ರಸಗುಲ್ಲಾಗೆ ಒರಿಸ್ಸಾ ಮತ್ತು ಬೆಂಗಾಲ್ ಹೊಡೆದಾಡಿದಂತೆ…

ಈಕೆ ‘ಜಯನಗರದ ಹುಡುಗಿ’ ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

“ಕ್ರೆಮಾ ಕತಲಾನಿಗೂ ಕ್ರೆಮಾ ಅಂದೋರಾಗೂ ನನಗೇನೂ ವ್ಯತ್ಯಾಸ ಕಾಣಿಸಲ್ಲಿಲ್ಲ” ಎಂದು ಹುಡುಗಿ ಹೇಳಿದಾಕ್ಷಣ ಐಂಡ್ರಿಯಾಗೆ ಕೋಪ ಬಂತು. “ಇದು ನಮ್ಮ ಇನ್ವೆನ್ಷನ್” ಎಂದಾಗಲಂತೂ ವಿಪರೀತ ನಗು ಬಂತು. “ನಾವು ಇದು ನಮ್ಮದೇ ಎಂದು ಕೋರ್ಟಿನಲ್ಲಿ ದಾವೆ ಹೂಡಿದ್ದೇವೆ” ಎಂದು ಸಹ ಹೇಳಿದಳು.

“ಇದು ಥೇಟ್ ನಮ್ಮ ರಸಗುಲ್ಲಾಗೆ ಒರಿಸ್ಸಾ ಮತ್ತು ಬೆಂಗಾಲ್ ಹೊಡೆದಾಡಿದಂತೆ ಆಗಿತ್ತು. ಊಟ ತಿಂಡಿಗೆಲ್ಲಾ ಹೀಗೆ ಆಡಿದರೆ ಹೇಗೆ, ಇಡೀ ಸೌಥ್ ಇಂಡಿಯಾ ಇಡ್ಲಿ ತಿನ್ನತ್ತಪ್ಪ, ದೋಸೆನೂ ಈಗ ಯಾರದ್ದು ಅಂತ ಗಲಾಟೆ ಮಾಡೋದಕ್ಕಾಗತ್ತೆ ಸುಮ್ಮನೆ ಇವರದ್ದು ಬಗೆಹರಿಯದ ಕಥೆ” ಎಂದು ನಕ್ಕೊಂಡು ಕ್ರೆಮಾ ಕತಲಾನಾನೋ ಅಥವಾ ಕ್ರೆಮಾ ಅಂದೋರಾ ತಿನ್ನುತ್ತಾ ಇದ್ದಳು.

“ಅಂಡೋಸಿನ್ಸ್ ಅನ್ನುವ ಪದದಿಂದ ಅಂದೋರಾ ಎಂಬ ನಾಮಕರಣ ಈ ದೇಶಕ್ಕೆ ಆಗಿದ್ದು” ಎಂದು ಹೇಳುತ್ತಾ ಕಥೆ ಶುರುಮಾಡಿದ್ದಳು. “ಇದಕ್ಕೆ ಕತಲಾನಿನಲ್ಲಿ ಏನರ್ಥ” ಎಂದು ಹುಡುಗಿ ಕೇಳಿದಾಗ, “ಹೇ ಇದು ಕತಲಾನ್ ಭಾಷೆಯಲ್ಲ, ಬಾಸ್ಕ್ ಭಾಷೆಯ ಪದ, ಹಂಡಿಯಾ ಪದದಿಂದ ಬಂದಿದೆ ಹಾಗೆಂದರೆ ದೊಡ್ಡದು ಎಂದರ್ಥ” ಎಂದಾಗ, ಹುಡುಗಿ ನಕ್ಕು, “ಅಲ್ಲಾ ನಾವು ಮೊದಲ ಕತ್ಲಾನ್ ದೇಶ ಅದು ಇದು ಎಂದೆಲ್ಲಾ ಹೇಳುತ್ತೀನಿ ಅಂದು ನನಗೆ ಇಷ್ಟೆಲ್ಲಾ ಬಿಲ್ಡಪ್ ಕೊಟ್ಟು ಹೀಗೆ ನಮ್ಮ ದೇಶದ ಹೆಸರೇ ಬೇರೆ ಭಾಷೆಯಿಂದ ಬಂದಿದ್ದು ಅಂತ ಕಥೆ ಹೇಳಿದರೆ ಏನನ್ನಬೇಕು” ಎಂದು ನಾಲ್ಕು ಸ್ಪೂನ್ ಮತ್ತೆ ಕ್ರೆಮಾ ಹಾಕಿಸಿಕೊಂಡಳು.

‘ಭೂತಯ್ಯನ ಮಗು ಅಯ್ಯು’ ಸಿನಿಮಾದಲ್ಲಿ ‘ಅನ್ನ’ ಎಂದು ನಾಲ್ಕು ಜನ ಬಂದು ಒಂದೇ ತಟ್ಟೆಯಲ್ಲಿ ಉಣ್ಣುತ್ತಾರಲ್ಲ ಹಾಗೆ ಏನೋ ಈ ಕಥೆ ಮುಗಿಯುವ ಹಾಗೆ ಕಾಣುತ್ತಿಲ್ಲ ಎಂದು ನಗುತ್ತ ತಿನ್ನುತ್ತಿದ್ದಳು. “ನಮ್ಮ ದೇಶದಲ್ಲಿ ನಾಗರೀಕತೆ ತುಂಬಾ ಬೇಗ ಶುರುವಾಯಿತು, ಅದೆಷ್ಟೋ ಪಳಿಯಳಿಕೆಗಳು ಸಿಕ್ಕಿದೆ” ಎಂದಾಗ ಮಾತ್ರ, “ಅಯ್ಯೋ ಈ ದೇಶದವರು ಎಂಥವರು ಅವರ ಕಥೆಯನ್ನ ಇಷ್ಟೆಲ್ಲಾ ಚೆನ್ನಾಗಿ ಹೇಳಿಕೊಳ್ಳುತ್ತಾರೆ.

ನಮ್ಮ ದೇಶವೆಂದರೆ ಬರಿ ರಾಜಕೀಯ, ಆ ಬಣ, ಈ ಬಣ, ಆ ಭಾಷೆ, ಈ ಭಾಷೆ, ಅವರು ಇವರು ಬರೀ ರಾಜಕಾರಣವನ್ನೇ ಉಸಿರಾಡುವ ನಮಗೆ ಇವರ ಮಾತುಕತೆಯಲ್ಲಿ ಒಂದೊಬ್ಬ ರಾಜಕಾರಣಿಯ ಹೆಸರನ್ನು ಹೇಳದೇ ಬರೀ ಕೆಲವು ನ್ಯಾಷನಲ್ ಹೀರೋಸ್ ಗಳ ಹೆಸರನ್ನ ಮಾತ್ರ ಹೇಳಿ ಅವರ ಚರಿತ್ರೆಯನ್ನ ಎಷ್ಟು ಚೆನ್ನಾಗಿ ಹೇಳುತ್ತಿದ್ದಾರೆ” ಎಂದೂ ಅಂದುಕೊಂಡಳು.

ಇನ್ನು ಇವಳನ್ನ ರೇಗಿಸಿದ್ದು ಸಾಕು ಎಂದು “ಅಲ್ಲಾ ನೀ ಹೇಳಿದಕ್ಕೆಲ್ಲಾ ನಕ್ಕಿದ್ದಕ್ಕೆ ಸಾರಿ, ನನಗೆ ನಿಮ್ಮ ಸಣ್ಣ ರಾಷ್ಟ್ರದ ಸ್ವಾಯತ್ತತೆಯನ್ನು ಅದೆಲ್ಲರೂ ಹೇಗೆ ಗೌರವಿಸಿದ್ದಾರೆ ಎಂದು ತಿಳಿಯುವ ಕುತೂಹಲ, ಸ್ವಲ್ಪ ಹೇಳುತ್ತೀಯಾ” ಎಂದು ಹುಡುಗಿ ಸ್ವಲ್ಪ ಮಸ್ಕಾ ಹೊಡೆಯಲು ಹೋದಳು.

“ನಿನಗೆ ಐಬಿರಿಯಾ ಪೆನಿನ್ಸುಲಾ ಬಗ್ಗೆ ಗೊತ್ತಾ?” ಎಂದು ಕೇಳಿದಳು. “ಓಹ್ ಅದರ ಬಗ್ಗೆ ನುಂಗಿ ನೀರು ಕುಡಿದಿದ್ದಾಳೆ” ಎಂದು ಮನೆಯೊಡತಿ ಮಧ್ಯ ಬಾಯಿ ಹಾಕಿ ಅಂದಳು. ಈ ಮನೆಯೊಡತಿ ಯಾರನ್ನಾದರೂ ಪರಿಚಯ ಮಾಡಿಕೊಟ್ಟರೆ ಸ್ವಲ್ಪ ಹೊತ್ತು ತಾನು ಅಲ್ಲಿ ನಿಂತು ಮಾತಾಡುತ್ತಾಳೆ. ಎಲ್ಲಿ ಮನೆಯ ಗುಟ್ಟುಗಳನ್ನ ಹಳೆ ಬಾಡಿಗೆದಾರರು ಹೇಳಿ ಹೊಸಬರು ಅದೇ ಕ್ಯಾತೆ ತೆಗೆಯೋದಕ್ಕೆ ಶುರು ಮಾಡುತ್ತಾರೆ ಎಂಬ ಭಯ ಬೇರೆ ಅವಳಿಗೆ.

ಹಳೇ ಬಾಡಿಗೆದಾರರ ಅಡ್ಜೆಸ್ಟ್ಮೆಂಟುಗಳು ಹೊಸಬರಿಗೆ ಗೊತ್ತಾಗಬಾರದು ಎಂಬ ಸ್ವಾರ್ಥವೂ ಅಲ್ಲಿರುತ್ತದೆ. ಅಂದೋರಾದ ಕಥೆಯನ್ನು 50 ಸಲ ಕೇಳಿದ್ದರೂ ಮತ್ತೆ ಆ ಮಾತಿನ ನಡುವೆ ಬರುವ ಡ್ರೈಯರಿಗೆ ವಾರಕ್ಕೆ ನಾಲ್ಕು ಸಲ ಹಾಕಬಹುದು ಬಟ್ಟೆಯನ್ನ, ಓನರ್ ಮನೆಯ ಉಪ್ಪಿನ ಡಬ್ಬ ಖಾಲಿ ಆಗುವುದೇ ಇಲ್ಲ, ತಿಂಗಳಾಂತ್ಯದ ರೇಷನ್ ಹಠಾತ್ತನೆ ಮಾಯವಾಗುವ ಎಲ್ಲಾ ಲಾಜಿಕ್ ಸಹ ಹಳೆ ಬಾಡಿಗೆದಾರರಿಗೆ ಗೊತ್ತಿರುವ ಕಾರಣ ಇವೆಲ್ಲವನ್ನ ಸೆನ್ಸಾರ್ ಮಾಡಲು ನಿಂತಿದ್ದಳು.

“ರೋಮನ್ ಸಾಮ್ರಾಜ್ಯ ಬಿದ್ದ ನಂತರ ಅಂದೋರಾಗೆ ಸ್ವಲ್ಪ ಕಷ್ಟವಾಯಿತು, ಮುಂಚೆ ಅಂದೋರಾವನ್ನ ಒಂದು ಪ್ರಾಂತ್ಯವನ್ನಾಗಿ ಎಲ್ಲರೂ ನೋಡಿದ್ದರು, ಯಾವತ್ತಿನಿಂದಲೂ ಇದು ಸ್ಪೇನಿನ/ಕತ್ಲಾನಿನ/ಫ್ರೆಂಚರ ಕಡೆ ವಾಲಿರಲೇ ಇಲ್ಲ. ಆದರೆ ಎಲ್ಲರಿಗೂ ಚಿಕ್ಕ ಪ್ರಾಂತ್ಯಕ್ಕೆ ತಮ್ಮನ್ನ ತಾವೇ ರಾಜ ಎಂದು ಘೋಷಿಸಿಕೊಳ್ಳುವ ಹುಚ್ಚು ಬಂದಿತ್ತು. ಬಾರ್ಸಾದ ನಾಲ್ಕೈದು ರೋಡುಗಳನ್ನ ಸೇರಿಸಿ ನನ್ನದೂ ಒಂದು ರಾಜ್ಯ ಮಾಡಿಕೊಳ್ಳುತ್ತೇವೆ ನೋಡಿ ಎಂದು ಹೇಳುವ ಹಾಗಿತ್ತು. ಅನಾದಿ ಕಾಲದಿಂದಲೂ ಉರುಗ್ವೆಲ್ಲಿನ ಬಿಷಪ್ ನಮ್ಮ ಪ್ರಾಂತ್ಯವನ್ನ ಆಳುತ್ತಿದ್ದರು, ಬಿಷಪ್ ಆಳ್ವಿಕೆ ಎಂದರೆ ಅದು ಧರ್ಮದ ಆಡಳಿತ, ಚರ್ಚ್ ಎಲ್ಲಾ ನಿರ್ದಾರಗಳನ್ನ ಮಾಡುತ್ತಿತ್ತು” ಎಂದಾಗ, “ಹಾಗಿದ್ದಲ್ಲಿ ನಾಸ್ತಿಕರು ಏನಾಗಿದ್ದರು, ಅವರಿಗೆಲ್ಲಾ ಆಸ್ತಿಕರಷ್ಟೇ ಹಕ್ಕು ಸ್ವಾತಂತ್ರ್ಯ ಎಲ್ಲಾ ಇತ್ತಾ ಅಥವಾ ಏನು?” ಎಂಬ ಪ್ರಶ್ನೆ ಐಂಡ್ರಿಯಾಳನ್ನ ದಂಗುಬಡಿಸಿತು. ಆಗಿನ ಕಾಲದಲ್ಲಿ ನಾಸ್ತಿಕರು ಇಲ್ಲ ಅನ್ನುವುದಕ್ಕೂ ಸಾಧ್ಯವಿಲ್ಲ, ಇದ್ದರೂ ಅನ್ನುವುದಕ್ಕೂ ಸಾಧ್ಯವಿಲ್ಲ, ಥೇಟ್ ಎಚ್ ಆರ್ ಹಾಗೆ, “ಐ ವಿಲ್ ಗೆಟ್ ಬ್ಯಾಕ್ ಟು ಯೂ” ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿದಳು.

ಬೇರೆ ಪ್ರಾಂತ್ಯದ ರಾಜರ ಆಕ್ರಮಣದ ಭಯದಿಂದ ಬಿಷಪ್ ಕತಲೂನ್ಯಾದ ಒಬ್ಬ ದೊಡ್ಡ ಮನುಷ್ಯ ಲಾರ್ಡ್ ಆಫ್ ಕೋಬೆಯ ಸಹಾಯ ಪಡೆದು ತನ್ನ ಅಧಿಕಾರವನ್ನ ಉಳಿಸಿಕೊಂಡ. ಆಮೇಲೆ ಕೌಂಟ್ ಆಫ್ ಫಯಾಕ್ಸ್ ಫ್ರಾನ್ಸಿನ ಮಧ್ಯಭಾಗದ ಪಾಳೇಗಾರ, ಇವನು ಲಾರ್ಡ್ ಆಫ್ ಕೋಬೆಯ ಮನೆಗೆ ಮದುವೆ ನೆಂಟಸ್ತನ ಮಾಡಿಕೊಂಡು ತನಗೂ ಅಂದೋರಾದ ಮೇಲೆ ಹಕ್ಕಿದೆ ಎಂದು ಗಲಾಟೆ ಮಾಡಲು ಶುರು ಮಾಡಿದ. ಈ ಅಧಿಕಾರದ ವ್ಯಾಜ್ಯ ಮದುವೆಯನ್ನೂ ಮುರಿದು ಬೀಳಿಸುತ್ತದೆ ಎಂದು ಆರು ತಿಂಗಳು ಫ್ರಾನ್ಸಿನವರು ಇನ್ನಾರು ತಿಂಗಳು ಬಿಷಪ್ ರಾಜ್ಯವಾಳಲು ಒಪ್ಪಂದ ಮಾಡಿಕೊಂಡರು.

ಈ ಅಡ್ಜೆಸ್ಟ್ಮೆಂಟಿಗೆ ಅಂದೋರಾ 4 ಹ್ಯಾಮ್, 40 ಲೋಫ್ ಬ್ರೆಡ್ಡು ಮತ್ತು ವೈನ್ ಕೊಟ್ಟು ತನ್ನ ಧನ್ಯವಾದ ತಿಳಿಸುತ್ತದೆ. 1207ರಿಂದ ಅಂದೋರಾದ ಬಾರ್ಡರ್ ಬದಲಾಗೇ ಇಲ್ಲ” ಎಂದು ಬಹಳ ಗತ್ತಿನಿಂದ ಹೇಳಿದಳು. “ಎಲಾ ಇವರಾ, ಬ್ರೆಡ್ಡು ಮತ್ತು ವೈನಿನಲ್ಲಿ ಇವರ ವ್ಯಾಜ್ಯವನ್ನೇ ಪರಿಹರಿಸಿಕೊಂಡು ಬಿಟ್ಟರಲ್ಲ” ಎಂದು ಆಶ್ಚರ್ಯ ಪಟ್ಟು “ಮುಂದ” ಎಂದು ಕೇಳಿದಳು.

ಆದರೆ ನಮಗೆ ಸ್ಪೇನಿನವರ ದಬ್ಬಾಳಿಕೆ ಅಷ್ಟು ಇಷ್ಟವಾಗುತ್ತಿರಲ್ಲಿಲ್ಲ, ಹಾಗಾಗಿ 1934ರಲ್ಲಿ ಬೋರಿಸ್ ಸ್ಕಾಸಿರೆಫ್ ಎನ್ನುವವನು ಬಿಷಪ್ಪಿನ ಮೇಲೆ ಯುದ್ಧ ಹೂಡಿ, ಅಂದೋರಾಗೆ ನಾನೇ ಮಹಾರಾಜ ಎಂದು ಡಿಕ್ಲೇರ್ ಮಾಡಿಕೊಂಡ. ಅಲ್ಲಿಗೆ ಅವನನ್ನ ಕೆಳಗಿಳಿಸಿ ಸ್ಪೇನ್, ಅಂದೋರಾ ಮತ್ತು ಫ್ರಾನ್ಸಿನಿಂದ ಎಕ್ಸೈಲ್ ಮಾಡಲಾಯಿತು. ಇದಾದ ನಂತರ ಎರಡನೇ ವಿಶ್ವಯುದ್ದದಲ್ಲಿ ಅಂದೋರಾ ಯಾರಿಗೂ ಸಪೋರ್ಟ್ ಮಾಡದೆ ತನ್ನ ಪಾಡಿಗೆ ತಾನು ಸ್ಪೇನಿನಿಂದ ಫ್ರಾನ್ಸಿಗೆ ಗನ್ನುಗಳನ್ನ ಸಾಗಿಸಿಕೊಂಡು ನೆಮ್ಮದಿಯಾಗಿತ್ತು.

ಅಂದೋರಾದ ಅದೃಷ್ಟ ಎಂಥದ್ದಂದರೆ ಜರ್ಮನಿ ಸಹ ಯಾವುದೇ ಕಾರಣಕ್ಕೂ ಇದಕ್ಕೆ ತೊಂದರೆ ಕೊಡಲ್ಲಿಲ್ಲ. ಎಲ್ಲರೂ ಸುಸ್ತಾದಾಗ ರೆಸ್ಟ್ ತಗೊಂಡು ನೆಮ್ಮದಿಯಾಗಿರುತ್ತಿದ್ದ ಕಾರಣ ಅವರಿಗೆ ಇದು ಸುಖದ ಸ್ಠಳವಾಗಿತ್ತು.

ಟೂರಿಸಂ ಬಿಟ್ಟು ಬೇರೆ ಆದಾಯವಿಲ್ಲ ಊರಿನಲ್ಲಿ, ಈ ಟ್ಯಾಕ್ಸ್ ಕಥೆಗಳು ಬಹಳ ಇವೆ. ಬೆಂಗಳೂರಿನ ಎಸ್ ಪಿ ರೋಡಿನಲ್ಲಿ, ನ್ಯಾಷನಲ್ ಮಾರ್ಕೆಟ್ಟಿನಲ್ಲಿ ಕಡಿಮೆ ದುಡ್ಡಿಗೆ ಎಲಕ್ಟ್ರಾನಿಕ್ಸ್ ಸಿಗುವ ಹಾಗೆ ಇಲ್ಲಿ ಅಂದೋರಾದಲ್ಲಿ ಎಲೆಕ್ಟ್ರಾನಿಕ್ಸ್ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತದೆ. ಇದನ್ನ ಟ್ಯಾಕ್ಸ್ ಹವೆನ್ ಎಂದೂ ಕರೆಯುತ್ತಾರೆ” ಎಂದು ಐಂಡ್ರಿಯಾ ಹೇಳುತ್ತಲೇ ಹೋದಳು.

ಹುಡ್ಗಿ ಮನಸಿನಲ್ಲೇ ತನಗೆ ಹೊಸ ಫೋನ್, ಮನೆಗೆ ಒಳ್ಳೆ ಪ್ಲಾಸ್ಮಾ ಟೀವಿ, ಒಳ್ಳೆ ಡಿ ಎಸ್ ಎಲ್ ಆರ್ ಹೀಗೆ ಏನೇನೋ ಲೆಕ್ಕ ಹಾಕಿಕೊಂಡು ಕೂತಾಗ, ಮನೆಯೊಡತಿ ಬಂದು, “ಸಾಕು ನಿಮ್ಮ ಕತೆ, ಬನ್ನಿ ಕೇಕ್ ಕಟ್ ಮಾಡೋಣ” ಅಂದಳು. ಲೈಫೇ ಪಾರ್ಟಿ ಥರಹ ನಡೆಸುವ ಇವಳಿಗೆ ಇದೇನು ಪಾರ್ಟಿ ಎಂದು ಸುಮ್ಮನೆ ಒಂದು ಮೂಲೆಯಲ್ಲಿ ಕೂತಳು.

“ಮುಂದಿನ ತಿಂಗಳು ನಾವು ಅಂದೋರಾಗೆ ಹೋಗುತ್ತಿದ್ದೇವೆ, ಸೋ ಅದಕ್ಕಾಗಿ ಈ ಸೆಲೆಬ್ರೇಷನ್” ಎಂದು ಜೋರಾಗಿ ಕೂಗಿ ಮನೆಯೊಡತಿ ಮೆರ್ರಿ ಮಾಡುತ್ತಿದ್ದಳು. ಪಕ್ಕದ ರೂಮಿನ ಕಝಾಕ್ ಹುಡುಗಿ, “ಈ ಸಂಬಂಧಗಳನ್ನ ಸರಿ ಮಾಡುವುದಕ್ಕೆ ಆರು ತಿಂಗಳು ಒಬ್ಬರ ಮಾತನ್ನು ಇನ್ನೊಬ್ಬರು ಕೇಳಿದರೆ ಅದೆಷ್ಟು ಚೆನ್ನಾಗಿರತ್ತ ಅಲ್ವಾ” ಎಂದು ತನ್ನ ಫೋನನ್ನೇ ನೋಡಿಕೊಂಡು ಹೇಳಿದಳು.

ಹುಡುಗಿ ನಕ್ಕು, “ಇಬ್ಬರು ರಾಜರು ಯಾವತ್ತೂ ಸರಿ ಹೋಗಲ್ಲ ಬಿಡು…” ಎನ್ನುವಾಗಲೆ ಠಪಕ್ ಎಂದು ಕೇಕ್ ಬಂದು ಹುಡುಗಿಯ ಮೈಮೇಲೆ ಬಿತ್ತು… “ಯಾರದು” ಎಂದು ಹೇಳುವಷ್ಟರಲ್ಲಿ ಒಂದು ಕಪ್ಪು ಪ್ಯಾಂಟ್ ಮತ್ತು ಕೆಂಪು ಶರ್ಟ್ ಹಾಕಿಕೊಂಡ ವ್ಯಕ್ತಿ ದಡದಡನೆ ಓಡಿ ಹೋದ, “ಯಾವನೋ ಅವನು” ಎಂದು ಬಾಗಿಲು ತೆಗೆದು ಓಡುವಾಗ ದಡ್ ಎಂದು ಗೋಡೆಗೆ ಬಡಿದು ಬಿದ್ದಳು…

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: