ರತಿಯ ಕಂಬನಿ
ನಂದಿನಿ ವಿಶ್ವನಾಥ ಹೆದ್ದುರ್ಗ
ಕನಸುಗಳ ದಫನು ಮಾಡುವ
ಈ ವೇಳೆಯಲ್ಲಿ
ಕೊಂದ ಪಾಪದ ಹೊರೆ ನನ್ನ ಹಣೆಯಲ್ಲಿ.
ಎಂದೋ ಕಪಾಟಿನೊಳಗೆ ಅಡಗಿಸಿಟ್ಟ
ಒಂದು ಹೂವಿನ ಹೆಣದ
ತುಂಬಾ ನೆನಪುಗಳು ನಾರುತ್ತಿವೆ.
ಪಂಜರದ ಹಕ್ಕಿಯ ಹಾಡು ತುಸು ಹೆಚ್ಚೇ
ಇಂಪೆನಿಸುತ್ತಿದೆ.
ಹೂದಾನಿಯ
ಪರಿಮಳದ ಹೊಸ ಹೂವ ಪಕಳೆಗಳು
ನಾಳೆಗಳ ನೇಯುತ್ತಿವೆ.
ಎಷ್ಟೊಂದು ಗಡಿಗಳ ದಾಟಿದ ಕಥೆಗಳು
ನನ್ನ ದಿಂಬಿನ ತುಂಬಾ.
ಅವನು ಎದೆಗಿಳಿದರೆ ಸಾಕು
ದೇಹವೆಲ್ಲ ಕ್ಷೋಭೆ.
ಏನಂಥ ಶೋಭೆ.

ಹೊಸ ಊರ ಪಯಣದಲಿ
ಜೊತೆಗೆ ಸಾಗಿದವ
ಮಾತಿಗಿಳಿಸಿದ ಚುಕ್ಕಿಗಳು
ತುರುಬಿನೊಳಗೆ ಅಡಗಿ
ನಡೆದ ಎಡೆಯೆಲ್ಲಾ ಬೆಳಕ ನೆರೆ.
ಬರೆದ
ಪಾಪದ ಹಾಡುಗಳಿಗೆ
ಹೊಸ ರಾಗ ಬೆಸೆದು
ನಡುರಾತ್ರಿವರೆಗೂ ಹಾಡಿ
ಗಂಗೆಯಲಿ ಮೀಯಿಸಿಬಂದೆ.
ಇಂಗಲಿಲ್ಲ ಕಂಬನಿ.
ಇಲ್ಲೋ..ನಿತ್ಯ ವಸಂತ…
ಉಮೆಯ ಮುಟ್ಟು ಮುಗಿದು ಮೂರು ದಿನಕಳೆದಿದೆ.
‘ಎಷ್ಟು ಹೊತ್ತು ತಪವ ಮಾಡುತ್ತಿಯೋ ಶಿವನೇ.?’
ಪ್ರಾಯದ ಕರೆಗೆ ಕಾಲದ ಕಾಲು ಘಳಿಗೆಯೂ ದೀರ್ಘ.
ಹೊರಗೆ ಗೇಟಿನಲಿ ನಿಂತ ಬಸವ
ಸುಮ್ಮನೇ ನಗುತಾನೆ!!
ಕಾಯುವಾಗೆಲ್ಲ ಶಿವೆಯ ತಾಳ್ಮೆ ಮೀರುತ್ತಿದೆ.
ಕಾಮದ ಹೂವಿನ
ಪರಿಮಳದ ಗಾಳಿ
ತಂದ ಹೊಸಕರೆಗೆ
ಭಗವಂತ ಮೈಕೊಡವಿ ಎದ್ದ.
ಧ್ಯಾನ ಭಂಗವಾದದ್ದಕ್ಕೆ
ಮನ್ಮಥನ ಕೊಂದವನೀಗಾ
ತನುವ ಕಂಪನಕೆ ಸೋತು’ಪಾರು’
ಎಂದ.
ರತಿಯ ರವಿಕೆಯೊಳಗಿನ್ನೂ
ಕಾಮನ ಬೆರಳುಗಳ
ಭ್ರಮೆ.
ಕಣ್ಣುಮುಚ್ಚಿ ಸುಖಿಸುತಿದ್ದ ಹುಡುಗಿಯ
ಯಾರು ಕರೆದವರು ಹಾಗೆ.?

ಅಗೋ ಅಲ್ಲಿದೆ ನಿನ್ನವನ ಬೂದಿ.
ಬಳಿದು ದೇಹಕ್ಕೆ
ತಣಿಸಿಕೊ ನಿನ್ನ ನಿತ್ಯ ಅನಂತ ಕಾಮ…
ಉರಿದು ಹೋದ
ಶಿವ ಉಮೆಯ ಮಿಥುನದ
ಮುನ್ನೆಲೆಗೆ ಅವ;
ದುಃಖಿಸುವ ರತಿಯ
ಉಮೆಯ ಸಹವಾಸದಲಿ
ಶಿವ ಸುಖವಾಗಿ ಹರಸಿದ.
‘ಅನಂಗನಾಗಲಿ ನಿನ್ನ ನಲ್ಲ..!’
ಸಂತೈಸುವರು ಎಲ್ಲಾ..
‘ಏನಾಗಲಿಲ್ಲ ಬಿಡೆ ..
ಕಾಮನಿನ್ನು ಚಿರಾಯು ..
ಅಂಗವಿಲ್ಲದ ಹೆಳವ.,ಅಷ್ಟೇ.!
ನಿನ್ನ ತಿಟ್ಟೆ ದಿಣ್ಣೆ ಬಯಲು ಕೊಳ
ಆಲಯ ನಿಲಯಗಳಲಿನ್ನು
ಭ್ರಮೆಯ ಬೆರಳುಗಳಾಡುವವು..
ಸುಖದಲೇನೂ ಕೊರತೆಯಾಗದೇ ರತಿ…
ಅಳುತೀಯಾ ಯಾಕೇ…’
ರತಿಯ ‘ಕಣ್ಣಬಿಂದು’ವಿಗೆ
ಹುಟ್ಟಿದವಳು ನಾನು..
ಹಿಂದೆ ಬಂದು ಹೋದವ
ಮಾತಿನಲಿ ಮುಡಿಸಿದ
ಚುಕ್ಕಿಗಳಿಗೀಗ ಬಿಡುಗಡೆಯು ಬೇಕಂತೆ.
ಕೋಣೆಯಲಿಟ್ಟಿದ್ದ ಪರಿಮಳದ
ಹೂವುಗಳೂ ಭಾಷೆ ಕೇಳುತ್ತಿವೆ.
ಇನ್ನಾದರೂ
‘ನಾವು ಅವಳ ಅಂಗಳದಲಿ ಅರಳುತ್ತೇವೆ.’
ಎಷ್ಟೊಂದು ಹೊಸ ಮುತ್ತುಗಳ
ಪಡೆದಿಲ್ಲ ಅವರವರ ಹೆಂಡತಿಯರು
ನನ್ನ ತುಟಿಯ ನೆನಪಲ್ಲಿ.
ಪಾಪವೆಂದರೆ ನಾನು ಒಪ್ಪಲಿ ಹೇಗೆ.
ಕೋಣೆಯಲಿದ್ದ
ಕಾಮನ ಹೂವುಗಳ ಪೋಣಿಸಿ
ಅವನ ಹೆಂಡತಿಯ ಕರೆದು
ಕುಂಕುಮದ ಹೆಸರಲ್ಲಿ
ಕೊಟ್ಟು ಕೈ ತೊಳೆದುಕೊಂಡೆ.
ಮುಡಿ ಬಿಚ್ಚಿ ಚುಕ್ಕಿಗಳ ಅಟ್ಟಿ
ಹೊಸದೊಂದು ಸಸಿಯ ನೆಟ್ಟು…
ಮೊನ್ನೆ ಕಂಡವನು ಸಣ್ಣ ನಗೆ ನಕ್ಕದ್ದು
ನನ್ನ ಇಡೀ ರಾತ್ರಿಯ ಹಸಿವಿಗೆ ಮೃಷ್ಟಾನ್ನ.

‘ರತಿ’ಯ ಕಂಬನಿಗೆ
ಹುಟ್ಟಿದವಳು ನಾನು.
ಏಳುವ ವೇಳೆಗೆ ಕದಪು ತುಂಬೆಲ್ಲ
ಸುಖದ ಛಾಯೆ.
ಮೈತುಂಬ ಬೆಳೆದ ಹೊಸ ಸಸಿಯ ಎಲೆಯ ತುದಿಯಲೊಂದು ಸೌಗಂಧಿಕೆಯ ಮೊಗ್ಗು.
ಮೊನ್ನೆ ತಡರಾತ್ರಿ ತುಟಿಯ ಸುಖಿಸುತ್ತಿದವನ
ತಬ್ಬಹೋಗಿ ಏನು ಸಿಕ್ಕದೆ ತಬ್ಬಿಬ್ಬು ನಾನು.!!
ಹುಟ್ಟುವ ಬಯಕೆ ಬೇಗೆಗೆ
ಬರಿಯ ಬಲಿ ಕಂಬದ ನೆರಳು
ಕರೆಗಂಟೆ ಸದ್ದಿಗೆ ಕದ ತೆರದವಳಿಗೆ
ಯಾರೋ ಕಾಗದ ಕೊಟ್ಟು ಹೋದರು.
ನಾಡಿದ್ದು
ಕೈಲಾಸದಲ್ಲಿ ಕಾರ್ತೀಕನ ಹುಟ್ಟುಹಬ್ಬವಂತೆ.
ಮಕ್ಕಳೇ ಬೇಡವೆಂದ ಗಂಗೆಗೆ ದಿನಸಿ ತರುವಾಗ
ಶಿವ ಗುಳಿಗೆಯನೂ ಒಯ್ದು ಸರಿಯೇ ಎಂದು
ಲಲ್ಲೆ ಮಾಡಿದನಂತೆ.
ರತಿಯ ‘ಕಂಬನಿ’ಗೆ ಹುಟ್ಟಿದವಳು ನಾನು.
ತಳಹೊಟ್ಟೆಯ ಮುಟ್ಟಿಕೊಂಡೆ.
ತವಕ ನನಗೂ ಇದೆ.
ಇಲ್ಲಿ ಶಪಿಸಬೇಕಾದವರು ಯಾರು.!
ಗರ್ಭಗುಡಿಯೇ ಅನ್ಯಾಯದ ತವರು.
ಎಷ್ಟು ನೆರೆಗಳ ಕಟ್ಟಿಟ್ಟು ಅಂದಗಾಣಿಸುತ್ತೇನೆ
ಗೊತ್ತೆ ನನ್ನ ನಾನು?
ಒಂದು ನಿರಿಗೆಯ ಕುರಿತು ಮಾತಾಡುವವರಿಗೇನು ಗೊತ್ತು?
ಒಂದು ಸುಂದರ ಮುಂಜಾನೆಗೂ ಕತ್ತಲಿನ
ನೆತ್ತರು ಮೆತ್ತಿದೆ.
ಹೊಳೆವ ಚುಕ್ಕಿಯ ಒಡಲಲ್ಲಿ
ರವರವದ ಕುದಿಯಿದೆ.!






kavite chennagide akka
Fantastic poem. I thoroughly enjoyed it. I Love your poems!
ತುಂಬಾ ಆಳವಾದ ಕವಿತೆ…….ಇಷ್ಟವಾಗಿದೆ……
Beautiful poem …congratulations Nandini.
-Chandraprabha
Wonderful poem….
Verry Nice Poem Medum
ನಂದಿನಿ ಅವರ ರತಿಯ ಕಂಬನಿ ಎಂಬ ಕವನದ ಒಳಗೆ ಒಂದು ಸುತ್ತು
“ಒಂದು ಹೂವಿನ ಹೆಣದ ತುಂಬಾ ನೆನಪುಗಳು ನಾರುತ್ತಿವೆ” ಈ ಸಾಲನ್ನು ಎಲ್ಲಿಂದ ಎಲ್ಲಿಗೆ ವಿಸ್ತರಿಸಿಕೊಳ್ಳಲಿ, ಈ ವಿಷಾದದ ನೆರಳಲ್ಲೇ ಬದುಕುವ ಜೀವಗಳ ಹೇಗೆ ಸಂತೈಸಲಿ?
ಒಂದು ಹೂವಿನ ಜೀವನಕ್ಕೆ ಮಾತ್ರ ಮುಕ್ತಿ ಅಂದು ಕೊಂಡವ ನಾನು. ಹೂವಿಗೆ ನಿನ್ನೆ ಮತ್ತು ನಾಳೆ ಎರಡೂ ಇಲ್ಲ. ಅದು ಗಿಡದಲ್ಲಿಯೇ ಉಳಿದರೂ ಗುಡಿಯ ಸೇರಿದರೂ ಮುಡಿಯ ಸೇರಿದರೂ ಅದರ ಜೀವನ ಸಾರ್ಥಕ. ಅಂಥ ಸಾರ್ಥಕ ಬದುಕಿನ ಹೂವಿನ ಹೆಣ ಎಂಬ ಪದವೇ ಒಂದು ತೀವ್ರವಾದ ನೋವಿನ ಆಳಕ್ಕೆ ಇಳಿಸಿದೆ. ಪಂಜರದ ಹಕ್ಕಿಯ ಹಾಡು ಯಾವಾಗಲೂ ಇಂಪು, ಆದರೆ ಅದರ ಬದುಕು? ಈ ಪಂಜರದ ಹಕ್ಕಿ ಒಂದು ಹೆಣ್ಣು. ಇಷ್ಟು ಹೇಳಬಲ್ಲೆ, ಉಳಿದದ್ದು ಜಗತ್ತು ಇದು ಬೆಳಕು ಎಂದು ಹಚ್ಚುವ ದೀಪ ಅವಳನ್ನು ಸುಡುತ್ತಿರುವುದು ಅವಳಿಗೇ ಗೊತ್ತು, ಅವನಿಗದು ಬೇಕಿಲ್ಲ!
ನಿನ್ನೆ – ನಾಳೆ ಮತ್ತು ಶೋಭೆ – ಕ್ಷೋಭೆ, ಎದೆಯ ನೋವು ಮನಸ್ಸಿಗೂ; ಬದುಕಿಗೂ.
ಗಂಗೆಯಲ್ಲಿ ಮಿಂದರೂ ಇಂಗಲಿಲ್ಲ ಕಂಬನಿ. ಅಯ್ಯೋ, ಎಷ್ಟೊಂದು ನೋವುಗಳ ಹೊತ್ತಿದೆ ಈ ಬದುಕು?
ರತಿಯ ದುಃಖ ಒಮ್ಮೆ ನನ್ನನ್ನು ಮೌನವಾಗಿಸಿತು. ಶಿವ ಮನ್ಮಥನನ್ನು ಅನಂಗ ಮಾಡಿಬಿಟ್ಟ. ಆದರೆ ರತಿಯ ಪಾಡೇನು? ಅವಳನ್ನು ಸಂತೈಸಲಾಗದ ಪಾಪ ಶಿವನನ್ನೂ ಶಿವೆಯನ್ನೂ ತಟ್ಟದೇ? ರತಿಗೆ ಎಲ್ಲಿದೆ ಬದುಕು? ಅವಳು ಅನಂಗ ಜೊತೆಗಿದ್ದೂ ಅನಾಥೆ.
ಹೂವುಗಳು ಹೇಳುತ್ತಿವೆ “ನಾವು ಅವಳ ಅಂಗಳದಲಿ ಅರಳುತ್ತವೆ” ವಿಪರ್ಯಾಸವೆಂದರೆ ಅವಳಿಗೆ ಅವಳದ್ದೇ ಆದ ಅಂಗಳವೇ ಇಲ್ಲ!
ನಾನು ಎಂಬುದನ್ನು ರತಿ ಪ್ರಪಂಚದ ಪ್ರೇಮ, ಸೃಷ್ಟಿ, ಬಂಧನದಲ್ಲಿ ಕಾಣುತ್ತಾಳೆ. ಈ ಹುಟ್ಟನ್ನು ಕವಿ *ರತಿಯ ಕಂಬನಿಗೆ ಹುಟ್ಟಿದವಳು ನಾನು* ಎನ್ನುತ್ತಾರೆ. ಇದರಂತೆ ಪ್ರತಿಜೀವಿಯೂ ರತಿಯ ಕಂಬನಿಯ ಸೃಷ್ಟಿಯೇ ಇರಬೇಕು.
“ಗರ್ಭಗುಡಿಯೇ ಅನ್ಯಾಯದ ತವರು” ಈ ಮಾತು ಹೆಣ್ಣಿನ ತವಕ, ತಲ್ಲಣ, ಬಯಕೆ, ಹೂವು, ಅಂಗಳ, ಆಲಯ ಎಲ್ಲವನ್ನೂ ಕೊಂದ ಪ್ರತಿಬಿಂಬದಂತೆ ಕಂಡಿತು ನನಗೆ.
ಹೊಳೆವ ಚುಕ್ಕಿಯ ಒಡಲಲ್ಲಿ ರವರವದ ಕುದಿಯಿದೆ ಎಂದು ಕೊನೆಗೊಳ್ಳುತ್ತದೆ ಕವಿತೆ.
ಆದರೆ ಮತ್ತೆಮತ್ತೆ ಕಾಡುವುದು ರತಿಯ ಕಂಬನಿ. ಕೇವಲ ಹೊಳೆವ ನಕ್ಷತ್ರ ಮತ್ತು ಸುಂದರ ಮುಂಜಾನೆ ಮಾತ್ರ ನಮಗೆ ಕಾಣುತ್ತವೆ. ಕತ್ತಲಿನ ನೆತ್ತರಾಗಲಿ, ಚುಕ್ಕಿಯ ಒಡಲ ಕುದಿಯಾಗಲಿ ಪ್ರಪಂಚವನ್ನು ಇನ್ನಾದರೂ ತಟ್ಟಬಾರದೇ? ಎಂದುಕೊಳ್ಳುತ್ತೇನೆ.
ಇಲ್ಲಿ ನನಗೆ ಇಡಿಯಾಗಿ ಕಂಡದ್ದು ಹೆಣ್ಣು ಹುದುಗಿಟ್ಟುಕೊಳ್ಳುವ ದುಃಖ, ಬಯಕೆ, ಶಕ್ತಿ , ಕಾಪಾಡಿಕೊಂಡ ಮಾತು ಮತ್ತು ಮೌನ.
ಕವನಗಳನ್ನು ಓದಿ ಅರಗಿಸಿ ಕೊಳ್ಳುವಲ್ಲಿ ನಾನು ಅಸಫಲ ಓದುಗ. ಅಲ್ಲೊಂದು ಭಾವ ನನ್ನ ಕಟ್ಟಿಹಾಕಿ ಬಿಡುತ್ತದೆ. ನನ್ನೊಳಗಿನ ಸಂವೇದನೆಯ ಪರಿಧಿಯಲ್ಲಿ ಕವನ ನನ್ನದಾಗುತ್ತದೆ. ಕಣ್ಣೀರು ಹಣತೆಯನ್ನು ಆರಿಸಬಹುದು; ಉರಿವ ದಾವಾಗ್ನಿಯನ್ನಲ್ಲ!
–
ವಿಷ್ಣು ಭಟ್ ಹೊಸ್ಮನೆ
ಧನ್ಯವಾದ: ಅವಧಿ ಮತ್ತು Nandini Vishwanath