‘ಯಾರು ಹೇಳು?’ ಅಂದೆ. ಆಕೆ ‘ಗಂಗಾಧರ..’ ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು..

4

ಯಾನದ ಜೊತೆ

ನನಗೆ ಈಗಲೂ ಖುಷಿಯಾಗುವುದು  ಹೆಗ್ಗಡೆಯವರಲ್ಲಿನ ಕೃಷಿಯ ಕುರಿತಾದ ಆಸಕ್ತಿ, ಅವರ ಸರಳತೆ. ಅಲ್ಲಿನ ವಿದ್ಯಾಕೇಂದ್ರಗಳಲ್ಲಿನ ವಿದ್ಯಾರ್ಥಿಗಳೇ ಪಾಳಿ ಪ್ರಕಾರ ಅಲ್ಲಿ ವಿವಿಧ ತರಕಾರಿ, ಹೂ ಮುಂತಾದವನ್ನು ಬೆಳೆಯುತ್ತಿದ್ದರು. ವಿಶಾಲವಾದ, ಸಮೃದ್ಧವಾದ  ಕೃಷಿ ಕ್ಷೇತ್ರ ಸಿದ್ಧವನ. ಅಲ್ಲಿ ನಮಗೆ ಸಾಂಪ್ರದಾಯಿಕ ಮತ್ತು ಸುಧಾರಿತ ಕೃಷಿ ಬಗ್ಗೆ ತರಬೇತಿ ನಡೆಯುತ್ತಿತ್ತು.

ಅಲ್ಲಿನ ತರಬೇತಿಯ ಕೊನೆಯ ದಿನದ ಅನುಭವ ಈಗಲೂ ನನ್ನಲ್ಲಿ ಹೆಮ್ಮೆ ಮತ್ತು ವಿಶ್ವಾಸವನ್ನು ಹುಟ್ಟಿಸುತ್ತದೆ. ತರಬೇತಿಯಲ್ಲಿ ಪಾಲ್ಗೊಂಡ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃಷಿಕರು ಸಮಾರೋಪದಲ್ಲಿ ಎಲ್ಲರ ಪರವಾಗಿ ಅನಿಸಿಕೆ ಹೇಳಲು ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ್ದರು.! ಅಲ್ಲಿದ್ದವರಲ್ಲಿ ನಾನೇ ಕಿರಿಯ; ಹಾಗಿದ್ದರೂ ನನ್ನನ್ನು ಆಯ್ಕೆ ಮಾಡಿದ್ದು ಈಗಲೂ ಕುತೂಹಲ ತರುತ್ತದೆ. ಅಂದಿನ ಸಮಾರೋಪಕ್ಕೆ ವೀರೇಂದ್ರ ಹೆಗ್ಗಡೆಯವರೂ ಬಂದಿದ್ದರು ಕೂಡ. ನನಗೋ ಭಯ ಮತ್ತು ಅಳುಕು. ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಕುಳಿತಾಗಲಂತೂ ಒಳಗೊಳಗೇ ಬೆವರು. ಅವತ್ತು ತಮ್ಮ ಆಳವಾದ ಅನುಭವ, ಇತರರನ್ನು ಹುರಿದುಂಬಿಸುವ ಅವರ ಮಾತುಗಳ ಜೊತೆಗೆ ನನ್ನ ಅನಿಸಿಕೆಯ ಮಾತುಗಳಿಗೆ ಖುಷಿ ಪಟ್ಟಿದ್ದಲ್ಲದೇ, ನನ್ನಂಥ ಕಿರಿಯರು ಕೃಷಿ ಕ್ಷೇತ್ರದತ್ತ ಆಸಕ್ತಿ ವಹಿಸಿದ್ದಕ್ಕೆ ಮೆಚ್ಚಿಕೊಂಡಿದ್ದರು. ಅದು ಈಗಲೂ ನನಗೆ ಮರೆಯಲಾಗದ ಅಪೂರ್ವ ಘಟನೆಯಾಗಿ ಉಳಿದುಕೊಂಡಿದೆ.

ಉಜಿರೆಗೆ ಬರುವಾಗಲೇ ನಾನು ಒಂದು ಯೋಜನೆ ಹಾಕಿಕೊಂಡಿದ್ದೆ. ಹೇಗಾದರೂ ಪುತ್ತೂರು ಸಮೀಪದ ಉಜಿರೆಗೆ ಹೋಗುತ್ತಿದ್ದೆನಲ್ಲ; ಕಬಕಕ್ಕೂ ಹೋಗಿ ತಂಗಮಣಿಯ ಬಗ್ಗೆ ವಿಚಾರಿಸಬಾರದೇಕೆ? ಎನ್ನುವ ಪ್ರಶ್ನೆಯನ್ನ ಹೊತ್ತುಕೊಂಡೆ ಬಂದಿದ್ದೆ. ಉಜಿರೆಯಲ್ಲೂ ಪುತ್ತೂರು, ಕಬಕದ ಕುರಿತು ಕೆಲವು ಮಾಹಿತಿಗಳನ್ನ ಪಡೆದುಕೊಂಡಿದ್ದೆ. ಸಂಜೆ ತರಬೇತಿಯ ಸಮಾರೋಪ ಮುಗಿಸಿ, ಪುತ್ತೂರಿಗೆ ಹೋಗಲು ಸಂಜೆಯಾಗಿಬಿಟ್ಟಿತ್ತು. ಹಾಗಾಗಿ ಸಿದ್ದವನದ ಮುಖ್ಯಸ್ಥರಲ್ಲಿ ಆ ರಾತ್ರಿ ಅಲ್ಲೇ ಉಳಿದುಕೊಳ್ಳಲು ಅನುಮತಿ ಪಡೆದಿದ್ದೆ.

ಮರುದಿನ ನಸುಕಿನಲ್ಲೇ ಎದ್ದು ಉಜಿರೆ ಬಸ್ ಸ್ಟಾಂಡ್‍ಗೆ ಬಂದು ಪುತ್ತೂರಿಗೆ ಹೋಗುವ ಬಸ್ಸಿಗಾಗಿ ಕಾದುನಿಂತೆ. ಹತ್ತು ದಿನಗಳ ಗಜಿಬಿಜಿ, ಮಾತುಕಥೆ ಎಲ್ಲ ಮುಗಿದುಹೋದ ಅಧ್ಯಾಯವಾಗಿ ಮನಸ್ಸು ಖಾಲಿಖಾಲಿಯಾಗಿತ್ತು. ಮಳೆಗಾಲದ ದಿನಗಳಾದ್ದರಿಂದ ಮೋಡ ಮುಸುಗಿದ ಆಕಾಶದಂತೆ ವಾತಾವರಣವೂ ಮ್ಲಾನವಾಗಿತ್ತು. ಮಬ್ಬು ವಾತಾವರಣ, ಶುಷ್ಕವೆನ್ನಿಸುವ ಮನಸ್ಸಿನೊಳಗೆ ನನ್ನ ಮುಂದಿನ ಕೆಲಸದ ಯೋಚನೆ, ಅದು ವಿಫಲವಾಗಿಬಿಡುತ್ತದೆಯೋ? ಎನ್ನುವ ಚಿಂತೆ ಎಲ್ಲ ಸೇರಿ ಆ ನಸುಕಿನಲ್ಲೂ ಮನಸ್ಸು ಕುಸಿದುಹೋಗಿತ್ತು.

ಆಗ ಉಜಿರೆ ಈಗಿನಂತಿರಲಿಲ್ಲ. ಇಷ್ಟೊಂದು ಜನಸಂದಣಿ, ಬೃಹತ್ ಕಟ್ಟಡಗಳು, ಹತ್ತಾರು ವಿದ್ಯಾಸಂಸ್ಥೆಗಳು, ವಾಹನಗಳ ಭರಾಟೆ ಇರಲೇ ಇಲ್ಲ. ಸರ್ಕಲ್‍ನಲ್ಲಿ ಹತ್ತಾರು ಅಂಗಡಿ, ಹೋಟೆಲ್‍ಗಳು ಬಿಟ್ಟರೆ ಬಿಟ್ಟರೆ ಉದ್ದನೆಯ ಹಾಸಿಕೊಂಡ ರಸ್ತೆಗಳ ಪಕ್ಕ ಮನೆಗಳ ಸಾಲು ಮಾತ್ರ. ಖಿನ್ನನಾಗಿ ನಿಂತು ದೂರದ ಪಶ್ಚಿಮಘಟ್ಟಗಳನ್ನು ಮುಚ್ಚಿಕೊಂಡಿದ್ದ ಮಂಜಿನಂತೆ ಕಾಣುತ್ತಿದ್ದ ಮೋಡಗಳನ್ನು ನೋಡುತ್ತಿದ್ದ ನನಗೆ ಹಠಾತ್ತನೇ ಕುದುರೆಮುಖದ ಶಿಖರ ಕಾಣಿಸಿಕೊಂಡಿತ್ತು.! ಮುಚ್ಚಿಕೊಂಡ ಪರದೆ ಥಟ್ಟನೆ ಸರಿದು ಯಕ್ಷಗಾನ ಪಾತ್ರಧಾರಿಯೊಬ್ಬ ಜಗ್ಗನೆ ರಂಗದಲ್ಲಿ ಬೆಳಗಿದಂತೆ ಅರೆಕ್ಷಣ ಆ ಬಿಳಿ ಮಾಯಾಮೋಡಗಳು ಸರಿದು ಕಪ್ಪಾದ ಶಿಖರ ಗೋಚರಿಸಿತ್ತು. ಒಂದು ಕ್ಷಣ ಧಿಜ್ಮೂಡನಾಗಿದ್ದೆ. ನಿಜಕ್ಕೂ ಅದೊಂದು ಮಿಂಚಿನಂತೆ ಮನಸ್ಸನ್ನು ಕೋರೈಸಿದ ಕ್ಷಣ. ಮತ್ತೆ ಮೋಡ ಆವರಿಸಿಕೊಳ್ಳುವರಲ್ಲಿ ನನ್ನ ಮನಸ್ಸು ಸಣ್ಣಗೆ ಹುರಿಗಟ್ಟಿಕೊಳ್ಳತೊಡಗಿತ್ತು.

ಉಜಿರೆಯಲ್ಲಿ ಇದ್ದಷ್ಟು ದಿನವೂ ನಾನು ಬೆಳಿಗ್ಗೆ ಬೇಗ ಎದ್ದು ಸುತ್ತಾಡಲು ಹೋಗುತ್ತಿದ್ದೆ. ನಮ್ಮ ಕರಾವಳಿಯಾದ ಕಾರಣ ಮಲೆನಾಡಿನಂತೆ ಬೆಳಗಿನ ಆಲಸಿತನ ಅಲ್ಲಿರುತ್ತಿರಲಿಲ್ಲ. ಅಲ್ಲದೇ ಆ ದಿನಗಳಲ್ಲಿ ನನ್ನೊಳಗಿನ ಚಡಪಡಿಕೆ, ಅರಿವಿಗೆ ಬಾರದ ಖಿನ್ನತೆ ಹೆಚ್ಚುಕಾಲ ನಿದ್ರಿಸಲೂ ಕೊಡುತ್ತಿರಲಿಲ್ಲ. ಬೆಳಗಿನಲ್ಲಿ ಉಜಿರೆಯ ಪರಿಸರ ಪ್ರಶಾಂತವಾಗಿರುತ್ತಿತ್ತು. ಕಾಲೇಜೊಂದರ ಎದುರು ವಿಶಾಲವಾದ ಕ್ರೀಡಾಂಗಣವೊಂದಿತ್ತು. ಅಲ್ಲಿ ಓರ್ವ ಕ್ರೀಡಾಪಟು ದಿನಾಲೂ ಬೆಳಿಗ್ಗೆ ಓಡುತ್ತಲೇ ಇರುತ್ತಿದ್ದ. ರಸ್ತೆಗಳಲ್ಲಿ ಸುಮಾರು ದೂರ ನಡೆದು, ವಾಪಸ್ಸು ಬಂದು ಕ್ರೀಡಾಂಗಣದ ಸುತ್ತಲಿನ ಪಾವಟಿಗೆಯ ಮೇಲೆ ಕೂತು ಆತನ ಓಟವನ್ನೇ ನೋಡುತ್ತಿರುತ್ತಿದ್ದೆ.

ಕ್ರೀಡಾಂಗಣದಾಚೆ ದೂರ ಪೂರ್ವದಿಗಂತದಲ್ಲಿ ಬಿಳಿಯ ಉಗಿಯನ್ನು ಕಾರುತ್ತ, ಮೈತುಂಬ ಮೋಡಗಳನ್ನು ಹೊದ್ದುಕೊಂಡ ಪಶ್ಚಿಮಘಟ್ಟ ಶ್ರೇಣಿ ಮಹಾಮೇರುವಾಗಿ ಕಾಣುತ್ತಿತ್ತು. ಆಗಾಗ್ಗೆ ಕುದುರೆಯ ಮುಖ ಹೋಲುವ ಪರ್ವತವೂ ಕಾಣುತ್ತಿತ್ತು. ಒಂದುದಿನ ಮಧ್ಯಾಹ್ನದ ಹೊತ್ತು, ಮೋಡಗಳಿಲ್ಲದ ಸಮಯದಲ್ಲಿ ಜೊತೆಗಿದ್ದವರೊಬ್ಬರು ಅದನ್ನು ತೋರಿಸಿ ‘ಅದೇ ಕುದುರೆಮುಖ ಶಿಖರ ಇಲ್ಲಿಂದ ಆ ರಿತಿ ಕಾಣೋದಕ್ಕೆ ಅದಕ್ಕೆ ಆ ಹೆಸರು ಬಂದಿದೆ’ ಎಂದಿದ್ದರು. ಆಗ ನನಗೆ ಅಚಾನಕ್ಕಾಗಿ ತೇಜಸ್ವಿಯವರ ‘ನಿಗೂಢ ಮನುಷ್ಯರು’ ಕಥೆ ಜ್ಞಾಪಕಕ್ಕೆ ಬಂದಿತ್ತು. ಅದರ ಕೊನೆಯಲ್ಲಿ ‘ದೂರದಲ್ಲಿ ಉಜಿರೆ ಬೆಳ್ಳಿ ಚಿಕ್ಕೆಯಂತೆ ಕಾಣುತ್ತಿತ್ತು’ ಎಂದು ಬರುತ್ತದೆ. ಆ ಸಾಲೂ ನೆನಪಾಗಿತ್ತು. ಅಲ್ಲಿದ್ದಷ್ಟು ದಿನವೂ ಆಗಾಗ್ಗೆ ಕಾಣುತ್ತ ಎಂದಾದರೂ ಅದನ್ನು ಹತ್ತಿರದಿಂದ ನೋಡಬೇಕು ಎನ್ನುವ ಆಶೆ ಹುಟ್ಟಿಸುತ್ತಿದ್ದ ಕುದುರೆಮುಖ ಶಿಖರ ಆ ಬೆಳಗಿನಲ್ಲಿ ದಯಪಾಲಿಸಿದ ಅನುಭವ ಮಾತ್ರ ಅವಿಸ್ಮರಣೀಯ!

ಒಳಗೆ ಬಿಸಿಯನ್ನ ಹುಟ್ಟಿಸಿದ ಅನುಭವದಲ್ಲೇ ಬಸ್ಸು ಹತ್ತಿ ಪುತ್ತೂರಿನತ್ತ ಬರುತ್ತಿದ್ದಂತೇ ಧೋ,ಧೋ ಮಳೆ ಸುರಿಯತೊಡಗಿತ್ತು. ಆ ಮಳೆಯಲ್ಲೇ ಪುತ್ತೂರು ಬಸ್‍ಸ್ಟಾಂಡ್‍ನಲ್ಲಿಳಿದು ಕಬಕಕ್ಕೆ ಹೋಗುವ ಬಸ್ ಹಿಡಿದು ಐದಾರು ಮೈಲಿ ದೂರದ ಅಲ್ಲಿಗೆ ಬಂದಿಳಿಯುವಷ್ಟರಲ್ಲಿ ಮಳೆ ಕಡಿಮೆಯಾಗಿ ಜಿಟಿ ಜಿಟಿ ಹನಿ ಉದುರುತ್ತಿತ್ತು.

ಪುತ್ತೂರಿನಿಂದ ಬರುವ ಹೆದ್ದಾರಿ ಟಿಸಿಲೊಡೆದು ವಿಟ್ಲದತ್ತ ರಸ್ತೆಯೊಂದು ಸಾಗುತ್ತಿತ್ತು. ಅಲ್ಲಿನ ಸರ್ಕಲ್‍ನಲ್ಲಿದ್ದ ನಾಲ್ಕಾರು ಅಂಗಡಿಗಳಲ್ಲಿ ಒಂದೆರಡು ತೆರೆದಿದ್ದರೆ, ಉಳಿದವು ತೆರೆದುಕೊಳ್ಳುವ ಸನ್ನಾಹದಲ್ಲಿದ್ದವು. ತೆರೆದಿದ್ದ ಅಂಗಡಿಯೊಂದರತ್ತ ಹೋಗಿ ವಿಚಾರಿಸಿದೆ. ಅಂಗಡಿ ಮಾಲೀಕ ಮಾಪಿಳ್ಳೆ; ಆತನಿಗೆ ಮಲೆಯಾಳಿ, ತುಳು ಎರಡೇ ಗೊತ್ತಿರುವದು. ನನ್ನ ಕನ್ನಡ ಅವನಿಗೆ ಯಾವ ದೇಶದ ಭಾಷೆಯಂತೆ ಅನಿಸಿರಬೇಕು. ಉಳಿದವರ ಸ್ಥಿತಿಯೂ ಅದೇ. ಏನೂ ತೋಚದೇ ಕನ್ನಡ ಬರುವವರು ಯಾರಾದರೂ ಸಿಗುವ ತನಕ ಕಾದು ನಿಂತಿರುವಾ ಎಂದು ಅಲ್ಲಿದ್ದ ಚಿಕ್ಕ ಬಸ್ ಸ್ಟಾಪ್‍ನಲ್ಲಿ ನಿಂತೆ.

ಅಪರಿಚಿತತೆಯ ಅನುಭವ ಎಷ್ಟು ತೀವ್ರವಾದದ್ದು ಎಂದು ಆಗ ಅನ್ನಿಸಿತ್ತು. ಭಾಷೆ ಗೊತ್ತಿಲ್ಲದ ದೇಶವೊಂದರಲ್ಲಿ ಕಾಲವನ್ನು ನೂಕುವುದು ನಿಜಕ್ಕೂ ಘೋರವಾದದ್ದೇ. ನಮಗೆ ಪರಿಚಿತವಿದ್ದಲ್ಲಿ ನಾವು ಅಪರಿಚಿತರಂತೆ ಬದುಕಿಬಿಡಬಹುದು. ಆದರೆ ಯಾರೂ, ಏನೂ ಗೊತ್ತಿಲ್ಲದ ಸ್ಥಳದಲ್ಲಿ ನಾವು ಬೇಡವೆಂದರೂ ಅನಾಥಭಾವ ಕಾಡತೊಡಗುತ್ತದೆ. ಅದರಲ್ಲೂ ಅನಾಥಪ್ರಜ್ಞೆ ಜನ್ಮಕ್ಕಂಟಿಕೊಂಡೇ ಇರುವ ನನ್ನಂಥವನಿಗೆ ಅಂಥ ಸಂದರ್ಭದಲ್ಲಿ ಅದು ಜ್ವಾಲೆಯಂತೆ ಬುಗ್ಗೆಂದು ಬಿಡುತ್ತದೆ. ಆ ಪ್ರದೇಶಕ್ಕೆ ಬಂದದ್ದೇ ಹೊಸತು. ಅಲ್ಲಿನ ತುಳು, ಮಲೆಯಾಳ ನನಗರ್ಥವಾಗದ್ದು. ಜನರ ಉಡುಪು, ನಡವಳಿಕೆ ಎಲ್ಲವೂ ಹೊಸತೇ. ಏಕಾಂಗಿಯಾಗಿ ನಿಂತ ಆ ಸಮಯದಲ್ಲಿ ನನಗೆ ಇದೆಲ್ಲ ಪರಿಪಾಟಲು ಬೇಕಿತ್ತೇ? ಎಲ್ಲರಂತೆ ನಾನೂ ಕೆಲಸ ಮುಗಿದ ತಕ್ಷಣ ಬಸ್ ಹತ್ತಿ ಮನೆ ಸೇರಬಹುದಿತ್ತಲ್ಲ. ಆಗದ, ಹೋಗದ ಉಸಾಬರಿ ಯಾಕೆ ಬೇಕಿತ್ತು ಎಂದನ್ನಿಸತೊಡಗಿತು.

ತಲೆ ಹೊರಗೆ ಹಾಕಲಾಗದ ಜಿಟಿ ಜಿಟಿ ಮಳೆ, ಗಂಟೆ ಹತ್ತಾಗುತ್ತ ಬಂದರೂ ಮುಂಜಾನೆಯ ಮಬ್ಬು, ಆಗೀಗ ಒಬ್ಬಿಬ್ಬರು ಅತ್ತಿತ್ತ ಓಡಾಡುವದು ಬಿಟ್ಟರೆ ಹೆದ್ದಾರಿಯಲ್ಲಿ ನಿಲ್ಲದೇ ಹಾದುಹೋಗುವ ಲಾರಿ, ಬಸ್ಸುಗಳು. ಮನಸ್ಸಿನ ಆಂದೋಳನ, ಮಬ್ಬು ವಾತಾವರಣದಿಂದ ಆ ಗೂಡಿನಂಥ ಬಸ್ ಸ್ಟಾಂಡಿನ ಕಟ್ಟೆಯ ಮೇಲೆ ಕೂತಲ್ಲೇ ಅರೆಜೊಂಪು ಬಂದುಬಿಟ್ಟಿತ್ತು. ಲಾರಿಯೊಂದರ ಕರ್ಕಶವಾದ ಹಾರನ್ ಗೆ ಕುಮಟಿ,ಎ ಚ್ಚರವಾಗಿ ಎಷ್ಟು ಹೊತ್ತಾಯಿತೇನೋ ಎಂದುಕೊಳ್ಳುತ್ತ ಹೊರಗೆ ಬಂದೆ.

ರಸ್ತೆಯಾಚೆ ಆಟೋ ನಿಲ್ಲಿಸಿಕೊಂಡದ್ದು ಕಾಣಿಸಿತು. ಆ ಪುಣ್ಯಾತ್ಮನನ್ನಾದರೂ ವಿಚಾರಿಸೋಣ ಎಂದುಕೊಳ್ಳುವಷ್ಟರಲ್ಲಿ ತನ್ನ ಸೀಟಿನಲ್ಲಿ ಕುಳಿತಿದ್ದಂತೇ ಅಲ್ಲಿಂದ ಬಗ್ಗಿ ಎಲ್ಲಿಗೆ? ಎಂದು ಕೈ ಸನ್ನೆ ಮಾಡಿದ. ಬಹುಷ: ನನ್ನ ಹೆಗಲ ಮೇಲಿದ್ದ ಬ್ಯಾಗ್ ನೋಡಿರಬೇಕು. ಅವನ ಬಳಿ ಮಾತನಾಡುವದು. ಆತನಿಗೆ ಕನ್ನಡ ಬಂದು ನನಗೆ ಸಹಕರಿಸಿದರೆ ಆಯ್ತು, ಇಲ್ಲವಾದ್ರೆ ಪುತ್ತೂರು ಬಸ್‍ಸ್ಟಾಂಡ್‍ಗೆ ಬಿಡು ಅಂದರಾಯ್ತೆಂದು ನಾನೇ ಅವನ ಬಳಿ ಹೋದೆ.

ನನ್ನ ಅದೃಷ್ಟವೋ, ದುರಾದೃಷ್ಟವೋ? ಆಟೋ ಡ್ರೈವರನಿಗೆ ತುಳು,ಮಲೆಯಾಳಿ ಜೊತೆಗೆ ಕನ್ನಡವೂ ಗೊತ್ತಿತ್ತು! ಜಿಮುರು ಮಳೆ ಬರುತ್ತಿದ್ದ ಕಾರಣ ಆಟೋದೊಳಗೆ ಕೂರಿಸಿಕೊಂಡು ನನ್ನ ವೃತ್ತಾಂತ ಕೇಳಿದ ಆತ ನನಗೆ ಗೊತ್ತಿದ್ದ ಹಾಗೇ ನಾರಾಯಣ ಭಟ್ಟ ಎನ್ನುವವರು ಕಬಕದಲ್ಲಿಲ್ಲ ಎಂದ, ಈ ಆಟೋ ಡ್ರೈವರ್‍ಗಳು ವಿಳಾಸದ ಮಟ್ಟಿಗೆ ವಿಶ್ವಕೋಶ ಇದ್ದಹಾಗೇ ಎಂದು ಆಗ ಗೊತ್ತಾಗದಿದ್ದರೂ ಮುಂದಿನ ದಿನಗಳಲ್ಲಿ ನನಗೆ ಅನುಭವಕ್ಕೆ ಬಂದಿತು.  ತುಳು ದಾಟಿಯ ತನ್ನ ಕನ್ನಡದಲ್ಲಿ ‘ನಿಮಗೆ ಇಲ್ಲೆಲ್ಲಾದ್ರೂ ವಿಚಾರಿಸಬೇಕು ಅಂದ್ರೆ ನೋಡುವಾ, ಪರಿಚಯದವರೆನ್ನ ಕೇಳುವಾ.  ಬೇಕೋ, ಬೇಡವೋ ತೀರ್ಮಾನ ನಿಮ್ಮದೇ’ ಎಂದ.

ನಾನಾದರೆ ಗುರುತು, ಪರಿಚಯ ಇಲ್ಲದವ, ಈತ ಈ ಊರವನೇ. ಯಾರಿಂದಲಾದರೂ ಸಣ್ಣ ಸುಳಿವಾದರೂ ಸಿಕ್ಕೀತು ಎನ್ನಿಸಿ ‘ಆಯ್ತು’ ಎಂದೆ. ಆ ಡ್ರೈವರ್ ಕಬಕದಿಂದ ಮಂಗಳೂರು ಹೆದ್ದಾರಿಯಲ್ಲಿ ಹತ್ತಾರು ಮೈಲಿ ದೂರ ಕಂಡವರನ್ನ ಕೇಳುತ್ತ, ಅಕ್ಕಪಕ್ಕ ವಿಚಾರಿಸುತ್ತ ಹೋಗಿ ಮತ್ತೆ ವಾಪಸ್ಸು ಬಂದು ವಿಟ್ಲ ರಸ್ತೆಯಲ್ಲಿ, ಪುತ್ತೂರು ರಸ್ತೆಯಲ್ಲಿ ಹೋಗಿಬರುತ್ತ ಅದೇ ರೀತಿ ಪುನರಾವರ್ತನೆ ಮಾಡಿದ. ತುಳು, ಮಲೆಯಾಳಿ, ಉರ್ದು,ಕನ್ನಡ ಎದುರಿನವರದ್ದು ಯಾವ ಭಾಷೆಯೋ ಅದೇ ಭಾಷೆಯಲ್ಲಿ ಮಾತನಾಡಿಸುತ್ತಿದ್ದ. ಅದನ್ನು ಕಂಡು ವಿಸ್ಮಯವಾಗುತ್ತಿದ್ದರೂ ನನ್ನೊಳಗಿನ ಕೊರಗು ಅದನ್ನು ಮುಚ್ಚಿಹಾಕುತ್ತಿತ್ತು. ಹೀಗೆ ಆ ರಸ್ತೆಯಲ್ಲಿ ಎರಡೆರಡು ಬಾರಿ ಸುತ್ತುಹಾಕಿರಬೇಕು. ನನಗೆ ಇದು ಬರಕತ್ತಾಗುವದಲ್ಲ ಅನ್ನಿಸತೊಡಗಿತ್ತು. ಮತ್ತೆ ಆಟೋ ಬಾಡಿಗೆ ಎಷ್ಟಾದರೂ ಹೇಳಿ, ನನಗೆ ಬಸ್ಸಿಗೆ ಹಣವಿಲ್ಲದ ಹಾಗೆ ಮಾಡಿದರೆ ಕಷ್ಟ ಅನ್ನಿಸಿತೊಡಗಿತು. ಅವನಿಗೂ ಸಾಕೆನ್ನಿಸಿರಬೇಕು. ಮೊದಲು ಹೊರಟಿದ್ದ ಕಬಕದ ಅದೇ ಬಸ್ ಸ್ಟಾಪ್ ಬಳಿ ಆಟೋ ತಂದು ನಿಲ್ಲಿಸಿದ.

ಪಾಪ! ಅವನಿಗೂ ಇಷ್ಟು ಕಷ್ಟಪಟ್ಟರೂ ಪತ್ತೆ ಹತ್ತಿಲ್ಲವಲ್ಲ ಎಂದನ್ನಿಸಿರಬೇಕು. ‘ಛೇ, ಇಷ್ಟೆಲ್ಲ ತಿರುಗಿದ್ರೂ ಒಬ್ರೇ ಒಬ್ರು ಗೊತ್ತಿದೆ ಎಂದವರಿಲ್ಲವಲ್ರೀ’ ಎಂದು ಬೇಸರ ವ್ಯಕ್ತಪಡಿಸಿದ. ಅರೆಘಳಿಗೆ ನನಗಾಗುತ್ತಿದ್ದ ವಿಷಣ್ಣತೆಯನ್ನು ತಹಬಂದಿಗೆ ತಂದುಕೊಂಡು ‘ ನನ್ನ ಪುತ್ತೂರಿಗೆ ಬಿಡ್ರೀ, ಯಾವ್ದಾದ್ರೂ ಬಸ್ ಸಿಗಬಹುದು’ ಎಂದೆ.

ಆಗಲೇ ಸುಮಾರು ಮಧ್ಯಾಹ್ನ ಒಂದು ಗಂಟೆಯಾಗುತ್ತ ಬಂದಿತ್ತು. ಪುತ್ತೂರಿನತ್ತ ನನ್ನನ್ನು ಕರೆತರುತ್ತಿದ್ದ ಆ ಡ್ರೈವರ್ ಒಂದೆಡೆ ಗಕ್ಕೆಂದು ಆಟೋ ನಿಲ್ಲಿಸಿದ. ಯಾತಕ್ಕಿರಬಹುದು? ಎಂದು ಆಲೋಚಿಸುವಷ್ಟರಲ್ಲಿ ‘ಇದು ಲಾಸ್ಟ್ ಛಾನ್ಸ್. ಇಲ್ಲೊಂದು ನಿಮ್ಮವರ ಮನೆಯಿದೆ. ಇದೊಂದನ್ನ ಕೇಳುವಾ. ಏನಂತ್ರೀ?’ ಎಂದ ಇಳಿದ. ಪುತ್ತೂರು ಹತ್ತಿರದಲ್ಲೇ ಇತ್ತು. ನಾನಂತೂ ನನ್ನ ಆಸೆಗೆ ಎಳ್ಳುನೀರು ಬಿಟ್ಟಿದ್ದೆ. ಆಗಲೇ ಮಾನಸಿಕಿವಾಗಿ ಬಸ್ಸು ಹಿಡಿದು ಊರು ಸೇರುವ ನಿರ್ಧಾರದಲ್ಲಿದ್ದೆ. ನಾನು ಮಾತನಾಡದ್ದು ಕಂಡು ಏನೂ ಹೇಳದೇ  ಆತ ರಸ್ತೆ ಪಕ್ಕದಲ್ಲಿದ್ದ ಮನೆಯೊಂದರ ಅಂಗಳ ದಾಟಿದ್ದ. ಎರಡು ನಿಮಿಷದಲ್ಲಿ ಪಣಪಣ ತುಳು ಮಾತನಾಡಿಕೊಳ್ಳುತ್ತ ಅವನ ಜೊತೆ ಸುಮಾರು ನಲ್ವತ್ತರ ವಯಸ್ಸಿನವರೊಬ್ಬರು ಆಟೋ ಬಳಿ ಬಂದರು. ಡ್ರೈವರ್ ಜೊತೆ ಬಂದ ವ್ಯಕ್ತಿ ಬರಿಮೈಯಲ್ಲಿದ್ದು ಪಾಣಿಪಂಜೆ ಸುತ್ತಿಕೊಂಡಿದ್ದರು. ಬಿಳಿಯ ಜನಿವಾರದ ಎಳೆ ಡಾಳಾಗಿ ಗೋಚರಿಸುತ್ತಿತ್ತು.

‘ ನೋಡಿ, ಇವ್ರು ನಿಮ್ಮ ಜನವೇಯಾ. ಅವರ ಹತ್ರ ಮಾತಾಡಿ’ ಎಂದ. ನಾನು ಪುನ: ಅವರ ಬಳಿ ನನ್ನ ಪ್ರವರವನ್ನೆಲ್ಲ ಹೇಳಿ, ನಾನು ಹುಡುಕುತ್ತಿರುವ ವ್ಯಕ್ತಿಗಳ ಬಗ್ಗೆ ಹೇಳಿದೆ.

‘ನಾರಾಯಣ ಭಟ್ಟ ಅಂತಲ್ವಾ? ಅವನ ಹೆಂಡತಿ ಪೈಯನ್ನೂರು ಕಡೆಯವಳಲ್ವಾ?’ ಎಂದರು. ‘ಹೌದೌದು’ ಎಂದು ನಾನು ಗಡಿಬಿಡಿಯಲ್ಲಿ ಹೇಳಿದೆ. ‘ ನೀವು ಹೇಳೋ ಜನಾ ಅವರಾಗಿರೋದಕ್ಕೂ ಸಾಕು. ಅವ್ರು ನಮ್ಮ ದಾಯಾದಿಗಳೇ. ನಮಗೆ, ಅವರಿಗೆ ಸರಿ ಇಲ್ಲ ಮಾತ್ರ’ ಎನ್ನುವ ಉತ್ತರ ಅವರಿಂದ ಬಂತು. ನನಗೆ ಅರಸುತ್ತಿದ್ದ ನಿಧಿ ಕೈಗೆ ಎಟುಕಿದಂತಾಗಿತ್ತು. ‘ಅವರ ಮನೆ ಇಲ್ಲೇ ಈ ಗುಡ್ಡ ಉಂಟಲ್ಲ, ಇದರಾಚೆ’ ಎಂದು ತನ್ನ ಮನೆಯ ಹಿಂದಿನ ಎತ್ತರದ ಗುಡ್ಡ ತೋರಿಸಿದರು. ಆ ಸಂಭ್ರಮದಲ್ಲೂ ಅವರ ಮಾತಿನ ಶೈಲಿ ನನ್ನ ಗಮನಕ್ಕೆ ಬಂತು. ಹಳೆಗನ್ನಡ ಶಬ್ದಗಳು ಸಾಕಷ್ಟಿದ್ದ ಹವ್ಯಕರ ಆಡುಮಾತಿನಲ್ಲಿ ನನ್ನೊಂದಿಗೆ ಮಾತನಾಡತೊಡಗಿದ್ದರು. ‘ಅಲ್ಲಿಗೆಲ್ಲ ಈ ಮಳೆಯಲ್ಲಿ ಆಟೋ ಹೋಗುವದು ಕಷ್ಟ, ಇಲ್ಲೇ ನಮ್ಮನೆ ಹಿಂದೆ ಕಾಲುದಾರಿಯುಂಟು’ ಎಂದು ನನ್ನೆದುರಿನ ಮತ್ತೊಂದು ತೊಡಕನ್ನೂ ಬಗೆಹರಿಸಿದ್ದರು. ನಾನು ನನಗೆ ದೊಡ್ಡ ಉಪಕಾರ ಮಾಡಿದ ಆ ಡ್ರೈವರ್ ಕೇಳಿದಕ್ಕೂ ಹೆಚ್ಚು ಹಣ ಕೊಟ್ಟು ನನ್ನ ಬ್ಯಾಗ್ ಇಳಿಸಿಕೊಂಡು ಕಳುಹಿಸಿದೆ. ಆತ ಮರೆಯಲಾಗದ ಸಹಾಯವನ್ನು ಮಾಡಿದ್ದ.

ಆ ವ್ಯಕ್ತಿ ತಮ್ಮ ಮನೆಯಲ್ಲಿ ಊಟ ಮಾಡಿ ನಂತರ ಹೋದರಾಯ್ತೆಂದು ಹೇಳಿದರೂ ಒಪ್ಪಲಿಲ್ಲ. ನನಗೆ ಇನ್ನೂ ಖಚಿತವಾಗಿರಲಿಲ್ಲ. ನಾನು ಹುಡುಕುತ್ತಿದ್ದವರು ಹೌದೋ, ಅಲ್ಲವೋ? ಎನ್ನುವದು ಧೃಡವಾಗಬೇಕಿತ್ತು. ಅಲ್ಲಿ ಹೋಗಿ ನೋಡಿದ ಹೊರತು ಸಮಾಧಾನವಿರಲಿಲ್ಲ.

ಅದೂ,ಇದೂ ಮಾತನಾಡುತ್ತ ಜಾರುನೆಲದ ಕಾಲುದಾರಿಯಲ್ಲಿ ಆ ಗುಡ್ಡ ಹತ್ತಿದ್ದೆವು. ಅದರ ಅಂಚೊಂದರಲ್ಲಿ ನಿಂತು ಕೆಳಗಿನ ಕಣಿವೆಯಲ್ಲಿ ಕಾಣುತ್ತಿದ್ದ ಹೆಂಚಿನ ಮನೆಯೊಂದನ್ನು ತೋರಿಸುತ್ತ ‘ಓ, ಅದೇ ನಾರಾಯಣ ಭಟ್ಟರ ಮನೆ. ಆ ತೋಟಪಟ್ಟಿ ಕಾಣ್ತದೆಯಲ್ಲ, ಅದೆಲ್ಲ ಮಿತ್ತೂರು’ ಎಂದು ತೋರುಬೆರಳಿನಲ್ಲಿ ಮನೆಯೊಂದನ್ನ ತೋರಿಸಿದರು.  ಕಡಿದಾದ ಕಣಿವೆಯ ಆಳ ಇಳಿದು ಆ ಮನೆ ತಲುಪಬೇಕಿತ್ತು. ‘ಇದೇ ಕಾಲುದಾರಿ ಹಿಡಿದು ಹೋಗಿ, ಇಳಿಯುವಾಗ ನಿಧಾನ’ ಎಂದು ಸೂಚಿಸಿದರು. ‘ ನೀವೂ ಬನ್ನಿ’ ಎನ್ನುವ ನನ್ನ ಕರೆಗೆ ‘ಅದೇ ಹೇಳಿದ್ನಲ್ಲಾ. ನಮಗೆ, ಅವರಿಗೆ ಸರಿ ಇಲ್ಲ’ ಎಂದರು. ಪ್ರತಿ ಏನೂ ಹೇಳದೇ ಕೈಮುಗಿದು ಗುಡ್ಡ ಇಳಿಯತೊಡಗಿದೆ. ಸುಮಾರು ದೂರ ಇಳಿದ ನಂತರ ಮತ್ತೆ ಕರೆದ ಅವರು ‘ನಮ್ಮ ಮನೆಗೆ ಮತ್ತೆ ಬನ್ನಿ, ಸಂಕೋಚ ಬೇಡ’ ಎಂದರು.

ಕಲ್ಲು, ಗೊಚ್ಚುಗಳ ಆ ಗುಡ್ಡ ಇಳಿಯುವದು ಬಾಲ್ಯದಿಂದ ಹಳ್ಳಿಯಲ್ಲಿ ಬೆಳೆದು ಇಂಥ ಗುಡ್ಡ, ಬೆಟ್ಟಗಳನ್ನು ನಿತ್ಯ ಹತ್ತಿಳಿಯುತ್ತಿದ್ದ ಅಭ್ಯಾಸ ಇದ್ದುದಕ್ಕೆ ಸಾಧ್ಯವಾಗಿರಬೇಕು. ಅಂತೂ ಇಳಿದು, ಮಣ್ಣು ರಸ್ತೆಯನ್ನು ಹಾದು ಆ ಮನೆಯ ಎದುರು ನಿಂತು ಮನೆಯವರನ್ನ ಕರೆದೆ. ಹೆಂಗಸೊಬ್ಬರು ಕದ ತೆರೆದು ಹೊರಬಂದರು. ಅಂಗಳದಲ್ಲಿ ನಿಂತ ನನ್ನ ನೋಡಿ ಪ್ರಶ್ನಾರ್ಥಕ ಚಿಹ್ನೆಯನ್ನ ವ್ಯಕ್ತಪಡಿಸಿದರು. ನಾನು ಆಕೆಯ ಮುಖವನ್ನೇ ನೋಡುತ್ತಿದ್ದೆ. ‘

ಯಾರು?’ಎಂದು ಅದೇ ಪುತ್ತೂರು ಕಡೆಯ ಹವ್ಯಕ ದಾಟಿಯಲ್ಲಿ ಕೇಳಿದರು. ಆಗಲೇ ನನಗೆ ಧೃಡಪಟ್ಟಿತ್ತು. ಮನಸ್ಸಿನ ಉಲ್ಲಾಸವನ್ನ, ಗುರಿ ತಲುಪಿದ ಸಂಭ್ರಮವನ್ನ ಹತ್ತಿಕ್ಕಿಕೊಂಡು ‘ಯಾರು ಹೇಳು?’ ಅಂದೆ. ಅರೆಕ್ಷಣ ತಡೆದ ಆಕೆ ‘ ಗಂಗಾಧರ.. ‘ ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು. ಎಷ್ಟೋ ವರ್ಷಗಳ ಪುಟ್ಟ ಹುಡುಗನಿದ್ದಾಗ ಕಂಡಿದ್ದ ಆಕೆ ಇಷ್ಟು ದೊಡ್ಡವನಾಗಿದ್ದರೂ ದನಿಯಿಂದಲೇ ಗುರುತಿಸಿದ್ದಳು.

ಅಷ್ಟು ವರ್ಷಗಳ ಕಾಲ ನಮ್ಮನ್ನೂ ತನ್ನ ಮನಸ್ಸಿನಲ್ಲಿ ಉಳಿಸಿಕೊಂಡಿದ್ದಳೇನೋ?, ಊಹಿಸಿಕೊಳ್ಳಲೂ ಸಾಧ್ಯವೇ ಆಗದ ರೀತಿಯಲ್ಲಿ, ಅನಿರೀಕ್ಷಿತವಾಗಿ ನಾನು ಪ್ರತ್ಯಕ್ಷವಾದದ್ದು ಆಕೆಗೆ ಶಾಕ್ ಆಗಿರಬೇಕು. ನನಗೆ ಅಜ್ಜಿಯೇ ಮತ್ತೆ ದೊರಕಿದಂತಾಗಿತ್ತು. ಎಷ್ಟೋ ವರ್ಷಗಳ ನಂತರ ಇಬ್ಬರೂ ಐದಾರು ನಿಮಿಷಗಳ ಕಾಲ ಕೈ ಹಿಡಿದುಕೊಂಡು ಮಾತು ಹೊರಡದೇ ನಿಂತಿದ್ದೆವು; ಮಾತಿಗೆ ಆಸ್ಪದವೇ ಇಲ್ಲದಂತೆ ಇಬ್ಬರ ಮನಸ್ಸು ದ್ರವಿಸಿತ್ತು. ಅದು ಕಣ್ಣೀರಾಗಿ ಸುರಿಯುತ್ತಿತ್ತು.

ಸುಳ್ಯದತ್ತ ಓಡುತ್ತಿದ್ದ ಬಸ್‍ನಲ್ಲಿ ಕೂತು ಕಣ್ಣುಮುಚ್ಚಿ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆ. ಪುತ್ತೂರಿಗೆ ಬಂದರೂ ಮನೆಗೆ ಬಾರದ್ದಕ್ಕೆ ಗೊತ್ತಾದ ನಂತರದಲ್ಲಿ ಅತ್ತಿಗೆ ಬೈಯುವದು ಗ್ಯಾರಂಟಿಯಿತ್ತು. ನನಗೆ ಆ ಸಂದರ್ಭದಲ್ಲಿ ಮೊದಲು ಸ್ವಾಮಿಯವರ ತಂಡವನ್ನು ಸೇರಿಕೊಳ್ಳುವದು ಮುಖ್ಯವಾಗಿತ್ತು.

‍ಲೇಖಕರು avadhi

October 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: