ನಾನು, ನೀನು ಮತ್ತು ನದಿ
– ಪ್ರಸನ್ನ ಚಲಂ
ಯಾವಾಗಲೂ ಹೀಗೆಯೇ
ಕವನಗಳಲ್ಲಿ ನಾನು ಮತ್ತು ನೀನು
ಮಾತ್ರವೇ ಇರುತ್ತೇವೆ
ಪದಗಳು ನಾಚುವುದಿಲ್ಲ ಎಂಬಲ್ಲೇ
ಒಬ್ಬರೊಳಗಿನ್ನೊಬ್ಬರ ಪಿಸುಮಾತು ಕೇಳುತ್ತದೆ
ನೀನೇ ನೋಡು
ಎಲ್ಲಾ ಕವನಗಳಲ್ಲೂ
ನದಿ ಇದ್ದೇ ಇರುತ್ತದೆ
ಆಚೆ ಬದಿ ನಾನು ಈಚೆ ಬದಿ ನೀನು
ಖಾಯಮ್ಮು
ವಿಮರ್ಶಕರ ದೃಷ್ಟಿಯಲ್ಲಿ ನದಿ ಹರಿಯುತ್ತಿದೆ
ಹಾಗಾಗಿ ನಾವು ಜೀವಂತ
ನನ್ನ ದಡದಿಂದ ದೋಣಿಗಳಿಲ್ಲ
ನಿನ್ನ ಕಡೆಯ ದಡದ ದೋಣಿಗಳ
ಮುಟ್ಟಿ ಆಶೆ ಹುಟ್ಟಿಸಿ ಮುಂದೆ
ಹೀಗೆ ಮುಂದೆ ಸಾಗುತ್ತೀಯಾ
ಕಾವ್ಯದ ಪದಗಳಿಗೆ ಕೈ ಕೊಟ್ಟು
ಕರೆಯ ಬಯಸುತ್ತೇನೆ
ಮುಂದೆ ಸಿಗಬಹುದಾದ ಸೇತುವೆಯ
ಬಯಸಿ ಮುಂದೆ ನಡೆಯಬಯಸುತ್ತೇನೆ
ಕಡೆಯ ನಿರಾಸೆ ಮಡುಗಟ್ಟಿದ
ಬಿಂದುವಿನಲ್ಲಿ ನಿಂತು
ನದಿ ಬತ್ತಲೆಂದು ಆಶಿಸುತ್ತೇನೆ
ಇದೆಲ್ಲಾ ಅತಿಯಾಯಿತು ಅನ್ನಿಸಿ
ಇನ್ನು ಕವನ ಬರೆಯುವುದಿಲ್ಲ
ಎಂದು ಅಕ್ಷರಗಳಿಗೆ ಗಂಧದಹಾರ ಹಾಕುತ್ತೇನೆ
ಅದೇನೇ ಆದರೂ ಮುಂದೆ ಮತ್ತೆ
ಕೆಟ್ಟ ಕವನಗಳಲ್ಲಿ ನಿನ್ನ
ನುಣುಪಾದ ಕೆನ್ನೆಗಳಿಗೆ ನನ್ನೀ
ತುಟಿಯನ್ನು ಸೋಕಿಸಿ ಮುಕ್ತಿ ಪಡೆಯುವ
ಮಾತನಾಡುತ್ತೇನೆ
ಆದರೆ ನೋಡು ಕವನಗಳಲ್ಲಿ
ನಾನು, ನೀನು ಮತ್ತು ನದಿ
ಇದ್ದೇ ಇರುತ್ತೇವೆ






tumba…tumba..chennaagide..
thanks
ಆಚೆ ನೀನು, ಈಚೆ ನಾನು – ಮಧ್ಯೆ ನದಿಯು ಹರಿದಿದೆ
ಆದರೂ ಕವನದಲ್ಲಿ ನಾನು, ನೀನೂ, ನದಿ ಒಟ್ಟಿಗೇ ಇದ್ದೇವಲ್ಲ..
ಸೊಗಸಾದ ಕವನ, ಇಷ್ಟವಾಯಿತು…