
ಸಂದೀಪ್ ಈಶಾನ್ಯ
ಅಂತಸ್ತಿನ ಅಂಬಾನಿ ಮನೆಯ
ಚಾವಣಿಯಿಂದ ಇಣುಕುವ ನೆರಳು
ಕೆಳಗೆಲ್ಲೋ ಡೇರೆಗೊದಿಸಿದ
ಟಾರ್ಪಲನ್ನು ಮುತ್ತುತಿದೆ
ಅಬ್ಬಾ ಆ ನೆರಳಲ್ಲಿ
ನಿಟ್ಟುಸಿರ ನೆಮ್ಮದಿಯಿಲ್ಲ
ಮೈ ತಂಪೆನಿಸಲು ಸುಯ್ಯೆಂದು ಸುಳಿದು ಅಲೆದಾಡುವ ಗಾಳಿಯ
ಹಿತವಿಲ್ಲ
ಅಧಿಕಾರ ಅಹಮ್ಮುಗಳ
ಸೂಟುಬೂಟಿನಿಂದ ಜಾರುತಿದೆ ಕೆಂಡದುಂಡೆಗಳು
ನೆರಳಿನ ರೂಪ ಧರಿಸಿ
ಅವನ ಠಾಕುಠೀಕಿನ ಕುರುಹು ಟೈಗೆ ನೇತುಬಿದ್ದು ಜೋಲಾಡುತ್ತಿವೆ
ನೂರಾರು ಹೆಣಗಳು
ಯಾತ್ರೆ ಹೊರಡುತ್ತೇವೆ ಮಾರಾಯ
ನಮ್ಮ ಹೆಣಗಳ ನಮಗೆ ಹಿಂದಿರುಗಿಸು
ನಿನ್ನ ಜೀಯೋ ಸಿಮ್ಮಿಗೆ ಜಾಹೀರಾತು ಕೊಟ್ಟವರು
ನಿನ್ನ ಮುಖತೊಳೆದು ಲಲನೆಯರಂತೆ
ಕುಣಿದು ನಿನ್ನ ಹರ್ಷಿಸುತ್ತಾರೆ
ನೀನು ಅನ್ನವನ್ನು ಜಗಿದಗಿದು
ಪೂರಾ ತಿನ್ನಲಾರದೆ ಟೇಬಲ್ ಮ್ಯಾನರ್ಸ್ ಎಂದು ಒಂದಷ್ಟನ್ನು ಅಲ್ಲೆ ಬಿಡುವಾಗ
ಚಮಚ ಕೆಳಗಿಡಲು ಬಗ್ಗುತ್ತಿಯಲ್ಲ
ಆಗ
ಆ ಕ್ಷಣವೇ
ನಿನ್ನ ಟೈಗೆ ಜೋತುಬಿದ್ದ ಹೆಣಗಳನ್ನು ಕೆಳಗಿಳಿಸು
ನೀನು ಹಗುರಾಗಿ ಮತ್ತಷ್ಟು ಹೆಣಗಳ ಕೊರಳಿಗೇರಿಸಿಕೊಳ್ಳಬಹುದು
ನಮ್ಮವರ ಹೆಣಗಳ ಹುಡುಕಿ
ನಾವು ನಮ್ಮದೆ ಕೊಳಗೇರಿಯಲ್ಲಿ ಯಾತ್ರೆ ಹೊರಡುತ್ತೇವೆ
ನಿನ್ನ ಮಹಲುಗಳು ಮಿನುಗಲಿ
ನಮಗೆ ನಮ್ಮ ಡೇರೆಯ ಚಿಮಣಿ ದೀಪವೇ ಸಾಕು
ನಿನ್ನ ಕಿಸೆಯಲ್ಲಿರುವ ಖಾದೀ ತೊಟ್ಟ ಗುಲಾಮರಿಗೆ ಹೇಳು
ಬೀದಿಗೆ ಬಿದ್ದವರ ಕೂಸು ಬೆತ್ತಲಾಗಿ
ಸೂಳೆಯ ಒಡಲು ಬತ್ತಿಹೋಗಿ
ನೆಲವೆಲ್ಲಾ ಬರಿದಾಗಿದ್ದರು
ಭಾರತ ಬೆಳಗುತಿದೆ ಎಂದು ಬೊಬ್ಬೆ ಹೊಡೆಯಬೇಡಿರೆಂದು
ಬೆಳಗಿಸುವ ಬೆಂಕಿ ಕಡ್ಡಿಯನ್ನಂತೂ ಹಿಡಿದು
ನಿಂತಿದ್ದೇವೆ
ಭಾರತವನ್ನ ಬೆಳಗಿಸುವ ಜತೆಗೆ ನಿಮ್ಮನ್ನೂ ಸುಟ್ಟುಬಿಟ್ಟೇವು
ಎಚ್ಚರ





0 Comments