ಭಾಗವತರು ಕಂಡಂತೆ ಚಿಟ್ಟಾಣಿ


 
ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನಕ್ಕೆ ಪದ್ಮಶ್ರೀ ಪುರಸ್ಕಾರ ತಂದಿಕೊಟ್ಟಿದ್ದು ಇತಿಹಾಸ. ಅವರ ಅಗಲಿಕೆ ಈ ಕ್ಷೇತ್ರಕ್ಕೆ ತುಂಬಲಾರದ ಹಾನಿ. ಅಕ್ಟೋಬರ್ ೧೬ರಂದು ಬೆಳಿಗ್ಗೆ ೧೦ರಿಂದ ಬಂಗಾರಮಕ್ಕಿಯಲ್ಲಿ ಯಕ್ಷ ದಿಗ್ಗಜನಿಗೆ ನುಡಿ ನಮನ, ಆಖ್ಯಾನ ವ್ಯಾಖ್ಯಾನ ಏರ್ಪಾಟಾಗಿದೆ.
ಈ ಹಿನ್ನಲೆಯಲ್ಲಿ ಚಿಟ್ಟಾಣಿ ಅವರು ಇಷ್ಟ ಪಡುತ್ತಿದ್ದ ಭಾಗವತರಲ್ಲಿ ಒಬ್ಬರಾದ, ಅವರಿಗೆ ಮೂರು ದಶಕಗಳ ಕಾಲ ಪದ್ಯ ಹೇಳಿದ ಬಡಗಿನ ಗಾನ ಕೋಗಿಲೆ ಕೊಳಗಿ ಕೇಶವ ಹೆಗಡೆ ಅವರು ಅಕ್ಷರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
 
ಕೊಳಗಿ ಕೇಶವ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೂ ನನಗೂ ಕಳೆದ ಮೂವತ್ತು ವರ್ಷಗಳ ಒಡನಾಟ. ಅವರು ಮಾಡುವ ಪೌರಾಣಿಕ ಪಾತ್ರಗಳಿಗೆ ನಾನು ಧ್ವನಿಯಾಗಿ ಭಾಗವತನಾಗಿದ್ದು ನನ್ನ ಭಾಗ್ಯ. ಚಿಟ್ಟಾಣಿ ಅವರು ಅನುಭವಿ ಭಾಗವತರು ಇರದೇ ಇದ್ದರೂ ಅವರನ್ನು ಆ ಪಾತ್ರದ ಜೊತೆಗೆ ಕರೆದೋಯ್ಯುವ ಅಪರೂಪದ ಕಲಾವಿದರು. ಕಲಾವಿದರು ಅನ್ನುವದಕ್ಕಿಂತ ಸಹೃದಯರು. ಚೌಕಿ ಮನೆಯಿಂದ ರಂಗಸ್ಥಳಕ್ಕೆ ಬಂದರೆ ಅವರು ಪಾತ್ರಕ್ಕೆ ಜೀವ ತುಂಬುವ ವಿಧಾನವೇ ಅದ್ಭುತ. ಮಾದರಿ, ಪ್ರೇರಣೆ.
ಹಾಗೆ ನೋಡಿದರೆ ನಾನಂದು ಮೇಳದ ಭಾಗವತನಾಗಿದ್ದಾದರೂ ಅದಕ್ಕೆ ಚಿಟ್ಟಾಣಿ ಅವರೇ ಕಾರಣ. ಮೂರು ದಶಕಗಳ ಹಿಂದೆ. ನಾನು ಯಕ್ಷಗಾನ ಕಲಿತು ಆಗತಾನೆ ಸಂಗೀತ ನಿರ್ವಹಣೆ ಮಾಡುತ್ತಿದ್ದೆ. ಯಲ್ಲಾಪರದ ಉಮ್ಮಚಗಿಯಲ್ಲಿ ಗದಾಯುದ್ದ. ಅಂದು ಭಾಗವತರೇ ಬರಲಿಲ್ಲ. ನನ್ನಲ್ಲೇ ಪದ್ಯ ಹೇಳಲು ಹೇಳಿದವರು ಚಿಟ್ಟಾಣಿ ಅವರು. ಚಿಟ್ಟಾಣಿಯವರದ್ದೇ ಕೌರವ. ಕುರುರಾಯ ಇದನ್ನೆಲ್ಲ ಕಂಡು ಸಂತಾಪದಿ ಪದ್ಯಕ್ಕೆ ರಂಗ ಪ್ರವೇಶ ಮಾಡಿದರು.

ನನಗೂ ಆತಂಕ ಇತ್ತು. ಏನಾಗುವದೋ ಎಂದು. ಆದರೆ, ಅಂದು ಇಡೀ ಆಟ ಪೂರ್ಣ ಮಾಡಿದೆ. ಅಂದಿನಿಂದ ಭಾಗವತನಾಗಿ ನಾನು ಹಿಂದೆ ತಿರುಗಿ ನೋಡುವ ಸಂದರ್ಭ ಬರಲಿಲ್ಲ.  ನನ್ನಂತಹ ಕಲಾವಿದರ ಬೆಳವಣಿಗೆಗೆ ಚಿಟ್ಟಾಣಿ ಅವರಲ್ಲಿದ್ದ ಗುರುತಿಸುವಿಕೆಯ ಕಲೆ ಮುಖ್ಯವಾಗಿತ್ತು.
ಅಲ್ಲಿಂದ ಚಿಟ್ಟಾಣಿ ಅವರು ಹಾಗೂ ನನ್ನೊಂದಿಗಿನ ಸಂಬಂಧ ಗಾಢವಾಗಿತ್ತು. ಕೀಚಕ ವಧೆಯ ಕೀಚಕ, ಬಸ್ಮಾಸುರ ಮೋಹಿನಿಯ ಬಸ್ಮಾಸುರ, ಮಾಗಧವಧೆಯ ಮಾಗಧ, ರಾಜಾ ಉಗ್ರಸೇನದ ಉಗ್ರಸೇನ, ಚಿತ್ರಾಕ್ಷಿ ಕಲ್ಯಾಣದ ರುದ್ರಕೋಪ, ಸಗರ ಸಾರ್ವಭೌಮದ ಅಸಿತ, ಭಾಸವತಿಯ ವಿಮಲ ಧ್ವಜ, ಅತಿಕಾಯ ಕಾಳಗದ  ಅತಿಕಾಯ, ಇಂದ್ರಜಿತು ಕಾಳಗದ ಇಂದ್ರಜಿತು, ರತ್ನಾವತಿ ಕಲ್ಯಾಣದ ಭದ್ರಸೇನ, ಲಂಕಾದಹನದ ಹನುಮಂತ, ರಾವಣ,  ರೇಣುಕಾ ಮಹಾತ್ಮೆಯ ಪರಶುರಾಮ ಸೇರಿದಂತೆ ನೂರಾರು ಪೌರಾಣಿಕ ಪಾತ್ರಗಳಿಗೆ ಜೀವ ಕೊಟ್ಟಿದ್ದರು. ಶ್ರೀರಾಮ ಪಟ್ಟಾಭಿಷೇಕದ ಮಂಥರೆ ಕೂಡ ಮಾಡಿದವರು.

ರಂಗದಲ್ಲಿನ ಅವರ ಉತ್ಸಾಹ ಹಾಗೂ ಬದ್ಧತೆ ಎಷ್ಟೋ ಸಲ ಕುತೂಹಲ ಮೂಡಿಸುತ್ತಿತ್ತು. ಅವರ ವಿಶೇಷತೆ ಅಂದರೆ ಬಸ್ಮಾಸುರನ ಪಾತ್ರ ಮಾಡಿ ತಾಸೊಳಗೆ ಇನ್ನೊಂದು ಪ್ರಸಂಗದ  ಕೀಚಕನ ಪಾತ್ರ ಮಾಡಿ ಅಷ್ಟೇ ಸಮರ್ಥವಾಇ ಗೆಲ್ಲುತ್ತಿದ್ದರುವದು ನಮಗೂ ರೋಮಾಂಚನ ಆಗುತ್ತಿತ್ತು. ಯಕ್ಷಗಾನದ ಬಣ್ಣ ಹಚ್ಚಿ ರಂಗಸ್ಥಳಕ್ಕೆ ಬಂದರೆ ಅದೊಂದು ದೈತ್ಯ ಶಕ್ತಿ. ಅವರ ತಾಕತ್ತು ಇನ್ನೊಬ್ಬರಿಗೆ ಬರಲು ಸಾಧ್ಯವಿಲ್ಲ, ಸಾಧ್ಯವೇ ಇಲ್ಲ.
ಇಷ್ಟಕ್ಕೂ ಚಿಟ್ಟಾಣಿ ಅವರು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ, ರಂಗಸ್ಥಳವೇ ಅವರಿಗೆ ಶಾಲೆ ಆಗಿತ್ತು. ಹೊನ್ನಾವರ ಹೊಸಾಕುಳಿಯ ಚಿಟ್ಟಾಣಿಯ ಅವರು ತಮ್ಮ ಏಳನೇ ವಯಸ್ಸಿಗೇ ಯಕ್ಷನಾದ ಮೋಡಿಗೆ ಒಳಗಾದವರು. ಅವರಿಗೆ ತಾಳ ತತ್ಕಾರಗಳು ಬಾಯಿಗೆ ಬರದೇ ಇದ್ದರೂ ಚಂಡೆಗೆ ಹೆಜ್ಜೆ ಹಾಕುತ್ತಿದ್ದರು. ಅವರಿಗೆ ಮುಖವರ್ಣಿಕೆ ಜೊತೆಗೆ ಅವರ ಕಣ್ಣೂ ಪ್ಲಸ್. ಅವರಲ್ಲಿದ್ದ ಲಯ ಅದ್ಭುತವಾಗಿತ್ತು. ಹಾವಭಾವದ ಮೂಲಕವೂ ಪ್ರೇಕ್ಷಕರ ಮನ ಗೆಲ್ಲುತ್ತಿದ್ದರು. ಕ್ಯಾದಿಗೆ ಮುಂದಲೆ, ಮುಂಡಾಸು, ಕಿರೀಟ ಎಲ್ಲ ತರದ ವೇಷಗಳಿಗೂ ಅವರ ಮುಖ ಒಪ್ಪುತ್ತಿತ್ತು. ಪೌರಾಣಿಕ ಪಾತ್ರಗಳ ಕಥಾನಕವನ್ನು ಕಟ್ಟಿಕೊಡುತ್ತಿದ್ದ ರೀತಿ, ಪಾತ್ರದಲ್ಲಿ ತನ್ಮಯರಾಗಿ ಪಾತ್ರವೇ ಆಗಿತ್ತಿದ್ದ ರೀತಿ ಒಂದು ಪ್ರೇರಣಾ ನೆಲೆಯೂ ಆಗಿತ್ತಿತ್ತು. ಇನ್ನೊಂದು ವಿಶೇಷ ಗುಣ ಎಂದರೆ ಅವರು ತನ್ನಲ್ಲಿದ್ದ ಕಲೆಯನ್ನು ಮತ್ತೊಬ್ಬರಿಗೆ ಕೊಡಲೂ, ಬೇರೆಯವರಲ್ಲಿದ್ದ ಕಲಾತ್ಮಕತೆಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರಲಿಲ್ಲ.
ಚಿಟ್ಟಾಣಿ ಅವರಿಗೆ ಟಿವಿ, ಧಾರಾವಾಹಿ ಕೂಡ ಇಷ್ಟವಾಗಿತ್ತು. ಬಿಡುವಿನ ವೇಳೆಯಲ್ಲಿ ಟಿವಿ ಬಿಡುತ್ತಿರಲಿಲ್ಲ. ಸಿನೇಮಾ ಅವರ ಅಚ್ಚುಮೆಚ್ಚು.  ರಾಜಕುಮಾರರ ಪೌರಾಣಿಕ ಪಾತ್ರಗಳನ್ನು ಖುಷಿಯಿಂದ ನೋಡುತ್ತಿದ್ದರು. ಅವರೊಂದಿಗೆ ಸನ್ಮಾನ ಕೂಡ ಆಗಿತ್ತು.
ಏ ಮಾಣಿ, ಎಲ್ಲೋದ್ಯ ಎನ್ನುತ್ತಲೇ ಯಾವುದಕ್ಕೂ ಗಡಿಬಿಡಿ ಮಾಡದೇ ಕೆಲಸ ಮಾಡುತ್ತಿದ್ದರು. ಪದ್ಮಶ್ರೀ ಬಂದ ಬಳಿಕವೂ ಮಕ್ಕಳೊಂದಿಗೆ ಮಕ್ಕಳಾಗಿ, ದೊಡ್ಡವರೊಂದಿಗೆ ದೊಡ್ಡವಾಗಿ ಇರುತ್ತಿದ್ದರು. ಅವರ ಸರಳತೆ ಇಂದು ಯಾರಿಗೂ ಇಲ್ಲ.  ಇವರೇನಾ ಪದ್ಮಶ್ರೀ, ಚಿಟ್ಟಾಣಿ ಎಂದು ನಾವೇ ಚಿವುಟಿ ನೋಡಿಕೊಳ್ಳುವಂತೆ ಇರುತ್ತಿದ್ದರು.
ಬಸ್ಮಾಸುರ ಮೋಹಿನಿ ಪ್ರಸಂಗದಲ್ಲಿನ ಪದ್ಯವಾದ
ಕಂಡು ದಿಲ್ಲವೋ ಮುಖ ಮಂಡಲ ಶಶಿತರ ಪದ್ಯಗಳಿಗೆ ಆಕಾಶದ ಚಂದ್ರ ನೋಡುತ್ತ, ಪಕ್ಕದಲ್ಲಿದ್ದ ಮೋಹಿನಿ ಮುಖ ನೋಡುತ್ತ ಪ್ರೇಕ್ಷಕರಿಗೆ ಬೆರಗು ಮೂಡಿಸುತ್ತಿದ್ದರು. ಚಿಟ್ಟಾಣಿ ಅವರ ಅಭಿನಯವೇ ಪದ್ಯಕ್ಕೆ ಅರ್ಥ ಹೇಳುತ್ತಿತ್ತು. ಭಾವಕಿ ಸೌಂದರ್ಯ ನೋಡೇ ಎಂಬ ಪದ್ಯಕ್ಕೂ ಅವರ ಹೊಸ ಮಾದರಿಯ ನರ್ತನ ವೈಶಿಷ್ಟ್ಯ ಮೂಡಿಸುತ್ತಿತ್ತು. ಚಿಟ್ಟಾಣಿ ಅವರು ಯಕ್ಷಗಾನಕ್ಕೆ ಒಂದು ಹೊಸ ಅಲೆಯ ಸೃಷ್ಟಿ ಮಾಡುತ್ತಲೇ ಸಂಪ್ರದಾಯದ ಚೌಕಟ್ಟು ಮೀರದೇ ಮುನ್ನಡೆದ ಮೇರು ಕಲಾವಿದ ಎಂಬ ಮಾತಿಗೆ ಇದಿರಿಲ್ಲ.

ಚಿಟ್ಟಾಣಿ ಅವರು ಎಂದೂ ಪ್ರಶಸ್ತಿ, ಸನ್ಮಾನದ ಹಿಂದೆ ಬಿದ್ದಿಲ್ಲ. ಅವರಿಗೆ ಸಂದ ಪ್ರಶಸ್ತಿಗಳು ಒಂದೆರಡೇ ಅಲ್ಲ, ಪದ್ಮಶ್ರೀ ಪ್ರಶಸ್ತಿ ಬಂದ ಬಳಿಕವೂ ಅವರು ಹಿಗ್ಗಲಿಲ್ಲ.   ಜನರ ಮನದ ಭಾವನೆಗೆ ಸರಕಾರ ಅಧಿಕೃತವಾಗಿ ಪದ್ಮಶ್ರೀ ಘೋಷಿಸಿದಂತೆ ಆಗಿತ್ತು ಅಷ್ಟೇ. ಏಕೆಂದರೆ ಒಂದು ಪಾತ್ರದ ಮೂಲಕವೇ ಇವರನ್ನು ಗುರುತಿಸುವದುಂಟಲ್ಲ, ಕಲಾವಿದನಿಗೆ ಇದಕ್ಕಿಂತ ಬೇರೆ ಬೇಕಿಲ್ಲ. ಕಲಾಧರದ ಪಾತ್ರದ ಮೂಲಕವೇ ಕಲಾಧರ ಚಿಟ್ಟಾಣಿ ಆಗಿದ್ದರು ಎಂಬುದೂ ಹೆಮ್ಮೆಯೇ. ಅವರನ್ನು ಹುಡುಕಇ ಬಂದಿದ್ದು ಜಾನಪದಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳು ಒಂದೆರಡೇ ಅಲ್ಲ. ದೇಶ, ಹೊರ ದೇಶಗಳಲ್ಲೂ ಪ್ರಶಸ್ತಿ ಬಂದಿತ್ತು. ಯಕ್ಷಗಾನ ಪ್ರದರ್ಶನವೂ ಆಗಿದ್ದಕ್ಕೆ ಲೆಕ್ಕವಿಲ್ಲ. ಬಣ್ಣದ ಹಚ್ಚದ ದಿನಗಳಿಲ್ಲ. ಉಡುಪಿಯ ಆಸ್ತಾನ ಕಲಾವಿದರಾಗಿಯೂ ಇದ್ದರು.
ಚಿಟ್ಟಾಣಿ ಅವರ ಕುಟುಂಬ ಸಂತೋಷದಲ್ಲೇ ಇತ್ತು. ಮೂರು ಗಂಡು, ಒಂದು ಹೆಣ್ಣು, ಪತ್ನಿ, ಮೊಮ್ಮಕ್ಕಳ ತುಂಬು ಸಂಸಾರ. ಎಲ್ಲರೊಂದಿಗೂ ಪ್ರೀತಿ ಇತ್ತು. ಅವರಲ್ಲಿದ್ದ ಜೀವನೋತ್ಸಾಹ  ಮಾದರಿಯಾಗುವಂತೆ ಇತ್ತು. ಅವರ ಮಕ್ಕಳು, ಮೊಮ್ಮಗ ಕೂಡ ಅದೇ ಕ್ಷೇತ್ರದಲ್ಲಿ ಇದ್ದಾರೆ.
ಇದು ಕೂಡ ಚಿಟ್ಟಾಣಿ ಅವರ ಕೊಡುಗೆಯೇ. ಯಕ್ಷಗಾನದಲ್ಲಿ  ಅ.೩ರಂದು ರಾತ್ರಿ ಇಹ ಲೋಕ ತ್ಯಜಿಸುವ ನಾಲ್ಕೈದು ದಿನಗಳ ಮೊದಲು ಗೇರುಸೊಪ್ಪೆಯಲ್ಲಿನ ನವರಾತ್ರಿ ಉತ್ಸವದಲ್ಲಿ ಮೂರ್‍ನಾಲ್ಕು ದಿನ ವೇಷ ಮಾಡಿದ್ದರು. ಅಂದೇ ಅನಾರೋಗ್ಯ ಕಾಡಿತ್ತು. ಅದಕ್ಕೂ ವಾರದ ಮೊದಲು ಸಿದ್ದಾಪುರದ ಹೇರೂರಿನಲ್ಲಿ ಜಂಬವತಿ ಕಲ್ಯಾಣದ ಬಲರಾಮನಿಗೆ ಪದ್ಯ ನಾನೂ ಹೇಳಿದ್ದೆ. ಚಿಟ್ಟಾಣಿ ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ನೋಡಿದರೆ ಅದು ಗುಡ್ಡದಷ್ಟಾಗುತ್ತದೆ. ಸರಕಾರ ಚಿಟ್ಟಾಣಿ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸಿ ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಮೀಸಲಿಡಬೇಕು, ಅವರ ಕನಸಿನ ರಂಗಮಂದಿರ ನಿರ್ಮಾಣ ಆಗಬೇಕು.  ಎಲ್ಲ ಕಲಾವಿದರೂ ಇಷ್ಟಪಡುವ ಚಿಟ್ಟಾಣಿ ಅವರ ಹೆಸರಿನಲ್ಲಿ   ಯಕ್ಷೆತ್ಸವ ನಡೆಸಬೇಕು. ಅವರ ಹೆಸರು ನಿರಂತರವಾಗಿ ಇನ್ನೊಬ್ಬರಿಗೆ ಪ್ರೇರಣೆ ಆಗುವಂತೆ ಆಗಬೇಕು.
ಚಿಟ್ಟಾಣಿ ಶತಮಾನದ ಕಲಾವಿದರಾದ ದಾರಿ ಸಣ್ಣದಲ್ಲ. ೭೮ ವರ್ಷಗಳ ಕಾಲ ನಿರಂತರ ಬಣ್ಣದ ಬದುಕು ನಡೆಸಿದ್ದು, ನಡೆಸಿದ್ದು ಮಾತ್ರವಲ್ಲ, ಈ ಕ್ಷಣದ ತನಕವೂ ಕಲಾವಿದರಾಗಿ ಬಣ್ಣ ಹಚ್ಚಿ ರಂಗದಲ್ಲಿ ಮೆರೆದದ್ದು  ಒಂದು ಪವಾಡ. ಅದೊಂದು ಯಕ್ಷ ದೈತ್ಯಕ್ಕೆ ಸಾಧ್ಯ.
ಶಿವ ಶಿವ ಸಮಸರದೊಳು ಕೈ ಸೋತೆನೆಲ್ಲೋ ಭುವನೀಶ ಮಮತೆಯೊಳು ಎಂಬ ಪದ್ಯಕ್ಕೆ ಕುಣಿದು ಕರ್ಣನ ಪಾತ್ರ ಮಾಡುವ ಕನಸಿನೊಂದಿಗೆ ಆಸ್ಪತ್ರೆಯ ಮೆಟ್ಟಿಲೇರಿದ್ದ ಅಜ್ಜ ಕೊನೆಗೂ ಬರಲೇ ಇಲ್ಲ. ರಂಗಭೂಮಿಯ ಮೇರು ರಥ ಹುಗಿದು ಹೋಯಿತು. ಆ ಕನಸು ನನಸಾಗಲಿಲ್ಲ. ನೇತ್ರದಾನಿ ಆಗುವ ಸಮಾಜಕ್ಕೂ ಮಾದರಿಯಾದ ಅಜ್ಜಯ್ಯ ಮತ್ತೆ ರಂಗಸ್ಥಳಕ್ಕೆ ಬಾರದೇ ತೆರೆಗೆ ಸರಿದರು.
ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು ಮತ್ತೆ ಇನ್ ಯಾವ ಫಲವಿದೆ ನೀತಿಯೊಂದೇ ದೇವನೆನಿಸಿತು ಎನ್ನನು ಜಗದೋಳ್ ಇಂದು…

‍ಲೇಖಕರು avadhi

October 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: