಗೆ ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗುವ ಸಣ್ಣ ಸೀಟು ಕೂಡ ಇತ್ತು. ಅಮರಾವತಿಯ ರಥದ ಹಾಗೆ ಕಾಣುತ್ತಿತ್ತು ಅದು ಆಗ.
ಮುಡಾರೆ ಶಾಲೆ ಗ್ಯಾದರಿಂಗ್ ಆದಾಗ ಆತ ನನ್ನನ್ನು ಹಿಂಬದಿಗೆ ಕೂಡ್ರಿಸಿಕೊಂಡು ಹೋದ ನೆನಪು ಇದೆ. ಸಣ್ಣ ಇರುವಾಗ ಸೈಕಲ್ಲಿನ ಸೀಟಿನ ಮುಂದಿರುವ ಹಾರೆಯ ಮೇಲೆ ಒಂದು ಟವೆಲ್ ಹಾಕಿಕೊಂಡು ಕೂಡ್ರಿಸಿಕೊಳ್ತಿದ್ದ. ಆ ನೆನಪೇ ಈಗ ಎಷ್ಟೊಂದು ಆಪ್ತ. ಅವಧಾನಿ ಮಾಸ್ತರರ ಸೈಕಲ್‍ನ್ನು ಅಣ್ಣ ಮನೆಗೆ ತರುತ್ತಿದ್ದ. ಹಾಗೆ ತಂದ ದಿನ ನನಗಂತೂ ಖುಷಿಯೇ ಖುಷಿ. ನಾನು ಸೈಕಲ್ ಹೊಡೆಯುವುದನ್ನು ಕಲಿತದ್ದು ಆವಾಗಲೇ. ಸೈಕಲ್‍ನ್ನು ತಂದು ಬೇಲಿಗೆ ತಾಡಿಡುತ್ತಿದ್ದ. ಅಣ್ಣ ಸ್ನಾನಕ್ಕೆ ಹೋದಾಗ ಒಂದು ಸುತ್ತು ಹೊಡೆದಿಡುವುದು; ಆತ ಊಟಕ್ಕೆ ಹೋಗಿ ಬಂದ ನಂತರ ಒಂದರ್ಧ ಗಂಟೆ ಮಲಗುತ್ತಿದ್ದ. ಮತ್ತೆ ಆ ಸಂದರ್ಭದಲ್ಲಿ ನನಗೆ ಸೈಕಲ್ ಸಿಗುತ್ತಿತ್ತು.
ಮೊದಮೊದಲು ಸೈಕಲನ್ನು ಸುಮ್ನೆ ಒತ್ಕೊಂಡು ಹೋಗೋದು. ಆ ಖುಷಿ ಅದ್ಭುತ. ಕುವೆಂಪು ಕಾದಂಬರಿಯಲ್ಲಿ ಬರುವ ಬೀಸೇಕಲ್ ಪ್ರಕರಣದಲ್ಲಿ ಬರುವ ‘ಬಚ್ಚನ’ ದಿವ್ಯ ಕುತೂಹಲ, ಸಂತೋಷ ನನ್ನದೂ ಆಗಿತ್ತು. ಅದಕ್ಕಿಂತ ಖುಷಿಕೊಟ್ಟಿದ್ದು ಒಳಪ್ಯಾಡ್ಲನಲ್ಲಿ ಸೈಕಲ್ ಓಡಿಸಲು ಕಲಿತಿದ್ದು. ಬಹುಶಃ ಈಗ ವಿಮಾನನ್ನು ಒಂದು ಸುತ್ತ ಹೊಡೆದರೂ ಆ ಬ್ರಹ್ಮಾನಂದ ಸಾಧ್ಯವಿಲ್ಲ. ಒಂದು ಕೈಯನ್ನು ಸೀಟಿನ ಮೇಲಿಟ್ಟು, ಇನ್ನೊಂದು ಕೈಯನ್ನು ಹ್ಯಾಂಡ್ಲ್ ಕಮ್ ಬ್ರೇಕ್ ಹಿಡಿದು ಅರ್ಧ ಪ್ಯಾಡ್ಲ ಮಾಡ್ತ ಮಾಡ್ತ ಬ್ಯಾಲೆನ್ಸ್ ಹಿಡಿದ ದಿನ…. ಬಾಲ್ಯದ ಸಾಹಸದ ಗಾಥೆ ಅದು.
ರಸ್ತೆ ನೋಡ್ಬೇಕಾ?…. ಮುಂದಿನ ಚಕ್ರ ನೋಡ್ಬೇಕಾ?…ಹ್ಯಾಂಡಲ್ ನೋಡ್ಬೇಕಾ?….ಪ್ಯಾಡ್ಲ ನೋಡ್ಬೇಕಾ ಅನ್ನೊದು?…. ಯಾವುದನ್ನು ಯಾವಾಗ ನೋಡ್ಬೇಕು ಅನ್ನೋದು ಭಯ ಅಲ್ಲ ಒಂದು ರೀತಿ ಮಜಾ! ಪ್ಯಾಡ್ಲ ಹೊಡೆದರೆ ಬ್ಯಾಲೆನ್ಸ್ ಸಿಕ್ತಿರಲಿಲ್ಲ. ಪ್ಯಾಡ್ಲ ಹೊಡೆದಿದ್ರೆ ಸೈಕಲ್ ಮುಂದೆ ಹೋಗ್ತೀರಲಿಲ್ಲ. ಮೊದ್ಲು ಒಂದೆರಡು ಬಾರಿ ಇಳಿಕ್ಲಲ್ಲಿ ಹೊಡೆದು ಬ್ರೇಕ್ ಯಾವುದು ಅಂತ ನೋಡೋದ್ರೊಳಗೆ ರಸ್ತೆ ಪಕ್ಕದ ಗಟಾರ ನೋಡದೇ…….. ಆಗೆಲ್ಲಾ ಅಣ್ಣ ಬಂದು ಸೈಕಲ್ ಹೊಡೆಯೋದನ್ನ ಹೇಳಿಕೊಡ್ತಿದ್ದ. ಮೊದಲು ಇಳುಕಲಿನಲ್ಲಿ (ಇಳಿಜಾರು) ಸೈಕಲ್ ಹೊಡೀಬೇಕು. ಬ್ಯಾಲೆನ್ಸ್ ಸಿಕ್ಕಿದ ನಂತರ ಸಮಜಾಗದಲ್ಲಿ ಹೊಡೀಬೇಕು ಅಂತ ಹೇಳಿಕೊಟ್ಟಿದ್ದ. ಒಮ್ಮೆಯಂತೂ ಗಬ್ಬೂ ಕೇರಿಯಿಂದ ಬರೋ ಇಳಕ್ಲಲ್ಲಿ ನಾನು ಹಿಡ್ಕತ್ತೇನೆ ನೀನು ಹಿಂದೆ ನೋಡದೇ ಹೊಡೆ ಎಂದು ಧೈರ್ಯ ತುಂಬಿದ. ನಾನು ಹಿಂದೆ ನೋಡದೆ ಹೇಗೊ ಅಣ್ಣ ಹಿಡ್ಕೊಂಡಿದ್ದಾನೆ ಅಂತ ಧೈರ್ಯದಿಂದ ಬ್ರೇಕ್ ಬಿಟ್ಟುಕೊಂಡು ಹೋದೆ……. ಹೋದೆ……. ಹೋದೆ……. ಹಿಂದೆ ನೋಡಿದ್ರೆ ಅಣ್ಣ ಇಲ್ಲ. ಹೆದ್ರಿ ಹಾಗು ಹೀಗೂ ಕಷ್ಟಪಟ್ಟು ಮನೆ ಬೇಲಿಗೆ ಹೋಗಿ ತಾಡಿದೆ. ಆ ಕ್ಷಣದಲ್ಲಿ ಭಯ ಆದ್ರೂ ಒಂದು ತರದ ಧೈರ್ಯ ಬಂತು.
ಒಂದಿಷ್ಟು ದಿನ ಹಿಂಬದಿಯಿಂದ ಸೈಕಲ್ ಹಿಡ್ಕೊಳ್ಳೋದಕ್ಕೆ ಮೇಲಿನ ಮನೆ ತಂಗಿ (ಶಕುಂತಲಾ. ಈಗ ಆಕೆ ಭಟ್ಕಳದಲ್ಲಿ ಟೀಚರ್ ಇದ್ದಾಳೆ) ಬರ್ತಿದ್ದಳು. ಅವಳು ನನಗಿಂತ ಸಣ್ಣವಳು. ಸೈಕಲ್ ಹೊಡೆಯುವುದನ್ನು ತದೇಕ ಚಿತ್ತದಿಂದ ನೋಡ್ತಿದ್ದಳು. ನನ್ನನ್ನ ಆಕೆ ಸಣ್ಣಣ್ಣ ಅಂತಿದ್ಳು. ಸಣ್ಣಣ್ಣ ಮಹಾ ದೊಡ್ಡ ಕೆಲಸ ಮಾಡ್ದಾಗೆ ಅವಳಿಗೂ ಅನ್ನಿಸ್ತಿತ್ತೇನೋ. ಆಗಾಗ ಅವಳಿಗೂ ಸೈಕಲ್ ಒತ್ತಲು ಕೊಟ್ಟ ನೆನಪು. ಅವಳಿಗೂ ಹೊಡೆಯೋ ಆಸೆ ಇತ್ತೋ ಏನೋ ಗೊತ್ತಿಲ್ಲ. ಅಥವಾ ಒಂದೆರಡು ಬಾರಿ ಒಳ ಪ್ಯಾಟ್ಳನಲ್ಲಿ ಹೊಡೆಯುವ ಪ್ರಯತ್ನ ಮಾಡಿದ್ದಳೋ ಏನೋ. ಸಿಕ್ಕಾಗ ಅವಳನ್ನೇ ಕೇಳಬೇಕು.
ಇದೇ ಧೈರ್ಯದಲ್ಲಿ ಜೋರಾಗಿ ಹೊಡೆದು, ರಸ್ತೆಯಲ್ಲಿ ಉದುರಿ ಬಿದ್ದು ಕೈಕಾಲು ಗಾಯ ಆಗಿದ್ದೂ ಇದೆ. ನಿಜ ಹೇಳ್ಬೇಕಾ? ಸರಿಯಾಗಿ ಸೈಕಲ್, ಬೈಕ್, ಕಾರು ಕಲಿಯಬೇಕೆಂದರೆ ಒಂದು ಸಲವಾದರೂ ಬೀಳಬೇಕು; ಎಕ್ಸಿಡೆಂಟ್ ಮಾಡ್ಕೋಬೇಕು.
ಅಲ್ಲಿಂದ ಮುಂದೆ ಮನೆ ಎದುರು ಯಾರ ಸೈಕಲ್ ಬಂದ್ರೂ, ಅದಕ್ಕೆ ಬೀಗ ಇಟ್ಟಿದ್ರೆ ಅದ್ರ ಗತಿ ಮುಟ್ಟಿದ ಹಾಗೆ. ಆದ್ರೆ ಅಣ್ಣನ ಅಂದಿನ ಬಡತನದಲ್ಲಿ ಒಂದು ಸ್ವಂತ ಸೈಕಲ್ ಖರೀದಿಸಲು ಆಗಿರಲಿಲ್ಲ. ಅರ್ಜೆಂಟ್ ಹೊನ್ನಾವರ ಹೋಗೋದಕ್ಕೆ- ಹುಷಾರಿಲ್ಲದಿದ್ದರೆ ಔಷಧ ತರಲು-ಯಾರದಾದರೂ ಸೈಕಲ್ ಒಯ್ತಿದ್ದ.
ಆದ್ರೂ ನನಗೆ ಪಿಯುಸಿ ಓದುವಾಗ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ತೆಗೆಸಿಕೊಟ್ಟಿದ್ದ. ಅತ್ತೆ ಮನೆ ವೆಂಕಟೇಶನ ಸೈಕಲ್ ಅದು, ಹಕ್ರ್ಯುಲಸ್ ಸೈಕಲ್. ಅಕ್ಕ ನೂರು ರೂಪಾಯಿ ಮತ್ತು ಅಣ್ಣ 150 ರೂ. ಕೊಟ್ಟಿದ್ರೂ 250ರೂ. ಬೆಲೆಯದು.
ಅಂದು ಯಾವುದನ್ನೆಲ್ಲ ಆತ ತನ್ನ ಬದುಕಿನಲ್ಲಿ ಆಸೆ ಪಟ್ಟಿದ್ದನೋ ಅವನ್ನೆಲ್ಲಾ ಆತ ಮಕ್ಕಳಿಗೆ ಒದಗಿಸಲು ಪ್ರಯತ್ನಿಸ್ತಿದ್ದ. ಕಲಿಕೆ ಇರಬಹುದು, ಪುಸ್ತಕ ಇರಬಹುದು, ನೌಕರಿ ಇರಬಹುದು..ಮನರಗರ ಬೇಕಾದ ಯಾವುದಾದರೂ ವಸ್ತು ಇರಬಹುದು……. ಸೈಕಲ್ಲು ಕೂಡ ಹಾಗೆ.

ಬೈಕ್ ಸವಾರಿ
ಅಕ್ಕ ಮಾಧವಿ ಇಡಗುಂಜಿ ಪದವಿಪೂರ್ವ ಕಾಲೇಜಿನಿಂದ ಹೊನ್ನಾವರದ ಬಿಇಓ ಕಛೇರಿಯಲ್ಲಿ ಸಬ್ಜೆಕ್ಟ್ ಇನ್ಸ್ಪೆಕ್ಟರ್ ಆಗಿ ನೇಮಕ ಆದಳು. ಆದಾಗ ಹಳ್ಳಿ ಹಳ್ಳಿಯ ಶಾಲೆಗೆ ಭೆಟ್ಟಿ ಕೊಡಲು ಹೋಗಲು ಆಕೆಗೆ ಬಸ್ ಇರಲಿಲ್ಲ. ಹಾಗಾಗಿ ಆಕೆ ಒಂದು ಬಿಳಿಯ ಕೈನೆಟಿಕ್ ಹೊಂಡಾ’ ತಕೊಂಡಿದ್ಳು. ಅದನ್ನೂ ಹೆಚ್ಚು ಕಡಿಮೆ ಹೊಡೆದು ಹಾಳು ಮಾಡಿದವನು ನಾನೆ. ಆಗ ಅಣ್ಣ ಈ ‘ಕೈನೆಟಿಕ್ ಹೊಂಡಾ’ವನ್ನು ಅಣ್ಣ ಕಲಿಯಲು ತೊಡಗಿದ್ದ. ಮೊದಲೇ ಸೈಕಲ್ ಹೊಡೆಯುವುದು ರೂಢಿ ಇರೋದ್ರಿಂದ ಬೇಗ ಕಲಿತ…..
ಕಲಿಯುವ ಉತ್ಸಾಹ ಜೋರಾಗಿತ್ತು. ಬೆಳಿಗ್ಗೆ ಬೇಗ ಎದ್ದು ಗಡಿಬಿಡಿ ಮಾಡಿಕೊಂಡು ಪ್ಯಾಂಟು ಶರ್ಟು ಏರಿಸಿ ಸಂತೇಗುಳಿ ಚಾಂದ್ರಾಣಿ ಕಡೆಗೆ ಒಂದು ಸುತ್ತು ಹೋಗಿ ಬರ್ತಿದ್ದ. ಆತ ವಾಪಸು ಬರುವವರೆಗೆ ನಮಗೆ ಭಯ. ಎಲ್ಲಿ ಬಿದ್ದು ಬಿಡ್ತಾನೋ ಅಂತ.
ಮೊದ ಮೊದಲು ನಾನು ಹಿಂದೆ ಕುಳಿತು ಹೋಗ್ತಿದ್ದೆ. ಹಾಗೆ ನೋಡಿದರೆ ಅವನಿಗೆ ಬೈಕ್ ಹೊಡೆಯೋದಕ್ಕೆ ಕಲಿಸಿದ್ದು ನಾನು. ಒಂದು ವಿಷಯದಲ್ಲಿ ನಾನೂ ಅವನಿಗೆ ಗುರುವಾಗಿದ್ದ ಧನ್ಯತೆ ನನ್ನದು. ಅವರಿಗೆ ಸರಿ ಹೊಡೆಯೋದಕ್ಕೆ ಬರ್ದೆ ಇದ್ರೆ ಹಾಗೆಲ್ಲಾ ಬೈಕ್ ಕೊಡಬೇಡ ಅಂತ ಅಕ್ಕ ಹೇಳ್ತಿದ್ದಳು. ಎಲ್ಲಾದ್ರೂ ಬಿದ್ಕೊ ಬಂದ್ರೆ ಅಂತ ಆಕೆಗೆ ಆತಂಕ. ಆದರೆ ಅಣ್ಣ ಕೇಳ್ತಿರಲಿಲ್ಲ.
ಆಮೇಲೆ ಹೊನ್ನಾವರದವರೆಗೆ ಒಯ್ಯಲು ಶುರು ಮಾಡಿದ. “ತಂದೆಯವರಿಗೆ ಬೈಕ್ ಕೊಡಬೇಡಿ. ತೀರಾ ಜೋರಾಗಿ ಹೊಡೀತಾರೆ. ಪೇಟೆಲೆಲ್ಲಾ ಕಷ್ಟ ಪಡ್ತಾರೆ” ಅಂತ ನೋಡಿದವರು ಹೇಳ್ತಿದ್ದರು. ಇಲ್ಲ… ಇಲ್ಲ ಸಾವಕಾಶ ಗಾಡಿ ಹೊಡೀತೇನೆ ಎಂದು ಹೇಳಿ ಕೆಲಸ ಇಲ್ಲದಿದ್ದರೂ ಏನಾದರೂ ಕೆಲಸದ ನೆಪ ಹೇಳಿ ಗಾಡಿ ಒಯ್ತಿದ್ದ. ಅದು ಅವನಿಗೆ ಖುಷಿ ಕೊಡೋ ಸಂಗತಿ ಆಗಿತ್ತು. ಆಗ ಅವನು ರಿಟೈರ್ಡ್ ಆಗಿದ್ದ.
ಅವನೆಲ್ಲಾದ್ರೂ ಎಕ್ಸಿಡೆಂಟ್ ಮಾಡಿಕೊಂಡರೆ… ಹೊಸ ಕೆನೆಟಿಕ್ ಹೊಂಡಾಕ್ಕೆ ಡ್ಯಾಮೇಜಾದ್ರೆ … ಅಂತ ಮಾಧವಿಗೆ ಇಬ್ಬಗೆಯ ಆತಂಕ. ಒಂದೇ ವರ್ಷದಲ್ಲಿ ಮಾಧವಿಯ ಆತಂಕ ಸತ್ಯ ಆಯ್ತು. ಹೊನ್ನಾವರಕ್ಕೆ ಹೋದವನು ಚಾಂದ್ರಾಣಿಯಲ್ಲಿ ಒಂದು ಎಮ್ಮೆಗೆ ಡಿಕ್ಕಿ ಹೊಡೆದುಕೊಂಡು ಬಂದ. ಅವನಿಗೇನಾಗಿರಲಿಲ್ಲ. ಗಾಡಿಯ ಪ್ರಂಟ್ ಗಾರ್ಡ್, ಕವರ್, ಮಿರರ್, ಇಂಡಿಕೇಟರ್ ಒಡೆದು ಕೊಂಡು ಬಂದಿದ್ದ. ಬಂದವನು ಹೊರಗೇ ನಿಲ್ಲಿಸಿದ್ದ.
ಸಾವಕಾಶ ನನ್ನನ್ನು ಕರೆದು “ಮರಿ, ಸಣ್ಣ ಎಕ್ಸಿಡೆಂಟ್ ಆಯ್ತು. ಪಾಪ ಮಾಧವಿ ಬೇಜಾರು ಮಾಡ್ಕೋತಾಳೇನೋ? ನೀನು ಹೇಳಿದ ಹಾಗೆ ನಾನು ತೆಗೆದುಕೊಂಡು ಹೋಗಬಾರದಾಗಿತ್ತು. ಹೇಗಾದ್ರೂ ಮಾಡಿ ಮಾಧವಿಗೆ ಗೊತ್ತಾಗದಂತೆ ರಿಪೇರಿ ಮಾಡಿಸಿ ಕೊಂಡು ಇಡೋದಕ್ಕೆ ಆಗ್ತದಾ ನೋಡು” ಅಂತ ಅಂಗಲಾಚಿದಂತೆ ಹೇಳಿದ ಮಾತು ಈಗಲೂ ಕಿವಿಯಲ್ಲಿ ಹಾಗೆಯೇ ಇದೆ.
ಆಗ ಅವನಿಗೊಂದು ಪಾಪ ಪ್ರಜ್ಞೆ ಕಾಡಲು ಪ್ರಾರಂಭಿಸ್ತು.. ನಮ್ಮ ಮಾಧವಿ ಯಾವಾಗಲೂ ಹಾಗೆ. ಎಲ್ಲವನ್ನು ಶಿಸ್ತಾಗಿ, ಸ್ವಚ್ಛವಾಗಿ ಇಟ್ಕೊಳ್ಳೋಳು. ಹೊಸತರ ಹಾಗೆ ಉಳಿಸಿಕೊಳ್ಳೋದು ಅವಳ ಗುಣ. ಹಾಗಾಗಿ ಅವನಿಗೆ ಎಕ್ಸಿಡೆಂಟ್ ಆಗಿರೋಕ್ಕಿಂತ ಗಾಡಿಗೆ ಪೆಟ್ಟಾಗಿದ್ದು ಹೆಚ್ಚು ಘಾಸಿಗೊಳಿಸಿತ್ತು. ಏನೋ ಅಪರಾಧ ಮಾಡಿದ ಭಾವ ಅವನಿಗಿತ್ತು. ಆದರೆ ಮನೆಯವರಿಗೆಲ್ಲಾ ಗಾಡಿ ಹಾಳಾದ್ರೆ ಹಾಳಾಗ್ಲಿ ಅವನಿಗೇನೂ ಆಗ್ಲಿಲ್ವಲ್ಲಾ ಎಂಬ ಸಮಾಧಾನ.
ಆದರೆ ಮಾಧವಿಗೆ ಗೊತ್ತಾಗದಂತೆ ರಿಪೇರಿ ಮಾಡಲು ಆಗಲಿಲ್ಲ. ನೋಡಿ ಬೇಜಾರು ಮಾಡ್ಕೊಂಡ್ಳು ಅಣ್ಣನಿಗೆ ಕಾಣದಂತೆ. ಅಣ್ಣನೂ ಹಾಗೆ ಮಾಧವಿಗೆ ಬೇಜಾರಾಗಿದ್ದು ಗೊತ್ತಾಯ್ತು; ಆದರೂ ಗೊತ್ತಾಗದಂತೆ ಇದ್ದ; ನಂತರ ಕೂಡ ಒಯ್ತಿದ್ದ ……..ಅಪರೂಪಕ್ಕೆ.ಬಹುಶಃ ಪೆನ್ಶನ್ ಹಣ ಸಾಕಷ್ಟು ಇದ್ದಿದ್ದರೆ ಹೊಸದೇ ತಕೋ ಅಂತಿದ್ನೇನೋ. ಅಷ್ಟು ಹಣ ಇರಲಿಲ್ಲ ಆತನಲ್ಲಿ. ಆಮೇಲೆ ನಾನು ಬೈಕ್ ತಕೊಂಡೆ, ಅವನನ್ನು ಕರಕೊಂಡು ಹೋಗ್ತಿದ್ದೆ. ಕಾರ್ ತಕೋವಾಗ ಆತ ಇರಲಿಲ್ಲ. ಈಗಲೂ ಅನ್ನಿಸ್ತದೆ, ಅವನಿಗೊಂದು ಗಾಡಿ ತೆಗೆಸಿಕೊಡಬಹುದಾಗಿತ್ತು ಅಂತ; ಆದರೆ ಹೊಡೆಯೋಕೆ ಆತ ಇಲ್ವಲ್ಲ.

‍ಲೇಖಕರು Avadhi Admin

September 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: