ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ..

3

ಯಾನದ ಜೊತೆಗೆ…

ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ.

ಕರಾವಳಿ ಮತ್ತು ಮಲೆನಾಡು ಎರಡರ ಮಧ್ಯಬಿಂದುವಿನಲ್ಲಿರುವ ಆ ಊರು ವಿಶ್ರಾಂತಿಗೆ ತೆರಳುವ ಸಿದ್ಧತೆಯಲ್ಲಿತ್ತು. ನಾನು ಮೂಡಿಗೆರೆ ಸಮೀಪ ಇದ್ದಾಗ ಸ್ವಾಮಿ ಕರೆ ಮಾಡಿ ‘ಎಲ್ಲಿದ್ದೀರಿ?’ಎಂದಾಗ ನಾನು ‘ಮೂಡಿಗೆರೆ ಸಮೀಪ ಇದ್ದೀನಿ’ ಎಂದಿದ್ದೆ. ‘ಅಯ್ಯೋ, ಇನ್ನೂ ಅಲ್ಲೇ ಇದೀರಾ? ನೀವೆಲ್ಲೋ ಆಗ್ಲೇ ಧರ್ಮಸ್ಥಳಕ್ಕೆ ಬಂದಿದೀರಾ ಅಂದ್ಕೊಂಡೆ’ ಎಂದು ತಮ್ಮ ಎಂದಿನ ಕುಟುಕು ಶೈಲಿಯಲ್ಲಿ ಪ್ರಶ್ನಿಸಿದ್ದರು.

ನನಗೆ ಒಂದುಕ್ಷಣ ಸಣ್ಣಗೆ ಸಿಟ್ಟು ಬಂತು. ಬೇರೆ ಯಾರಾದರೂ ಈ ಥರ ಮಾತನಾಡಿದರೆ ಸಟಕ್ಕನೆ ರೇಗಿಬಿಡುವ ಸ್ವಭಾವ ನನ್ನದು; ಕೆಲವೊಮ್ಮೆ ತಮಾಷೆಯೂ ನನಗೆ ಗೇಲಿಯಂತೆ ಅನ್ನಿಸಿಬಿಡುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ್ಗೆ ಹೆಂಡತಿ, ಮಗನ ಬಳಿ ಒಂದಿಷ್ಟು ವಾಗ್ವಾದ ನಡೆಯುತ್ತಲೇ ಇರುತ್ತದೆ. ಮೂಗಿನ ನೇರಕ್ಕೇ ನೋಡುವ ನನ್ನ ದೌರ್ಬಲ್ಯ ಬಹುಷ: ಈ ಥರದ ವರ್ತನೆಗೆ ಕಾರಣವಾಗಿರಬಹುದೇನೋ?

ಅವತ್ತು ಸಿಟ್ಟು ಬರಲೇ ಇಲ್ಲ! ಕಾರಣ ಏನೆಂದರೆ ಬೆಳಿಗ್ಗೆ ಸಿದ್ದಾಪುರದಲ್ಲಿ ಬಸ್ ಹತ್ತಿದಲ್ಲಿಂದ ನಡೆಯುತ್ತಿದ್ದ ಸ್ವಾರಸ್ಯಕರ ವಿಧ್ಯಮಾನಗಳು ನನ್ನನ್ನು ಖುಷಿಯಲ್ಲಿಟ್ಟಿದ್ದವು. ಆದ್ದರಿಂದ ನಗುತ್ತಲೇ ‘ ಹೆಲಿಕ್ಯಾಪ್ಟರ್ ಇದ್ದಿದ್ದರೆ ಬರಬಹುದಿತ್ತೇನೋ?’ ಎಂದೆ. ಅವರು ಮಾಮೂಲಿನಂತೆ ಅಸ್ಪಷ್ಟವಾಗಿ ಮತ್ತೇನೋ ಉತ್ತರಿಸಿ ‘ ಮತ್ತೆ ನೆಟ್‍ವರ್ಕ ಸಿಗದೇ ಇದ್ರೆ ಕಷ್ಟ ಅಂತಾ ಕಾಲ್ ಮಾಡ್ತಿದ್ದೇನೆ. ನೀವು ಧರ್ಮಸ್ಥಳಕ್ಕೆ ಬಂದ ತಕ್ಷಣ ಕರೆ ಮಾಡಿ. ಗಾಡಿ ತಗೊಂಡು ಬರ್ತೇನೆ’ ಎಂದರು.

ಸ್ವಾಮಿ ಮತ್ತು ನಾನು ಪೂರ್ವನಿಶ್ಚಯ ಮಾಡಿಕೊಂಡಂತೆ ಸೋಮವಾರ ಸಂಜೆ ನಾನು ಬೈಸಿಕಲ್ ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇರಿಕೊಳ್ಳಬೇಕಿತ್ತು. ನಾಲ್ಕು ದಿನ ಮೊದಲೇ ಕುಕ್ಕೆಗೆ ಹೋಗುವ ಬಸ್ಸುಗಳ ಬಗ್ಗೆ ವಿಚಾರಿಸಿದ್ದೆ. ಯಲ್ಲಾಪುರದಿಂದ ಸಿದ್ದಾಪುರದ ಮೂಲಕ ಧರ್ಮಸ್ಥಳಕ್ಕೆ ನೇರವಾಗಿ ಹೋಗುವ ಬಸ್ ಇದ್ದ ಕಾರಣ ನನಗೆ ಇದೇ ಮಾರ್ಗವೇ ಸರಿ ಎನ್ನಿಸಿತ್ತು. ಸೋಮವಾರ ಬೆಳಿಗ್ಗೆ ಶಿರಸಿ ಹತ್ತಿರದ ಕಾನಸೂರಿನ ಹೈಸ್ಕೂಲಿಗೆ ಹೋಗುವ ನನ್ನ ಮಗನೂ ನನ್ನೊಟ್ಟಿಗೆ ಬಸ್ ಸ್ಟಾಂಡ್‍ಗೆ ಬಂದಿದ್ದ. ಅವನ ಬಸ್ ಮೊದಲು ಬಂದು, ಅದರಲ್ಲಿ ಅವನು ಹತ್ತಿ ಕೂತರೂ ನಂತರ ಬಂದ ನನ್ನ ಬಸ್ ಅದರಿಗಿಂತ ಮೊದಲು ಹೊರಟಾಗ ಕೈ ಬೀಸಿ ಟಾಟಾ ಮಾಡಿದ್ದ. ಅದೊಂಥರ ಮುದ ನನ್ನ ಮನಸ್ಸಿನಲ್ಲಿತ್ತು.

ಸಾಗರ ದಾಟಿ ಒಂದೈದು ಕಿಮೀ ಬಂದಾಗ ಯಾರೋ ಬಸ್ಸಿಗೆ ಕೈ ಅಡ್ಡ ಮಾಡಿದರು. ಅಲ್ಲಿ ಯಾವುದೇ ಸ್ಟಾಪ್ ಇಲ್ಲದಿದ್ದರೂ ಬಸ್ ನಿಲ್ಲಿಸಿ ಚಾಲಕ ಅವನನ್ನು ಹತ್ತಿಸಿಕೊಂಡದ್ದು ಬಹುತೇಕ ಎಲ್ಲರಿಗೂ ಅಚ್ಚರಿ ಹುಟ್ಟಿಸಿತು. ಎಕ್ಸಪ್ರೆಸ್ ಬಸ್‍ಗಳನ್ನು ನಡುದಾರಿಯಲ್ಲಿ ಕೈ ಮಾಡಿದರೆ ನಿಲ್ಲಿಸುವದಿಲ್ಲವಲ್ಲ. ಕೈ ಮಾಡಿದರೂ ನಿಲ್ಲಿಸದೇ ಹೋದ ಅನುಭವಗಳು ನಮಗೆ ಸಾಕಷ್ಟಾಗಿದ್ದವಲ್ಲ. ಎಲ್ಲೋ ಕೆಎಸಾರ್ಟಿಸಿ ಸಿಬ್ಬಂದಿಗಳೇ ಇರಬೇಕು ಅಂದುಕೊಂಡೆನೋ ಎಲ್ಲರೂ ಸುಮ್ಮನಿದ್ದರು. ಬಸ್ ಹತ್ತಿದ ವ್ಯಕ್ತಿ ಸೀದಾ ಮುಂದೆ ಬಂದು ಡ್ರೈವರ್ ಎಡಪಕ್ಕದ ಉದ್ದನೆಯ ಸೀಟಿನಲ್ಲಿ ಬಂದು ಕೂತದ್ದು ಕಂಡು ನನ್ನ ಯೋಚನೆ ಸರಿ ಅನ್ನಿಸಿತು. ಸ್ವಲ್ಪ ಹೊತ್ತಿಗೆ ಕಂಡಕ್ಟರ್ ಬಂದು ಅವನ ಬಳಿ ಟಿಕೇಟ್‍ಗೆ ಹಣ ಕೇಳಿದಾಗ ನನ್ನ ಯೋಚನಾಕ್ರಮ ಎಷ್ಟು ತಪ್ಪು ಅನ್ನಿಸತೊಡಗಿತು. ಬಸ್ ಯಾರು ಹತ್ತಲಿ, ಬಿಡಲಿ, ನನ್ನ ಪಾಡಿಗೆ ನಾನು ಇರುವದು ಬಿಟ್ಟು ಈ ಘಟನೆಗಳಿಗೆಲ್ಲ ಕಾರ್ಯಕಾರಣ ಹುಡುಕುತ್ತ ಹೋಗುತ್ತಿದ್ದೇನಲ್ಲ, ಅದೇ ನನ್ನ ದೊಡ್ಡ ತಪ್ಪು ಅನ್ನಿಸಿತು.

ಟಿಕೇಟಿಗೆ ಹಣ ಕೇಳಿದ್ದೇ ಆ ವ್ಯಕ್ತಿ ಏಕಾಏಕಿ ಕಂಡಕ್ಟರ್ ಮೇಲೆ ಹರಿಹಾಯತೊಡಗಿದ. ‘ ನಾ ಶಿಮೊಗ್ಗಕ್ಕೆ ಹೊರಟೇನ್ರೀ, ನನ್ನ ಹತ್ರ ದುಡ್ಡೇ ಇಲ್ಲ’ ಎಂದು ಅವಾಜ್ ಹಾಕತೊಡಗಿದ. ಸಾಮಾನ್ಯವಾಗಿ ಹಣವಿಲ್ಲದವರು ಬಸ್ ಹತ್ತಿದಾಗ ಕಂಡಕ್ಟರ್ ಬಳಿ ಗೋಗರೆಯುವದು ಸಾಮಾನ್ಯ ಅಂಥ ಸಂದರ್ಭದಲ್ಲಿ ಬಸ್‍ನಲ್ಲಿದ್ದ ಯಾರಾದರೂ ಅವರಿಗೆ ಹಣ ಕೊಟ್ಟು ಉಪಕರಿಸುವದೂ ಇದೆ.

ಆದರೆ ಈಗಿನ ಸ್ಥಿತಿ ತದ್ವಿರುದ್ಧ! ಟಿಕೇಟಿನ ಹಣ ಕೇಳಿದ ಕಂಡಕ್ಟರ್‍ಗೆ ಈ ಮನುಷ್ಯ ರೋಪ್ ಹಾಕತೊಡಗಿದ್ದ. ನನಗೆ ಇದೊಂದು ರಂಪ ಆಗುತ್ತದೆ ಎನ್ನುವದಂತೂ ಖಾತ್ರಿಯಾಯಿತು. ಕಂಡಕ್ಟರ್‍ನೂ ಜಿಗುಟೇ! ‘ಏ, ಬಸ್ ಹತ್ತೀದಿ, ರೊಕ್ಕ ಕೊಡು, ಟಿಕೇಟ್ ತೋಗೋ, ಮುಂದೆ ಚೆಕಿಂಗ್‍ನವರು ಬರ್ತಾರಾ, ನನ್ನ ಅಡ್ಡ ಹಾಕೀದಿ’ ಎಂದ. ‘ ನನ್ನ ಹತ್ರ ದುಡ್ಡೇ ಇಲ್ರಿ, ಹತ್ತಿಪ್ಪತ್ತ ರೂಪಾಯಿ ಅಷ್ಟೇ ಇರೋದು, ಅದು ಚಾ ಕುಡಿಯಕೆ ಬೇಕ್ರಿ’ ಅಂದ ಆ ವ್ಯಕ್ತಿ.

ನಾನು ಆ ವ್ಯಕ್ತಿಯನ್ನು ಸೀಟಿನಿಂದ ಎದ್ದು ನೋಡಿದೆ. ಮಾಸಲು ಜರ್ಕೀನ್ ತೊಟ್ಟ, ಅಷ್ಟೇನೂ ಧೃಡಕಾಯನಲ್ಲದ, ಕುರುಚಲು ಗಡ್ಡದ ಮುಖದಲ್ಲಿ ತುಸು ಕ್ರೋಧದ ಲಕ್ಷಣವಿದ್ದ ಮನುಷ್ಯ ಆತ. ಕಂಡಕ್ಟರನಿಗೂ, ಆತನಿಗೂ ರಭಸದ ವಾಗ್ವಾದ ಶುರುವಾಗಿತ್ತು. ಆತ ಕೊಡಲೊಲ್ಲ, ಈತ ಬಿಡಲೊಲ್ಲ. ಅಂತೂ ಕಿಸೆಯಿಂದ ಒಂದಿಷ್ಟು ಬಿಡಿ ನೋಟುಗಳನ್ನ ತೆಗೆದು ಬೈಯ್ದುಕೊಳ್ಳುತ್ತಲೇ ಕಂಡಕ್ಟರ್‍ಗೆ ಕೊಟ್ಟ. ಎಣಿಸಿಕೊಂಡ ಕಂಡಕ್ಟರ್ ‘ ಏ, ಐದು ರೂಪಾಯಿ ಕಮ್ಮಿ ಐತಲೇ, ಕೊಡು ‘ ಎಂದ. ತನ್ನ ಬಳಿಯಿದ್ದ ಒಂದಿಷ್ಟು ಬಿಡಿನೋಟುಗಳನ್ನ ಕಿಸೆಗೆ ಸೇರಿಸಿದ ಆತ ‘ ಆ ಐದ್ರೂಪಾಯಿ ನೀವೇ ಹಾಕ್ಕೊಳ್ಳ್ರೀ’ ಎಂದು ಕಂಡಕ್ಟರ್‍ಗೆ ಗಟ್ಟಿಯಾಗಿಯೇ ಮಾರುತ್ತರ ಕೊಟ್ಟ.

ನನಗೆ ನಗುಬಂತು, ನಕ್ಕುಬಿಟ್ಟೆ. ಬಸ್‍ನಲ್ಲಿದ್ದ ಹತ್ತಾರು ಪ್ರಯಾಣಿಕರು ಅರೆಕ್ಷಣ ನನ್ನತ್ತ ನೋಡಿದವರು ಪುನ: ಆ ವಿದ್ಯಮಾನವನ್ನು ಕಣ್ತುಂಬಿಕೊಳ್ಳತೊಡಗಿದರು. ಆ ಮಾತಿಗೆ ಕಂಡಕ್ಟರ್‍ನಿಗೆ  ಮೈಯೆಲ್ಲ ಉರಿದಿರಬೇಕು, ಯಾವನೋ ಪುಟಗೋಸಿ ಬಸ್ ಹತ್ತಿ, ಟಿಕೇಟಿಗೆ ಹಣ ನೀನೇ ಹಾಕು ಅಂತಾನಲ್ಲಾ ಎಂದು ಬ್ರಹ್ಮಾಂಡ ಕೋಪ ಬಂದಿತ್ತು. ಉತ್ತರ ಕರ್ನಾಟಕದ ತನ್ನದೇ ದೇಸಿ ಭಾಷೆಯಲ್ಲಿ ಆತನಿಗೊಂದಿಷ್ಟು ಮಂತ್ರಾಕ್ಷತೆ ಮಾಡಿ ತನ್ನ ಸ್ಥಾನಕ್ಕೆ ಹಿಂತಿರುಗಿದ. ಅಷ್ಟಾದ ನಂತರ ಬಸ್ ಏರಿದ ವ್ಯಕ್ತಿಯ ಬಣ್ಣ ಬಿಡತೊಡಗಿತ್ತು.

ವಾಸ್ತವವಾಗಿ ಆತ ಅರೆಬರೆ ಮಾನಸಿಕ ಅಸ್ವಸ್ಥ. ನೋಡಲು ನೀಟಾಗಿದ್ದರೂ ಆತನ ವರ್ತನೆಗಳು ವಿಚಿತ್ರವಾಗಿದ್ದವು. ಒಮ್ಮೊಮ್ಮೆ ಡ್ರೈವರ್‍ಗೆ ಸಲಹೆ ಕೊಡುತ್ತಿದ್ದ. ಅವನೊಂದಿಗೆ ಸಂಬಂಧವಿಲ್ಲದ ಏನೇನನ್ನೋ ಮಾತನಾಡುತ್ತಿದ್ದ. ಒಮ್ಮೆಯಂತೂ ‘ಏ, ಎಲ್ಲಿ ನೋಡಿ ಬಿಡ್ತೀಯೋ? ಸರಿ ಓಡ್ಸೋ’ ಎಂದು ಸಲಹೆ ನೀಡಿದಾಗ ಡ್ರೈವರ್ ‘ಸುಮ್ನೆ ಕೂತ್ಕ, ಇಲ್ಲಾಂದ್ರೆ ಒದ್ದು ಇಳಿಸಿಬಿಡ್ತೀನಿ’ ಎಂದು ಗದರಿಸಿದ ನಂತರ ಇಡೀ ಬಸ್ ತುಂಬ ಓಡಾಡುತ್ತ ಏನೇನೋ ಬಡಬಡಿಸುತ್ತಿದ್ದ. ಕಂಡಕ್ಟರ್ ಹತ್ತಿರ ಹೋಗಿ ಏನೋ ಹೇಳಿ ಬೈಸಿಕೊಂಡು ಬಂದ.

ನನಗೆ ಆತ ಒಬ್ಬ ಅರೆಬರೆ ದಾರ್ಶನಿಕನಂತೆ ಅನ್ನಿಸತೊಡಗಿದ. ನನ್ನನ್ನೂ ಸೇರಿದಂತೆ ಇಡೀ ಬಸ್‍ನಲ್ಲಿದ್ದವರಲ್ಲಿ ಆತನೇ ಸರಿಯಾಗಿದ್ದಾನೆ ಅನ್ನಿಸತೊಡಗಿತು. ನಾವೆಲ್ಲ ನಮ್ಮೊಳಗಿನ ನಿಜದ ಬದಲು ಬೇರೆ ವೇಷ ತೊಟ್ಟು, ಒಳಗಿನ ಕುರೂಪ ಮುಚ್ಚಿಟ್ಟು ಮನುಷ್ಯನೆಂದರೆ ಹೀಗಿರಬೇಕು ಎನ್ನುವ ಪುರಾತನ ನಂಬಿಕೆಯಂತೆ ಬದುಕುತ್ತಿದ್ದೇವಲ್ಲ. ಮನುಷ್ಯ ಈ ರೀತಿ ಇರಲೂ ಬಾರದೇಕೆ? ಆತನಿಗೆ ನಾವೆಲ್ಲ ಹೇಗೆ ಕಾಣುತ್ತಿರಬಹುದು? ಎಂದೆಲ್ಲ ಯೋಚನೆಗಳೂ ಬಂದವು. ಜೊತೆಯಲ್ಲೇ ಆತನ ಮಡದಿ, ಮಕ್ಕಳ ನೆನಪಾಯಿತು. ಅವರ ಯಾತನೆ, ಕಷ್ಟಗಳು ಊಹೆಯಾಗಿ ಕಾಡತೊಡಗುವ ಜೊತೆಗೆ ಈ ಮನುಷ್ಯ ಯಾಕೆ ಅಸ್ವಸ್ಥನಾಗಿರಬಹುದು ಅನ್ನಿಸಿತು. ಯಾಕೋ ನೋವಾಯಿತು. ಆ ಮನುಷ್ಯ ಕೊನೆಗೂ ಕಂಡಕ್ಟರನಿಗೆ ಐದು ರೂಪಾಯಿ ಕೊಡದೇ ಆಯನೂರಿನಲ್ಲಿ ಇಳಿದು ಕಂಡಕ್ಟರ್‍ಗೆ ಬೈಯುತ್ತಲೇ ಹೋದ.

ಅಷ್ಟರ ಮೊದಲೇ ಸಾಗರ ಬಸ್ ಸ್ಟಾಂಡಿನಲ್ಲಿ ಒಂದು ಪ್ರಹಸನ ನಡೆದಿತ್ತು. ನಾನು ಸಿದ್ದಾಪುರದಲ್ಲಿ ಬಸ್ ಹತ್ತಿದಾಗ ಕೂತದ್ದು ಓರ್ವ ಮುಸ್ಲಿಂ ವ್ಯಕ್ತಿಯ ಪಕ್ಕ. ಗೌರವಾನ್ವಿತನಾಗಿ ಕಾಣುತ್ತಿದ್ದ  ಅರವತ್ತರ ಸನಿಹದ ಆತ ಸಾಗರದಲ್ಲಿ ಬಸ್ ನಿಂತಾಗ ಇಳಿದುಹೋಗಿದ್ದರು. ಬಸ್ ಖಾಲಿಯಾಗಿದ್ದರಿಂದ ಅಲ್ಲಿಂದ  ನನಗೆ ಇಷ್ಟವಾದ ಸೀಟ್ ಹಿಡಿದು ಬೇರೆಡೆ ಕುಳಿತಿದ್ದೆ. ಬಸ್ ಸ್ಟಾಂಡ್ ಬಿಟ್ಟ ನಂತರ ಆ ವ್ಯಕ್ತಿಯ ಸೀಟ್ ಖಾಲಿಯಿದ್ದುದನ್ನು ಕಂಡು ಕಂಡಕ್ಟರ್‍ಗೆ ಹೇಳಿದೆ. ಆತ ಹಾಗೂ ಡ್ರೈವರ್ ಏನೇನೋ ಮಾತನಾಡಿಕೊಳ್ಳುತ್ತಲೇ ಮುಂದೆ ಸಾಗಿದ್ದರು.

ನಾನು ಮತ್ತೆ ಕೇಳಿದೆ. ‘ನೋಡಿ, ಅವರ ಬ್ಯಾಗ್ ಇಲ್ಲಿದೆ. ಅವರ ಶಾಲು ಅವರ ಸೀಟಿನ ಮೇಲಿದೆ. ಒಂದೈದು ನಿಮಿಷ ಯಾಕೆ ಕಾಯಬಾರದು? ಆಟೋ ಹಿಡ್ಕೊಂಡಾದ್ರೂ ಅವ್ರು ಬರ್ತಾರೆ’ ಎಂದೆ. ಅವರು ಯಾರೋ? ಏನೋ?. ಇಂಥ ಕಠೋರ ಅನುಭವಗಳು ನಾನು ಅನುಭವಿಸಿದ ಕಾರಣಕ್ಕೆ ಪರಿತಪಿಸುತ್ತಿದ್ದೆ. ‘ಅವರಿಗಾಗಿ ಕಾಯಲು ಸಾಧ್ಯವಿಲ್ಲ. ಶಿವಮೊಗ್ಗದಲ್ಲಿ ನಿಲ್ಲಿಸ್ತೇವಲ್ಲ, ಅಲ್ಲಿ ಬರ್ತಾರೆ’ ಎಂದು ಡ್ರೈವರ್, ಕಂಡಕ್ಟರ್ ತೀರ್ಮಾನ ತೆಗೆದುಕೊಂಡುಬಿಟ್ಟರು. ಒಂದು ಅರೆಘಳಿಗೆ ಕಾಯದೇ ಆ ಮನುಷ್ಯನನ್ನು ಅಲ್ಲಿ ಬಿಟ್ಟು ಬಂದ ಡ್ರೈವರ್ ಇಲ್ಲಿ ಈ ಅಸ್ವಸ್ಥನನ್ನು ಹತ್ತಿಸಿಕೊಂಡಿದ್ದ!

ಸಾಗರದಲ್ಲಿ ಕಾಯುವುದರ ಬದಲಾಗಿ ಶಿವಮೊಗ್ಗದಲ್ಲಿ ಕಾಯಬೇಕಾಯ್ತು! ಸಾಗರದ ಕಂಟ್ರೋಲರ್ ಬಳಿ ಫೋನ್ ಮಾಡಿಸಿ, ಖಾಸಗಿ ಬಸ್ಸಿನಲ್ಲಿ ಶಿವಮೊಗ್ಗ ತಲುಪಿ, ನಾವಿದ್ದ ಬಸ್ಸಿನತ್ತ ಓಡೋಡಿ ಬರುತ್ತಿದ್ದ ಆ ವ್ಯಕ್ತಿಯನ್ನು ಕಂಡು ನನಗೆ ಸಮಾಧಾನವಾಯಿತು.

ಹೆಚ್ಚೇನು ಪ್ರಯಾಣಿಕರಿಲ್ಲದ ನಮ್ಮ ಬಸ್‍ನಲ್ಲಿ ಮೂಡಿಗೆರೆ ದಾಟಿ ಸುಮಾರು ದೂರ ಬರುವವರೆಗೂ ಯಾವುದೇ ಪ್ರಹಸನಗಳು ನಡೆಯದೇ ಎಲ್ಲರೂ ತಮ್ಮ ಪಾಡಿಗೆ ತಾವಿದ್ದರು. ಅದ್ಯಾವುದೋ ಚಿಕ್ಕ ಊರಿನಲ್ಲಿ ಬಸ್ ತಡೆದು ಇಬ್ಬರು ಹತ್ತಿ ಬಂದು ನಮ್ಮ ಬಳಿಯಿದ್ದ ಟಿಕೇಟ್ ಗಳನ್ನು ಪರಿಶೀಲಿಸತೊಡಗಿದಾಗ ಇವರು ಚೆಕಿಂಗ್ ನವರು ಅಂತ ಮನದಟ್ಟಾಯಿತು. ಎಲ್ಲರ ಬಳಿ ಬಂದು ಚೆಕ್ ಮಾಡಿಕೊಂಡು ಹೋದ ಅವರಿಬ್ಬರೂ ಹಿಂದುಗಡೆ ಕಂಡಕ್ಟರ್ ಬಳಿ ಸಂಭಾಷಣೆ ನಡೆಸುತ್ತಿದ್ದರು. ಆ ಕಂಡಕ್ಟರ್‍ನೂ ಸ್ವಲ್ಪ ಒರಟ. ನಾಲಗೆಯ ಮೇಲೆ ಲಗಾಮು ಇಲ್ಲದ ಮನುಷ್ಯ. ಅವರಿಗೆ ಏನೋ ಅಂದಿರಬೇಕು. ಬಿರುಸಾದ ಧ್ವನಿಯಲ್ಲಿ ಚೆಕಿಂಗ್‍ಗೆ ಬಂದವರಲ್ಲೊಬ್ಬ ಜೋರುಮಾಡತೊಡಗಿದ್ದ.

ಮುಂದುಗಡೆ ಕೂತಿದ್ದ ನಾವೆಲ್ಲ ಅದೇನೆಂದು ಹಿಂದಕ್ಕೆ ತಿರುಗಿ ನೋಡತೊಡಗಿದೆವು. ಆ ಮಾತಿಗೆ ಕಂಡಕ್ಟರ್ ಏನೋ ಅಂದ. ಏಕಾಏಕಿ ಜೊತೆಗಿದ್ದವನಿಗೆ ಆ ಚೆಕಿಂಗ್ ಅಧಿಕಾರಿ ‘ರಿಪೋರ್ಟ ಶೀಟ್ ತೆಗಿ, ಬರೀ’ ಎಂದು ಆಜ್ಞಾಪಿಸತೊಡಗಿದ. ಆತ ಅದ್ಯಾವುದೋ ಫಾರ್ಮ ತೆಗೆಯುತ್ತಿದ್ದಂತೇ ಕಂಡಕ್ಟರ್ ‘ ಏ, ಬ್ಯಾಡ್ರೀ, ಕೈ ಮುಗಿತೇನಿ, ನಾ ಖುಷಾಲು ಮಾತಾಡೇನ್ರಿ’ ಎಂದೆಲ್ಲ ಗಳಹತೊಡಗಿದ. ‘ ಇಲ್ಲ, ಇಲ್ಲ. ಬರೆದೇ ಬರೀತೇನೆ’ ಎಂದು ಆತ ಕುಣಿಯುತ್ತಿದ್ದ. ‘ ಸಾಹೇಬ್ರ.., ನಾ ಏನ ತಪ್ಪ ಮಾಡೇನ್ರಿ, ರಿಪೋರ್ಟ ಬರೀಬ್ಯಾಡ್ರೀ’ ಎಂದು ಕಂಡಕ್ಟರ್ ರೋಧಿಸುವ ದ್ವನಿಯಲ್ಲಿ ಕೂಗುತ್ತಿರುವಂತೆಯೇ ಅದ್ಯಾವುದೋ ಊರಿನ ಬಸ್ ಸ್ಟಾಂಡ್ ಗೆ ನುಗ್ಗಿದ ಬಸ್ಸು ಅಲ್ಲಿ ನಿಂತಿತು.

ನಂತರ ಈ ನಾಟಕ ಅಲ್ಲಿನ ಕಂಟ್ರೋಲರ್ ರೂಮಿಗೆ ಸ್ಥಳಾಂತರವಾಯಿತು. ಕಂಡಕ್ಟರ್‍ನ ಕರುಣಾಜನಕವಾದ ಸ್ವರ ಬಸ್ಸಿನೊಳಗಿದ್ದ ನಮ್ಮನ್ನೂ ತಟ್ಟತೊಡಗಿತು. ಏನಾಗುತ್ತಿದೆ? ಎನ್ನುವ ಕುತೂಹಲದಿಂದ ಇಳಿದುಹೋದೆ. ಚಿಕ್ಕದಾಗಿದ್ದ ಆ ಬಸ್ ನಿಲ್ದಾಣದಲ್ಲಿದ್ದ ನಾಲ್ಕಾರು ವಯಸ್ಕರು, ಒಂದಿಬ್ಬರು ಕಾಲೇಜು ಹುಡುಗಿಯರು ಅತ್ತ ನೋಡುತ್ತ ಮುಸಿ, ಮುಸಿ ನಗುತ್ತಿದ್ದರು. ನಾನು ನಿಧಾನಕ್ಕೆ ಹೋಗಿ ಆ ಆಫೀಸ್‍ನೊಳಕ್ಕೆ ಹಣಕಿದೆ. ಚೇರ್‍ನಲ್ಲಿ ಕೂತಿದ್ದ ಆ ಅಧಿಕಾರಿ ಪೆನ್ನು ತೆಗೆದು ಫಾರ್ಮ ಮೇಲೆ ಬರೆಯಲು ಮುಂದಾಗುತ್ತಿದ್ದನೇ ಹೊರತು ಒಂದಕ್ಷರವನ್ನೂ ಬರೆದಿರಲಿಲ್ಲ. ನನಗೆ ಈ ಕಂಡಕ್ಟರ್‍ನ ಆರ್ತಸ್ವರ, ಅಳುಬುರುಕ ಮಾತುಗಳನ್ನು ಕೇಳಿ ಎಲಾ ಫಾಕಡಾ! ಅನ್ನಿಸಿತು.

ಏನಾದರೂ ಗಿಟ್ಟಿಸಬೇಕು ಎಂದು ರೋಷಾವೇಷದಿಂದ ಹಾರಾಡುತ್ತಿದ್ದ ಆ ಚೆಕಿಂಗ್ ಆಫೀಸರನಿಗೆ ಈತ ಅತ್ತು, ಕರೆಯುತ್ತಲೇ ಖಾಲಿ ಕೈ ತೋರಿಸುತ್ತಿದ್ದಂತೇ ಅನ್ನಿಸಿತು. ನಾನು ಬೆಳಿಗ್ಗೆಯಿಂದ ನೋಡುತ್ತಿದ್ದಂತೇ ಆ ಕಂಡಕ್ಟರ್ ಬಹಳಷ್ಟು ಸಾಚಾ ಆಗಿಯೂ, ಪುಕ್ಕಲನಾಗಿಯೂ ಕಂಡಿರಲಿಲ್ಲ. ಕೊಡಬೇಕಾದ ಚಿಲ್ಲರೆ ಕೇಳಿದವರಿಗೆ ದಬಾಯಿಸುತ್ತಲೇ ಬಂದಿದ್ದ. ನನಗೂ 6 ರೂ. ಚಿಲ್ಲರೆ ಕೊಡುವುದಿತ್ತು, ಅದನ್ನು ಧರ್ಮಸ್ಥಳದಲ್ಲಿ ಇಳಿದಾಗ ಕೊಡುತ್ತೇನೆ ಎಂದಿದ್ದರಿಂದ ನಾನು ಕೇಳಿರಲಿಲ್ಲ. ಯಾವತ್ತಿನಂತೆ ಇವತ್ತೂ ಆ ಚಿಲ್ಲರೆ ಕೈ ಬಿಟ್ಟ ತೀರ್ಮಾನಕ್ಕೆ ಬಂದಿದ್ದೆ. ಯಾರಿಗೋ ಟಿಕೇಟ್ ಕೊಡದೇಯೋ, ಮತ್ತೆನೋ ಲಫಡಾ ಮಾಡಿರಬಹುದು, ಅದನ್ನು ಹಿಡಿದ ಚೆಕಿಂಗ್‍ನವರು ಇವನಿಂದ ಪೀಕಲು ಕಸರತ್ತು ಮಾಡುತ್ತಿರಬಹುದು ಅನ್ನಿಸಿ ಹಿಂದಕ್ಕೆ ಬಂದೆ.

ಇವರ ಮಾತುಕಥೆ ಸದ್ಯಕ್ಕೆ ಮುಗಿಯುವದಿಲ್ಲ ಎಂದನ್ನಿಸಿರಬೇಕು. ಡ್ರೈವರ್ ಹೋಗಿ ಏನೋ ಹೇಳಿದ. ಆ ಅಧಿಕಾರಿ ಅದೇನನ್ನೋ ಬರೆದು ಕೊಟ್ಟ. ಅದನ್ನು ಹಿಡಿದುಕೊಂಡು ಕೊಂಡು ಬಂದ ಡ್ರೈವರ್ ‘ಏನೂ ಬರೆದಿಲ್ರೀ, ಮೇಲಿನವರಿಗೆ ಸ್ಪಷ್ಟನೆ ಕೊಡಲು ಬರೆದಿದ್ದಾರೆ. ಏನಾದ್ರೂ ಒಂದೈನ್ನೂರು ದಂಡ ಆಗಬಹುದು’ ಎನ್ನುವ ಶರಾ ಹೇಳಿ ‘ ಇವನ್ನ ನೋಡಿದ್ರೆ ಡಿಸ್‍ಮಿಸ್ ಆಗೋಥರ ಒದ್ದಾಡ್ತಾನೆ. ಕಳ್ಳ’ ಎಂದು ಬೈಯ್ದ. ಬಸ್ ಹೊರಟು ಅದೆಷ್ಟೋ ಹೊತ್ತಿನ ತನಕವೂ ಆ ಕಂಡಕ್ಟರ್ ಕೂತಲ್ಲೇ ಏನೇನೋ ಕೊಗರುತ್ತಲೇ ಇದ್ದ.

ಮುಂದೆ ಕುತೂಹಲ, ಬೆರಗು, ಭಯ, ಸುಖ ಹುಟ್ಟಿಸುವ ರೌದ್ರರಮಣೀಯ ಚಾರ್ಮಾಡಿ ಘಾಟಿ ಶುರುವಾಗಿದ್ದರಿಂದ ನಾನು ಕಣ್ಣು ತೆರೆದು ಕೂತೆ. ಮತ್ತೆ ಈ ಲೋಕಕ್ಕೆ ಬಂದದ್ದು ಘಾಟಿ ಮುಗಿದು ಊರುಗಳು ಕಾಣತೊಡಗಿದಾಗಲೇ.

ನನ್ನ ಬಳಿ ಇದ್ದವೆಲ್ಲ 2 ಸಾವಿರ ರೂ.ಗಳ ನೋಟುಗಳಾಗಿದ್ದವು. ಮೋದಿಜೀ ಕೃಪೆಯಿಂದ ಚಿಲ್ಲರೆ ಮನುಷ್ಯರಾಗಿದ್ದ ನನ್ನಂಥವರೆಲ್ಲ ಏಕಾಏಕಿ ಇಡೀ ನೋಟಿನ ಆಢ್ಯಸ್ಥರಾಗಿಬಿಟ್ಟಿದ್ದೆವು. ಚಿಲ್ಲರೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದ ನಾನು ಕೊನೆಯ ಸ್ಟಾಪಾದ ಧರ್ಮಸ್ಥಳದಲ್ಲಿ ಬಸ್ ನಿಂತಾಗ ಕಂಡಕ್ಟರ್ ಬಳಿ ಚಿಲ್ಲರೆ ಕೇಳಿ 2 ಸಾವಿರ ರೂ.ನೋಟು ಕೊಟ್ಟೆ. ಬ್ಯಾಗಿನಲ್ಲಿದ್ದ ನೋಟುಗಳನ್ನು ಎಣಿಸುತ್ತಲೇ ಚೆಕಿಂಗ್ ಅಧಿಕಾರಿಯ ಜೊತೆಗಿನ ವಾಗ್ವಾದದ ಬಗ್ಗೆ ಹೇಳಿಕೊಳ್ಳುತ್ತ ‘ ಐವತ್ತು ರೂಪಾಯಿ ಕಡಿಮೆ ಕೊಡ್ತೇನ್ರಿ. ಆ ಬಡ್ಡೀಮಗನ ಮುಖಕ್ಕೆ ಒಂದಿಷ್ಟು ಹಾಕ್ದೆನ್ರೀ. ಬೇಜಾರ ಮಾಡ್ಕೊಬ್ಯಾಡ್ರೀ’ ಎಂದು ಚಿಲ್ಲರೆ ನೋಟುಗಳನ್ನ ಕೊಟ್ಟ. ಭಾಪರೇ! ಅನ್ನಿಸಿತು. ಅವನಿಗೆ ಕೊಟ್ಟನೋ, ಬಿಟ್ಟನೋ? ಆದರೆ ಅವನಿಗೆ ಕೊಟ್ಟದ್ದರ ಮೊತ್ತದ ಒಂದಷ್ಟು ಪಾಲನ್ನ ನನ್ನಿಂದ ವಂತಿಗೆಯಾಗಿ ಪಡೆದಿದ್ದ! ಜಗಳವಾಡಬೇಕು ಎನ್ನುವ ಮನಸ್ಸಾಯಿತು. ಸುಮಾರು ಎಂಟು ತಾಸುಗಳ ಪ್ರಯಾಣ, ಮುಂದೆ ಹೋಗುವ ತರಾತುರಿ, ಡ್ರೈವರ್‍ನ ಗಡಬಿಡಿಗಳ ನಡುವೆ ಯಾಕೋ ಸುಸ್ತೆನ್ನಿಸಿ ಐವತ್ತರ ಜೊತೆಗೆ ನನಗೆ ಬರಬೇಕಿದ್ದ 6 ರೂಪಾಯಿಯನ್ನೂ ಆ ವಂತಿಗೆಯ ಲೆಕ್ಕಕ್ಕೆ ಸೇರಿಸಿ ಮುಂದೆ ಸಾಗಿದ್ದೆ.

ಧರ್ಮಸ್ಥಳದಲ್ಲಿ ಇಳಿದು ಸ್ವಾಮಿಗೆ ಕಾಲ್ ಮಾಡಿದೆ. ಸಿಗಲಿಲ್ಲ. ಮತ್ತೈದು ನಿಮಿಷ ಬಿಟ್ಟು ಕರೆ ಮಾಡಿದ ಆತ ‘ ನಮ್ಮ ಪಾಯಿಂಟ್ ಬದಲಾಗಿದೆ; ಕುಕ್ಕೆ ಬದಲು ಸುಳ್ಯದಲ್ಲಿ ಹಾಲ್ಟ್ ಮಾಡೋದು ಅಂತಾ ತೀರ್ಮಾನಿಸಿದೀವಿ. ನೀವು ಕುಕ್ಕೆಗೆ ಬಂದ್ರೆ ಸುಳ್ಯಕ್ಕೆ ಸಾಕಷ್ಟು ಬಸ್ಸುಗಳಿವೆಯಂತೆ, ಅಲ್ಲಿಗೆ ಬಂದು ಸುಳ್ಯಕ್ಕೆ ಬನ್ನಿ’ ಎಂದರು.

ನಾನು ಅಲ್ಲೇ ಯೋಚಿಸುತ್ತ ನಿಂತೆ. ‘ಸ್ವಾಮಿಗೆ ನಾನು ಬರೋದು ಇಷ್ಟ ಇಲ್ಲವಾಗಿತ್ತಾ? ನಾನೇ ಮುಂದಾಗಿ ಬಂದದ್ದು ಅವರಿಗೆ ಬೇಸರ ತಂದಿದೆಯಾ? ಇಲ್ದೇ ಇದ್ರೆ ಈವರೆಗೆ ಹೇಳದವರು ಇಲ್ಲಿ ಬಂದು ಇಳಿದ ನಂತರ ಹೇಳ್ತಾರೆ ಅಂದ್ರೆ ಒಂದಿಷ್ಟು ಸತಾಯಿಸೋಣ ಅನ್ನುವದಾ? ಅವರಿಗೂ ಗೊತ್ತಿದೆ. ಧರ್ಮಸ್ಥಳಕ್ಕೆ ಬಾರದೇ ಉಜಿರೆಯಲ್ಲಿ ನಾನಿದ್ದರೂ ಸಾಕಿತ್ತು. ಇಲ್ಲಿ ತನಕ ಬರುವ ಅಗತ್ಯವೇ ಇರಲಿಲ್ಲ. ಬೇಕೆಂದೇ ಇಲ್ಲಿಗೆ ಕರೆಸಿ ಶ್ರೀ ಮಂಜುನಾಥನ ದರ್ಶನ ಮಾಡಿಸುವ ಪ್ಲಾನಾ? ಎಂದೆಲ್ಲ ಯೋಚನೆಗಳು ಬಂದವು.

ನನಗೂ ಗೊತ್ತಿರುವಂತೇ ನನ್ನಲ್ಲಿ ಹಲವು ವೈಪರೀತ್ಯಗಳಿವೆ. ಕೆಲವೊಮ್ಮೆ ಉತ್ಪ್ರೇಕ್ಷಿತವಾಗಿ, ಕೆಲವೊಮ್ಮೆ ಅಸಹಜವಾಗಿ, ಇನ್ನೆನೋ ಎಲ್ಲ ಯೋಚಿಸಿಬಿಡುತ್ತೇನೆ. ನಂತರ ಸತ್ಯ ತಿಳಿದಾಗ ಛೇ ಎಂದು ನೊಂದುಕೊಳ್ಳುತ್ತೇನೆ.

ಆದರೆ ಈಗ ವಾಪಸ್ಸು ಉಜಿರೆಗೆ ಹೋಗಿ, ಅಲ್ಲಿಂದ ಸುಳ್ಯಕ್ಕೆ ಹೋಗಬೇಕು. ಕನಿಷ್ಠವೆಂದರೂ 60-70 ಕಿಲೋಮೀಟರ್ ಹೋಗಬೇಕು. ಈಗಲೇ ಸಂಜೆ ಆರೂವರೆ. ಸುಳ್ಯಕ್ಕೆ ಹೋಗುವಷ್ಟರಲ್ಲಿ ಸ್ವಾಮಿಯವರ ಹಾಲ್ಟ್ ಪ್ಲೇಸ್ ಬದಲಾದರೆ? ಎನ್ನಿಸಿತು. ‘ಇರಲಿ, ನೋಡೋಣ’ ಎಂದು ನಿರ್ಧರಿಸಿ ಹತ್ತಿರದಲ್ಲಿ ನಿಂತಿದ್ದ ಬಸ್ಸೊಂದರ ಡ್ರೈವರ್ ಬಳಿ ಸುಳ್ಯಕ್ಕೆ ಹೋಗುವ ಬಗ್ಗೆ ಕೇಳಿದೆ. ‘ಸಾರ್, ನೀವು ಕುಕ್ಕೆಗೆ ಹೋದ್ರೆ ಬಸ್ ಇದ್ರೆ ಇತ್ತು, ಇಲ್ಲಾಂದ್ರೆ ಇಲ್ಲಾ, ನಮ್ಮ ಬಸ್ಸು ಪುತ್ತೂರಿಗೆ ಹೋಗುತ್ತೆ, ಅಲ್ಲಿಂದ ಅರ್ಧ ತಾಸಿಗೊಂದು ಬಸ್ಸಿದೆ’ ಎಂದ. ಏನಾದರಾಗಲಿ ಅಂತ ಹತ್ತಿ ಕೂತೆ.

ನನಗೆ ಅಲೆಮಾರಿತನ ಹೊಸತೇನಲ್ಲ. ಭಾಷೆ, ಧರ್ಮ, ಪ್ರದೇಶ ಯಾವುದರ ಹಂಗಿಲ್ಲದೇ ಅಲೆದಾಡಿದವ. ಮರಾಠಿ ಭಾಷೆ ಬಾರದಿದ್ದರೂ  ಸಾವಂತವಾಡಿಯಿಂದ ರತ್ನಗಿರಿವರೆಗೂ, ಅಮ್ಮನ ಮಾತೃಭಾಷೆ ಮಲೆಯಾಳಿ ಬಾರದಿದ್ದರೂ ಕೇರಳದಲ್ಲೂ, ಕೊಂಕಣಿ ಬಾರದಿದ್ದರೂ ಗೋವಾದಲ್ಲೂ ಹಲವು ಬಾರಿ ಒಬ್ಬಂಟಿಯಾಗಿ ಓಡಾಡಿದ್ದೆ.

ಎಲ್ಲೆಂದರಲ್ಲಿ ಇರಲೂ ಸಿದ್ಧನಾದವ. ಹಾಗಾಗಿ ಏನೂ ತಲೆಬಿಸಿ ಮಾಡಿಕೊಳ್ಳದೇ ಆರಾಮಾಗಿ, ಕತ್ತಲೆಯಲ್ಲಿ ಹೊರಗಿನದನ್ನು ಏನೂ ನೋಡಲಾಗದೇ, ಕಣ್ಣುಮುಚ್ಚಿ ಬೆಳಗಿನಿಂದ ಅನುಭವಕ್ಕೆ ಬಂದದ್ದನ್ನ ನೆನಪಿಸಿಕೊಳ್ಳುತ್ತ ಕೂತೆ. ಪುತ್ತೂರು ಬಸ್ ನಿಲ್ದಾಣಕ್ಕೆ ಬಂದದ್ದೇ ನಾನು ಬಂದ ಬಸ್ಸಿನ ಡ್ರೈವರ್ ದೊಡ್ಡದಾಗಿ ಹಾರ್ನ್ ಮಾಡಿ, ಅದಾಗಲೇ ಮುಂದೆ ಹೋಗುತ್ತಿದ್ದ ಬಸ್ಸಿಗೆ ಸಿಗ್ನಲ್ ಕೊಟ್ಟ. ‘ಸಾರ್, ಸುಳ್ಯ ಬಸ್ ಹೋಗ್ತಿದೆ, ನಿಲ್ಸೀದಿನಿ. ಹೋಗಿ’ ಅಂದ. ಬ್ಯಾಗು ಎತ್ತಿಕೊಳ್ಳುತ್ತಲೇ ಆತನಿಗೊಂದು ಕೃತಜ್ಞತೆ ಹೇಳಿ, ಓಡುತ್ತ ಬಂದು ಸುಳ್ಯದ ಬಸ್ ಹತ್ತಿದ್ದೆ.

ಸುಮಾರು 30 ವರ್ಷಗಳ ಹಿಂದಿನ ಒಂದು ಸಂದರ್ಭ ಆಗಾಗ್ಗೆ ಆಗುವಂತೆ ಆಗಲೂ ನೆನಪಾಗಿತ್ತು. ಮೂಲತ: ನನ್ನ ಅಮ್ಮನ ತವರು ಕೇರಳ; ಪೈಯನ್ನೂರು ಸಮೀಪದ ತಾಯ್ನೇರಿ. ನಾವು ಅಜ್ಜಿಯ ಮನೆಗೆ ಹೋಗಿದ್ದೇ ಕೆಲವು ಬಾರಿ ಮಾತ್ರ. ಯಾಕೆಂದರೆ ಆ ದಿನಗಳಲ್ಲಿ ಅಷ್ಟು ದೂರದ ಪ್ರಯಾಣ ಮಾಡಲು ಹಲವು ಸಮಸ್ಯೆಗಳಿದ್ದವು. ಮುಖ್ಯವಾಗಿ ಆರ್ಥಿಕ ತೊಂದರೆಯೂ ಇತ್ತು. ನನ್ನ 10ರಿಂದ 17 ವರ್ಷದ ವಯಸ್ಸಿನ ಅವಧಿಯಲ್ಲಿ ಹಾಗೇ ನಾಲ್ಕಾರು ಬಾರಿ ಹೋಗಿದ್ದಾಗ ಅಜ್ಜಿ ಮನೆಯಲ್ಲಿ ಒಬ್ಬ ಹೆಣ್ಣುಮಗಳು ನನ್ನ ಮತ್ತು ನನ್ನ ಅಕ್ಕನನ್ನ ಆಕರ್ಷಿಸಿದ್ದಳು. ಅವಳು ನನ್ನ ಸೋದರ ಮಾವನ ಮಗಳು; ಹೆಸರು ತಂಗಮಣಿ ಎಂದು ಅಮ್ಮ ಹೇಳಿದ್ದಳು. ನಮಗಿಂತ ಸಾಕಷ್ಟು ದೊಡ್ಡವಳಾದ ಆಕೆ ನಮ್ಮನ್ನು ಭಾಷೆ ಬಾರದಿದ್ದರೂ ತುಂಬ ಪ್ರೀತಿಯಿಂದ ಕಂಡಿದ್ದಳು. ನಂತರ ಅಜ್ಜಿ ತೀರಿ ಹೋದ ನಂತರ ಅಲ್ಲಿನ ಸಂಪರ್ಕವೇ ಬಿಟ್ಟುಹೋಗಿತ್ತು.

ನಾವು ದೊಡ್ಡವರಾಗುತ್ತ ಬಂದಂರೂ ನಮ್ಮ ಮನಸ್ಸಿನಿಂದ ಆ ನೆನಪುಗಳು ಮಾಸಲೇ ಇಲ್ಲ; ನಮ್ಮ ಸ್ಮೃತಿಕೋಶದೊಳಗೆ ಅದು ಜೀವ ಹಿಡಿದುಕೊಂಡು ಇತ್ತೆಂದು ಕಾಣುತ್ತದೆ. ನನ್ನ ಅಜ್ಜಿಯ ಊರಾದ ತಾಯ್ನೆರಿಯ ಪಂಡಿತರ ಕುಟುಂಬವೊಂದು ನಮ್ಮೂರಿನಲ್ಲೇ ಇತ್ತು. ಆ ಕುಟುಂಬದ ಹಿರಿಯರೊಬ್ಬರು ನನ್ನ ತಂದೆಗೆ ಅವರೂರಿನ ಸಂಬಂಧ ಮಾಡಿಸಿದ್ದರಂತೆ. ಆ ಹಿರಿಯರೆಲ್ಲ ಬದುಕಿರದಿದ್ದರೂ ಕಿರಿಯರು ತಮ್ಮ ಊರಿಗೆ ಹೋಗುತ್ತ, ಬರುತ್ತ ನಿಕಟವಾದ ಸಂಪರ್ಕ ಇಟ್ಟುಕೊಂಡಿದ್ದರು. ನನ್ನ ತಂದೆ ದೂರದ ಕೇರಳದ ಹುಡುಗಿಯೊಬ್ಬಳನ್ನು ವಿವಾಹವಾದ ಕುರಿತು ಬರೆದರೇ ಒಂದು ಕಾದಂಬರಿಯಾದೀತು! ನನ್ನ ಅಕ್ಕಂದಿರು ಪಂಡಿತರ ಕುಟುಂಬದವರು ಯಾರು ಸಿಕ್ಕಿದರೂ ಅಜ್ಜಿ ಮನೆ ಕುರಿತು ಕೇಳುತ್ತಲೇ ಇರುತ್ತಿದ್ದರಂತೆ.

ಒಮ್ಮೆ ಅವರೊಂದು ಸುದ್ದಿ ಕೊಟ್ಟರು. ತಂಗಮಣಿಗೆ ಮದುವೆಯಾಗಿದೆ; ಆಕೆಯನ್ನು ಬಂಟ್ವಾಳದ ಸಮೀಪದ ಕಬಕ ಎನ್ನುವಲ್ಲಿನ ನಾರಾಯಣ ಭಟ್ಟರೆನ್ನುವವರಿಗೆ ಕೊಟ್ಟು ಮದುವೆಮಾಡಿದ್ದಾರೆ ಎಂದು. ನಮಗೆಲ್ಲ ತುಂಬ ಖುಷಿಯಾದರೂ ಮರುಕ್ಷಣ ಬೇಸರವೆನ್ನಿಸಿತು. ಬಂಟ್ವಾಳ ನಾವು ಕೇಳಿ ಗೊತ್ತಿರುವ ಊರೇ ಹೊರತು ನೋಡಿದ ಊರಲ್ಲ. ರಾಜ್ಯದ ಭೂಪಟ ಬಿಡಿಸಿ ನೋಡಿದರೆ ದೂರದ ಮಂಗಳೂರಿನ ಬಳಿಯ ಊರು. ಸರಿಯಾಗಿ ತಾಲೂಕನ್ನೇ ನೋಡಿರದ ನಾವು ಆ ಬಂಟ್ವಾಳದಲ್ಲಿ ಆಕೆಯನ್ನು ಅರಸುವದಾದರೂ ಹೇಗೆ?

ನನ್ನ ಚಿಕ್ಕಪ್ಪನ ಮಗ ಆಗ ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿದ್ದ. ಆ ಕಡೆಗೆ ಹೋಗುತ್ತಿದ್ದ ಆತನ ಬಳಿ ಅಲ್ಲೆಲ್ಲಾದರೂ ಕೇಳಿ ನೋಡು ಎಂದು ಹೇಳಿದ್ದೆವು. ಆತ ಕೂಡ ಆ ಕಡೆ ಹೋದಾಗ ಅದರ ಬಗ್ಗೆ ಪ್ರಾಮಾಣಿಕವಾಗಿ ವಿಚಾರಿಸಿದ್ದರೂ ಆತನಿಗೆ ಪತ್ತೆಯಾಗಿರಲಿಲ್ಲ. ಆದರೆ ಕಬಕ ಎನ್ನುವದು ಬಂಟ್ವಾಳದ ಸಮೀಪವಿರದೇ ಪುತ್ತೂರಿನ ಹತ್ತಿರವಿದೆಯೆಂಬ ಮಾಹಿತಿಯನ್ನು ಕೊಟ್ಟಿದ್ದ.

ತಂಗಮಣಿಯನ್ನು ಅರಸುವ ನಮ್ಮ ಕ್ರಿಯೆ ಉಳಿದವರಿಗೆ ಸಾಮಾನ್ಯವಾಗಿ ಕಾಣಬಹುದು. ಆದರೆ ಕರುಳಬಳ್ಳಿಯ ಕುಡಿಯೊಂದು ಹೇಗೆ ನಮ್ಮನ್ನು ಕಾಡುತ್ತದೆ ಎನ್ನುವದು ಅನುಭವಿಸಿದವರಿಗೆ ಮಾತ್ರ ಗ್ರಾಹ್ಯವಾಗಲು ಸಾಧ್ಯ. ಅನಗತ್ಯವಾದರೂ ಈ ಪುರಾಣವನ್ನು ಯಾಕೆ ಹೇಳುತ್ತಿದ್ದೇನೆಂದರೆ ಈ ಸಂದರ್ಭ ನನ್ನ ಮುಂದಿನ ಬದುಕಿನಲ್ಲಿ ಅಪಾರ ಪರಿಣಾಮವನ್ನ ಉಂಟುಮಾಡಿದ ಕಾರಣಕ್ಕೆ. ಬದುಕಿನಲ್ಲಿ ಶೋಧನೆಯ ಗುಣ, ಹೊಸತನ್ನು ಅರಸುವ ಕಾಂಕ್ಷೆ, ರಿಸ್ಕ್ ತೆಗೆದುಕೊಳ್ಳುವ ಜಿಗುಟುತನ ಅಲ್ಪಸ್ವಲ್ಪವಾದರೂ ನನ್ನಲ್ಲಿ ಇದ್ದಿದ್ದಾದರೆ ಈ ಅನುಭವದಿಂದ.

ಅದಾಗಿ ನಾಲ್ಕಾರು ವರ್ಷಗಳ ನಂತರ ನನಗೆ ಅವಕಾಶವೊಂದು ದೊರಕಿತು. ಅದು ನನ್ನನ್ನು ಎಲ್ಲಿಗೆ ಕೊಂಡೊಯ್ಯಲಿದೆ ಎನ್ನುವದು ಆಗ ನನಗೆ ತಿಳಿಯುವಂತಿರಲಿಲ್ಲ. ಆ ಥರದ ನಿಗೂಢತೆ ಮತ್ತು ಅನಿರೀಕ್ಷಿತತೆ ಇರುವ ಕಾರಣಕ್ಕೆ ಅಲ್ಲವೇ ಬದುಕು ಎನ್ನುವದು ನಮ್ಮೆಲ್ಲರನ್ನೂ ಮೀರಿದ್ದು ಅನ್ನಿಸುವದು. ‘ಅಡಿಕೆ ಪತ್ರಿಕೆ’ಯಲ್ಲಿ ಬಂದ ವಿಷಯವೊಂದನ್ನು ಓದಿದ ನಾನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಉಜಿರೆಯ ಸಿದ್ದವನದಲ್ಲಿ ನಡೆಸುವ ಕೃಷಿ ತರಬೇತಿ ಶಿಬಿರವೊಂದಕ್ಕೆ ಅರ್ಜಿ ಗುಜರಾಯಿಸಿದ್ದೆ.

ಮೂಲತ: ಕೃಷಿಯಲ್ಲಿ ಆಸಕ್ತಿ ಇದ್ದ ನಾನು ಆ ಅರ್ಜಿಯನ್ನು ಅದೊಂದೇ ಕಾರಣಕ್ಕೆ ಗುಜರಾಯಿಸಿರಲಿಲ್ಲ. ತಂದೆಯವರಿಗೆ ವಯಸ್ಸಾದ ಕಾರಣ ನಮ್ಮ ತೋಟದ ನಿಗಾ ಕಡಿಮೆಯಾಗಿತ್ತು. ಅಡಿಕೆ ದರ ತೀರಾ ಕಡಿಮೆಯಿದ್ದುದಕ್ಕೆ ಹೆಚ್ಚಿನ ಆಳುಕಾಳು ತೆಗೆದುಕೊಂಡು ಸೊಪ್ಪು, ಗೊಬ್ಬರ ಎಂದು ಕೃಷಿ ಮಾಡಿಸುವುದೂ ಕಷ್ಟವಾಗಿತ್ತು. ಮೊನ್ನೆ ಯಾತಕ್ಕೋ ಸುಮಾರು 30 ವರ್ಷ ಹಿಂದಿನ ನಮ್ಮ ವ್ಯವಹಾರವಿದ್ದ ಸೊಸೈಟಿ ಪಾಸ್ ಬುಕ್ ನೋಡುತ್ತಿದ್ದೆ. ಅಡಕೆ ಕ್ವಿಂಟಲ್‍ಗೆ 300 ರೂ.ಗಿಂತ ಕಡಿಮೆಯಿತ್ತು. ತೋಟದ ಕೆಲಸ ಕಡಿಮೆಯಾಗಿದ್ದಕ್ಕೆ ಆದಾಯವೂ ಕಡಿಮೆಯಾಗುತ್ತಿತ್ತು.

ನನಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯಬೇಕು ಎನ್ನುವ ಹಂಬಲ. ಅದೇ ವೇಳೆ ಪುಕೋವುಕಾನ ಸಹಜ ಕೃಷಿ ಕುರಿತಾಗಿ ಪೂರ್ಣಚಂದ್ರ ತೇಜಸ್ವಿ ಬರೆದದ್ದನ್ನು ಓದಿಕೊಂಡಿದ್ದರಿಂದ ನನ್ನ ನಿರೀಕ್ಷೆ ಸಾಧ್ಯವಾಗಬಹುದು ಎನ್ನುವ ವಿಶ್ವಾಸ ಬಂದಿತ್ತು. ತೇಜಸ್ವಿ ಯಾಲಕ್ಕಿ ಕೃಷಿ ಬಗ್ಗೆ ಬರೆದ ಲೇಖನ ಓದಿ ಸೀದಾ ಮೂಡಿಗೆರೆಯ ಅವರ ತೋಟಕ್ಕೆ ಹೋಗಿ ಭೇಟಿಯಾಗಿದ್ದೆ. ಯಾಲಕ್ಕಿ ಬಗ್ಗೆ ಕೇಳಲು ಅಷ್ಟು ದೂರದಿಂದ ಇಲ್ಲಿವರೆಗೆ ಬಂದ್ರಾ? ಎಂದು ಅರ್ಧ ಆಶ್ಚರ್ಯ, ಇನ್ನರ್ಧ ಬೈಯುವ ದಾಟಿಯಲ್ಲಿ ಮಾತನಾಡಿಸಿ ಅದೇನ್ರಿ, ತೋಟದಲ್ಲಿ ಬೀಸಾಕ್ರೀ, ತಾನಾಗೇ ಬೆಳೆಯತ್ತೆ’ ಎಂದು ಸಾಕಷ್ಟು ವಿವರಿಸಿದ್ದರು.

ಎಲ್ಲೇ ಎಸೆದರೂ ಬೇರೂರಿ ಬೆಳೆಯುವ ಯಾಲಕ್ಕಿ ನನಗೆ ಅಚ್ಚರಿ ತಂದಿತ್ತು. ಮುಂದೆ ನನ್ನ ಯಾಲಕ್ಕಿ ಬೆಳೆ ಬದುಕಿನ ವಿಫಲ ಪ್ರಯೋಗಗಳಲ್ಲಿ ಒಂದಾದರೂ ತೇಜಸ್ವಿಯವರ ಸಖ್ಯವನ್ನಂತೂ ತಂದುಕೊಟ್ಟಿತು. ವಿದ್ಯಾಭ್ಯಾಸದ ಜೊತೆಗೆ ಕೃಷಿ, ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದ ನನಗೆ ಈ ತರಬೇತಿ ನನ್ನ ಕಡಿಮೆ ಖರ್ಚು-ಹೆಚ್ಚು ಆದಾಯದ ಕೃಷಿಗೆ ಪೂರಕವಾಗಬಲ್ಲದು ಎನ್ನಿಸಿತ್ತು. ಅದೃಷ್ಟವಶಾತ್ ಆ ತರಬೇತಿಗೆ ಆಯ್ಕೆಯಾಗಿ ಅಲ್ಲಿಗೆ ಹೋದೆ.

‍ಲೇಖಕರು avadhi

October 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: