ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ- ರಕ್ತ ಕಣ್ಣೀರಿನಿಂದ ಪ್ರವಾದಿಗಳ ಪಾದ ತೊಳೆಯಲಾಗುತ್ತಿದೆ

ರವಿಕುಮಾರ್ ಟೆಲೆಕ್ಸ್


ದೇವರು  ಹುಟ್ಟಿದ್ದ
ಇಲ್ಲೆಲ್ಲಾ ನಡೆದಾಡಿದ್ದ ಎಂದಿದ್ದರಲ್ಲವೆ?!

ಈ ದೇವ ನೆಲವೆಲ್ಲಾ ಈಗ
ಹಿಂಸೆಯ
ಕುದಿವ ಕುಲುಮೆ

ಪ್ರೇಮವನ್ನೂ
ಕರುಣೆಯನ್ನೂ
ಕ್ಷಮೆಯನ್ನೂ ಶಿಲುಬೆಗೇರಿಸಲಾಗಿದೆ

ಇಸ್ಲಾಂ
ಯಹೂದಿ
ಕ್ರಿಶ್ಚಿಯನ್ನೋ… ಧರ್ಮವೆಂಬ
ಧರ್ಮಗಳೆ  ನಿಗಿನಿಗಿ ಬೇಯುವುದು

ಗಾಯಗೊಂಡವರ
ಎಲ್ಲವನ್ನೂ ಕಳಕೊಂಡವರ
ಆಕ್ರಂದನ ಸಾವಿನ ಸಾಮ್ರಾಟರಿಗೆ
ದರವೇಶಿಯ ಹಾಡಿನಂತೆ ಕೇಳಿಸುತ್ತಿರಬಹುದು

ಅವರು ಉನ್ಮತ್ತಗೊಳ್ಳುತ್ತಾರೆ
ರಕ್ತಕ್ಕಾಗಿ; ತಾಯಿ ಮಕ್ಕಳ ನರಳಾಟಕ್ಕಾಗಿ

ಪರಮ ಪ್ರವಾದಿಗಳ ಪಾದಗಳನ್ನು
ಎಳೆಮಕ್ಕಳ ರಕ್ತ – ಕಣ್ಣೀರಿನಿಂದ
ತೊಳೆಯುವುದು ಇಲ್ಲಿ ಮಾತ್ರ

ಸ್ವರ್ಗ ಸೇರುವ ದಾರಿಗಳಿಗೆಲ್ಲಾ
ಹೆಣಗಳ ತೋರಣ ಶೃಂಗಾರ

ಮದ್ದು- ಗುಂಡು ಸಿಡಿತಲೆಗಳ‌ ಸದ್ದು
ಅಧಿಕಾರ ಗದ್ದುಗೆಗಳ ಅಬ್ಬರದೊಳಗೆ
ಮಿನಾರು- ಶಿಲುಬೆ
ಪ್ರಾರ್ಥನೆ ಯ ಪವಿತ್ರಗೋಡೆಗಳೂ
ಮರುಗಿ ನಲುಗಿ  ಅಳುವುದು
ಮನುಷ್ಯರಿಗೆ ಮಾತ್ರ ಕೇಳಿಸುತ್ತದೆ

ಸೈತಾನರಿಗಲ್ಲ;

ಈ ನೆಲದಲ್ಲಿನ್ನು ರಸತುಂಬಿ  ಗೊನೆ ತೂಗುವ
ಖರ್ಜೂರದ ಮರಗಳು ಹುಟ್ಟಲಾರವೇನೋ!

ಗುಲಾಬಿ ಹೂಗಳು ಅರಳಲಾರವೇನೋ!
ಸುಗಂಧ ಹೊತ್ತ ಗಾಳಿ ಬೀಸಲಾರದೇನೋ!

‍ಲೇಖಕರು avadhi

20 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading