ಬಿ ಆರ್ ರವಿಕಾಂತೇಗೌಡ
ಈ ಬೆಳ್ಳಂ ಬೆಳಗು
ನನ್ನೊಳಗ
ನೀ ಕೂತು
ನೋಡುತಿರುವೀ
ಬೆಳ್ಳಂ ಬೆಳಗು
ಕಣ್ಣೊಳಗಿನ ಹೂ
ಹೃದಯದ ಢವ ಢವ
ಪುಪ್ಪುಸದ ಗಾಳಿಯಾಗಿ
ಚರ್ಮದಾಚೆಗೂ ಹಬ್ಬುತಿರುವಿ
ನೀ ನನ್ನೊಳಗಿನ
ಘಮವಾಗೀ
ಬೆಳ್ಳಂ ಬೆಳಗು

ನೀ ಎದೆ ಬಸಿದು
ನೀಡುವ ಪ್ರೀತಿ
ಕಲ್ಲು ಮುಳ್ಳಿನ ಹಾದಿಯೊಳಗೂ
ರಕ್ತ ಕಾರುವ ಪಾದಕೂ
ತಂಪನೆರೆದೂ
ಆಯಾಸದ ನಿದ್ದಿಯಲ್ಲೂ
ಕನಸಾಗಿ ಕಾಡುವೀ
ಬೆಳ್ಳಂ ಬೆಳಗು
ತಪ್ಪು ಸರಿಗಳ
ಗೆರೆಯಳಿಸಿ
ಬೆರಳುಗಳೆಣೆದು
ಪ್ರೀತಿ ಸೋರದಂತೆ
ಮಾಡಿದೀ
ಬಂಗಾರದಂತಿರುವ ನೀ
ಉಂಗುರದ ಹಂಗ ಹರಿದೀ
ಬೆಳ್ಳಂ ಬೆಳಗು
ನಾ ತೊರೆದರೆ ನೀ
ಹೆಂಗೆ ಇರುವಿಯೊ ಎಂದು
ಮರೆಯಾದ ಕ್ಷಣ
ನನ್ನೊಳಗೆ ಅವಿತಿ
ನಾಲಗೆ ನುಡಿಯ ಮೌನದೊಳಗೆ
ಎಣ್ಣೆ ಬತ್ತಿ ಹಂಗ ತೊರೆದು
ಕಾಣುವ ಬೆಳಕಾಗಿ
ತೋರುವೀ
ಬೆಳ್ಳಂ ಬೆಳಗು
ಎಷ್ಟೋ ಸಾವಿರ ದೂರ
ಅಳಿಸಿ ಹಾಕಿದಿ
ಉಸಿರೆಸೆದು ಸೆಳೆದು
ನಿನ್ನೆದೆಯಿಂದ
ಎಂದೂ ಮುಗಿಯದ
ಹಾಡ ಹೊಮ್ಮಿಸಿ
ಕಾಪಾಡಿದೀ
ಬೆಳ್ಳಂ ಬೆಳಗು






ಚೆನ್ನಾಗಿದೆ
Reading you after many days Ravikantji very happy. Wonderful poem Congrats