ಒಂದು ಕವಿತೆಯ ಆದಿ
ಪಿ.ಮಂಜುನಾಥ, ಬೆಳಗಾವಿ
ಚಿಂತೆಯಿಲ್ಲದೆ ಬಿದ್ದುಕೊಂಡ ನೀಲಿಯಾಗಸ
ಮೋಡಗಳಿಲ್ಲ….ಏನೂ ಇಲ್ಲ ನಿರಮ್ಮಳತೆಯ ತಿಳಿ ಹರವು
ಒಂದು ತುಂಡು ಕಾಗದ
ಅಕ್ಷರಗಳಿರದ ಬಿಳಿ ಕಾಗದ
ರಂಗೋಲಿಯಿಡಲು ಹಸನುಗೊಳಿಸಿದ ನೆಲದಂತೆ;
ಮದುವೆಗೆ ಸಿಂಗರಿಸಿಕೊಳ್ಳಲಿರುವ ಹೆಣ್ಣಿನಂತೆ!

ಮನಸ್ಸು ಮಾತ್ರ ನಿರಮ್ಮಳವಲ್ಲ
ಗಲಿಬಿಲಿ;
ಗೂಡು ಸೇರುವ ಹಕ್ಕಿಗಳು ಉಲಿವ
ಚಿಲಿಪಿಲಿ….
ಪದಗಳ, ಪದಗುಚ್ಚಗಳ, ರೂಪಕಗಳ
ಭರಾಟೆ;
ಅದು ಇರಲಿ,ಇದು ಇರಲಿ
ಮೇಲೇ ಕೆಳಗೆ,ಹಾಗೆ ಹೀಗೆ ಜಾತ್ರೆಯಲ್ಲಿನ
ರಾಟೆ!
ಶಬ್ದಗಳಿಗೆ ಸಿಕ್ಕಿದ ಅನುಭವವೊ
ಅನುಭವಕ್ಕೆ ದಕ್ಕುವ ಶಬ್ದಗಳೊ
ಶಬ್ದಗಳು ಹೇಳಬೇಕಾದ ನಿಶ್ಯಬ್ದತೆಯೊ
ನಿಶ್ಯಬ್ದತೆಯಲ್ಲೆ ಸಿಗುವ ಶಬ್ದಗಳೊ…
ಎಂದಿನಿಂದಲೋ ರಂಗಕ್ಕಿಳಿಯಲು ಸಜ್ಜು
ಅಖೈರಾಗಿ ಅನುಭವವೊ…ಕಲ್ಪನೆಯೊ…
ಸಾಲು ಸಾಲುಗೊಂಡು ಹಾಳೆಗೆ ದಾಳಿ
ಬೆರಳ ಸಂದಿಯ ಪೆನ್ನಿನ ತುದಿ ಕುಣಿದ ತಾಳಕೆ
ಕಾಗದದ ತುದಿಗೆ ಶೀರ್ಷಿಕೆ
ತಳದಲ್ಲಿ ಕವಿತೆ ಬಳ್ಳಿಯಾಗಿ ಹರಡಿಕೊಳ್ಳುತ್ತದೆ
ಹೀಗೆ-
’ನೀಲಿಯಾಗಸದಂಚಿಗೆ ಕಾಮನಬಿಲ್ಲು….!






kathegaaranuu intha padhya bareyaballane..!
kaavya manjuge olidanthe..go ahead dosth..cngrts..
uttama kavite..
thank you vijaykanth sir..