ಮಾಲಾ ಮ ಅಕ್ಕಿಶೆಟ್ಟಿ
**
ಇಂಥದ್ದೇ ಏಪ್ರಿಲ್ ಮೇ ಬೇಸಿಗೆ
ಪರೀಕ್ಷೆ ತಯಾರಿ ಹಗಲು
ರಾತ್ರಿ ಓದು ವ್ಯಸ್ತತೆ,
ಮನೆ ಎದುರು 80-85 ವರ್ಷದ ನಾನಿ
ಕೋಲು ಹಿಡಿದು ಹಾಗೆ
ಹೆಜ್ಜೆ ಇಡುವಾಗೊಮ್ಮೆಮ್ಮೆ
‘ಎಷ್ಟು ಸುಂದರ ಜೀವನ ಈ ನಾನಿಯದು
ಓದುವ, ಬರೆಯುವ, ಪರೀಕ್ಷೆಯ ಭೀತಿ ಇಲ್ಲ
ಉಣ್ಣುವುದು, ಮಲಗುವುದು, ತಿರುಗಾಡುವುದು
ಮನ ಬಂದಾಗ ಮಾತ್ರ ನಾವೆಂದು
ಅನುಭವಿಸೆವೋ. ಓದು ಮುಗಿದು
ನೌಕರಿ ಹಣ ಗಳಿಸುವಾಗ ನೆಮ್ಮದಿ
ಎಂದು ಸಿಗುವುದೋ..’ ಎನ್ನುತ್ತಾ ನಾನು ಅಕ್ಕ
ಅಂದುಕೊಂಡಂಥೆ ಓದು, ನೌಕರಿ, ಹಣ
ನೆಮ್ಮದಿ ‘ಕಾಣೆಯಾಗಿದ್ದಾರೆ’ ಪೇಪರ್ ಕಾಲಂ
ಈ ವಯಸ್ಸಿನಲ್ಲಿ ಇಲ್ಲ, ಮುಂದೆ
ಯಾವುದೋ ವಯಸ್ಸಿನಲ್ಲಿ ಅಂದರೆ
ಶುದ್ಧ ಭ್ರಮೆ
ಯಾವ ವಯಸ್ಸಿಗೂ
ಇಲ್ಲ ಪರಮ ನೆಮ್ಮದಿ
ಆಯಾ ವಯಸ್ಸಿಗನುಗುಣವಾಗಿ
ತೊಡಕುಗಳು ಪರಿಹಾರದ ಹೋರಾಟ
ನಾನಿ ಕೂದಲು ಬಿಳಿ
ಕರಿಯಲ್ಲ ಯೌವನ ಬಿಂಬಿಸಲು
ಕರಿ ಬಿಳಿಯಾದದ್ದು
ಪವಾಡವಲ್ಲ, ವರ್ಷಗಳ ಅನುಭವ
ಇದ್ದ ಸಮಸ್ಯೆಗಳು
ಗೊತ್ತು ನಾನಿಗೆ
ದೂರದ ಗುಡ್ಡ ನುಣ್ಣಗೆ
ನೆಮ್ಮದಿ ಇದೆ
ಇಲ್ಲ ಎನ್ನೆ ಇಲ್ಲ
ನಾವೇ ಹುಡುಕಿಕೊಳ್ಳುವ
ಬೇಸಿಗೆ ದಾರಿ
ತಂಪಾದ ನೆರಳು ಸಿಕ್ಕರೆ ಸೌಭಾಗ್ಯ






0 Comments