ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕಾಗಿ?

 

ರವೀಂದ್ರನಾಥ ಠಾಕೂರ

ಕನ್ನಡಕ್ಕೆ: ಜಿ.ಪಿ.ಬಸವರಾಜು

 

ಯಾಕಾಗಿ?

 

ಖಗೋಳ ವಿಜ್ಞಾನಿಗಳು ಹೇಳಿದ್ದಾರೆ,

ಗಾಢ ಸಮಾಧಿಸ್ಥಿತಿಯಿಂದ ಚಿಮ್ಮಿದ ಪ್ರಭೆಯೊಂದು ನೆಲೆಗೊಂಡಿದೆ

ವಿಶ್ವ ಮಂದಿರದಲ್ಲಿ,

ಸೂರ್ಯನ ಆತ್ಮಾಹುತಿಯ ಯಜ್ಞಕುಂಡದಲ್ಲಿ

ಸಮರ್ಪಣಗೊಳ್ಳುತ್ತಿರುವಂತೆ, ಅದರ ಕ್ಷುಲ್ಲಕ ತುಣುಕೊಂದು

ಸುರಿದಿದೆ ಪುಟಾಣಿ ಭೂಮಿಯ ಮಣ್ಣ ಮಡಿಕೆಯ ಮೇಲೆ.

ಉಳಿದ,

ದಿಕ್ಕುತಪ್ಪಿದ, ಆ ಬೆಳಕಿನ ಅಪರಿಮಿತ ಪ್ರವಾಹ

ಉರುಳುವುದು ಆದಿಮ ದಿಗಂತದಿಂದ

ದಣಿವಿಲ್ಲದೆ, ಗುರಿಯಿಲ್ಲದೆ ತೆರೆಯ ಮೇಲೆ.

ಅದರೊಂದಿಗೆ, ಸೀಮಾತೀತ ಕತ್ತಲೆಯ ಬಯಲಿನ

ಆಚೆ, ಅಸಂಖ್ಯ ನಕ್ಷತ್ರಗಳು- ಅದೊಂದು ಬೆಳಕಿನ ಕಿರಣಗಳ ಪ್ರವಾಹ-

ಕರುಣಿಸಿವೆ ನಿರಂತರ ಕಾರಂಜಿಯನು, ಎಲ್ಲ ವಜರ್ಿಸುತ್ತ ಚಲ್ಲಾಪಿಲ್ಲಿ,

ತನ್ನ ಸೃಷಿಗೇ ಸೃಷ್ಟಿಕರ್ತನ ಘೋರ ಅನ್ಯಾಯ.

ಅಥವಾ ಹಗಲು ರಾತ್ರಿಗಳು ತಿರುಗಿ

ಯುಗಯುಗಗಳುರುಳಿ,

ಅದು ಮಹಾನ್ ಕಾಲವನ್ನು ಕೊಲ್ಲುತ್ತಿರಬಹುದೆ,

ಒಂದು ಕೈಯಲ್ಲಿ ಕೊಡುತ್ತ ನಂತರ

ಮತ್ತೊಂದು ಕೈಯಲ್ಲಿ ಮರಳಿ ಪಡೆಯುವುದ?

ಸಂಚಯ -ಅಪವ್ಯಯಗಳ ನಿರಂತರ ಸೆಣಸಾಟವೇ-

ಆದರೆ ಯಾಕಾಗಿ?

 

ಮತ್ತೆ ನೋಡುತ್ತೇನೆ ನಾನು: ಮಾನವ ಪ್ರಜ್ಞಾಪ್ರವಾಹದಲ್ಲಿ ತೇಲುತ್ತಿವೆ

ಹಲವು ದಾರಿ, ಆನಂದ, ದುಃಖ, ಭ್ರಮೆ, ಚಿಂತನೆ.

ಬದುಕಿನ ಹಂಬಲ ಸಿಡಿಯುವುದಿಲ್ಲಿ ಬೆಂಕಿಯಾಗಿ;

ನಾಗರಿಕತೆಯ ಚಿತಾಗ್ನಿ ನಂದುವುದಲ್ಲಿ, ಬೆತ್ತಲಾದ ಬೂದಿಯಲ್ಲಿ:

ನೀರಬುಗ್ಗೆ ಹರಿಯುವುದು ನಾಡಿನಿಂದ ನಾಡಿಗೆ;

ನೋವು-ಹಂಬಲ ಪೇರಿಸಿದ ಗುಳ್ಳೆಗಳು ತುಂಬಿ ತುಳುಕುತ್ತಿರುವ

ಗುರಿಯಿಲ್ಲದ ಬದುಕನು ್ನಸುರಿಯುತ್ತಾಳೆ

ಭೂಮಿ ತನ್ನ ಕೈಯಿಂದಲೇ ಸಾವಿನ ಗುಹೆಗೆ

ಅವುಗಳ ಲೆಕ್ಕವನ್ನಿಡುವವರು ಯಾರು?

ಇನ್ನು ಹೆಚ್ಚಿನದೇನಾದರೂ ಇದೆಯೇ

ದಣಿವಿಲ್ಲದ ನಿರಂತರ ವಿನಾಶದ ಧಾರಾಕಾರ ವೃಷ್ಟಿಯಲ್ಲಿ,

ಮಾನವಸೃಷ್ಟಿಯ ಕೊನೆಯಿಲ್ಲದ ಸ್ವಯಂ ಕಗ್ಗೊಲೆಯೆ?

ಕಾಣಿಕೆ ಮತ್ತು ಕಳವುಗಳ ಮೂಲಕ ಮಹಾಕಾಲ

ಎಡಗೈಯಿಂದ ಬಲಗೈಯಿಂದ ದಾಳ ಉರುಳಿಸುತ್ತ

ಮನುಷ್ಯನ ಮನಸ್ಸಿನಿಂದ ನಿರಂತರ ಆಡುತ್ತಿರುವಂತೆ-

ಆದರೆ ಯಾಕಾಗಿ?

 

ನನ್ನ ಬಾಲ್ಯದ ದಿನಗಳಲ್ಲಿ, ಯಾವ ಒಲವೊ ಯಾರು ಬಲ್ಲರು,

ಈ ಪ್ರಶ್ನೆ ನನ್ನ ಮನಕ್ಕೆ ಬಂದಿತ್ತು:

ಪರ್ವತಗಳ, ಅರಣ್ಯಗಳ, ಸಾಗರಗಳ

ಉಕ್ಕೇರುವ ಗರ್ಜನೆ, ಬಿರುಗಾಳಿಯ ಅಬ್ಬರದ ಧ್ವನಿ

ಕ್ಷಣಕ್ಷಣವು ಸಂಧಿಸುತ್ತವೆಯೆ, ವಿಶ್ವದ ಯಾವ ಕೇಂದ್ರದಲ್ಲಿ?

ಹಗಲು ಇರುಳುಗಳ ನೋವು ತುಂಬಿದ ವೀಣೆಯಿಂದ

ಪ್ರಜ್ಞೆ ಹೊಮ್ಮಿಸುವ ಅನುರಣನ,

ಬದುಕು ಸಾವುಗಳ ನಿರಂತರ ತುಮುಲ

ಋತುವಿನುತ್ಸವದ ಪರಿವೃತ್ತ ಮುಗಿಸುತ್ತ,

ಸ್ವರ್ಗದ ಮುಗಿಯದ ರಾತ್ರಿಗಳ ಮೂಲಕ ನಿರಂತರ ತುಡಿವ

ಬೆಳಕಿನ ಮೌನ ಪದಕುಸಿತಗಳ ನಿಭಾಯಿಸುತ್ತ?

ಸೃಷ್ಟಿ ಗುಹೆಯ ಅಂತರಾಳದಲ್ಲಿ, ನಾ ಕಂಡೆ

ಕಲ್ಪನೆಯಲ್ಲಿ , ಪ್ರತಿಧ್ವನಿಗಳ ಲೋಕ,

ಅಲ್ಲಿ, ಎಲ್ಲ ಪಾಶ್ರ್ವಗಳೂ ಸೇರುತ್ತವೆ

ವಿಶ್ವದ ರೆಕ್ಕೆಯೊಡೆದ ಮಾತುಗಳು ಗೂಡುಕಟ್ಟಲು.

ಅದರಿಂದ ಎಲ್ಲ ಪ್ರಾಚೀನ ನೆನಪುಗಳನ್ನು ಬೇರ್ಪಡಿಸುತ್ತ

ಹಿಂದಕ್ಕೆ ಹಾರುತ್ತವೆ ಈ ಪ್ರತಿಧ್ವನಿಗಳು, ಆದಿಮ ಸೃಷ್ಟಿಯ

ಬೀಜಗಳ ಹೊರೆ ಹೊತ್ತು. ಆ ದಿನದಿಂದ ನನಗನ್ನಿಸಿತು:

ಮಾತುಗಳ ಪ್ರವಾಹವೊಂದು, ದಿಕ್ಕುತಪ್ಪಿ,

ಯುಗಯುಗಗಳಿಂದ ನಕ್ಷತ್ರಗಳ ಬಾಗಿಲು ಬಡಿಯುತ್ತ

ಅಂತಿಮವಾಗಿ ನನ್ನಲ್ಲಿ ತನ್ನ ಸಾಮರಸ್ಯವನ್ನು ಸಾಧಿಸಿದೆ.

 

ಮತ್ತೀಗ ನಾ ತಿಳಿಯಬಯಸುತ್ತೇನೆ,

ಅದರ ಒಗ್ಗೂಡಿಸುವ ಬಂಧ ಮತ್ತೊಮ್ಮೆ ಛಿದ್ರವಾಗುವುದೆ-

ಅಸಂಖ್ಯ ವರ್ಷಗಳ ಖಾಲಿ ಪಥದಲ್ಲಿ, ಅಮೂರ್ತ ಜಗತ್ತಿನತ್ತ ಹೊರಟ

ಆಕಾರವಿಲ್ಲದ ಚಲನೆ ಇದನ್ನೆಲ್ಲ ದಾಟುವುದೆ?

ಆನಂತರ ಅದು ಬರಿದು ಮಾಡುವುದೆ

ದಾರಿಹೋಕನ ಅಲ್ಪಕಾಲದ ನೋವಿನ ಪಾತ್ರೆಯನ್ನು,

ಮುಗಿದ ಔತಣಗಳ, ಚೂರುಪಾರುಗಳ ಮುರುಕಲು ತಾಟಿನಂತೆ?

ಆದರೆ ಯಾಕಾಗಿ?

########

 

‍ಲೇಖಕರು G

3 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading