ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕುಮಾರ ಮಡಿವಾಳರ ಕವಿತೆ ನೀನು…

ಊರು ತಲುಪಿರುವುದಾಗಿ ಬರೆದ
ಪತ್ರ ಇಂದು ನನಗೆ ತಲುಪಿದೆ
ಅಲ್ಲಿ ಕ್ಷೇಮದ ನಡುವೆ ನೆನಪ ಮುತ್ತು
ಬೆಳಗಿನಪ್ಪುಗೆಯ ಕ್ಷಾಮ ಇಲ್ಲದಕ್ಷರಗಳಲಿ ಕಾಣುತಿದೆ!

ಮೊನ್ನೆ ಶುರುವಾದ ಹೊಸ ಮಳೆ ಸುರಿವ ಹೊತ್ತಲ್ಲಿ ನಡು ಮನೆಯ ಕಂಬಕ್ಕೆ ಬೆನ್ನನಾಂತು
ಮಲ್ಲಿಗೆ ಮಾರು ಪೂಣಿಸಿದ ಅಂದ ಸಾಲು,
ದಳದ ತುದಿಗೆ ಹನಿ ತೇವ ಇನ್ನು ಕಾಗದದಲಿ ಉಳಿದಿದೆ.

ಅಣ್ಣನ ಮಗಳು ಬಲು ಚೂಟಿ, ತೋಳ ಗುರುತು
ಕಂಡು ಕೇಳುವಳು ಗೀರಿದ್ದು ಮಾವ ತಾನೆ?
ಹೀಗೆ ಮನೆಮಂದಿ, ವಾರಿಗೆ ಗೆಳತಿಯರು ನನ್ನಲ್ಲಿ ನಿನ್ನ
ಹುಡುಕಿ ತೋರುವಾಗ ಗಲ್ಲದಲಿ ಕೆಂಪು ನಾಚಿಕೆ.

ನೋಡಿ ಹೇಳಿರಿ ಪಂಚಾಂಗ ಮುಗಿವುದೆಂದಿಗೆ ಆಷಾಢ?
ಬಂದು ಬಿಡುವೆನು ಬೇಗ,ಹೇಗಿದೆಯೋ ಅಲ್ಲಿ, ಇಲ್ಲಿಂದ
ಊಹಿಸಬಲ್ಲೆ ನಿಮ್ಮ ಗತಿ-ಶೃತಿ-ಸ್ಥಿತಿ ಈ ಬೆಳಗು,ಈಗ.
ಬಡಿಸಿಕೊಳ್ಳುವ ಮೊದಲು ತುಂಬಿಟ್ಟುಕೊಳ್ಳಿ ತಂಬಿಗೆ ನೀರ.

ಇತಿ ನಿಮ್ಮ..

-ದ ತನಕ ಲಯ ತಪ್ಪದಿರುವ ಭಾವ,
ತುಂಬು ಜೀವ ಎದೆಗೆ ತಂದು ಓದಿದೆ,
ನಿನ್ನ ಸಹಿ ಮೇಲೆ ಇರಿಸಿ ತುದಿ ಬೆರಳ..

ಮರು ಪತ್ರಕೆ ಉಸಿರು ಉಳಿದಿಲ್ಲ!
ಬರೆದಿರುವೆ ಬರೀ ನಿನ್ನ ಹೆಸರ,ಮಡಚಿ
ಮುತ್ತಿಟ್ಟು, ಪುಟ್ಟಿಗೆ ಪ್ರೀತಿ ಕಳಿಸಿರುವೆ
ಮನೆಯಲ್ಲಿ ಅತ್ತೆ-ಮಾವನವರಿಗೆ ನಮಸ್ಕಾರ!

‍ಲೇಖಕರು Admin

5 September, 2025

1 Comment

  1. Kotresh Arsikere

    ಚೆಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading