ರಾಜನ್ ಕೆ ಬಿನಾ ಸಾಜನ್ ಕೈಸೇ ಗಾವೇ?

ಸಂತೋಷ್ ಅನಂತಪುರ

ಕೆಲವೊಂದು ‘ವಿರಾಸತ್’ಗಳನ್ನು ಬೆಳಗಿಸಲೆಂದೇ ಜನ್ಮವೆತ್ತುವ ಗಂಧರ್ವರಿದ್ದಾರೆ. ಅಂತಹ ಹಲವರನ್ನು ನಾವು ನೋಡಿಯೂ ಇದ್ದೇವೆ. ಅವರ ಉದ್ದೇಶ ಸ್ಪಷ್ಟ ಬೆಳೆದು ಬೆಳಗುವುದು ಹಾಗೂ ಪರಂಪರೆಯನ್ನು ಇನ್ನಷ್ಟು ವಿಸ್ತರಿಸಿ ಭದ್ರಗೊಳಿಸುವುದು. ಅಂತಹದ್ದೊಂದು ಧ್ಯಾನಸ್ಥ ಋಷಿ ಪರಂಪರೆ ಭಾರತೀಯ ಸಂಗೀತ ಕಲಾಕ್ಷೇತ್ರದಲ್ಲಿದೆ.

ಭಾರತೀಯ ಶಾಸ್ತ್ರೀಯ ಸಂಗೀತದ ಖ್ಯಾಲ್ ಗಾಯನದ ಜನಪ್ರಿಯ ಗಾಯಕ ರಾಜನ್‌ಮಿಶ್ರಾ ತಮ್ಮ ಸಹೋದರ ಸಾಜನ್ ಮಿಶ್ರಾ ಜೊತೆ ಬನಾರಸ್ ಘರಾಣವನ್ನು ವಿಸ್ತರಿಸಿಕೊಂಡೊಯ್ದ ಪರಿ ಅನನ್ಯ. ತಮ್ಮ ವಿಶಿಷ್ಟ ಸ್ವರಮಾಧುರ್ಯದಿಂದ ರಾಜನ್‌ಮಿಶ್ರಾ ಸಹೋದರರು ಮೀಟಿದ ನಾದದ ಇಂಪನ್ನು ಅನುಭವಿಸಿದವರ ಪಾಲಿಗದು ಪಂಚಾಮೃತ.

ಮೂಡುಬಿದರೆಯ ‘ಆಳ್ವಾಸ್ ವಿರಾಸತ್’ ಸಂಗೀತ ಕಾರ್ಯಕ್ರಮಕ್ಕೆ ಬರುವ ಕಲಾವಿದರ ದೇಖ್ಬಾಲ್ ನ ಉಸ್ತುವಾರಿಯನ್ನು ಸಂಸ್ಥೆಯ ಅದ್ಯಕ್ಷ ಡಾ.ಮೋಹನ್ ಆಳ್ವ ಅವರು, ಸಂಸ್ಥೆಯಲ್ಲಿ ನಾನಿರುವವರೆಗೂ ನನಗೇ ವಹಿಸಿದ್ದರು. ಅಂತಹ ಒಂದು ಅವಕಾಶ ನೀಡಿದ್ದಕ್ಕಾಗಿ ನಾನವರಿಗೆ ಋಣಿಯಾಗಿದ್ದೇನೆ. ಆ ಒಂದು ಜವಾಬ್ದಾರಿಯು ಭಾರತೀಯ ಸಂಗೀತ, ನೃತ್ಯ, ಕಲಾಕ್ಷೇತ್ರದ ದಿಗ್ಗಜರನ್ನು ಹತ್ತಿರದಿಂದ ನೋಡಿ ಅರಿಯುವ, ಅವರೊಂದಿಗೆ ಒಂದಷ್ಟು ವ್ಯವಹರಿಸುವ ಭಾಗ್ಯವನ್ನು ನನಗೊದಗಿಸಿತು. ‘ಆಳ್ವಾಸ್ ವಿರಾಸತ್’ಗೆ ಬಂದ ಕಲಾವಿದರ ಪಟ್ಟಿಯಲ್ಲಿ ‘ರಾಜನ್‌ಮಿಶ್ರಾ’ ಕೂಡ ಒಬ್ಬರು. ಅವರ ಜತೆಗಿನ ಒಡನಾಟದ ಸೌಭಾಗ್ಯ ನನ್ನದಾಗಿತ್ತು.

ಶಿಸ್ತು, ಅಚ್ಚುಕಟ್ಟುಗಳ ಜೊತೆಗೆ ಒಪ್ಪ ಓರಣವಾಗಿ ತಮ್ಮನ್ನು ಅಲಂಕರಿಸಿಕೊಂಡು ಕೇಳುವ ಕಿವಿಗೆ ಇಂಪಾಗಿಯೂ ಮಾತ್ರವಲ್ಲ ನೋಡುವ ಕಣ್ಣಿಗೆ ತಂಪಾಗಿಯೂ ಬಿಡುತ್ತಿದ್ದರು. ವೇದಿಕೆಯಲ್ಲಿ ಸುರ್ಮಂಡಲವನ್ನು ಹಿಡಿದು ಕುಳಿತರೆಂದರೆ ಅಲ್ಲೊಂದು ಧ್ಯಾನಸ್ಥ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆ ಧ್ಯಾನಸ್ಥ ಸ್ಥಿತಿಯಾಳಕ್ಕೆ ಇಳಿದು ಅಲ್ಲೆಲ್ಲಾ ತಿರುಗಿ ನಮ್ಮನ್ನೂ ಸುತ್ತಾಡಿಸಿ… ಆಳ-ಅಗಲವನ್ನು ತೋರಿಸಿ, ಅಳವು-ಅರಿವುಗಳನ್ನು ತುಂಬಿ ಕೊನೆಗೊಮ್ಮೆ ಪಿಚಕಾರಿಯಾಗಿ ಭಾವರಸವನ್ನು ಚಿಮ್ಮಿಸಿದಾಗ ಬದುಕು ಧನ್ಯವೆನಿಸಿಬಿಡುತ್ತಿತ್ತು. ಬಸವಳಿದ ಮನಸ್ಸಿಗೆ, ಶೋಕ ತುಂಬಿದ ಹೃದಯಕ್ಕೆ ಅವರ ಸಪ್ತಸ್ವರ ಸಂಚಾರವು ಸಂಜೀವಿನಿಯಾಗುತ್ತಿತ್ತು.

ವೇದಿಕೆಯ ಮೇಲೆ ಹಾಗೂ ಕೆಳಗೆ ನಿಜಾರ್ಥದ ಹಿರೀಕನಾಗಿದ್ದರು ಪಂ. ರಾಜನ್. ಅವರ ಪ್ರೆಸೆನ್ಸ್ ಒಂದು ಔರವನ್ನು ಸೃಷ್ಟಿಸುತ್ತಿತ್ತು. ವೇದಿಕೆ ಏರುವ ಮೊದಲಿನ ಒಂದಷ್ಟು ಹೊತ್ತನ್ನು ಒಳಕೋಣೆಯಲ್ಲಿ ತಪಸ್ಸಿನಂತೆ ಅವರು ಕಳೆಯುತ್ತಿದ್ದರು. ತಂಬುರಾದ ಝೇಂಕಾರವು ಕಿವಿಯನ್ನು ಸಂಪೂರ್ಣವಾಗಿ ತುಂಬಿ ಹರಿದು ಹೋಗುವಷ್ಟು ನಾದದ ಒಳಕ್ಕಿಳಿದು ಶ್ರುತಿಯೊಂದಿಗೆ ಮಿಳಿತಗೊಳ್ಳುತ್ತಿದ್ದರು. ಕಣ್ಮುಚ್ಚಿ ಸ್ವರಗಳೊಂದಿಗೆ ತನ್ಮಯರಾಗುವ ಭಾವ ಸ್ಥಿತಿಯದು. ಎಂತಹ ಸುಂದರ ಅನುಭವ!

ಆ ಸಮಯದಲ್ಲಿ ಕಾರ್ಯಕ್ರಮದ ಕುರಿತಾಗಿ ಕೇಳಲೇಬೇಕಾದ ಕೆಲವೊಂದು ಪ್ರಶ್ನೆಗಳಿಗೆ ಆಂಗಿಕ ಭಾಷೆಯಲ್ಲಿ ಉತ್ತರವು ಅವರಿಂದ ಸಿಗುತಿತ್ತು. ಅಷ್ಟೇ. ಉಳಿದಂತೆ ಮತ್ತೆನಾದದೊಳಕ್ಕೆ ಇಳಿದು ಶ್ರುತಿಯನ್ನು ಹಿಡಿದಿಡುವಲ್ಲಿ ಸಂಪೂರ್ಣ ಮಗ್ನ. ಇತ್ತ ಮನೋನಗರಿಯಲ್ಲಿ ಸಂಚರಿಸುವ ಸಪ್ತಸ್ವರಗಳ ಜೊತೆಯಲ್ಲಿ ಮನಸ್ಸು-ಹೃದಯಗಳು ತಲ್ಲೀನವಾಗಿರುತ್ತಿದ್ದವು. ಶರೀರ ಸಮೇತವಾಗಿ ಅವರ ಶಾರೀರಕ್ಕೆ ಶರಣಾಗುವ ಭಾಗ್ಯ ಶ್ರೋತೃ ಗಣದ್ದು.

ಎರಡು ಬಾರಿ ಅವರೊಡನೆ ಒಡನಾಡುವ ಸೌಭಾಗ್ಯ ನನಗೊದಗಿತ್ತು. ಪ್ರಭಾವಳಿಯ ಜೊತೆಗಿನ ಹಿಂದು ಮುಂದಿನ ಓಡಾಟವು ಅರಿಯದೆ ಗುಣಾತ್ಮಕ ಅಂಶಗಳನ್ನು ಮೂಡಿಸುವುದೊಂದು ಅದ್ಭುತ ಅನುಭವ. ಅವರ ಕಚೇರಿಯನ್ನು ಕೇಳಿದ ರಸಿಕ ವರ್ಗವು ಬಹು ಹೊತ್ತು ಯಾವುದೋ ಟ್ರಾನ್ಸ್ ನಲ್ಲಿಯೇ ಇದ್ದು ಬಿಡುತ್ತಾರೆ. ಅಂತಹ ಗುಂಗಿನೊಳಗೆ ಕಳೆದು ಹೋಗುವುದೇ ಹೆಚ್ಚು. ಆ ರೀತಿಯ ಅನುಭವ ನನ್ನದೂ ಹೌದು. ಅವರದೇ ಖ್ಬಾಲ್-ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನಾನು ಪಡೆದುಕೊಂಡು ಬಂದ ಭಾಗ್ಯಗಳಲ್ಲಿ ಒಂದು.

ಅಂದು ಅವರು ಪ್ರಸ್ತುತಪಡಿಸಿದ ‘ಪುರಿಯಾ ಧನಶ್ರೀ’ರಾಗವು ಅದೆಷ್ಟು ಆಳವಾಗಿ ನನ್ನೊಳಗಿಳಿದಿತ್ತು ಎಂದರೆ ರಾತ್ರಿಯುದ್ದಕ್ಕೂ.. ಅವರ ಒಂದೊಂದು ಸೇವೆಯನ್ನು ಮಾಡುವಾಗಲೂ ಗುನುಗುನಾಯಿಸುತ್ತಲೇ ಇದ್ದೆ.  ಅದನ್ನು ಕೇಳಿಸಿಕೊಂಡ ರಾಜನ್ ಜಿ , ‘ಅರೆವ್ಹಾ.. ಬಹುತ್ ಅಚ್ಛೇ ಗಾತೆಹೊ..’ ಎಂದು ಹೇಳಿಮುಗುಳ್ನಕ್ಕರು. ‘ಪಂಡಿತ್ ಜಿ…’ ಎಂದಷ್ಟೇ ಹೇಳಿ ಸುಮ್ಮನಾದೆ.

ಮುಂದುವರಿದು, ‘ಸೀಕ್ ರಹೇ ಹೋ ಕ್ಯಾ?’ ಎಂದವರು ಕೇಳಿದಾಗ ಕಣ್ಣ ಮುಂದೆ ‘ಅಮ್ಮ’ ಒಮ್ಮೆ ಸುಳಿದು ಹೋದಳು. ಸಣ್ಣವನಿರುತ್ತ, ‘ಸಂಗೀತ ಕಲಿ ಮಗನೇ..’ ಎಂದು ಅಮ್ಮ ನನ್ನ ಬೆನ್ನು ಬಿದ್ದುದಕ್ಕೆ ಲೆಕ್ಕವಿರಲಿಲ್ಲ. ಆಕೆ ಅದೆಷ್ಟೆಲ್ಲಾ ಹೇಳಿ, ಕೇಳಿಕೊಂಡರೂ ಆಟದ ಹುಚ್ಚು ಸಂಗೀತವನ್ನು ಮರೆಸಿಯೇ ಬಿಟ್ಟಿತ್ತು. ಸಂಗೀತ ಕ್ಲಾಸಿಗೆ ಹೋದರೂ, ತುಸು ಹೊತ್ತು ಕುಳಿತು ಒಂದಷ್ಟು ಹಾಡಿ ಮತ್ತೆದ್ದು ಆಡಲು ಹೊರಡುತ್ತಿದ್ದೆ. ಪಂಡಿತ್ ಜಿ ಅವರ ಪ್ರಶ್ನೆಗೆ ಏನೊಂದೂ ಉತ್ತರಿಸಲಾಗದೆ ಬರಿದೇ ನಕ್ಕು ಸುಮ್ಮನಾಗಿ ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ.

ಎಲ್ಲರಮನ-ಮನೆಗಳಲ್ಲಿ ನೆಲೆಸಿ ಹಲವು ಹೃದಯ-ಮನಸ್ಸುಗಳ ಭಾರವನ್ನು ಇಳಿಸಿದ ನಿಮ್ಮ ಕಂಠ.ವು ಜೀವ ಬಯಸುವ ಭಾವರಸವನ್ನು ಹರಿಸಿದ್ದುಂಟು. ಆದರೆ ನಿಮ್ಮ ಹೃದಯ ಸಂಬಂಧಿ ತೊಂದರೆ ಮತ್ತದರ ಜೊತೆಗೆ ಅಂಟಿಕೊಂಡ ಕೊರೋನಾ ವೈರಸ್- ಅದೆಷ್ಟೋ ಹೃದಯವನ್ನು ತೋಯ್ದು ಮೀಯಿಸಿದ್ದ ನಿಮ್ಮ ಕಂಠದ ಕರೆಗೆ ಸ್ಪಂದಿಸುವಷ್ಟು ಸಂವೇದನೆಯನ್ನೂ ಹೊಂದದೆ ಹೋಯಿತಲ್ಲ ಎಂಬ ಬೇಸರ, ಸಂಕಟ ಕಾಡುತ್ತಿದೆ.

ಹೃದಯ ಢಮರು ಬೆನ್ನು ಬೆನ್ನಿಗೆ ಸದ್ದಿಸಿದಾಗ ವೆಂಟಿಲೇಟರ್ ಗೆ ಮೊರೆ ಹೊಕ್ಕ ನಿಮಗೆ ಅದು ಕೂಡಾ ದಕ್ಕದೆ ಹೋಯಿತಲ್ಲ. ಕೊನೆಗೂ ಮತ್ತೋರ್ವ ಸಾಧಕ ಗಂಧರ್ವ ‘ಪಂಡಿತ್ ವಿಶ್ವಮೋಹನ್ ಭಟ್’ ವೆಂಟಿಲೇಟರ್ ಜೊತೆಗೆ ಹಾಸಿಗೆಯನ್ನು ದೊರಕಿಸುವಲ್ಲಿ ಯಶಸ್ವಿಯಾದರೂ ಇದ್ಯಾವುದರ ರಗಳೆಯೇ ಬೇಡವೆಂದು ನೀವು ಅಂದುಕೊಂಡದ್ದೇ… ಹೃದಯ ತಾಳ ಹಾಕುವುದನ್ನು ನಿಲ್ಲಿಸಿತೆನ್ನುವಷ್ಟರಲ್ಲಿ ತಮ್ಮ ‘ಭೈರವಿ’ಯೂ ಮುಗಿದಿತ್ತು.

ಸಂಗೀತವನ್ನು ‘ಇಬಾದತ್’ ಎಂದೇ ನಂಬಿ ನಡೆದ ನೀವು ನಮ್ಮನ್ನೂ ಆ ಪ್ರಾರ್ಥನೆಯೊಳೆಗೆ ಸೇರಿಸಿಕೊಂಡಿರಿ. ರಾಗ್ ಬಿಹಾಗ್ ನ ಒಂದು ಬಂದಿಶ್– “ಕೈಸೇ ಸುಖ್ ಸೋವೆ  ನೀಂದರಿಯಾ/ಶಾಮ ಮೊರತ್ ಚಿತ್ ಚಡಿ/ ಸೋಚೇ  ಸೋಚೇ ಸದಾ ರಂಗ್ ಅಕುಲಾವೆ / ಯಾ ಬಿದಾ ಗಾಂಟ್ ಪರಿ”- ವಿಸ್ತಾರಗೊಳ್ಳುತ್ತಾ ಹೋದಂತೆ ಕಣ್ಣುಗಳು ತೇವಗೊಳ್ಳುತ್ತವೆ. ಅಗಲಿಕೆಯ ಭಾರವನ್ನು ತಾಳದ ಹೃದಯ-ಮನಸ್ಸು ಒಳಗೊಳಗೇ ಬಿಕ್ಕುತ್ತವೆ.

ನೀವು ತೇಲಿಬಿಟ್ಟ ಇಂಚರವು ಬಳುಕುತ್ತಾ ಅಲೆಅಲೆಯಾಗಿ ಏರಿಳಿದು, ಮಂದ್ರ-ಮಧ್ಯಮ-ಸ್ತಾಯಿಗಳಲ್ಲಿ ಸಂಚರಿಸಿ ಉಂಟು ಮಾಡಿದ ಪುಳಕವಿನ್ನು ಸ್ಮರಣೆಯೊಳಗೆ ಭದ್ರ. ಅವೆಲ್ಲಕ್ಕಿಂತಲೂ ಮಿಗಿಲಾಗಿ- ರಾಜನ್ ಕೆ ಬಿನಾ ಸಾಜನ್ ಕೈಸೇ ಗಾವೆ ? ಕೈಸೇ ಸುಖ್ ಸೋವೆ ?

‍ಲೇಖಕರು Avadhi

April 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vijayavaman

    ನನ್ನ ಭಾವನೆಗಳನ್ನೇ ನಿಮ್ಮ ಲೇಖನದಲ್ಲಿ ಕಾಣುತ್ತಿದ್ದೇನೆ. ಕೃತಜ್ಞತೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: