ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು

ಶ್ರೀಮಾನ್ ಮೇಟಿ ಕೊಟ್ರಪ್ಪನವರು

ರಹಮತ್ ತರೀಕೆರೆ

ಶಿವರಾಮ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಎಂಬ ವ್ಯಕ್ತಿಚಿತ್ರಗಳ ಪುಸ್ತಕವೊಂದಿದೆ. ಅದು ಕುಂದಾಪುರ ಸೀಮೆಯ ಬೇರೆಬೇರೆ ಸ್ವಾರಸ್ಯಕರ ವ್ಯಕ್ತಿಗಳ ಚಹರೆಗಳನ್ನು ಕುರಿತಿದ್ದು. (ಇಂತಹುದೇ ಇನ್ನೊಂದು ಪುಸ್ತಕವೆಂದರೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು.) ಈ ಹಳ್ಳಿಯ ಹತ್ತು ಸಮಸ್ತರಲ್ಲಿ ಪಾಟಾಳಿ ಪರಮಯ್ಯ ಎಂಬ ವ್ಯಕ್ತಿಯೂ ಒಬ್ಬನು. ಅವನೊಬ್ಬ ವೈಯಕ್ತಿಕವಾದ ಕೆಲಸಗಳಿಗಿಂತ ಹೆಚ್ಚಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಾರ್ವಜನಿಕ ಬದುಕಿನಲ್ಲಿ ತೊಡಗಿಕೊಂಡಿರುವ ವ್ಯಕ್ತಿ. ಎಲ್ಲಿಯಾದರೂ ಊರಲ್ಲಿ ಮದುವೆ, ಜಾತ್ರೆ, ಮರಣದ ಸಂದರ್ಭವಿದ್ದಲ್ಲಿ, ಹೋಗಿ ತಾನೇ ತೊಡಗಿಕೊಂಡು ಕೆಲಸ ಮಾಡುವವನು. ಸಮಾಜ ತನ್ನ ಸೇವೆಯನ್ನು ಗುರುತಿಸಬೇಕೆಂಬ ಯಾವ ವಾಂಛೆಯೂ ಇಲ್ಲದವನು. ಈ ಕಾರಣಕ್ಕೇ ಸಂತನ ಗುಣವುಳ್ಳವನು.

ಇಂತಹ ಮನೆಗೆ ಮಾರಿ ಊರಿಗೆ ಉಪಕಾರಿಗಳು ಎಲ್ಲ ಊರಲ್ಲೂ ಇರುವರು. ಇವರು ಸಾಮಾನ್ಯವಾಗಿ ಮದುವೆ ಆಗಿರುವುದಿಲ್ಲ. ಆದರೆ ಲೋಕವೇ ಇವರ ಸಂಸಾರವಾಗಿರುತ್ತದೆ. ಪ್ರತಿಷ್ಠಿತ ಮನೋಭಾವದ ಸಮಾಜದಲ್ಲಿ ಇವರಿಗೆ ಅಂತಹ ಮನ್ನಣೆ ಇರುವುದಿಲ್ಲ. ಆದರೆ ಇವರು ಸಹೃದಯವುಳ್ಳವರ ಎದೆಯಲ್ಲಿ ಸದಾ ಅರಳಿದ ಮಲ್ಲಿಗೆಯಂತೆ ಇರುತ್ತಾರೆ. ನಾನು ಬಳ್ಳಾರಿ ಜಿಲ್ಲೆಗೆ ಬಂದಾಗ, ಇಲ್ಲಿ ಅನೇಕ ಪಾಟಾಳಿ ಪರಮಯ್ಯಗಳನ್ನು ನೋಡಿದೆ. ಅವರಲ್ಲಿ ಬಸರಕೋಡು ನಿವಾಸಿಯಾದ ಮೇಟಿ ಕೊಟ್ರಪ್ಪನವರೂ ಒಬ್ಬರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಕೊಟ್ರಪ್ಪನವರ ಪ್ರಥಮ ಭೇಟಿ ಚೆನ್ನಾಗಿ ನೆನಪಿದೆ. ಎಂ.ಎ. ಪದವಿಯನ್ನು ಆಗತಾನೇ ಮುಗಿಸಿದ್ದ ನಾಲ್ಕೈದು ತರುಣ-ತರುಣಿಯರನ್ನು ಕರೆದುಕೊಂಡು, ಇವರು ಒಂದು ದಿನ ದಿಢೀರನೆ ನನ್ನ ಕೋಣೆಗೆ ನುಗ್ಗಿದರು. ನನಗೆ ಆ ಯುವಕ-ಯುವತಿಯರ ಪರಿಚಯವನ್ನೂ ಮಾಡಿಸದೆ, `ನೀವೆಲ್ಲ ಬೆಂಗಳೂರು ಮೈಸೂರಿನವರಿಗೆ ಮಾತ್ರ ಗುರುಗಳಲ್ಲ. ನಮ್ಮ ಜಿಲ್ಲೆಗೆ ಯೂನಿವರ್ಸಿಟಿ ಬಂದದ. ಅದರ ಪ್ರಯೋಜನ ನಮ್ಮ ಜಿಲ್ಲೆಯವರಿಗೆ ಆಗಬೇಕು. ನೀವು ಇವರಿಗೆಲ್ಲ ಪಿಎಚ್.ಡಿ., ಗೈಡ್ ಮಾಡಬೇಕು’ ಎಂದು ನಿಂತ ನಿಲುವಿನಲ್ಲಿ ಆಜ್ಞಾಪಿಸಿದರು. ನನಗೆ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳ ಜತೆ ಕೆಲಸ ಮಾಡುವುದು ಸದಾ ಸಂತೋಷವೇ. ಆದರೆ ಅವರ ಕ್ಷೇತ್ರ ಅಭಿರುಚಿ ಅಧ್ಯಯನದ ಹಿನ್ನೆಲೆ ಏನನ್ನೂ ತಿಳಿಯುವ ಮುಂಚೆ ಹೇಗೆ ತಾನೇ ಒಪ್ಪುವುದು? ಇದಕ್ಕೆಲ್ಲ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಯಿದೆ, ಆಯ್ಕೆ ಸಮಿತಿಯಿದೆ. ಒಂದು ವ್ಯವಸ್ಥೆಯಿದೆ ಎಂದರೂ ಕೊಟ್ರಪ್ಪ ಕೇಳಲೊಲ್ಲರು. ಕೆಲವು ಪೋಷಕರು ಮನೆಯಲ್ಲಿ ತೊಂದರೆ ಕೊಡುವ ಮಕ್ಕಳನ್ನು, ಉಚಿತ ವಸತಿಯಿರುವ ಮಠದ ಶಾಲೆಗಳಿಗೆ ಟ್ರಂಕಿನ ಸಮೇತ ಬಂದು, ದಬ್ಬಿಹೋಗುವ ಹಾಗೆ ಇದು ಕಂಡಿತು.

ಕೊಟ್ರಪ್ಪನವರ ಬಿರುಸಿನ ಅಡ್ಮಿಶನ್ ಕಾರ್ಯಕ್ರಮದ ವಿಧಾನಕ್ಕೆ ಬಂದಿದ್ದ ಭಾವೀ ಸಂಶೋಧಕರೂ ಕಂಗಾಲಾಗಿದ್ದರು. ನಾನು ಅವರನ್ನೆಲ್ಲ ಕೂರಿಸಿ, ತಣ್ಣನೆಯ ನೀರನ್ನು ಕೊಟ್ಟು, ಅವರ ಆಸಕ್ತಿಯ ಕ್ಷೇತ್ರ ವಿಭಾಗ ಕುರಿತು ಮಾತಾಡಿದೆ. ಆ ದಿನ ಬಂದ ವಿದ್ಯಾರ್ಥಿಗಳಲ್ಲಿ ಕೆಲವರು ಬೇರೆಬೇರೆ ವಿಭಾಗಗಳಲ್ಲಿ ಸೇರಿದರೆಂದು ನೆನಪು.

ಮೇಟಿ ಎಂಬುದು ಕೃಷಿಸಂಸ್ಕೃತಿಯಿಂದ ಬಂದ ಶಬ್ದ. ಕೋಟಿವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆಯೇ ಇದೆ. ನಮ್ಮ ಕಡೆ ಕಣದಲ್ಲಿ ಮೇಟಿಕಂಬ ಇರುತ್ತದೆ. ಅದಕ್ಕೆ ದನಗಳನ್ನು ಕಟ್ಟಿ ರಾಗಿಹುಲ್ಲನ್ನು ತುಳಿಸಲಾಗುತ್ತದೆ. ಮೇಟಿ ಕೊಟ್ರಪ್ಪನವರು ನನಗೆ ಬಹಳ ಬೇಗನೆ ಮೇಟಿಗೆ ಕಟ್ಟಿ ಕಣದ ಕೆಲಸ ಮಾಡಿಸುವರು ಎಂಬ ಬಗ್ಗೆ ನನಗೆ ಸಂಶಯ ಉಳಿಯಲಿಲ್ಲ. ನನಗೆ ಇಷ್ಟವಾಗಿದ್ದು ಅವರ ಕಾಳಜಿ. ಆ ವಿದ್ಯಾರ್ಥಿಗಳು ಯಾರೂ ಅವರ ಜಾತಿಯವರಲ್ಲ. ಸಂಬಂಧಿಕರೂ ಅಲ್ಲ.

ಕೊಟ್ರಪ್ಪನವರು ನೀವು ಹೊರಗಿನಿಂದ ನಮ್ಮ ಜಿಲ್ಲೆಗೆ ಬಂದವರು ಎಂಬ ಅಂಶವನ್ನು ಇಟ್ಟುಕೊಂಡು ನನ್ನ ಮೇಲೆ ತುಂಬ ಸಲ ಸವಾರಿ ಮಾಡಿದ್ದಾರೆ. ಬೇರೆಬೇರೆ ಲೇಖಕರನ್ನು ಕರೆದುಕೊಂಡು ಬಂದು, ಅವರ ಹಸ್ತಪ್ರತಿಯನ್ನು ಟೇಬಲಿನ ಮೇಲೆ ಈಡಾಡಿ, ಇದಕ್ಕೆ ಒಳ್ಳೆಯ ಮುನ್ನುಡಿ ಬರೆಯಬೇಕು ಎಂದು ಹೇಳಿದ್ದಾರೆ. ಒಂದು ದಿನ, ” ನೀವು ಯೂನಿವರ್ಸಿಟಿ ಪ್ರೊಫೆಸರುಗಳು ಟಿಎ/ಡಿಎ ಕೊಡುವ ಕಾರ್ಯಕ್ರಮಗಳಿಗೆ ಮಾತ್ರ ಹೋಗ್ತೀರಿ. ಗ್ರಾಮೀಣ ಪ್ರದೇಶದ ಕಾರ್ಯಕ್ರಮಗಳಿಗೆ ಬರುವವರು ಯಾರು?’: ಎಂದು ಜೋರು ಮಾಡಿ, ತಮ್ಮ ಊರಿನ ಕಾರ್ಯಕ್ರಮಕ್ಕೆ ಕರೆದರು. ನಾನು ಒಪ್ಪಿಕೊಂಡು ಕೆಂಪು ಬಸ್ಸಿನಲ್ಲಿ ಹೋದೆ. ಅಲ್ಲಿ ಹೋದಾಗ ನಡೆದಿದ್ದನ್ನು ನನ್ನ `ಭಾಷಣದ ವ್ಯಸನ’ ಎಂಬ ಲಲಿತ ಪ್ರಬಂಧದಲ್ಲಿ ಬರೆದಿರುವೆ. ಅದನ್ನು ಇಲ್ಲಿ ಉದ್ಧರಿಸಬಹುದು:

“ದೇಶಾಟನೆ ಮಾಡುವಾಗ ನೂರಾರು ಜನರ ಗೋಳು ಹುಯ್ದಿರುವ ನಾನು, ಋಣಭಾರಕ್ಕೆ ಕಟ್ಟುಬಿದ್ದು ಕಾರ್ಯಕ್ರಮದ ಬಲಿಪೀಠಕ್ಕೆ ಕೊರಳು ಒಡ್ಡುವುದಿದೆ. ಸಂಘಟಕರಾದರೂ ನಾವು ನಾಡಿನ ಆಸ್ತಿಯೆಂದೂ ನಮ್ಮ ಭಾಷಣ ಇಲ್ಲದಿದ್ದರೆ ಲಕ್ಷಾಂತರ ಜನ ನಿರಾಶೆಯ ಮಡುವಿನಲ್ಲಿ ಮುಳುಗಿ ಹೋಗುವರೆಂದೂ ಕಡಲೆಗಿಡ ಹತ್ತಿಸುವರು; ನಯವಾಗಿ ನಮ್ಮ ಬರೆಹ ಹೊಗಳಿ, `ನಿಮ್ಮ ದರ್ಶನವಿಲ್ಲದೆ ಯುಗವೇ ಆಯಿತು’ ಎಂದು ಹೂಬಾಣ ಬಿಡುವರು. ಈ ಸ್ತುತಿಯಲ್ಲಿ ಶೇಕಡಾ ಐವತ್ತು ಸುಳ್ಳೆಂದು ಗೊತ್ತಿದ್ದರೂ ಹೊನ್ನಶೂಲಕ್ಕೆ ಏರುತ್ತೇನೆ. ಹಡಗಲಿ ಸೀಮೆಯ ಒಬ್ಬ ಉದಯೋನ್ಮುಖ ಲೇಖಕರು, ನಾನು ಸರ್ಕಾರಿ ಸೆಮಿನಾರುಗಳಿಗೆ ಮಾತ್ರ ಹೋಗುವೆನೆಂದೂ ಗ್ರಾಮೀಣ ಪ್ರದೇಶಗಳಿಗೆ ಬರುವ ಬದ್ಧತೆ ಇಲ್ಲದವನೆಂದೂ ಆರೋಪಿಸಿ, ಬ್ಲಾಕ್‌ಮೇಲ್ ಮಾಡಿ ಕರೆಸಿಕೊಂಡಿದ್ದರು. ಪುಸ್ತಕ ಸಂಸ್ಕೃತಿಯ ಮೇಲೆ ಭಾಷಣ. ಹೋದೆ. ಆದರೆ ಅಲ್ಲಿ ನನ್ನನ್ನು ಆಲಿಸಲು ಜನವೇ ಇರಲಿಲ್ಲ. ಕೇಳಿದರೆ, ಹೊಲದಿಂದ ದಣಿದು ಬಂದ ರೈತರು ವಿಶ್ರಾಂತಿ ತೆಗೆದುಕೊಂಡು ಗುಡಿಕಡೆ ಬರುತ್ತಾರೆಂದು ಹೇಳಲಾಯಿತು; ಬೇವಿನಕಟ್ಟೆಯ ಮೇಲೆ ನನ್ನನ್ನು ಕೂರಿಸಿ, ಜನ ಕೂಡಿಸಲು ಊರೊಳಗೆ ಮಾನ್ಯ ಲೇಖಕರು ಹೋದರು. ಕೊಟ್ಟಿಗೆಗೆ ವಾಪಸಾಗುತಿದ್ದ ದನ-ಕುರಿ ನೋಡುತ್ತ, ಗೊರಸಿನಿಂದೆದ್ದ ಧೂಳಿಸೇವನೆ ಮಾಡುತ್ತ ಕೂತೆ. ಹಿರಿಯರೊಬ್ಬರು, ಊರಿಗೆ ಹೊಸಬನಾಗಿಯೂ ತಬ್ಬಲಿಯಂತೆಯೂ ಕುಳಿತಿದ್ದ ನನ್ನನ್ನು ಕಂಡು ಕುತೂಹಲದಿಂದ ವಿಚಾರಿಸಿದರು. ಅದೃಷ್ಟಕ್ಕೆ ಅವರು ನನ್ನ ಓದುಗರಾಗಿದ್ದರು. `ಅಯ್ಯೊ! ಎಂಥಾ ಕತೆಯಾಯ್ತಲ್ಲ. ನಮಿಗೆ ಕಾರ್ಯಕ್ರಮ ಇರೋದೇ ಗೊತ್ತಿಲ್ಲ. ಅವನ ಮಾತು ಕಟ್ಕೊಂಡು ಬಂದಿದ್ದೀರಲ್ಲ, ಚಂಗಲು ಅವನು. ಅದಕ್ಕೇ ಅವನಿಗೆ ಯಾರೂ ಹೆಣ್ಣು ಕೊಟ್ಟಿಲ್ಲ’ ಎಂದು ಸಂಘಟಕರನ್ನು ಮನಸಾರೆ ಬೈದು, ಮನೆಗೆ ಕರೆದೊಯ್ದು ಉಪಚರಿಸಿದರು. ನಾನು ಬೇವಿನಕಟ್ಟೆಯ ಮೇಲೆ ನಿಂತು ಭಾಷಣ ಶುರುಮಾಡುವಾಗ ಎಂಟು ಜನ. ಒಬ್ಬೊಬ್ಬರಾಗಿ ಬರುತ್ತ ಹದಿನೇಳಕ್ಕೆ ಮುಟ್ಟಿತು. ಗ್ರಾಮೀಣ ಪ್ರದೇಶದಲ್ಲಿ ಇದೇನು ಕಮ್ಮಿ ಸಂಖ್ಯೆಯಲ್ಲ.’’

ಮೇಟಿ ಕೊಟ್ರಪ್ಪನವರ ಚಹರೆ ಮೊದಲಿಂದಲೂ ಏಕ ಪ್ರಕಾರದಲ್ಲಿದೆ. ಆರಡಿಗಿಂತಲೂ ಎತ್ತರದ ನಿಲವು. ಅಡಕೆ ದಬ್ಬೆಯಂತೆ ತೆಳ್ಳಗಿನಕಾಯ. ಮನೆಬಿಟ್ಟು ಬೀದಿ ಸುತ್ತುವುದರಿಂದ ತ್ವಚೆಯೆಲ್ಲ ಕಪ್ಪಾಗಿದೆ. ತಲೆ ಬೆಳ್ಳಗಾಗಿದೆ. ಒಂದೆರಡು ಹಲ್ಲು ಉದುರಿವೆ. ಬಿಳಿಯ ಅಂಗಿ, ಬಿಳಿಯ ಪಂಚೆ. ಹೆಗಲಲ್ಲೊಂದು ಬ್ಯಾಗು. ಅದರಲ್ಲಿ ಪುಸ್ತಕಗಳು. ಪರಿಚಿತರು ಕಂಡೊಡನೆ ಮನಃಕಶಾಯವಿಲ್ಲದ ಒಂದು ನಿಷ್ಕಲ್ಮಶ ನಗು. ಮಗುವಿನ ಮುಗ್ಧತೆ. ಅವರನ್ನು ಕಾರ್ಯಕ್ರಮಗಳಲ್ಲಿ ನಾನು ಕಂಡಿರುವುದೇ ಪುಸ್ತಕಗಳ ಮಳಿಗೆಗಳಲ್ಲಿ. ಅವರು ಯಾವುದಾದರೂ ಪ್ರಕಾಶಕರ ಅಂಗಡಿಯಲ್ಲಿ ಕೂತು ಸಂತೋಷದಿಂದ ಪುಸ್ತಕವನ್ನು ಮಾರುತ್ತಿರುತ್ತಾರೆ.

ಹೀಗೆ ವರ್ಣರಂಜಿತವಾದ ವ್ಯಕ್ತಿತ್ವವುಳ್ಳ ಮೇಟಿ ಕೊಟ್ರಪ್ಪನವರು ನಾಡಿನ ಅನೇಕ ವಿದ್ವಾಂಸರಿಗೆ ಬೇಕಾದವರು. ಅವರು ನನ್ನ ಮನೆಯ ಬಳಿಯೇ ವಾಸವಾಗಿದ್ದ ದೊಡ್ಡ ವಿದ್ವಾಂಸ , ಪ್ರೊ. ಹಿರೇಮಠ ಅವರ ಮನೆಗೆ ಆಗಾಗ್ಗೆ ಬರುತ್ತಿದ್ದರು. ನಮ್ಮ ಮನೆಗೂ‌ ಪಾದ ಬೆಳೆಸುತ್ತಿದ್ದರು. ನನ್ನ ಅನೇಕ ಸಂಶೋಧನೆ ಯೋಜನೆಗಳ ಹಿಂದೆ ಮೇಟಿ ಅವರ ನಿರ್ವ್ಯಾಜ ಸಹಕಾರಗಳಿವೆ. ನಾನು ಕರ್ನಾಟಕದ ಮೊಹರಂ ಪುಸ್ತಕ ಬರೆಯುವಾಗ, ಅವರೊಡನೆ ಬಳ್ಳಾರಿ ಜಿಲ್ಲೆಯಾದ್ಯಂತ ಹರಿದಾಡಿದೆ. ಅವರು ತಮ್ಮ ಭಾಗದ ಅನೇಕ ಮೊಹರಂ ಕವಿಗಳನ್ನು ಭೇಟಿ ಮಾಡಿಸಿದರು. ಆದರೆ ಕವಲೂರ ಗೌಸಸಾಬ್ ಎಂಬ ಪ್ರಸಿದ್ಧ ಕವಿ ಸಿಗಲಿಲ್ಲ. ಕವಲೂರ ಗೌಸಸಾಹೇಬರು ಅವರ ಮನೆತನದ ಆರನೆಯ ತಲೆಮಾರಿನ ಕವಿ. ಹರಪನಹಳ್ಳಿ ಬಸ್ಸುನಿಲ್ದಾಣದಲ್ಲಿ ಶೇಂಗಾಬೀಜ ಮಾರುವ ಕಾಯಕದವರು.

ಕೊಟ್ರಪ್ಪನವರು ಒಂದು ದಿನ ಕವಲೂರ ಕವಿಯನ್ನು ಕರೆದುಕೊಂಡು ನಮ್ಮ ಮನೆಗೆ ಬಂದರು. ಬಾನು ಮನೆಯಲ್ಲಿ ಇರಲಿಲ್ಲ. ನಾನು ಬಂದವರಿಗೆ ಊಟ ಮತ್ತು ಪಾನೀಯದ ವ್ಯವಸ್ಥೆ ಮಾಡಿದೆ. ಹಾಡಿಕೆ ಶುರುವಾಯಿತು. ಊರ ಹೊರಗಿನ ಮನೆ. ತಂಪಾದ ಹೊತ್ತು. ಕವಲೂರ ಗೌಸಸಾಹೇಬರು ಕಂಚಿನ ಕಂಠದಿಂದ ರಾತ್ರಿಯೆಲ್ಲ ಹಾಡಿದರು. ಶಾಹಿರನ ದನಿಗೆ ಆ ದಿನ‌ ಅಗತ್ಯಕ್ಕಿಂತ ಹೆಚ್ಚಿನ ಕಸುವು ಬಂದಿತ್ತು. ಬೆಳಗಿನ ಜಾವಕ್ಕೆ ಹಾಡಿಕೆ ಮುಗಿಯಿತು. ಮುಖತೊಳೆದುಕೊಂಡು ಚಾ ಕುಡಿಯಲೆಂದು ನಾವು ಹೊರಗೆ ಬಂದೆವು. ಕವಲೂರ ಕವಿಯ ಏರುದನಿಯ ಹಾಡಿಕೆಯಿಂದ ನಿದ್ದೆಗೆಟ್ಟಿದ್ದ ನಮ್ಮ ಬೀದಿಯ ಅನೇಕರು, ಮನೆಯ ಗೇಟಿನ ಬಳಿ ನನ್ನ ವಿಚಾರಣೆಗೆ ಕಾದು ನಿಂತಿದ್ದರು. ಅವರ ಕೈಕಾಲು ಹಿಡಿದು, ನಮ್ಮ ಸೀಮೆಯ ದೊಡ್ಡ ಶಾಹಿರ ಎಂದು ಸಮಾಧಾನ ಪಡಿಸಿ, ತಲೆ ಉಳಿಸಿಕೊಂಡೆ. ಅವರು ನನ್ನ ವಿಚಾರಣೆ ಮಾಡುವಾಗ, ಕೊಟ್ರಪ್ಪನವರು ನನಗೆ ಎರಡು ಧರ್ಮದೇಟು ಬಿದ್ದರೆ ಬೀಳಲಿ ಎಂಬಂತೆ ನಗುತ್ತ ನಿಂತಿದ್ದರು.

ಇಂತಪ್ಪ ಶ್ರೀಮೇಟಿಯವರಿಗೆ ಈಗ ಎಪ್ಪತ್ತು ವಯಸ್ಸಾಗಿದೆ. ಆದರೆ ಅದೇ ನಗು. ಅದೇ ಚೈತನ್ಯ. ಅದೇ ಮಮತೆ. ಅವರು ಬಿಸಿಲು ಸುರಿವ ಬಳ್ಳಾರಿ ಸೀಮೆಯಲ್ಲಿ ಹರಿವ ತುಂಗಭದ್ರಾ ಹೊಳೆಯಂತೆಯೊ ಹಡಗಲಿ ಸೀಮೆಯ ಮಾಗಿದ ಅಂಜೂರದಂತೆಯೊ ತೋರುವರು.

ಚಿತ್ರಗಳು: ೧. ಮೇಟಿ‌ಕೊಟ್ರಪ್ಪ. ೨. ಕವಲೂರ ಶಾಹಿರ ಗೌಸುಸಾಬ್. ೩. ಹೂವಿನ ಹಡಗಲಿಯಲ್ಲಿ ಸವಾಲ್ ಜವಾಬ್ ಹಾಡಿಕೆಯ ಮಂಗಳ ಹಾಡುವಾಗ ಗಾಯಕರು ನನ್ನನ್ನು ಕರೆದು ನಡುವೆ ನಿಲ್ಲಿಸಿಕೊಂಡ ಸಂದರ್ಭ.

‍ಲೇಖಕರು avadhi

October 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: