ಕಣ್ಣ ಹನಿ

ಸರೋಜಿನಿ ಪಡಸಲಗಿ
ಹರಿವ ನೀರ ಅಲೆಯಲಿ
ಕುಣಿ ಕುಣಿವ ಗಾಳಿ ಗಂಧದಲಿ
ಭೃಂಗದ ಗುಂಜಾರಿನೊಲು
ನೆನಪೊಂದು ಗುನುಗುತಿಹುದು
ತೇಲಿ ತೇಲಿ ಸುಳಿವ ಆ ಛಾಯೆಗೆ
ಕಣ್ಣ ಹನಿಗಳ ಕಾಣಿಕೆ
ಅರಿಯಲಾರದೊಂದು ಯಾತನೆ
ಅಂತರಾಳದಾಳಕೆ
ಎಲ್ಲೆಮೀರಿ ಉಬ್ಬರಿಸಿ ಉಕ್ಕುತಿಹ
ಭಾವದಬ್ಬರಕೆ
ಏನು ಹೆಸರಿಸಲಿ ಹುಡುಕ್ಹುಡುಕಿ
ಮಿಡುಕಿಹಳಾಕೆ
ಯಾವ ನೆನಪಿನ ಸೋನೆಯೋ ಅದು
ಇಣುಕುತಿಹುದು ಕಾಣೆ
ಕಾಡಿಗೆ ಕಣ್ಣ ಕಟ್ಟೆಯಲಿ ಕನಸುಗಳ
ಹಾಸುತಲಿ
ಬಿಡಲಾರಳವಳು ಆ ಹನಿಯಾ
ಕೆಳಗಿಳಿಯಗೊಡಳು ಅವಳು
ಅಲ್ಲುಂಟು ನೂರು ನೆನಪುಗಳ
ಬರೆಯಲಾಗದ ಕವನ
ಕೇಳಲುಂಟೆ ಆ ಕಣ್ಣಹನಿ ಅವಳ
ಮನದ ಮಾತನು
ಜಾರಿ ಕೆಳಗಿಳಿಯಲು ಆ ಹನಿಗೆ
ತವಕ ಅದೇನು
ಹಂಬಲಿಸಿ ಹೊರಳಿ ನರಳಿ
ಕೇಳುತಿರುವಳವಳೇನು
ಬಂದೊಮ್ಮೆ ಇತ್ತ ನೀ ತಡೆಯಲಾರೆಯಾ
ಈ ಕಣ್ಣಹನಿಯಾ





ಅಲ್ಲುಂಟು ನೂರು ನೆನಪುಗಳ ಬರೆಯಲಾರದ ಕವನ, ಕವನ ಇಷ್ಟವಾಯಿತು.
ಸುಂದರವಾದ ಕಲ್ಪನೆಗಳು, ಚಂದನ್ನ ಕವನ. ಸುನ್ದರ ಸಾಲುಗಳಿವು:
ಕಾಡಿಗೆ ಕಣ್ಣ ಕಟ್ಟೆಯಲಿ ಕನಸುಗಳ
ಹಾಸುತಲಿ
ಬಿಡಲಾರಳವಳು ಆ ಹನಿಯಾ
ಕೆಳಗಿಳಿಯಗೊಡಳು ಅವಳು
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಕುಸುಮಾ ಪಟೇಲ್ ಅವರೇ,. ವಂದನೆಗಳು ಶ್ರೀವತ್ಸ ದೇಸಾಯಿಯವರೇ.