ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧದ ಮೇಲೊಂದು ಮಹಾಕಾವ್ಯ…

ಶ್ರೀವಿಭಾವನ

1

ಯುದ್ಧದ ಮೇಲೊಂದು ಮಹಾಕಾವ್ಯ ಬರೆಯಬೇಕಿತ್ತು
ಯುದ್ದೋತ್ಸಾಹ ಹರಡುತ್ತಿದ್ದ ನಾಯಕ,
ಊರ ತುಂಬೆಲ್ಲ ಯುದ್ಧದ ಬಳಿಕದ ಲಾಭಗಳ
ಲೆಕ್ಕಾಚಾರ ಹಾಕುತ್ತಿದ್ದ ಜನ,
ಯುದ್ಧದ ಭೀಕರತೆಗೆ ರೋಚಕತೆಯ ಬಣ್ಣ ಬಳಿಯುತ್ತಿದ್ದ
ಗುಂಪುಗಳ ನಡುವೆ…
ಶಬ್ದಾಲಂಕಾರಗಳನ್ನು ಜೋಡಿಸಿದರೆ ಸಾಕಿತ್ತು.

2
ಎಲ್ಲೆಡೆ  ನಾಯಕನ ಭಾಷಣದ್ದೆ ಮಾತು
ಕೊಂದ ಜೀವಗಳು ಹೆಚ್ಚಿದಷ್ಟೂ
ಮುಗಿಲು ಮುಟ್ಟುವ  ಆತನ ಅಬ್ಬರ
ಊರ ತುಂಬೆಲ್ಲ ಬರಿ ಗೌಜಿ -ಗದ್ದಲ
ಬೆಂಕಿ- ಗುಂಡು- ಸಾವಿನ ಸುದ್ದಿಗಳಿಗೆ
ರಾಜಯೋಗದ ಸಮಯ  

3

ಊರಿನ ಸ್ಮಶಾನಕ್ಕೂ ಅದೇನೋ  ಸಿಂಗಾರ
ನೋವಿನಲ್ಲಿ ನರಳುತ್ತಿದ್ದ ಆ ಮಗುವಿನ ಅಳುವಿಗೂ
ಪ್ರತೀಕಾರದ ಮಾತುಗಳ ಭಾರ
ಹುತಾತ್ಮರ ಮನೆಯ ಬೀದಿಗಳನ್ನು ಹೊದ್ದುಕೊಂಡಿರುವ
ಮೌನವನ್ನು ಅಣಕಿಸುವ ವಿಜಯಘೋಷಗಳು
ಸೂತಕದಲ್ಲೂ ಹೊರಹೊಮ್ಮುವ  ಶಬ್ದಗಳಿಗೆ ಬಹುಪರಾಕ್


ನೋವು-ಹಸಿವು- ಊರ ತುಂಬೆಲ್ಲ ಹರಡಿದ
ಸುಟ್ಟ ಹೆಣದ ವಾಸನೆಗಳನ್ನು
ಮೀರಿದ ದ್ವೇಷ…
ಸುಡುಗಾಡಲ್ಲೂ  ಹೊರತು ನಿಂತಿವೆ ನೂರಾರು ಮೆರವಣಿಗಳು
ಪ್ರತಿ ಸಾವಿಗೂ ಇಲ್ಲೊಂದು ಸಮರ್ಥನೆ.
ಪುಟಗಳ ಮಿತಿಗೆ ಸಿಲುಕದ ನೋವಿನ ಕತೆಗಳು

5ಸಾವಿನ ದಲ್ಲಾಳಿಗಳು, ವ್ಯಾಪಾರಿಗಳ ಮಳಿಗೆಗಳಲ್ಲಿ
ಆಯುಷ್ಯದ ಡಿಸ್ಕೌಂಟ್ ಸೇಲ್.
ಬಣ್ಣ ಬಣ್ಣದ ಘೋಷಣೆಗಳು,
ಮಹಾಕಾವ್ಯಕ್ಕೆ ಜೀವ ನೀಡುವ
ನೂರಾರು ಜೀವ ಇಲ್ಲದ ದೇಹಗಳು,
ನೆತ್ತರಲ್ಲಿ ಉರುಳಾಡುತ್ತಿರುವ ಜೀವಗಳು

6
ಯುದ್ಧದ  ಮಹಾಕಾವ್ಯಕ್ಕೆ ಬಹಳ ಓದುಗರು
ರಕ್ತ ಚರಿತ್ರೆಯ ನೋವಿಗೆ  ಒಂದು  ಶೌರ್ಯದ ಚೌಕಟ್ಟು 

‍ಲೇಖಕರು Admin

17 March, 2022

1 Comment

  1. T S SHRAVANA KUMARI

    ವಿಷಾದ ತುಂಬಿದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading