ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರಿರಬಹುದು?

ಹುಡುಕಾಟ

-ಸುಬ್ರಾಯ ಚೊಕ್ಕಾಡಿ

ದೂರದಲ್ಲಿ ಯಾರೋ ದಂಟೆ ಕುಟ್ಟುತ್ತಿರುವ ಸದ್ದು!

ಯಾರಿರಬಹುದು?
ಕಣ್ಣು ಕಿರಿದುಗೊಳಿಸಿ ನೋಡಿದರೆ
ಬಾಗಿದ ಬೆನ್ನು,ಬೋಳು ತಲೆ
ಮೊಣಕಾಲ ತನಕದ ಕಚ್ಛೆ ಪಂಚೆ
ಮೈಯನ್ನು ಆವರಿಸಿದ ತುಂಡು ಬಟ್ಟೆ…

ಸಮೀಪಿಸಿ ಕೇಳಿದೆ:ಅಜ್ಜಾ
ಯಾರು ನೀನು?
ಅಜ್ಜ ಬೊಚ್ಚು ಬಾಯಿಯನಗಲಿಸಿ ನಕ್ಕು
ಹೇಳಿದ:ನಾನು ಮೋಹನದಾಸ.

ನಕ್ಕೆ. ಹೇಳಿದೆ:ಅಜ್ಜಾ,
ತಮಾಷೆಯಾಗಿದೆ ನಿನ್ನ ಹೆಸರು.ಇಲ್ಲಿರುವ
ನಾವೆಲ್ಲಾ ಮೋಹದ ದಾಸರು.
ನೀನೊಬ್ಬನೇ ಯಾಕೆ ಹೀಗೆ? ..

ಅಜ್ಜ ನಕ್ಕು, ಮುಂದೆ
ಹೊರಟಾಗ ಹೇಳಿದೆ:ಅಜ್ಜಾ,
ಆ ದಾರಿ ಬೇಡ. ಪೂರ್ತಿ ಹಾಳಾಗಿದೆ
ಬರೀ ಕಲ್ಲು ಮುಳ್ಳುಗಳಿಂದ ತುಂಬಿದೆ
ವಯಸ್ಸಾದ ನಿನಗೆ ಕಷ್ಟ..

ಅಜ್ಜ ಹೇಳಿದ ನಕ್ಕು, ಇಲ್ಲೇ ಹುಡುಕಬೇಕು ನಾನು
ಕಳೆದುದನ್ನು!
ಏನನ್ನು? ಕೇಳಿದೆ ನಾನು ಕುತೂಹಲದಿಂದ.
ಅಜ್ಜ ಹೇಳಿದ:ಸತ್ಯವನ್ನು!

ಸತ್ಯವನ್ನು?
ನಾನು ಅವಾಕ್ಕಾಗಿ ನಿಂತೆ

ಅಜ್ಜ ಹೆಜ್ಜೆ ಹಾಕಿದ ಮುಂದೆ
ಕಲ್ಲು ಮುಳ್ಳುಗಳ ಪಕ್ಕಕ್ಕೆ ಸರಿಸುತ್ತಾ
ದಂಟೆ ಕುಟ್ಟುತ್ತಾ…

‍ಲೇಖಕರು Admin

3 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading