ಡೆನಿಮ್ ಜೀನ್ಸು
ಒರಟಾಗಿ ಕಟ್ಟಿದ ಕೂದಲು
ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು
ಮುಂಗೈಗೆ ಬಂತು ಹೇರ್ ಬ್ಯಾಂಡು
ಎಲ್ಲಾ ಅದಲು ಬದಲು ಕಂಚಿಕದಲು.
ಆದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ
ಕಳೆದುಹೋಗುವ ಛಾನ್ಸೇ ಇಲ್ಲ.
ಕಾಫಿಡೇನಲ್ಲಿ ವೀಕೆಂಡಿನ ಕಲರವ
ಟೀಶರ್ಟ್ ಬರಹ ತಿವಿದು ಹೇಳುತ್ತಿದೆ:
‘who cares?’
ಕಪ್ಪಿನಲ್ಲಿ ಹೃದಯ ಚಿತ್ತಾರದ ಬಿಂಬ
ಸ್ವಾದ ಮಾತ್ರ ವಗರು ವಗರು
ಈಗ ಬಂತು ಇದೋ ಬಂತು ಸಿಹಿ
ಅನ್ನುವದರೊಳಗಾಗಿ ಕಾಫಿ ಮುಗಿದಿತ್ತು.
ಅಷ್ಟಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ
ಕಳೆದುಹೋಗುವ ಛಾನ್ಸೇ ಇಲ್ಲ.
–
ಎದೆಯನ್ನು ಸುತ್ತುವರೆದ
ಎಲುಬಿನ ಹಂದರ
ಮತ್ತು
ತಾವರೆ ಎಲೆಯ ಮೇಲಣ ಬಿಂದು-
ಎರಡರದ್ದೂ ಒಂದೇ
ಅಚಲ ನಿರ್ಧಾರ:
ಅಂಟು,ಅಂಟದಿರು.
ಇನ್ನಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ
ಕಳೆದುಹೋಗುವ ಛಾನ್ಸೇ ಇಲ್ಲ.
–
ದ್ರೌಪದಿಯಾಗುವ ತವಕವಿತ್ತು
ಸ್ವಯಂವರದಲ್ಲಿ ಮಾತ್ರ
ಶಬರಿಯಾಗೇ ಉಳಿದಳು
ಇತ್ತ ಜಾನಕಿಯಾಗದೆ
ಅತ್ತ ಮೇನಕೆಯಾಗದೆ
ಬರೀ ಅಹಲ್ಯೆಯ ಕಲ್ಲಾದಳು.
ಇಲ್ಲೀಗ ರಾಮನಿಲ್ಲ
ಶಾಪಮುಕ್ತಿಯ ಸ್ಪರ್ಶವಿಲ್ಲ.
ಇಷ್ಟಾದರೂ ಪ್ರತಿಸಂಜೆ
ಆಕೆಯ ಕೋಣೆಯಿಂದ ತಂಬೂರಿ
ಮೀಟಿದ ನಾದ ತೇಲಿಬರುತ್ತದೆ:
“ಚಿಂತೆಯಾತಕೋ ಬಯಲ ಭ್ರಾಂತಿಯಾತಕೋ..”
–
ಎಷ್ಟಾದರೂ
ಅಜ್ಜಿಯಿಂದ
ಹರಿದು ಬಂದ
ಜೀನ್ಸು-
ಹಾಗೆಲ್ಲ ಕಳೆದುಹೋಗುವ ಛಾನ್ಸೇ ಇಲ್ಲ!








ಚೆನ್ನಾಗಿದೆ. ಸ್ವಲ್ಪ ಅರ್ಥವಾಗಲಿಲ್ಲ.
ಶಶಿ.
good use of words, but not matching the title.
yaavudaadaru hosa sinemakke like aagide!
Jeans and Genes! Genius!!
thumbaa ishta antha aglilla…aadru….padagalu….chennagive…heading nodi..hudugi bagge iratte andkonde….jeans bagge ide….whaterver it is simply superb…..but not soooo….suuuu
uuuuper…..keep writing..v too keep reading…..gd lk…..
ಕಮೆಂಟಿಸಿದ ಓದುಗರಿಗೂ,ಪ್ರಕಟಿಸಿದ ‘ಅವಧಿ’ಗೂ-
ಥಮ್ಸ್ ಅಪ್!
🙂
-ರಾಘವೇಂದ್ರ ಜೋಶಿ