‘ರಾಜಕುಮಾರ’ ಎಂಬ ಮಾತಿಗೆ ಎಷ್ಟೊಂದು ಅರ್ಥವಿದೆ?

ಗೊರೂರು ಶಿವೇಶ್

ಸುಮಾರು ಹದಿನಾಲ್ಕು ವರ್ಷಗಳ ಹಿಂದಿನ ಘಟನೆ. ಹೆಚ್ ಬಿ‌ ರಮೇಶ್ ರವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭ. ಡಾಕ್ಟರ್ ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದವರು ಹಾಸನ ಕಲಾಭವನದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೆಚ್ ಬಿ ರಮೇಶ್ ರವರು ಹಿಂದೆ ಹಾಸನ ಜಾತ್ರೆಯ ಸಂದರ್ಭದಲ್ಲಿ ಬರುತ್ತಿದ್ದ ನಾಟಕ ಮಂಡಲಿಯಲ್ಲಿ ರಾಜಕುಮಾರ್ ನಾಟಕಗಳಲ್ಲಿ ಜೊತೆಯಲ್ಲಿ ಅಭಿನಯಿಸಿದ್ದನ್ನು ತಾವೊಬ್ಬ ಕಿರಿಯ ಕಲಾವಿದ ಎಂಬುದನ್ನು ಲೆಕ್ಕಿಸದೆ ತಮಗೆ ಮೇಕಪ್ ಮಾಡುತ್ತಿದ್ದದ್ದನ್ನು ನೆನಪಿಸಿಕೊಂಡರು. ಕೂಡಲೇ ರಮೇಶ್ ರವರ ಬಳಿ ಸಾರಿದ ಪುನೀತ್ ರಾಜಕುಮಾರ್ ಅವರ  ಕಾಲಿಗೆ ನಮಸ್ಕರಿಸಿ ತಮ್ಮ ವಿನೀತ ಭಾವವನ್ನು ಪ್ರದರ್ಶಿಸಿದ್ದನ್ನು ನಾನು ಕಂಡಿದ್ದೆ.

ಡಾಕ್ಟರ್ ರಾಜಕುಮಾರ್ ಮತ್ತು ಅವರ ಕುಟುಂಬ ಎಂದರೆ ತಕ್ಷಣ ನೆನಪಿಗೆ ಬರುವುದು ಅವರೊಳಗೆ ಮನೆಮಾಡಿರುವ ವಿನೀತಭಾವ. ಹಿರಿಯರಿರಲಿ, ಕಿರಿಯರಿರಲ್ಲಿ ಅವರೆಲ್ಲರನ್ನೂ ಅಪ್ಪಾಜಿ ಎಂದು, ಅಭಿಮಾನಿ ದೇವರುಗಳೆಂದು ಸಂಬೋಧಿಸುವ ವಿನೀತಭಾವ. ಇದು ಕನ್ನಡಿಗರ ವಿಶಿಷ್ಟ ಭಾವವೇನೊ ಎನ್ನುವಂತೆ ನನಗೆ ಕಣ್ಣಿಗೆ ಕಟ್ಟುತ್ತದೆ.

ಇಂತಹ ವಿನಯತೆಯ ಸಹೃದಯತೆಯ ಮುಗುಳ್ನಗೆಯ ಪ್ರತೀಕವಾಗಿದ್ದ ಪುನೀತ್ ರಾಜಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಅಷ್ಟೇ    ಅಲ್ಲದೆ ಎಲ್ಲ ಕನ್ನಡ ಅಭಿಮಾನಿಗಳಿಗೆ ಒಂದು ದೊಡ್ಡ ಆಘಾತವನ್ನೇ ನೀಡಿದೆ. ಕನ್ನಡ ಚಿತ್ರರಂಗ ಕರೋನಾ ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಸೆಳೆಯುವ ದೊಡ್ಡಮಟ್ಟದ ಆಕರ್ಷಣೆಯಾಗಿದ್ದ ಪುನೀತ್ ರಾಜಕುಮಾರ್ ಅವರ ನಿಧನದಿಂದಾಗಿ ದೊಡ್ಡಮಟ್ಟದ ಸಂಕಷ್ಟಕ್ಕೆ ಸಿಲುಕಿದೆ.

ಹಾಗೆ ನೋಡಿದರೆ ರಾಜಕುಮಾರ್ ಅವರ ಮಕ್ಕಳಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಅವರ ಪರಿಚಯ ಆಗಿದ್ದು ಅವರ ಯೌವ್ವನಕ್ಕೆ ಕಾಲಿರಿಸಿ ತಮ್ಮ ಚಲನಚಿತ್ರಗಳ ಅಭಿನಯವನ್ನು ಆರಂಭಿಸಿದ ನಂತರವೇ. ಆದರೆ ಇನ್ನು ಮಗುವಾಗಿದ್ದಾಗಲೇ ಪುನೀತ್ ರಾಜಕುಮಾರ್ ಕನ್ನಡ ಅಭಿಮಾನಿಗಳಿಗೆ ಪರಿಚಯವಾಗಿದ್ದರು. ವಸಂತಗೀತ ಚಿತ್ರದಲ್ಲಿ ಮಗುವಾಗಿ ನೋಡಿದ ನನಗೆ ನಂತರ ಭಾಗ್ಯವಂತ, ಭೂಮಿಗೆ ಬಂದ ಭಗವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಿತ್ರಗಳು ಪುನೀತರ ಪಾತ್ರಗಳನ್ನೇ ಕೇಂದ್ರವಾಗಿರಿಸಿ ಮಾಡಿದ ಚಿತ್ರಗಳು.

ಪ್ರಧಾನ ಪಾತ್ರದ ನಿರ್ವಹಣೆ ಜೊತೆಗೆ ಆ ಚಿತ್ರದ ಕೆಲವು ಗೀತೆಗಳನ್ನು ಅವರು ಹಾಡಿದ್ದರು. ಬಾಳ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ, ಮಿನುಗು ತಾರೆ ಅಂದ, ನೋಡು ಎಂಥ ಚಂದ, ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ, ಗೀತೆಯಾಗಲಿ ನನ್ನ ಉಡುಪು ನಿನ್ನದು, ನಿನ್ನ ಉಡುಪು ನನ್ನದು, ಬಿಸಿಲೇ ಇರಲಿ ನೆರಳೇ ಇರಲಿ, ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಗೀತೆಗಳು ಅಪಾರ ಜನಪ್ರಿಯತೆಯನ್ನು ಪಡೆದಿದ್ದ ಗೀತೆಗಳು. ಅಷ್ಟೇ ಏಕೆ ಮುಂದೆ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪ್ರಹ್ಲಾದನಾಗಿ ಅಭಿನಯಿಸಿದ್ದುಡಾಕ್ಟರ್ ರಾಜಕುಮಾರ್ ಬಹಳ ಅಪರೂಪಕ್ಕೆ ಹಿರಣ್ಯಕಶಿಪು ಖಳನ ಪಾತ್ರದಲ್ಲಿ ಅಭಿನಯಿಸಿದ್ದು ಕೂಡ ಒಂದು ವಿಶೇಷವೇ.

ಬಾಲ್ಯದಲ್ಲಿ ದ್ದಾಗಲೇ ಅವರು ತಮ್ಮ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಮತ್ತು ಬೆಟ್ಟದ ಹೂವು ಚಿತ್ರಕ್ಕಾಗಿ ರಾಮಾಯಣ ದರ್ಶನಂ ಕೃತಿಯನ್ನು ಕೊಳ್ಳಲು ಹಣ ಸಂಗ್ರಹಿಸುವ ಬಾಲಕನ ಪಾತ್ರದಲ್ಲಿತಂದೆಗಿಂತ ಮೊದಲೇ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ಸಂದರ್ಭದಲ್ಲಿ ಒಂದು ವಿಶೇಷ ಸುದ್ದಿ.ಮುಂದೆ ಹತ್ತು-ಹನ್ನೆರಡು ವರ್ಷಗಳ ಕಾಲ ಬ್ರೇಕ್ ನೀಡಿದಂತೆ ಕಂಡುಬಂದ ಪುನೀತ್ ಅವರು ‘ಅಪ್ಪು’ ಚಿತ್ರದ ಮೂಲಕ 2001ರಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಮರುಪ್ರವೇಶ ಪಡೆಯುವುದರ ಜೊತೆಗೆ ಅವರು ಆ ಚಿತ್ರದಲ್ಲಿ ಹಾಡಿದ್ದ ತಾಲಿಬಾನ್ ಅಲ್ಲ ಅಲ್ಲ ಗೀತೆಯು ದೊಡ್ಡಮಟ್ಟದ ಯಶಸ್ಸನ್ನು ಪಡೆದಿತ್ತು. ಮುಂದೆ ಅದೇ ಅಕಾರಾದಿಯಾಗಿ ಆಕಾಶ್ ಅಭಿ ಚಿತ್ರ ಬಿಡುಗಡೆಯಾಗಿ ಯಶಸ್ಸನ್ನು ಸಾಧಿಸುವುದರ ಜೊತೆಗೆ ದೊಡ್ಡ ಸ್ಟಾರ್ ಪಟ್ಟವನ್ನು ಅವರಿಗೆ ನೀಡಿತು.

ಮುಂದೆ ವರ್ಷಕ್ಕೊಂದು ಎರಡು ಚಿತ್ರದಂತೆ ಅವರ ಚಿತ್ರಗಳು ಬಿಡುಗಡೆಯಾಗಿ ಬಿಡುಗಡೆಯ ಸಂದರ್ಭದಲ್ಲಿ ಅಪಾರ ಕ್ರೇಜ್ ಅನ್ನು ಉಂಟುಮಾಡುತ್ತಿತ್ತು. ರಾಜ್ ದ ಶೋ ಮನ್, ಜಾಕಿ, ಅಣ್ಣಾಬಾಂಡ್, ಜೇಮ್ಸ್ ದೊಡ್ಮನೆ ಹುಡುಗ, ರಾಮ್, ಪರಮಾತ್ಮ, ನಟಸಾರ್ವಭೌಮ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಂತೂ ಬೆಳ್ಳಂಬೆಳಿಗ್ಗೆ ಚಿತ್ರಮಂದಿರದ ಸುತ್ತ ಅಭಿಮಾನಿಗಳ ದಂಡು ಸೇರಿ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿತ್ತು. ಹುಡುಗಾಟಿಕೆ ಠಪೋರಿ ಸ್ವಭಾವದ ಪಾತ್ರಗಳ ನಿರ್ವಹಣೆಯ ಜೊತೆಜೊತೆಗೆ, ಆದರ್ಶ ವಿದ್ಯಾರ್ಥಿಜವಾಬ್ದಾರಿಯ, ಪ್ರೀತಿಯ ಮಗ, ಗಂಭೀರ ಆದರ್ಶ ಅಧಿಕಾರಿ ಪಾತ್ರಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಕನ್ನಡದ ಕೋಟ್ಯಾಧಿಪತಿ ಅವರು ಬಹಳ ಆಸ್ಥೆಯಿಂದ ನಡೆಸಿಕೊಟ್ಟ ಒಂದು ಟಿವಿ ಕಾರ್ಯಕ್ರಮ. ಪಿ ಆ ರ್ ಕೆ ಸ್ಟುಡಿಯೋ ಸ್ಥಾಪಿಸಿ ಅದರ ಮೂಲಕ ಕವಲುದಾರಿ ಮಾಯ ಮಾಯಾಬಜಾರ್ ನಂತರ ಸದಭಿರುಚಿ ಚಿತ್ರಗಳನ್ನು ಕೂಡ ನಿರ್ಮಿಸಿದ್ದರು. ರಾಜಕುಮಾರ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸು ಕಂಡ ಚಿತ್ರ. ಆ ಚಿತ್ರದ ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ, ನೀನೆ ರಾಜಕುಮಾರ ಗೀತೆಯನ್ನು ಗುನುಗುನಿಸುತ್ತ ಅಬಾಲ ವೃದ್ಧರನ್ನು ರಂಜಿಸಿದ, ಹಿಡಿದಿಟ್ಟ ಚಿತ್ರ.

ಆ ಚಿತ್ರದಲ್ಲಿ ಕಸ್ತೂರಿ ನಿವಾಸದ ಆಡಿಸಿ ನೋಡು ಬಿಡಿಸಿ ನೋಡು ಉರುಳಿ ಹೋಗದು ಚಿತ್ರದ ಗೊಂಬೆಯ ಮಾದರಿಯಲ್ಲಿ ಇಲ್ಲಿಯೂ ಬಳಸಿಕೊಂಡು ಬೊಂಬೆ ಹೇಳುತೈತೆ ಗೀತೆಯನ್ನು ಮಾಡಲಾಗಿದೆ. ವಿಪರ್ಯಾಸ ಎಂಬಂತೆ ರಾಜಕುಮಾರ್ ಕಣ್ಮರೆಯಾದಾಗ ಆಡಿಸಿ ನೋಡು ಬೀಳಿಸಿ ನೋಡು ಗೀತೆಯನ್ನು ಪ್ರಸಾರ ಮಾಡಿದಂತೆ ಈಗ ಅದೇ ದಾಟಿಯ ನೀನೇ ರಾಜಕುಮಾರ ಗೀತೆಯನ್ನು ಎಲ್ಲ ದೂರದರ್ಶನ ವಾಹಿನಿಗಳು ಪ್ರಸಾರ ಮಾಡುತ್ತಿವೆ ರಾಜಕುಮಾರ ಎಂಬ ಮಾತಿಗೆ ಎಷ್ಟೊಂದು ಅರ್ಥವಿದೆ? ‘ರಾಜ’ಕುಮಾರನಾಗಿ ರಾಜಕುಮಾರನಂತೆ ಬಾಳಿ ಸಾವಿನ ಸಂದರ್ಭದಲ್ಲೂ ಇತರರಿಗೆ ಮಾದರಿಯಾಗುವಂತೆ ನೇತ್ರದಾನ ಮಾಡಿ ವಿದಾಯ ಹೇಳಿದ ವಿನೀತ ಭಾವದ ಪುನೀತ  ರಾಜಕುಮಾರರಿಗೊಂದು ಭಾವನಮನ. 

‍ಲೇಖಕರು Admin

October 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: