
ಬಿ ಕೆ ನರಸಿಂಹರಾಜು
ನಾವು ಚಿಕ್ಕವರಿದ್ದಾಗ ಅಪ್ಪ ನಮ್ಮೂರ ಗ್ರಾಮ ದೇವತೆ ದೇವಸ್ಥಾನದ ಬಳಿ ಆಗಾಗ ಕರೆದುಕೊಂಡು ಹೋಗ್ತಿದ್ರು. ಹಳ್ಳಿ ಅಂದಮೇಲೆ ದೇವಸ್ಥಾನ ಊರು ಮಧ್ಯ ಇದ್ದು ಅಕ್ಕ ಪಕ್ಕನೇ ಮನೆಗಳೂ ಇದಾವೆ.
ಗ್ರಾಮ ದೇವತೆ ಕರಿಯಮ್ಮನ ಉತ್ಸವ ಮೂರ್ತಿ ಹೊರಡೋದು ಮೊದಲೆಲ್ಲಾ ತುಂಬಾನೆ ಅಪರೂಪಾಗಿರ್ತಿತ್ತು. ಒಂದು ನಮ್ಮೂರ ಜುಂಜಪ್ಪನ ಜಾತ್ರೆಗೆ ಅಥವಾ ಶ್ರಾವಣದಲ್ಲಿ ನವಗ್ರಹಗಳ ಪೂಜೆಗೆ ಖಾಯಂ ಆಗಿ ಹೊರಡುತ್ತಿತ್ತು. ಮಿಕ್ಕಂತೆ ಯಾರಿಗಾದರೂ ಕಷ್ಟ ಇದ್ದಾಗ ಪರಿಹಾರ ಆಗಲಿ ಏನ್ ಸಮಸ್ಯೆ ಅನ್ನೋ ವಿಚಾರಕ್ಕೆ ಅಂತ ಈಗಲೂ ಹೊರಡಿಸ್ತಾರೆ.
ನನಗೆ ಹಳೆಯ ನೆನಪುಗಳು ಈಗಲೂ ಕಾಡ್ತಿದೆ. ಅಪ್ಪ ಹಾಗೂ ದೊಡ್ಡಪ್ಪ ಚಿಕ್ಕಪ್ಪಂದಿರು ಕಂಚಿನ ಅರೆವಾದ್ಯ ಹೆಗಲಿಗೆ ಹಾಕಿಕೊಂಡು ಬಡಿಯುತ್ತಿದ್ದರು. ನಮ್ಮೂರ ಪೂಜಾರಪ್ಪನವರು ಉತ್ಸವ ಮೂರ್ತಿಯನ್ನು ಹೊತ್ತು ನಿಂತರು. ಅಂದಹಾಗೆ ಆದಿನ ಕಷ್ಟ ಕೇಳೋಕೆ ಅಂತನೆ ದೇವರು ಹೊರಡಿಸಲಾಗಿತ್ತು.
ಸುಮಾರು 23 ವರ್ಷದ ಒಬ್ಬಾಕೆಯನ್ನು ದೇವಸ್ಥಾನದ ಮುಂಬಾಗಲ್ಲಿ ಕುಳಿತು ಕೊಳ್ಳಲು ಹೇಳಿ ಆಕೆಯ ಪಕ್ಕ ಅರೆವಾದ್ಯ ಝೇಂಕರಿಸದರು. ದೇವರ ಹೊತ್ತ ಪೂಜಾರಪ್ಪ ಅದೇನೋ ಕಾಯಿ ಹೂವ ಕೊಟ್ಟು ಜೋರಾಗಿ ಅರೆ (ವಾಲ್ಗ, ಉರುಮೆ) ಬಡಿಯಲು ಸನ್ನೆ ಮಾಡಿದರು. ಅಪ್ಪ ಜೋರಾಗಿ ಬಡಿಯುತ್ತಿದ್ದಂತೆ ಸುಮ್ಮನೆ ಕುಳಿತಿದ್ದ ಆಕೆ ವಿಚಿತ್ರವಾಗಿ ಆಡೋಕೆ ಶುರು ಮಾಡಿದಳು. ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬರು ಆಕೆಯ ನೆತ್ತಿಯ ಮೇಲಿನ ಕೂದಲನ್ನು ಕಟ್ಟಿದರು. (ಹೀಗೆ ಮಾಡೋದ್ರಿಂದ ದೆವ್ವ ಹಿಡಿದಿದ್ರೆ ಅದು ಆಕೆಯ ದೇಹವನ್ನು ಬಿಟ್ಟು ಹೋಗದೇ ಇರಲಿ ಅಂತ) ಆಕೆ ಆಡೋದು ನೋಡಿದ್ರೆ ನಮಗೂ ಭಯ ಆಗ್ತಿತ್ತು.
ಊರಿನ ಹಿರಿಯರೆಲ್ಲಾ “ಏ ಚಿಕ್ಕಮಕ್ಕಳು ಮನೆ ಒಳಗೆ ಹೋಗಿ ನೀವು ಹೆದರಿಕೊಳ್ತೀರ” ಅಂತ ನಮ್ಮನ್ನ ನೋಡೋಕು ಬಿಡದೆ ಕಳಿಸಿಬಿಟ್ರು. ನಾನಂತು ಹೋಗಲೇ ಇಲ್ಲ. ಅಲ್ಲೇ ಜನಗಳ ಗುಂಪಿನ ಮಧ್ಯೆ ನಿಂತು ನೋಡ್ತಿದ್ದೆ. ಪೂಜಾರಪ್ಪ ಆಕೆಯನ್ನು ಕೇಳಿದ್ರು ” ಏ ಯಾರು ನೀನು?” ಅದಕ್ಕೆ ಆಕೆ “ನಾನು ಹೇಳಲ್ಲ!” ಮತ್ತೆ ಪೂಜಾರಪ್ಪ “ಹೇಳ್ತೀಯೋ ಚಾಟಿ ಏಟು ಬೇಕಾ!?”
ಆಕೆ: ‘ ಬೇಡ ಬೇಡ ಹೇಳ್ತೀನಿ ‘
ಪೂಜಾರಪ್ಪ : ಹೇಳು ಮತ್ತೆ ಯಾರು ನೀನು? ಈಕೆ ದೇಹದ ಮೇಲೆ ಯಾಕ್ ಬಂದಿದೀಯ?
ಆಕೆ: ನಾನು ಇವರ ಅಣ್ಣನ ಹೆಂಡತಿ. ನಾನು ಸಾಯೋವಾಗ ನನ್ನ ಜುಮಕಿ ನನ್ನ ಮಕ್ಕಳಿಗೆ ಸೇರಬೇಕು. ಆದರೆ ನನ್ ಗಂಡ ಇವಳಿಗೆ ಕೊಟ್ಟಿದಾನೆ. ಅದು ನನ್ ಮಗಳಿಗೆ ಕೊಡಿಸಬೇಕು.
ಪೂಜಾರಪ್ಪ: ಆಯ್ತು ಆ ಜುಮಕಿಯನ್ನು ನಿನ್ ಮಗಳಿಗೆ ಕೊಡಿಸ್ತೀನಿ ನೀನು ಇನ್ಯಾವತ್ತು ಈ ದೇಹಕ್ಕೆ ಮತ್ತೆ ಬರಬಾರದು. ಬರಲ್ಲ ಅಂತ ಬಲಗೈ ಭಾಷೆ ಕೊಡು.
ಆಕೆ ಬಲಗೈ ಭಾಷೆ ಕೊಡೋಕೆ ಒಪ್ಪಲಿಲ್ಲ. ದೆವ್ವಗಳು ಬಲಗೈ ಭಾಷೆ ಕೊಡೋ ಪದ್ಧತಿಯನ್ನು ಧೃಡವಾಗಿ ನಂಬ್ತಾವಂತ ಆಮೇಲೆ ಅಪ್ಪನಿಂದ ಕೇಳಿ ತಿಳ್ಕೊಂಡೆ.
ಇಷ್ಟೆಲ್ಲಾ ಆದ ಮೇಲೆ ನಾನು ಹೋಗ್ತೀನಿ ಬಿಟ್ಟು ಬಿಡಿ ಅಂತ ಕೂಗ್ತಾ ಇತ್ತು.
ಪೂಜಾರಪ್ಪ: ‘ನಿನ್ನ ಹಿಂಗೆ ಕಳಿಸಿಬಿಟ್ರೆ ಆಯ್ತ. ನೀನು ಹೋಗೋದೆ ನಿಜ ಆದರೆ ನನ್ನ ಮನದಲ್ಲಿ ಏನೋ ಒಂದು ಕುರಿತ್ಕೊಳ್ತೀನಿ ಅದನ್ನ ತಂದು ನನ್ನ ಕೈಗೆ ಇಡು ಆಗ ನೀನು ಹೋಗ್ತೀಯ, ಜೊತೆಗೆ ಮತ್ತೆ ಬರಲ್ಲ ಅಂತ ನಂಬ್ತೀನಿ.’
ಆಕೆ: ‘ಏನ್ ಮಾಡಬೇಕು ಹೇಳು’
ಪೂಜಾರಪ್ಪ: ‘ದೇವಸ್ಥಾನದ ಪಕ್ಕದಲ್ಲಿ ಇರೋ ನೂರಾರು ವರ್ಷ ಹಳೆಯದಾದ ಬೃಹದಾಕಾರವಾಗಿ ಬೆಳೆದ ಬೇವಿನಮರ ಇದೆ. ಅದರಲ್ಲಿ ತುದಿಯ ಕೊಂಬೆಯಲ್ಲಿನ ನನ್ನ ಮನಸ್ಸಿನಲ್ಲಿರುವ ಒಂದು ಎಲೆಯನ್ನು ಕಿತ್ತುಕೊಂಡು ಬಾ.’
ಹಾಗಂದಿದ್ದೇ ತಡ ಆಕೆ ಸರ್ರನೆ ಮರ ಹತ್ತಿ ಪೂಜಾರಪ್ಪನ ಮನಸ್ಸಿನಲ್ಲಿದ್ದ ಎಲೆ ತಂದೇ ಬಿಟ್ಟಳು. ನೋಡ್ತಿದ್ದವರೆಲ್ಲಾ ದಿಗ್ಭ್ರಾಂತರಾದರು.
ಹೀಗೆ ಇನ್ನೂ ಏನೇನೋ ಟೆಸ್ಟ್’ಗಳನ್ನು ಮಾಡಿದ್ರು.
ಎಲ್ಲಾದರಲ್ಲೂ ಆ ಆತ್ಮ ಪಾಸ್ ಆಗಿ ಕೊನೆಗೆ ಆ ದೇಹವನ್ನು ಬಿಟ್ಟೋಯ್ತು.
ಯಾಕೆ ಇದೆಲ್ಲಾ ನೆನಪಾಯ್ತು ಅಂದರೆ ಇವತ್ತು ಸಂಜೆ ಅಪ್ಪನ ಜೊತೆ ಮಾತಾಡೋವಾಗ ‘ಅಪ್ಪ ಮೊದಲೆಲ್ಲಾ ನೀನು ದೆವ್ವ ಬಿಡಿಸೋಕೆ ಅಂತನೇ ಅರೆ (ವಾಲ್ವ್, ಉರುಮೆ) ಬಡಿಯೋಕೆ ಜಾಸ್ತಿ ಹೋಗ್ತಿದ್ರಲ್ವ? ‘ ಅಂತ ಕೇಳಿದೆ. ಅದಕ್ಕೆ ಅಪ್ಪ ಹೌದು ಅಂದರು.
ಮತ್ತೆ ಇವಾಗ ಯಾಕಪ್ಪ ಇಂತಹ ಎಂಟರ್ಟೈನ್ಮೆಂಟ್ ನಮಗೆ ನೋಡೋಕೆ ಸಿಗ್ತಿಲ್ಲ. ಯಾಕೆ ಇತ್ತೀಚೆಗೆ ಯಾರಿಗೂ ದೆವ್ವ ಮೆಟ್ಕೊತಿಲ್ಲ ಅಂತ ಕೇಳಿದ್ಕೆ ಅಪ್ಪ ನಗ್ನಗ್ತಾ ‘ ಈಗೆಲ್ಲಾ ಮೊಬೈಲ್ ಟವರ್ ಗಳು ಜಾಸ್ತಿ ಆಗವೆ ಟವರ್ ಇದ್ರೆ ಆತ್ಮಗಳು ಓಡಾಡೋಕೆ ಆಗಲ್ಲ ಅಂತ ನಗ್ತಿದ್ರು’





ನಿಮ್ ಚಿಕ್ಕ ವಯಸ್ನಲ್ಲಿ ಆತ್ಮಗಳೇ mobile terrorಗಳು! ಆದ್ರೆ ಇವತ್ತಿನ ಸಂದರ್ಭಕ್ಕೆ ಆತ್ಮಗಳದ್ದೇ ದೃಷ್ಟಿಯಲ್ಲಿ mobile towerಗಳೇ terrorಗಳು ಅಂದಹಾಗಾಯ್ತು!! ಎಂತಹ ಚೇತೋಹಾರಿ ಮಾರ್ಪಾಡು…ವಾಹ್ ವಾಹ್…