ಕವಿ ಕೊಕೇನಿನಂತೆ; ಆತ ಅಪಾಯಕಾರಿ!

 

 

 

 

ಪ್ರಸಾದ್ ನಾಯ್ಕ್

 

 

 

 

ಎಚ್ಚರವಾಗಿರು ನೀ,
ಕವಿ ಕೊಕೇನಿನಂತೆ; ಆತ ಅಪಾಯಕಾರಿ!
ಆತ ನೇರವಾಗಿ ನಿನ್ನ ಆತ್ಮಕ್ಕೇ ಕೈ ಹಾಕುತ್ತಾನೆ. ನೀ ನೋಡನೋಡುತ್ತಿರುವಂತೆಯೇ ನಿನ್ನ ಕಾಲಕೆಳಗಿನ ನೆಲವನ್ನು ಜಾರಿಸುತ್ತಾನೆ. ಸುಮ್ಮನೆ ಮಾತುಮಾತಲ್ಲೇ ನಿನ್ನನ್ನು ನಿರಾಯುಧಳಾಗಿ ಮಂಡಿಯೂರುವಂತೆ ಮಾಡುತ್ತಾನೆ.

ಕವಿ ನಿಜಕ್ಕೂ ಅಪಾಯಕಾರಿ!
ಏಕೆಂದರೆ ನಿನ್ನ ಆಡಂಬರ ಆತನಿಗೆ ನಗಣ್ಯ. ಆತ ಗಮನವೆಲ್ಲಾ ಸಂಪೂರ್ಣ ನಿನ್ನಲ್ಲೇ. ನಿರಾಡಂಬರಿ ನಿನ್ನಲ್ಲಿ. ನಿನ್ನೊಂದಿಗೆ ಯಾವ ನೀನಿರುತ್ತೋ ಕೇವಲ ಆ `ನೀನು’ ಆತನಿಗೆ ಪ್ರಿಯ. ಮೆತ್ತಿದ ಫೌಂಡೇಷನ್ ಕೆಳಗೆ ಅಡಗಿರುವ ನಿನ್ನ ಕಣ್ಣ ಕೆಳಗಿನ ಅರ್ಧಚಂದ್ರವನ್ನು ಆತ ನೋಡಬಲ್ಲ. ನಿನ್ನ ಬೆರಳುಗಳು ಮುಂಗುರುಳಿನೊಂದಿಗೆ ಆಟವಾಡುವ ಪರಿ, ನಿನ್ನುಸಿರ ವೇಗ, ಅವನ ತುಂಟ ಸಾಲುಗಳಿಗೆ ಅರಳುವ ನಿನ್ನ ಕಣ್ಣು, ತುಟಿಯಂಚಿನ ಆ ಮಚ್ಚೆ, ನಿನ್ನ ಖಾಲಿ ಬೆರಳಿನಲ್ಲಿ ಉಳಿದಿರುವ ತೆಗೆದಿಟ್ಟ ಹಳೇ ಉಂಗುರದ ಛಾಪು, ಕಚ್ಚಿ ಕಚ್ಚಿ ರೂಪುಗೆಟ್ಟ ನಿನ್ನ ಕಿರುಬೆರಳ ಉಗುರಿನ ಮೂಲೆ, ನಿನ್ನ ಮೈಯ ಟ್ಯಾಟೂಗಳಲ್ಲಿ ಅಡಗಿರುವ ಸಂಕೇತಗಳು… ಹೀಗೆ ಆತ ನಿನ್ನನ್ನು ಇಂಚಿಂಚಾಗಿ ಕಾಣಬಲ್ಲ. ಅವನ ಕಣ್ಣಲ್ಲಿರುವ ನಶೆಯೆಂದರೆ ಬರೀ ನೀನು. ನಿನ್ನ ಅಂತಃಸಾಕ್ಷಿಯಂತಿರುವ ನೀನು.

ಅದಕ್ಕೇ ಹೇಳಿದೆ; ಕವಿ ಅಪಾಯಕಾರಿ!
ನಿನ್ನ ಮಾತಿನ ಲಯದೊಂದಿಗೆ ಬೆರೆಯುವ ಝುಮಕಿಯ ನಾದವ ಆತ ಕೇಳುತ್ತಿದ್ದಾನೆ. ಅದನ್ನಾತ ನಿನಗೆ ಹೇಳಲಾರ ಅಷ್ಟೇ. ಅದುವೇ ಗಝಲ್ ಅವನಿಗೆ! ನೀ ಕೆಮ್ಮಿದರೆ ತನ್ನ ಬಲಗೈಯ ತೋರುಬೆರಳಿನಿಂದ ಮೆಲ್ಲಗೆ ನೀರು ತುಂಬಿದ ಲೋಟವನ್ನು ನಿನ್ನೆಡೆಗೆ ಆತ ಸರಿಸುತ್ತಾನೆ. ಹೌದು, ಲೋಟದ ಹಿಂದಿನ ಮರೆಯಲ್ಲೇ. ಅದೂ ಬಲಗೈಯ ಮಧ್ಯದ ಬೆರಳಿಗೂ ತಿಳಿಯದಂತೆ. ಅಂಥಾ ನಾಜೂಕು. ನಿನ್ನ ಕಣ್ಣೋಟವನ್ನು ಆತ ಬಿಸಿಯಪ್ಪುಗೆಯಂತೆ ಅನುಭವಿಸಬಲ್ಲ. ನಿನ್ನೊಂದಿಗಿನ ನಿಮಿಷಗಳ ಸಾಂಗತ್ಯವನ್ನು ನೀ ಮುತ್ತಿಟ್ಟು ಕೊಟ್ಟ ಉಡುಗೊರೆಯಂತೆ ತನ್ನ ಕೊನೆಯುಸಿರಿರುವವರೆಗೂ ಕಾಪಿಡಬಲ್ಲ. ತನ್ನ ಪ್ರೇಮಪತ್ರಗಳಿಂದ ನಿನಗೆ ಹುಚ್ಚುಹಿಡಿಸಬಲ್ಲ. ತನ್ನೊಳಗಿನ ಬಿರುಗಾಳಿಯನ್ನೂ ನಿನ್ನ ನರನಾಡಿಗಳಲ್ಲಿ ಶಾಂತ ನದಿಯಂತೆ ಹರಿಸಬಲ್ಲ.

ಅದಕ್ಕೇ ಮತ್ತೊಮ್ಮೆ ಹೇಳುತ್ತಿದ್ದೇನೆ.
ಕವಿ ಅಪಾಯಕಾರಿ!
ಸುಂಟರಗಾಳಿಯ ಕಣ್ಣಿನಂತೆ ಆತ. ಅದರೊಳಗಿರುವ ಧೂಳಿನಂತೆ ನೀನು. ಹೀಗಾಗಿಯೇ ನಿನಗೆ ಜಗವು ಕಾಣದು. ಆ ಸುಳಿಯಲ್ಲಿ ಮನಕ್ಕಿಂತಲೂ ನೂರು ಪಟ್ಟು ವೇಗದಲ್ಲಿ ತಿರುಗುತ್ತಿರುವೆ ನೀ, ಕಳೆದು ಹೋಗುತ್ತಿರುವೆ ನೀ. ಸುಂಟರಗಾಳಿಯನ್ನು ದೂರದಿಂದ ನೋಡಿ ಬೆಚ್ಚುತ್ತಿರುವವರಿಗೆ ಮಾತ್ರ ನೀನು ಕಾಣಬಲ್ಲೆ. ಆದರೆ ಒಳಗೆ ಧೂಳೀಪಟವಾಗುತ್ತಿರುವ ನಿನಗಲ್ಲ. ನಿನ್ನ ಸತ್ಯಗಳನ್ನೂ, ಸುಳ್ಳುಗಳನ್ನೂ ಆತ ಅಡಿಮೇಲಾಗಿಸಬಲ್ಲ. ನಿನ್ನ ನಂಬಿಕೆಗಳಿಗೂ, ಅಸ್ತಿತ್ವಗಳಿಗೂ ಆತ ಹೊಸ ವ್ಯಾಖ್ಯೆಯನ್ನೇ ನೀಡಬಲ್ಲ. ನಿನ್ನ ಹೃದಯದೊಂದಿಗೆ ಪಿಸುಮಾತಾಡುತ್ತಾ ಆತ ನಿನ್ನ ಮೆದುಳಿನ ಕದವನ್ನು ಸದ್ದಿಲ್ಲದೆ ಮುಚ್ಚಬಲ್ಲ.

ಹುಷಾರಾಗಿರು ನೀ,
ಕವಿ ಕೊಕೇನಿನಂತೆ; ಆತ ಅಪಾಯಕಾರಿ!
ಆದರೆ ಕವಿಯನ್ನು ಆತನದ್ದೇ ಶೈಲಿಯಲ್ಲಿ ಹೆಡೆಮುರಿಕಟ್ಟಿ ಬಂಧೀಸುವುದೂ ಕೂಡ ಸುಲಭವೆಂದು ತಿಳಿದುಕೋ. ಅಷ್ಟರಮಟ್ಟಿಗೆ ಆತ ರಣರಂಗದಲ್ಲಿ ಶಸ್ತ್ರವಿಲ್ಲದೆ ನಿಂತಿರುವ ಯೋಧ. ಆತ ತನ್ನ ಹೇಳದ ಮಾತುಗಳನ್ನು ಕವಿತೆಯ ಸಾಲುಗಳಲ್ಲಿ ಹುದುಗಿಸಿಟ್ಟಿದ್ದಾನೆ. ಅಲ್ಲೇ ನಕ್ಕಿದ್ದಾನೆ, ಅಲ್ಲೇ ಅತ್ತಿದ್ದಾನೆ, ಅಲ್ಲೇ ನಿನಗೆ ಶರಣಾಗಿದ್ದಾನೆ. ತನ್ನ ಹೃದಯವನ್ನು ತೆಗೆದು ಕಪ್ಪದಂತೆ ನಿನ್ನ ಕೈಯಲ್ಲಿಟ್ಟಿದ್ದಾನೆ. ಹೌದು, ಆಗಲೇ, ತಕ್ಷಣ ಹಿಡಿದುಬಿಡು ನೀನವನನ್ನು. ಹೀಗೆ ಕವಿತೆಯ ಸೋಗಿನಲ್ಲಿ ಆತ ನಿರಾಯುಧನಾಗಿ ಸೋತಿರುವಾಗಲೇ. ಮತ್ತೆ ಎಚ್ಚರಿಸುತ್ತಿದ್ದೇನೆ ನಿನಗೆ. ಇಂಥಾ ವ್ಯಾಮೋಹಿಯೊಂದಿಗೆ ನೀನು ಪ್ರೀತಿಯಲ್ಲಿ ಬೀಳಬೇಡ…
ಕವಿ ಕೊಕೇನಿನಂತೆ.
ಅವನೊಂದು ಹಿತವಾದ ಅಮಲಿನಂತೆ,
ಆದರೆ ನಿಜಕ್ಕೂ ಅಪಾಯಕಾರಿ!

‍ಲೇಖಕರು Admin

October 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: