ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…

ರಘುನಾಥ್ ಕೃಷ್ಣಮಾಚಾರ್

ಪ್ರವೇಶ: ಕನ್ನಡದಲ್ಲಿ ಇಂಗ್ಲೀಷ್ ಭಾಷೆಯ ಕುರಿತು ಎರಡು ರೂಪಕಗಳು ಇವೆ. ೧. ಕುವೆಂಪು ಅವರ ‘ ನಮಗೆ ಬೇಕಾದ ಇಂಗ್ಲಿಷ್’ ಲೇಖನ ದಲ್ಲಿ ಇಂಗ್ಲೀಷ್ ನ್ನು ಅವರು ಪೂತಿನಿ, ಮೋಹಿನಿ ಎಂದು ಕರೆದಿದ್ದಾರೆ.
೨: ಡಿ.ಆರ್. ಎನ್ ಅವರು ಇಂಗ್ಲೀಷ್ ಭಾಷೆಯ ಮೋಹಕ್ಕೆ ಸಿಕ್ಕ ಕನ್ನಡಿಗರನ್ನು ‘ಮೆಕಾಲೆಯ ಮಕ್ಕಳು’ ಎಂದು ಕರೆದಿದ್ದಾರೆ. ಕೆ.ಸತ್ಯನಾರಾಯಣ ಅವರ ಕೃತಿಯಲ್ಲಿ ಈ ಎರಡೂ ರೂಪಕಗಳು ಮೈಪಡೆದಿವೆ. ಅವರ ಬಾಲ್ಯದ ಶಿಕ್ಷಣ ದಲ್ಲಿ ಇಂಗ್ಲಿಷ್ ಪಾತ್ರವನ್ನು ಕುರಿತ ಅನುಭವ ಜನ್ಯಬರಹಗಳು ಕುವೆಂಪು ಅವರ ರೂಪಕಗಳಿಗೆ ಕನ್ನಡಿ ಹಿಡಿದರೆ, ಅವರ ಉಳಿದ ಬರಹಗಳು ಡಿ,ಆರ್.ಎನ್ ರೂಪಕಕ್ಕೆ ಕನ್ನಡಿ ಹಿಡಿಯುತ್ತವೆ.

ಭಾಗ-೧
ಭಾಷೆ ಎಂದರೆ ಸಾಮಾನ್ಯವಾಗಿ ಮೂರು ಅರ್ಥಗಳು ಇವೆ. ಅವು ಅದರ ಶಾಬ್ದಿಕ ರೂಪ, ಅದನ್ನು ಮಾತನಾಡುವ ಜನ ಮತ್ತು ಅವರು ವಾಸಿಸುವ ಪ್ರದೇಶ. ಈ ಹೊತ್ತಿಗೆಯಲ್ಲಿ ಅದರ ಜತೆಗೆ ಸಹಭಾಷೆಗಳ ಜತೆಗೆ ಅದರ ಒಡನಾಟ, ಭಾರತದ ಭಾಷಾ ನೀತಿ, ರಾಜ್ಯದ ನೀತಿ, ಅದರಿಂದ ಎದುರಿಸಬೇಕಾಗಿ ಬಂದ ಸವಾಲುಗಳನ್ನು ವಿವಿಧ ವರ್ಗದ ಜನರ ಮೇಲೆ ಅದು ಬೀರುವ ಪರಿಣಾಮವನ್ನು ವಿವಿಧ ಸಂದರ್ಭಗಳಲ್ಲಿ ಇಟ್ಟು ಪರಿಶೀಲನೆ ನಡೆಸಿದ್ದಾರೆ.

ಲೇಖಕರು ತಮ್ಮ ವೈಯಕ್ತಿಕ ಅನುಭವಗಳನ್ನು ದಾಖಲಿಸಿದ್ದಾರೆ. ಇದರಿಂದಾಗಿ ಇದಕ್ಕೆ ಒಂದು ಅಧಿಕೃತತೆ ತಾನಾಗಿಯೇ ಪ್ರಾಪ್ತವಾಗಿದೆ. ಇಂಗ್ಲಿಷ್ ಭಾಷೆ ಅವರ ಬಾಲ್ಯದ ದಿನಗಳಲ್ಲಿ ಅವರನ್ನು, ಓರಗೆಯವರನ್ನು ಕಾಡಿದ ಬಗೆಯನ್ನು ಸ್ವಾರಸ್ಯಕರವಾಗಿ ಚಿತ್ರಿಸಲಾಗಿದೆ. ಅದನ್ನು ಕಲಿಸುತ್ತಿದ್ದ ಮೇಷ್ಟ್ರುಗಳು ಇವರ ಮೇಲೆ ಬೀರಿದ ಪ್ರಭಾವದ ಸ್ವರೂಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಅದು ಅವರಿಂದಾಗಿ ಕೆಲವು ವೇಳೆ ಪೆಡಂಭೂತವಾಗಿ ಕಾಡಿದರೆ, ಮತ್ತೆ ಕೆಲವು ವೇಳೆ ಮೋಹಿನಿಯಾಗಿ ಮರುಳುಮಾಡುತ್ತದೆ. ಇದು ಆ ಕಾಲದ ಶಿಕ್ಷಣ ಪದ್ದತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಇಂಗ್ಲಿಷ್ ನ್ನು ಕನ್ನಡದ ಜತೆಗೆ ಕಲಿಯುವುದು ಸರಿಯಾದ ಮಾರ್ಗ ಎಂದು ಅವರ ನಿರ್ಣಯ. ಮುಂದೆ ವೃತ್ತಿ ಜೀವನದಲ್ಲಿ ಅವಶ್ಯವಾದ ಇಂಗ್ಲಿಷ್ ನ್ನು ತಾನಾಗಿಯೇ ಒಂದೆರಡು ವರ್ಷಗಳಲ್ಲಿ ಕಲಿಯಬಹುದು ಎಂದು ಅವರ ಅನುಭವವನ್ನು ದಾಖಲಿಸಿದ್ದಾರೆ. ಆದ್ದರಿಂದ ಇಂಗ್ಲಿಷ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾದ ಆವಶ್ಯಕತೆ ಇಲ್ಲ. ಆದರೂ ಇಂಗ್ಲಿಷ್ ಕುರಿತು ಸಾಮಾನ್ಯವಾಗಿ ಜನರಲ್ಲಿ ಇರುವ ಆಕರ್ಷಣೆಯ ಮುಖ್ಯ ಕಾರಣವೆಂದರೆ ಸರೀಕರ ಜತೆಗೆ ತಮ್ಮ ಅಸ್ಮಿತೆಯನ್ನು ಸ್ಥಾಪಿಸುವ ಹುನ್ನಾರವಷ್ಟೆ. ಅಲ್ಲದೆ ಸರಿಯಾದ ಕನ್ನಡ ಶಾಲೆಗಳು ಇರದಿರುವುದು ಇನ್ನೊಂದು ಮುಖ್ಯ ಕಾರಣವಾಗಿದೆ. ಇದನ್ನು ಅವರು ವಿವಿಧ ಮಾತೃಭಾಷೆಯ, ವಿವಿಧ ವರ್ಗಗಳ ಜನರ ಸಂದರ್ಶನದಲ್ಲಿ ಕಂಡುಕೊಳ್ಳುತ್ತಾರೆ.

ಬಾಲ್ಯದ ಮೂರು ವರ್ಷಗಳಿಂದ ಆರು ವರ್ಷಗಳ ಕಾಲ ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವೆಂದು ಆದರೆ ಅದರ ಕಡೆಗೆ ಸರಿಯಾದ ಗಮನವನ್ನು ಯಾರೂ ಹರಿಸಿಲ್ಲವೆಂದು, ಆ ಸಂದರ್ಭದಲ್ಲಿ ಮಕ್ಕಳಿಗೆ ಕಲಿಸುವ ಅಂಗನವಾಡಿಯ ಶಿಕ್ಷಕರಿಗೆ ಯಾವುದೇ ತರಬೇತಿ ಇರುವುದಿಲ್ಲ ಮತ್ತು ಅವರಿಗೆ ಸರಿಯಾದ ಸಂಬಳ, ಸೌಕರ್ಯಗಳನ್ನು ಒದಗಿಸುವ ಕಡೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕುರಿತು ವಿಷಾದದಿಂದ ದಾಖಲಿಸಿದ್ದಾರೆ. ಇದರ ಪರಿಣಾಮವು ಕಲಿಯುವ ಮಕ್ಕಳ ಮೇಲೆ ಖಂಡಿತವಾಗಿ ಆಗುತ್ತದೆ ಎಂದು ಗಮನಸೆಳೆಯುವರು.

ಜನರ ಭಾಷಾ ಬಳಕೆ:

೧: ಲೇಖಕರು ಓದುಗರು: ಅನೇಕ ವೇಳೆ ಸರಳವಾಗಿ ಹೇಳಬಹುದಾದುದನ್ನು ಬೇಕೆಂದೇ ಸಂಕೀರ್ಣವಾದ ವಾಕ್ಯರಚನೆಗಳ ಮೂಲಕ ಸಂವಹನ ಶೀಲತೆಗೆ ಧಕ್ಕೆ ತರುವುದನ್ನು ಸಾಧಾರವಾಗಿ ಹಲವು ಉದಾಹರಣೆಗಳ ಮೂಲಕ ತೋರಿಸಿದ್ದಾರೆ. ಇದು ಅವರ ಆಡಂಬರದ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಸರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ.
೨: ದಾಂಪತ್ಯದಲ್ಲಿ ಭಾಷೆಯ ಬಳಕೆ ಗಂಡ ಹೆಂಡತಿಯರ ನಡುವೆ ಇರುವ ಅಂತರವನ್ನು, ಗಂಡನ ಭಾಷೆ ಲೋಕ ಕೇಂದ್ರಿತ ಆದರೆ, ಹೆಂಡತಿಯ ಭಾಷೆ ದೈನಿಕದ ಕುರಿತು ಆಗಿರುವುದು ಅವರಿಬ್ಬರ ನಡುವಿನ ವ್ಯತ್ಯಾಸವನ್ನು ದಾಖಲಿಸುತ್ತದೆ.
೩: ಪ್ರಮಾಣ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ಕುರಿತು ಇರುವ ಗೊಂದಲವನ್ನು ಕೂಡ ನಮೂದಿಸಿದ್ದಾರೆ.
೪. ಇಂಗ್ಲಿಷ್ ಭಾಷೆಗೂ ಮತ್ತು ಅಭಿವೃದ್ಧಿಗೂ ಇರುವ ನಂಟಿನ ಭ್ರಮೆಯನ್ನು ಅದನ್ನು ಬಳಸದೆಯೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಚೀನಾ, ಜಪಾನ್, ಕೊರಿಯಾ, ನೆದರ್ಲ್ಯಾಂಡ್ಸ್ ದೇಶಗಳಲ್ಲಿ ಆಯಾ ಮಾತೃಭಾಷೆಗಳಿಗೆ ಇರುವ ಪ್ರಾಧಾನ್ಯತೆಯ ಮೂಲಕ ಕಳಚಿದ್ದಾರೆ.

ಭಾಗ ೨:
ಕನ್ನಡದ ಲ್ಲಿ ಮೊದಲ ಬಾರಿಗೆ ಭಾಷೆಯನ್ನು ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಂದರ್ಭಗಳಲ್ಲಿ ಇಟ್ಟು ಅದು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಇದರಿಂದಾಗಿ ಸಮಾಜದ ವಿವಿಧ ಸ್ತರಗಳ ಪ್ರತಿಕ್ರಿಯೆಗಳನ್ನು ದಾಖಲಿಸಲು ಇಲ್ಲಿ ಸಾಧ್ಯವಾಗಿದೆ.

ಸ್ವಾನುಭವದೊಂದಿಗೆ, ತಜ್ಞರ ಅಭಿಪ್ರಾಯಗಳನ್ನು ಒಳಗೊಂಡಿದೆ. ಅಲ್ಲದೆ ದೇಶೀ (ಕೇರಳ) ಮತ್ತು ವಿದೇಶೀ ವಲಸಿಗರ (ಅಮೆರಿಕದ ಕನ್ನಡಿಗರು), ತಲ್ಲಣಗಳನ್ನು, ಅವರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ ವನ್ನು ಇವರ ಅಧ್ಯಯನ ವ್ಯಾಪಿಸಿದೆ. ಇದರಿಂದಾಗಿ ಇವರ ಈ ಕೃತಿಗೆ ಇಲ್ಲಿಯವರೆಗೆ ಈ ವಿಷಯದ ಕುರಿತು ಬಂದ ಪುಸ್ತಕ ಗಳಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದೆ.

ಭಾಗ ೩:
ಕೆ.ವಿ.ನಾರಾಯಣ ಅವರ ಕನ್ನಡ ಭಾಷೆಯ ಕುರಿತ ಪುಸ್ತಕ ಸಮೀಕ್ಷೆ ಮಾಡುತ್ತಾ ಅದರ ವೈಶಿಷ್ಟ್ಯಗಳನ್ನು ಹೀಗೆ ಗುರುತಿಸಿದ್ದಾರೆ:
೧.ಜನಪ್ರಿಯ ಅಭಿಪ್ರಾಯ, ಧೋರಣೆ ಗಳಿಗಿಂತ ಭಿನ್ನವಾದ ನಿಲುವನ್ನು ತಳೆದಿರುವುದು.
೨: ಅನಂತಮೂರ್ತಿಯವರ ಇಂಗ್ಲೀಷ್ ಬ್ರಾಹ್ಮಣ ಮತ್ತು ಕನ್ನಡ ಶೂದ್ರ ಎನ್ನುವ ಪರಿಕಲ್ಪನೆಯನ್ನು ಪ್ರಶ್ನಿಸಿರುವುದು.
೩. ಚಲನಶೀಲ ಬದುಕಿನ ಬದುಕಿನ ಜತೆಗೆ ಚಲನಶೀಲ ಭಾಷೆಯ ಸಂಬಂಧವನ್ನು ಗುರುತಿಸಿರುವುದು.
೪.ಅನ್ಯಭಾಷಿಕರಿಗೆ ಕನ್ನಡ ಕಲಿಸುವಾಗ ಆಯಾ ಭಾಷೆಗಳ ವೈದೃಶ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ಆವಶ್ಯಕತೆಯನ್ನು ಪ್ರತಿಪಾದಿಸಿರುವುದು. ೫. ಕೊಂಕಣಿ , ಕೊಡವ ಇತ್ಯಾದಿ ಕನ್ನಡ ಲಿಪಿಯನ್ನು ಬಳಸುವ ಭಾಷೆಗಳ ಜತೆಗೆ ಸಹಬಾಳ್ವೆಯನ್ನು ಎತ್ತಿ ಹಿಡಿಯುವುದು.
೬.ದ್ವಿಭಾಷಾ ಪರಿಸರ ನಿರ್ಮಾಣ ಆಗಿರುವುದರಿಂದ ಅದರ ಜತೆಗೂಡಿ ನಡೆಯುವ ಆವಶ್ಯಕತೆಯನ್ನು ಗುರುತಿಸಿರುವುದು. ಬರಗೂರು ರಾಮಚಂದ್ರಪ್ಪನವರ ಭಾಷೆಯನ್ನು ಪ್ರತ್ಯೇಕವಾಗಿ ಪರಿಶೀಲಿಸದೆ ಅದನ್ನು ಅಭಿವೃದ್ಧಿ ಮತ್ತು ಜೀವನ ಶೈಲಿಗಳ ಜತೆಗೆ ಇಟ್ಟು ಪರಿಶೀಲಿಸಬೇಕು ಎಂಬುದನ್ನು ಸಮರ್ಥಿಸಿರುವುದು.

‍ಲೇಖಕರು Admin

February 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: