ರಹಮತ್‌ ತರೀಕೆರೆ ಲೇಖನ- ಯುದ್ಧ ಮತ್ತು ಸಾಂಕ್ರಾಮಿಕ ರೋಗ

ರಹಮತ್‌ ತರೀಕೆರೆ

ಟರ್ಕಿಯ ಪ್ರವಾಸಕ್ಕೆ ತೊಡಗುವ ಮುನ್ನ ಬಳ್ಳಾರಿ ಸೀಮೆಯಲ್ಲಿದ್ದ ಟರ್ಕಿ ಸಮಾಧಿ ಸ್ಮಾರಕಕ್ಕೆ ಭೇಟಿಕೊಡಬೇಕು ಎನಿಸಿತು. ಈ ಮೊದಲು ಹಂಪಿ ಪರಿಸರದಲ್ಲಿರುವ ಎರಡನೆಯ ದೇವರಾಯನ ಕಾಲದಲ್ಲಿ ವಿಜಯನಗರದ ಸೈನ್ಯದಲ್ಲಿದ್ದ ಟರ್ಕರ ಸಮಾಧಿಗಳನ್ನು ನೋಡಿದ್ದೆ.

ಶಾಸನ ಹಾಗೂ ಪ್ರವಾಸಿಗರ ದಾಖಲೆಗಳ ಪ್ರಕಾರ ಟರ್ಕಿ ಮೂಲದ 2000 ಬಿಲ್ಲುಗಾರರೂ ಹತ್ತುಸಾವಿರ ರಾವುತರೂ ವಿಜಯನಗರ ಸೇನೆಯಲ್ಲಿದ್ದರು. ಇವರಿದ್ದ ಪ್ರದೇಶವನ್ನು ತುರ್ಕವಾಡಿ ಎಂದು ಕರೆಯಲಾಗುತ್ತಿತ್ತು. ಇದು ಮಾಲ್ಯವಂತ ಬೆಟ್ಟದ ಬದಿಯಿಂದ ವಿಜಯವಿಠಲ ಗುಡಿಗೆ ಹೋಗುವ ಹಾದಿಯಲ್ಲಿದೆ. ಈ ಸೈನಿಕರಿಗಾಗಿ ದೇವರಾಯನು ಕಟ್ಟಿಸಿದ ಮಸೀದಿಯೂ ಅದರಲ್ಲಿ ದೇವರಾಯನಿಗೆ ಒಳಿತನ್ನು ಹಾರೈಸುವ ಶಾಸನವೂ ಆಲ್ಲಿದೆ.

ಆದರೆ ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಟರ್ಕಿ ಸೈನಿಕರ ಸಮಾಧಿಗಳನ್ನು ನಾನು ನೋಡಿರಲಿಲ್ಲ. ಹೋದೆ. ಈ ಸ್ಮಾರಕವು ಪುಟ್ಟ ಉದ್ಯಾನದ ನಡುವೆ ಚೂಪಾಗಿ ಕತ್ತರಿಸಿದ ಕೊಳವೆಯ ಆಕೃತಿಯಲ್ಲಿದೆ. ಪಕ್ಕದಲ್ಲೇ ಟರ್ಕಿಯ ಹಾಗೂ ಭಾರತದ ರಾಷ್ಟ್ರಧ್ವಜಗಳನ್ನು ಹಾರಿಸುವ ಸ್ಥಂಭಗಳಿವೆ. ಇವುಗಳ ಎಡಬದಿಗೆ ಎರಡು ಸಮಾಧಿಗಳು; ತಲೆದೆಸೆಯಲ್ಲಿರುವ ಬೂದುಗಲ್ಲಿನ ಮೇಲೆ ಶಹೀತ್ ಕೋರ್ ಜನರಲ್ ಆಘಾಪಾಶಾ, ಶಹೀತ್ ಟರ್ಕ್ ಅಸ್ಕೇರಿ ಎಂಬ ಮೃತರ ಹೆಸರು; ಫಲಕದ ಮೇಲೆ ಟರ್ಕಿಯ ಹುತಾತ್ಮರು ಇಲ್ಲಿ ಮಲಗಿಹರು.

ಇವರನ್ನು, ಮೊದಲನೇ ಮಹಾಯುದ್ಧದ ಕಾಲದಲ್ಲಿ, ಸೂಯೆಜ್ ಕಾಲುವೆಯ ಯುದ್ಧ ಭೂಮಿಯಿಂದ ಯುದ್ಧ ಕೈದಿಗಳಾಗಿ ಇಲ್ಲಿಗೆ ತರಲಾಯಿತು’ ಎಂಬರ್ಥವುಳ್ಳ ಆಂಗ್ಲ ಮತ್ತು ಟರ್ಕಿ ಭಾಷೆಯ ಬರೆಹವಿದೆ. ಯೂರೋಪಿಗೆ ಅಂಟಿಕೊಂಡಿರುವ ಟರ್ಕಿ, ಆಫ್ರಿಕಾ-ಏಶಿಯಾ ಖಂಡಗಳನ್ನು ವಿಭಜಿಸುವ ಈಜಿಪ್ತದ ಸೂಯೆಜ್ ಕಾಲುವೆ, ಕರ್ನಾಟಕದ ಬಳ್ಳಾರಿ-ಎತ್ತಣಿಂದೆತ್ತ ಸಂಬಂಧ? ಮೊದಲನೆಯ ಮಹಾಯುದ್ಧದ ಚರಿತ್ರೆಯನ್ನು ಕೆದಕಿದೆ; ಯುದ್ಧ, ಯುದ್ಧಕೈದಿ, ಸಾವುಗಳ ದಾರುಣ ಕಥನ ತೆರೆದುಕೊಂಡಿತು.

ಮೊದಲ ಮಹಾಯುದ್ಧವು ನಾಲ್ಕು ವರ್ಷ (1914-18) ನಡೆಯಿತಷ್ಟೆ. ಸೆರ್ಬಿಯಾ ಮತ್ತು ಹಂಗೇರಿಗಳ ನಡುವೆ ಒಬ್ಬ ವ್ಯಕ್ತಿಯ ಕೊಲೆಯ ನೆಪದಲ್ಲಿ ಇದು ಸಣ್ಣದಾಗಿ ಶುರುವಾಯಿತು. ಮುಂದೆ ಒಂದೊಂದಾಗಿ 20ಕ್ಕಿಂತ ಹೆಚ್ಚು ದೇಶಗಳನ್ನು ತನ್ನ ಸುಳಿಗೆ ಸೆಳೆದುಕೊಂಡಿತು. ಯುದ್ಧ ಆರಂಭಿಸುವುದಕ್ಕೆ ಕಾರಣಗಳು ಯಾವಾಗಲೂ ಚಿಕ್ಕವು. ಆದರೆ ಅವು ಅರಂಭಿಸಿದವರ ಉದ್ದೇಶ ಮತ್ತು ನಿಯಂತ್ರಣ ದಾಟಿ ಘೋರ ವಿಪತ್ತುಗಳಿಗೆ ಕಾರಣವಾಗುತ್ತವೆ.

ಈ ಯುದ್ಧದಲ್ಲಿ ಇಂಗ್ಲೆಂಡ್ (ಅದರ ವಸಾಹತುವಾಗಿದ್ದ ಭಾರತ), ರಷ್ಯಾ, ಫ್ರಾನ್ಸ್, ಬೆಲ್ಜಿಯಂ, ಪೊರ್ಚುಗಲ್, ಗ್ರೀಸ್, ಅಮೆರಿಕಾ ಒಂದೆಡೆ; ಇನ್ನೊಂದೆಡೆ ಟರ್ಕಿ, ಜರ್ಮನಿ, ಆಸ್ಟ್ರಿಯಾ ಹಂಗರಿ ಬಲ್ಗೇರಿಯಾ ಇದ್ದವು. ಮಾನವ ಚರಿತ್ರೆಯಲ್ಲೇ ಅತಿ ಹೆಚ್ಚು ಜನರನ್ನು ಬಲಿಪಡೆದ ಈ ಘೋರಯುದ್ಧವು ಹಲವು ದೇಶಗಳಲ್ಲಿ ನಡೆಯಿತು. ಅಂತಿಮವಾಗಿ ಇಂಗ್ಲೆಂಡ್ ಅಮೆರಿಕ ಫ್ರಾನ್ಸಿನ ಮಿತ್ರರಾಷ್ಟ್ರಗಳು ಗೆದ್ದವು. (ವಾಸ್ತವವೆಂದರೆ, ಗೆದ್ದವರು ಸೋತವರಿಗಿಂತ ತುಸು ಕಡಿಮೆ ನಷ್ಟ ಅನುಭವಿಸಿದವರು.) ಎರಡೂ ಬಣಗಳು ಪರಸ್ಪರ ಎದುರಾಳಿ ಸೈನಿಕರನ್ನು ಬಂಧಿಸಿದ್ದವು.

ಒಂದೂವರೇ ಲಕ್ಷ ಸೈನಿಕರನ್ನು ಬ್ರಿಟಿಶರು ಸೆರೆಹಿಡಿದಿದ್ದರೆ, ಟರ್ಕಿ 34000 ಬ್ರಿಟಿಶರನ್ನು ಹಿಡಿದಿಟ್ಟಿತ್ತು. ಸಮಸ್ಯೆಯೆಂದರೆ ಅವರನ್ನು ಸೆರೆಯಲ್ಲಿಟ್ಟು ಸಾಕಲು ಯಾರಲ್ಲೂ ತಕ್ಕ ತಯಾರಿ ಇರಲಿಲ್ಲ. ಇಂಗ್ಲೆಂಡ ವಶಪಡಿಸಿಕೊಂಡ ಸೈನಿಕರಲ್ಲಿ ಜರ್ಮನರು ಆಸ್ಟ್ರಿಯನರು ಟರ್ಕರು ಕುರ್ದಿಶರು ಇದ್ದರು. ಅವರಲ್ಲಿ 8000 ಜನರನ್ನು ಅದು ತನ್ನ ವಸಾಹತುಗಳಾದ ಈಜಿಪ್ತ್ ಭಾರತ ಬರ್ಮಾಗಳಲ್ಲಿ ಇಡಲು ನಿರ್ಧರಿಸಿತು. ಇದಕ್ಕಾಗಿ ರಾಜಸ್ಥಾನದ ಸುಮೇರಪುರ, ಮಹಾರಾಷ್ಟ್ರದ ಅಹಮದ್ನಿಗರ, ಕರ್ನಾಟಕದ ಬೆಳಗಾವಿ- ಬಳ್ಳಾರಿ, ಬಂಗಾಳದ ಕಟಾಪಹಾಡ ಹಾಗೂ ಬರ್ಮಾಗಳನ್ನು ಆರಿಸಲಾಯಿತು.

ಯುದ್ಧಕೈದಿಗಳನ್ನು ಧರ್ಮ ಮತ್ತು ರಾಷ್ಟ್ರೀಯತೆ ಆಧಾರದಲ್ಲಿ ವಿಂಗಡಿಸಲಾಯಿತು. ಅಹಮದ್ನೇಗರದಲ್ಲಿ ಜರ್ಮನ್-ಆಸ್ಟ್ರ್ರಿಯನ್ ಕೈದಿಗಳು; ಬೆಳಗಾವಿಯಲ್ಲಿ ಕ್ರೈಸ್ತ ಕೈದಿಗಳು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು; ಸುಮೇರಪುರ ಬಳ್ಳಾರಿ ಹಾಗೂ ಬರ್ಮಾಗಳಲ್ಲಿ ಟರ್ಕಿಯ ಮುಸ್ಲಿಂ ಸೈನಿಕರು. ಮೊದಲಿಗೆ ಬೇರೆಬೇರೆ ಕಡೆ ಸೆರೆಯಾದ ಸೈನಿಕರನ್ನು ಇರಾಕಿನ ಬಂದರುಪಟ್ಟಣ ಬಸ್ರಾಕ್ಕೆ ತರಲಾಯಿತು. ಅಲ್ಲಿಂದ ಹಡಗುಗಳಲ್ಲಿ ಕರಾಚಿ ಬಂದರಿಗೂ, ಕರಾಚಿಯಿಂದ ರೈಲಿನಲ್ಲಿ ಕಲ್ಕತ್ತೆಗೂ, ಕಲ್ಕತ್ತೆಯಿಂದ ಕಟಾಪಹಾಡಿಗೂ ಬರ್ಮಾಕ್ಕೂ ಒಯ್ಯಲಾಯಿತು.

ಇನ್ನೊಂದು ತಂಡವನ್ನು, ರಾಜಸ್ಥಾನದ ಸುಮೇರಪುರಕ್ಕೂ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಅಹಮದ್ನಲಗರ-ಬೆಳಗಾವಿಗಳಿಗೂ, ಮದರಾಸ್ ಪ್ರಾಂತ್ಯದ ಬಳ್ಳಾರಿಗೂ ಸಾಗಿಸಲಾಯಿತು. ಯುದ್ಧಭೂಮಿಯಲ್ಲಿ ಪ್ರಾಣ ಕಳೆದುಕೊಂಡವರಿಗಿಂತ ಹೆಚ್ಚಿನವರು ಸಾಗಣೆಯಲ್ಲೂ ಶಿಬಿರಗಳಲ್ಲೂ ಸತ್ತರು. ಕೈದಿಗಳನ್ನು ಸ್ಥಳದಿಂದ ಸ್ಥಳಕ್ಕೆ, ಹಡಗು-ಟಕ್ಕುಗಳಲ್ಲಿ, ಕೆಲವೊಮ್ಮೆ ನಡೆಸಿಕೊಂಡು ಜಾತ್ರೆಗೆ ಸಾಗಿಸುವ ಜಾನುವಾರುಗಳಂತೆ ಕರೆದೊಯ್ಯಲಾಯಿತು.

ಮೊದಲೇ ಗಾಯಗೊಂಡಿದ್ದ ಸೈನಿಕರು ತಕ್ಕ ಔಷಧಿ ಉಪಚಾರ ವಿಶ್ರಾಂತಿಯಿಲ್ಲದೆ ಹುಳಗಳಂತೆ ಸಾಯುತ್ತಿದ್ದರು. ಇದನ್ನು ಇತಿಹಾಸಕಾರರು ‘ಸಾವಿನ ಮೆರವಣಿಗೆ’ ಎಂದಿರುವರು. ವ್ಯವಸ್ಥಿತ ಜೈಲುಗಳಿಲ್ಲದ್ದರಿಂದ ಬಯಲು ಬಂದೀಖಾನೆಯಲ್ಲೊ ಪಾಳುಬಿದ್ದ ಮನೆಗಳಲ್ಲೊ ಕೈದಿಗಳನ್ನು ಇಡಲಾಗುತ್ತಿತ್ತು. ಸರಿಯಾದ ಆಹಾರವಿಲ್ಲದೆ ಮತ್ತು ಹೊಸಪ್ರದೇಶದ ಹವಾಮಾನಕ್ಕೂ ಆಹಾರಕ್ಕೂ ಹೊಂದಿಕೊಳ್ಳದೆ ಅವರು ಜೀವಬಿಡುತ್ತಿದ್ದರು. ಬೇರೆಬೇರೆ ಖಂಡಗಳ ಸೈನಿಕರನ್ನು ಒಟ್ಟಿಗೆ ಸೇರಿಸಿ ಸಾಗಿಸುತ್ತಿದ್ದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದವು. ಆಮಶಂಕೆ ಸಾಮಾನ್ಯವಾಗಿತ್ತು.

ಕಣ್ಣಬೇನೆಯಿಂದ ಈಜಿಪ್ತಿನ ಶಿಬಿರಗಳಲ್ಲಿ ಬಹಳ ಜನ ಕುರುಡರಾದರು. ಗಟ್ಟಿಯಿದ್ದವರು ನಾವು ಯಾರಿಗಾಗಿ ಯಾತಕ್ಕಾಗಿ ಹೋರಾಡಿದೆವು?’ ಎಂಬ ಪ್ರಶ್ನೆಯನ್ನು ಎದುರಿಸುತ್ತ, ಯುದ್ಧದ ನಿಷ್ಫಲತೆ, ಅನಿಶ್ಚಿತ ಭವಿಷ್ಯ, ಕುಟುಂಬ ಅಗಲಿದ ನೋವು ಭರಿಸಲಾಗದೆ ಹತಾಶೆಯಿಂದ ಹುಚ್ಚರಾದರು. ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ 137 ಯುದ್ಧಕೈದಿಗಳನ್ನು ಇಡಲಾಗಿತ್ತು. ಅವರಲ್ಲಿ ಎಷ್ಟು ಜನ ಯಾವ್ಯಾವ ಕಾರಣದಿಂದ ಸತ್ತರು, ಎಷ್ಟು ಜನ ಮರಳಿ ತಮ್ಮ ದೇಶಕ್ಕೆ ಹೋದರು ಎಂಬ ಬಗ್ಗೆ ಸರಿಯಾದ ದಾಖಲೆ ಸಿಗುತ್ತಿಲ್ಲ.

ಈ ಬಗ್ಗೆ ಎರಡು ಅಭಿಪ್ರಾಯಗಳಿವೆ. 1. 1918ರ ಇನ್ಫ್ಲುಯೆಂಜಾ ಕಾಯಿಲೆಗೆ ಸಿಕ್ಕಿ ಅವರೆಲ್ಲರೂ ನಿಧನರಾದರು. 2. ಬ್ರಿಟಿಶರು ಸಾಕುವ ವೆಚ್ಚವುಳಿಸಲು ಕೈದಿಗಳ ಸಾಮೂಹಿಕ ಹತ್ಯೆ ಮಾಡಿದರು. ಸ್ಥಳೀಯರ ಪ್ರಕಾರ, ನೂರಾರು ಸಂಖ್ಯೆಯಲ್ಲಿದ್ದ ಈ ಸಮಾಧಿಗಳು ಬಹುಕಾಲ ಉಳಿದಿದ್ದವು. ಕಡಿಮೆ ಆಳದಲ್ಲಿ ಹೂತಿದ್ದರಿಂದ ಕಂಕಾಲಗಳು ಬಹುಕಾಲ ಹೊರಗೆ ಚೆಲ್ಲಾಪಿಲ್ಲಿ ಬಿದ್ದಿದ್ದವು. ವಿಮಾನ ನಿಲ್ದಾಣಕ್ಕಾಗಿ ಈ ಸಾಮೂಹಿಕ ಸಮಾಧಿಗಳ ಜಾಗವನ್ನು ಬಳಸಲಾಯಿತು.

ಈಗ ರಕ್ಷಿಸಲಾಗಿರುವುದು ರಾಜವಂಶಜರೂ ಸೇನಾಧಿಕಾರಿಗಳೂ ಆಗಿದ್ದ ಇಬ್ಬರ ಸಮಾಧಿಗಳನ್ನು ಮಾತ್ರ. ಟರ್ಕಿ ಸರ್ಕಾರವು ಭಾರತದ ಜತೆ ಮಾತುಕತೆಯಾಡಿ, 1980ರಲ್ಲಿ ಈ ಸ್ಮಾರಕವನ್ನು ನಿರ್ಮಿಸಿತು. ಅಂದಿನಿಂದ ಆಗಸ್ಟ್ 15 ಹಾಗೂ ಜನವರಿ 26ರಂದು ಎರಡೂ ದೇಶಗಳ ಧ್ವಜಗಳನ್ನು ಇಲ್ಲಿ ಹಾರಿಸಲಾಗುತ್ತದೆ. 1915-16ರಲ್ಲಿ ಕರೆತಂದ ಟರ್ಕಿ ಕೈದಿಗಳು ಬಳ್ಳಾರಿಯಲ್ಲಿ ಎರಡು ವರ್ಷಕಾಲ ಇದ್ದರು. ಅವರ ಇರುವಿಕೆ ಕುರಿತು ಸಿಕ್ಕುತ್ತಿರುವ ದಾಖಲೆಯೆಂದರೆ, ಅಂತಾರಾಷ್ಟ್ರೀಯ ರೆಡ್ಕ್ರಾತಸ್ ಸಂಸ್ಥೆಯ ವರದಿ. ಸೆರೆಸಿಕ್ಕ ನಾಗರಿಕರನ್ನು ಹಾಗೂ ಯುದ್ಧಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುವುದನ್ನು ತಿಳಿದು 1917ರಲ್ಲಿ ಜಿನೇವಾದಲ್ಲಿ ಒಂದು ಸಭೆ ನಡೆಯಿತು.

ಕೈದಿಗಳ ಸ್ಥಿತಿಗತಿ ಅರಿಯಲು, ರೆಡ್ಕ್ರಾ ಸ್ ಸಮಿತಿಗಳು ಶಿಬಿರಗಳಿಗೆ ಭೇಟಿಕೊಟ್ಟು ವರದಿ ಸಲ್ಲಿಸಬೇಕೆಂದು ನಿರ್ಧರಿಸಲಾಯಿತು. ಅದರಂತೆ ಈಜಿಪ್ತ್ ಭಾರತ ಬರ್ಮಾಗಳಿಗೆ ಒಂದು ತಂಡ ರಚಿಸಲಾಯಿತು. ಈ ತಂಡವು 1917ರ ಜನವರಿ ಮುಂಬೈಗೆ ಬಂದಿಳಿಯಿತು; ತನ್ನ ಕೆಲಸವನ್ನು ಸುಮೇರಪುರದಿಂದ ಆರಂಭಿಸಿತು. ಬಳಿಕ ಅಹಮದ್ ನಗರ, ಬೆಳಗಾವಿ ಮೂಲಕ ಬಳ್ಳಾರಿಗೆ 1917ರ ಮಾರ್ಚ್ 17ಕ್ಕೆ ಆಗಮಿಸಿ, ಕೈದಿಗಳಿಗೆ ಒದಗಿಸಲಾದ ವಸತಿ ಊಟ ಉಡುಪು ಔಷಧಿ ಧಾರ್ಮಿಕಾಚರಣೆ ಸೌಲಭ್ಯಗಳ ಬಗ್ಗೆಯೂ, ಅವರ ದೈಹಿಕ ಮಾನಸಿಕ ಆರೋಗ್ಯದ ಬಗ್ಗೆಯೂ, ವರದಿ ಮಾಡಿತು.

1918ರಲ್ಲಿ ಅಮೆರಿಕದಲ್ಲಿ ಪ್ರಕಟವಾದ ಈ ವರದಿಯಲ್ಲಿ ಸ್ವಾರಸ್ಯಕರ ಸಂಗತಿಗಳಿವೆ. ಯುದ್ಧಕೈದಿಗಳ ಸಾಮಾನ್ಯ ದೂರು, ತಮ್ಮ ಕುಟುಂಬಗಳಿಂದ ಯಾವ ಸುದ್ದಿಯೂ ತಲುಪುತ್ತಿಲ್ಲ ಎಂಬುದಾಗಿತ್ತು. ಹೆಚ್ಚಿನವರು ಏಕತಾನತೆಯಿಂದ ಕೂಡಿದ ಜೈಲುವಾಸದಿಂದಲೂ ಕುಟುಂಬದ ಅಗಲಿಕೆಯಿಂದಲೂ ಮಾನಸಿಕ ಸ್ಥಿಮಿತತೆ ಕಳೆದುಕೊಂಡು, ಅರೆಹುಚ್ಚರಾಗಿದ್ದರು; ತಮ್ಮ ಕಷ್ಟಗಳನ್ನು ಉತ್ಪ್ರೇಕ್ಷೆ ಮಾಡಿ ಹೇಳುತ್ತಿದ್ದರು; ದುಃಖವನ್ನು ವಿಧಿಯ ಮೇಲೆ ಹಾಕಿ ನುಂಗುತ್ತಿದ್ದರು; ಯುದ್ಧವನ್ನು ಶಪಿಸುತಿದ್ದರು; ಪ್ರಾರ್ಥನೆಗೆಂದು ಕೊಟ್ಟ ಕೋಣೆಯನ್ನು ಆಟವಾಡುವುದಕ್ಕೂ ಕಾಫಿ ಮನೆಯಾಗಿಯೂ ಬಳಸುತ್ತಿದ್ದರು. ಅವರಿಗೆ ಡೈಸ್ ಚೆಸ್ ಡೊಮೊನಿಸ್ ಆಟಗಳು ಪ್ರಿಯವಾಗಿದ್ದವು. ಹಾಲಿಲ್ಲದ ಟರ್ಕಿಶ್ ಕಾಫಿ ಕುಡಿಯುತಿದ್ದರು. ಕೆಲವರಿಗೆ ಫ್ರೆಂಚ್ ಇಂಗ್ಲಿಶ್ ಬರುತ್ತಿತ್ತು. ಹೆಚ್ಚಿನವರು ಟರ್ಕಿ ಭಾಷೆಯಲ್ಲಿ ಓದುವುದಕ್ಕೆ ಪುಸ್ತಕ ಕಳಿಸಲು ಕೇಳುತ್ತಿದ್ದರು. ಸಣ್ಣ ಕಾರಣಕ್ಕೆ ತಮ್ಮಲ್ಲೇ ಜಗಳವಾಡುತ್ತಿದ್ದರು.

ಬಿಸಿಲು ಮತ್ತು ಆಹಾರದ ಬಗ್ಗೆ ದೂರು ಸಾಮಾನ್ಯವಾಗಿತ್ತು. ರೈತಾಪಿ ಮೀನುಗಾರ ವ್ಯಾಪಾರ ಹಿನ್ನೆಲೆಯಿಂದ ಬಂದ ಸೈನಿಕರು, ಊರಲ್ಲಿ ತಮ್ಮ ಕಸುಬುಮುಂಗಟ್ಟು ನಾಶವಾದ ಬಗ್ಗೆ ದುಃಖಿಸುತ್ತಿದ್ದರು. ರಶಿಯನ್ ಮತ್ತು ಫ್ರೆಂಚ್ ಯುದ್ಧಕೈದಿಗಳಿದ್ದ ಕ್ಯಾಂಪುಗಳಿಗೆ ಹೋಲಿಸಿದರೆ, ಭಾರತ ಮತ್ತು ಬರ್ಮಾ ಕ್ಯಾಂಪುಗಳಲ್ಲಿ ಮರಣ ಪ್ರಮಾಣ ಹೆಚ್ಚಿತ್ತು. ಬ್ರಿಟಿಶ್ ಸೈನಿಕರು ಅವರಿಂದ ಟರ್ಕಿಯನ್ನು ಕಲಿಯುತ್ತಿದ್ದರು. ಫುಟಬಾಲ್ ಆಡಿಸುತ್ತಿದ್ದರು. ಕೈಕಾಗದ ತಯಾರಿಸಿಸುತ್ತಿದ್ದರು. ಆದರೂ ಯುದ್ಧಬಿಟ್ಟು ಬೇರೇನೂ ಅರಿಯದ ಸೈನಿಕರಿಂದ ಕೆಲಸ ಮಾಡಿಸುವುದು ಕಷ್ಟವಾಗಿತ್ತು. ಅತ್ತ ಟರ್ಕಿಯೂ ತನ್ನ ಶಿಬಿರಗಳಲ್ಲಿ ಇಂಗ್ಲೆಂಡ್ ರಶಿಯಾ ಫ್ರೆಂಚ್ ಹಾಗೂ ಭಾರತೀಯ ಸೈನಿಕರನ್ನು ಬಂಧಿಸಿಟ್ಟಿತ್ತು.

ಇಲ್ಲಿನ ಶಿಬಿರಗಳಲ್ಲಿದ್ದ ಭಾರತೀಯ ಸೈನಿಕರ ಕಷ್ಟವೂ ಇದೇ ತರಹ ಇತ್ತು. ನಾನು ಟರ್ಕಿಗೆ ಹೋದಾಗ, ಭಾರತೀಯ ಸೈನಿಕರ ಸಮಾಧಿಗಳನ್ನು ನೋಡುವ ಉತ್ಸುಕತೆಯಿತ್ತು. ಸಾಧ್ಯವಾಗಲಿಲ್ಲ. ಟರ್ಕಿ ಶಿಬಿರದಲ್ಲಿ ಬ್ರಿಟಿಶ ಸೈನಿಕರು ತಮ್ಮ ಅನುಭವವನ್ನು ದಾಖಲಿಸಿದ್ದಾರೆ. ಅವರ ಜತೆಯಿದ್ದ ಭಾರತೀಯ ಸೈನಿಕರು ಬರೆದಂತಿಲ್ಲ. ರೆಡ್ಕ್ರಾ ಸ್ ಸಮಿತಿ, ವರದಿಯ ಕೊನೆಯಲ್ಲಿ ಸ್ವದೇಶಕ್ಕೆ ಮರಳಿದ ಬಳಿಕ ಟರ್ಕಿಯ ಸೈನಿಕರು ಬ್ರಿಟಿಶ್ ಸರ್ಕಾರ ನಮ್ಮನ್ನು ಚೆನ್ನಾಗಿ ನೋಡಿಕೊಂಡಿತು ಎಂದು ಹೇಳುವರು ಎಂದು ನಮಗೆ ನಂಬಿಕೆಯಿದೆ ಎಂದು ಆಶಾಭಾವನೆ ಪ್ರಕಟಿಸಿದೆ. ಆದರೆ ಬಳ್ಳಾರಿಯಲ್ಲಿದ್ದ ಅನಾಮಿಕ ಟರ್ಕರು ಸ್ವದೇಶಕ್ಕೆ ಮರಳಿದರೇ, ಮರಳಿದ್ದರೆ ತಮ್ಮ ಅನುಭವ ದಾಖಲಿಸಿದರೇ ತಿಳಿಯುತ್ತಿಲ್ಲ.

ಪರದೇಶಗಳಿಗೆ ಹೋಗಿ ಮಡಿದ ಸೈನಿಕ ಸಮಾಧಿಗಳು ಮತ್ತು ಯುದ್ಧಸ್ಮಾರಕಗಳು ಜಗತ್ತಿನಾದ್ಯಂತ ಇವೆ. ಶ್ರೀರಂಗಪಟ್ಟಣದಲ್ಲಿ ನಿಲ್ಲಿಸಲಾದ ಸ್ಮಾರಕದಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಮಡಿದ ಆಂಗ್ಲಸೈನಿಕರ ಹೆಸರುಗಳಿವೆ; ದೆಹಲಿಯ ಇಂಡಿಯಾ ಗೇಟಿನ ಸ್ಮಾರಕದಲ್ಲಿ ಕನ್ನಡಿಗರ ಹೆಸರುಗಳಿವೆ. ಎಲ್ಲರೂ ಬ್ರಿಟಿಶರ ಸಾಮ್ರಾಜ್ಯ ವಿಸ್ತರಣ ಕದನಗಳಿಗೆ ಜೀವ ತೆತ್ತವರು.

ಸೈನಿಕರ ಸಮಾಧಿ ಮತ್ತು ಯುದ್ಧಸ್ಮಾರಕಗಳು ಆಯಾ ರಾಷ್ಟ್ರ ಮತ್ತು ನಾಗರಿಕ ಸಮಾಜಗಳು, ಹುತಾತ್ಮರಿಗೆ ತೋರಿಸಿರುವ ಕೃತಜ್ಞತೆಯಂತೆ ಕಾಣುತ್ತವೆ. ಆದರೆ ಇವು ಯುದ್ಧಗಳನ್ನು ಯಾರು ಮಾಡಿಸುತ್ತಾರೆ? ಯಾಕಾಗಿ ಮಾಡಿಸುತ್ತಾರೆ? ಅವಕ್ಕೆ ಬಲಿಯಾಗುವ ಜನ ಯಾರು? ಜನರನ್ನು ಸೈನಿಕರಾಗಿ ಮಾಡಿ ಖಂಡಾಂತರ ಒಯ್ದು ಬಲಿಕೊಟ್ಟ ಮೇಲೆ ಅವರ ಕುಟುಂಬಗಳಿಗೆ ಏನಾಯಿತು? ಈ ಪ್ರಶ್ನೆಗಳನ್ನು ನೆಲದೊಳಗೆ ಹೂತು ಬಿಡುತ್ತವೆ. ವಿಸ್ತರಣಾವಾದಿ ಯುದ್ಧಗಳಲ್ಲಿ ಸತ್ತ ಸೈನಿಕರನ್ನು ಹುತಾತ್ಮ ಪರಿಭಾಷೆಯಲ್ಲಿ ಹೊಗಳುವುದು ಯುದ್ಧಕ್ರೌರ್ಯದ ಮೇಲೆ ಮುಚ್ಚುವ ಮಕಮಲ್ಲಿನ ಪರದೆ.

ಈ ಮಾತು ವಸಾಹತುಶಾಹಿ ಸಾಮ್ರಾಜ್ಯಶಾಹಿ ದೇಶಗಳು ಮಾಡಿದ ಆಧುನಿಕ ಯುದ್ಧಗಳಿಗೆ ಮಾತ್ರವಲ್ಲ; ರಾಜರು ಸುಲ್ತಾನರು ಮಾಡಿದ ಯುದ್ಧಗಳಿಗೂ, ಧರ್ಮ ಸಂಸ್ಕೃತಿ ಭಾಷೆ ರಕ್ಷಣೆಯ ಹೆಸರಲ್ಲಿ ನಡೆಸುವ ಆಧುನಿಕ ಬೀದಿಯುದ್ಧಗಳಿಗೂ ಅನ್ವಯವಾಗುತ್ತದೆ. ದೊರೆಗಳ ಅಧಿಕಾರಿಗಳ ದೇಶಗಳ ಶೌರ್ಯದ ವಿಜಯಗಾಥೆಗಳು ಚರಿತ್ರೆಯಲ್ಲಿ ಪ್ರಭಾವಳಿಯಲ್ಲಿ ಉಳಿಯುತ್ತವೆ. ಸಾಯುವ ಸೈನಿಕರ ಮತ್ತು ಅನಾಥವಾಗುವ ಅವರ ಕುಟಂಬಗಳ ಕಥೆ, ಮಂಕುಗವಿದು ಚರಿತ್ರೆಯ ವಿಸ್ಮೃತಿಯ ಕಸದಬುಟ್ಟಿಗೆ ಸೇರುತ್ತದೆ. ಸೈನಿಕರು, ಯಾವುದೇ ದೇಶಕ್ಕೆ ಧರ್ಮಕ್ಕೆ ಭಾಷೆಗೆ ಸೇರಿರಲಿ, ಮೂಲತಃ ಕುಟುಂಬಸ್ಥರು; ಸಾವಿರಾರು ಮೈಲಿ ದೂರದ ಮನೆಯಲ್ಲಿ, ಅವರ ಮಕ್ಕಳು ಹೆಂಡತಿ ತಂದೆತಾಯಿ ಮಾಡಿರಬಹುದಾದ ಪ್ರತೀಕ್ಷೆ, ಅನುಭವಿಸಿರಬಹುದಾದ ಸಂಕಟದ ನೆಲೆಯಲ್ಲಿ ನೋಡಿದರೆ, ಯುದ್ಧಗಳ ಅಮಾನುಷತೆ ಹೊಳೆಯುತ್ತದೆ.

‘ನಿಸಾರ್ ಅಹಮದರ ಅನಾಮಿಕ ಆಂಗ್ಲರು’ ಕವನ ನೆನಪಾಗುತ್ತದೆ. ಸೈನಿಕರು, ತಾಯ್ ನೆಲದಿಂದ ದೂರದಲ್ಲಿರುವ ಅಪರಿಚಿತ ನಾಡಿನಲ್ಲಿ ಪ್ರಾಣ ಕಳೆದುಕೊಂಡು, ಪರದೇಶದ ಮಣ್ಣಲ್ಲಿ ಮಲಗುವ ಅವಸ್ಥೆಯನ್ನು ಕುರಿತು ಅಚ್ಚರಿಯನ್ನೂ ವಿಷಾದವನ್ನೂ ಪಡುವ ಕವನವಿದು. ಇದರ ದುಗುಡವನ್ನು ರಂಗೂನಿನಲ್ಲಿ ಸಾಯಬೇಕಾದ ಕೊನೆಯ ಮೊಗಲ್ ಚಕ್ರವರ್ತಿ ಬಹದೂರ ಶಾ ಜಫರ್, ತನ್ನ ಶೋಕಕಾವ್ಯದಲ್ಲಿ ತೋಡಿಕೊಂಡನು. ಬಳ್ಳಾರಿಯಲ್ಲಿ ಇರುವುದು ಅನಾಮಿಕ ಟರ್ಕರು. ಇವರಂತೆಯೇ ಅನಾಮಿಕ ಭಾರತೀಯರು-ಕನ್ನಡಿಗರು ಹೊರದೇಶಗಳಲ್ಲಿ ಇದ್ದಾರೆ-ಸಮಾಧಿಯಲ್ಲಿ ಮಣ್ಣಾಗಿ, ಯುದ್ಧ ಚರಿತ್ರೆಯಲ್ಲಿ ಒಂದು ಸಂಖ್ಯೆಯಾಗಿ, ಯುದ್ಧ ಕ್ರೌರ್ಯದ ಅದೃಶ್ಯ ಸ್ಮಾರಕವಾಗಿ.

ಸಾಂಕ್ರಾಮಿಕ ಬೇನೆಗಳಿಗೆ ವಿಜ್ಞಾನವು ಕಷ್ಟಪಟ್ಟು ಮದ್ದು ಕಂಡುಹಿಡಿಯುತ್ತದೆ. ಆದರೆ ದೇಶ- ಧರ್ಮ-ಜನಾಂಗಗಳ ಅಭಿಮಾನಕ್ಕಾಗಿ, ಸಂಪತ್ತನ್ನು ದೋಚುವುದಕ್ಕಾಗಿ ನಡೆಯುವ ಯುದ್ಧ ಮತ್ತು ಫಿತೂರಿಗಳಿಗೆ ನಾಗರಿಕ ಸಮಾಜವು ಇನ್ನೂ ತಕ್ಕ ಮದ್ದನ್ನು ಹುಡುಕಿಲ್ಲ. ಅವು ಬೇರೆಬೇರೆ ರೂಪಾಂತರಗಳಲ್ಲಿ ನಮ್ಮನ್ನು ಕಾಡುತ್ತಲೇ ಇವೆ.

‍ಲೇಖಕರು Avadhi

May 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: