ಯೆವ್ತುಷೆಂಕೊ…ಪ್ರೀತಿಪೂರ್ವಕ
ಕನ್ನಡಕ್ಕೆ : ನಾ.ದಾ ಶೆಟ್ಟಿ
ಮೂಲ: ಒ.ಎನ್.ವಿ. ಕುರುಪ್
ಹೇಳು ಯೆವ್ತುಷೆಂಕೊ, ನೀನು ರಷ್ಯಾದ
ಎದೆಬಡಿತವನರಿತವನಲ್ಲವೆ?
ಗತವೈಭವವ ರಷ್ಯ ಮರಳಿ ಪಡೆಯಲೆಂದಲ್ಲವೆ
ನೀನು ನೊಂದು ಹಾಡುವುದು?
ನಷ್ಟವಾದ ಕೈಬೆರಳ ಮರಳಿ ಪಡೆಯಲಿಕೆಂದಲ್ಲವೆ
ಪಾಪ ಮುದುಕಿ, ಇಂದೂ ಅರಸುತ್ತಿರುವುದು?
ಮಣ್ಣ ಇಳಿಜಾರಿನಲಿ ಬಿದ್ದ ಶಿಶಿರದ ಮಂಜುಗಡ್ಡೆ-
ಯ ಹೊದಿಕೆಯಲ್ಲದು ಮಾಯವಾಯಿತೆ ಕರಗಿ?
ಮುಂದಿರುವ ಹುಲ್ಲುಮೆದೆಯಲಿ ತನ್ನ
ಕಳೆದ ಸೂಜಿಯನು ಹುಡುಕುವಾ ಬದುಕು.
ತನ್ನ ಪ್ರೀತಿಯ ಹಸು ಎತ್ತ ಹೋಯಿತ್ತೆಂದು
ಅಂಧ ಮುದುಕಿಯು ತಪ್ಪಿತಡವುತ್ತಿಹಳು.
ಕಣ್ಣೆ ಕಾಣದವರೇನನ್ನು ಹುಡುಕುವರು?
ಯೆವ್ತುಷೆಂಕೊ! ಹೇಳು, ನೀನು ರಷ್ಯಾದ
ಎದೆಬಡಿತವನರಿತವನಲ್ಲವೆ?
ಗತವೈಭವವನ್ನು ಮರಳಿಪಡೆಯುವ ಮೊದಲು
ಅದ ನಷ್ಟ ಮಾಡಿದವರಾರೆಂದು ಬಲ್ಲೆಯಾ?
ಹೇಗೆ ನಷ್ಟವಾಯಿತಾ ಕೈಬೆರಳು?
ಹೇಗದು ಈ ಮಂಜಿನಲಿ ಮುಚ್ಚಿಹೋಯಿತು?
ಯಾವ ಕೈಯಾವ ಕತ್ತಿ ತುಂಡರಿಸಿತದನು?
ಆ ನಾಡಿನಲಿ ಏಕಲವ್ಯರಿಲ್ಲವಲ್ಲಾ!
ವೃದ್ಧ ಮುದುಕಿಯ ಪ್ರಾಣದಂಥಾ ಹಸುವ
ಕದ್ದು ಕೊಂಡೊಯ್ದವರ್ಯಾರು?
ಹಸುವಿನಾಹಾರವಾದಾ ಹುಲ್ಲಮೆದೆಯಲ್ಲಿ
ಸೂಜಿ ಬಿದ್ದಿರುವುದೂ ಆಪತ್ಕರ!
ಸ್ಮಾರಕ ಶಿಲೆಗಳೇ ಇಲ್ಲದಿಹ ‘ಬಾಬಿಯಾರಿ’ನಾ
ಗುಡ್ಡದಿಳಿಜಾರಿನಲ್ಲೇನೊ ಕ್ರೂರವಾದುದ
ಕೊರೆಯುವಂತಾಯಿತೆ?
ನಿನ್ನ ಪ್ರಿಯ ರಷ್ಯ ಬದಲಾಯಿತೆ?
ಬದಲಾಗದೆಂದು ನಿನ್ನೆದೆಮುಟ್ಟಿ ತಾರಕದಿ ಹೇಳು!
ಹೇಳು ಯೆವ್ತುಷೆಂಕೊ, ನೀನು ರಷ್ಯಾದ
ಎದೆಬಡಿತವನರಿತವನಲ್ಲವೆ?








uttama anuvaada..thanks!
TUMBA CHANNAGIDE. ,NAADA KUSHALAVE ?