
ಆಸೆ ಕುದುರೆ
ಸರೋಜಿನಿ ಪಡಸಲಗಿ
ಯಾಕೋ ಏನೋ ಎದೆಯಲೊಂದು ನೋವಿನಲೆ ಮೂಡಿದೆ
ಮಾತು ಮರೆತ ಮೂಕ ಮನವು ಮೌನದತ್ತ ಜಾರಿದೆ
ಏನು ಹೇಗೆ ಹೇಳಲೆಂಬ ಮನದ ಮೂಕ ರೋದನ ಅಲ್ಲಿದೆ
ಹೆಸರೇ ಇರದ ಗೋಡೆಯೊಂದು ಭದ್ರ ಕೋಟೆಯನ್ನು ಕಟ್ಟಿದೆ
ಭಾವನೆಗಳ ಸೆಲೆಯ ಹರಿವನು ಭಾರವೊಂದು ಅದುಮಿದೆ
ಮೇರೆ ಮೀರಿ ಹರಿವ ಧಾರೆ ಬೆಳಕೇ ಇರದೇ ಕುರುಡಾಗಿದೆ
ಅತ್ತ ಇತ್ತ ಓಡಿ ಓಡಿ ಚಿತ್ತ ಕುಗ್ಗಿ ಕುಗ್ಗಿ ಹೋಗಿದೆ
ಅಲ್ಲಿ ಇಲ್ಲಿ ಸುತ್ತಿ ಸುಳಿದು ಮೇಲೆ ಮೇಲೆ ನೋಡಿದೆ
ಓಡುತಿರುವ ಮೋಡವೇ ಕ್ಷಣ ಕರೆದೊಯ್ಯು ಎನ್ನ ಎಂದಿದೆ
ಪುಟ್ಟ ಹಕ್ಕಿ ನಿನ್ನ ರೆಕ್ಕೆ ಬಾರದೇ ನನಗೆಂದಿದೆ
ಹೇಗೋ ಏನೋ ಅಲ್ಲಿ ಒಂದು ಬೆಳಕಿನಲೆ ಹರಡಿದೆ
ಮಾತು ಮರೆತ ಮೂಕ ಮನದಿ ಹಾಡು ಒಂದು ಮೂಡಿದೆ
ಸರಿಯುತಿರುವ ಸಮಯವೇ ದಾರಿ ತೋರುವಿಯಾ ನೀ ಎಂದಿದೆ
ಹುಚ್ಚು ಆಸೆ ಕುದುರೆ ಏರಿ ನೆಗೆದು ನೆಗೆದು ಹಾರಿದೆ
ನೆಗೆದು ನೆಗೆದು ಹಾರಿದೆ






ನನ್ನ ಹೃದಯದಾಳದ ಧನ್ಯವಾದಗಳು ಅವಧಿ !!
novinale mattu maun.. cehndada Bhavaabhivyakti…