
ಸಂಧ್ಯಾರಾಣಿ
ಧಾರವಾಡ ಸಾಹಿತ್ಯ ಸಂಭ್ರಮದ ಕಡೆಯ ದಿನದ ಸಂವಾದದಲ್ಲಿ ರಮೇಶ್ ಅರವಿಂದ್ ಒಂದು ಕಥೆ ಹೇಳಿದರು.
ಒಂದರ ಪಕ್ಕ ಒಂದರಂತೆ ಎರಡು ಹಳ್ಳಿಗಳು. ಒಂದು ಹಳ್ಳಿಯ ಹೆಸರು ಕಕಕಿ, ಇನ್ನೊಂದು ಹಳ್ಳಿಯ ಹೆಸರು ಕಿಕಕಿ.
ಎರಡು ಹಳ್ಳಿಗಳ ನಡುವೆ ದೊಡ್ಡ ಗೋಡೆ. ಈ ಹಳ್ಳಿಯವರಿಗೂ ಆ ಹಳ್ಳಿಯವರಿಗೂ ಬದ್ಧ ದ್ವೇಷ. ಏನು ಕಾರಣ ಎಂದು ಯಾರಿಗೂ ಗೊತ್ತಿಲ್ಲ.
ಈ ಹಳ್ಳಿಯವರು ಮಕ್ಕಳಿಗೆ ಆ ಹಳ್ಳಿ ಜನ ಸರಿ ಇಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು ವಿಷ ಕುಡಿಯುತ್ತಾರೆ, ಅವರ ಊರಿಗೆ ಹೆಜ್ಜೆ ಇಡಬೇಡಿ ಎಂದು ಹೇಳುತ್ತಿದ್ದರು. ಆ ಊರಿನ ಜನ ಮಕ್ಕಳಿಗೆ ಪಕ್ಕದ ಊರಿಗೆ ಹೋಗಬೇಡಿ, ಆ ಊರಿನ ಜನ ದಿನಾ ಎದ್ದು ರಕ್ತ ಕುಡೀತಾರೆ ಎಂದು ಹೇಳುತ್ತಿದ್ದರು.
ಒಂದು ದಿನ ಈ ಊರಿನ ಮಕ್ಕಳು ಚೆಂಡಾಟ ಆಡುತ್ತಿದ್ದಾಗ ಚೆಂಡು ಗೋಡೆ ದಾಟಿ ಆ ಕಡೆ ಹೋಗಿಬಿಡುತ್ತದೆ. ಮಕ್ಕಳಿಗೆ ಗಾಬರಿ. ಏನಾಗುತ್ತದೋ ಎಂದು ಕಾಯುತ್ತಿದ್ದಾಗ ಆ ಕಡೆಯಿಂದ ಕಿಲಕಿಲ ನಗುವಿನ ಸದ್ದು ಕೇಳಿಸುತ್ತದೆ. ಮಕ್ಕಳಿಗೆ ಅಚ್ಚರಿ.
ಮರು ನಿಮಿಷದಲ್ಲಿ ಆ ಕಡೆಯಿಂದ ಚೆಂಡು ಈ ಕಡೆಗೆ ಚಿಮ್ಮುತ್ತದೆ. ಮತ್ತೆ ಮಕ್ಕಳು ಚೆಂಡೆಸೆಯುತ್ತಾರೆ, ಮತ್ತೆ ಚೆಂಡು ಬರುತ್ತದೆ. ಅರೆ ಆ ಕಡೆ ಸಹ ಮಕ್ಕಳೇ ಇದ್ದಾರೆ ಎನ್ನುವುದು ಅರಿವಾಗುತ್ತದೆ. ಚೆಂಡಾಟ ಮುಂದುವರೆಯುತ್ತದೆ.
ಗೋಡೆಗಳಿಂದ ಲಾಭ ಆಗುವುದು ಗೋಡೆ ಕಟ್ಟುವವನಿಗೆ ಮಾತ್ರ. ಗೋಡೆಯ ಎರಡೂ ಬದಿಯಲ್ಲೂ ಮನುಷ್ಯರೇ ಇರುತ್ತಾರೆ, ಮಕ್ಕಳೇ ಇರುತ್ತಾರೆ.
ಇನ್ನು ಹೇಳಲೇನು ಹೆಚ್ಚಿಗೆ?





ಕಕಕಿ
ಕಿಕಕಿ